ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಅಕ್ಟೋಬರ್ 16, 2013

"ಸಿದ್ಧವನ"ವಾಸ

            ೧೯೭೫ರ ಜೂನ್ ಅಂತ್ಯದ ಹೊತ್ತಿಗೆ ನಾನು ಕಾಲೇಜಿನ ಉಚಿತ ಹಾಸ್ಟೆಲ್ "ಸಿದ್ಧವನ"ದ ಸದಸ್ಯನಾಗಿದ್ದೆ. ಕಾಲೇಜಿನ ಅಡ್ಮಿಶನ್ ಎಲ್ಲ ಮುಗಿದು ಹಾಸ್ಟೆಲ್ ರೂಮ್ ಸಹ ಹಂಚಿಕೆ ಮಾಡಿ ಆಗಿಹೋಗಿತ್ತು. "A " ಬ್ಲಾಕಿನ ಮಹಡಿ ಮೇಲಿನ ೭ನೇ ರೂಂ ಸಾಗರದ ರಾಮಚಂದ್ರ, ಶ್ರೀನಿವಾಸಮೂರ್ತಿ, ಸೂರಿ ಮತ್ತು ಪುತ್ತೂರಿನ ಸಂಜೀವ ಪೂಜಾರಿ ಇವರಿಗೆ ನೀಡಿ ಆಗಿತ್ತು. ಶಿರಸಿಯವನಾಗಿದ್ದಕ್ಕೆ ನನ್ನನ್ನೂ ಐದನೆಯವನಾಗಿ ಇವರ  ಜೊತೆ ಸೇರಿಸಿದರು. ಈ ನಾಲ್ಕೂ ಜನ ಒಂದು ಗೋಡೆಗುಂಟ ಸಾಲಾಗಿ ತಮ್ಮ ತಮ್ಮ ಹಾಸಿಗೆ ಇಟ್ಟುಕೊಂಡಿದ್ದರು ಮತ್ತು ಒಂದು ಮೂಲೆಯಲ್ಲಿ ನೀರಿನ ಬಕೆಟ್ಟುಗಳು ಇದ್ದವು. ನನಗೆ ಆ ಸಾಲಿನಲ್ಲಿ ಸ್ಥಳ ಇಲ್ಲದ್ದರಿಂದ ಸಂಜೀವನ ಕೆಳಭಾಗದಲ್ಲಿ ಭಾವ ಕೊಡಿಸಿದ್ದ ಚಾಪೆ,ಜಮಖಾನೆ, ದಿಂಬು ಮತ್ತು ಹಾಸ್ಟೆಲ್ನವರು ಕೊಟ್ಟ ಇಳಿಜಾರು ಪೆಟ್ಟಿಗೆ ಇಟ್ಟುಕೊಂಡು ಝಾಂಡಾ ಹೂಡಿದೆ. ಇಷ್ಟರಲ್ಲಾಗಲೇ settle ಆಗಿದ್ದ ಅವರಿಗೆ ನನ್ನ ಆಗಮನ ಕೊಂಚ ಕಿರಿಕಿರಿ ಉಂಟುಮಾಡಿದ್ದು ಸುಳ್ಳಲ್ಲ.
       ನನ್ನ ಪರಿಚಯ ಮಾಡಿಕೊಂಡಾಗ ಇದ್ದುದರಲ್ಲಿಯೇ ಕೊಂಚ ಆತ್ಮೀಯವಾಗಿ ಸ್ವೀಕರಿಸಿದ್ದು ರಾಮಚಂದ್ರ ಮಾತ್ರ. ಇನಿಷಿಯಲ್ಸ್ ಇಲ್ಲದ, ತಂದೆಯ ಹೆಸರನ್ನೂ ಜೊತೆಯಲ್ಲಿ ಸೇರಿಸಿಕೊಂಡಿದ್ದ ನನ್ನ ಹೆಸರನ್ನು ಇನ್ನೂ ಉದ್ದವಾಗಿಸಿ   ಹೇಳಿ, ತುಳುವಿನಲ್ಲಿ ತನ್ನ ದಕ್ಷಿಣ ಕನ್ನಡದ ಗೆಳೆಯರ ಜೊತೆ ಜೋಕ್ ಮಾಡಿ ನಕ್ಕಿದ್ದ ಸಂಜೀವ ಪೂಜಾರಿ. ಕ್ಲಾಸ್ನಲ್ಲಿ ಸಹ ನನ್ನ ಹೆಸರು ಹಾಜರಿ ಪುಸ್ತಕದ ಕೊನೆಯ ಹೆಸರಾಗಿ ಸೇರ್ಪಡೆ ಆಯಿತು. ಕೆಮಿಸ್ಟ್ರಿ ಕೃಷ್ಣ ಭಟ್ ಸರ್ ಹಾಜರಿ ಕರೆದು, ಕೊನೆಯಲ್ಲಿದ್ದ  ನನ್ನ ಹೆಸರು ಕರೆದು, ನನ್ನನ್ನು ನಿಲ್ಲಿಸಿ ಎಲ್ಲರಿಗೂ ಪರಿಚಯ ಮಾಡಿಸಿದರು.ತಕ್ಷಣ ಸಂಜೀವ ಪೂಜಾರಿ ಎದ್ದು ನಿಂತು, "ಸರ್, ಇವರ ಹೆಸರು ರವೀಂದ್ರ ಮಹಾಬಲೇಶ್ವರ್ ಗಣಪತಿ ಭಟ್ರು"  ಅಂತ ಹೇಳಿ  ಎಲ್ಲರನ್ನೂ ನಗಿಸಿದನು. ನಾನಂತೂ ಮತ್ತೂ ಕುಗ್ಗಿ ಹೋಗಿದ್ದೆ.  ಹೈಸ್ಕೂಲ್ನಲ್ಲಿ ನನ್ನ ಇಂಗ್ಲಿಷ್  ಇತರರಿಗಿಂತ ಸಾಕಷ್ಟು ಚೆನ್ನಾಗಿದ್ದರಿಂದ  ನನಗೆ ಅದರ ಬಗ್ಗೆ ಸ್ವಲ್ಪ ಹೆಚ್ಚೇ ಅಭಿಮಾನ ಇತ್ತು. ಆದರೆ ಇಲ್ಲಿ ಇಂಗ್ಲಿಷ್ ಮೀಡಿಯಂನಿಂದ ಬಂದ ಎಲ್ಲರಿಗೂ ಪಾಠ ನೀಟಾಗಿ ಅರ್ಥ ಆಗ್ತಾ ಇದ್ರೂ ನನಗೆ ಮಾತ್ರ  ಲೇಟ್ ಆಗಿ ಸೇರಿದ ಕಾರಣ ಪಾಠ ಮತ್ತು ಇಂಗ್ಲಿಷ್ ಎರಡೂ ಸಹ ತಲೆ  ಒಳಗೆ ಹೋಗಲು ಮುಷ್ಕರ ಹೂಡಿದ್ದವು. ಅಂತೂ  ಕ್ಲಾಸ್ ಮುಗಿಸಿ ಪೂರ್ತಿ ಅಯೋಮಯ ಸ್ಥಿತಿಯಲ್ಲಿದ್ದಾಗಲೆ "ಜಯಲಕ್ಷ್ಮಿ ಮೇಡಂ" ಬಿರುಗಾಳಿ ತರಹ ಕ್ಲಾಸ್ ಒಳಗೆ ಬಂದು ಬಿಟ್ಟಿದ್ದರು. 

