ಚಾರ್ ಧಾಮ ಯಾತ್ರೆ -ಭಾಗ 15
ಮರಳಿ ನಮ್ಮೂರಿಗೆ
ದಿನಾಂಕ:-21/05/2024
ಇಂದು ವಾಪಸ್ ನಮ್ಮೂರಿಗೆ ಹೋಗುವ ದಿನ. ಬಹುಶಃ ಆ ಉತ್ಕಟತೆಯ ಕಾರಣ, ಮುಂಜಾನೆ ನಾವು ಬಿಡುವಾಗಿದ್ದು ನಿಧಾನವಾಗಿ ಏಳೋಣವೆಂದರೂ ಸಹ, 6-00 ಗಂಟೆಗೆಲ್ಲ ಎಚ್ಚರವಾಗಿ ಬಿಟ್ಟಿತ್ತು! ನಮ್ಮ ಯಾತ್ರಿಗಳಲ್ಲಿ ಕೆಲವರು - ಬೆಂಗಳೂರಿನ ಶಿವಲಿಂಗ ಚಿಕ್ಕಮಠ ಮತ್ತು ನಾಗರಾಜ್ ದಂಪತಿ ಸಹಿತ - ಬೇಗನೆ ಎದ್ದು ಮಾನಸಾ ದೇವಿ ಮಂದಿರ ಮತ್ತು ಚಂಡಿ ದೇವಿ ಮಂದಿರಗಳಿಗೆ ಹೋಗಿದ್ದರು. ನಾವು ಮತ್ತು ನಮ್ಮಂತೆ ಇನ್ನೂ ಕೆಲವರು ವಿರಾಮವಾಗಿ ಎದ್ದು, ಸ್ನಾನಾದಿಗಳನ್ನು ಪೂರೈಸಿ, ಬೇಗನೆ ಬೆಳಗಿನ ತಿಂಡಿಗೆ ಆಗಮಿಸಿದ್ದೆವು. ಈ ದಿನ 11-00 ಗಂಟೆಗೆಲ್ಲ ಲಗೇಜ್ ಹೊರಗಿಡಬೇಕೆಂದು ತಿಳಿಸಿದ್ದರು. 12 -00 ಗಂಟೆಗೆ ಊಟ ಎಂದು ಹೇಳಿದ್ದ ಕಾರಣ ಬೆಳಗಿನ ತಿಂಡಿ ಸಹ 8-00 ಗಂಟೆಗೆಲ್ಲ ತಯಾರಿತ್ತು. ಬೆಳಗಿನ ಉಪಹಾರ ಮುಗಿಸಿ, ಸೂಚನೆಯಂತೆ ನಮ್ಮ ಬ್ಯಾಗ್ ಗಳನ್ನು ತುಂಬಿ ಹೊರಗಿಟ್ಟೆವು. ನಾವು ಸ್ವಲ್ಪ ಹರಿದ್ವಾರದ ಬೀದಿಗಳಲ್ಲಿ ಅಡ್ಡಾಡಿ ಬಂದೆವು. ವಾಪಸ್ ಹೋಗಲು ಎಲ್ಲರಿಗೂ ಸೇರಿ ಒಂದೇ ಬಸ್. ವೆಂಕಟೇಶ್ ಪ್ರಭು ಅವರು ನಮ್ಮ ನಮ್ಮ ಸೀಟ್ ನಂಬರಗಳನ್ನು ನಿರ್ಧರಿಸಿ, ಚಾರ್ಟ್ ತಯಾರಿಸಿ, ವಾಟ್ಸಾಪ್ ಗ್ರೂಪಿನಲ್ಲಿ ಅದಾಗಲೇ ತಿಳಿಸಿದ್ದರು. ಅವರ ಎಲ್ಲಾ ವ್ಯವಸ್ಥೆಗಳು ಯಾವುದೇ ನ್ಯೂನತೆಗಳಿಲ್ಲದೆ ಅಚ್ಚುಕಟ್ಟಾಗಿರುತ್ತಿದ್ದವು.
