ಚಾರ್ ಧಾಮ ಯಾತ್ರೆ -ಭಾಗ 13
ಮಾನಾ ಮತ್ತು ಪಾಂಡುಕೀಶ್ವರ
ದಿನಾಂಕ:-19/05/2024
ಸೂರ್ಯೋದಯವನ್ನು ಸವಿಯುವ ಆಸೆಯಿಂದ ಬೇಗನೆ ಎದ್ದೆವಾದರೂ ನೀಲಕಂಠ ಪರ್ವತಾಗ್ರವು ಮೋಡಗಳಿಂದ ಮುಚ್ಚಿದ್ದು ಮೋಡಗಳು ಸರಿಯಲೇ ಇಲ್ಲ. ಬೆಳಿಗ್ಗೆ 5-00 ರಿಂದ 6-00 ಗಂಟೆಯವರೆಗೆ ಕಾದರೂ ಏನೂ ಬದಲಾಗಲಿಲ್ಲ. ನಿರಾಶರಾಗಿ ಅಲ್ಲೇ ಇದ್ದ ಚಾದಂಗಡಿಯಲ್ಲಿ ಚಹಾ ಗುಟುಕರಿಸಿ ರೂಮಿನ ಕಡೆ ಸಾಗಿದೆವು. ತಕ್ಷಣ ಸ್ನಾನಾದಿಗಳನ್ನು ಮುಗಿಸಿ ಬೆಳಗಿನ ತಿಂಡಿ ತಿನ್ನಲು ಬಂದೆವು. ನಿನ್ನೆಯೇ ಬದರೀನಾರಾಯಣನ ದರ್ಶನ ಮುಗಿಸಿದ್ದು ಒಳ್ಳೆಯದೇ ಆಯಿತು. ಈ ದಿನ ಏಕಾದಶಿ ಇದ್ದ ಪ್ರಯುಕ್ತ ಜನಜಂಗುಳಿ ತುಂಬಾ ಇತ್ತು. ವಿಷ್ಣುಗಂಗಾ ನದಿಯ ದಂಡೆಯಗುಂಟ ಸರತಿಯ ಸಾಲು ಅದಾಗಲೇ 2 - 3 ಕಿಲೋಮೀಟರ ದೂರ ಸಾಗಿತ್ತು. ನಾವಿಬ್ಬರೂ ಇಲ್ಲಿನ ಮಾರ್ಕೆಟ್ಟಿಗೆ ಹೋಗಿ ಅಡ್ಡಾಡಿದೆವು. ಮೊಮ್ಮಗಳು ವೇದಾಳ ಸಲುವಾಗಿ ಉಣ್ಣೆಯ ಫ್ರಾಕ್ ಹಾಗೂ ಸ್ವೆಟರ್ ತೆಗೆದುಕೊಂಡೆವು. ಇಡೀ ಯಾತ್ರೆಯಲ್ಲಿ ನಮ್ಮ ಖರೀದಿ (ಶಾಪಿಂಗ್) ಎಂದರೆ ಇದು ಮಾತ್ರ.
ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನವೇ ಬ್ರಹ್ಮಕಪಾಲದಲ್ಲಿ ಶ್ರಾದ್ಧ ವಿಧಿಗಳನ್ನು ನೆರವೇರಿಸಲು ಕೆಲವರು ಹೋಗಿದ್ದರು. ನಮ್ಮ ಆದಿ ಸುಬ್ರಹ್ಮಣ್ಯ ಮತ್ತು ರವಿಕುಮಾರ್ ಸಹ ಹೋಗಿದ್ದರು. ಅವರೆಲ್ಲ ಬರುವಷ್ಟರಲ್ಲಿ ಬೆಳಿಗ್ಗೆ 10.30 ಆಯಿತು. ಅವರೆಲ್ಲ ಬೆಳಗಿನ ತಿಂಡಿ ತಿಂದ ನಂತರ 11-00 ಗಂಟೆಗೆ ನಮ್ಮ ಬಸ್ ಹೊರಟಿತು. ಮಾನಾ ಗ್ರಾಮವನ್ನು ದರ್ಶಿಸಿ ನಾವು ತಿರುಗಿ ಹೋಗುವುದಿತ್ತು. ಆದರೆ, ಬದರಿಯಿಂದ ಮಾನಾಗೆ ಕೇವಲ ಮೂರು ನಾಲ್ಕು ಕಿಲೋಮೀಟರ್ ದೂರ ಮಾತ್ರವೇ ಇದ್ದರೂ, ವಾಹನಗಳ ಸಂಖ್ಯೆ ತೀರಾ ಹೆಚ್ಚಿದ್ದುದರಿಂದ ಅಲ್ಲಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಅದನ್ನು ಗಮನಿಸಿ ವೆಂಕಟೇಶ್ ಪ್ರಭು ಅವರು ಮಾನಾ ಭೆಟ್ಟಿಯನ್ನು ರದ್ದು ಮಾಡಿ, ವಾಪಸ್ ಹೋಗುವುದಾಗಿ ನಿರ್ಣಯಿಸಿ, ಅದರಂತೆ ಅಡಿಗೆ ವ್ಯಾನ್ ಅನ್ನು ಕಳಿಸಿದ್ದರು. ಆ ವ್ಯಾನ್ ಸಹ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಬಿದ್ದಿತ್ತು. ಮಾನಾ ಭೇಟಿಯನ್ನು ರದ್ದು ಮಾಡಿದ್ದು ನಮ್ಮ ಯಾತ್ರಿಗಳನ್ನು ಕೆರಳಿಸಿತು. ಈಗಾಗಲೇ ಯಮುನೋತ್ರಿ - ಗಂಗೋತ್ರಿ ಭೆಟ್ಟಿ ರದ್ದಾಗಿದ್ದು, ಈ ಮಾನಾ ಭೇಟಿಯನ್ನು, ಎಷ್ಟು ಹೊತ್ತು ಕಾದರೂ ಸರಿ, ರದ್ದುಗೊಳಿಸಲೇಬಾರದೆಂದು ವೆಂಕಟೇಶ್ ಪ್ರಭು ಅವರ ಮೇಲೆ ಒತ್ತಡ ತಂದರು. ಅವರು ಮುಂದಿನ ಪ್ರಯಾಣವನ್ನು ಗಮನದಲ್ಲಿರಿಸಿಕೊಂಡಿದ್ದ ಕಾರಣ ಈ ಒತ್ತಡದಿಂದ ತುಂಬಾ ಕಸಿವಿಸಿಗೊಂಡರು. ಮುನಿಸಿಕೊಂಡರು. ಆದರೆ ಅಂತಿಮವಾಗಿ ಒಪ್ಪಿಕೊಂಡರು. ಬಸ್ಸನ್ನು ಅಲ್ಲೇ ತಿರುಗಿಸಿ ಮತ್ತೆ ಮಾನಾ ಕಡೆ ಹೊರಟೆವು. ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಬಿದ್ದಿದ್ದ ಊಟದ ವ್ಯಾನ್ ಗೆ ಸಹ ಮಾನಾ ಕಡೆ ತಿರುಗಿ ಬರಲು ಸೂಚಿಸಿದರು.
ರಸ್ತೆಯಲ್ಲಿ ತುಂಬಾ ರಶ್ ಇತ್ತು. ಆದರೂ ದೂರ ಕಡಿಮೆಯಿದ್ದ ಕಾರಣ 12-00 ಗಂಟೆಯ ಸುಮಾರಿಗೆ ಮಾನಾ ಗ್ರಾಮದ ಸ್ವಾಗತ ಕಮಾನಿನ ಎದುರು ವಾಹನವನ್ನು ನಿಲ್ಲಿಸಲಾಯಿತು. ಇಲ್ಲಿಂದ ಮುಂದೆ ಕಾಲ್ನಡಿಗೆಯ ಪ್ರಯಾಣ.
ನನಗೆ ಈ ದಿನ ಜ್ವರದ ಲಕ್ಷಣ - ಚಳಿ, ತಲೆನೋವು - ಇದ್ದ ಕಾರಣ ನಾನು ನಡೆದುಕೊಂಡು ಮಾನಾ ಕಡೆ ಹೋಗಲು ಹಿಂದೇಟು ಹಾಕಿ ಬಸ್ಸಿನಲ್ಲೇ ಉಳಿದೆನು. ನನ್ನ ಪತ್ನಿ ಸಹ ನನ್ನ ಜೊತೆ ಉಳಿದಳು. ಮತ್ತೂ ಕೆಲವರು ಸಹ ಉಳಿದರು.
