ಚಾರ್ ಧಾಮ ಯಾತ್ರೆ -ಭಾಗ 10
ಕಾಲ್ನಡಿಗೆಯಲ್ಲಿ ಗೌರಿಕುಂಡದತ್ತ
ದಿನಾಂಕ:-17/05/2024
ಪಿಟ್ಟೂವಿನಿಂದ ಇಳಿದು ಮೈಮುರಿದೆ. ತುಂಬಾ ಹುಮ್ಮಸ್ಸಿನಿಂದ ನಡೆಯತೊಡಗಿದೆ. ಅವನೂ ಸಹ ನನ್ನ ಜೊತೆ ನಿರಾಳವಾಗಿ ನಡೆದು ಬರುತ್ತಿದ್ದ. ಸುಮಾರು 6 ಕಿ.ಮೀ ನಡೆದ ನಂತರ ನಾನು, 'ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮುಂದೆ ಹೋಗೋಣ' ಎಂದೆ. ಕುಡಿಯುವ ನೀರಿನ ವ್ಯವಸ್ಥೆ ಇದ್ದಲ್ಲಿ ನಿಂತುಕೊಂಡೆವು. ಐದು ನಿಮಿಷದ ವಿಶ್ರಾಂತಿಯ ನಂತರ ಹೊರಟಾಗ ಅವನು ನನ್ನಲ್ಲಿ ಪಿಟ್ಟೂವನ್ನು ಏರಿ ಕುಳಿತುಕೊಳ್ಳಲು ಹೇಳಿದ. ನಾನು ದೃಢವಾಗಿ "No" ಎಂದೆ. ಮತ್ತೊಮ್ಮೆ ಈ ಬಡಪಾಯಿಗೆ ತೊಂದರೆ ಕೊಡಲು ಮನಸ್ಸಿಗೆ ತುಂಬಾ ಹಿಂಸೆಯಾಗುತ್ತಿತ್ತು. ಅವನ ಬೆನ್ನು ತಟ್ಟಿ, 'ಇಬ್ಬರೂ ಒಟ್ಟಾಗಿ ನಡೆಯೋಣ, ನಡೆ!' ಎಂದೆ. ಅವನೂ ಸಹ ಖುಷಿಯಿಂದ ಹೆಜ್ಜೆ ಹಾಕಿದ. ನಾನೇನಾದರೂ ನಡೆಯುತ್ತಾ ಪ್ರಪಾತದ ಅಂಚಿಗೆ ಹೋದೆನಾದರೆ ತಕ್ಷಣ ಅವನು ತನ್ನ ಎಡಗೈಯಿಂದ ನನ್ನನ್ನು ಒಳಗಡೆಗೆ ತಳ್ಳುತ್ತಿದ್ದ. ಅವನ ಕಾಳಜಿಯನ್ನು ಕಂಡು, ಅವನಿಗೆ ಆತಂಕ ಸೃಷ್ಟಿಸಬಾರದೆಂದು, ಸಾಧ್ಯವಾದಷ್ಟು ಸುರಕ್ಷಿತ ಜಾಗದಲ್ಲೇ ನಡೆಯುತ್ತಿದ್ದೆ.
ಹೀಗೆ ನಡೆಯುವಾಗ ಈ ಭಕ್ತ ಜನರನ್ನು ಹತ್ತಿರದಿಂದ ಗಮನಿಸಲು ಸಾಧ್ಯವಾಯಿತು. "ಹರ ಹರ ಮಹಾದೇವ್", "ಕೇದಾರ್ ಬಾಬಾ ಕಿ ಜೈ" ಎನ್ನುತ್ತಾ ಮೇಲೆ ಏರುವ ಎಲ್ಲ ವಯಸ್ಸಿನ ಭಕ್ತರನ್ನು ನೋಡಿ ಮನಸ್ಸು ಆಶ್ಚರ್ಯ ಪಡುತ್ತಿತ್ತು. ಅದರಲ್ಲೂ, ವಯಸ್ಸಾದ ಹೆಂಗಸರೂ ಸಹ,- ಕೆಲವೇ ಹೆಜ್ಜೆ ನಡೆಯುವುದು, ನಿಂತು ಸುಧಾರಿಸಿಕೊಳ್ಳುವುದು, ಮತ್ತೆ ನಡೆಯುವುದು, ನಿರಂತರವಾಗಿ ಕೇದಾರನಾಥನ ಜೈ ಜೈಕಾರ ಮಾಡುವುದು - ಈ ರೀತಿಯಲ್ಲಿ ಏರುವುದನ್ನು ನೋಡಿ, ಇದಕ್ಕೆ ಆ ಕೇದಾರನಾಥನ ಮಹಿಮೆ ಎನ್ನಬೇಕೋ, ಅಥವಾ ಮನುಷ್ಯನ ಮನಸ್ಸಿನ ಅಸೀಮ ಶಕ್ತಿಯ ನಿದರ್ಶನ ಎನ್ನಬೇಕೋ ತಿಳಿಯದಾಗಿತ್ತು ನನಗೆ.
