ಈ ಬ್ಲಾಗ್ ಅನ್ನು ಹುಡುಕಿ

ಮಂಗಳವಾರ, ಅಕ್ಟೋಬರ್ 1, 2024

ಚಾರ್ ಧಾಮ ಯಾತ್ರೆ -ಭಾಗ 14

ಚಾರ್ ಧಾಮ ಯಾತ್ರೆ -ಭಾಗ 14

ದೇವಪ್ರಯಾಗ ದರ್ಶನ

ದಿನಾಂಕ:-20/05/2024

        ಮುಂಜಾನೆ ಮೂರು ಗಂಟೆಗೆಲ್ಲ ಎದ್ದೆವು. ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು, ರೂಮಿನಲ್ಲಿ ಒದಗಿಸಿದ್ದ ಕೆಟಲ್ ನಲ್ಲಿ ನೀರು ಕುದಿಸಿಕೊಂಡು, ಬ್ಲಾಕ್ ಟೀ ತಯಾರಿಸಿಕೊಂಡು ಕುಡಿದೆವು. 3:45ಕ್ಕೆಲ್ಲ ನಮ್ಮ ಲಗೇಜ್ ಗಳನ್ನು ರೂಮಿನ ಹೊರಗಡೆ ಇಟ್ಟಾಗಿತ್ತು. ನಾಲ್ಕು ಗಂಟೆಗೆ ಸರಿಯಾಗಿ ನಮ್ಮ ಬಸ್ಸುಗಳನ್ನು ಹೊರಡಿಸಿ ಜ್ಯೋತಿರ್ಮಠಕ್ಕೆ ವಿದಾಯ ಹೇಳಿದೆವು.

        ಎಂದಿನಂತೆ ಬಸ್ ಏರಿದೊಡನೆ ನರಸಿಂಹ ಭಜನೆ ಆದ ನಂತರ ನಾನು ಮಂಕುತಿಮ್ಮನ ಕಗ್ಗದ ಎರಡು ಪದ್ಯಗಳಿಗೆ ವ್ಯಾಖ್ಯಾನ ಮಾಡಿದೆ. ನಂತರ ಎಲ್ಲರೂ ನಿಧಾನವಾಗಿ ನಿದ್ದೆಗೆ ಜಾರಿದೆವು.

       ಬೆಳಿಗ್ಗೆ 7.30 ರ ಸುಮಾರಿಗೆ ಮಾರ್ಗ ಮಧ್ಯದಲ್ಲಿ ಬೆಳಗಿನ ತಿಂಡಿ ಚಹಾ ಮುಗಿಸಿ ಮತ್ತೆ ಬಸ್ ಏರಿದ ನಾವು 10.30 ರ ಸುಮಾರಿಗೆ ದೇವ ಪ್ರಯಾಗ್ ತಲುಪಿದೆವು.

        ದೇವ ಪ್ರಯಾಗದಲ್ಲಿ ಹೆದ್ದಾರಿಯ ಪಕ್ಕದಲ್ಲಿ ಬಸ್ ನಿಲ್ಲಿಸಿ ಸುಮಾರು 100 -120 ಮೆಟ್ಟಿಲುಗಳನ್ನು ಇಳಿಯಬೇಕಿತ್ತು. ಮೆಟ್ಟಿಲುಗಳು ಸ್ವಲ್ಪ ಹೆಚ್ಚೇ ಎತ್ತರವಾಗಿದ್ದವು. ಹಾಗಾಗಿ ನಿಧಾನವಾಗಿ ಇಳಿಯಬೇಕಾಯಿತು. ಹಾಗೆ ಇಳಿದು ಹೋದ ನಾವು ಒಂದು ಗ್ರಾಮೀಣ ಆಡಿಟೋರಿಯಂ(ಪ್ರೇಕ್ಷಾಗೃಹ)ದಲ್ಲಿ ಸೇರಿದೆವು. ನಾವು ಇಳಿದು ಬಂದ ದಾರಿ ಈ ಪ್ರೇಕ್ಷಾಗೃಹದೊಳಗೆ ಪ್ರವೇಶಿಸಿ, ಹಾಗೆಯೇ ಮುಂದುವರೆದು, ಹೊರ ಹೋಗುತ್ತಿತ್ತು. ಈ ಹಾದಿಯ ಬಲಗಡೆ ವೇದಿಕೆ ಇತ್ತು. ಎಡಗಡೆಗೆ ಇಲ್ಲಿನ ಇಳಿಜಾರನ್ನು ಸೂಕ್ತವಾಗಿ ಬಳಸಿಕೊಂಡು ನಿರ್ಮಿಸಿದ ಆಸನ ವ್ಯವಸ್ಥೆ ಇತ್ತು. ನಡುವೆ ಇದ್ದ ಒಂದಷ್ಟು ಸಮತಟ್ಟಾದ ಸ್ಥಳದಲ್ಲಿ ಬಹುಶಃ ಹಿಂದಿನ ರಾತ್ರಿ ಊರಿನ ದನಕರುಗಳೆಲ್ಲ ಮಲಗಿದ್ದವೇನೋ! ನೆಲ ತೊಳೆದು ಸ್ವಚ್ಛಗೊಳಿಸಿದ್ದರೂ ಸಹ ಗೋಮೂತ್ರ -ಗಂಜಳದ ವಾಸನೆ ಮೂಗಿಗೆ ರಾಚುತ್ತಿತ್ತು. ಈ ಸಭಾಂಗಣದ ಗೋಡೆಯ ಮೇಲೆ ರಾಮಾಯಣದ ಚಿತ್ರಗಳನ್ನು ಬಿಡಿಸಿದ್ದರು.