ಮಾನಾ ಗ್ರಾಮ ಭಾರತ ಟಿಬೆಟ್ ಗಡಿಯ ಮೊದಲ ಗ್ರಾಮ ಅಥವಾ ಭಾರತ ದೇಶದ ಕೊನೆಯ ಗ್ರಾಮ. ಈ ಊರಿನಲ್ಲಿ ವ್ಯಾಸ ಗುಹೆ, ಗಣೇಶ ಗುಹೆಗಳಿವೆ. ಇಲ್ಲಿಯೇ ಮಹರ್ಷಿ ವ್ಯಾಸರು ಮಹಾಭಾರತವನ್ನು ಹೇಳುತ್ತಾ ಹೋದಂತೆ ಗಣಪತಿಯು ಬರೆದುಕೊಳ್ಳುತ್ತಿದ್ದನಂತೆ. ಹಾಗಾಗಿ ಈ ಊರಿಗೆ ಪೌರಾಣಿಕ ಮಹತ್ವವೂ ಇದೆ. ಪ್ರಾಚೀನ ಕಾಲದಲ್ಲಿ ಇದನ್ನು "ವ್ಯಾಸಪುರಿ" ಎನ್ನುತ್ತಿದ್ದರಂತೆ. ಇನ್ನೂ ಕೆಲವು ಐತಿಹ್ಯಗಳ ಪ್ರಕಾರ ಇದು ಕುಬೇರನ ಅಲಕಾಪುರಿ ಪಟ್ಟಣವಾಗಿತ್ತಂತೆ. (ಅಲಕನಂದಾ ನದಿಯ ಮೂಲ ಸ್ಥಾನದಲ್ಲಿ) ಇಲ್ಲಿ ಸರಸ್ವತೀ ನದಿಯ ಉಗಮವನ್ನು ನೋಡಬಹುದು. ಉಗಮ ಸ್ಥಾನದಿಂದ ಸುಮಾರು ಒಂದು ಕಿಲೋಮೀಟರ್ ದೂರ ಪ್ರಕಟವಾಗಿ ಹರಿಯುವ ಸರಸ್ವತೀ ನದಿ ನಂತರ ಭೂತಳದಲ್ಲಿ ಹರಿಯುತ್ತದೆ. ಇಲ್ಲಿ ಸರಸ್ವತೀ ನದಿಗೆ ಅಡ್ಡಲಾಗಿದ್ದ ಬೃಹತ್ ಬಂಡೆಯನ್ನು "ಭೀಮ್ ಪೂಲ್" ಎನ್ನುತ್ತಾರೆ. ಮಾನಾ ಗ್ರಾಮದ ಮಾರುಕಟ್ಟೆಯಲ್ಲಿ ಉಣ್ಣೆಯ ಬಟ್ಟೆಗಳು ವ್ಯಾಪಕವಾಗಿ ಮಾರಾಟವಾಗುತ್ತವೆ.
ಮಾನಾ ಗ್ರಾಮವನ್ನು ನೋಡಲು ಹೋದವರು ತುಂಬಾ ಖುಷಿಯಿಂದ ವಾಪಸ್ ಬಂದರು. ಅಷ್ಟರಲ್ಲಿ ಊಟದ ವ್ಯಾನ್ ಕೂಡ ಬಂದಿತ್ತು. ಅಲ್ಲಿಯೇ ಊಟ ಮುಗಿಸಿ ವಾಪಸ್ ಹೊರಟೆವು.