ಸುಮಾರು ಎಂಟು - ಒಂಭತ್ತು ಕಿಲೋ ಮೀಟರ್ ನಡೆಯುವಷ್ಟರಲ್ಲಿ 'ಗೌರಿಕುಂಡ' ಬಂತು. ಇದಕ್ಕೂ ಪೂರ್ವದಲ್ಲಿ ಒಬ್ಬ ಶ್ರದ್ಧಾಳುವನ್ನು ಕಂಡೆ. ಆತನ ಎರಡೂ ಕಾಲುಗಳು ಪೋಲಿಯೋದಿಂದ ನಿಷ್ಕ್ರಿಯವಾಗಿದ್ದವು. ಕೇವಲ ಕೈಗಳು ಮತ್ತು ಪೃಷ್ಠದ ಆಧಾರದಲ್ಲಿ ಅವನು ತೆವಳುತ್ತಾ ಏರುತ್ತಿದ್ದ. "ಅರೆ! ಇನ್ನೂ 20 ಕಿಲೋಮೀಟರ್ ಗೂ ಮಿಕ್ಕಿ ಇವನು ಏರಬೇಕಲ್ಲ!" ಎಂದು ನೆನೆದಾಗ ಒಮ್ಮೆ ನನಗೆ, ನನ್ನ ಮೆದುಳು ಸ್ತಬ್ಧವಾದಂತೆ ಅನಿಸಿತು. ನಾನೂ ಸಹ ಜೋರಾಗಿ "ಜೈ ಕೇದಾರನಾಥ ಬಾಬಾ!" ಎಂದೆ. ಇಳಿಯುವಾಗ, ಅಂದರೆ ನಾನು ನಡೆಯುತ್ತಿರುವಾಗ, ನಿರಂತರವಾಗಿ ಪ್ರತಿ ಹೆಜ್ಜೆಗೂ ಕೇದಾರನಾಥನನ್ನು ಸ್ಮರಿಸುತ್ತಾ ಇಳಿಯುತ್ತಿದ್ದೆ. ಒಂದು ಲಯದಲ್ಲಿ ನಾನೇ, ಅಲ್ಲಿಯೇ ರೂಪಿಸಿಕೊಂಡ, "ಕೇದಾರನಾಥ ಓಂ ಕೇದಾರನಾಥ! ಜಯಜಯ ಶಿವಶಿವ ಕೇದಾರನಾಥಾ!" ಎಂದು ಹಾಡಿಕೊಳ್ಳುತ್ತಾ ಇಳಿಯುತ್ತಿದ್ದೆ. ಯಾವ ಚಾರಣ ನನ್ನ ಕನಸಾಗಿತ್ತೋ, ಅದನ್ನು ಏರಲು ಆಗಲಿಲ್ಲವಾದರೂ, ಅರ್ಧದಷ್ಟು ದೂರವನ್ನಾದರೂ ಇಳಿಯುತ್ತಿದ್ದೇನೆ ಎಂಬ ಸಮಾಧಾನ ಮನಸ್ಸನ್ನು ತುಂಬಿತ್ತು.
ಕೊನೆಯ ಹಂತವಾದ ಗೌರಿಕುಂಡಕ್ಕೆ ಬರುವಷ್ಟರಲ್ಲಿ ಜನಸಂದಣಿ ಮತ್ತೂ ತೀವ್ರವಾಗಿತ್ತು. ಅವರನ್ನು ನಿವಾರಿಸಿಕೊಂಡು ಮುಂದೆ ಸಾಗುವುದು ಕಷ್ಟವಾಗಿ ನಮ್ಮ ನಡಿಗೆ ನಿಧಾನವಾಯಿತು. ಮುಂದಾಕಿನಿ ನದಿಯ ಪಕ್ಕದಲ್ಲಿರುವ ಒಂದು ಬಿಸಿ ನೀರಿನ ಬಗ್ಗೆಯ ಸುತ್ತ ಒಂದು ಪುಟ್ಟ ಕೊಳ ನಿರ್ಮಾಣವಾಗಿದ್ದು ಇದನ್ನು "ಗೌರಿ ಕುಂಡ" ಎನ್ನುತ್ತಿದ್ದರು. 2013ರ ಮಹಾ ಪ್ರವಾಹದಲ್ಲಿ ಇದು ಸಂಪೂರ್ಣ ಮುಚ್ಚಿ ಹೋಗಿಬಿಟ್ಟಿದೆ. ಆದರೆ ನದಿಯಿಂದ ಸುಮಾರು 100 ಅಡಿ ಎತ್ತರದಲ್ಲಿ ಪಾರ್ವತಿ ದೇವಿಯ ಮಂದಿರವಿದೆ. ಇದನ್ನು "ಗೌರಿಕುಂಡ ಮಂದಿರ" ಎಂದೂ ಹೇಳುತ್ತಾರೆ. ಈ ಮಂದಿರದ ಎದುರುಗಡೆ ಒಂದು ಪುಟ್ಟ ಕೊಳವನ್ನು. ( ಪುಷ್ಕರಣಿ ) ನಿರ್ಮಿಸಿದ್ದಾರೆ. ಇದು ಬಿಸಿ ನೀರಿನ ಬುಗ್ಗೆಯ ಜೊತೆ ಸಂಪರ್ಕ ಹೊಂದಿದೆ. ಇದನ್ನು ಸಹ ಗೌರಿ ಕುಂಡ ಎಂತಲೇ ಎನ್ನುತ್ತಾರೆ. ಇದರೊಳಗಿನ ನೀರು ಹಿತವಾಗಿ ಬೆಚ್ಚಗಿದೆ.ಇದೇ ಸ್ಥಳದಲ್ಲಿಯೇ ಚಾರಣದ ಹಾದಿಯಲ್ಲಿ ಒಂದು ಸ್ವಾಗತ ಕಮಾನು ನಿರ್ಮಿಸಿದ್ದಾರೆ. ಏರುವಾಗ ಈ ಕಮಾನಿನ ನಂತರ ಗೌರಿಕುಂಡದ ಮಾರ್ಕೆಟ್ ಸ್ಥಳ ಸಿಗುತ್ತದೆ. ಇಲ್ಲಂತೂ ಅತಿಯಾದ ಜನದಟ್ಟಣೆ, ಒತ್ತೊತ್ತಿ ನಿಂತ ಅಂಗಡಿ ಮುಂಗಟ್ಟುಗಳು ಇದ್ದು ಇಲ್ಲಿ ಸಾಗುವಾಗ ನಡಿಗೆ ತುಂಬಾ ನಿಧಾನವಾಗುತ್ತದೆ.
ಈ ಗೌರಿ ಕುಂಡಕ್ಕೂ ಸಹ ಒಂದು ಸ್ಥಳ ಪುರಾಣವಿದೆ:- ಇಲ್ಲಿಯೇ ಪಾರ್ವತಿ ದೇವಿ ತನ್ನ ಬೆವರಿನಿಂದ ಒಬ್ಬ ಹುಡುಗನನ್ನು ಸೃಷ್ಟಿಸಿ, ಅವನನ್ನು ತಾನು ಸ್ನಾನ ಮಾಡುವ ಸ್ಥಳಕ್ಕೆ ಕಾವಲಿರಿಸಿ ಸ್ನಾನಕ್ಕೆ ಹೋಗಿದ್ದಳಂತೆ. ಅಷ್ಟರಲ್ಲಿ ಹೊರಗಡೆ ಹೋದ ಶಿವ ಬಂದಾಗ, ಆ ಹುಡುಗ ಶಿವನನ್ನು ಮುಂದಕ್ಕೆ ಹೋಗಲು ಬಿಡಲಿಲ್ಲವಂತೆ. ಕೋಪಗೊಂಡ ಶಿವ ಆ ಬಾಲಕನ ತಲೆಯನ್ನು ಕತ್ತರಿಸಿದನಂತೆ. ಅಷ್ಟರಲ್ಲಿ ಹೊರಗೆ ಬಂದ ಪಾರ್ವತಿ, ತಾನು ಸೃಷ್ಟಿಸಿದ ಮಗನ ಶಿರವನ್ನು ಶಿವ ಕತ್ತರಿಸಿದ್ದನ್ನು ಕಂಡು ತುಂಬಾ ದುಃಖಿತಳಾದಳಂತೆ. ಅವಳನ್ನು ರಮಿಸಲು, ಶಿವನು ತನ್ನ ಗಣಗಳು ತಂದ ಆನೆಯ ಶಿರವನ್ನು ಆ ಬಾಲಕನ ಮುಂಡಕ್ಕೆ ಜೋಡಿಸಿದನಂತೆ. ತನ್ಮೂಲಕ ಗಜಾನನನ ಜನ್ಮವಾಯಿತಂತೆ.
