ಚಾರ್ ಧಾಮ ಯಾತ್ರೆ - ಭಾಗ 1
ಹರಿದ್ವಾರದೆಡೆಗೆ1985 ರ ನವೆಂಬರ್ ತಿಂಗಳಿನಲ್ಲಿ ನಾವೆಲ್ಲ ಮಿತ್ರರು ಸೇರಿ ಉತ್ತರ ಭಾರತದ ಯಾತ್ರೆಯೊಂದನ್ನು ಮಾಡಿದ್ದೆವು. ಆಗ ನಾವು ಡೆಲ್ಲಿ, ಆಗ್ರಾ, ಮಥುರಾ, ಜೈಪುರಗಳನ್ನಲ್ಲದೆ ಹರಿದ್ವಾರ, ರಿಷಿಕೇಶ ಹಾಗೂ ಮಸ್ಸೂರಿಯವರೆಗೆ ಹೋಗಿ ಬಂದಿದ್ದೆವು. ಹರಿದ್ವಾರದಲ್ಲಿ ಗಂಗಾ ಸ್ನಾನವನ್ನು ಮಾಡಿದ್ದೆವು. ರಿಷಿಕೇಶದಲ್ಲಿ ಶುದ್ಧ ಗಂಗಾಜಲವನ್ನು ನಾವೇ ತುಂಬಿಕೊಂಡಿದ್ದೆವು. ಲಕ್ಷ್ಮಣ ಝೂಲಾ ಸೇತುವೆಯನ್ನುನೋಡುವಾಗ ಮನಸ್ಸಿಗೆ ಹಿತವೆನಿಸುತ್ತಿತ್ತು. ಹರಿದ್ವಾರ ಒಂದು ಚಿಕ್ಕ ಪಟ್ಟಣವಾಗಿತ್ತು, ಆಗ. ಮಸ್ಸೂರಿಯಂತೂ ಅತ್ಯಂತ ಶಾಂತವಾದ ಗಿರಿಧಾಮವಾಗಿತ್ತು.
ನಂತರ ಮತ್ತೊಮ್ಮೆ 2012 ರಲ್ಲಿ ಕಲ್ಕತ್ತಾ, ಬಾಗ್ಡೋಗ್ರಾ ಮುಖಾಂತರ ಡಾರ್ಜಿಲಿಂಗಿಗೆ ಕುಟುಂಬ ಸಮೇತ ಪ್ರಯಾಣ ಮಾಡಿದ್ದೆವು. ಅಲ್ಲಿ ಎರಡು ಮೂರು ದಿನ ಉಳಿದುಕೊಂಡು ನ್ಯೂಜಲ್ ಪೈಗುರಿ ಮಾರ್ಗವಾಗಿ ಕಲ್ಕತ್ತಾದ ಹೂಗ್ಲಿ ಜಂಕ್ಷನ್ ಮುಖಾಂತರ ಬೆಂಗಳೂರಿಗೆ ಮರಳಿ ಬಂದಿದ್ದೆವು. ಕಲ್ಕತ್ತಾ ನಗರದಲ್ಲಿ ವಿಕ್ಟೋರಿಯಾ ಮ್ಯೂಸಿಯಂ ಅನ್ನು ನೋಡಿದ ನೆನಪು ಇನ್ನೂ ಹಸಿರಾಗಿದೆ.ಅದೇ ರೀತಿ ಡಾರ್ಜಿಲಿಂಗ್ ಪ್ರವಾಸದಲ್ಲಿ ವೀಕ್ಷಿಸಿದ ಸ್ಥಳಗಳ ನೆನಪು ಸಹ ಮನಸ್ಸಿನಲ್ಲಿಹಸಿರಾಗಿದೆ.