ವಾಪಸ್ ಬರುವಾಗ, ಬದರಿಯಿಂದ ಸ್ವಲ್ಪವೇ ದೂರದಲ್ಲಿ, ರಸ್ತೆಯ ಎಡಗಡೆಗೆ ಒಂದು ಗುಹಾ ದೇವಾಲಯವಿದೆ. ಇದನ್ನು 'ಏಕಾದಶಿ ಗುಹೆ' ಎನ್ನುತ್ತಾರೆ. ಭಗವಾನ್ ವಿಷ್ಣುವು ಎಲ್ಲಾ ದೇವತೆಗಳಿಗೂ ಕಂಟಕಪ್ರಾಯನಾಗಿದ್ದ "ಮುರ" ಎಂಬ ರಾಕ್ಷಸನ ಜೊತೆ ಹಲವು ವರ್ಷಗಳ ಕಾಲ ನಿರಂತರವಾಗಿ ಯುದ್ಧ ಮಾಡಿ, ದಣಿದು, ಸ್ವಲ್ಪ ವಿಶ್ರಮಿಸಿಕೊಳ್ಳಲು ಈ ಗುಹೆಯಲ್ಲಿ ಮಲಗಿದ್ದನಂತೆ. ಇದೇ ಸಮಯವನ್ನು ಸಾಧಿಸಿ ಅವನನ್ನು ಮುಗಿಸಲು 'ಮುರ' ಬಂದನಂತೆ. ಆಗ ವಿಷ್ಣುವಿನ ದೇಹದಿಂದ ಅಪೂರ್ವ ಚೆಲುವೆಯೊಬ್ಬಳು ಉದ್ಭವಿಸಿ ಮುರನೊಂದಿಗೆ ಹೋರಾಡಿದಳಂತೆ ಮತ್ತು ಅವನ ಎಲ್ಲಾ ಶಸ್ತ್ರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸಿ ಅವನನ್ನು ವಧಿಸಿದಳಂತೆ. ನಿದ್ದೆ ತಿಳಿದೆದ್ದ ವಿಷ್ಣುವು ಎದುರಿನಲ್ಲಿ ಸತ್ತು ಬಿದ್ದಿರುವ ಮುರನನ್ನು ನೋಡಿ ಆಶ್ಚರ್ಯಪಟ್ಟನಂತೆ. ಆಗ ಅವನೆದುರು ಕಾಣಿಸಿಕೊಂಡ ಆ ಸ್ತ್ರೀ, ತಾನು ಮುರನನ್ನು ಹತ್ಯೆ ಮಾಡಿರುವುದಾಗಿ ನಿವೇದಿಸಿಕೊಂಡಳಂತೆ. ಅದು ಕೃಷ್ಣಪಕ್ಷದ ಏಕಾದಶಿ ದಿನವಾಗಿತ್ತು. ಭಗವಂತ ಅವಳನ್ನು "ಏಕಾದಶೀ" ಎಂದೇ ಹೆಸರಿಸಿದ. 'ಯಾರು ಏಕಾದಶಿ ದಿನದಂದು ಉಪವಾಸವನ್ನು ಆಚರಿಸಿ, ದೇವತಾರಾಧನೆ ಮಾಡುತ್ತಾರೋ ಅವರಿಗೆ ಮೋಕ್ಷ ಸಿಗುವಂತೆ' ಅನುಗ್ರಹಿಸಬೇಕೆಂದು ಅವಳು ಕೋರಿಕೊಂಡ ವರಕ್ಕೆ "ತಥಾಸ್ತು" ಎಂದನಂತೆ. ಅಂದಿನಿಂದ ಏಕಾದಶಿ ಉಪವಾಸ ವ್ರತಾಚರಣೆ ಆರಂಭವಾಯಿತಂತೆ.
ಧರ್ಮಕರ್ಮ ಸಂಯೋಗದಿಂದ ಈ ಏಕಾದಶಿ ಗುಹೆಗೆ ನಾವು ಭೆಟ್ಟಿ ನೀಡಿದ ದಿನ ಕೂಡ ಏಕಾದಶಿ ದಿನವೇ ಆಗಿತ್ತು! ಅಲ್ಲಿ ಸ್ವಾಮೀಜಿಯೊಬ್ಬರು ಪ್ರವಚನ ಮಾಡುತ್ತಿದ್ದರು. ನಾವು ಇಲ್ಲಿ ನಮಸ್ಕರಿಸಿ ಮುಂದೆ ಪ್ರಯಾಣಿಸಿದೆವು.
