ಚಾರ್ ಧಾಮ ಯಾತ್ರೆ -ಭಾಗ 2
ಗಂಗಾ ಸನ್ನಿಧಿಯಲ್ಲಿದಿನಾಂಕ 10/05/2024
ಬಸ್ ಏರಿದೊಡನೆ ನಮ್ಮ ಯಾತ್ರಾ ಮಾರ್ಗದರ್ಶಿಯಾದ ಶ್ರೀ ವೆಂಕಟೇಶ ದಾಸ್ ಅವರು ಒಂದು ನರಸಿಂಹ ಭಜನೆಯನ್ನು ಹೇಳಿಕೊಟ್ಟರು. ದೆಹಲಿ ನಗರದ ಹೊರವಲಯದ ಬೀದಿಗಳನ್ನು ದಾಟಿದ ಬಸ್ ನಿಧಾನವಾಗಿ ಹರಿದ್ವಾರದ(ಮೀರತ್ ಹೈವೇ)ಕಡೆ ಹೊರಟಿತು. ನಮ್ಮಲ್ಲಿ ಬಹುತೇಕರು ಹಿಂದಿನ ರಾತ್ರಿ ಸರಿಯಾಗಿ ನಿದ್ರೆ ಮಾಡಿರಲಿಲ್ಲ. ಬಸ್ಸಿನ ಕಿಟಕಿಯ ಪರದೆಗಳನ್ನು ಎಳೆದು ನೋಡನೋಡುತ್ತಿದ್ದಂತೆ ಎಲ್ಲರೂ ನಿದ್ರೆಗೆ ಜಾರಿದರು. ಮಧ್ಯಾಹ್ನ ಒಂದುವರೆ ಗಂಟೆಯ ಸುಮಾರಿಗೆ ಹೆದ್ದಾರಿಯ ಪಕ್ಕದಲ್ಲಿರುವ ಡಾಬಾ ಒಂದರ ಎದುರು ನಮ್ಮ ಬಸ್ ನಿಂತಿತು. ಬೆಳಗಿನ ಉಪಹಾರದಂತೆ ಮಧ್ಯಾಹ್ನದ ಊಟವನ್ನು ಸಹ ಟ್ರಾವೆಲ್ಸ್ ನವರು ಪ್ಯಾಕ್ ಮಾಡಿಸಿಕೊಂಡು ತಂದಿದ್ದರು. ಇಲ್ಲಿ ಸ್ವಲ್ಪ ಫ್ರೆಶ್ ಅಪ್ ಆಗಿ ಸುಧಾರಿಸಿಕೊಂಡು ಮಧ್ಯಾಹ್ನದ ಊಟವನ್ನು ಮಾಡಿದೆವು. ಹರಿದ್ವಾರದಲ್ಲಿ ಸಂಜೆ ಗಂಗಾರತಿಯನ್ನು ನೋಡುವ ಕಾರ್ಯಕ್ರಮ ಇದ್ದುದರಿಂದ ತಡ ಮಾಡದೆ ಮತ್ತೆ ಎಲ್ಲರೂ ಬಸ್ಸಿನಲ್ಲಿ ಕುಳಿತುಕೊಂಡೆವು. ನಿಗದಿತ ವೇಳೆಗಿಂತ ಅರ್ಧ ಗಂಟೆ ಮುಂಚಿತವಾಗಿ, ನಾಲ್ಕುವರೆಗೆಲ್ಲ ನಾವು ಹರಿದ್ವಾರದಲ್ಲಿದ್ದೆವು.
