ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಸೆಪ್ಟೆಂಬರ್ 25, 2024

ಚಾರ್ ಧಾಮ ಯಾತ್ರೆ -ಭಾಗ 13

        

ಚಾರ್ ಧಾಮ ಯಾತ್ರೆ -ಭಾಗ 13

ಮಾನಾ ಮತ್ತು ಪಾಂಡುಕೀಶ್ವರ

ದಿನಾಂಕ:-19/05/2024 

       ಸೂರ್ಯೋದಯವನ್ನು ಸವಿಯುವ ಆಸೆಯಿಂದ ಬೇಗನೆ ಎದ್ದೆವಾದರೂ ನೀಲಕಂಠ ಪರ್ವತಾಗ್ರವು ಮೋಡಗಳಿಂದ ಮುಚ್ಚಿದ್ದು ಮೋಡಗಳು ಸರಿಯಲೇ ಇಲ್ಲ. ಬೆಳಿಗ್ಗೆ 5-00 ರಿಂದ 6-00 ಗಂಟೆಯವರೆಗೆ ಕಾದರೂ ಏನೂ ಬದಲಾಗಲಿಲ್ಲ. ನಿರಾಶರಾಗಿ ಅಲ್ಲೇ ಇದ್ದ ಚಾದಂಗಡಿಯಲ್ಲಿ ಚಹಾ ಗುಟುಕರಿಸಿ ರೂಮಿನ ಕಡೆ ಸಾಗಿದೆವು. ತಕ್ಷಣ ಸ್ನಾನಾದಿಗಳನ್ನು ಮುಗಿಸಿ ಬೆಳಗಿನ ತಿಂಡಿ ತಿನ್ನಲು ಬಂದೆವು. ನಿನ್ನೆಯೇ ಬದರೀನಾರಾಯಣನ ದರ್ಶನ ಮುಗಿಸಿದ್ದು ಒಳ್ಳೆಯದೇ ಆಯಿತು. ಈ ದಿನ ಏಕಾದಶಿ ಇದ್ದ ಪ್ರಯುಕ್ತ ಜನಜಂಗುಳಿ ತುಂಬಾ ಇತ್ತು. ವಿಷ್ಣುಗಂಗಾ ನದಿಯ ದಂಡೆಯಗುಂಟ ಸರತಿಯ ಸಾಲು ಅದಾಗಲೇ 2 - 3 ಕಿಲೋಮೀಟರ ದೂರ ಸಾಗಿತ್ತು. ನಾವಿಬ್ಬರೂ ಇಲ್ಲಿನ ಮಾರ್ಕೆಟ್ಟಿಗೆ ಹೋಗಿ ಅಡ್ಡಾಡಿದೆವು. ಮೊಮ್ಮಗಳು ವೇದಾಳ ಸಲುವಾಗಿ ಉಣ್ಣೆಯ ಫ್ರಾಕ್ ಹಾಗೂ ಸ್ವೆಟರ್ ತೆಗೆದುಕೊಂಡೆವು. ಇಡೀ ಯಾತ್ರೆಯಲ್ಲಿ ನಮ್ಮ ಖರೀದಿ (ಶಾಪಿಂಗ್) ಎಂದರೆ ಇದು ಮಾತ್ರ.

         ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನವೇ ಬ್ರಹ್ಮಕಪಾಲದಲ್ಲಿ ಶ್ರಾದ್ಧ ವಿಧಿಗಳನ್ನು ನೆರವೇರಿಸಲು ಕೆಲವರು ಹೋಗಿದ್ದರು. ನಮ್ಮ ಆದಿ ಸುಬ್ರಹ್ಮಣ್ಯ ಮತ್ತು ರವಿಕುಮಾರ್ ಸಹ ಹೋಗಿದ್ದರು. ಅವರೆಲ್ಲ ಬರುವಷ್ಟರಲ್ಲಿ ಬೆಳಿಗ್ಗೆ 10.30 ಆಯಿತು. ಅವರೆಲ್ಲ ಬೆಳಗಿನ ತಿಂಡಿ ತಿಂದ ನಂತರ 11-00 ಗಂಟೆಗೆ ನಮ್ಮ ಬಸ್ ಹೊರಟಿತು. ಮಾನಾ ಗ್ರಾಮವನ್ನು ದರ್ಶಿಸಿ ನಾವು ತಿರುಗಿ ಹೋಗುವುದಿತ್ತು. ಆದರೆ, ಬದರಿಯಿಂದ ಮಾನಾಗೆ ಕೇವಲ ಮೂರು ನಾಲ್ಕು ಕಿಲೋಮೀಟರ್ ದೂರ ಮಾತ್ರವೇ ಇದ್ದರೂ, ವಾಹನಗಳ ಸಂಖ್ಯೆ ತೀರಾ ಹೆಚ್ಚಿದ್ದುದರಿಂದ ಅಲ್ಲಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಅದನ್ನು ಗಮನಿಸಿ ವೆಂಕಟೇಶ್ ಪ್ರಭು ಅವರು ಮಾನಾ ಭೆಟ್ಟಿಯನ್ನು ರದ್ದು ಮಾಡಿ, ವಾಪಸ್ ಹೋಗುವುದಾಗಿ ನಿರ್ಣಯಿಸಿ, ಅದರಂತೆ ಅಡಿಗೆ ವ್ಯಾನ್ ಅನ್ನು ಕಳಿಸಿದ್ದರು. ಆ ವ್ಯಾನ್ ಸಹ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಬಿದ್ದಿತ್ತು. ಮಾನಾ ಭೇಟಿಯನ್ನು ರದ್ದು ಮಾಡಿದ್ದು ನಮ್ಮ ಯಾತ್ರಿಗಳನ್ನು ಕೆರಳಿಸಿತು. ಈಗಾಗಲೇ ಯಮುನೋತ್ರಿ - ಗಂಗೋತ್ರಿ ಭೆಟ್ಟಿ ರದ್ದಾಗಿದ್ದು, ಈ ಮಾನಾ ಭೇಟಿಯನ್ನು, ಎಷ್ಟು ಹೊತ್ತು ಕಾದರೂ ಸರಿ, ರದ್ದುಗೊಳಿಸಲೇಬಾರದೆಂದು ವೆಂಕಟೇಶ್ ಪ್ರಭು ಅವರ ಮೇಲೆ ಒತ್ತಡ ತಂದರು. ಅವರು ಮುಂದಿನ ಪ್ರಯಾಣವನ್ನು ಗಮನದಲ್ಲಿರಿಸಿಕೊಂಡಿದ್ದ ಕಾರಣ ಈ ಒತ್ತಡದಿಂದ ತುಂಬಾ ಕಸಿವಿಸಿಗೊಂಡರು. ಮುನಿಸಿಕೊಂಡರು. ಆದರೆ ಅಂತಿಮವಾಗಿ ಒಪ್ಪಿಕೊಂಡರು. ಬಸ್ಸನ್ನು ಅಲ್ಲೇ ತಿರುಗಿಸಿ ಮತ್ತೆ ಮಾನಾ ಕಡೆ ಹೊರಟೆವು. ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಬಿದ್ದಿದ್ದ ಊಟದ ವ್ಯಾನ್ ಗೆ ಸಹ ಮಾನಾ ಕಡೆ ತಿರುಗಿ ಬರಲು ಸೂಚಿಸಿದರು.

