Friday 29 August 2014

ಹೆಚ್ಚಿದ ಜವಾಬ್ದಾರಿ.....

         'ಮಹಾಭಾರತ'ದಲ್ಲಿ ಒಂದು ಘಟನೆ ಬರುತ್ತದೆ. ದಾನಶೂರನೆನಿಸಿದ್ದ ಕರ್ಣ ಒಮ್ಮೆ ಊಟಕ್ಕೆ ಕುಳಿತಿದ್ದ. ತನಗೆ ತುಂಬ ಪ್ರಿಯವಾಗಿದ್ದ ಚಿನ್ನದ ಚೊಂಬಿನಲ್ಲಿ ನೀರನ್ನು ತುಂಬಿ ಪಕ್ಕದಲ್ಲೇ ಇಟ್ಟುಕೊಂಡಿದ್ದ. ಊಟ ಅರ್ಧ ಆಗಿದ್ದಾಗ ಹೊರಬಾಗಿಲಲ್ಲಿ ಬ್ರಾಹ್ಮಣನೋರ್ವ ಆಗಮಿಸಿ ದಾನ ನೀಡುವಂತೆ ಯಾಚಿಸಿದ. ಅವನನ್ನು ಒಳಗೆ ಕರೆದ ಕರ್ಣ  ತನ್ನ ಎಡಗೈಯಿಂದ ಪಕ್ಕದಲ್ಲಿದ್ದ ತನ್ನ ಪ್ರೀತಿಯ ಚಿನ್ನದ ಚೊಂಬನ್ನು ಆ ಬ್ರಾಹ್ಮಣನಿಗೆ ಎತ್ತಿ ಕೊಟ್ಟುಬಿಟ್ಟ. ಎಡಗೈಯಿಂದ ದಾನ ನೀಡಿದ್ದಕ್ಕೆ ಆ ಯಾಚಕ ಆಕ್ಷೇಪಿಸಿದ. ಅದಕ್ಕೆ ಕರ್ಣ, 'ಮನದಲ್ಲಿ ಕೊಡಬೇಕೆಂಬ  ಭಾವ ಮೂಡಿದಾಗ ತಡ ಮಾಡದೇ ಕೊಟ್ಟುಬಿಡಬೇಕು. ನಾನು ಈಗ ಕೈ ತೊಳೆಯಲೆಂದು ತಡ ಮಾಡಿದ್ದಿದ್ದರೆ ಈ ಪ್ರಿಯ ಚೊಂಬನ್ನು ಬಿಟ್ಟು ಬೇರೆ ವಸ್ತುವನ್ನು ಕೊಡುವಂತೆ ಮನಕ್ಕೆ ಪ್ರೇರಣೆಯಾಗುತ್ತಿತ್ತು. ನಮಗೆ ಪ್ರಿಯವಾದುದನ್ನು ನೀಡುವದು ಯಾವಾಗಲೂ ಉತ್ತಮ ದಾನ. ಕಾರಣ ಎಂಜಲು ಕೈ ತೊಳೆಯುವ ಯೋಚನೆ ಮಾಡದೇ ಎಡಗೈಯಿಂದ ನೀಡಿದೆನೇ  ವಿನ: ಇದರಲ್ಲಿ ಇನ್ಯಾವ ಅರ್ಥವೂ ಇಲ್ಲ' ಎಂದು ಹೇಳುತ್ತಾನೆ.
ಇಲ್ಲಿ ಕರ್ಣ ಆಡಿದ ಮಾತಿನಲ್ಲಿ ಹಲವು ಹೊಳಹುಗಳಿವೆ. ದಾನ ನೀಡುವವನಿಗೆ ಇರಬೇಕಾದ ಮೂಲ ಮನಸ್ಥಿತಿಯು ಎಷ್ಟು ಉನ್ನತವಾಗಿರಬೇಕು ಎಂಬುದರ ಸೂಚನೆಯಿದೆ.