ಇವೆಲ್ಲ ನಮ್ಮ ದೇಶದ ಹೆಮ್ಮೆಯಾದ ಹಿಮಾಲಯ ಶ್ರೇಣಿಯಲ್ಲಿ ಪವಡಿಸಿರುವ ಸ್ಥಳಗಳು. ಹಿಮಾಲಯ ಶ್ರೇಣಿಗೊಂದು ಚುಂಬಕ ಶಕ್ತಿ ಇದೆ. ಅದನ್ನು ಆಸ್ವಾದಿಸಿದವರಿಗೆ ಮತ್ತೆ ಮತ್ತೆ ಹಿಮಾಲಯದ ಕಡೆಹೋಗಬೇಕೆಂಬ ತುಡಿತ ಜಾಸ್ತಿ ಆಗುತ್ತದೆ. ನನಗೂ ಸಹ ಅದೇ ರೀತಿ ಹಿಮಾಲಯದ ತಪ್ಪಲಿನಲ್ಲಿ ಒಮ್ಮೆಹಾಯಾಗಿ ವಿಹರಿಸಿ ಬರಬೇಕೆನ್ನುವ ತುಡಿತ ಇತ್ತು. ಉತ್ತರಾಖಂಡದಲ್ಲಿರುವ ಹೂ ಕಣಿವೆಯಲ್ಲಿ ವಿಹಾರಮಾಡುವ ಆಸೆ ಇತ್ತು. ಅಂತೆಯೇ, ನಮ್ಮ ಸಹಿಷ್ಣುತೆಗೆ ಪಂಥಾಹ್ವಾನವನ್ನೀಯುವ ಚಾರ್ ಧಾಮ ಯಾತ್ರೆಯನ್ನು ಸಹ ಮಾಡುವ ಅದಮ್ಯ ಅಭಿಲಾಷೆ ಇತ್ತು. ಕೆಲಸದಲ್ಲಿರುವಾಗ ಕಾರ್ಯಬಾಹುಳ್ಯದಿಂದಾಗಿ ಈಯಾತ್ರೆ ಕನಸಾಗಿಯೇ ಉಳಿದುಕೊಂಡಿತ್ತು. 2019ರಲ್ಲಿ ನಾನು ನಿವೃತ್ತನಾದ ತಕ್ಷಣ ಈ ಚಾರ್ ಧಾಮ ಯಾತ್ರೆಯನ್ನು ಕೈಗೊಳ್ಳುವ ನಿರ್ಣಯ ಮಾಡಿದ್ದೆ. ಆದರೆ ಆಗ ವಕ್ಕರಿಸಿದ ಕರೋನಾ ಮಹಾಮಾರಿಯಿಂದಾಗಿ ಎರಡು ವರ್ಷಗಳ ಕಾಲ ಎಲ್ಲಿಯೂ ಪ್ರವಾಸ ಮಾಡುವ ಹಾಗೆ ಇರಲಿಲ್ಲ. ಈ ನಡುವೆ ನನ್ನ ವಾಸ್ತವ್ಯವನ್ನು ಧಾರವಾಡದಿಂದ ಮೈಸೂರು ನಗರಕ್ಕೆ ನಾನು ಸ್ಥಳಾಂತರಿಸಿಕೊಂಡಿದ್ದೆ. ಮೈಸೂರಿನಲ್ಲಿ ನನ್ನ ಬಾಲ್ಯಸ್ನೇಹಿತರ ಬಳಗವೇ ಇದೆ. ಅವರಲ್ಲೊಬ್ಬನಾದ ಆದಿ ಸುಬ್ರಹ್ಮಣ್ಯ ತಾನು ಚಾರ್ ಧಾಮ ಯಾತ್ರೆಯನ್ನು ಕೈಗೊಳ್ಳುವ ಆಲೋಚನೆಯಲ್ಲಿ ಇದ್ದೇನೆ ಎಂದು ತಿಳಿಸಿದ. ತಕ್ಷಣ ಸ್ಪಂದಿಸಿದ ನಾನು, "ನಾನು ಸಹ ನನ್ನ ಪತ್ನಿಯೊಡನೆ ನಿನ್ನ ಜೊತೆ ಸೇರಿಕೊಳ್ಳುತ್ತೇನೆ" ಎಂದು ತಿಳಿಸಿದೆ. ತುಂಬಾ ಸಂತೋಷಪಟ್ಟಆದಿ ಸುಬ್ರಮಣ್ಯ ತಕ್ಷಣ ಕಾರ್ಯ ಪ್ರವೃತ್ತನಾಗಿ ಮೇ - 2024ರ ಎರಡನೇಯ ವಾರದಲ್ಲಿ ಚಾರ್ ಧಾಮ ಯಾತ್ರೆ ಕೈಗೊಳ್ಳಲು "ತೀರ್ಥಯಾತ್ರ ಟೂರ್ಸ್ ಅಂಡ್ ಟ್ರಾವೆಲ್ಸ್" ನವರ ಜೊತೆ ಸೀಟ್ ಬುಕ್ ಮಾಡಿಯೇ ಬಿಟ್ಟ. ಮೇ ಹತ್ತರಂದು ಬರುವ ಅಕ್ಷಯ ತೃತೀಯ ದಿನದಂದು ಚಾರ್ ಧಾಮ ಯಾತ್ರೆ ಯಾತ್ರಿಗಳಿಗಾಗಿ ಪ್ರಾರಂಭವಾಗುತ್ತದೆ. ಅದು ಪ್ರಾರಂಭವಾಗುತ್ತಿದ್ದಂತೆ ಮೊದಲ ವಾರದಲ್ಲೇ ನಾವು ಸಹ ನಾಲ್ಕೂ ಧಾಮಗಳನ್ನು ವೀಕ್ಷಿಸುವ ರೀತಿ ವ್ಯವಸ್ಥೆ ಆದಂತಾಯಿತು.
