ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಡಿಸೆಂಬರ್ 7, 2013

ಆಪತ್ತಿಗಾದ ನೆಂಟ

         ಮಲೆನಾಡಿನ ಒಂದು ಕುಗ್ರಾಮದಿಂದ ಹೊರಬಿದ್ದು ಕರಾವಳಿ ಸೀಮೆಯ ಉಜಿರೆಯ ಹಾಸ್ಟೆಲ್ ಸೇರಿದ ನನಗೆ ಹಾಸ್ಟೆಲ್ ವಾಸ ಒಂದು ಹೊಸ ಅನುಭವದ ದ್ವಾರವನ್ನು ತೆರೆದಿತ್ತು. ಆದರೆ ಸ್ವಭಾವತಃ ನಾಜೂಕು ದೇಹಾರೋಗ್ಯದ ನನಗೆ ಈ ಬದಲಾದ ಪರಿಸರಕ್ಕೆ ಹೊಂದಿಕೊಳ್ಳುವದು ಸುಲಭದ ಮಾತಂತೂ ಆಗಿರಲಿಲ್ಲ. ಹಳ್ಳಿಯಲ್ಲಿ ಅಷ್ಟೇನೂ ಸ್ವಚ್ಹ ಹಾಗೂ ಆರೋಗ್ಯಕರ  ಪರಿಸರ ಇದ್ದಿಲ್ಲದ ಕಾರಣ ಮತ್ತು ತಿಳುವಳಿಕೆಯ ಕೊರತೆಯಿಂದಾಗಿ ನನಗೆ ಆಗಲೇ ಅಮೀಬಿಯಾಸಿಸ್ ಅಂಟಿಕೊಂಡು ಬಿಟ್ಟಿತ್ತು. ಅದೂ ಅಲ್ಲದೆ ಇಲ್ಲಿಯ  ಕುಚ್ಚಲಕ್ಕಿಯ ಅನ್ನ ನನ್ನ ಜೀರ್ಣಶಕ್ತಿಗೊಂದು ಹೊಸ ಸವಾಲಾಗಿ ಬಿಟ್ಟಿತು. ಇಷ್ಟೂ ಸಾಲದೆಂಬಂತೆ, ಕುಡಿಯುವ ನೀರಿನ ಬಾವಿಗೆ ಸೇರಿದ ಮಳೆಗಾಲದ ಹೊಸ ನೀರು ನನ್ನೊಳಗೆ ಈಗಾಗಲೇ ಇದ್ದ ಅಮೀಬಾಗಳಿಗೆ  ಹೊಸ ಬಂಧುಗಳನ್ನು  ಒದಗಿಸಿಕೊಟ್ಟಂತಾಗಿತ್ತು. ಇದಕ್ಕೆಲ್ಲ ಕಳಶವಿಟ್ಟಂತೆ ಸೇರಿಕೊಂಡ homesickness- ಎಲ್ಲ ಸೇರಿ, ನಾನು ಹಾಸ್ಟೆಲ್ ಸೇರಿದ ವಾರೊಪ್ಪತ್ತಿನಲ್ಲೇ ಒಂದು ದಿನ ವಿಪರೀತ ಹೊಟ್ಟೆ ಮುರಿತ (ನುಲಿತ) ಪ್ರಾರಂಭ ಆಗಿಬಿಟ್ಟಿತು. ಹೊಸ ಮಿತ್ರ ರಾಮಚಂದ್ರನಲ್ಲಿ ನನ್ನ ಸಂಕಟ ಹೇಳಿಕೊಂಡೆ. ಅತ್ಯಂತ ಮಾನವೀಯ ಕಳಕಳಿ ಇದ್ದ ಆತ ನನ್ನನ್ನು ಪೋಸ್ಟಾಫೀಸಿನ ಎದುರುಗಡೆ ಇದ್ದ ಡಾ।।. ಪ್ರಕಾಶ ಚಂದ್ರರ (I think, I am right with his name) ಕ್ಲಿನಿಕ್ ಗೆ ಕರೆದೊಯ್ದು, ಅವರಿಗೆ ನನ್ನ ಬಗ್ಗೆ ಎಲ್ಲ ಹೇಳಿ, ಔಷಧ ಕೊಡಿಸಿಕೊಂಡು ಬಂದ. ಆ ದಿನ ಮಳೆ ಬೇರೆ ಚಂಡಿ ಹಿಡಿದ ಮಗುವಿನ ತರಹ ರಭಸವಾಗಿ ಎಡೆಬಿಡದೆ ಸುರಿಯುತ್ತಿತ್ತು.