             ತುಂಬಾ ಒಪ್ಪವಾಗಿ ಮೇಕ್ ಅಪ್  ಮಾಡಿಕೊಂಡು, ಸುಂದರವಾಗಿ ಸೀರೆ ಉಟ್ಟುಕೊಂಡು, ಅತ್ಯಂತ ಕ್ರಿಸ್ಪ್ ಆಗಿ ಕಾಣಿಸುತ್ತಿದ್ದ, ಮಧ್ಯಮಕ್ಕಿಂತ ಸ್ವಲ್ಪ ಸಣ್ಣ ಎನ್ನಬಹುದಾದ ಆಳ್ತನದ  ಜಯಲಕ್ಷ್ಮಿ ಮೇಡಂ ತಮ್ಮ ಹೈಹೀಲ್ಡ್  ಟಕಟಕಾಯಿಸುತ್ತ  ಮ್ಯಾಥ್ಸ್ ಹೇಳಲು ಬಂದವರೇ ಡಯಾಸ್ ಏರಿ, A={x  | x is a prime number less than 50} ಎಂದು ಬರೆದು A is a set of all x  such that x is a prime number less than 5೦ ಎಂದು ಓದಿದರು. ತಕ್ಷಣ ಎಲ್ಲರೂ ೧,೨,೩,೫,೭,೧೧,೧೩,೧೭,.............. ೪೩,೪೭. ಎಂದರು. ನನ್ನ ತಲೆ ಒಡೆದು  ಹೋಳು ಆಗುವದೊಂದೇ  ಬಾಕಿ ಇತ್ತು. ದಿಕ್ಕೇ ತೋಚದೆ ಕುಳಿತಿರುವಾಗಲೇ "ಯಾರಾದರೂ ತಮ್ಮ branch ಬದಲಾಯಿಸುವದಿದ್ದರೆ ಇಂದೇ ಕೊನೆಯ ದಿನ " ಎಂದು ನೋಟಿಸ್ ಬಂದಿತು. Greek and Latin ಆಗಿರೋ ಈ science ಗಿಂತಾ Commerceಗೆ change ತಗೊಂಡರಾಯಿತು ಎಂದು ನಿರ್ಣಯಿಸಿ, desk mate ಆಗಿದ್ದ ರಾಮಚಂದ್ರನಿಗೆ ಅದನ್ನೇ ಹೇಳಿದೆನು.  ಅಷ್ಟರಲ್ಲಾಗಲೇ ನನ್ನ ಬಗ್ಗೆ ಒಳ್ಳೆ ಭಾವನೆ ಬೆಳೆಸಿಕೊಂಡಿದ್ದ ಅವನು, "ಮಾರಾಯ, ನೀ ಹೆದರಬೇಡ .ಇಲ್ಲಿ ಇದ್ದವರೆಲ್ಲ ನಿನ್ನ ಲೆವೆಲ್ನವರೆ. ನೀ ತಡಮಾಡಿ ಸೇರಿದ್ದಕ್ಕೆ ಈ ಸಮಸ್ಯೆ ಅಷ್ಟೇ. ನಿನಗೆ ಕಷ್ಟ ಆದಲ್ಲಿ ನಾ ಹೇಳಿ ಕೊಡ್ತೇನೆ " ಎಂದು ಧೈರ್ಯ ತುಂಬಿದ್ದಕ್ಕೆ ನಾ scienceನಲ್ಲೆ  ಉಳಿದೆ. 
            ಮೊದಲ ಅರ್ಧವಾರ್ಷಿಕದಲ್ಲಿ ಪಾಠ ಸರಿಯಾಗಿ ತಿಳಿಯದಿದ್ದರೂ ಸಾಕಷ್ಟು ಗೆಳೆಯರು  ಸಿಕ್ಕಿದ್ದಂತೂ   ಸುಳ್ಳಲ್ಲ.