ನಮ್ಮ ಈ ಮೊದಲ ತಂಡದಲ್ಲಿ ಒಟ್ಟು 41 ಯಾತ್ರಿಗಳು ಇದ್ದರು. ವಿವಿಧ ರಾಜ್ಯಗಳಿಂದ ಬಂದ ಯಾತ್ರಿಗಳೆಲ್ಲ ಡೆಲ್ಲಿಯಲ್ಲಿ ಒಂದುಗೂಡಿ ಅಲ್ಲಿಂದ ನಮ್ಮ ಯಾತ್ರೆ ಮುಂದುವರಿಯುತ್ತಿತ್ತು. ಮೈಸೂರಿನಿಂದ ನಮ್ಮದು 9 ಜನರ ಒಂದು ತಂಡ ಇತ್ತು. ಇದು ಆ 'ತಂಡದೊಳಗೊಂದು ತಂಡ'. ಶ್ರೀಮತಿ ಗಾಯತ್ರಿ ಮತ್ತು ಶ್ರೀ ಆದಿ ಸುಬ್ರಮಣ್ಯ, ಆದಿ ಸುಬ್ರಹ್ಮಣ್ಯನ ಅಕ್ಕ ಶ್ರೀಮತಿ ವಸಂತ ಲಕ್ಷ್ಮಿ, ಆದಿಯ ಮೊದಲ ಬೀಗರಾದ ಶ್ರೀಮತಿ ಕಲಾ ಮತ್ತು ಶ್ರೀ ಮೋಹನ್, ಆದಿಯ ಎರಡನೆಯ ಬೀಗರಾದ ಶ್ರೀಮತಿ ಭಾರತಿ ಮತ್ತು ಶ್ರೀ ರವಿಕುಮಾರ್, ನನ್ನ ಧರ್ಮಪತ್ನಿ ಸರಸ್ವತಿ ಮತ್ತು ನಾನು - ಈ ರೀತಿ ನಮ್ಮ 9 ಜನರ ತಂಡ ಇತ್ತು. ಯಾತ್ರೆಯ ನಿರ್ವಾಹಕರು ಎಲ್ಲಾ ಯಾತ್ರಾರ್ಥಿಗಳ ಒಂದು ವಾಟ್ಸಪ್ ಗುಂಪನ್ನು ರಚಿಸಿ, ಒಂದು ತಿಂಗಳ ಮೊದಲಿನಿಂದಲೇ ನಮಗೆಲ್ಲ ಸೂಕ್ತ ರೀತಿಯಲ್ಲಿ ನಿರ್ದೇಶನಗಳನ್ನು ನೀಡುತ್ತಾ, ಯಾವ ರೀತಿಯಲ್ಲಿ ಹಿಮಾಲಯದ ಪರಿಸರಕ್ಕೆ ಹೊಂದಿಕೊಳ್ಳುವಂತೆ ನಮ್ಮನ್ನು ನಾವು ತಯಾರು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸೂಚನೆಗಳನ್ನು ನೀಡುತ್ತಲೇ ಇದ್ದರು. ಅವರ ಸೂಚನೆಯಂತೆ ಬೆಚ್ಚನೆಯ ಉಡುಪುಗಳು, ಕಾಲು ಚೀಲಗಳು, ಬೂಟು, ಡ್ರೈ ಫ್ರೂಟ್ಸ್ ಇತ್ಯಾದಿಗಳನ್ನು ಹೊಂದಿಸಿಕೊಂಡಿದ್ದೆವು. ಒಂದು ತಿಂಗಳ ಮೊದಲಿನಿಂದಲೇ ನಸುಕಿನ ಮೂರುವರೆ ನಾಲ್ಕು ಗಂಟೆಗೆ ಎದ್ದು ಧ್ಯಾನ ಇತ್ಯಾದಿಗಳನ್ನು ಮಾಡುವ ಹಾಗೂ ದಿನವೊಂದಕ್ಕೆ ಎಂಟರಿಂದ ಹತ್ತು ಕಿಲೋಮೀಟರ್ಗಳಷ್ಟು ದೂರ ನಡೆಯುವ ಅಭ್ಯಾಸವನ್ನು ಸಹ ಮಾಡಿಕೊಂಡಿದ್ದೆವು. ಆ ಕೇದಾರನಾಥನ ಕೃಪೆ ಇಲ್ಲದಿದ್ದರೆ ಈ ಯಾತ್ರೆ ಕೈಗೂಡುವುದು ಅಸಾಧ್ಯ ಎಂದು ತಿಳಿದಿದ್ದ ನಾವು ನಿತ್ಯವೂ ಅವನನ್ನು, "ನಮ್ಮನ್ನು ನಿನ್ನಸನ್ನಿಧಿಗೆ ಕರೆಸಿಕೋ, ತಂದೆ!" ಎಂದು ಪ್ರಾರ್ಥನೆ ಮಾಡುತ್ತಾ ಇದ್ದೆವು. ನಮ್ಮ ಯಾತ್ರೆ ಮೇ 9ರಂದು ಪ್ರಾರಂಭವಾಗಿ ಮೇ 22ರ ಮುಂಜಾನೆ ಮುಕ್ತಾಯವಾಗುವುದಿತ್ತು. ನಿಗದಿತ ದಿನ ಸಮೀಪಿಸುತ್ತಿದ್ದಂತೆ ನಮ್ಮಲ್ಲಿ ಕಾತುರ ಹಾಗೂ ದುಗುಡಗಳೂ ಸಹ ಹೆಚ್ಚುತ್ತಿದ್ದವು.