ಒಟ್ಟಿನಲ್ಲಿ ನಮ್ಮ ಪುರಾಣ ಮಹಾಕಾವ್ಯಗಳ, ವಿಶೇಷತಃ ಮಹಾಭಾರತದ, ಕಥಾವಳಿಗಳಿಗೆ ಸರಿಯಾಗಿ ಈ ದೇವಭೂಮಿಯಲ್ಲಿ ಮಹಿಮಾನ್ವಿತ ಸ್ಥಳಗಳಿವೆ. ಮನಸ್ಸು ಭ್ರಮಿಸಿ ಹೋಗುವಷ್ಟು ಸಾಮ್ಯತೆಗಳು ಗೋಚರಿಸುತ್ತವೆ. ಇದನ್ನು ಕೃತಿ ರಚನಾಕಾರನ ಚಾತುರ್ಯ ಎನ್ನಬೇಕೋ, ಅಥವಾ ವಿಶೇಷ ಶಕ್ತಿ ಸಂಪನ್ನವಾಗಿದ್ದ ಆ ಕಾಲಘಟ್ಟದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಆ ಮಹಾಕಾವ್ಯಗಳ ರಚನೆಯಾಯಿತೋ, ಒಂದೂ 'ಇದಮಿತ್ಥಂ' ಎಂದು ತಿಳಿಯದೆ "ಅಜ್ಞೇಯವೆಂದದಕೆ ಕೈಮುಗಿವ ಭಕ್ತ"ನಾಗುವುದೊಂದೇ ದಾರಿಯಾಗಿ ಕಾಣುತ್ತದೆ.
ಇಲ್ಲಿಗೆ ಬಂದು ತಲುಪುವಷ್ಟರಲ್ಲಿ ನನ್ನ ಜೊತೆ ಹೊರಟ ನಾಲ್ವರು ಮಹಿಳೆಯರು ಚದುರಿ ಹೋಗಿದ್ದರು. ಹಾಗಾಗಿ ನಾನೊಬ್ಬನೇ ಮೇಲಿನ ಪಾದಚಾರಿ ಮಾರ್ಗದಿಂದ ಕೆಳಗಿಳಿದು ಗೌರಿಕುಂಡ ದೇವಸ್ಥಾನ ಹಾಗೂ ಗೌರಿಕುಂಡವನ್ನು ನೋಡಿಕೊಂಡು ಬಂದೆ. ಪಿಟ್ಟೂವನ್ನು ಏರುವಾಗಲೇ, ಎಲ್ಲಾ ಐದು ಪಿಟ್ಟೂಗಳಿಗೆ, ಗೌರಿ ಕುಂಡದಲ್ಲಿರುವ ಟ್ಯಾಕ್ಸಿ ಸ್ಟಾಂಡಿನ ಹತ್ತಿರ ನಮ್ಮನ್ನು ಬಿಡತಕ್ಕದ್ದು ಎಂದು ತಾಕೀತು ಮಾಡಿದ್ದೆ. ದಾರಿಯಲ್ಲಿ ಎರಡನೆಯ ಟೀ ಬ್ರೇಕ್ ನಲ್ಲಿ ನನ್ನ ಪತ್ನಿ ಸರಸ್ವತಿ ಮತ್ತು ಇನ್ನೊಬ್ಬ ಮಹಿಳೆ ಸಿಕ್ಕಿದ್ದರು. ಆ ಮಹಿಳೆಗೆ ಕನ್ನಡದ ಹೊರತಾಗಿ ಬೇರೆ ಭಾಷೆ ಬರುತ್ತಿರಲಿಲ್ಲ. ಅವರ ದೇಹ ತೂಕವೂ ಸ್ವಲ್ಪ ಹೆಚ್ಚು (೮೦+ಕಿಲೋ)ಇದ್ದ ಕಾರಣ ಆ ಪಿಟ್ಟೂ ತುಂಬಾ ನಿಧಾನವಾಗಿ ಕಷ್ಟಪಟ್ಟು ಬರುತ್ತಿದ್ದ. ಹಾಗಾಗಿ ನನ್ನ ಪತ್ನಿ, ತನ್ನ ಪಿಟ್ಟೂಗೆ ಹೇಳಿ, ಸಾಧ್ಯವಾದಷ್ಟು ನಿಂತು ನಿಂತು, ಅವರನ್ನು ಜೊತೆಜೊತೆಗೆ ಕರೆದು ತರುತ್ತಿದ್ದರು. ನಮ್ಮ ಜೊತೆ ಇದ್ದ ಇನ್ನೊಬ್ಬ ಮಹಿಳೆ ಸಹ ಅದೇ ರೀತಿ ಇದ್ದರೂ ಸಹ, ಅವರನ್ನು