ನಸುಕಿನಲ್ಲಿ ದರ್ಶನಾರ್ಥಿಗಳಾಗಿ ಹೋದವರೆಲ್ಲ 11:00 ಗಂಟೆಗೆಲ್ಲ ವಾಪಸ್ ಬಂದಿದ್ದರು. 12:30ಕ್ಕೆ ಊಟದ ಹಾಲ್ ತುಂಬಿತ್ತು. ಈ ದಿನ ವಿಶೇಷ ಊಟ. ಕಳೆದ 11 ದಿನಗಳಿಂದ ಕೇವಲ ಸಾತ್ವಿಕ ಊಟ ಉಂಡಿದ್ದವರಿಗೆಲ್ಲ ಈ ದಿನದ ಹೋಳಿಗೆ ಊಟ ಅತ್ಯಂತ ಅಪಾಯಮಾನವಾಗಿತ್ತು. ಎಲ್ಲರೂ ಮನದಣಿಯೆ ಊಟ ಮಾಡಿ, ನಿಧಾನವಾಗಿ ಹೋಟೆಲಿನ ಹೊರಗೆ ನಿಂತಿದ್ದ ಬಸ್ ಏರಿ ಆಸೀನರಾದೆವು. ವಾಟ್ಸಪ್ ಗ್ರೂಪ್ ನ ತುಂಬೆಲ್ಲ ಯಾತ್ರೆಯ ಧನ್ಯತೆಯನ್ನು ಉಲ್ಲೇಖಿಸಿ ತೀರ್ಥಯಾತ್ರೆ ಟೂರ್ಸ್ ಅಂಡ್ ಟ್ರಾವೆಲ್ಸ್ ಅವರಿಗೆ ಧನ್ಯವಾದಗಳ ಮಹಾಪೂರವೇ ತುಂಬಿತ್ತು.
ರಾತ್ರಿ ಡೆಲ್ಲಿ ಏರ್ ಪೋರ್ಟ್ ನಲ್ಲಿ ಊಟಕ್ಕೆ ತೊಂದರೆ ಆಗಬಾರದೆಂದು ರಾತ್ರಿಯ ಊಟವನ್ನು ಪ್ಯಾಕ್ ಮಾಡಿ ಎಲ್ಲ ಯಾತ್ರಾರ್ಥಿಗಳಿಗೆ ನೀಡಲಾಯಿತು. ಡೆಲ್ಲಿಯಿಂದ ಕಲ್ಕತ್ತಾ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿಗೆ ಹೋಗುವ ಯಾತ್ರಾರ್ಥಿಗಳೆಲ್ಲ ಇದ್ದರು. ನರಸಿಂಹ ಸ್ತೋತ್ರ ಪಠಣೆಯೊಂದಿಗೆ ಪ್ರಯಾಣ ಆರಂಭವಾಯಿತು. ಹವಾನಿಯಂತ್ರಿತ ಬಸ್ಸಿನ ಸುಖದ ಜೊತೆ ಜಠರೇಶ್ವರ ಸಹ ತೃಪ್ತಿ ಹೊಂದಿದ್ದ ಕಾರಣ ಎಲ್ಲರೂ ತೂಕಡಿಕೆ, ನಿದ್ರೆಗಳಿಗೆ ಶರಣಾದೆವು.