         ರಸ್ತೆಯಲ್ಲಿ ತುಂಬಾ ರಶ್ ಇತ್ತು. ಆದರೂ ದೂರ ಕಡಿಮೆಯಿದ್ದ ಕಾರಣ 12-00 ಗಂಟೆಯ ಸುಮಾರಿಗೆ ಮಾನಾ ಗ್ರಾಮದ ಸ್ವಾಗತ ಕಮಾನಿನ ಎದುರು ವಾಹನವನ್ನು ನಿಲ್ಲಿಸಲಾಯಿತು. ಇಲ್ಲಿಂದ ಮುಂದೆ ಕಾಲ್ನಡಿಗೆಯ ಪ್ರಯಾಣ.

       ನನಗೆ ಈ ದಿನ ಜ್ವರದ ಲಕ್ಷಣ - ಚಳಿ, ತಲೆನೋವು - ಇದ್ದ ಕಾರಣ ನಾನು ನಡೆದುಕೊಂಡು ಮಾನಾ ಕಡೆ ಹೋಗಲು ಹಿಂದೇಟು ಹಾಕಿ ಬಸ್ಸಿನಲ್ಲೇ ಉಳಿದೆನು. ನನ್ನ ಪತ್ನಿ ಸಹ ನನ್ನ ಜೊತೆ ಉಳಿದಳು. ಮತ್ತೂ ಕೆಲವರು ಸಹ ಉಳಿದರು.

         ಮಾನಾ ಗ್ರಾಮ ಭಾರತ ಟಿಬೆಟ್ ಗಡಿಯ ಮೊದಲ ಗ್ರಾಮ ಅಥವಾ ಭಾರತ ದೇಶದ ಕೊನೆಯ ಗ್ರಾಮ. ಈ ಊರಿನಲ್ಲಿ ವ್ಯಾಸ ಗುಹೆ, ಗಣೇಶ ಗುಹೆಗಳಿವೆ. ಇಲ್ಲಿಯೇ ಮಹರ್ಷಿ ವ್ಯಾಸರು ಮಹಾಭಾರತವನ್ನು ಹೇಳುತ್ತಾ ಹೋದಂತೆ ಗಣಪತಿಯು ಬರೆದುಕೊಳ್ಳುತ್ತಿದ್ದನಂತೆ. ಹಾಗಾಗಿ ಈ ಊರಿಗೆ ಪೌರಾಣಿಕ ಮಹತ್ವವೂ ಇದೆ. ಪ್ರಾಚೀನ ಕಾಲದಲ್ಲಿ ಇದನ್ನು "ವ್ಯಾಸಪುರಿ" ಎನ್ನುತ್ತಿದ್ದರಂತೆ. ಇನ್ನೂ ಕೆಲವು ಐತಿಹ್ಯಗಳ ಪ್ರಕಾರ ಇದು ಕುಬೇರನ ಅಲಕಾಪುರಿ ಪಟ್ಟಣವಾಗಿತ್ತಂತೆ. (ಅಲಕನಂದಾ ನದಿಯ ಮೂಲ ಸ್ಥಾನದಲ್ಲಿ) ಇಲ್ಲಿ ಸರಸ್ವತೀ ನದಿಯ ಉಗಮವನ್ನು ನೋಡಬಹುದು. ಉಗಮ ಸ್ಥಾನದಿಂದ ಸುಮಾರು ಒಂದು ಕಿಲೋಮೀಟರ್ ದೂರ ಪ್ರಕಟವಾಗಿ ಹರಿಯುವ ಸರಸ್ವತೀ ನದಿ ನಂತರ ಭೂತಳದಲ್ಲಿ ಹರಿಯುತ್ತದೆ. ಇಲ್ಲಿ ಸರಸ್ವತೀ ನದಿಗೆ ಅಡ್ಡಲಾಗಿದ್ದ ಬೃಹತ್ ಬಂಡೆಯನ್ನು "ಭೀಮ್ ಪೂಲ್" ಎನ್ನುತ್ತಾರೆ. ಮಾನಾ ಗ್ರಾಮದ ಮಾರುಕಟ್ಟೆಯಲ್ಲಿ ಉಣ್ಣೆಯ ಬಟ್ಟೆಗಳು ವ್ಯಾಪಕವಾಗಿ ಮಾರಾಟವಾಗುತ್ತವೆ.

       ಮಾನಾ ಗ್ರಾಮವನ್ನು ನೋಡಲು ಹೋದವರು ತುಂಬಾ ಖುಷಿಯಿಂದ ವಾಪಸ್ ಬಂದರು. ಅಷ್ಟರಲ್ಲಿ ಊಟದ ವ್ಯಾನ್ ಕೂಡ ಬಂದಿತ್ತು. ಅಲ್ಲಿಯೇ ಊಟ ಮುಗಿಸಿ ವಾಪಸ್ ಹೊರಟೆವು.