ಹೊತ್ತುಕೊಂಡ ಪಿಟ್ಟೂ ತನ್ನ ಜೊತೆಗೆ ಇನ್ನೊಬ್ಬನನ್ನು ಸೇರಿಸಿಕೊಂಡಿದ್ದ ಕಾರಣ, ಅವರು ನಿರಂತರವಾಗಿ ನಡೆದು ಅದಾಗಲೇ ಟ್ಯಾಕ್ಸಿ ಸ್ಟ್ಯಾಂಡ್ ಸೇರಿಯಾಗಿತ್ತು. ಆದರೆ ಈ ಪಿಟ್ಟೂ ಸ್ವಲ್ಪ ದುರಾಸೆಗೆ ಬಿದ್ದ ಎನಿಸುತ್ತದೆ. ಕೊನೆಕೊನೆಗಂತೂ ಅವನು ತೀರಾ ನಿಧಾನವಾಗಿ ಬಿಟ್ಟ. ನಾವು ಮೂರು ಜನ ಟ್ಯಾಕ್ಸಿ ಸ್ಟ್ಯಾಂಡ್ ಸೇರಿದರೂ ಸಹ ನನ್ನ ಪತ್ನಿ ಮತ್ತು ಇನ್ನೊಬ್ಬರು ಬರಲೇ ಇಲ್ಲ. ನಾವು ಮೂವರು ಟ್ಯಾಕ್ಸಿ ಸ್ಟ್ಯಾಂಡಿನಲ್ಲಿ ಸುಮಾರು ಎರಡು ತಾಸು ಕಾದೆವು. ನಂತರ ನಾನು ನನ್ನ ಜೊತೆಗಿದ್ದ ಇಬ್ಬರು ಮಹಿಳಾ ಯಾತ್ರಿಗಳಿಗೆ, ಅವರು ಟ್ಯಾಕ್ಸಿ ಹಿಡಿದು ಸೋನ್ ಪ್ರಯಾಗ್ ಗೆ ಹಾಗೂ ತದನಂತರ ಸೀತಾಪುರಕ್ಕೆ ಹೋಗಿ ಅಲ್ಲಿ ನಮಗಾಗಿ ಕಾಯುತ್ತಿದ್ದ ನಿತಿನ್ ಅವರನ್ನು ಕೂಡಿಕೊಳ್ಳಲು ಸೂಚಿಸಿದೆ.
ನಾನು ಪುನಃ ಒಂದೂಕಾಲು ಕಿಲೋ ಮೀಟರ್ ಮೇಲೇರಿ ಗೌರಿಕುಂಡಕ್ಕೆ ಬಂದೆ. ಅದಾಗಲೇ ಸುಮಾರು ಹತ್ತು ಕಿಲೋಮೀಟರ್ ನಡೆದಿದ್ದರೂ ಸಹ, ನನಗಿರುವ ಒಬ್ಬಳೇ ಹೆಂಡತಿಯನ್ನು (ಪ್ರಾಣಸಖಿ) ನಾನು ಬಿಟ್ಟು ಹೋಗುವ ಹಾಗಿಲ್ಲವಲ್ಲ! ತೀರ್ಥಯಾತ್ರೆಯಾದ ಕಾರಣ ಅವರನ್ನು ಬೈದುಕೊಳ್ಳಲು ಸಹ ಆಗಲಿಲ್ಲ! ಗೌರಿಕುಂಡದ ಆ ಜನದಟ್ಟಣೆಯ ನಡುವೆ, ಈ ಮಹಿಳೆಯರಿಗಾಗಿ ಹುಡುಕುತ್ತಾ, ಎಲ್ಲಾ ಪಿಟ್ಟೂಗಳು ಯಾತ್ರಿಗಳನ್ನು ಇಳಿಸುವ ಸ್ಥಳದಲ್ಲಿ ಇವರಿಗಾಗಿ ಹುಡುಕಾಡಿದೆ. ಅಲ್ಲಿಯೂ ಇವರಿಬ್ಬರು ಇರಲಿಲ್ಲ. ಅಲ್ಲೇ ಇರುವ ಪೊಲೀಸ್ ಚೌಕಿಯಲ್ಲಿ ವಿಚಾರಿಸಿದೆ. ಒಬ್ಬ ಪೊಲೀಸ್ ಅಧಿಕಾರಿ ತಕ್ಷಣ ನನ್ನ ಜೊತೆ ಬಂದ. ನಾವಿಬ್ಬರೂ ಸೇರಿ ಮತ್ತೂ ಸ್ವಲ್ಪ ಮುಂದೆ ಹೋದೆವು. ಅಲ್ಲಿ ನನ್ನ ಪತ್ನಿ ಕುಳಿತಿದ್ದಳು! ಭಾಷೆ ಬಾರದ ಸಹಯಾತ್ರಿಗಾಗಿ ಅವಳು ಕಾದು ಕುಳಿತಿದ್ದಳು. ಬೆಳಿಗ್ಗೆ ಪಿಟ್ಟೂವಿನಲ್ಲಿ ಕೂರುವ ಮೊದಲೇ ನಮ್ಮಿಬ್ಬರ ಫೋನ್ ಅದಲಿ ಬದಲಿಯಾಗಿತ್ತು. ನನ್ನ ಫೋನ್ ನಲ್ಲಿದ್ದ ಬಿಎಸ್ಸೆನ್ನೆಲ್ ಸಿಮ್ ಗೆ ಸಂಪರ್ಕ ಸಿಗುತ್ತಿರಲಿಲ್ಲ. ಕೊನೆಗೆ ನನ್ನವಳು, ತನ್ನನ್ನು ಹೊತ್ತು ತಂದ ಪಿಟ್ಟೂವಿನ ಫೋನ್ ಮೂಲಕ ನನ್ನ ಹತ್ತಿರವಿದ್ದ ಫೋನಿಗೆ ಕನೆಕ್ಟ್ ಮಾಡಿಕೊಂಡಳು(ಜಿಯೋ ಸಿಮ್). ಆದರೆ ಅಷ್ಟರಲ್ಲಾಗಲೇ ನಾನು ಅಲ್ಲಿ ತಲುಪಿಯಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಭಾರೀ ಭಾರವನ್ನು ಇಳಿಸಿ ಆ ಪಿಟ್ಟೂ ಸಹ ಕುಳಿತುಕೊಳ್ಳುತ್ತಿದ್ದ. ನಮ್ಮ ಸಹಯಾತ್ರಿ ಸ್ವಲ್ಪವೂ ನಡೆಯಲಾರಳು ಎಂಬ ಕಾರಣಕ್ಕೆ ನಾನು ಈ ಪಿಟ್ಟೂವಿಗೆ ಅವರನ್ನು ಟ್ಯಾಕ್ಸಿಸ್ಟ್ಯಾಂಡ್ ನವರೆಗೆ ಬಿಡಲು ಹೇಳಿದೆ. ಅದು ನಾವು ಮೊದಲು ಮಾಡಿಕೊಂಡ ಕರಾರು ಸಹ ಆಗಿತ್ತು. ಆದರೆ ಈ ಪಿಟ್ಟೂ ಜಗಳ ತೆಗೆದ. ನಾನು ಅವನಿಗೆ, "ನೀನು ಈ ಮಹಿಳೆಯನ್ನು ಟ್ಯಾಕ್ಸಿ ಸ್ಟ್ಯಾಂಡ್ ವರೆಗೆ ಬಿಡದಿದ್ದರೆ ನಿನಗೆ ಹಣ ಪಾವತಿ ಮಾಡುವುದಿಲ್ಲ. ಅಲ್ಲದೆ ಪೊಲೀಸ್ ನವರಿಗೆ ಸಹ ಈ ವಿಷಯವನ್ನು ಹೇಳುತ್ತೇನೆ" ಎಂದು ಬೆದರಿಸಿದೆ. ಸ್ವಲ್ಪ ಪ್ರತಿಭಟಿಸಿದರೂ ಸಹ, ನಮ್ಮ ಹತ್ತಿರವಿದ್ದ ತನ್ನ ಐಡಿ ಕಾರ್ಡ್ ಹಾಗೂ ಕೊಡಲು ಒಪ್ಪಿಕೊಂಡ ಕೂಲಿಯನ್ನು ಪಡೆದುಕೊಳ್ಳಲು ಈ ಕೊನೆಯ ಹಂತದಲ್ಲಿ ಜಗಳವಾಡುವುದು ನಿಷ್ಪ್ರಯೋಜಕ ಎಂದು ಅವನಿಗೂ ಅನಿಸಿರಬೇಕು. ಟ್ಯಾಕ್ಸಿ ಸ್ಟ್ಯಾಂಡ್ ವರೆಗೆ ಇಳುಕಲು ದಾರಿಯಾದ್ದರಿಂದ, ಗೊಣಗುತ್ತಾ, ಅವರನ್ನು ಮತ್ತೆ ಬೆನ್ನಿಗೇರಿಸಿಕೊಂಡು ಟ್ಯಾಕ್ಸಿ ಸ್ಟಾಂಡ್ ಕಡೆ ಹೆಜ್ಜೆ ಹಾಕಿದ. ಅಲ್ಲಿ ಆ ಇಬ್ಬರು ಪಿಟ್ಟೂಗಳಿಗೂ ಅವರ ನಿಗದಿತ ಕೂಲಿಯನ್ನು ಪಾವತಿ ಮಾಡಿದ್ದಲ್ಲದೆ ಅವರ ಐಡಿ ಕಾರ್ಡುಗಳನ್ನು ಹಿಂತಿರುಗಿಸಿದೆವು.