       ಇಲ್ಲಿ ಎಲ್ಲರೂ ಸೇರಿದ ನಂತರ ನಮ್ಮ ಗೈಡ್ ವೆಂಕಟೇಶ್ ಪ್ರಭುರವರು ಈ ಹಂತದಲ್ಲಿ ನಿರ್ಮಿಸಲಾಗಿರುವ ರಘುನಾಥ ಮಂದಿರದ ಬಗ್ಗೆ ತಿಳಿಸಿದರು. ಬ್ರಾಹ್ಮಣನಾದ ರಾವಣನನ್ನು ವಧಿಸಿದ ರಾಮನು, ಲಕ್ಷ್ಮಣ ಸಹಿತನಾಗಿ ಈ ಸ್ಥಳಕ್ಕೆ ಬಂದು, ತಪಸ್ಸನ್ನಾಚರಿಸಿ ಪ್ರಾಯಶ್ಚಿತ್ತ ಮಾಡಿಕೊಂಡನಂತೆ. ಅದರ ನೆನಪಿಗಾಗಿ ಇಲ್ಲಿ ರಘುನಾಥ ಮಂದಿರ ನಿರ್ಮಿಸಲಾಯಿತು. ಇಲ್ಲಿರುವ ಅಲಕನಂದಾ - ಭಾಗೀರಥಿ  ಸಂಗಮದಿಂದ ಸಾಕಷ್ಟು  ಮೇಲ್ಭಾಗದಲ್ಲಿದೆ ಈ ಮಂದಿರ. ಈಗ ಇರುವ ಮಂದಿರ ಸುಮಾರು 1,250 ವರ್ಷ ಹಿಂದಿನದು ಎನ್ನುತ್ತಾರೆ. ಶ್ರೀ ಶಂಕರಾಚಾರ್ಯರು ತಮ್ಮ ಭಾರತ ಯಾತ್ರೆಯ ಕಾಲದಲ್ಲಿ ಈ ಮಂದಿರವನ್ನು ಸಹ ಸ್ಥಾಪಿಸಿದರು ಎಂಬ  ಪ್ರತೀತಿ ಇದೆ. ನಂತರ ಕಾಲಾನುಕಾಲಕ್ಕೆ ಇಲ್ಲಿಯ ಗಡವಾಲ್ ರಾಜವಂಶಸ್ಥರಿಂದ ಮಂದಿರವು ನವೀಕರಿಸಲ್ಪಟ್ಟಿದೆ. ಮಂದಿರವು ಇಕ್ಕಟ್ಟಾದ ಸ್ಥಳದಲ್ಲಿದ್ದರೂ ಸಹ ಅತ್ಯಂತ ಆಕರ್ಷಕವಾಗಿದೆ. ಒಳಗಿರುವ ಶ್ರೀ ರಘುನಾಥ ಸ್ವಾಮಿಯ ವಿಗ್ರಹ ಸುಮಾರು 15 ಅಡಿ ಎತ್ತರದ ಗ್ರಾನೆಟ್ ಶಿಲೆಯ ಭವ್ಯಮೂರ್ತಿ. ಈ ವಿಗ್ರಹದ ನೇರ ಕೆಳಗಡೆ ಸರಸ್ವತಿ ನದಿ ಹರಿಯುತ್ತಿದ್ದಾಳೆ  ಎನ್ನುತ್ತಾರೆ. ವಿಗ್ರಹದ ಎದುರುಗಡೆ ಸ್ವಲ್ಪ ತೇವಾಂಶವಿದ್ದ ಸ್ಥಳವಿದ್ದು ವರ್ಷದಲ್ಲಿ ಹಲವು ಸಾರಿ ಇಲ್ಲಿ ನೀರು ಜಿನುಗುತ್ತದೆ ಮತ್ತು ಅದು ಸರಸ್ವತಿಯೇ ಎಂಬ ನಂಬಿಕೆಯಿದೆ. ವಿಷ್ಣುವಿನ '108 ದಿವ್ಯದೇಶಂ'ಗಳ ಪೈಕಿ ಇದೂ ಒಂದೆಂದು ಹೇಳುತ್ತಾರೆ. "ತಿರುಕಂಠ ಮೇಣಂ ಕಡಿನಾಗರ್" ಅಥವಾ ರಘುನಾಥ ಎಂದು ಅವರು (ರಾಮಾನುಜಾಚಾರ್ಯ ಮತದವರು) ಹೇಳುತ್ತಾರೆ (ತಮಿಳಿನಲ್ಲಿ). ಇಲ್ಲಿಯ ಅರ್ಚಕರು ತಮಿಳುನಾಡು ಮೂಲದವರೇ ಆಗಿದ್ದಾರೆ.