        ವಾಪಸ್ ಬರುವಾಗ, ಬದರಿಯಿಂದ ಸ್ವಲ್ಪವೇ ದೂರದಲ್ಲಿ, ರಸ್ತೆಯ ಎಡಗಡೆಗೆ ಒಂದು ಗುಹಾ ದೇವಾಲಯವಿದೆ. ಇದನ್ನು 'ಏಕಾದಶಿ ಗುಹೆ' ಎನ್ನುತ್ತಾರೆ. ಭಗವಾನ್ ವಿಷ್ಣುವು ಎಲ್ಲಾ ದೇವತೆಗಳಿಗೂ ಕಂಟಕಪ್ರಾಯನಾಗಿದ್ದ "ಮುರ" ಎಂಬ ರಾಕ್ಷಸನ ಜೊತೆ ಹಲವು ವರ್ಷಗಳ ಕಾಲ ನಿರಂತರವಾಗಿ ಯುದ್ಧ ಮಾಡಿ, ದಣಿದು, ಸ್ವಲ್ಪ ವಿಶ್ರಮಿಸಿಕೊಳ್ಳಲು ಈ ಗುಹೆಯಲ್ಲಿ ಮಲಗಿದ್ದನಂತೆ. ಇದೇ ಸಮಯವನ್ನು ಸಾಧಿಸಿ ಅವನನ್ನು ಮುಗಿಸಲು 'ಮುರ' ಬಂದನಂತೆ. ಆಗ ವಿಷ್ಣುವಿನ ದೇಹದಿಂದ ಅಪೂರ್ವ ಚೆಲುವೆಯೊಬ್ಬಳು ಉದ್ಭವಿಸಿ ಮುರನೊಂದಿಗೆ ಹೋರಾಡಿದಳಂತೆ ಮತ್ತು ಅವನ ಎಲ್ಲಾ ಶಸ್ತ್ರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸಿ ಅವನನ್ನು ವಧಿಸಿದಳಂತೆ. ನಿದ್ದೆ ತಿಳಿದೆದ್ದ ವಿಷ್ಣುವು ಎದುರಿನಲ್ಲಿ ಸತ್ತು ಬಿದ್ದಿರುವ ಮುರನನ್ನು ನೋಡಿ ಆಶ್ಚರ್ಯಪಟ್ಟನಂತೆ. ಆಗ ಅವನೆದುರು ಕಾಣಿಸಿಕೊಂಡ ಆ ಸ್ತ್ರೀ, ತಾನು ಮುರನನ್ನು ಹತ್ಯೆ ಮಾಡಿರುವುದಾಗಿ ನಿವೇದಿಸಿಕೊಂಡಳಂತೆ. ಅದು ಕೃಷ್ಣಪಕ್ಷದ ಏಕಾದಶಿ ದಿನವಾಗಿತ್ತು. ಭಗವಂತ ಅವಳನ್ನು "ಏಕಾದಶೀ" ಎಂದೇ ಹೆಸರಿಸಿದ. 'ಯಾರು ಏಕಾದಶಿ ದಿನದಂದು ಉಪವಾಸವನ್ನು ಆಚರಿಸಿ, ದೇವತಾರಾಧನೆ ಮಾಡುತ್ತಾರೋ ಅವರಿಗೆ ಮೋಕ್ಷ ಸಿಗುವಂತೆ' ಅನುಗ್ರಹಿಸಬೇಕೆಂದು ಅವಳು ಕೋರಿಕೊಂಡ ವರಕ್ಕೆ "ತಥಾಸ್ತು" ಎಂದನಂತೆ. ಅಂದಿನಿಂದ ಏಕಾದಶಿ ಉಪವಾಸ ವ್ರತಾಚರಣೆ ಆರಂಭವಾಯಿತಂತೆ.

      ಧರ್ಮಕರ್ಮ ಸಂಯೋಗದಿಂದ ಈ ಏಕಾದಶಿ ಗುಹೆಗೆ ನಾವು ಭೆಟ್ಟಿ ನೀಡಿದ ದಿನ ಕೂಡ ಏಕಾದಶಿ ದಿನವೇ ಆಗಿತ್ತು! ಅಲ್ಲಿ ಸ್ವಾಮೀಜಿಯೊಬ್ಬರು ಪ್ರವಚನ ಮಾಡುತ್ತಿದ್ದರು. ನಾವು ಇಲ್ಲಿ ನಮಸ್ಕರಿಸಿ ಮುಂದೆ ಪ್ರಯಾಣಿಸಿದೆವು.

