ಮೃಗಶಿರೆಯ ಮಳೆಯ ನೆಚ್ಚಿ ಹೊಲವನುತ್ತಿ ಬೀಜ ಬಿತ್ತಿ
ಮುಗಿಲ ನೋಡೆ ಗಗನದೊಡಲು ಬಿಳಿಯ ಮೋಡ ಹಡೆದಿದೆ
ಮುಗಿಲ ನೋಡೆ ಗಗನದೊಡಲು ಬಿಳಿಯ ಮೋಡ ಹಡೆದಿದೆ
ಉರಿವ ಸೂರ್ಯ ಕಾದ ನೆಲವು ಹುರಿದು ಹೋದ ಎಲ್ಲ ಬೀಜ
ಬರಿಯ ಕನಸು ಸುಖದ ಬದುಕ ಬೆಳಕು ಕಾಣದಾಗಿದೆ //
ಬರಿಯ ಕನಸು ಸುಖದ ಬದುಕ ಬೆಳಕು ಕಾಣದಾಗಿದೆ //
ಕಮರಲಿಲ್ಲ ಪೂರ್ತಿ ಕನಸು ನಡುವೆ ಮಳೆಯು ಹನಿದಿದೆ
ನಮನ ನಿನಗೆ ವರುಣದೇವ ಇಳೆಯು ಗರ್ಭ ತಳೆದಿದೆ
ಮೊಳಕೆ ಚಿಗುರಿ ನಗುತ ನಿಂತು ಮುದದಿ ಮುಗಿಲ ನೋಡಿದೆ
ಸುಳಿಯದಾದೆ ಮತ್ತೆ ನೀನು ಚಿಗುರ ನವಿರು ಮುದುಡಿದೆ //
ಮನ್ನಿಸೆಲ್ಲ ನಮ್ಮ ಲೋಪ ಹನಿಸಿ ತಣಿಸು ನೆಲದ ತಾಪ
ನಿನ್ನೊಕ್ಕಲ ಬಾಳನುಳಿಸು ಇದುವೆ ಕರುಳ ಪ್ರಾರ್ಥನೆ
ದೇವ ವರುಣ ತೋರೆ ಕರುಣ ಕರಿಯ ಮೋಡ ಸಾಲು ಸಾಲು
ಅವತರಿಸಿದ ಭಾಗೀರಥಿ ಸಲಿಲ ಜಲಲ ಜಲಲಾ //
ಅವತರಿಸಿದ ಭಾಗೀರಥಿ ಸಲಿಲ ಜಲಲ ಜಲಲಾ //
ಬಸವಳಿದಿಹ ನೆಲ ತಣಿಯಿತು ತೃಷೆ ಹಿಂಗಿದ ಬೆಳೆ ಬಳುಕಿತು
ಕಸುವು ಪಡೆಯೆ ಮುಸಲಧಾರೆ ಕೆರೆಯ ಕೋಡಿ ತುಳುಕಿತು
ನಿಮ್ಮ ಕರುಣಕೆಮ್ಮ ನಮನ ಹಿಂದೆ ಸರಿದು ಬಿಸಿಲ ಕಳಿಸು
ಕಮ್ಮಿಯಾಗಲಿಲ್ಲ ರಭಸ ನಿಲ್ಲದ ಜಲಧಾರಾ //
ಮಳೆ ಸುರಿಯಿತು ಅನವರತವು ಸೊಕ್ಕಿ ಹರಿದವೆಲ್ಲ ಹಳ್ಳ
ಗೆಳೆಯ ಕೇಳು ಹೊಲವ ದಾಟಿ ಕದವತಟ್ಟಿತಗಸೆ ಮೀರಿ
ಕಾಲ ಕೆಳಗೆ ಮನೆಯ ಒಳಗೆ ನುಸುಳಿ ಸಾಗಿ ಬರಲು ಗಂಗೆ
ಮೇಲೆ ಸರಿಸಿ ಎಲ್ಲ ದಿನಸಿ ಹೊರಟ ಗಟ್ಟಿ ನೆಲೆಯೆಡೆ //
ಒಡವೆ ವಸ್ತ್ರ ಜಾನುವಾರು ಬದುಕಿನೆಲ್ಲ ಮೂಲದ್ರವ್ಯ
ಬಿಡಲೊಲ್ಲದೆ ಹಿಂದೆ ಉಳಿದು ಮೇಲೇರಲು ಮತ್ತೆ ನೀರು
ಎಲ್ಲ ತೊರೆದು ಮಾಡನೇರೆ ಸುತ್ತ ಕರಿಯ ಜಲದ ರಾಶಿ
ಝಲ್ಲೆನಿಸಿ ಬೊಬ್ಬೆ ಹೊಡೆಯೆ ಬಂದ ದೋಣಿ ಏರಿದ //
ಶಿಬಿರ ಸೇರೆ ಅಲ್ಲಿ ನೋಡು ಊರಗೌಡ್ರು ಅರ್ಚಕಯ್ಯ
ಸಾಬ ಸಿಂಪಿ ಬೇಡ ಗೊಲ್ಲ ಕೊನೆಯ ಬೀದಿ ಸಮಗಾರನು
ಎಲ್ಲ ಸೇರಿ ಒಂದೆ ಸಾಲು ಬೆಳಗಿನ ಉಪಹಾರಕೆ
ಬೆಲ್ಲ ಬೇವು ಭೇದವಳಿಯಿತೆಲ್ಲ ಒಂದೆ ಪೆಟ್ಟಿಗೆ //
ವಾರ ಕಳೆದು ನೀರು ಸರಿಯಿತದರ ಮೂಲ ಹರಿವಿನೆಡೆಗೆ
ಬಿರಬಿರನೇ ಊರಿಗೋಡಿ ನೋಡಲಲ್ಲಿ ಏನುಳಿದಿದೆ
ಎಲ್ಲ ಗುಡಿಸಿ ಕೆಸರ ಹೊದಿಸಿ ಕೆಲಸ ಮುಗಿಸಿ ಬಿಟ್ಟೋಡಿದೆ
ಎಲ್ಲಿ ಮನೆಯು ಮಣ್ಣ ರಾಶಿ ಎಲ್ಲ ಕೊಳೆತು ಕಳಿತಿದೆ //
ಕಣ್ಣಿ ಬಿಚ್ಚದಿದ್ದ ಎಮ್ಮೆ ಎತ್ತು ಕೋಳಿ ಆಡು ಮೇಕೆ
ತಣ್ಣಗಲ್ಲೆ ಜೀವ ತೊರೆದು ದೇಹ ಉಬ್ಬಿ ಕೊಳೆಯುತಿರಲು
ಮರೆವುದ್ಹೇಗೆ ಅವರ ಸಂಗ ಕಣ್ಣ ನೋಟ ಮೂಕಪ್ರೇಮ
ಕೊರಗು ಹೃದಯ ಹಿಂಡುತಿಹುದು ತಾವೆ ಕೊಟ್ಟ ನರಳಿಕೆ //
ಏಕೆ ಕುಣಿವೆ ಕ್ರೂರ ವಿಧಿಯೆ ಎಲ್ಲ ಹೊಸಕಿ ಹಾಕಿ ಹೋದೆ
ನೆಕ್ಕಲಿನ್ನು ಉಳಿದುದೇನು ಕಣ್ಣ ನೀರು ಹಳೆಯ ನೆನಪು
ಪಾಪ ಯಾರು ಮಾಡಿದರೋ ತಾಪ ನಮ್ಮ ಹಣೆಯ ಬರಹ
ಒಪ್ಪ ಮಾಡಿ ಕೊಳ್ಳಲೀಗ ಶಿವನ ಕರುಣೆ ಬೇಕಿದೆ //
ಪ್ರಳಯ ಮಳೆಯ ವರ್ತಮಾನ ನಾಡತುಂಬ ಹರಡಲಾಗ
ಹಳೆಯ ಗೆಳೆಯರೆಂಬ ರೀತಿ ಜಗದ ಹೃದಯ ಮಿಡಿಯಿತಲ್ಲ
ರೊಟ್ಟಿ ಅಕ್ಕಿ ಧವಸ ಧಾನ್ಯ ಬಟ್ಟೆ ಕೌದಿ ಗುಳಿಗೆ ಮದ್ದು
ಕೊಟ್ಟರಲ್ಲ ಪಾಟಿ ಪೆನ್ನು ದಿನಬಳಕೆಯ ಪರಿಕರ //
ಹರಿದು ಬರಲು ಕರುಣೆ ಕೊಡುಗೆ ಚಿಗುರಿ ನಿಂತ ದುರುಳ ಕೂಟ
ಮುರಿದ ಮನೆಯೆ ತಮ್ಮದೆಂದು ಬಾಚಿಕೊಂಡ ಖಳರ ಹೂಟ
ದೀನ ದಲಿತ ಮುದುಕ ಮುದುಕಿ ಹಿಂದೆ ಉಳಿದು ಅಳುತ ನಿಲಲು
ಹೀನ ಬುದ್ಧಿ ನೆರೆಯ ಕೆಸರಿನಲ್ಲು ವೋಟು ಗುಣಿಸಿದೆ //
ಮನೆ ಅಳಿಯಿತು ಬೆಳೆ ಹೋಯಿತು ಹೊಲದಿ ರಾಡಿ ಹರಡಿ ಮಲೆತು
ಜಾನುವಾರು ಕೊಚ್ಚಿ ಹೋಗಿ ಕೃಷಿಯ ನೆಚ್ಚು ಅಳಿದು ನಲುಗಿ
ಹಳ್ಳಿ - ಕೇರಿ ಜನರ ಬದುಕು ಹಸನು ಬಾಳು ಹಿಪ್ಪೆಯಾಯ್ತು
ಕೊಳ್ಳೆ ಹೊಡೆದ ಗುಳ್ಳೆ ನರಿಯು ಮತ್ತೆ ನೆರೆಯ ಕರೆದಿದೆ //
- ರವೀಂದ್ರ ಭಟ್, ದೊಡ್ನಳ್ಳಿ.
(2019ರ ಅಗಸ್ಟ್ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಬಂದ ಭಾರಿ ಮಳೆ ಮತ್ತು ನಂತರದ ಪ್ರವಾಹ ತಂದಿತ್ತ
ದುರಂತಗಳನ್ನು ವೀಕ್ಷಿಸಿ ಮನಕಲಕಿ ಬರೆದಿದ್ದು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