       ಇಲ್ಲಿ ರಘುನಾಥ ಸ್ವಾಮಿಯ ಎದುರಿನಲ್ಲಿ ಗರುಡ ವಿಗ್ರಹವಿದೆ. ಮಂದಿರದ ಪ್ರಾಂಗಣದಲ್ಲಿಯೇ ಅನ್ನಪೂರ್ಣಾದೇವಿ, ನರಸಿಂಹದೇವರು, ಗರುಡ ಮತ್ತು ಶ್ರೀ ಶಂಕರಾಚಾರ್ಯರ  ಪುಟ್ಟ ಮಂದಿರಗಳಿವೆ. ಇಡೀ ಮಂದಿರದ ಪರಿಸರ ಅತ್ಯಂತ ಸ್ವಚ್ಛವಾಗಿದೆ. ಸುತ್ತಲಿರುವ ಪರ್ವತ ಶ್ರೇಣಿಗಳು, ಎದುರಿನಲ್ಲಿಯ ದೇವ ಪ್ರಯಾಗದ ಸಂಗಮ, ಇಲ್ಲಿನ ಪ್ರಶಾಂತ  ಪರಿಸರಗಳೆಲ್ಲ   ಧ್ಯಾನಾಸಕ್ತರಿಗೆ  ಹೇಳಿ ಮಾಡಿಸಿದಂತಿವೆ.

     ಇಲ್ಲಿನ ಪುರೋಹಿತರು ತುಂಬಾ ಉತ್ಸಾಹದಿಂದ ಮಂದಿರದ ಕುರಿತು ವಿವರಣೆ ನೀಡಿದರು. ದರ್ಶನ ಸಹ ಸಾವಧಾನವಾಗಿ ಮುಗಿಯಿತು.  ಈ ಸ್ಥಳದಲ್ಲಿ ಸ್ವತಃ ಬ್ರಹ್ಮ ದೇವರು ಬಂದು ತಪಸ್ಸು ಮಾಡಿದ್ದರಿಂದ ಈ ಸ್ಥಳದ ಪಾವಿತ್ರ್ಯತೆ ಮತ್ತಷ್ಟು ಹೆಚ್ಚಿದೆಯಂತೆ. ಭಾರದ್ವಾಜ ಮುನಿ ಸಹ ಇಲ್ಲಿಯೇ ತಪಸ್ಸು ಮಾಡಿ ಸಪ್ತರ್ಷಿ ಪಟ್ಟವನ್ನು ಪಡೆದರಂತೆ.

      ಮಂದಿರದ ಹೆಬ್ಬಾಗಿಲಿನಿಂದ ಕೆಳಗಡೆ ಇಳಿಯುವ ನೂರಾರು ಮೆಟ್ಟಿಲುಗಳನ್ನು ಇಳಿದು ನಾವು ತಲುಪಿದ್ದು  ಭಾಗೀರಥಿ ಮತ್ತು ಅಲಕನಂದಾ ನದಿಗಳ ಸಂಗಮವಾದ ದೇವಪ್ರಯಾಗವನ್ನು. ಇಲ್ಲಿ ಸರಸ್ವತಿ ನದಿ ಸಹ  ರಘುನಾಥ ಸ್ವಾಮಿಯ ವಿಗ್ರಹದ ತಳಭಾಗದಿಂದ ಗುಪ್ತಗಾಮಿನಿಯಾಗಿ ಹರಿದು ಬಂದು ಸಂಗಮವನ್ನು ಸೇರುತ್ತಾಳೆ ಎನ್ನುತ್ತಾರೆ. ಆದ್ದರಿಂದ ಈ ದೇವ ಪ್ರಯಾಗ ಸಹ ತ್ರಿವೇಣಿ ಸಂಗಮವೇ.

       ಹಿಂದೆ ದೇವಶರ್ಮನೆಂಬ ಋಷಿ ಇಲ್ಲಿ ಬಹುಕಾಲ ತಪಸ್ಸನ್ನಾಚರಿಸಿದ್ದ ಕಾರಣದಿಂದ ಈ ಸ್ಥಳಕ್ಕೆ ದೇವಪ್ರಯಾಗ ಎಂದು ಹೆಸರು ಬಂದಿದೆಯಂತೆ.