        ಇಲ್ಲಿಂದ ಮುಂದೆ ನಮ್ಮ ಬಸ್ ಪಾಂಡುಕೀಶ್ವರದಲ್ಲಿ ನಿಂತಿತು. ಪಾಂಡುಕೀಶ್ವರ ಬದರಿನಾಥದಿಂದ 16 -18 ಕಿಲೋಮೀಟರ್ ಕೆಳಭಾಗದಲ್ಲಿ, ಹೆದ್ದಾರಿಗೆ ಹೊಂದಿಕೊಂಡಂತೇ ಇದ್ದು, ಅಲಕನಂದಾ (ವಿಷ್ಣುಗಂಗಾ )ನದಿಯ ದಡದಲ್ಲಿದೆ. ಇದು ಮಹಾಭಾರತದೊಂದಿಗೆ ನಿಕಟವಾಗಿ ಬೆಸೆದುಕೊಂಡ ಸ್ಥಳ. ಇಲ್ಲಿಯೇ ಮುನಿಶಾಪಗ್ರಸ್ತನಾದ ಕುರು ದೊರೆ ಪಾಂಡುವು, ತನ್ನ ಇಬ್ಬರು ಪತ್ನಿಯರಾದ ಕುಂತಿ - ಮಾದ್ರಿಯರ ಜೊತೆ ವಾನಪ್ರಸ್ಥದಲ್ಲಿದ್ದನಂತೆ. ಇಲ್ಲಿಯೇ ಕುಂತಿ-ಮಾದ್ರಿಯರಿಗೆ, ಪಾಂಡುವಿನ ಅನುಜ್ಞೆಯಂತೆ, ವಿವಿಧ ದೇವತೆಗಳನ್ನು ಆಹ್ವಾನಿಸುವ ಮೂಲಕ, ಪಾಂಡವರೈವರ ಜನ್ಮವಾಯಿತಂತೆ. ನಂತರ ಅದೊಂದು ದುರ್ದಿನದಂದು, ನದಿಯಲ್ಲಿ ಸ್ನಾನ ಮಾಡುತ್ತಿದ್ದ ಪರಮ ರೂಪವತಿಯಾದ ಮಾದ್ರಿಯ ಸೌಂದರ್ಯಕ್ಕೆ ಮರುಳಾಗಿ, ಮೋಹಪರವಶನಾಗಿ, ಮಾದ್ರಿಯು ಬೇಡ ಬೇಡವೆಂದರೂ ಕೇಳದೆ ಪಾಂಡುವು ಅವಳನ್ನು ಸಂಗಮಿಸಲು, ಅವನ ಮರಣವಾಯಿತಂತೆ. ತನ್ನ ಕಾರಣದಿಂದಲೇ ದೊರೆಯು ತೀರಿಕೊಂಡಿದ್ದರಿಂದ, ಎಲ್ಲಾ ಐದು ಮಕ್ಕಳ ಲಾಲನೆ, ಪಾಲನೆಯ ಜವಾಬ್ದಾರಿಯನ್ನು ಕುಂತಿಗೆ ವಹಿಸಿ ಮಾದ್ರಿಯೂ ಸಹ ಗಂಡನೊಂದಿಗೆ ಸಹಗಮನ ಮಾಡಿದಳಂತೆ. ಈ ಸ್ಥಳದಲ್ಲಿ ಈ ಮೂವರೂ ವಿಷ್ಣುವಿನ ಮಂದಿರವನ್ನು ನಿರ್ಮಿಸಿ ಯೋಗ ಧ್ಯಾನಗಳಲ್ಲಿ ನಿರತವಾದ್ದರಿಂದ ಇದನ್ನು "ಯೋಗಧ್ಯಾನ ಬದರಿ" ಎಂದೂ ಕರೆಯುತ್ತಾರೆ . ಪಂಚಬದ್ರಿಗಳಲ್ಲಿ ಇದೂ ಒಂದು. ಈ ಮಂದಿರದಲ್ಲಿ ಪಾಂಡು ದೊರೆಯಿಂದ ಸ್ಥಾಪಿತವಾದ, ಹಿತ್ತಾಳೆಯ, ಯೋಗಧ್ಯಾನ ಬದ್ರಿಯ ವಿಗ್ರಹವಿದೆ. ಕಾಲಾನಂತರದಲ್ಲಿ, ತಮ್ಮ ವನವಾಸದ ಅವಧಿಯಲ್ಲಿ, ಈ ಸ್ಥಳಕ್ಕೆ ಬಂದ ಪಾಂಡವರು, ಪಾಂಡು-ಮಾದ್ರಿಯರಿಗೆ ತರ್ಪಣ ನೀಡಿದ್ದಲ್ಲದೇ, ಇದೇ ಸ್ಥಳದಲ್ಲಿ ಅರ್ಜುನನು ಇಂದ್ರನನ್ನು ಕುರಿತು ತಪಸ್ಸನ್ನು ಸಹ ಮಾಡಿದನಂತೆ. ಇದೇ ಸ್ಥಳದಲ್ಲಿ ಪಾಂಡವರು, ಯೋಗಧ್ಯಾನ ಬದ್ರಿ ಮಂದಿರದ ಪಕ್ಕದಲ್ಲಿಯೇ, ಇನ್ನೊಂದು ಮಂದಿರವನ್ನು ವಾಸುದೇವನಿಗಾಗಿ ನಿರ್ಮಿಸಿದರಂತೆ. ಈ ವಾಸುದೇವ ಮಂದಿರದ ಒಳಗಡೆ ವಾಸುದೇವ ಲಕ್ಷ್ಮಿಯರಲ್ಲದೆ ಮಾದ್ರಿಯ ವಿಗ್ರಹವೂ ಇದೆ.

         ಈ ಮಂದಿರಗಳು ಕಾಲಕಾಲಕ್ಕೆ ನವೀಕರಿಸಲ್ಪಟ್ಟಿವೆ. ಈ ಮಂದಿರದಲ್ಲಿ ಪುರಾತನ ತಾಮ್ರ ಪತ್ರಗಳು ದೊರೆತಿದ್ದು, ಸಂಸ್ಕೃತ ಭಾಷೆಯಲ್ಲಿರುವ ಅವು ಐತಿಹಾಸಿಕ ದಾಖಲೆಗಳಾಗಿ ಸಂಗ್ರಹಿತವಾಗಿವೆ. ಈಗ ಈ ಮಂದಿರಗಳು ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿವೆ. ಕ್ರಿಸ್ತಶಕ 4 - 5ನೇ ಶತಮಾನದಲ್ಲಿ ಈ ಮಂದಿರಗಳ ಪುನರ್ ನಿರ್ಮಾಣ/ ನವೀಕರಣವಾಗಿದ್ದರ ಕುರಿತ ಮಾಹಿತಿ ಈ ತಾಮ್ರಪತ್ರಗಳಲ್ಲಿ ಇದೆಯಂತೆ.

     ಮಂದಿರವನ್ನು ನೋಡಲು ಹೆದ್ದಾರಿಯಿಂದ ಕೆಳಗೆ ಇಳಿದು ಬರಬೇಕು. ಹಾಗೆ ಬರುವಾಗ ಊರ ನಡುವಿನ ಸ್ವಲ್ಪ ಇಕ್ಕಟ್ಟಾದ ಹಾದಿಯಲ್ಲಿ ಸಾಗಬೇಕು. ಆದರೆ ಊರು ಸ್ವಚ್ಛ, ಸುಂದರವಾಗಿದೆ. ಈ ಮಂದಿರಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ಸುತ್ತಲೂ ಹಿಮಾಲಯ ಪರ್ವತ ಶ್ರೇಣಿಗಳು, ಕೆಳಭಾಗದಲ್ಲಿ ಜುಳುಜುಳನೆ ಹರಿಯುವ ವಿಷ್ಣು ಗಂಗಾ ನದಿ. ಯಾತ್ರಾ ಮಾರ್ಗದರ್ಶಿ ಸ್ಥಳ ಪುರಾಣಕ್ಕೆ ಸಂಬಂಧಪಟ್ಟ ಕಥೆಗಳನ್ನು ಹೇಳುತ್ತಿದ್ದರೆ ನಮ್ಮ ಮನಸ್ಸು ತಕ್ಷಣ ಆ ಕಾಲಕ್ಕೆ ಓಡುತ್ತದೆ. ಬಾಲ ಪಾಂಡವರು ಕಣ್ಣೆದುರು ಬರುತ್ತಾರೆ. ಕುಂತಿಯ ಪರಿಪಾಟಲು ಮನಸ್ಸನ್ನು ಹಾದು ಹೋಗುತ್ತದೆ.          ಎರಡೂ ಮಂದಿರಗಳೂ ಒಂದೇ ರೀತಿ ಕಂಡರೂ ಗೋಪುರದ (ಶಿಖರದ) ವಿನ್ಯಾಸದಲ್ಲಿ ವ್ಯತ್ಯಾಸವನ್ನು ಗಮನಿಸಬಹುದು. ಯೋಗಧ್ಯಾನ ಬದ್ರಿ ಮಂದಿರದ ದ್ವಾರದ ಮೆಟ್ಟಿಲುಗಳ ಎಡ ಭಾಗದಲ್ಲಿ ನಂದಿ ಸಹಿತನಾದ ಶಿವನ ಪುಟ್ಟ ಮಂದಿರವಿದೆ. ಇನ್ನೊಂದು ಬದಿಗೆ ಗಣೇಶನ ಪುಟ್ಟಮಂದಿರವಿದೆ. ಇಲ್ಲಿನ ಪರಿಸರ ಧ್ಯಾನಾಸಕ್ತರಿಗೆ ಅತ್ಯಂತ ಪ್ರಶಸ್ತವಾಗಿದೆ.