ಟ್ಯಾಕ್ಸಿಗಳು ಬಂದು ನಿಲ್ಲುವ ಜಾಗ ತಲುಪಲು ಸಾಕಷ್ಟು ಉದ್ದದ ಸರತಿ ಸಾಲು ಇತ್ತು. ಸಾಲಿನಲ್ಲಿ ನಿಂತು, ತಕ್ಷಣಕ್ಕೆ ಸಿಕ್ಕಿದ ಟ್ಯಾಕ್ಸಿಯನ್ನು ಹಿಡಿದುಕೊಂಡು, ನಿಗದಿತ ದರವನ್ನು ಪಾವತಿಸಿ (ತಲಾ ರೂ. 50/-), ಸೋನ್ ಪ್ರಯಾಗದಲ್ಲಿ ಇಳಿಯುತ್ತಿದ್ದಂತೆ ಮಳೆ ಜಿನುಗಲು ಆರಂಭಿಸಿತು. ನಮ್ಮ ಪುಣ್ಯಕ್ಕೆ ತಕ್ಷಣ ನಿಂತಿತು ಕೂಡ. ಅಲ್ಲಿಂದ ಸೀತಾಪುರದವರೆಗಿನ ಸುಮಾರು 2 km ದೂರದ ಮಾರ್ಗ ಚೆನ್ನಾಗಿದ್ದರೂ ಸಹ ದಟ್ಟಣೆಯ ಕಾರಣದಿಂದ ಪೊಲೀಸರು ವಾಹನಗಳ ಸಂಚಾರವನ್ನು ನಿಷೇಧಿಸಿದ್ದರು. ಆದ್ದರಿಂದ ವೃದ್ಧರು, ಮಕ್ಕಳು, ಅಬಲರು, ಮಹಿಳೆಯರೆನ್ನದೆ ಎಲ್ಲರೂ ನಡೆದುಕೊಂಡೇ ಈ ಎರಡು ಕಿಲೋಮೀಟರ್ ಕ್ರಮಿಸಿ ಸೀತಾಪುರ ತಲುಪಬೇಕಾಗಿತ್ತು . ನಮ್ಮ ಜೊತೆ ಇದ್ದ ಸಹಯಾತ್ರಿ ಮಹಿಳೆಯನ್ನೂ ಸಹ ನಿಧಾನವಾಗಿ ನಡೆಸಿಕೊಂಡು, ಅಂತೂ ಇಂತೂ ಒಂದು ಗಂಟೆ ಕಾಲ ನಡೆದು, ಸೀತಾಪುರ ತಲುಪಿ, ಪಟ್ಟಣದ ಪ್ರವೇಶ ದ್ವಾರದಲ್ಲಿಯೇ ನಮಗಾಗಿ ಕಾಯುತ್ತಿದ್ದ ಶ್ರೀ ನಿತಿನ್ ಪ್ರಭುರವರನ್ನು ಕೂಡಿಕೊಂಡೆವು. ಇನ್ನು ಕ್ಯಾಂಪ್ ತಲುಪುವ ತನಕ ನಮ್ಮ ಜವಾಬ್ದಾರಿ ಮುಗಿದಂತಾಯಿತು. ಸಮಾಧಾನದ ದೀರ್ಘ ನಿಟ್ಟುಸಿರಿನೊಂದಿಗೆ ಅವರು ಸೂಚಿಸಿದ ಹೋಟೆಲಿಗೆ ಹೋಗಿ ಕುಳಿತೆವು. ಅದಾಗಲೇ 4:00 pm ಆಗಿದ್ದರೂ ಸಹ, ತುಂಬಾ ಹಸಿವು ಹಾಗೂ ದಣಿವುಗಳಿಂದ ಕಂಗೆಟ್ಟಿದ್ದ ಕಾರಣ ಮರುಮಾತಾಡದೆ ಊಟವನ್ನೇ ಮಾಡಿದೆವು. ಹಸಿವೆಗೆ ಊಟ ರುಚಿರುಚಿಯಾಗಿಯೇ ಇದ್ದಿತ್ತು. ಊಟ ಮುಗಿಸುತ್ತಿದ್ದಂತೆ ಸ್ವಲ್ಪ ಚಿಗುರಿಕೊಂಡೆವು. ನಮ್ಮ ಕರ್ನಾಟಕದವರೇ ಆದ ಶ್ರೀಯುತ ಚಿಕ್ಕಮಠ ದಂಪತಿ ಹಾಗೂ ಶ್ರೀ ನಾಗರಾಜ್ ದಂಪತಿ ಇನ್ನೂ ಬಂದು ಸೇರುವವರಿದ್ದರು. ಇಲ್ಲಿ ಒಂದು ತಾಸು ಕಾಯುವಷ್ಟರಲ್ಲಿ ಅವರೂ ಸಹ ಬಂದು ಸೇರಿದರು. ಅವರೆಲ್ಲ ಊಟ ಮುಗಿಸಿ, ನಾವೆಲ್ಲ ಅಲ್ಲಿಂದ ಹೊರಡುವಾಗ ಸಂಜೆ ಸುಮಾರು 6-30 ಆಗಿತ್ತು. ಆದರೆ ತೀವ್ರತರವಾದ ಟ್ರಾಫಿಕ್ ಜಾಮ್ ಇತ್ತು. ಎಲ್ಲವನ್ನೂ ನಿಭಾಯಿಸಿಕೊಂಡು, ಕೇವಲ 40 ಕಿ.ಮೀ ದೂರದ ಗುಪ್ತಕಾಶಿಯ 'ಕ್ಯಾಂಪ್ ನಿರ್ವಾಣ' ಸೇರಿದಾಗ ರಾತ್ರಿ 11:15 ಆಗಿತ್ತು. ವೆಂಕಟೇಶ ಪ್ರಭು ಅವರು ನಮಗಾಗಿ ಊಟವನ್ನು ಸಿದ್ಧಪಡಿಸಿ ಇಟ್ಟುಕೊಂಡು ಕಾಯುತ್ತಿದ್ದರು. ಅವರಿಗೂ ಸಹ ಎಲ್ಲ ಯಾತ್ರಿಗಳು ಮರಳಿ ಕ್ಯಾಂಪ್ ಸೇರಿದ್ದರಿಂದ ತುಂಬಾ ನಿರಾಳವಾಗಿತ್ತು.(ನಾವೇ ಕಡೆಯವರು). ಊಟ ಮುಗಿಸಿ ರೂಮ್ ಸೇರಿದೆವು. ನಾಳೆ ಬೆಳಗ್ಗೆ 2:00 ಗಂಟೆಗೆಲ್ಲ ಲಗೇಜ್ ಹೊರಗೆ ಇಡಬೇಕೆಂದು ಸೂಚಿಸಿದ್ದರಿಂದ ನಾವು ಒಂದು ಗಂಟೆಗೆಲ್ಲ ಎದ್ದು ತಯಾರಾಗಬೇಕಾಗಿತ್ತು. ಆಗಲೇ ರಾತ್ರಿ 12-00 ಗಂಟೆ ಆಗಿತ್ತು. ಆದರೂ ಸಹ ತುಂಬ ದಣಿವಾದ ಕಾರಣ ತಕ್ಷಣ ನಿದ್ರೆ ಬಂತು.
ಕೇದಾರನಾಥ ಚಾರಣದ ಹಾದಿ(ಮೇಲೆ) ಮತ್ತು ಹಾದಿಯಲ್ಲಿನ ದಟ್ಟಣೆ (ಕೆಳಗೆ )
ಗೌರಿಕುಂಡದ ಹೆಬ್ಬಾಗಿಲು
(ಸಶೇಷ.....)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