       ಇಲ್ಲಿ ಸಂಗಮ ಸ್ಥಾನದಲ್ಲಿ ನಿಂತಾಗ ನಮ್ಮ ಬಲಗಡೆಯಿಂದ ಅತ್ಯಂತ ರಭಸವಾಗಿ ಸ್ವಚ್ಛ ನೀರನ್ನು ಹೊತ್ತು ಹರಿದು ಬರುತ್ತಿದ್ದವಳೇ ಭಾಗೀರಥಿ. ಅವಳ ವೇಗ ಅತ್ಯಂತ ಜೋರಾಗಿದೆ. ಇಲ್ಲಿ ಎಡಗಡೆಯಿಂದ ಅಲಕನಂದಾ ನದಿ ಹರಿದು ಬರುತ್ತಾಳೆ. ಅವಳೂ ಸಹ ವೇಗಿಯೇ! ಆದರೆ ಭಾಗೀರಥಿಯಷ್ಟಲ್ಲ. ಕಳೆದೊಂದು ವಾರದಿಂದ ಈ ಭಾಗದಲ್ಲಿ ಮಳೆ ಆಗುತ್ತಿದ್ದ ಕಾರಣ ಅಲಕನಂದಾ ನದಿಯ ನೀರು ಸ್ವಲ್ಪ ರಾಡಿಯಾಗಿ ಕಾಣಿಸುತ್ತಿತ್ತು. ಈ ಎರಡು ನದಿಗಳು ಸಂಗಮಿಸಿದ ನಂತರ ಅವಳೇ ಗಂಗೆ - ಭಾರತೀಯರ ಆರಾಧ್ಯ ದೇವತೆ ಗಂಗಾಮಾತೆ. ಮುಂದೆ ಗಂಗೆಯು ಋಷಿಕೇಶ, ಹರಿದ್ವಾರಗಳಲ್ಲಿ ಹರಿದು ಉತ್ತರ ಭಾರತದ ಬಯಲು ಭೂಮಿಗೆ ನೀರನ್ನು ಉಣಿಸಿ, ಇಡೀ ದೇಶವನ್ನೇ ಸುಭಿಕ್ಷಗೊಳಿಸಿದ್ದಾಳೆ. ಈ ದೇಶದ ಅಸಂಖ್ಯ ಸನಾತನಿ ಶ್ರದ್ದಾಳುಗಳಿಂದ ಪೂಜಿಸಲ್ಪಟ್ಟು, ತನ್ನ ಪಾತ್ರದುದ್ದಕ್ಕೂ ತೀರ್ಥಕ್ಷೇತ್ರಗಳ ಸರಮಾಲೆಯನ್ನೇ ಸೃಷ್ಟಿಸಿದ್ದಾಳೆ. ಪ್ರಯಾಗರಾಜ್, ಕಾಶಿ, ಗಯಾ ಮುಂತಾದ ಕ್ಷೇತ್ರಗಳಿಗೆ ಇವಳಿಂದಾಗಿಯೇ ಕೀರ್ತಿ ಬಂದಿದೆ.

       ಇಲ್ಲಿ ಸಂಗಮ ಸ್ಥಾನದಲ್ಲಿ ಭಕ್ತರಿಗೆ ತೀರ್ಥ ಸ್ನಾನ ಮಾಡಲು ತಡೆಬೇಲಿ ನಿರ್ಮಿಸಿ, ಮುಳುಗುಹಾಕಲು ಸರಪಳಿಗಳ ಆಸರೆ ನೀಡಿದ್ದಾರೆ. ನಾವು ನದೀ ಸಂಗಮದಲ್ಲಿ ಇಳಿದು  ತೀರ್ಥಪ್ರೋಕ್ಷಣೆ ಮಾಡಿಕೊಂಡೆವು. ಅರ್ಘ್ಯ ನೀಡಿದೆವು. ನಮ್ಮಲ್ಲೇ ಕೆಲವರು, ಸ್ನಾನದ ತಯಾರಿಯಲ್ಲಿ ಬಂದವರು, ಇಲ್ಲಿ ಸ್ನಾನ ಮಾಡಿದರು. ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ಸೂಕ್ತ ವ್ಯವಸ್ಥೆ ಇದೆ. ದಂಡೆಯ ಮೇಲೆ ಕಟ್ಟಿಸಿರುವ ಕಟ್ಟಡದಲ್ಲಿ ಭಕ್ತಾದಿಗಳಿಂದ ಸಂಕಲ್ಪ ಮಾಡಿಸಿ ನದಿಯ ಪೂಜೆ ಮಾಡಿಸುವ ಬ್ರಾಹ್ಮಣರ ದಂಡೇ ಇದೆ. ಎಲ್ಲವೂ ಅಚ್ಚುಕಟ್ಟಾಗಿಯೇ ಕಾಣಿಸಿದವು. ಭಕ್ತರ ಸಂದಣಿ ಇತ್ತಾದರೂ ತೀರ ಅಸಾಧ್ಯವೆನಿಸುವಷ್ಟು ಇರಲಿಲ್ಲ. ನನ್ನ ಹತ್ತಿರ ರುದ್ರಾಕ್ಷಿ ಸರ ಮಾರಲು ಬಂದ ಒಬ್ಬರಿಗೆ "ನನಗೆ ಸರ ಬೇಡ" ಎಂದು, "ನೀವು ಇಟ್ಟುಕೊಳ್ಳಿ" ಎಂದು ಐವತ್ತು ರೂಪಾಯಿ ಕೊಡಲು ಹೋದೆ. "ಬೇಡ ಸ್ವಾಮಿ, ದುಡಿದು ತಿನ್ನುವವರು ನಾವು. ಭಿಕ್ಷೆ ಬೇಡ" ಎಂದು ಸ್ವಾಭಿಮಾನ ತೋರಿಸಿದರು. ತುಂಬಾ ಮೆಚ್ಚಿಗೆಯಾಯಿತು.