      ಇಲ್ಲಿ ಸಾವಧಾನವಾಗಿ ದರ್ಶನ ಮುಗಿಸಿ ಪ್ರದಕ್ಷಿಣೆ ಬಂದೆವು. ನಂತರ ಅದೇ ಮೆಟ್ಟಿಲುಗಳ ದಾರಿಯಲ್ಲಿ ಏರಿ ಹೆದ್ದಾರಿಗೆ ಬಂದೆವು. ಅಲ್ಲಿಂದ ಹೊರಟು, ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಾ, ಸಾಯಂಕಾಲ 7:00 ರ ಸುಮಾರಿಗೆ ಜ್ಯೋತಿರ್ಮಠದಲ್ಲಿ ನಿಗದಿತ ಹೋಟೆಲ್ ತಲುಪಿ, ಚಹಾ ಸೇವಿಸಿಯೇ ನಮ್ಮ ನಮ್ಮ ರೂಮುಗಳಿಗೆ ಹೋಗಿ ಸೇರಿಕೊಂಡೆವು.

      ಜ್ಯೋತಿರ್ಮಠ ತಲುಪುವಲ್ಲಿ ವಿಳಂಬವಾದ ಕಾರಣ (ದಾರಿಯಲ್ಲಿನ ಟ್ರಾಫಿಕ್ ಜಾಮ್) ಇಲ್ಲಿ ಶಂಕರ್ ಗುಫಾ, ಶಂಕರ ಮಠ ಇತ್ಯಾದಿಗಳನ್ನು ನೋಡಲು ಆಗಲಿಲ್ಲ. ರಾತ್ರಿ 9.30 ಕ್ಕೆಲ್ಲ ಊಟದ ವ್ಯವಸ್ಥೆಯಾಗಿತ್ತು. ನಾಳೆ ಬೆಳಿಗ್ಗೆ ಬೇಗನೆ ಹೊರಟು ದಾರಿಯಲ್ಲಿ ದೇವ ಪ್ರಯಾಗ ಇತ್ಯಾದಿ ದರ್ಶಿಸಿ ಹರಿದ್ವಾರ ತಲುಪಬೇಕಿದೆ.

(ವಾಚಕರು ಕ್ಷಮಿಸಬೇಕು. ಬದರಿ ಕ್ಷೇತ್ರದ ಕುರಿತು ಮಾಹಿತಿ ನೀಡುವ ಒಂದು ಪುಟ್ಟ ವಿಡಿಯೋವನ್ನು ಶ್ರೀ ವೆಂಕಟೇಶ ಪ್ರಭು ಅವರು ನಮ್ಮ ವಾಟ್ಸಾಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದರು. ಅದನ್ನು ನಾನು ಭಾಗ -೧೨ ರಲ್ಲಿಯೇ ತಮ್ಮೊಡನೆ ಹಂಚಿಕೊಳ್ಳಬೇಕಿತ್ತು. ಮರೆತು ಹೋಗಿತ್ತು. ಈಗ ನೀಡುತ್ತಿದ್ದೇನೆ.)


ಮೋಡಗಳ ಹಿಂದೆ ಮರೆಯಾದ ನೀಲಕಂಠ ಪರ್ವತ 

ಮಾನಾ ಗ್ರಾಮದ ಸ್ವಾಗತ ಕಮಾನು 

ವಿಷ್ಣುಗಂಗಾಗೆ ಸೇರುವ ಒಂದು ಹಿಮನದಿ 

ಪಾಂಡುಕೀಶ್ವರ (ಯೋಗಧ್ಯಾನ ಬದ್ರಿ (ಎಡ)ಮತ್ತು ವಾಸುದೇವ ಮಂದಿರ )

                           (ಸಶೇಷ ......)


ಬುಧವಾರ, ಸೆಪ್ಟೆಂಬರ್ 11, 2024

ಚಾರ್ ಧಾಮ ಯಾತ್ರೆ -ಭಾಗ 11



ಚಾರ್ ಧಾಮ ಯಾತ್ರೆ -ಭಾಗ 11

ಜ್ಯೋತಿರ್ಮಠ ಮತ್ತು ವಿಷ್ಣು ಪ್ರಯಾಗ

ದಿನಾಂಕ:-18/05/2024

         ಒಂದು ತಾಸಿನ ನಂತರ ಅಲಾರಂ ಹೊಡೆಯುತ್ತಿದ್ದಂತೆ ಎಚ್ಚರವಾಯಿತು. ಎದ್ದು ಸ್ನಾನ ಶೌಚಾದಿಗಳನ್ನು ಮುಗಿಸಿ, ಬ್ಯಾಗ್ ತಯಾರು ಮಾಡಿ ಹೊರಗಿಟ್ಟಿದ್ದಾಯ್ತು. ಬೆಳಗಿನ 2-30ಕ್ಕೆ ಚಹಾ ಸೇವನೆ ಮಾಡಿ 2-45ಕ್ಕೆಲ್ಲ ನಮ್ಮ ವಾಹನಗಳು ಬದರಿನಾಥದ ಮಾರ್ಗ ಹಿಡಿದು ಹೊರಟೇಬಿಟ್ಟಿದ್ದವು. ಗುಪ್ತಕಾಶಿಗೆ ವಿದಾಯ ಹೇಳಿದಂತಾಯಿತು.