           ಈ ಹಿಂದಿನ ಬ್ಲಾಗ್ ನಲ್ಲಿ ನಮ್ಮ ಅಪ್ಪಯ್ಯನ ಹೊಸಮನೆಯ ಪ್ರವೇಶದ ಸಮಯದಲ್ಲಿ ಆಪದ್ಬಾಂಧವನಾಗಿ ಒದಗಿಬಂದ ರಾಮಪ್ಪ ಹೆಗಡೆಯವರ ಬಗ್ಗೆ ಹೇಳಿದ್ದೇನೆ. ಅವರಂತೆಯೇ ತನ್ನ ಅಂತರಂಗದ ಕರೆಗೆ ಓಗೊಟ್ಟ ಇನ್ನೊಬ್ಬ ಮಹಾನುಭಾವರ ಬಗ್ಗೆ ಕೂಡ ಹೇಳಬೇಕಿದೆ. ಅವರೇ ಡೊ೦ಬೆಸರದ  ನಾರಾಯಣ ಭಟ್ಟರು. ಇವರು ದೊಡ್ನಳ್ಳಿ ಗ್ರಾಮದ ಎಲ್ಲಾ ಬ್ರಾಹ್ಮಣ ಕುಟುಂಬಗಳ ಪುರೋಹಿತ ಭಟ್ಟರು. ನಿಜವಾದ ಅರ್ಥದಲ್ಲಿ ಪುರದ ಹಿತ ಕಾಯುವವರಾಗಿದ್ದರು. ಯಾವುದೇ ಕಾರ್ಯದಲ್ಲೂ ಧರ್ಮ- ಕರ್ಮ - ಕ್ರಿಯಾಲೋಪ ಬಾರದಂತೆ, ಎಂದೂ ದಕ್ಷಿಣೆಯ ಮುಖ ನೋಡದೇ, ಕರ್ತವ್ಯ ನಿರ್ವಹಿಸಿದವರು. ಸತ್ಯದ ಪಕ್ಷಪಾತಿಯಾಗಿ, ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ ಗಂಭೀರವಾಗಿರುತ್ತಿದ್ದ ಅವರು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದವರು. ನಮ್ಮ ಮನೆಯ ಪ್ರವೇಶ ಮತ್ತು ವಿನಾಯಕನ ಮುಂಜಿಗೂ ಇವರೇ ಪುರೋಹಿತರು. ಆ ಹೊಸಮನೆಯ ಒಳಗೊಂದು  ದೃಷ್ಟಿ ಹಾಯಿಸಿದರೆ ಅದರ ಒಡೆಯನ ಸ್ಥಿತಿಗತಿ ಯಾರಿಗಾದರೂ ಅರ್ಥವಾಗಿ ಬಿಡುತ್ತಿತ್ತು. ಸೂಕ್ಷ್ಮಗ್ರಾಹಿಗಳಾದ ನಾರಾಯಣ ಭಟ್ಟರಿಗಂತೂ ಕೇಳುವದೇ ಬೇಡ. ಗಂಭೀರರಾಗಿ ಎಲ್ಲ ಕರ್ಮಾಂಗಗಳನ್ನು ಕಿಂಚಿತ್ತೂ ಲೋಪ ಬಾರದಂತೆ  ಮುಗಿಸಿ, ಮಹಾಬಲೇಶ್ವರ ದಂಪತಿ ದಾನವಾಗಿ ನೀಡಿದ ಅಕ್ಕಿ, ತೆಂಗಿನಕಾಯಿ, ಕಲಶ, ಬಟ್ಟೆ, ದಕ್ಷಿಣೆ ಇತ್ಯಾದಿಗಳನ್ನೆಲ್ಲ ಪಡೆದು ಮೌನವಾಗಿ ಭೋಜನ ಮುಗಿಸಿದರು. ನಂತರ ಸುವಾಸನಾರ್ಥವಾಗಿ ಮಹಾಬಲನು ನೀಡಿದ ತುಳಸಿ ದಳವನ್ನು ಪಡೆದವರೇ ಅವನಿಗೆ 'ಒಂದು ರೂಪಾಯಿ' ತರಲು ಹೇಳಿದರು. ಅವನಿಂದ ಒಂದು ರೂಪಾಯಿ ತೆಗೆದುಕೊಂಡು ಈ ಮೊದಲು ದಾನವಾಗಿ ಪಡೆದ ಎಲ್ಲವನ್ನೂ-ಸ್ವೀಕರಿಸಿದ ದಕ್ಷಿಣೆ ಸಹಿತ- ಅವನಿಗೇ ಹಿಂತಿರುಗಿ ನೀಡಿ, 'ಸಂಪೂರ್ಣ ಪುಣ್ಯ ಫಲ ಸಿಗಲಿ' ಎಂದು ಆಶೀರ್ವದಿಸಿದರು. ಮಹಾಬಲನ ಯಾವ ಪ್ರತಿಭಟನೆಗೂ ಜಗ್ಗಲಿಲ್ಲ.