ಮೇ ಒಂಬತ್ತರ ರಾತ್ರಿ ನಮ್ಮ ನಮ್ಮ ಮನೆಗಳಲ್ಲಿ ಊಟವನ್ನು ಮುಗಿಸಿದ ನಾವು ರಾತ್ರಿ 10:30 ಗಂಟೆಗೆಲ್ಲ ಮೈಸೂರು ಬಸ್ ನಿಲ್ದಾಣದಲ್ಲಿ ಸೇರಿದ್ದೆವು. ಅಲ್ಲಿಂದ ಫ್ಲೈ ಬಸ್ ನಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಹೋಗುವುದಿತ್ತು. ಯಾವುದೇ ಆತಂಕಕ್ಕೆ ಆಸ್ಪದವಿಲ್ಲದೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿದ ನಾವು, ಅಲ್ಲಿ ನಮ್ಮ ವಿಮಾನ ಒಂದುವರೆ ಗಂಟೆ ತಡವಾಗಿದ್ದು ಕಂಡು ಸ್ವಲ್ಪ ಕಸಿವಿಸಿಗೊಂಡೆವು. ವಿಷಯವನ್ನು ಯಾತ್ರಾ ನಿರ್ವಾಹಕರಿಗೆ ತಿಳಿಸಿದ್ದಾಯಿತು. ಅಂತೂ 7-00 ಗಂಟೆಗೆ ಇಂಡಿಗೋ ವಿಮಾನ ಏರಿದ ನಾವು ಬೆಳಗಿನ 10:30ಕ್ಕೆಲ್ಲ ಹೊಸದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಇಳಿದು ಟರ್ಮಿನಲ್ ಒಂದರ ಹೊರಭಾಗದಲ್ಲಿ ನಮಗಾಗಿ ಕಾಯುತ್ತಿದ್ದ ಯಾತ್ರಾ ನಿರ್ವಾಹಕರನ್ನು ಕೂಡಿಕೊಂಡೆವು. ತುಂಬಾ ಹಾರ್ದಿಕವಾಗಿ ನಮ್ಮನ್ನು ಬರಮಾಡಿಕೊಂಡ ಅವರು ತಮ್ಮೊಂದಿಗೆ ಪ್ಯಾಕ್ ಮಾಡಿಸಿಕೊಂಡು ಬಂದ ಉಪಹಾರವನ್ನು ನಮಗೆ ನೀಡಿದರು. ನಮ್ಮ ನಮ್ಮ ಲಗೇಜ್ ಗಳಿಗೆ ಸಂಖ್ಯೆಯನ್ನು ನೀಡಿದರು. ಯಾತ್ರೆಯ ಉದ್ದಕ್ಕೂ ನಮ್ಮ ಲಗೇಜ್ ಗಳಿಗೆ ಈ ಸಂಖ್ಯೆಯೇ ಕಾಯಂ. ಮುಂದೆ ವಿವಿಧ ಹೋಟೆಲ್ಗಳಲ್ಲಿ ನಮಗೆ ರೂಮಿನ ವ್ಯವಸ್ಥೆ ಮಾಡುವಾಗ ಈ ರೀತಿಯ ಲಗೇಜ್ ಸಂಖ್ಯೆ ತುಂಬಾ ಅನುಕೂಲಕರವಾಗಿ ಪರಿಣಮಿಸಿತ್ತು. ದೆಹಲಿಯಿಂದ ಹರಿದ್ವಾರಕ್ಕೆ ಹೋಗುವ ಬಸ್ಸಿನಲ್ಲಿ ನಮಗೆ ಸೀಟುಗಳ ಸಂಖ್ಯೆಯನ್ನು ಸಹ ಮೊದಲೇ ನಿರ್ಧರಿಸಿದ್ದರು. ನಮ್ಮ ಲಗೇಜ್ ಗಳನ್ನು ಯಾತ್ರಾ ತಂಡದವರಿಗೆ ಒಪ್ಪಿಸಿ ನಮ್ಮ ನಮ್ಮ ನಿಗದಿತ ಸೀಟುಗಳಲ್ಲಿ ಕುಳಿತುಕೊಂಡೆವು. ವಾತಾನುಕೂಲಿ ಬಸ್ಸಿನಲ್ಲಿ ಸೀಟುಗಳು ಸಹ ಚೆನ್ನಾಗಿಯೇ ಇದ್ದವು. ಇಲ್ಲಿಂದ ನಮ್ಮ ಯಾತ್ರೆ ಅಧಿಕೃತವಾಗಿ ಪ್ರಾರಂಭವಾದಂತಾಯಿತು.
ಹಿಮಾಲಯದ ಕನಸುಗಳು
ಹಿಮಪರ್ವತ ತಪ್ಪಲಿನಲಿ
ಪರಮಾಪ್ತರ ಸಂಗಗೂಡಿ
ಸಮಯದಾ ಹಂಗು ಮೀರಿ
ವಿಹರಿಸುವಾ ಕನಸಿದೆ || 1 ||
ಹಿಮಪಾತಕೆ ಮುಖವನೊಡ್ಡಿ
ಸುರಿವ ತುಹಿನ ಕಚಗುಳಿಯನು
ಬೆಚ್ಚನುಣ್ಣೆ ಉಡುಗೆಯೊಳಗೆ
ಚಪ್ಪರಿಸುವ ಕನಸಿದೆ || 2 ||
ಅರಳಿನಿಂತ ಹೂ ಕಣಿವೆಲಿ
ಮನದನ್ನೆಯ ಕೈಯ ಹಿಡಿದು
ಮಾತ ಮರೆತು ಮೌನದೊಳಗೆ
ಚಿಪ್ಪಾಗುವ ಕನಸಿದೆ || 3 ||
ಯಮುನೆ ಗಂಗೆ ಮೂಲ ತಲುಪಿ
ಹರಿವಿಗುಂಟ ಸರಿದು ಗುರುವ
ಒಳ್ನುಡಿಗಳ ಆಲಿಸುತ್ತ
ಅರಳಿ ನಿಲುವ ಕನಸಿದೆ || 4 ||
- ರವೀಂದ್ರ ಭಟ್, ದೊಡ್ನಳ್ಳಿ
ಹಿಮಪರ್ವತ ತಪ್ಪಲಿನಲಿ
ಪರಮಾಪ್ತರ ಸಂಗಗೂಡಿ
ಸಮಯದಾ ಹಂಗು ಮೀರಿ
ವಿಹರಿಸುವಾ ಕನಸಿದೆ || 1 ||
ಹಿಮಪಾತಕೆ ಮುಖವನೊಡ್ಡಿ
ಸುರಿವ ತುಹಿನ ಕಚಗುಳಿಯನು
ಬೆಚ್ಚನುಣ್ಣೆ ಉಡುಗೆಯೊಳಗೆ
ಚಪ್ಪರಿಸುವ ಕನಸಿದೆ || 2 ||
ಅರಳಿನಿಂತ ಹೂ ಕಣಿವೆಲಿ
ಮನದನ್ನೆಯ ಕೈಯ ಹಿಡಿದು
ಮಾತ ಮರೆತು ಮೌನದೊಳಗೆ
ಚಿಪ್ಪಾಗುವ ಕನಸಿದೆ || 3 ||
ಯಮುನೆ ಗಂಗೆ ಮೂಲ ತಲುಪಿ
ಹರಿವಿಗುಂಟ ಸರಿದು ಗುರುವ
ಒಳ್ನುಡಿಗಳ ಆಲಿಸುತ್ತ
ಅರಳಿ ನಿಲುವ ಕನಸಿದೆ || 4 ||
- ರವೀಂದ್ರ ಭಟ್, ದೊಡ್ನಳ್ಳಿ
ನಮ್ಮ ಯಾತ್ರಿಗಣ
( ಸಶೇಷ......)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