ಒಂದೊಳ್ಳೆ ನಿದ್ರೆ ಮುಗಿಸಿ ಏಳುತ್ತಿದ್ದಂತೆ, ಸುಮಾರು 4-30 ಗಂಟೆಗೆ, ಬಸ್ಸನ್ನು ಹೆದ್ದಾರಿಯ ಪಕ್ಕದಲ್ಲಿ ಒಂದು ಒಳ್ಳೆಯ ಹೋಟೆಲ್ ನ ಎದುರು ಚಹಾ ಸೇವನೆಗಾಗಿ ನಿಲ್ಲಿಸಿದರು. ವಿಶಾಲವಾದ ಹೊಲದ ಅಂಚಿಗೆ ಇದ್ದ ಈ ಹೋಟೆಲ್ಲಿನಲ್ಲಿ ಯಾತ್ರಿಗಳ ಮನ ಸೆಳೆಯಲು ಹಲವಾರು ನಿರುಪಯುಕ್ತ ವಸ್ತುಗಳನ್ನು ಅತ್ಯಾಕರ್ಷಕವಾಗಿ ಜೋಡಿಸಿಟ್ಟಿದ್ದರು. ಖಾಲಿಯಾದ ಪ್ಲಾಸ್ಟಿಕ್ ನೀರಿನ ಬಾಟಲುಗಳಿಗೆ ಒಂದಿಷ್ಟು ವಿನ್ಯಾಸ ಮಾಡಿ ದುಂಬಿ, ಚಿಟ್ಟೆ, ಜೇನ್ನೊಣ, ಪಕ್ಷಿಗಳು ಇತ್ಯಾದಿ ರೂಪ ನೀಡಿ ಎಲ್ಲೆಡೆ ನೇತು ಹಾಕಿದ್ದರು. ಅದೇ ರೀತಿ ನಿರುಪಯುಕ್ತವಾದ ವಾಹನಗಳ ಬಿಡಿ ಭಾಗಗಳು, ಹಳೆಯ ಟೈರುಗಳು ಇತ್ಯಾದಿಗಳನ್ನು ಸಹ ಅತ್ಯಂತ ಕಲಾತ್ಮಕವಾಗಿ ಸಿಂಗಾರಗೊಳಿಸಿಟ್ಟಿದ್ದರು. ಅದೇ ಆವರಣದಲ್ಲಿ ನಾಲ್ಕಾರು ಪುಟ್ಟ ಪ್ರಾಣಿಗಳನ್ನು ಸಾಕಿದ್ದರು. ಒಟ್ಟಿನಲ್ಲಿ ಚಹಾ ಸೇವನೆಗೆಂದು ನಿಂತವರು ಇನ್ನೊಂದು ಐದ್ಹತ್ತು ನಿಮಿಷ ಹೆಚ್ಚು ವ್ಯಯಿಸುವ ರೀತಿಯಲ್ಲಿ ಇತ್ತು ಇಲ್ಲಿನ ವ್ಯವಸ್ಥೆ. ನಮ್ಮ ಬಸ್ಸಿನ ಎಲ್ಲರೂ, ವಿಶೇಷತಃ. ಹೆಂಗಸರು, ಇವೆಲ್ಲವುಗಳನ್ನು ನೋಡಿ ಸಂತೋಷ ಪಟ್ಟರು.
ಇಲ್ಲಿಂದ ಹೊರಟ ನಾವು ಸಾಯಂಕಾಲ 6:30ರ ಸುಮಾರಿಗೆ ಡೆಲ್ಲಿ ವಿಮಾನ ನಿಲ್ದಾಣದಲ್ಲಿದ್ದೆವು. ತಕ್ಷಣ ನಮ್ಮ ನಮ್ಮ ಬ್ಯಾಗೇಜುಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಹೊರಡುವ ಇಂಡಿಗೋ ವಿಮಾನದ ಚೆಕಿಂಗ್ ಸರತಿ ಸಾಲಿಗೆ ಸೇರಿಕೊಂಡೆವು. ಕ್ಯಾಬಿನ್ ಬ್ಯಾಗ್ ಬಿಟ್ಟು ಉಳಿದ ಲಗೇಜ್ ಗಳು ಚೆಕ್ ಇನ್ ಆದವು. ಸೆಕ್ಯೂರಿಟಿ ಚೆಕಪ್ ಸಹ ಆಯಿತು. ಈಗ ಕೊನೆಯ ಹಂತದಲ್ಲಿ ನನ್ನ ಚೀಲವನ್ನು ತಡೆದರು. ನಾನು ತುಂಬಾ ಮುತುವರ್ಜಿಯಿಂದ ನಿಷೇಧಿತ ವಸ್ತುಗಳನ್ನು ಕ್ಯಾಬಿನ್ ಬ್ಯಾಗ್ ನಿಂದ ತೆಗೆದು ಚೆಕ್ ಇನ್ ಲಗೇಜ್ ನ ಜೊತೆ ಕಳಿಸಿದ್ದೆ. ಆದರೆ ಈಗ ನೋಡಿದರೆ ನನ್ನ ಮೀಸೆ ಟ್ರಿಮ್ ಮಾಡುವ ಕತ್ತರಿ ಮತ್ತು ಉಗುರು ಕತ್ತರಿಸುವ ಕಟರ್ ಬಾತ್ರೂಮ್ ಕಿಟ್ ಜೊತೆ ಸೇರಿಕೊಂಡಿತ್ತು. ಚೆಕಿಂಗ್ ನಲ್ಲಿ ಅದನ್ನು ಹಿಡಿದವರು, ಬಹುಶಃ ನನ್ನ ಬಿಳಿಕೂದಲನ್ನು ನೋಡಿ, ನಕ್ಕು ವಾಪಸ್ ಬ್ಯಾಗನಲ್ಲಿ ಇಟ್ಟರು. ಸ್ಕ್ಯಾನಿಂಗ್ ನಲ್ಲಿ ಇನ್ನೂ ಏನೋ ಕಬ್ಬಿಣದ ವಸ್ತು ಇರುವುದಾಗಿ ತೋರಿಸುತ್ತಿತ್ತು. ನಾನು 'ಸಾಧ್ಯವೇ ಇಲ್ಲವಲ್ಲ!' ಎಂದೆ. ಆದರೆ ಅದ್ಯಾವ ಮಾಯೆಯಲ್ಲಿಯೋ ಯಾತ್ರಾ ಸಂಸ್ಥೆಯವರು ಕೊಟ್ಟ ಛತ್ರಿ ಚೀಲದ ತಳ ಸೇರಿತ್ತು. ಅದನ್ನು ಹೊರಗೆ ತೆಗೆದೆ. ಅವನು ಮತ್ತೊಮ್ಮೆ ನಕ್ಕು, 'ಇರಲಿ ಬಿಡಿ' ಎಂದು ವಾಪಸ್ ಚೀಲಕ್ಕೆ ಹಾಕಿದನು. ಅಂತೂ ಚಿಕ್ಕ ಆತಂಕದ ನಂತರ ಸೆಕ್ಯೂರಿಟಿ ಚೆಕಿಂಗ್ ಮುಗಿದಂತಾಯಿತು.
ಎಂಟು ಗಂಟೆಗೆಲ್ಲ ಕಟ್ಟಿಸಿಕೊಂಡು ಬಂದ ಬುತ್ತಿ ತಿಂದೆವು. ವಿಮಾನ ನಿಗದಿತ ಸಮಯಕ್ಕೆ ಸರಿಯಾಗಿ ಹೊರಟಿತು. ರಾತ್ರಿ 12:30 ಕ್ಕೆಲ್ಲ ಬೆಂಗಳೂರಿನ ವಿಮಾನ ನಿಲ್ದಾಣ ತಲುಪಿದೆವು. ನಮ್ಮ 9 ಜನರ ಪೈಕಿ ಶ್ರೀಮತಿ ಭಾರತಿ ಮತ್ತು ರವಿಕುಮಾರ್ ದಂಪತಿ ಹಾಗೂ ವಸಂತ ಲಕ್ಷ್ಮಿ ಅವರು ಬೆಂಗಳೂರಿನಲ್ಲಿರುವ ತಮ್ಮ ತಮ್ಮ ಮನೆಗಳಿಗೆ ಹೋದರು. ನಾವು ಆರು ಜನ ಮೈಸೂರಿಗೆ ಹೊರಟು ನಿಂತಿದ್ದ ಫ್ಲೈ ಬಸ್ ಗೆ ಟಿಕೆಟ್ ಖರೀದಿಸಿ ಹತ್ತಿದೆವು. ನಿದ್ದೆ ತಿಳಿದೆದ್ದಾಗ ನಮ್ಮ ಬಸ್ ಮೈಸೂರಿನ ಬಸ್ ಸ್ಟ್ಯಾಂಡಿನಲ್ಲಿತ್ತು. ಸಮಯ ಬೆಳಗಿನ ಆರೂವರೆ ಆಗಿತ್ತು.