ಹರಿದ್ವಾರದ ಹೋಟೆಲ್ "ತ್ರಿಮೂರ್ತಿ"ಯಲ್ಲಿ ನಮಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿತ್ತು. ನಮಗೆ ನಿಗದಿತವಾಗಿದ್ದ ರೂಮುಗಳಲ್ಲಿ ಸಾಮಾನುಗಳನ್ನು ಇಳಿಸಿ, ವೆಂಕಟೇಶ್ ದಾಸ ಅವರ ಸೂಚನೆಯಂತೆ ತಕ್ಷಣವೇ ಗಂಗಾ ಸ್ನಾನ ಮಾಡಿ ಬರಲು ಹೊರಟೆವು. ಹೋಟೆಲ್ಲಿನ ಮುಖ್ಯ ದ್ವಾರದಿಂದ ಸುಮಾರು 200 ಅಡಿ ದೂರದಲ್ಲಿ ಗಂಗಾ ಸ್ನಾನ ಮಾಡುವ ಘಾಟ್ ಇತ್ತು. ಘಾಟ್ ನ ಮೆಟ್ಟಿಲುಗಳ ಮೇಲ್ಭಾಗದಲ್ಲಿ ಒಂದು ಮಾರುತಿ ಮಂದಿರವಿತ್ತು. ಘಾಟಿನಲ್ಲಿ ಹೇಳಿಕೊಳ್ಳುವಂತಹ ಜನಸಂದಣಿ ಇರಲಿಲ್ಲ. ಸ್ನಾನ ಮಾಡುವ ತಯಾರಿಯಲ್ಲಿಯೇ ಬಂದಿದ್ದರಿಂದ ಸ್ನಾನಘಟ್ಟದ ಮೆಟ್ಟಿಲುಗಳನ್ನು ಇಳಿದು ಸೊಂಟದವರೆಗೆ ನೀರಿನಲ್ಲಿ ನಿಂತುಕೊಂಡು ಮನದಣಿಯೇ ಮುಳುಗು ಹಾಕಿದೆವು. ಇಲ್ಲಿ ನೀರಿನ ಸೆಳೆತ ಜೋರಾಗಿತ್ತು. ಸ್ವಲ್ಪ ಹೆಜ್ಜೆ ತಪ್ಪಿ ಮುಂದೆ ಹೋದರೂ ಕೊಚ್ಚಿಕೊಂಡು ಹೋಗಿ ಬಿಡುವ ಅಪಾಯವಿತ್ತು. ಆದರೆ ಕಬ್ಬಿಣದ ಸರಳುಗಳನ್ನು ಉದ್ದಕ್ಕೂ ಹಾಕಿಟ್ಟಿರುವುದರಿಂದ ಅದನ್ನು ಹಿಡಿದುಕೊಂಡು ಮುಳುಗು ಹಾಕಬಹುದಿತ್ತು. ಈ ಹಿಮಾಲಯವೆಂದರೆ ಹರನ ಆವಾಸ ಸ್ಥಾನ. ಮನಸ್ಸಿನ ತುಂಬಾ ಶಿವನನ್ನು ತುಂಬಿಕೊಂಡು ಮತ್ತೆ ಮತ್ತೆ ಮುಳುಗು ಹಾಕಿದೆವು. ನೀರಿನಲ್ಲಿ ನಿಂತೇ ಸೂರ್ಯನಿಗೆ ಅರ್ಘ್ಯವನ್ನು ಸಹ ಕೊಟ್ಟೆನು. ನಿರ್ಮಲವಾಗಿ ಹರಿಯುತ್ತಿರುವ ಈ ಗಂಗೆಯಲ್ಲಿನ ಸ್ನಾನ ಮೈ ಮನಸ್ಸುಗಳನ್ನು ಹಗುರಾಗಿಸಿ ಪುಳಕಗೊಳಿಸಿತು.