          ಶ್ರೀ ರಾಮಪ್ಪ ಹೆಗಡೆಯವರಾಗಲಿ ಅಥವಾ ಪೂಜ್ಯ ನಾರಾಯಣ ಭಟ್ಟರಾಗಲಿ, ತಮ್ಮ ಮನದಲ್ಲಿ ಸಹಾಯ ಮಾಡಬೇಕೆನ್ನುವ ಭಾವ ಮೂಡಿದಾಗ, ಯಾವ ಕಲ್ಮಶವೂ  ಮನದೊಳಗೆ ನುಸುಳಲು ಬಿಡದೆ, ಆ  ಕರ್ಣನಂತೆ,  ಆಂತರ್ಯದ ಆದೇಶ ಪಾಲಿಸಿದ ಮಹಾನುಭಾವರುಗಳು. ಇಲ್ಲಿ ಕೊಡುಗೆಯ ಮೌಲ್ಯಕ್ಕಿಂತ ಅದರ ಹಿಂದಿನ ಭಾವಕ್ಕೇ ಪ್ರಾಧಾನ್ಯ. ಇಂಥವರ ಸಾಹಚರ್ಯಕ್ಕೆ  ಬದುಕಿನ ಕಾಠಿಣ್ಯಗಳನ್ನೆದುರಿಸಲು ಅವಶ್ಯವಾದ  ಮನೋಬಲ ನೀಡುವ ಸಾಮರ್ಥ್ಯ ಇರುವದು. ನನ್ನ ಅಪ್ಪಯ್ಯ ಇಂತಹ ಹಲವಾರು ಮಹನೀಯರ ಸಾಂಗತ್ಯ ಹೊಂದಿದ್ದ.
           ಜಮೀನಿನ ಮಧ್ಯೆ ಮನೆ ಮಾಡಿದ್ದುದರ ಲಾಭ ನಿಧಾನವಾಗಿ ನನ್ನ ಅಪ್ಪಯ್ಯನಿಗೆ ಸಿಗತೊಡಗಿತು. ತುಡುಗು ದನಗಳ ಹಾವಳಿಯಿಂದ ಬೆಳೆಗೆ ರಕ್ಷಣೆ ಸಿಕ್ಕ ಕಾರಣ ಇಳುವರಿ ಸುಧಾರಿಸತೊಡಗಿತು. ಈ ನಡುವೆ ನಮ್ಮೂರ ಪ್ರಾಥಮಿಕ ಶಾಲೆಯ ಮೊದಲ ಮುಲ್ಕಿ ಪರೀಕ್ಷೆ ಬ್ಯಾಚಿನಲ್ಲಿದ್ದ ಎಂಟು ವಿದ್ಯಾರ್ಥಿಗಳಲ್ಲಿ (ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳು) ನನ್ನಣ್ಣ ವಿನಾಯಕನೂ ಒಬ್ಬನಾಗಿ ಏಳನೇ ಇಯತ್ತೆ ಪಾಸು ಮಾಡಿದ. ತನ್ನ ಮಕ್ಕಳನ್ನು ವೇದವಿದ್ಯಾ ಪಾರಂಗತರನ್ನಾಗಿಸಬೇಕೆಂಬ ಕನಸು ಹೊತ್ತಿದ್ದ ಅಪ್ಪಯ್ಯ ತನ್ನ ಪತ್ನಿ ಮತ್ತು ಮಗ ವಿನಾಯಕನ ಯಾವ ಮಾತನ್ನೂ ಕಿವಿಯ ಮೇಲೆ ಹಾಕಿಕೊಳ್ಳದೆ ಅವನನ್ನು ಸೀದಾ 'ಸಾಲ್ಕಣಿ'ಯಲ್ಲಿದ್ದ  ವೇದ ಪಾಠಶಾಲೆಗೆ ಸೇರಿಸಿ, ಅವನಿಗೆ ಉಳಿದುಕೊಳ್ಳಲು 'ಕಡಕಿನಬೈಲಿ'ನ ಸುಬ್ರಾಯ ಹೆಗಡೆಯವರ ಮನೆಯಲ್ಲಿ ವ್ಯವಸ್ಥೆ ಮಾಡಿ ಊರಿಗೆ ಮರಳಿದ. ಚೆನ್ನಾಗಿ ಗಟ್ಟುಮುಟ್ಟಾಗಿದ್ದ ಮನೆಯ ಹಿರಿಯ ಮಗ ಈ ರೀತಿ ಕೃಷಿ ಕೆಲಸಕ್ಕೆ ಸಿಗದೇ ಹೋದುದಕ್ಕೆ ಗೌರಮ್ಮ ಮನದಲ್ಲೇ ಬೇಸರಿಸಿಕೊಂಡಿದ್ದೇ  ಬಂತು.
          ಹಳೆಯ ಮನೆಯಲ್ಲಿ ಹುಟ್ಟಿದ ಗಂಡು ಮಕ್ಕಳ ಸೈನ್ಯದ ಬಾಲಂಗೋಚಿಯಾಗಿ ಹೊಸ ಮನೆಗೆ ಬಂದ ಮೇಲೆ ಮೊದಲ ಹೆಣ್ಣುಮಗು ಜನಿಸಿತು. ಭಾಗ್ಯಲಕ್ಷ್ಮಿ ಮನೆಗೆ ಬಂದಂತಾಯಿತೆಂದು ಅಪ್ಪಯ್ಯ ಸಂತೋಷ ಪಟ್ಟ. ಈ ಸಂತೋಷ ವಾರ್ತೆಯನ್ನು ತಿಳಿಸಿ ತನ್ನ ಹಿರಿಮಗನಿಗೆ ನನ್ನ ಕೈಯಿಂದಲೇ ಪೋಸ್ಟ್ ಕಾರ್ಡ್ ಬರೆಸಿ ಹಾಕಿದ. ಹೀಗೆ ನಮ್ಮ ಮೊದಲ ತಂಗಿ 'ಸುಮನಾ' ಹಾಗೂ ಇನ್ನೆರಡು ವರ್ಷಗಳ ನಂತರ ಎರಡನೆಯ ತಂಗಿ 'ಶಾಲಿನಿ' ಈ ಮಹಾಬಲ ಸಂಸಾರದ ಸದಸ್ಯೆಯರಾದರು.
           ಹೆಚ್ಚುತ್ತಿದ್ದ  ಖರ್ಚು ಮತ್ತು ಜವಾಬ್ದಾರಿಗಳನ್ನು ಸರಿದೂಗಿಸಲು ಅವಿರತ ದುಡಿಮೆಯ ಈ ದಂಪತಿ ಹೊಸ ಹೊಸ ಮಾರ್ಗಗಳನ್ನು ಆವಿಷ್ಕರಿಸಲೇ ಬೇಕಾಯಿತು. ಕನಸುಗಳ ಬೆನ್ನೇರಿ ಹೊರಟವರಿಗೆ ವಿಶ್ರಾಂತಿ ಎಂಬುದೂ ಕನಸೇ ಅಲ್ಲವೇ?













           

No comments:

Post a Comment