             ರಾತ್ರಿ ಊಟ ಆಗುವವರೆಗೆ ಲೂಸ್ ಮೋಷನ್ ಆಗ್ತಾ ಇದ್ರೂ ಸಹ ಔಷಧಿ ತನ್ನ ಪರಿಣಾಮ ಬೀರಿದ ಕೂಡಲೇ ಹೊಟ್ಟೆ ಒಂದು ಹದಕ್ಕೆ ಬರಬಹುದೆಂದು ಕಾಯ್ತಾ ಇದ್ದೆ . ರಾತ್ರಿ ಹತ್ತಕ್ಕೆ ಎಲ್ಲರೂ ಮಲಗಿ ಮಳೆಯ ಜೋಗುಳಕ್ಕೆ ಗಾಢ ನಿದ್ರೆಗೆ ಜಾರುತ್ತಿದ್ದಂತೆ ನನ್ನ ಹೊಟ್ಟೆ ನುಲಿತ ಜಾಸ್ತಿಯೇ ಆಗತೊಡಗಿತ್ತು. ಮೊದಲ ಮಹಡಿಯಲ್ಲಿದ್ದ ರೂಮಿಗೆ ತಲುಪಲು ೧೮ ಮೆಟ್ಟಿಲು ಹತ್ತಬೇಕಾಗುತ್ತಿತ್ತು. ಮೊದಲ ೧೦-೧೨ ಸಾರಿ ಬೇಧಿ ಆದಾಗ ಕೆಳಗಿಳಿದು ಹೋಗಿ ಬರುತ್ತಿದ್ದೆ. ಕೊನೆಗೆ ಇಷ್ಟು ಅಶಕ್ತತೆ ಆಯಿತೆಂದರೆ ಮೆಟ್ಟಿಲು ಏರಿ ಇಳಿದು ಮಾಡಲು  ಅಸಾಧ್ಯ ಎನಿಸತೊಡಗಿತು. ಮಳೆಗಂತೂ ಹುಚ್ಚೇ ಹಿಡಿದಿತ್ತು. ಬೆಳಗು ಹರಿಯುವ ತನಕ ಬದುಕಿ ಉಳಿದರೆ ಮುಂದೆ ನೋಡಿದರಾಯಿತೆಂದುಕೊಂಡು ಕೊನೆ ಕೊನೆಗೆ ಕೇವಲ ರೂಮಿನ ಹೊರಗೆ ಮಾತ್ರ ಬಂದು ನನ್ನ ಊಟದ ತಾಟಿನಲ್ಲೇ ಬೇಧಿ ಮಾಡಿ ಎತ್ತಿ ಕೆಳಗಿನ ಅಂಗಳಕ್ಕೆ ಎಸೆಯತೊಡಗಿದೆ. ನಿದ್ದೆ ಮಾಡುವದಂತೂ ದೂರವೇ ಉಳಿಯಿತು. ಬೆಳಗಾಗುವತನಕ ಒಟ್ಟೂ ೩೬ ಸಾರಿ ಬೇಧಿ ಆಗಿತ್ತು. ಬೆಳಿಗ್ಗೆ ಎದ್ದ ಕೂಡಲೇ ನನ್ನ ಪರಿಸ್ಥಿತಿ ನೋಡಿದ ರಾಮಚಂದ್ರನಿಗೆ ಎಲ್ಲ ನಿಚ್ಚಳವಾಗಿ ಗೊತ್ತಾಗಿ ಹೋಗಿತ್ತು. ಎಂಟು ಗಂಟೆಯ ಗಂಜಿಯೂಟ ಆಗುತ್ತಿದ್ದಂತೆ ಸೈಕಲ್ಲಿನ ಕ್ಯಾರಿಯರ್ ಮೇಲೆ ನನ್ನನ್ನು ಕೂಡ್ರಿಸಿಕೊಂಡು, ಯಾವ ಏರಿನಲ್ಲೂ ನನ್ನ ಇಳಿಸದೆ, ದಮ್ಮು ಕಟ್ಟಿ ಪೆಡಲ್           ತುಳಿಯುತ್ತ, ಶರವೇಗದಲ್ಲಿ ಅದೇ ಡಾ।। ಪ್ರಕಾಶ ಚಂದ್ರರ ಕ್ಲಿನಿಕ್ ತಲುಪಿಸಿದ್ದ. ಅವನು ಬಿಳಿಚಿಕೊಂಡು ಹೆಣದಂತಾಗಿದ್ದ  ನನ್ನನ್ನು ಅಕ್ಷರಶಃ ಎಳೆದುಕೊಂಡು  ಒಳನುಗ್ಗಿದ ರಭಸ ನೋಡಿಯೇ ಡಾಕ್ಟರರ ಬಾಯಿ ಬಂದಾಗಿ ಹೋಗಿತ್ತು. "ನಿನ್ನೆ ಸಂಜೆ ನೀವು ಕೊಟ್ಟ ಔಷಧಿ ಹೇಗೆ ಕೆಲಸ ಮಾಡಿದೆ ನೋಡಿ. ಇವನಿಗೆ ಏನಾದರೂ ಹೆಚ್ಚು ಕಮ್ಮಿ ಆದರೆ ನಿಮ್ಮನ್ನು ಮಾತ್ರ ಸುಮ್ಮನೆ ಬಿಡೋದಿಲ್ಲ, ಡಾಕ್ಟ್ರೆ. ಏನು, ಬರೇ ದುಡ್ಡಿಗಾಗಿ ಈ ರೀತಿ ಔಸ್ದಿ ಕೊಡ್ತೀರೋ ಹೇಗೆ?" ಇತ್ಯಾದಿ ಅದು ಏನೇನು ಒದರಿದನೋ, ಆ ಡಾಕ್ಟರು ಒಂದೂ ಮಾತಾಡದೇ ಒಂದಷ್ಟು ಪುಡಿ, ಗುಳಿಗೆ ಎಲ್ಲಾ ಕೊಟ್ಟು, ಹೇಗೆ ತೆಗೆದುಕೊಳ್ಳಬೇಕೆಂಬುದನ್ನು ತಿಳಿಸಿ ನಮ್ಮನ್ನು ಸಾಗಹಾಕಿದರು. ಆ ಔಷಧಿ ಮಾತ್ರ ಭಾರೀ ಕೆಲಸವನ್ನೇ ಮಾಡಿತ್ತು. ತಕ್ಷಣ ಬೇಧಿ  ಬಂದ್ ಆಗಿದ್ದಲ್ಲದೆ ಮತ್ತೆರಡು ದಿನ ನಾನು ಲ್ಯಾಟ್ರೀನ್ ಕಡೆ ಹೋಗದಂತೆ ಮಾಡಿತ್ತು. ಆ ದಿನ  ಬಹುಶಃ ಇನ್ನು ಐದಾರು ತಾಸು ಹಾಗೇ ಬೇಧಿ ಆಗಿರುತ್ತಿದ್ದರೆ ಇಷ್ಟು ಹೊತ್ತಿಗೆ ನನ್ನ ೩೭ ನೇ ಪುಣ್ಯತಿಥಿ ಮುಗಿದಿರುತ್ತಿತ್ತು.