ಗಂಗಾ ಸ್ನಾನ ಮುಗಿಸಿ ರೂಮಿಗೆ ಹೋಗಿ ಬಟ್ಟೆ ಬದಲಾಯಿಸಿ "ಹರ್ ಕೀ ಪೌರಿ"ಯಲ್ಲಿ ಗಂಗಾರತಿಯನ್ನು ನೋಡಲು ದೌಡಾಯಿಸಿದೆವು. ನಮ್ಮ ಪ್ರಧಾನ ಮಂತ್ರಿ ಮೋದಿಜಿ ಅವರು ವಾರಣಾಸಿಯ ಘಾಟ್ ಗಳಲ್ಲಿ ಗಂಗಾರತಿಯನ್ನು ವಿದೇಶಿ ಗಣ್ಯರಿಗೆ ಹೆಮ್ಮೆಯಿಂದ ತೋರಿಸುವುದನ್ನು ವಾರ್ತೆಗಳಲ್ಲಿ ನೋಡಿದಾಗಲೆಲ್ಲ ಈ ಗಂಗಾರತಿಯನ್ನು ನಾನೂ ಸಹ ನೋಡಬೇಕೆಂಬ ಅದಮ್ಯವಾದ ಆಸೆ ಮನಸ್ಸಿನಲ್ಲಿ ಇತ್ತು. ಇಂದು ಆ ಸುಮುಹೂರ್ತ ಕೂಡಿ ಬಂದಿತ್ತು. ಸೇತುವೆಯನ್ನು ದಾಟಿ ಅತ್ತ ಕಡೆಯ ದಂಡೆಗೆ ಹೋದ ನಮಗೆ ಅಲ್ಲಿಯ ಪೂಜಾರಿಯ ಕಡೆಯ ಮನುಷ್ಯನೊಬ್ಬ ತಲಾ ಒಂದು ನೂರು ರೂಪಾಯಿಗಳನ್ನು ತೆಗೆದುಕೊಂಡು ಸೀದಾ ಘಾಟಿನ ಮೊದಲ ಮೆಟ್ಟಿಲಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ. ಅಸಾಧ್ಯವಾದ ಆ ಜನಸಂದಣಿಯಲ್ಲಿ ಅವನ ಬೆನ್ನು ಬಿಡದೆ ಹೋದ ನಮಗೆ, ಅವನು ನುಗ್ಗಿಸಿ, ಒಮ್ಮೆಲೆ ಗಂಗಾ ಘಾಟ್ ನ ಕಟ್ಟಡದ ಒಳಭಾಗಕ್ಕೆ ಕರೆದೊಯ್ದ. ಅಲ್ಲಿ ಗಂಗೆಯ ದಡದಲ್ಲಿ ಗಂಗಾಮಾತೆಯ ಮೂರ್ತಿಯನ್ನು ಪೂಜಿಸುತ್ತಾ, ಬೃಹತ್ತಾದ ಆರತಿಯೊಂದನ್ನು ತಯಾರು ಮಾಡುತ್ತಿದ್ದವನ ಸನಿಹ ನಮ್ಮನ್ನು ತಲುಪಿಸಿದ. ಈಗ ನಾವೆಲ್ಲ ಗಂಗಾ ಘಾಟಿನ ಮೊದಲನೇ ಮೆಟ್ಟಿಲ ಮೇಲಿದ್ದೆವು. ನಮ್ಮ ಎಡಗಡೆ ಒಂದು ಪುಟ್ಟ ಗಂಗಾಮಂದಿರವಿತ್ತು. ನಮ್ಮ ಬಲಗಡೆ ಗಂಗಾರತಿಗಾಗಿಯೇ ಸ್ಥಾಪಿಸಿದ ಪುಟ್ಟ ಪುಟ್ಟ ಗಂಗಾ ಪುತ್ಥಳಿಗಳಿದ್ದವು. ( ಬಹುಶಃ ಹಿತ್ತಾಳೆಯವು, ಬಂಗಾರದ ಬಣ್ಣದಲ್ಲಿದ್ದವು ) ಎದುರಿನಲ್ಲಿ ಗಂಗಾ ಮಾತೆ. ಎದುರು