     ಇಲ್ಲಿ ಎಲ್ಲರೂ ಸಾಕಷ್ಟು ಫೋಟೋ ತೆಗೆಸಿಕೊಂಡೆವು. ಅಷ್ಟರಲ್ಲಾಗಲೇ 12:30 ಆಗಿತ್ತು- ಅಂದರೆ ಹೊರಡುವ ಸಮಯ. ನಾವು ಬಂದ ದಾರಿಯಲ್ಲಿ ಹಿಂದಿರುಗದೇ, ಭಾಗೀರಥಿ ನದಿಗೆ ಅಡ್ಡವಾಗಿ ಕಟ್ಟಿದ ತೂಗು ಸೇತುವೆಯನ್ನು ದಾಟಿ, ಅದರ ಆಚೆಯಿದ್ದ ಅಂಗಡಿ ಸಾಲುಗಳ ನಡುವೆ ಸಾಗುತ್ತಾ, ಸ್ವಲ್ಪ ಮೇಲ್ಭಾಗದಲ್ಲಿದ್ದ ಹೆದ್ದಾರಿ ತಲುಪಿದೆವು. ಸಂಗಮವನ್ನು ಸುತ್ತು ಹಾಕಿ ನಮ್ಮ ಬಸ್ಸುಗಳು ಅದಾಗಲೇ ಈ ಸ್ಥಳವನ್ನು ತಲುಪಿದ್ದವು. ಈ ದಿನ ತುಂಬಾ ಜೋರಾದ ಬಿಸಿಲು ಇದ್ದ ಕಾರಣ ಎಲ್ಲರೂ ಬಸವಳಿದಿದ್ದೆವು. ಆದ್ದರಿಂದ ಅಲ್ಲಿ ಮಾರುತ್ತಿದ್ದ 'ಜಲ್ ಜೀರಾ' ಇತ್ಯಾದಿ ತಂಪು ಪಾನೀಯಗಳನ್ನು ಸೇವಿಸಿ ಬಸ್ ಏರಿದೆವು. ಒಂದರ್ಧ ಗಂಟೆಯಲ್ಲಿ ಬಸ್ಸು ಮಧ್ಯಾಹ್ನದ ಊಟಕ್ಕೆಂದು ನಿಂತಿತು.