ಇಲ್ಲಿಂದ ಮುಂದೆ ನಮ್ಮ ಬಸ್ ಪಾಂಡುಕೀಶ್ವರದಲ್ಲಿ ನಿಂತಿತು. ಪಾಂಡುಕೀಶ್ವರ ಬದರಿನಾಥದಿಂದ 16 -18 ಕಿಲೋಮೀಟರ್ ಕೆಳಭಾಗದಲ್ಲಿ, ಹೆದ್ದಾರಿಗೆ ಹೊಂದಿಕೊಂಡಂತೇ ಇದ್ದು, ಅಲಕನಂದಾ (ವಿಷ್ಣುಗಂಗಾ )ನದಿಯ ದಡದಲ್ಲಿದೆ. ಇದು ಮಹಾಭಾರತದೊಂದಿಗೆ ನಿಕಟವಾಗಿ ಬೆಸೆದುಕೊಂಡ ಸ್ಥಳ. ಇಲ್ಲಿಯೇ ಮುನಿಶಾಪಗ್ರಸ್ತನಾದ ಕುರು ದೊರೆ ಪಾಂಡುವು, ತನ್ನ ಇಬ್ಬರು ಪತ್ನಿಯರಾದ ಕುಂತಿ - ಮಾದ್ರಿಯರ ಜೊತೆ ವಾನಪ್ರಸ್ಥದಲ್ಲಿದ್ದನಂತೆ. ಇಲ್ಲಿಯೇ ಕುಂತಿ-ಮಾದ್ರಿಯರಿಗೆ, ಪಾಂಡುವಿನ ಅನುಜ್ಞೆಯಂತೆ, ವಿವಿಧ ದೇವತೆಗಳನ್ನು ಆಹ್ವಾನಿಸುವ ಮೂಲಕ, ಪಾಂಡವರೈವರ ಜನ್ಮವಾಯಿತಂತೆ. ನಂತರ ಅದೊಂದು ದುರ್ದಿನದಂದು, ನದಿಯಲ್ಲಿ ಸ್ನಾನ ಮಾಡುತ್ತಿದ್ದ ಪರಮ ರೂಪವತಿಯಾದ ಮಾದ್ರಿಯ ಸೌಂದರ್ಯಕ್ಕೆ ಮರುಳಾಗಿ, ಮೋಹಪರವಶನಾಗಿ, ಮಾದ್ರಿಯು ಬೇಡ ಬೇಡವೆಂದರೂ ಕೇಳದೆ ಪಾಂಡುವು ಅವಳನ್ನು ಸಂಗಮಿಸಲು, ಅವನ ಮರಣವಾಯಿತಂತೆ. ತನ್ನ ಕಾರಣದಿಂದಲೇ ದೊರೆಯು ತೀರಿಕೊಂಡಿದ್ದರಿಂದ, ಎಲ್ಲಾ ಐದು ಮಕ್ಕಳ ಲಾಲನೆ, ಪಾಲನೆಯ ಜವಾಬ್ದಾರಿಯನ್ನು ಕುಂತಿಗೆ ವಹಿಸಿ ಮಾದ್ರಿಯೂ ಸಹ ಗಂಡನೊಂದಿಗೆ ಸಹಗಮನ ಮಾಡಿದಳಂತೆ. ಈ ಸ್ಥಳದಲ್ಲಿ ಈ ಮೂವರೂ ವಿಷ್ಣುವಿನ ಮಂದಿರವನ್ನು ನಿರ್ಮಿಸಿ ಯೋಗ ಧ್ಯಾನಗಳಲ್ಲಿ ನಿರತವಾದ್ದರಿಂದ ಇದನ್ನು "ಯೋಗಧ್ಯಾನ ಬದರಿ" ಎಂದೂ ಕರೆಯುತ್ತಾರೆ . ಪಂಚಬದ್ರಿಗಳಲ್ಲಿ ಇದೂ ಒಂದು. ಈ ಮಂದಿರದಲ್ಲಿ ಪಾಂಡು ದೊರೆಯಿಂದ ಸ್ಥಾಪಿತವಾದ, ಹಿತ್ತಾಳೆಯ, ಯೋಗಧ್ಯಾನ ಬದ್ರಿಯ ವಿಗ್ರಹವಿದೆ. ಕಾಲಾನಂತರದಲ್ಲಿ, ತಮ್ಮ ವನವಾಸದ ಅವಧಿಯಲ್ಲಿ, ಈ ಸ್ಥಳಕ್ಕೆ ಬಂದ ಪಾಂಡವರು, ಪಾಂಡು-ಮಾದ್ರಿಯರಿಗೆ ತರ್ಪಣ ನೀಡಿದ್ದಲ್ಲದೇ, ಇದೇ ಸ್ಥಳದಲ್ಲಿ ಅರ್ಜುನನು ಇಂದ್ರನನ್ನು ಕುರಿತು ತಪಸ್ಸನ್ನು ಸಹ ಮಾಡಿದನಂತೆ. ಇದೇ ಸ್ಥಳದಲ್ಲಿ ಪಾಂಡವರು, ಯೋಗಧ್ಯಾನ ಬದ್ರಿ ಮಂದಿರದ ಪಕ್ಕದಲ್ಲಿಯೇ, ಇನ್ನೊಂದು ಮಂದಿರವನ್ನು ವಾಸುದೇವನಿಗಾಗಿ ನಿರ್ಮಿಸಿದರಂತೆ. ಈ ವಾಸುದೇವ ಮಂದಿರದ ಒಳಗಡೆ ವಾಸುದೇವ ಲಕ್ಷ್ಮಿಯರಲ್ಲದೆ ಮಾದ್ರಿಯ ವಿಗ್ರಹವೂ ಇದೆ.