ಆಟೋದವರಿಗೆ ಹೇಳಿ ಕುಕ್ಕರಹಳ್ಳಿ ಕೆರೆ ದ್ವಾರದಲ್ಲಿರುವ ಫಿಲ್ಟರ್ ಕಾಫಿ ಒದಗಿಸುವ ವಾಹನದ ಎದುರು ನಿಲ್ಲಿಸಿಕೊಂಡು, ಎರಡು ವಾರಗಳ ನಂತರ, ಉತ್ಕೃಷ್ಟವಾದ ಫಿಲ್ಟರ್ ಕಾಫಿಯನ್ನು - ಪ್ರತೀ ಗುಟುಕನ್ನು ಆಸ್ವಾದಿಸುತ್ತಾ - ಹೀರಿದೆವು. ನಂತರ ನಮ್ಮ ನಮ್ಮ ಮನೆ ಸೇರಿದಾಗ ಸಮಯ ಬೆಳಗಿನ 7- 30 ;ದಿನಾಂಕ 22/ 5/2024.
ಯಾತ್ರೆ ಸಂಪನ್ನವಾಯಿತು. ಈ ರೀತಿ ಪ್ಯಾಕೇಜ್ ಟೂರ್ ಗೆ ನಾನು ಹೋಗಿದ್ದು ಇದೇ ಮೊದಲು. ಒಂದೆರಡು ಸೂಚನೆಗಳನ್ನು ನನ್ನ ತರಹದ ಆರಂಭಿಕರಿಗೆ ನೀಡಬಯಸುತ್ತೇನೆ.
1. ಯಾತ್ರಾ ಸಂಸ್ಥೆಯ 'ನಂಬಿಕಸ್ಥತನ'ವನ್ನು ವಿವಿಧ ಮೂಲಗಳಿಂದ ಪರಿಶೀಲಿಸಿ, ದರಗಳನ್ನು ಹೋಲಿಕೆ ಮಾಡಿ, ಸಾಧ್ಯವಾದರೆ ಚೌಕಾಸಿ ಮಾಡಿ, ನಂತರ ಬುಕ್ ಮಾಡಬೇಕು.
2. ಯಾತ್ರೆಯ ಸಲುವಾಗಿ ರಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಮರೆಯಬಾರದು. ಇದನ್ನು ಯಾತ್ರಾಸಂಸ್ಥೆ ಮಾಡಿಸುತ್ತದೆ. ಪರಿಶೀಲಿಸಿಕೊಳ್ಳಬೇಕು.
3. ವಿವಿಧ ಕ್ಷೇತ್ರಗಳಲ್ಲಿ ಪೂಜಾದಿಗಳಿಗೆ ಮುಂಗಡ ಟಿಕೆಟ್ ಗಳನ್ನು ಆನ್ಲೈನ್ ನಲ್ಲಿ ಕಾಯ್ದಿರಿಸಿಕೊಳ್ಳುವುದು ಉತ್ತಮ.
4. ಹೆಲಿಕಾಪ್ಟರ್ ಗಳಿಗೆ ಯಾತ್ರಾ ಸಂಸ್ಥೆಯವರು ಹೇಳಿದ ಕ್ರಮದಲ್ಲಿಯೇ ಆನ್ಲೈನ್ ಬುಕಿಂಗ್ ಮಾಡಿಕೊಳ್ಳುವುದು ಒಳ್ಳೆಯದು. ನಂತರ ಆಯಾ ಸ್ಥಳದಲ್ಲಿ ಟಿಕೆಟ್ ಸಿಗಲಿಕ್ಕಿಲ್ಲ. ಸಿಕ್ಕಿದರೂ ತುಂಬಾ ದುಬಾರಿಯಾಗುತ್ತದೆ.
5. ಅಕಸ್ಮಾತ್ ಹೆಲಿಕ್ಯಾಪ್ಟರ್ ಬುಕಿಂಗ್ ಆಗದಿದ್ದರೂ ಚಿಂತಿಸುವ ಅಗತ್ಯವಿಲ್ಲ ಅನ್ಯ ರೀತಿಗಳಲ್ಲಿ ಪ್ರಯಾಣಿಸಬಹುದು. ಆಯಾ ಸ್ಥಳದಲ್ಲಿ ನಿಮ್ಮ ನಿಮ್ಮ ಆರೋಗ್ಯದ ಸ್ಥಿತಿಯ ಮೇಲೆ ಪಿಟ್ಟೂ, ಕುದುರೆ ಅಥವಾ ಡೋಲಿಯಲ್ಲಿ ಪ್ರಯಾಣಿಸಬಹುದು.