         ಮುಂಜಾವಿನ 8-00/ 8:30ರ ಸುಮಾರಿಗೆ 'ಗರುಡಗಂಗಾ' ಎಂಬಲ್ಲಿ ಬೆಳಗಿನ ಉಪಹಾರಕ್ಕಾಗಿ ನಮ್ಮ ಮಿನಿ ಬಸ್ ನಿಂತಿತು. ಇಲ್ಲಿ ಅಲಕನಂದಾ ನದಿಯ ಉಪನದಿಯೊಂದು ಇದೆ, - ಹೆಸರು 'ಗರುಡಗಂಗಾ'. ಈ ಹೊಳೆಗೆ ಅಡ್ಡವಾಗಿ ನಿರ್ಮಿಸಿದ ಸೇತುವೆಯನ್ನು ದಾಟುವ ಮೊದಲೇ ನಮ್ಮ ವಾಹನವನ್ನು, ತಿಂಡಿ ತಿನ್ನುವ ಸಲುವಾಗಿ, ಆಯ್ಕೆ ಮಾಡಿದ ಹೋಟೆಲಿನೆದುರು ನಿಲ್ಲಿಸಿದರು. ಅಲ್ಲಿ ಇಳಿದ ನಾವೆಲ್ಲ ಸೇತುವೆ ದಾಟಿ, ಹೊಳೆಯ ಆಚೆ ದಡದಲ್ಲಿದ್ದ ದೇವಸ್ಥಾನ ಸಮುಚ್ಚಯ ತಲುಪಿದೆವು. ಇಲ್ಲಿ ಒಂದಷ್ಟು ಮೆಟ್ಟಿಲುಗಳನ್ನು ಇಳಿದಾಗ ಗಂಗಾಮಾತಾ ಮಂದಿರ, ಪುಟ್ಟದಾದ ಶಿವನ ಮಂದಿರ ಹಾಗೂ ಗರುಡ ಮಂದಿರ ಇವೆ. ಇವುಗಳ ಪಕ್ಕದಲ್ಲಿ ಇರುವ ಮೆಟ್ಟಿಲುಗಳನ್ನು ಇಳಿದು ಹೋದರೆ ಗರುಡಗಂಗಾ ಹೊಳೆ. ಈ ಝರಿಯಲ್ಲಿನ ನೀರು ಸ್ಪಟಿಕ ಶುಭ್ರವಾಗಿತ್ತು. ನೀರಿನ ತಳ ಸ್ಪಷ್ಟವಾಗಿ ಕಾಣುತ್ತಿತ್ತು. ಈ ಸ್ಥಳದ ಐತಿಹ್ಯದ ಪ್ರಕಾರ ಇಲ್ಲಿ ಗರುಡನು ವಿಷ್ಣುವಿನ ವಾಹನವಾಗುವ ಆಕಾಂಕ್ಷೆಯಿಂದ 30,000 ವರ್ಷಗಳ ಕಾಲ ತಪಸ್ಸನ್ನು ಮಾಡಿದ್ದನು. ಸುಪ್ರೀತನಾದ ವಿಷ್ಣು, ಅಲ್ಲಿಂದ ಉತ್ತರಕ್ಕಿರುವ ಬದರಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಮೂರು ದಿನ ತಪಸ್ಸನ್ನಾಚರಿಸಲು ಸೂಚಿಸಿದನು. ಅದೇ ರೀತಿ ಮಾಡಿದ ಗರುಡನಿಗೆ ಬದರಿಯಲ್ಲಿ ದರ್ಶನವಿತ್ತು ಮೋಕ್ಷ ನೀಡಿದನಂತೆ, ವಿಷ್ಣು. ಬದರಿಯಲ್ಲಿ ಗರುಡ ತಪಸ್ಸು ಮಾಡಿದ 'ಗರುಡ ಶಿಲೆ' ಅಲಕನಂದಾ ನದಿಯ ಮಧ್ಯದಲ್ಲಿದೆ.

         ಈ ಗರುಡಗಂಗಾ ನದಿಯಲ್ಲಿ ಸಿಗುವ ಶಿಲೆಯನ್ನು ಜೊತೆಯಲ್ಲಿ ಇಟ್ಟುಕೊಂಡರೆ ಸರ್ಪಭಯ ಇರುವುದಿಲ್ಲ ಎಂಬ ಪ್ರತೀತಿ ಇದೆ. ಹಾಗಾಗಿ ಯಾತ್ರಿಗಳು ಇಲ್ಲಿಂದ ಪುಟ್ಟ ಉರುಟು ಕಲ್ಲುಗಳನ್ನು ತಮ್ಮ ಮನೆಗಳಿಗೆ ಒಯ್ಯುತ್ತಾರಂತೆ. ನಮಗೆ ಈ ಮಾಹಿತಿ ಸಕಾಲದಲ್ಲಿ ಸಿಕ್ಕದೇ ಇದ್ದ ಕಾರಣ ನಾವ್ಯಾರೂ ಇಲ್ಲಿಂದ ಕಲ್ಲು ಆಯ್ದುಕೊಳ್ಳಲಿಲ್ಲ. ಆದರೆ ಗರುಡಗಂಗೆಯ ಶುದ್ಧ ಸ್ಪಟಿಕ ಜಲದಂತಹ ನೀರು ಯಾತ್ರೆಯುದ್ದಕ್ಕೂ ಮತ್ತೆಲ್ಲೂ ಕಾಣಸಿಗಲಿಲ್ಲ. ಅದೇ ಜಲವನ್ನು ತೀರ್ಥವಾಗಿ ಪ್ರೋಕ್ಷಣೆ ಮಾಡಿಕೊಂಡು, ಬೊಗಸೆಯಲ್ಲಿ ಎತ್ತಿ ಕುಡಿದೆವು ಕೂಡ. ಯಾತ್ರಿಗಳು ಇಲ್ಲಿ ತೀರ್ಥಸ್ನಾನ ಸಹ ಮಾಡುತ್ತಾರೆ. ನೀರಿನಲ್ಲಿ ಸ್ವಲ್ಪ ಸಮಯ ಕಳೆದ ನಂತರ ವಾಹನ ನಿಲ್ಲಿಸಿದ ಹೋಟೆಲಿನ ಹತ್ತಿರ ಹೋಗಿ, ಬೆಳಗಿನ ತಿಂಡಿ - ಚಹಾ ಸೇವನೆ ಮುಗಿಸಿ, ಮತ್ತೆ ಬಸ್ಸನ್ನೇರಿ, ಬೆಳಗಿನ 10:30ರ ಸುಮಾರಿಗೆ ಜ್ಯೋತಿರ್ಮಠದಲ್ಲಿನ ನರಸಿಂಹ ದೇವರ ಮಂದಿರದ ಎದುರು ಇದ್ದೆವು.