       ನಮ್ಮ ಊಟದ ಟೀಮ್ ನಿತ್ಯದ ಅಡುಗೆಯ ಜೊತೆ ಈ ದಿನ ವಿಶೇಷವಾಗಿ ಬಿಸಿಬೇಳೆ ಬಾತ್ ಮತ್ತು ಜಾಮೂನ್ ತಯಾರಿಸಿದ್ದರು. ಇಂದು ನಮ್ಮ ಸಹಯಾತ್ರಿಗಳಾದ ಸುಮಾ - ಪ್ರವೀಣ್ ದಂಪತಿ ಮತ್ತು ಮಕ್ಕಳು ಹಾಗೂ  ಇನ್ನೊಬ್ಬ ಸಹಯಾತ್ರಿ ಸಂತೋಷ್ ಎಲ್ಲರಿಗೂ ಬಡಿಸಿದರು. ಎಲ್ಲರಲ್ಲೂ ತೀರ್ಥಯಾತ್ರೆ ಸುಸೂತ್ರವಾಗಿ ಸಂಪನ್ನವಾದ ಕುರಿತು ನಿರಾಳತೆ ಇತ್ತು. ಊಟ ಎಂದಿನಂತೆ ಉತ್ತಮವಾಗಿತ್ತು. ನಮ್ಮ ಯಾತ್ರೆಯ ಅಡುಗೆ ಟೀಂನವರು ಬೆಂಗಳೂರಿನವರು. ಅವರು ಯಾತ್ರೆಯ ಉದ್ದಕ್ಕೂ ಬೇರೆ ಬೇರೆ ದಿನಗಳಲ್ಲಿ ವಿಭಿನ್ನವಾದ ವ್ಯಂಜನಗಳನ್ನು ತಯಾರಿಸಿ, ಯಾತ್ರಿಗಳಿಗೆ ಊಟದಲ್ಲಿ ಏಕತಾನತೆ ಬರದಂತೆ ನಿಗಾ ವಹಿಸಿದ್ದರು. ಹಾಗಾಗಿ ಪ್ರತಿ ಊಟಕ್ಕೂ ಮುಂಚೆ "ಈ ದಿನ ಏನಿರಬಹುದು" ಎಂಬ ಕುತೂಹಲ ನಮ್ಮಲ್ಲಿರುತ್ತಿತ್ತು. ಇದು ನಿಜಕ್ಕೂ ತುಂಬಾ ಸವಾಲಿನ ಕೆಲಸ. ಅದನ್ನು ಅವರು ಯಶಸ್ವಿಯಾಗಿ ನಿರ್ವಹಿಸಿ ತೋರಿಸಿದ್ದಾರೆ. ಯಾತ್ರೆಯುದ್ದಕ್ಕೂ ಯಾರಿಗೂ ಸಹ ಆರೋಗ್ಯದ ಸಮಸ್ಯೆ ಕಾಡಲಿಲ್ಲ. ಅದರ ಶ್ರೇಯಸ್ಸು ಈ ಅಡಿಗೆ ಟೀಮ್ ನವರಿಗೆ ಸಲ್ಲಬೇಕು.

       ಊಟದ ನಂತರ ನಮ್ಮ ಪಯಣ ಗಂಗಾ ನದಿಗುಂಟ ಸಾಗಿತು. ದಾರಿಯಲ್ಲಿ ಋಷಿಕೇಶದಲ್ಲಿ ನಮ್ಮ ಬಸ್ಸಿನಲ್ಲಿಯೇ ಇದ್ದ, ನಮ್ಮ ಸಹಯಾತ್ರಿಗಳಾಗಿದ್ದ ಅತ್ಯುತ್ತಮ, ಉತ್ಸಾಹೀ, ದೈವಿಕ ದಂಪತಿಗಳಾದ ಭಾರದ್ವಾಜ ಮತ್ತು ಅನುರಾಧ ಅವರು (ತಮ್ಮ ವೈಯಕ್ತಿಕ ಕಾರಣಗಳಿಗಾಗಿ) ಇಳಿದು ಡೆಹ್ರಾಡೂನ್ ಮೂಲಕ ಬರುವುದಾಗಿ ಹೇಳಿ ಹೋದರು. ಯಾತ್ರೆಯುದ್ದಕ್ಕೂ ಅವರ ಉತ್ಸಾಹ ಮತ್ತು ತೊಡಗಿಸಿಕೊಳ್ಳುವಿಕೆ ಚೇತೋಹಾರಿಯಾಗಿತ್ತು.

      ಋಷಿಕೇಶದ ದಾರಿಯಲ್ಲಿ ಉದ್ದಕ್ಕೂ ನದಿಯಲ್ಲಿ ರಾಫ್ಟಿಂಗ್ ಮಾಡುವ ಉತ್ಸಾಹಿ ಯುವಕ-ಯುವತಿಯರ ಕಾರುಗಳು ತೆರೆಪಿಲ್ಲದೆ ಸಾಗುತ್ತಿದ್ದವು. ಕೆಲವು ದೊಡ್ಡ ಪಿಕಪ್ ವಾಹನಗಳ ಮೇಲೆ ರಾಫ್ಟ್ ಅನ್ನು ಏರಿಸಿಕೊಂಡು ಬರುತ್ತಿದ್ದ ವಾಹನಗಳಿದ್ದವು. ಇಲ್ಲಿ ಗಂಗಾ ನದಿಯಲ್ಲಿ ರಾಫ್ಟಿಂಗ್ ಏರ್ಪಡಿಸುವ ಟ್ರಾವೆಲ್ ಏಜೆನ್ಸಿಗಳಿವೆ. ಪ್ರತೀ ರಾಫ್ಟ್ ನಲ್ಲೂ ಪರಿಣಿತರೊಬ್ಬರಿರುತ್ತಾರೆ. ಅವರ ಮಾರ್ಗದರ್ಶನದಲ್ಲಿ, ವೇಗವಾಗಿ ಹರಿಯುವ ಗಂಗಾ ನದಿಯಲ್ಲಿ ರಾಫ್ಟಿಂಗ್ ಮಾಡುವುದು ಅತ್ಯಂತ ರೋಮಾಂಚಕ ಅನುಭವ. ಇದಕ್ಕಾಗಿಯೇ ಸಹಸ್ರಾರು ಸಂಖ್ಯೆಯಲ್ಲಿ ಯುವಜನರು ಬರುತ್ತಾರೆ. ಅವರಿಗಿದು ತೀರ್ಥಯಾತ್ರೆಯಲ್ಲ, ಸಾಹಸಯಾತ್ರೆ!!.

ಇಂದು ವಾರದ ಮೊದಲ ದಿನವಾದರೂ ಸಹ ನಮ್ಮ ವಾಹನಕ್ಕೆ ಸರಾಗವಾಗಿ ಸಾಗಲು ಆಗದಷ್ಟು ವಾಹನ ದಟ್ಟಣೆ ಇತ್ತು. ಇನ್ನು ವಾರಾಂತ್ಯದಲ್ಲಿ ಬಂದರೆ ಇಲ್ಲಿ ಇರಬಹುದಾದ ದಟ್ಟಣೆ ಕೇವಲ ಊಹಿಸಿಕೊಳ್ಳಬೇಕು, ಅಷ್ಟೇ!

       ಚಿಕ್ಕ ಪುಟ್ಟ ಟ್ರಾಫಿಕ್ ಜಾಮ್ ಗಳನ್ನು ನಿವಾರಿಸಿಕೊಳ್ಳುತ್ತಾ ಋಷಿಕೇಶವನ್ನು ದಾಟಿ ಮುಂದೆ ಸಾಗಿದೆವು. ಸಾಯಂಕಾಲ 4-30 ರ ಸುಮಾರಿಗೆ ಹರಿದ್ವಾರ ತಲುಪಿದೆವು. ಅಲ್ಲಿ ಪಟ್ಟಣದ ನಡುವೆ ಸಾಗಿ, ರೈಲ್ವೆ ಸ್ಟೇಷನ್ ಗೆ ಹೊಂದಿಕೊಂಡಂತೆ ಇದ್ದ ಹೋಟೆಲ್ ಲಿ ರಾಯ್ ನಲ್ಲಿ(Le Roi) ನಮ್ಮ ವಾಸ್ತವ್ಯಕ್ಕೆ ಏರ್ಪಾಡು ಮಾಡಿದ್ದರು. ಹೋಟೆಲ್ ತುಂಬಾ ಪ್ರಶಸ್ತವಾಗಿತ್ತು. ನೋಡಿದರೆ ಅದು ರೈಲ್ವೆ ಆಸ್ತಿ ಎನಿಸುವಂತಿತ್ತು. ನಾನು ಅಲ್ಲಿಯ ಮ್ಯಾನೇಜರ್ ನನ್ನು ಈ ಕುರಿತು ಪ್ರಶ್ನಿಸಿದೆ. ಅವನು, 'ಈ ಜಾಗ ರೈಲ್ವೆಯದು. ಆದರೆ ದೀರ್ಘ ಕಾಲದ ಲೀಸ್ ಮೇಲೆ ಪಡೆದು, ಹೋಟೆಲ್ ನಿರ್ಮಿಸಿ ನಡೆಸಲಾಗುತ್ತಿದೆ' ಎಂದರು.

       "ತೀರ್ಥಯಾತ್ರಾ ಟೂರ್ಸ್ ಅಂಡ್ ಟ್ರಾವೆಲ್ಸ್" ನವರು ಕರಾರು ಮಾಡಿಕೊಂಡ ಚಾರ್ ಧಾಮ ಯಾತ್ರೆಯ ವೀಕ್ಷಣೆಗಳೆಲ್ಲ ಈಗ ಮುಗಿದಂತಾಯಿತು. ವೆಂಕಟೇಶ್ ಪ್ರಭುರವರು, ಸಾಯಂಕಾಲ ಹರಿದ್ವಾರದ ಪೇಟೆಯಲ್ಲಿ ಸುತ್ತಾಡಿ ಇಲ್ಲಿಯ ಪ್ರಸಿದ್ಧ ಸ್ಥಳೀಯ ತಿನಿಸುಗಳನ್ನು ಹಾಗೂ ಮಿಠಾಯಿಗಳನ್ನು ಸವಿಯಬಯಸುವವರಿಗೆ ಆ ಎಲ್ಲ ಮಾಹಿತಿಗಳನ್ನು ಅದಾಗಲೇ ವಾಟ್ಸಪ್ ಗ್ರೂಪಿನಲ್ಲಿ ಹಂಚಿಕೊಂಡಿದ್ದರು. ನಾವು ಸಹ ಅತ್ಯಂತ ನಿರಾಳವಾಗಿ ರೂಮಿನಲ್ಲಿ ಲಗೇಜ್ ಇಟ್ಟು ಹರಿದ್ವಾರದ ರಸ್ತೆಗಳಲ್ಲಿ ಅಡ್ಡಾಡಿದೆವು. ಅಲ್ಲಿಯೇ ಚಹಾ ಸೇವಿಸಿದೆವು. ಆದರೆ ಅತಿಯಾದ ಜನದಟ್ಟಣೆ ಹಾಗೂ ಅಸಮರ್ಪಕ ಚರಂಡಿ ವ್ಯವಸ್ಥೆಯ ಕಾರಣ ಎಲ್ಲಾ ಕಡೆ ಅನಾರೋಗ್ಯಕರ ಕೊಳಕೇ ರಾಚುತ್ತಿತ್ತು. ಆದ್ದರಿಂದ ರಸ್ತೆಯ ಪಕ್ಕದ ಚಾಟ್ಸ್ ಸೇವಿಸಲು ಧೈರ್ಯ ಸಾಕಾಗಲಿಲ್ಲ.