          ಆ ೧೬ರ ಹರೆಯದ ತರುಣ ಅಂದು ಮೆರೆದ ಸಮಯ ಪ್ರಜ್ಞೆ, ದಿಟ್ಟತನ ಎಲ್ಲ ಅಸಾಮಾನ್ಯವೇ ಆಗಿದ್ದವು. ಇದು ಅವನನ್ನು ನನ್ನ ಪ್ರಾಣಮಿತ್ರನನ್ನಾಗಿ ಮಾಡಿ ಬಿಟ್ಟಿತು. ಆ ದಿನ ಅಲ್ಲಿ ಇನ್ನೂ ಹತ್ತಾರು ಮಂದಿ ಸಹಪಾಠಿಗಳಿದ್ದರೂ ರಾಮಚಂದ್ರನ ಹೃದಯ ಮಾತ್ರ ನನ್ನ ನೋವಿಗೆ ಮಿಡಿದಿತ್ತು. ಅದ್ಯಾವ ಜನ್ಮದ ಬಂಧುವೋ ಅವನು! ಅವನ ಋಣ ತೀರಿಸಲು ಸಾಧ್ಯವೇ?

          ಅವನಿಗೂ ಒಂದು ತರಹದ ತೀವ್ರವಾದ ಹೊಟ್ಟೆನೋವು ಪದೇಪದೇ ಬಂದು ವಿಪರೀತ ಕಾಡುತ್ತಿತ್ತು. ಆಗೆಲ್ಲ ಅವನು ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದ. ನಾನು ತುಂಬಾ ಮರುಗಿ ಅವನ ಹೊಕ್ಕಳ ಸುತ್ತ ತುಪ್ಪ ಹಚ್ಚಿ ಹಿತವಾಗುವಂತೆ ತೀಡುತ್ತಿದ್ದೆ. ಅವನು ನನಗಿಂತ ಅನುಕೂಲಸ್ಥನಾಗಿದ್ದ . ಅಲ್ಲಿಯ ಊಟದ ಅಸ್ತವ್ಯಸ್ತತೆ ಬಗ್ಗೆ  ತುಂಬಾ ರೋಸಿಹೋಗಿದ್ದ. ತಾನು ಏನೇ ಆದರೂ ಪಿಯುಸಿ ೨ ನೇ  ವರ್ಷಕ್ಕೆ ತನ್ನೂರು ಸಾಗರಕ್ಕೆ ಹೋಗುವದಾಗಿ ಹೇಳುತ್ತಾ ಕಡೆಗೆ ಹಾಗೇ  ಮಾಡಿದ. ತಾನು ಮುಂದೆ ಎಂ ಬಿ ಬಿ ಎಸ್ ಓದಿ ಮಿಲಿಟರಿಯಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸುವದಾಗಿ ಹೇಳುತ್ತಿದ್ದ. ಮುಂದೆ ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ ಓದಿ ಡಾಕ್ಟರ್ ಆಗಿ ತನ್ನ ಕನಸಿನ ಸೈನ್ಯದ ಸೇವೆ ಕೂಡ ಮಾಡಿ ಮುಗಿಸಿ ಹೊರಬಂದು ಈಗ ಮಣಿಪಾಲದಲ್ಲಿ ಸುಪ್ರಸಿದ್ಧ ಸರ್ಜನ್ ಆಗಿ ನೆಮ್ಮದಿಯಿಂದಿದ್ದಾನೆ. ಪತ್ನಿ ಸಹ ವೈದ್ಯೆ. ಕೀರುತಿಗೊಬ್ಬ ಮಗ, ಆರತಿಗೊಬ್ಬ ಮಗಳಿರುವ ಚಂದದ ಸಂಸಾರ ಅವನದು.

          ನಾನು ಮೈಸೂರಿನಲ್ಲಿ ಓದುತ್ತಿದ್ದಾಗ ಮಾತ್ರ ಒಮ್ಮೆ ಅವ ಸಿಕ್ಕಿದವ ನಂತರ ಸಿಕ್ಕಿದ್ದು ಕಳೆದ ಫೆಬ್ರುವರಿಯಲ್ಲಿ ನನ್ನ ಮಗ ಹರ್ಷನ ಮದುವೆಗೆಂದು ಶಿರಸಿಗೆ ಬಂದಾಗಲೇ. ಕಾಲನ ಏಟಿಗೆ ಅವನ ಸುಂದರ ಕಪ್ಪು ಗುಂಗುರುಗೂದಲು ಕರಗಿ ಬುರುಡೆ ಬೋಳಾಗಿದ್ದರೂ ಹೃದಯ ಮಾತ್ರ ಮತ್ತಷ್ಟು ಕಮನೀಯವಾಗಿದೆಯೆಂಬುದಕ್ಕೆ ನನ್ನೆಲ್ಲ "ನೆಸ್ಟ್" ಮಿತ್ರರು ಅವನನ್ನು ಕೂಡಲೇ ತಮ್ಮಲ್ಲೇ ಒಬ್ಬನೆಂಬಂತೆ ಒಪ್ಪಿ ಅಪ್ಪಿಕೊಂಡಿದ್ದೆ ಸಾಕ್ಷಿ.

          ರಾಮಚಂದ್ರಾ, ನಿನ್ನಂತಹ  ಸನ್ಮಿತ್ರರ ಸಂತತಿ ಸಾವಿರ ಸಾವಿರವಾಗಲಿ. 











2 ಕಾಮೆಂಟ್‌ಗಳು: