ಚಾರ್ ಧಾಮ ಯಾತ್ರೆ -ಭಾಗ 11
ಜ್ಯೋತಿರ್ಮಠ ಮತ್ತು ವಿಷ್ಣು ಪ್ರಯಾಗ
ದಿನಾಂಕ:-18/05/2024
ಒಂದು ತಾಸಿನ ನಂತರ ಅಲಾರಂ ಹೊಡೆಯುತ್ತಿದ್ದಂತೆ ಎಚ್ಚರವಾಯಿತು. ಎದ್ದು ಸ್ನಾನ ಶೌಚಾದಿಗಳನ್ನು ಮುಗಿಸಿ, ಬ್ಯಾಗ್ ತಯಾರು ಮಾಡಿ ಹೊರಗಿಟ್ಟಿದ್ದಾಯ್ತು. ಬೆಳಗಿನ 2-30ಕ್ಕೆ ಚಹಾ ಸೇವನೆ ಮಾಡಿ 2-45ಕ್ಕೆಲ್ಲ ನಮ್ಮ ವಾಹನಗಳು ಬದರಿನಾಥದ ಮಾರ್ಗ ಹಿಡಿದು ಹೊರಟೇಬಿಟ್ಟಿದ್ದವು. ಗುಪ್ತಕಾಶಿಗೆ ವಿದಾಯ ಹೇಳಿದಂತಾಯಿತು.
ಮುಂಜಾವಿನ 8-00/ 8:30ರ ಸುಮಾರಿಗೆ 'ಗರುಡಗಂಗಾ' ಎಂಬಲ್ಲಿ ಬೆಳಗಿನ ಉಪಹಾರಕ್ಕಾಗಿ ನಮ್ಮ ಮಿನಿ ಬಸ್ ನಿಂತಿತು. ಇಲ್ಲಿ ಅಲಕನಂದಾ ನದಿಯ ಉಪನದಿಯೊಂದು ಇದೆ, - ಹೆಸರು 'ಗರುಡಗಂಗಾ'. ಈ ಹೊಳೆಗೆ ಅಡ್ಡವಾಗಿ ನಿರ್ಮಿಸಿದ ಸೇತುವೆಯನ್ನು ದಾಟುವ ಮೊದಲೇ ನಮ್ಮ ವಾಹನವನ್ನು, ತಿಂಡಿ ತಿನ್ನುವ ಸಲುವಾಗಿ, ಆಯ್ಕೆ ಮಾಡಿದ ಹೋಟೆಲಿನೆದುರು ನಿಲ್ಲಿಸಿದರು. ಅಲ್ಲಿ ಇಳಿದ ನಾವೆಲ್ಲ ಸೇತುವೆ ದಾಟಿ, ಹೊಳೆಯ ಆಚೆ ದಡದಲ್ಲಿದ್ದ ದೇವಸ್ಥಾನ ಸಮುಚ್ಚಯ ತಲುಪಿದೆವು. ಇಲ್ಲಿ ಒಂದಷ್ಟು ಮೆಟ್ಟಿಲುಗಳನ್ನು ಇಳಿದಾಗ ಗಂಗಾಮಾತಾ ಮಂದಿರ, ಪುಟ್ಟದಾದ ಶಿವನ ಮಂದಿರ ಹಾಗೂ ಗರುಡ ಮಂದಿರ ಇವೆ. ಇವುಗಳ ಪಕ್ಕದಲ್ಲಿ ಇರುವ ಮೆಟ್ಟಿಲುಗಳನ್ನು ಇಳಿದು ಹೋದರೆ ಗರುಡಗಂಗಾ ಹೊಳೆ. ಈ ಝರಿಯಲ್ಲಿನ ನೀರು ಸ್ಪಟಿಕ ಶುಭ್ರವಾಗಿತ್ತು. ನೀರಿನ ತಳ ಸ್ಪಷ್ಟವಾಗಿ ಕಾಣುತ್ತಿತ್ತು. ಈ ಸ್ಥಳದ ಐತಿಹ್ಯದ ಪ್ರಕಾರ ಇಲ್ಲಿ ಗರುಡನು ವಿಷ್ಣುವಿನ ವಾಹನವಾಗುವ ಆಕಾಂಕ್ಷೆಯಿಂದ 30,000 ವರ್ಷಗಳ ಕಾಲ ತಪಸ್ಸನ್ನು ಮಾಡಿದ್ದನು. ಸುಪ್ರೀತನಾದ ವಿಷ್ಣು, ಅಲ್ಲಿಂದ ಉತ್ತರಕ್ಕಿರುವ ಬದರಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಮೂರು ದಿನ ತಪಸ್ಸನ್ನಾಚರಿಸಲು ಸೂಚಿಸಿದನು. ಅದೇ ರೀತಿ ಮಾಡಿದ ಗರುಡನಿಗೆ ಬದರಿಯಲ್ಲಿ ದರ್ಶನವಿತ್ತು ಮೋಕ್ಷ ನೀಡಿದನಂತೆ, ವಿಷ್ಣು. ಬದರಿಯಲ್ಲಿ ಗರುಡ ತಪಸ್ಸು ಮಾಡಿದ 'ಗರುಡ ಶಿಲೆ' ಅಲಕನಂದಾ ನದಿಯ ಮಧ್ಯದಲ್ಲಿದೆ.
ಈ ಗರುಡಗಂಗಾ ನದಿಯಲ್ಲಿ ಸಿಗುವ ಶಿಲೆಯನ್ನು ಜೊತೆಯಲ್ಲಿ ಇಟ್ಟುಕೊಂಡರೆ ಸರ್ಪಭಯ ಇರುವುದಿಲ್ಲ ಎಂಬ ಪ್ರತೀತಿ ಇದೆ. ಹಾಗಾಗಿ ಯಾತ್ರಿಗಳು ಇಲ್ಲಿಂದ ಪುಟ್ಟ ಉರುಟು ಕಲ್ಲುಗಳನ್ನು ತಮ್ಮ ಮನೆಗಳಿಗೆ ಒಯ್ಯುತ್ತಾರಂತೆ. ನಮಗೆ ಈ ಮಾಹಿತಿ ಸಕಾಲದಲ್ಲಿ ಸಿಕ್ಕದೇ ಇದ್ದ ಕಾರಣ ನಾವ್ಯಾರೂ ಇಲ್ಲಿಂದ ಕಲ್ಲು ಆಯ್ದುಕೊಳ್ಳಲಿಲ್ಲ. ಆದರೆ ಗರುಡಗಂಗೆಯ ಶುದ್ಧ ಸ್ಪಟಿಕ ಜಲದಂತಹ ನೀರು ಯಾತ್ರೆಯುದ್ದಕ್ಕೂ ಮತ್ತೆಲ್ಲೂ ಕಾಣಸಿಗಲಿಲ್ಲ. ಅದೇ ಜಲವನ್ನು ತೀರ್ಥವಾಗಿ ಪ್ರೋಕ್ಷಣೆ ಮಾಡಿಕೊಂಡು, ಬೊಗಸೆಯಲ್ಲಿ ಎತ್ತಿ ಕುಡಿದೆವು ಕೂಡ. ಯಾತ್ರಿಗಳು ಇಲ್ಲಿ ತೀರ್ಥಸ್ನಾನ ಸಹ ಮಾಡುತ್ತಾರೆ. ನೀರಿನಲ್ಲಿ ಸ್ವಲ್ಪ ಸಮಯ ಕಳೆದ ನಂತರ ವಾಹನ ನಿಲ್ಲಿಸಿದ ಹೋಟೆಲಿನ ಹತ್ತಿರ ಹೋಗಿ, ಬೆಳಗಿನ ತಿಂಡಿ - ಚಹಾ ಸೇವನೆ ಮುಗಿಸಿ, ಮತ್ತೆ ಬಸ್ಸನ್ನೇರಿ, ಬೆಳಗಿನ 10:30ರ ಸುಮಾರಿಗೆ ಜ್ಯೋತಿರ್ಮಠದಲ್ಲಿನ ನರಸಿಂಹ ದೇವರ ಮಂದಿರದ ಎದುರು ಇದ್ದೆವು.
ಜ್ಯೋತಿರ್ಮಠಕ್ಕೆ "ಜೋಶಿಮಠ" ಎಂತಲೂ ಹೇಳುತ್ತಾರೆ. ಆದರೆ ಈಗ ಜ್ಯೋತಿರ್ಮಠ ಎಂಬ ಹೆಸರನ್ನೇ ಅಧಿಕೃತಗೊಳಿಸಿರುತ್ತಾರೆ.
ದೇವಸ್ಥಾನದ ಎದುರುಗಿನ ರಸ್ತೆ ಸ್ವಲ್ಪ ಇಕ್ಕಟ್ಟಾಗಿತ್ತು. ಇಲ್ಲಿ ನಮ್ಮನ್ನು ಇಳಿಸಿದ ವಾಹನಗಳು, ಸುಮಾರು ಅರ್ಧ ಕಿಲೋಮೀಟರ್ ಮುಂದೆ ಸಾಗಿ, ರಸ್ತೆ ಸ್ವಲ್ಪ ಅಗಲವಾಗಿರುವಲ್ಲಿ ನಿಂತವು. ನಾವು ರಸ್ತೆಯಿಂದ ಸುಮಾರು ನೂರರಷ್ಟು ಮೆಟ್ಟಿಲುಗಳನ್ನು ಇಳಿದು ದೇವಾಲಯಗಳು ಇದ್ದಲ್ಲಿಗೆ ನಡೆದೆವು. ಈ ಕಾಲುಹಾದಿಯ ಎಡಭಾಗದಲ್ಲಿ ನರಸಿಂಹ ದೇವರ ಮಂದಿರವಿದ್ದರೆ ಬಲಭಾಗದಲ್ಲಿ ವಾಸುದೇವ ಮಂದಿರವಿದೆ.
ನಾವು ಮೊದಲು ಅತ್ಯಂತ ಶಿಸ್ತುಬದ್ಧವಾಗಿ ನಿರ್ಮಿಸಲ್ಪಟ್ಟ ಶಿಲಾದೇವಾಲಯವಾದ ನರಸಿಂಹ ದೇವರ ಮಂದಿರಕ್ಕೆ ತೆರಳಿದೆವು. ವಿಶಾಲವಾದ ಜಾಗದಲ್ಲಿ ಮಂದಿರವಿದೆ. ಈ ದೇವಾಲಯವನ್ನೇ ಜ್ಯೋತಿರ್ಮಠ ಎನ್ನುತ್ತಾರೆ. "ನರಸಿಂಹ ಬದ್ರಿ" ಎಂತಲೂ ಹೇಳುತ್ತಾರೆ.
ಆದಿ ಶಂಕರಾಚಾರ್ಯರು ಈ ಮಂದಿರವನ್ನು ಎಂಟನೆಯ ಶತಮಾನದಲ್ಲಿ ನಿರ್ಮಿಸಿದರು ಎಂಬ ಪ್ರತೀತಿ ಇದೆ. ಅದಕ್ಕೆ ಪೂರಕವೆಂಬಂತೆ ಈ ಮಂದಿರದ ಪ್ರಾಂಗಣದಲ್ಲೇ ಶ್ರೀ ಶಂಕರಾಚಾರ್ಯರ ಗದ್ದಿ ಸಹ ಇದೆ. ಒಂದು ಪುಟ್ಟ ಕಟ್ಟಡದ ಮೊದಲ ಮಹಡಿಯಲ್ಲಿ ಈ ಗದ್ದಿ ಇದೆ, ಮತ್ತು ಅಲ್ಲಿ ಶ್ರೀ ಶಂಕರಾಚಾರ್ಯರ ಮೂರ್ತಿ ಸಹ ಇದೆ. ನಾವು ಅದನ್ನು ವೀಕ್ಷಿಸಿ, ಗೋಡೆಯ ಮೇಲೆಲ್ಲ ಬರೆದ ಅವರ ಜೀವನಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು (ಹಿಂದಿಯಲ್ಲಿ ಇದ್ದವು) ಓದಿಕೊಂಡೆವು.
ನರಸಿಂಹ ಮಂದಿರದಲ್ಲಿ ಪುಟ್ಟದಾದ, ಪದ್ಮಾಸನ ಭಂಗಿಯಲ್ಲಿನ, ಸಾಲಿಗ್ರಾಮ ಶಿಲೆಯ ನರಸಿಂಹ ದೇವರ ವಿಗ್ರಹ ಇದೆ. ಇದನ್ನು ಉದ್ಭವಮೂರ್ತಿ ಎಂತಲೂ ಹೇಳುತ್ತಾರೆ.
ಈ ದೇವಳದ ಕಥೆಯ ಜೊತೆ "ಭವಿಷ್ಯ ಬದ್ರಿ" ಸಹ ತಳಕು ಹಾಕಿಕೊಂಡಿದೆ. ಇಲ್ಲಿರುವ ನರಸಿಂಹ ಸ್ವಾಮಿಯ ಎಡಗೈ ತುಂಬಾ ತೆಳುವಾಗಿದೆ. ಅದು ಈಗಲೂ ಸವೆಯುತ್ತಲೇ ಇದೆಯಂತೆ! ಅದು ಸಂಪೂರ್ಣ ಕರಗಿದಾಗ, ಈಗಿರುವ ಬದರಿನಾಥಕ್ಕೆ ಹೋಗುವ ದಾರಿಯಲ್ಲಿನ ಜಯ - ವಿಜಯ ಪರ್ವತಗಳು ಭಯಂಕರ ಭೂಕುಸಿತಕ್ಕೆ ಸಿಲುಕಿ ಕುಸಿದು, ಬದರಿನಾಥನ ರಸ್ತೆ ಮುಚ್ಚಿ ಹೋಗುತ್ತದೆಯಂತೆ. ಆಗ "ಬದರಿವಿಶಾಲ" ಸ್ವಾಮಿಯು ಅದಾಗಲೇ ಸ್ಥಾಪಿತವಾಗಿರುವ ಭವಿಷ್ಯ ಬದರಿಯಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಆಗ ಭವಿಷ್ಯ ಬದ್ರಿಯೇ ಬದರಿನಾಥವಾಗುತ್ತದೆಯಂತೆ.
ಈ ದೇವಾಲಯ ಬದರಿನಾಥ ಸ್ವಾಮಿಯ ಚಳಿಗಾಲದ ಪೀಠ ಸಹ ಆಗಿದೆ. ನರಸಿಂಹ ಸ್ವಾಮಿಯ ಪಕ್ಕ, ಇಲ್ಲಿಯ ಗರ್ಭಗುಡಿಯೊಳಗೆ, ಬದರಿನಾಥ ಸ್ವಾಮಿಯ ವಿಗ್ರಹ ಸಹ ಇದೆ. ಚಳಿಗಾಲದ ಆರು ತಿಂಗಳು ಬದರಿನಾಥದ ಅರ್ಚಕರು ಇಲ್ಲಿಯೇ ಸ್ವಾಮಿ 'ಬದರಿವಿಶಾಲ'ನನ್ನು ಪೂಜಿಸುತ್ತಾರಂತೆ. ಈ ದೇವಾಲಯದ ಪ್ರಾಂಗಣದಲ್ಲಿಯೇ ಒಂದು ತೀರ್ಥಕುಂಡವಿದ್ದು, ಸ್ನಾನ ಮಾಡಿ ಬಟ್ಟೆ ಬದಲಾಯಿಸಲು ಕೋಣೆಗಳು ಸಹ ಇವೆ. ಈ ತೀರ್ಥದ ತಣ್ಣನೆಯ ಜಲವನ್ನು ನಾವು ತೀರ್ಥವಾಗಿ ಸೇವಿಸಿ, ಪ್ರೋಕ್ಷಣೆ ಸಹ ಮಾಡಿಕೊಂಡೆವು.
ಈ ಮಂದಿರದ ಪ್ರಾಂಗಣದಿಂದ 15 - 20 ಮೆಟ್ಟಿಲುಗಳನ್ನು ಏರಿ, ಮೊದಲು ಆಗಮಿಸಿದ ಕಾಲುದಾರಿಯಲ್ಲಿ ನಿಂತಾಗ ಎದುರುನಲ್ಲೇ ಪುರಾತನವಾದ ವಾಸುದೇವ ಮಂದಿರವಿದೆ .ಈಗ ನಾವೆಲ್ಲ ಅತ್ತ ತೆರಳೋಣವೇ?
ಪ್ರಾಂಗಣದ ಪ್ರವೇಶದಲ್ಲೇ ಎಡಗಡೆಗೆ ಗರುಡ ಮಂದಿರವಿದೆ. ಅದನ್ನು ದರ್ಶಿಸಿ ಒಳಗೆ ಪ್ರವೇಶಿಸಿದರೆ ಅದುವೇ ವಾಸುದೇವ ಮಂದಿರ. ಕಟಿಹಾರ ವಂಶದ ರಾಜರಿಂದ 7ರಿಂದ 11ನೆಯ ಶತಮಾನದ ನಡುವೆ ನಿರ್ಮಿಸಲ್ಪಟ್ಟ ಈ ಮಂದಿರದ ಗರ್ಭಗೃಹದಲ್ಲಿ 5.50 ರಿಂದ 6 .00 ಅಡಿ ಎತ್ತರದ, ಅತ್ಯಂತ ಮನೋಹರವಾದ, ನಿಂತ ಭಂಗಿಯಲ್ಲಿರುವ ಭಗವಾನ್ ವಾಸುದೇವರ ವಿಗ್ರಹ ಇದೆ. ಶಂಖ, ಚಕ್ರ, ಗದಾ ಪಾಣಿಯಾಗಿರುವ, ಕಪ್ಪು ಸಾಲಿಗ್ರಾಮ ಶಿಲೆಯಲ್ಲಿ ನಿರ್ಮಿತವಾದ ಮೂರ್ತಿ ಇದು. ನೋಡಿದೊಡನೆ ಭಕ್ತಿ ಭಾವದಿಂದ ನತಮಸ್ತಕರಾಗುವಂತಿದೆ. ಮಂದಿರದ ಒಳಗೆ ವಿಶೇಷ ಶಕ್ತಿಯ ಕಂಪನದ ಅನುಭವ ಆಗುತ್ತದೆ.
ಹೊರಪ್ರಾಂಗಣದಲ್ಲಿ ನೃತ್ಯಭಂಗಿಯಲ್ಲಿರುವ ಅಷ್ಟಭುಜ ಗಣೇಶನ ವಿಗ್ರಹವಿದೆ. ಈ ಮೂರ್ತಿಯಂತೂ ತುಂಬಾ ಸುಂದರವಾಗಿದೆ. ಇದಲ್ಲದೆ ಕಾಳಿ ಮಂದಿರ, ಶಿವಮಂದಿರ, ಭೈರವದೇವ ಮಂದಿರ, ನವದುರ್ಗಾ ಮಂದಿರ ಸಹ ಇವೆ. ಗೌರೀ-ಶಂಕರ ಮಂದಿರವೂ ಇದೆ. ತುಂಬಾ ಪುರಾತನವಾದ ಮಂದಿರಗಳ ಸಮುಚ್ಚಯವಿದು. ಆದರೆ ಎದುರುಗಡೆ ಇರುವ ನರಸಿಂಹ ಮಂದಿರ ಸಂಪೂರ್ಣ ನವನಿರ್ಮಾಣದಂತಿದೆ.
ಈ ವಾಸುದೇವ ಮಂದಿರ ಸಮುಚ್ಚಯದಲ್ಲಿರುವ ಎಲ್ಲಾ ಗುಡಿಗಳನ್ನು ದರ್ಶಿಸಿ, ಅಲ್ಲಿಂದ ಹೊರಬಂದು, ನಿಧಾನವಾಗಿ ನಮ್ಮ ಬಸ್ಸುಗಳನ್ನು ನಿಲ್ಲಿಸಿದ ಸ್ಥಳದತ್ತ ನಡೆದೆವು. ಹಾಗೆ ನಡೆಯುವಾಗ ಹಿಮಾಲಯದ ಪರಿಸರದಲ್ಲಿ ಸಹಜವಾಗಿ ಬೆಳೆಯುವ ಹೂ ಗಿಡಗಳನ್ನು, ಹಣ್ಣಿನ ಮರಗಳನ್ನು ಗಮನಿಸುತ್ತಾ, ಸುತ್ತಲಿನ ಗಿರಿ- ಕಂದರ- ಶಿಖರಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗಿದೆವು.
ಈ ಮಂದಿರಗಳಲ್ಲದೆ ಜ್ಯೋತಿರ್ಮಠದಲ್ಲಿ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ, ಚತುರಾಮ್ನಾಯ ಪೀಠಗಳಲ್ಲಿ ಒಂದಾದ ಉತ್ತರಾಮ್ನಾಯ ಪೀಠವಿದೆ( ಶಂಕರ ಮಠ ). ಈ ಶಂಕರ ಮಠದ ಹೆಸರೇ ಜ್ಯೋತಿರ್ಮಠ. ಈ ಹೆಸರೇ ಈ ಊರಿನ ಹೆಸರೂ ಕೂಡ ಆಗಿಬಿಟ್ಟಿದೆ. ಉಳಿದ ಮೂರು ಪೀಠಗಳೆಂದರೆ ದಕ್ಷಿಣದಲ್ಲಿ ಶೃಂಗೇರಿ ಪೀಠ, ಪೂರ್ವದಲ್ಲಿ ಪುರಿಯ ಗೋವರ್ಧನ ಪೀಠ, ಪಶ್ಚಿಮದಲ್ಲಿ ದ್ವಾರಕೆಯ ಶಾರದಾ ಪೀಠ.
ಈ ಉತ್ತರಾಮ್ನಾಯ ಜ್ಯೋತಿರ್ಮಠ ಪೀಠದ ಮೊದಲ ಜಗದ್ಗುರುವಾಗಿ ಆದಿ ಶಂಕರಾಚಾರ್ಯರ ನಾಲ್ವರು ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ತೋಟಕಾಚಾರ್ಯರು ಇದ್ದರು. ಸದ್ಯದ ಗುರುಗಳು ಸ್ವಾಮಿ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿಯವರು.
ಈ ಶಂಕರ ಮಠ ಅತ್ಯಂತ ಹತ್ತಿರದಲ್ಲೇ ಇದ್ದರೂ ಸಹ ನಮ್ಮ ಪ್ರವಾಸದ ಪರಿಧಿಯ ಆಚೆ ಇದ್ದ ಕಾರಣ ನಾವು ಅಲ್ಲಿಗೆ ಭೇಟಿ ನೀಡಲು ಆಗಲಿಲ್ಲ.(ನಾಳೆ ಸಾಯಂಕಾಲ ನೋಡುವ ಯೋಜನೆ ಇದೆ) ಜ್ಯೋತಿರ್ಮಠದಿಂದ ಹೊರಟ ನಾವು ಮಧ್ಯಾಹ್ನದ ಊಟದ ಸಮಯಕ್ಕೆ ಸರಿಯಾಗಿ ವಿಷ್ಣು ಪ್ರಯಾಗವನ್ನು ತಲುಪಿದೆವು.
ವಿಷ್ಣು ಪ್ರಯಾಗದಲ್ಲಿ ಎರಡು ಮಹಾಗಿರಿಗಳ ನಡುವೆ, ಅಲಕನಂದಾ ನದಿಯ ಪಕ್ಕದಲ್ಲಿಯೇ, ಏರುತ್ತಾ ಸಾಗುವ ವಾಹನ ದಾರಿ ಬದರಿನಾಥಕ್ಕೆ ಹೋಗುತ್ತದೆ. ಅಲಕನಂದಾ ನದಿಯ ಹರಿವಿಗುಂಟ ನೋಡಿದರೆ, ಇಲ್ಲಿ, ಅದಕ್ಕೆ ಎಡಗಡೆಯಿಂದ ರಭಸವಾಗಿ ಹರಿದು ಬಂದು ಸೇರುವ 'ಧೌಲಿಗಂಗಾ' ನದಿ ಇದೆ. ಇವೆರಡರ ಸಂಗಮವೇ ವಿಷ್ಣು ಪ್ರಯಾಗ! ಈ 'ಧೌಲಿಗಂಗಾ' ನದಿಗೆ, ಈ ಜಾಗಕ್ಕಿಂತಲೂ ಸ್ವಲ್ಪ ಮೇಲೆ, 'ಋಷಿಗಂಗಾ' ಎಂಬ ನದಿ ಬಂದು ಸೇರುತ್ತದೆ. ಈ ಋಷಿಗಂಗಾ ನದಿಯ ಮೇಲೆ ಒಂದು ಹೈಡೆಲ್ ಪ್ರಾಜೆಕ್ಟ್ ಇತ್ತು. ಇಲ್ಲಿ ಈಗ ಎರಡು ವರ್ಷಗಳ ಹಿಂದೆ, ಒಮ್ಮೆಲೇ ಮಿಂಚಿನಂತೆ ಕ್ಷಿಪ್ರ ಪ್ರವಾಹ ಬಂದು, ಯಾರಿಗೂ ಒಂಚೂರೂ ಅವಕಾಶ ನೀಡದಂತೆ, ಈ ಹೈಡೆಲ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಗಳೂ ಸೇರಿದಂತೆ, ನೂರಾರು ಜನ ಕೊಚ್ಚಿಕೊಂಡು ಹೋದರಂತೆ. ಅದೇ ಸಂದರ್ಭದಲ್ಲಿ, ಈ ವಿಷ್ಣು ಪ್ರಯಾಗದಲ್ಲಿ ಧೌಲಿಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಒಂದು ಸ್ಟೀಲ್ ಬ್ರಿಡ್ಜ್ ಸಹ ಹಾಳಾಗಿರುವುದನ್ನು ಈಗಲೂ ನೋಡಬಹುದು. (ಆ ಬ್ರಿಜ್ ಈಗಿರುವ ನದೀ ಪಾತ್ರಕ್ಕಿಂತ ಸುಮಾರು 40 ಅಡಿಗಳಿಗಿಂತ ಮೇಲೆ ಇದೆ. ಅಂದರೆ ಆಗ ಬಂದ ಪ್ರವಾಹದ ಭೀಕರತೆಯನ್ನು ಊಹಿಸಿಕೊಳ್ಳಬಹುದು)
ಈ ಸ್ಥಳದಲ್ಲಿ ನಾರದ ಮಹರ್ಷಿಗಳು ದೀರ್ಘಕಾಲ ಶ್ರೀ ವಿಷ್ಣುವನ್ನು ಕುರಿತು ತಪಸ್ಸು ಮಾಡಿದ್ದರಂತೆ. ಅವರಿಗೆ ಶ್ರೀ ವಿಷ್ಣು, ತನ್ನನ್ನು ಕುರಿತು ಬದರಿ ಕ್ಷೇತ್ರದಲ್ಲಿ ಏಳು ದಿನ ತಪಸ್ಸು ಮಾಡಿದರೆ, ದರ್ಶನವಿತ್ತು, ಮೋಕ್ಷ ನೀಡುವುದಾಗಿ ಹೇಳಿದರಂತೆ. ಅದರಂತೆ ನಾರದರು ಮತ್ತೂ ಉತ್ತರಕ್ಕೆ ಇರುವ ಬದರಿ ಕ್ಷೇತ್ರಕ್ಕೆ ತೆರಳಿ, ಅಲ್ಲಿ ಅಲಕನಂದಾ ತೀರದಲ್ಲಿ ತಪಸ್ಸು ಮಾಡಿ, ಬದರೀನಾಥನನ್ನು ಒಲಿಸಿಕೊಂಡರಂತೆ. ಅಲ್ಲಿ ಅವರು ಕುಳಿತು ತಪಸ್ಸು ಮಾಡಿದ್ದರೆಂದು ಹೇಳಲಾಗುವ ನಾರದ ಶಿಲೆಯೂ ಇದೆ.
ಇನ್ನು, ಈ "ಪಂಚ ಪ್ರಯಾಗ"ಗಳ ಕುರಿತು ಒಂದೆರಡು ಸಾಲುಗಳು ಈ ಸಂದರ್ಭದಲ್ಲಿ ಅವಶ್ಯಕ ಎನಿಸುತ್ತದೆ;- ಅಲಕನಂದಾ ನದಿಯು ಬದರಿಯಿಂದ ಹರಿಯುತ್ತಿದ್ದು ಅದು ಮುಖ್ಯ ನದಿ. ಅದಕ್ಕೆ ಗಂಗಾ ಕಣಿವೆಯಲ್ಲಿ ಇತರ ಉಪನದಿಗಳು ಸೇರಿ ಅವಳು ತನ್ನ ಗಾತ್ರವನ್ನು ಹಿರಿದಾಗಿಸಿಕೊಳ್ಳುತ್ತಾ ಸಾಗುತ್ತಾಳೆ. ಹೀಗೆ ಪ್ರತಿಯೊಂದು ಶಾಖೆ ಅಥವಾ ಉಪನದಿ ಬಂದು ಸೇರುವ ಸ್ಥಳವೇ ಪ್ರಯಾಗ. ಅಲಕನಂದಾ ನದಿಯ ಹರಿವಿಗುಂಟ ಹೊರಟಾಗ ಮೊದಲಿಗೆ ಸಿಗುವುದು ವಿಷ್ಣು ಪ್ರಯಾಗ. ವಿಶೇಷವೆಂದರೆ, ಈ ವಿಷ್ಣು ಪ್ರಯಾಗದವರೆಗೆ ಅಲಕನಂದಾ ನದಿಯನ್ನು "ವಿಷ್ಣುಗಂಗಾ" ಎಂದು ಕರೆಯುತ್ತಾರೆ. ಇಲ್ಲಿ ವಿಷ್ಣುಗಂಗಾ ನದಿಗೆ ಎಡಗಡೆಯಿಂದ ‘ಧೌಲಿಗಂಗಾ’ ನದಿ ಬಂದು ಸೇರಿ, ಇಲ್ಲಿಂದ ಮುಂದೆ ವಿಷ್ಣುಗಂಗೆಯೇ "ಅಲಕನಂದಾ" ಆಗುತ್ತಾಳೆ. ಮುಂದೆ ಸಾಗಿದ ಅಲಕನಂದಾಳಿಗೆ ಮತ್ತೆ ಎಡಗಡೆಯಿಂದ "ನಂದಾಕಿನಿ" ನದಿ ಬಂದು ಸೇರುತ್ತದೆ. ಆ ಸ್ಥಳವೇ 'ನಂದಪ್ರಯಾಗ'. ಇದು ಯಾದವ ದೊರೆ ನಂದರಾಜನ ಹೆಸರನ್ನು ಪಡೆದಿದೆ. ಇಲ್ಲಿ ಗೋಪಾಲಸ್ವಾಮಿ ಮಂದಿರವೂ ಇದೆ. (ನಾವು ಇಲ್ಲಿ ಇಳಿಯಲಿಲ್ಲ) ನಂದಾಕಿನಿಯನ್ನು ಸೇರಿಸಿಕೊಂಡು ಉಬ್ಬಿದ ಅಲಕನಂದಾ ಸ್ವಲ್ಪ ಮುಂದೆ ಸಾಗುವಷ್ಟರಲ್ಲಿ ಮತ್ತೆ ಎಡಗಡೆಯಿಂದ, ಪಿಂಡಾರ ಗ್ಲೇಸಿಯರ್ ನಿಂದ ಹರಿದು ಬಂದು ಸೇರುತ್ತಾಳೆ -'ಪಿಂಡಾರಗಂಗಾ'. ಈ ಸ್ಥಳವೇ "ಕರ್ಣ ಪ್ರಯಾಗ". ಮಹಾಭಾರತದ ಪ್ರಸಿದ್ಧ ಯೋಧ ಕರ್ಣನು ಇಲ್ಲಿ ತಪಸ್ಸನ್ನು ಆಚರಿಸಿದ್ದನಂತೆ. ಇನ್ನಷ್ಟು ಮೈ ತುಂಬಿಕೊಂಡ ಅಲಕನಂದಾ ಮುಂದೆ ಸಾಗಿ ಕೇದಾರನಾಥದಿಂದ ಹರಿದು ಬಂದು ಸೇರುವ ಮಂದಾಕಿನಿಯನ್ನು ತನ್ನ ಜೊತೆ ಕೂಡಿಸಿಕೊಂಡು ಹರಿಯುತ್ತಾಳೆ. ಇಲ್ಲಿ ಮಂದಾಕಿನಿ ಬಲಗಡೆಯಿಂದ ಬಂದು ಅಲಕನಂದಾವನ್ನು ಸೇರುತ್ತಾಳೆ. ಈ ಸ್ಥಳವೇ "ರುದ್ರಪ್ರಯಾಗ". ಈ ರುದ್ರಪ್ರಯಾಗದಲ್ಲಿ ಹಿಂದೆ ನಾರದರು ಶಿವನನ್ನು ಕುರಿತು ತಪಸ್ಸು ಮಾಡಿದಾಗ, ಶಿವನು ಅವರಿಗೆ ರುದ್ರರೂಪಿಯಾಗಿ ದರ್ಶನವಿತ್ತು, ಸಂಗೀತವನ್ನು ವರವಾಗಿ ನೀಡಿದನಂತೆ. ಈ ರುದ್ರಪ್ರಯಾಗ ಇರುವದರಿಂದ ಇಡೀ ಜಿಲ್ಲೆಗೆ 'ರುದ್ರಪ್ರಯಾಗ ಜಿಲ್ಲೆ' ಎಂದು ಹೇಳುತ್ತಾರೆ. ಇಲ್ಲಿಂದ ಗುಪ್ತಕಾಶಿಯ ಮೂಲಕ ಕೇದಾರನಾಥಯಾತ್ರೆಯಾದರೆ, ಅಲಕನಂದಾ ನದಿಯ ಹರಿವಿನ ಮೂಲದ ಕಡೆ ಹೊರಟರೆ, ಬದರಿನಾಥ ಯಾತ್ರೆ. ರುದ್ರ ಪ್ರಯಾಗದಿಂದ ಮುಂದೆ ಹರಿಯುವ ಅಲಕನಂದಾ ನದಿಗೆ ಮತ್ತೆ ಬಲಗಡೆಯಿಂದ ಬಂದು ಸೇರುತ್ತಾಳೆ "ಭಾಗೀರಥಿ". ಇವಳು ಗಂಗೋತ್ರಿಯಿಂದ ಹರಿದು ಬರುತ್ತಾಳೆ .ಈ ಸಂಗಮದ ಹೆಸರು "ದೇವಪ್ರಯಾಗ". ಇಲ್ಲಿ ಗುಪ್ತಗಾಮಿನಿಯಾಗಿ ಸರಸ್ವತಿ ಸಹ ಬಂದು ಸೇರುತ್ತಾಳೆ ಎಂಬ ಪ್ರತೀತಿಯಿದೆ. ಈ ಪ್ರಯಾಗದ ನಂತರ ಅಲಕನಂದಾ ನದಿಯ ಹೆಸರು "ಗಂಗಾನದಿ" ಎಂದಾಗುತ್ತದೆ. ಅವಳೇ ಭಾರತೀಯರಿಗೆಲ್ಲ ಪರಮ ಪವಿತ್ರಳಾದ 'ಗಂಗಾಮಾತೆ'. ದೇವಪ್ರಯಾಗದಿಂದ ಮುಂದೆ ಹರಿಯುವ ಗಂಗಾ, ಋಷಿಕೇಶದ ಮೂಲಕ ಹಾದು, ಹರಿದ್ವಾರದಲ್ಲಿ ಬಯಲು ಸೇರುತ್ತಾಳೆ. ಮುಂದೆ ಯಮುನಾ ನದಿಯನ್ನು ಜೊತೆ ಸೇರಿಸಿಕೊಳ್ಳುತ್ತಾಳೆ, ಪ್ರಯಾಗರಾಜದಲ್ಲಿ (ಅಲಹಾಬಾದ್).
ಹಿಮಾಲಯದ ತಪ್ಪಲಿನಲ್ಲಿ ಅಲಕನಂದಾ ನದಿಗುಂಟ ನಿಸರ್ಗ ಸೌಂದರ್ಯ
ಇದೇ ಗರುಡ ಗಂಗಾ (ಚಿತ್ರದಲ್ಲಿ ಶಿವಲಿಂಗ್ ಚಿಕ್ಕಮಠ್ )
ಶ್ರೀ ಶಂಕರಾಚಾರ್ಯ ಗದ್ದಿ
ಶ್ರೀ ನರಸಿಂಹ ಮಂದಿರ
ಈ ಬಾಲ್ಕನಿಯ ನೇರ ಕೆಳಗೆ ವಿಷ್ಣು ಪ್ರಯಾಗ
( ಸಶೇಷ.......)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