         ಜ್ಯೋತಿರ್ಮಠಕ್ಕೆ "ಜೋಶಿಮಠ" ಎಂತಲೂ ಹೇಳುತ್ತಾರೆ. ಆದರೆ ಈಗ ಜ್ಯೋತಿರ್ಮಠ ಎಂಬ ಹೆಸರನ್ನೇ ಅಧಿಕೃತಗೊಳಿಸಿರುತ್ತಾರೆ.

         ದೇವಸ್ಥಾನದ ಎದುರುಗಿನ ರಸ್ತೆ ಸ್ವಲ್ಪ ಇಕ್ಕಟ್ಟಾಗಿತ್ತು. ಇಲ್ಲಿ ನಮ್ಮನ್ನು ಇಳಿಸಿದ ವಾಹನಗಳು, ಸುಮಾರು ಅರ್ಧ ಕಿಲೋಮೀಟರ್ ಮುಂದೆ ಸಾಗಿ, ರಸ್ತೆ ಸ್ವಲ್ಪ ಅಗಲವಾಗಿರುವಲ್ಲಿ ನಿಂತವು. ನಾವು ರಸ್ತೆಯಿಂದ ಸುಮಾರು ನೂರರಷ್ಟು ಮೆಟ್ಟಿಲುಗಳನ್ನು ಇಳಿದು ದೇವಾಲಯಗಳು ಇದ್ದಲ್ಲಿಗೆ ನಡೆದೆವು. ಈ ಕಾಲುಹಾದಿಯ ಎಡಭಾಗದಲ್ಲಿ ನರಸಿಂಹ ದೇವರ ಮಂದಿರವಿದ್ದರೆ ಬಲಭಾಗದಲ್ಲಿ ವಾಸುದೇವ ಮಂದಿರವಿದೆ.

         ನಾವು ಮೊದಲು ಅತ್ಯಂತ ಶಿಸ್ತುಬದ್ಧವಾಗಿ ನಿರ್ಮಿಸಲ್ಪಟ್ಟ ಶಿಲಾದೇವಾಲಯವಾದ ನರಸಿಂಹ ದೇವರ ಮಂದಿರಕ್ಕೆ ತೆರಳಿದೆವು. ವಿಶಾಲವಾದ ಜಾಗದಲ್ಲಿ ಮಂದಿರವಿದೆ. ಈ ದೇವಾಲಯವನ್ನೇ ಜ್ಯೋತಿರ್ಮಠ ಎನ್ನುತ್ತಾರೆ. "ನರಸಿಂಹ ಬದ್ರಿ" ಎಂತಲೂ ಹೇಳುತ್ತಾರೆ.

         ಆದಿ ಶಂಕರಾಚಾರ್ಯರು ಈ ಮಂದಿರವನ್ನು ಎಂಟನೆಯ ಶತಮಾನದಲ್ಲಿ ನಿರ್ಮಿಸಿದರು ಎಂಬ ಪ್ರತೀತಿ ಇದೆ. ಅದಕ್ಕೆ ಪೂರಕವೆಂಬಂತೆ ಈ ಮಂದಿರದ ಪ್ರಾಂಗಣದಲ್ಲೇ ಶ್ರೀ ಶಂಕರಾಚಾರ್ಯರ ಗದ್ದಿ ಸಹ ಇದೆ. ಒಂದು ಪುಟ್ಟ ಕಟ್ಟಡದ ಮೊದಲ ಮಹಡಿಯಲ್ಲಿ ಈ ಗದ್ದಿ ಇದೆ, ಮತ್ತು ಅಲ್ಲಿ ಶ್ರೀ ಶಂಕರಾಚಾರ್ಯರ ಮೂರ್ತಿ ಸಹ ಇದೆ. ನಾವು ಅದನ್ನು ವೀಕ್ಷಿಸಿ, ಗೋಡೆಯ ಮೇಲೆಲ್ಲ ಬರೆದ ಅವರ ಜೀವನಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು (ಹಿಂದಿಯಲ್ಲಿ ಇದ್ದವು) ಓದಿಕೊಂಡೆವು.

         ನರಸಿಂಹ ಮಂದಿರದಲ್ಲಿ ಪುಟ್ಟದಾದ, ಪದ್ಮಾಸನ ಭಂಗಿಯಲ್ಲಿನ, ಸಾಲಿಗ್ರಾಮ ಶಿಲೆಯ ನರಸಿಂಹ ದೇವರ ವಿಗ್ರಹ ಇದೆ. ಇದನ್ನು ಉದ್ಭವಮೂರ್ತಿ ಎಂತಲೂ ಹೇಳುತ್ತಾರೆ.

         ಈ ದೇವಳದ ಕಥೆಯ ಜೊತೆ "ಭವಿಷ್ಯ ಬದ್ರಿ" ಸಹ ತಳಕು ಹಾಕಿಕೊಂಡಿದೆ. ಇಲ್ಲಿರುವ ನರಸಿಂಹ ಸ್ವಾಮಿಯ ಎಡಗೈ ತುಂಬಾ ತೆಳುವಾಗಿದೆ. ಅದು ಈಗಲೂ ಸವೆಯುತ್ತಲೇ ಇದೆಯಂತೆ! ಅದು ಸಂಪೂರ್ಣ ಕರಗಿದಾಗ, ಈಗಿರುವ ಬದರಿನಾಥಕ್ಕೆ ಹೋಗುವ ದಾರಿಯಲ್ಲಿನ ಜಯ - ವಿಜಯ ಪರ್ವತಗಳು ಭಯಂಕರ ಭೂಕುಸಿತಕ್ಕೆ ಸಿಲುಕಿ ಕುಸಿದು, ಬದರಿನಾಥನ ರಸ್ತೆ ಮುಚ್ಚಿ ಹೋಗುತ್ತದೆಯಂತೆ. ಆಗ "ಬದರಿವಿಶಾಲ" ಸ್ವಾಮಿಯು ಅದಾಗಲೇ ಸ್ಥಾಪಿತವಾಗಿರುವ ಭವಿಷ್ಯ ಬದರಿಯಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಆಗ ಭವಿಷ್ಯ ಬದ್ರಿಯೇ ಬದರಿನಾಥವಾಗುತ್ತದೆಯಂತೆ.