ದಡದಲ್ಲಿ ಕಿಕ್ಕಿರಿದು ಸೇರಿದ ಜನ ಸಮೂಹ. ನಾವು ನಿಂತ ದಂಡೆಯಲ್ಲಿ ಮಾತ್ರ ಗಂಗಾರತಿ ನಡೆಯುವುದಿತ್ತು. ಸೂರ್ಯಾಸ್ತವಾಗುತ್ತಿದ್ದಂತೆ ಎಲ್ಲಾ ಗುಡಿಗಳಲ್ಲಿ ಘಂಟಾನಾದದ ಜೊತೆ ಭಜನೆ ಆರಂಭವಾಯಿತು ಸೇರಿದ್ದ ಜನ ಸಮೂಹ ಸಹ ಆ ಭಜನೆಯ ಜೊತೆ ತಮ್ಮ ಧ್ವನಿಯನ್ನು ಸೇರಿಸುತ್ತಿದ್ದರು. ಎಲ್ಲಾ ಗಂಗಾ ಪುತ್ಥಳಿಗಳ ಎದುರು ಇದ್ದ ಎಲ್ಲಾ ಪೂಜಾರಿಗಳು ಬೃಹತ್ತಾದ ಆರತಿಯನ್ನು ಹೊತ್ತಿಸಿಕೊಂಡು ಪ್ರದಕ್ಷಿಣಾಕಾರದಲ್ಲಿ ಆ ಜ್ವಾಲೆಯ ಉಂಡೆಯನ್ನು ತಿರುಗಿಸುತ್ತಿದ್ದರು. ಜನರು ಭಕ್ತಿ ಭಾವ ಪರವಶರಾಗಿ ಗಂಗಾಮಾತೆಯ ಜೈಕಾರವನ್ನು ಮಾಡುತ್ತಿದ್ದರು. ಸಹಸ್ರ ಸಹಸ್ರ ವರ್ಷಗಳಿಂದ ನಿರಂತರವಾಗಿ ಹರಿಯುತ್ತ ಈ ಭಾರತ ಭೂಮಿಯನ್ನು ಪವಿತ್ರವಾಗಿಸಿದ ಗಂಗಾಮಾತೆಗೆ ಭಕ್ತರೆಲ್ಲರ ಕೃತಜ್ಞತಾಪೂರ್ವಕ ನಮನದ ದೃಶ್ಯವದು. "ಅಮ್ಮಾ ಗಂಗಾ, ನೀನು ಈ ನೆಲದ ಜೀವನಾಡಿ. ಪಾಪನಾಶಿನಿ ನೀನು. ಮೋಕ್ಷದಾಯಿನಿ ನೀನು. ಅನುಕ್ಷಣವೂ ನಿನ್ನನ್ನು ಅಪವಿತ್ರ ಗೊಳಿಸುತ್ತಿರುವ ಈ ಭಕ್ತರ ಪಾಪಗಳನ್ನು ನಿನ್ನ ಉದರದಲ್ಲಿ ಭರಿಸಿಕೊಂಡರೂ ಸಹ ಗಂಭೀರಳಾಗಿ ಪ್ರವಹಿಸುತ್ತಿರುವ ನಿನಗಿದೋ ನನ್ನ ನಮನಗಳು" ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಈ ದಿವ್ಯ ಕ್ಷಣವನ್ನು, ಅದ್ಭುತ ದೃಶ್ಯವನ್ನು ಸಾಧ್ಯವಾಗಿಸಿದ ಆ ವಿಶ್ವೇಶ್ವರನಿಗೆ ಮನಸ್ಸಿನಲ್ಲಿ ನಮಿಸುತ್ತಾ ಗಂಗಾಪ್ರೋಕ್ಷಣೆಗೆ ತೆರೆದುಕೊಂಡೆನು.
ಈ "ಹರ್ ಕಿ ಪೌರಿ" ಕುರಿತು ಸ್ವಲ್ಪ ವಿವರಣೆ ಅವಶ್ಯಕ ಎನಿಸುತ್ತದೆ.