       ನಾಳೆ ಮುಂಜಾನೆ ಋಷಿಕೇಶದಲ್ಲಿರುವ ಪ್ರೇಕ್ಷಣೀಯ ಪುಣ್ಯಧಾಮಗಳಾದ ಮಾನಸಾದೇವಿ ಮಂದಿರ, ಚಂಡಿದೇವಿ ಮಂದಿರ, ಬಿಲ್ಕೇಶ್ವರ ಮಹಾದೇವ ಮಂದಿರ, ಸುರೇಶ್ವರಿ ದೇವಿ ಮಂದಿರ, ನರಸಿಂಹ ಮಂದಿರ, ಹರ್ ಕೀ ಪೌರಿ ಮತ್ತು ಖನಕಾಲ್ ಗಳನ್ನು ಆಸಕ್ತ ಯಾತ್ರಿಕರು ತಮ್ಮ ಸ್ವಂತ ವ್ಯವಸ್ಥೆಯ ಮೂಲಕ ನೋಡಬಹುದು ಎಂದು ವೆಂಕಟೇಶ್ ಪ್ರಭು ತಿಳಿಸಿದರು. ನಮ್ಮ ಯಾತ್ರಿಗಳ ಪೈಕಿ ಕೆಲವರು ಅದಕ್ಕಾಗಿ ವ್ಯವಸ್ಥೆ ಸಹ ಮಾಡಿಕೊಂಡಿದ್ದರು. ಆದರೆ ನಾವು 9 ಜನವೂ ಅದಕ್ಕೆ ಒಲವು ತೋರಿಸಲಿಲ್ಲ. (ನಾನು ಈ ಹಿಂದೆ ಬಂದಾಗ, ಈ ಋಷಿಕೇಶ ಇನ್ನೂ ಚಿಕ್ಕ ಪಟ್ಟಣಕ್ಕಿಂತ ಸಣ್ಣದಿದ್ದಾಗ ಅವನ್ನೆಲ್ಲ ನೋಡಿದ್ದೇನೆ. ಆದರೆ ನಿಖರವಾದ ವಿವರಣಾತ್ಮಕ ನೆನಪಿಲ್ಲ.)

       ನಾವು ತಿರುಗಿ ಎಂಟು ಗಂಟೆಯ ಸುಮಾರಿಗೆ ಹೋಟೆಲಿಗೆ ಬಂದು ಇಲ್ಲಿಯೇ ಊಟ ಮಾಡಿದೆವು. ಹೊರಗಡೆ ಬೀದಿ ಬದಿಯ ತಿನಿಸು ಸವಿದ ಕೆಲವರು ಊಟ ಮಾಡಲಿಲ್ಲ. ಯಾತ್ರೆ ಸಂಪನ್ನವಾದ ಸಂತಸದಲ್ಲಿ ನೆನಪುಗಳನ್ನು ಚರ್ಚಿಸುತ್ತಾ ಸ್ವಲ್ಪ ಸಮಯ ಕಳೆದೆವು. ನಂತರ 11-00 ಗಂಟೆ ಸುಮಾರಿಗೆ ನಿದ್ರೆಗೆ ಜಾರಿದೆವು.

                          ರಘುನಾಥ ಮಂದಿರದ ಪಾರ್ಶ್ವನೋಟ                               

ದೇವಪ್ರಯಾಗ -ನಮ್ಮ ಹಿಂದೆ ಭಾಗೀರಥಿ (ನೀಲಿ),ಎಡಗಡೆ ಅಲಕನಂದಾ (ಬೂದಿ ಬಣ್ಣ)

ವೆಂಕಟೇಶ್ ದಾಸ್ ಮತ್ತು ಖುಷ್ ಜೊತೆಯಲ್ಲಿ 



                                                                                                      (ಸಶೇಷ......)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