6. ಸೀಟ್ ಬುಕ್ಕಿಂಗ್ ಮಾಡಿ ಪಾವತಿಸಿ ಆಗಿದೆ ಎಂದು ನಿರಾಳರಾಗಬೇಡಿ. ಕೈಯಲ್ಲಿ ಸಾಕಷ್ಟು ನಗೆದು ಹಣವನ್ನು ಇಟ್ಟುಕೊಂಡು ಪ್ರಯಾಣಿಸಿ. ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಅಷ್ಟೇ.
7. ಲಗೇಜ್ ಕಡಿಮೆ ಇದ್ದಷ್ಟು ಕ್ಷೇಮ. ಖರೀದಿ ಅನಿವಾರ್ಯವಾದರೆ ಮಾತ್ರ ಮಾಡಿ.
8. ಒಂದೇ ಕುಟುಂಬದ ಬದಲು ಇನ್ನೊಂದು ಆತ್ಮೀಯ ಕುಟುಂಬ ನಿಮ್ಮ ಜೊತೆ ಪ್ರಯಾಣಿಸಿದರೆ ಎಲ್ಲಾ ದೃಷ್ಟಿಯಲ್ಲಿಯೂ ಹಿತಕರ.
9. ಎಲ್ಲಾ ಕಡೆ ಸಮಯ ಪಾಲನೆಗೆ ಮಹತ್ವ ನೀಡಿರಿ. ತೀರ್ಥಯಾತ್ರೆ ಇರುವುದು ಮನಸ್ಸಿಗೆ ನೆಮ್ಮದಿ ಪಡೆಯಲು. ಹಾಗಾಗಿ ಸಹಯಾತ್ರಿಗಳ ಜೊತೆ ವಾದ ವಿವಾದವಾಗಲೀ, ಜಗಳವಾಗಲೀ ಬೇಡವೇ ಬೇಡ. ಅಂತಹ ಸಂದರ್ಭದಲ್ಲಿ ಮೌನ ಮತ್ತು ಸಹನೆ ನಿಮ್ಮ ಆಯುಧವಾಗಿರಲಿ.
10. ಬಾಯಿ ಚಪಲಕ್ಕೆ ಕಟ್ಟು ಬಿದ್ದು ಏನನ್ನಾದರೂ ತಿಂದು ಆರೋಗ್ಯ ಕೆಡಿಸಿಕೊಂಡರೆ ಇಡೀ ಯಾತ್ರೆಯೇ ಹದಗೆಟ್ಟು ಹೋಗುತ್ತದೆ. ಆದ್ದರಿಂದ ನಾಲಿಗೆಯ ಮೇಲೆ ಹಿಡಿತ ಇರುವುದು ಒಳ್ಳೆಯದು.
ನಿಮಗೆಲ್ಲ ಶುಭವಾಗಲಿ.
ಜೈ ಕೇದಾರ ಬಾಬಾಕೀ!!
ಜೈ ಬದರಿ ವಿಶಾಲ್ ಕೀ!!
ಹೆಮ್ಮೆಯ ಹಿಮಾಲಯ
ಭಾರತಾಂಬೆಯ ಮುಕುಟಮಣಿಯೀ
ಗಿರಿಹಿಮಾಲಯ ನಮ್ಮದು
ಪೂರ್ವ-ಪಶ್ಚಿಮದಗಲ ಹರಡಿಹ
ಗಿರಿಪುರಾತನ ನಮ್ಮದು || ಪ ||
ನಮ್ಮ ದೇಶದ ಗತ ಪುರಾಣದ
ಘಟನೆಯೆಲ್ಲವು ನಡೆದಿಹ
ಪುಣ್ಯಪುರುಷರು ಋಷಿವರೇಣ್ಯರು
ತಪವಗೈದಿಹ ಪರಿಸರ |
ಹೆಜ್ಜೆ ಹೆಜ್ಜೆಗು ತೀರ್ಥಸ್ಥಳಗಳು
ಪುಣ್ಯ ನದಿಗಳು ಹರಡಿಹ
ಪರಮ ಪಾವನ ಶಿಖರ ಶ್ರೇಣಿಯ
ಪರ್ವತಾವಳಿ ನಮ್ಮದು || 1 ||
ಭಾರತೀಯನ ಕನಸು ಹಿಮಗಿರಿ
ದರುಶನದ ಅನುಭೂತಿಯು
ಒಮ್ಮೆ ನೋಡಲು ಮತ್ತೆ ನೋಡುವ
ಸತತ ಸೆಳೆತದ ತುಡಿತವು |
ಗಿರಿ ಕಣಿವೆಯಲಿ ಹರಡಿ ನಗುತಿಹ
ಪ್ರಕೃತಿ ಸೆಳೆವುದು ನಮ್ಮನು
ಗಿರಿಹಿಮಾಲಯ ನಿನ್ನ ಮಹಿಮೆಗೆ
ಸಾಟಿ ನೀನೇ ಜಗದೊಳು || 2 ||
ಮೇಲೆ ನೋಡಲು ರಜತಗಿರಿಗಳು
ಪುಣ್ಯ ನದಿಗಳ ಸ್ರೋತವು!