"ಹರ್ ಕಿ ಪೌರಿ" ಎಂದರೆ ಭಗವಂತನ ಮೆಟ್ಟಿಲು ಎಂದರ್ಥ. ಇಲ್ಲಿ ಗೋಡೆಯೊಂದರ ಮೇಲೆ ಶ್ರೀ ವಿಷ್ಣುವಿನ ಪಾದದ ಗುರುತಿದೆ. ಈ ಸ್ಥಳದಲ್ಲಿಯೇ ಗಂಗೆ ಹಿಮಾಲಯವನ್ನು ಬಿಟ್ಟು ಬಯಲಿನ ಕಡೆಗೆ ಹರಿಯುತ್ತಿದ್ದಾಳೆ. ಇಲ್ಲಿ ಗಂಗಾರತಿ ನಡೆಯುವ ಸ್ಥಳವನ್ನು ಬ್ರಹ್ಮಕುಂಡ ಎಂದೆನ್ನುತ್ತಾರೆ. ಇದು ಅತ್ಯಂತ ಪವಿತ್ರವಾದ ಸ್ಥಳ. ಸಮುದ್ರ ಮಥನದ ನಂತರ ಅಮೃತ ಕಲಶವನ್ನು ಗರುಡ ಸಾಗಿಸುತ್ತಿದ್ದಾಗ ಅಮೃತ ಕುಂಡದಿಂದ ನಾಲ್ಕು ಹನಿ ಅಮೃತ ತುಳುಕಿ ಭೂಮಿಯ ಮೇಲೆ ಬಿದ್ದಿತ್ತಂತೆ. ಆ ನಾಲ್ಕು ಅಮೃತಬಿಂದುಗಳು ಬಿದ್ದ ಸ್ಥಳಗಳಲ್ಲಿ ಈಗ ಕುಂಭಮೇಳಗಳು ನಡೆಯುತ್ತವೆ. ಆ ನಾಲ್ಕು ಸ್ಥಳಗಳ ಪೈಕಿ ಈ ಹರ್ ಕೀ ಪೌರಿ ಕೂಡ ಒಂದು. ಇದೇ ಹರ್ ಕಿ ಪೌರಿಯಲ್ಲಿ ಕುಂಭಮೇಳ ನಡೆಯುತ್ತದೆ ಈ 'ಹರ್ ಕೀ ಪೌರಿ'ಯು ಗಂಗಾ ನಾಲೆಯ ಮೇಲೆ ಇದೆ. ಮೂಲ ನದಿಯಿಂದ ಹೆಚ್ಚಿನ ಅಂಶ ನೀರನ್ನು ಈ ಗಂಗಾ ನಾಲೆಯಲ್ಲಿ ಹರಿಸುತ್ತಾರೆ. ಹಾಗಾಗಿ ನದಿಗಿಂತಲೂ ಈ ನಾಲೆಯೇ ಬೃಹತ್ತಾಗಿ ಕಾಣಿಸುತ್ತದೆ.
ಗಂಗಾರತಿ ಮುಗಿಯುತ್ತಿದ್ದಂತೆ ಸ್ವಲ್ಪ ಜನಸಂದಣಿ ಕಡಿಮೆಯಾಗಲೆಂದು ಅಲ್ಲಿಯೇ ಕಾದೆವು. ನಂತರ ಗುಡಿಯ ಪ್ರಾಕಾರದಿಂದ ಹೊರ ಬಿದ್ದು ರಸ್ತೆಗೆ ಇಳಿದರೆ ರಸ್ತೆಯಲ್ಲಿ ಜಾತ್ರೆಯ ಪುನರಾವರ್ತನೆ. ನಮ್ಮ ಬೃಹತ್ ಗುಂಪು ಚೆಲ್ಲಾಪಿಲ್ಲಿಯಾಗಿ ನಾವು 9 ಜನ ಮಾತ್ರ ಕಷ್ಟಪಟ್ಟು ಒಬ್ಬರಿಗೊಬ್ಬರು ಆತುಕೊಂಡಿದ್ದೆವು. ಮತ್ತೆ ಸೇತುವೆಯನ್ನು ದಾಟಿ ಆಟೋಗಳು ಇದ್ದ ಕಡೆ ಬಂದೆವು. ಆಟೋ ಹಿಡಿದು ರೂಮಿಗೆ ಬಂದಾಗ ಬಿಸಿಬಿಸಿ ಊಟ ನಮಗಾಗಿ ಕಾಯುತ್ತಿತ್ತು "ನಾಳೆ ಮುಂಜಾನೆ ಯಮುನೋತ್ರಿ ದರ್ಶನಕ್ಕೆ ಹೋಗಬೇಕಾಗಿದೆ. ಬೆಳಿಗ್ಗೆ ಎಲ್ಲರೂ 3:00 ಗಂಟೆಗೆಲ್ಲ ಎದ್ದು, ನಾಲ್ಕು ಗಂಟೆಗೆ ಗಾಡಿಯಲ್ಲಿ ಕುಳಿತಿರಬೇಕು" ಎಂಬ ಸೂಚನೆ ವೆಂಕಟೇಶ್ ಜಿ ಅವರಿಂದ. ತಡ ಮಾಡದೆ ಊಟ ಮುಗಿಸಿ 9.45ಕ್ಕೆಲ್ಲ ನಿದ್ದೆಗೆ ಜಾರಿದೆವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