ಈ ಮಂದಿರಗಳು ಕಾಲಕಾಲಕ್ಕೆ ನವೀಕರಿಸಲ್ಪಟ್ಟಿವೆ. ಈ ಮಂದಿರದಲ್ಲಿ ಪುರಾತನ ತಾಮ್ರ ಪತ್ರಗಳು ದೊರೆತಿದ್ದು, ಸಂಸ್ಕೃತ ಭಾಷೆಯಲ್ಲಿರುವ ಅವು ಐತಿಹಾಸಿಕ ದಾಖಲೆಗಳಾಗಿ ಸಂಗ್ರಹಿತವಾಗಿವೆ. ಈಗ ಈ ಮಂದಿರಗಳು ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿವೆ. ಕ್ರಿಸ್ತಶಕ 4 - 5ನೇ ಶತಮಾನದಲ್ಲಿ ಈ ಮಂದಿರಗಳ ಪುನರ್ ನಿರ್ಮಾಣ/ ನವೀಕರಣವಾಗಿದ್ದರ ಕುರಿತ ಮಾಹಿತಿ ಈ ತಾಮ್ರಪತ್ರಗಳಲ್ಲಿ ಇದೆಯಂತೆ.
ಮಂದಿರವನ್ನು ನೋಡಲು ಹೆದ್ದಾರಿಯಿಂದ ಕೆಳಗೆ ಇಳಿದು ಬರಬೇಕು. ಹಾಗೆ ಬರುವಾಗ ಊರ ನಡುವಿನ ಸ್ವಲ್ಪ ಇಕ್ಕಟ್ಟಾದ ಹಾದಿಯಲ್ಲಿ ಸಾಗಬೇಕು. ಆದರೆ ಊರು ಸ್ವಚ್ಛ, ಸುಂದರವಾಗಿದೆ. ಈ ಮಂದಿರಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ಸುತ್ತಲೂ ಹಿಮಾಲಯ ಪರ್ವತ ಶ್ರೇಣಿಗಳು, ಕೆಳಭಾಗದಲ್ಲಿ ಜುಳುಜುಳನೆ ಹರಿಯುವ ವಿಷ್ಣು ಗಂಗಾ ನದಿ. ಯಾತ್ರಾ ಮಾರ್ಗದರ್ಶಿ ಸ್ಥಳ ಪುರಾಣಕ್ಕೆ ಸಂಬಂಧಪಟ್ಟ ಕಥೆಗಳನ್ನು ಹೇಳುತ್ತಿದ್ದರೆ ನಮ್ಮ ಮನಸ್ಸು ತಕ್ಷಣ ಆ ಕಾಲಕ್ಕೆ ಓಡುತ್ತದೆ. ಬಾಲ ಪಾಂಡವರು ಕಣ್ಣೆದುರು ಬರುತ್ತಾರೆ. ಕುಂತಿಯ ಪರಿಪಾಟಲು ಮನಸ್ಸನ್ನು ಹಾದು ಹೋಗುತ್ತದೆ. ಎರಡೂ ಮಂದಿರಗಳೂ ಒಂದೇ ರೀತಿ ಕಂಡರೂ ಗೋಪುರದ (ಶಿಖರದ) ವಿನ್ಯಾಸದಲ್ಲಿ ವ್ಯತ್ಯಾಸವನ್ನು ಗಮನಿಸಬಹುದು. ಯೋಗಧ್ಯಾನ ಬದ್ರಿ ಮಂದಿರದ ದ್ವಾರದ ಮೆಟ್ಟಿಲುಗಳ ಎಡ ಭಾಗದಲ್ಲಿ ನಂದಿ ಸಹಿತನಾದ ಶಿವನ ಪುಟ್ಟ ಮಂದಿರವಿದೆ. ಇನ್ನೊಂದು ಬದಿಗೆ ಗಣೇಶನ ಪುಟ್ಟಮಂದಿರವಿದೆ. ಇಲ್ಲಿನ ಪರಿಸರ ಧ್ಯಾನಾಸಕ್ತರಿಗೆ ಅತ್ಯಂತ ಪ್ರಶಸ್ತವಾಗಿದೆ.
ಇಲ್ಲಿ ಸಾವಧಾನವಾಗಿ ದರ್ಶನ ಮುಗಿಸಿ ಪ್ರದಕ್ಷಿಣೆ ಬಂದೆವು. ನಂತರ ಅದೇ ಮೆಟ್ಟಿಲುಗಳ ದಾರಿಯಲ್ಲಿ ಏರಿ ಹೆದ್ದಾರಿಗೆ ಬಂದೆವು. ಅಲ್ಲಿಂದ ಹೊರಟು, ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಾ, ಸಾಯಂಕಾಲ 7:00 ರ ಸುಮಾರಿಗೆ ಜ್ಯೋತಿರ್ಮಠದಲ್ಲಿ ನಿಗದಿತ ಹೋಟೆಲ್ ತಲುಪಿ, ಚಹಾ ಸೇವಿಸಿಯೇ ನಮ್ಮ ನಮ್ಮ ರೂಮುಗಳಿಗೆ ಹೋಗಿ ಸೇರಿಕೊಂಡೆವು.
ಜ್ಯೋತಿರ್ಮಠ ತಲುಪುವಲ್ಲಿ ವಿಳಂಬವಾದ ಕಾರಣ (ದಾರಿಯಲ್ಲಿನ ಟ್ರಾಫಿಕ್ ಜಾಮ್) ಇಲ್ಲಿ ಶಂಕರ್ ಗುಫಾ, ಶಂಕರ ಮಠ ಇತ್ಯಾದಿಗಳನ್ನು ನೋಡಲು ಆಗಲಿಲ್ಲ. ರಾತ್ರಿ 9.30 ಕ್ಕೆಲ್ಲ ಊಟದ ವ್ಯವಸ್ಥೆಯಾಗಿತ್ತು. ನಾಳೆ ಬೆಳಿಗ್ಗೆ ಬೇಗನೆ ಹೊರಟು ದಾರಿಯಲ್ಲಿ ದೇವ ಪ್ರಯಾಗ ಇತ್ಯಾದಿ ದರ್ಶಿಸಿ ಹರಿದ್ವಾರ ತಲುಪಬೇಕಿದೆ.
(ವಾಚಕರು ಕ್ಷಮಿಸಬೇಕು. ಬದರಿ ಕ್ಷೇತ್ರದ ಕುರಿತು ಮಾಹಿತಿ ನೀಡುವ ಒಂದು ಪುಟ್ಟ ವಿಡಿಯೋವನ್ನು ಶ್ರೀ ವೆಂಕಟೇಶ ಪ್ರಭು ಅವರು ನಮ್ಮ ವಾಟ್ಸಾಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದರು. ಅದನ್ನು ನಾನು ಭಾಗ -೧೨ ರಲ್ಲಿಯೇ ತಮ್ಮೊಡನೆ ಹಂಚಿಕೊಳ್ಳಬೇಕಿತ್ತು. ಮರೆತು ಹೋಗಿತ್ತು. ಈಗ ನೀಡುತ್ತಿದ್ದೇನೆ.)
ಮೋಡಗಳ ಹಿಂದೆ ಮರೆಯಾದ ನೀಲಕಂಠ ಪರ್ವತ
ಮಾನಾ ಗ್ರಾಮದ ಸ್ವಾಗತ ಕಮಾನು
ವಿಷ್ಣುಗಂಗಾಗೆ ಸೇರುವ ಒಂದು ಹಿಮನದಿ
ಪಾಂಡುಕೀಶ್ವರ (ಯೋಗಧ್ಯಾನ ಬದ್ರಿ (ಎಡ)ಮತ್ತು ವಾಸುದೇವ ಮಂದಿರ )
(ಸಶೇಷ ......)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