ಜಿನುಗಿ ಹರಿಯುವ ಹಾಲು ಹಿಮಜಲ
ಕಣಿವೆಯೆಡೆಗಿನ ಓಟವು |
ಹೆಜ್ಜೆ ಹೆಜ್ಜೆಗು ನೀರ ಝರಿಗಳು
ಸೃಷ್ಟಿಸುವ ಜಲಪಾತವು!
ಹಿನ್ನೆಲೆಯ ಗಿರಿ ಶೃಂಗ ನೀಡುವ
ಶುದ್ಧ ದೈವಿಕ ಭಾವವು! || 3 ||
ಶಿವನ ಆಡುಂಬೊಲ ಹಿಮಾಲಯ
ಹೆಜ್ಜೆ ಹೆಜ್ಜೆಯು ಶಿವಮಯ!
ಇಲ್ಲಿಯೇ ಕೈಲಾಸ ಮಾನಸ
ಪಂಚ ಕೇದಾರಾಲಯ |
ಯಮುನೆ ಭಾಗೀರಥಿಗಳೆಲ್ಲವು
ತೊಳೆವವೈ ಶಿವಪಾದವ!
ಕಳೆದು ಮಲಿನವ ತಳೆದು ಭಕ್ತಿಯ
ಹಿಡಿಯೊ ಭೈರವ ಚರಣವ || 4 ||
ಹರಿಯು ಧರೆಯಲಿ ತಪವಗೈದಿಹ
ಬದರಿ ಕ್ಷೇತ್ರವು ಇಲ್ಲಿದೆ
ನಿಧಿಯ ಅಧಿಪತಿ ಯಕ್ಷರೊಡೆಯ ಕು-
ಬೇರನಲಕಾಪುರಿಯಿದೆ! |
ಪಂಚಪಾಂಡವರೆಲ್ಲ ಜನಿಸಿದ
ಪಾಂಡುಕೀಶ್ವರವಿಲ್ಲಿದೆ!
ಪುಣ್ಯ ನದಿಗಳು ಬೆರೆತು ಹರಿವ ಪ್ರ-
ಯಾಗ ಸರಣಿಯೆ ಇಲ್ಲಿದೆ! || 5 ||
ಸಾಧಕರಿಗಿದು ತಪೋಭೂಮಿಯು
ಸಾಹಸಿಗೆ ಆಹ್ವಾನವು!
ದಿವ್ಯಕಾನನ ಪುಣ್ಯಸಲಿಲವು
ನೆಲದ ಕೃಷಿಗಾಧಾರವು! |
ಇಂಥ ಹಿಮಗಿರಿ ಭವ್ಯ ಶ್ರೇಣಿಯು
ನಮ್ಮದೆಂಬುದೆ ಹೆಮ್ಮೆಯು!
ಮತ್ತೆ ಬರುವೆವು ನಿನ್ನ ಮಡಿಲಿಗೆ
ನಾವು ನಿನ್ನಯ ತನಯರು || 6 ||
-ರವೀಂದ್ರ ಭಟ್ ದೊಡ್ನಳ್ಳಿ.
(ಮುಗಿಯಿತು.)
(ಮುಗಿಯಿತು.)