         ಈ ದೇವಾಲಯ ಬದರಿನಾಥ ಸ್ವಾಮಿಯ ಚಳಿಗಾಲದ ಪೀಠ ಸಹ ಆಗಿದೆ. ನರಸಿಂಹ ಸ್ವಾಮಿಯ ಪಕ್ಕ, ಇಲ್ಲಿಯ ಗರ್ಭಗುಡಿಯೊಳಗೆ, ಬದರಿನಾಥ ಸ್ವಾಮಿಯ ವಿಗ್ರಹ ಸಹ ಇದೆ. ಚಳಿಗಾಲದ ಆರು ತಿಂಗಳು ಬದರಿನಾಥದ ಅರ್ಚಕರು ಇಲ್ಲಿಯೇ ಸ್ವಾಮಿ 'ಬದರಿವಿಶಾಲ'ನನ್ನು ಪೂಜಿಸುತ್ತಾರಂತೆ. ಈ ದೇವಾಲಯದ ಪ್ರಾಂಗಣದಲ್ಲಿಯೇ ಒಂದು ತೀರ್ಥಕುಂಡವಿದ್ದು, ಸ್ನಾನ ಮಾಡಿ ಬಟ್ಟೆ ಬದಲಾಯಿಸಲು ಕೋಣೆಗಳು ಸಹ ಇವೆ. ಈ ತೀರ್ಥದ ತಣ್ಣನೆಯ ಜಲವನ್ನು ನಾವು ತೀರ್ಥವಾಗಿ ಸೇವಿಸಿ, ಪ್ರೋಕ್ಷಣೆ ಸಹ ಮಾಡಿಕೊಂಡೆವು.

         ಈ ಮಂದಿರದ ಪ್ರಾಂಗಣದಿಂದ 15 - 20 ಮೆಟ್ಟಿಲುಗಳನ್ನು ಏರಿ, ಮೊದಲು ಆಗಮಿಸಿದ ಕಾಲುದಾರಿಯಲ್ಲಿ ನಿಂತಾಗ ಎದುರುನಲ್ಲೇ ಪುರಾತನವಾದ ವಾಸುದೇವ ಮಂದಿರವಿದೆ .ಈಗ ನಾವೆಲ್ಲ ಅತ್ತ ತೆರಳೋಣವೇ?

         ಪ್ರಾಂಗಣದ ಪ್ರವೇಶದಲ್ಲೇ ಎಡಗಡೆಗೆ ಗರುಡ ಮಂದಿರವಿದೆ. ಅದನ್ನು ದರ್ಶಿಸಿ ಒಳಗೆ ಪ್ರವೇಶಿಸಿದರೆ ಅದುವೇ ವಾಸುದೇವ ಮಂದಿರ. ಕಟಿಹಾರ ವಂಶದ ರಾಜರಿಂದ 7ರಿಂದ 11ನೆಯ ಶತಮಾನದ ನಡುವೆ ನಿರ್ಮಿಸಲ್ಪಟ್ಟ ಈ ಮಂದಿರದ ಗರ್ಭಗೃಹದಲ್ಲಿ 5.50 ರಿಂದ 6 .00 ಅಡಿ ಎತ್ತರದ, ಅತ್ಯಂತ ಮನೋಹರವಾದ, ನಿಂತ ಭಂಗಿಯಲ್ಲಿರುವ ಭಗವಾನ್ ವಾಸುದೇವರ ವಿಗ್ರಹ ಇದೆ. ಶಂಖ, ಚಕ್ರ, ಗದಾ ಪಾಣಿಯಾಗಿರುವ, ಕಪ್ಪು ಸಾಲಿಗ್ರಾಮ ಶಿಲೆಯಲ್ಲಿ ನಿರ್ಮಿತವಾದ ಮೂರ್ತಿ ಇದು. ನೋಡಿದೊಡನೆ ಭಕ್ತಿ ಭಾವದಿಂದ ನತಮಸ್ತಕರಾಗುವಂತಿದೆ. ಮಂದಿರದ ಒಳಗೆ ವಿಶೇಷ ಶಕ್ತಿಯ ಕಂಪನದ ಅನುಭವ ಆಗುತ್ತದೆ.

         ಹೊರಪ್ರಾಂಗಣದಲ್ಲಿ ನೃತ್ಯಭಂಗಿಯಲ್ಲಿರುವ ಅಷ್ಟಭುಜ ಗಣೇಶನ ವಿಗ್ರಹವಿದೆ. ಈ ಮೂರ್ತಿಯಂತೂ ತುಂಬಾ ಸುಂದರವಾಗಿದೆ. ಇದಲ್ಲದೆ ಕಾಳಿ ಮಂದಿರ, ಶಿವಮಂದಿರ, ಭೈರವದೇವ ಮಂದಿರ, ನವದುರ್ಗಾ ಮಂದಿರ ಸಹ ಇವೆ. ಗೌರೀ-ಶಂಕರ ಮಂದಿರವೂ ಇದೆ. ತುಂಬಾ ಪುರಾತನವಾದ ಮಂದಿರಗಳ ಸಮುಚ್ಚಯವಿದು. ಆದರೆ ಎದುರುಗಡೆ ಇರುವ ನರಸಿಂಹ ಮಂದಿರ ಸಂಪೂರ್ಣ ನವನಿರ್ಮಾಣದಂತಿದೆ.

         ಈ ವಾಸುದೇವ ಮಂದಿರ ಸಮುಚ್ಚಯದಲ್ಲಿರುವ ಎಲ್ಲಾ ಗುಡಿಗಳನ್ನು ದರ್ಶಿಸಿ, ಅಲ್ಲಿಂದ ಹೊರಬಂದು, ನಿಧಾನವಾಗಿ ನಮ್ಮ ಬಸ್ಸುಗಳನ್ನು ನಿಲ್ಲಿಸಿದ ಸ್ಥಳದತ್ತ ನಡೆದೆವು. ಹಾಗೆ ನಡೆಯುವಾಗ ಹಿಮಾಲಯದ ಪರಿಸರದಲ್ಲಿ ಸಹಜವಾಗಿ ಬೆಳೆಯುವ ಹೂ ಗಿಡಗಳನ್ನು, ಹಣ್ಣಿನ ಮರಗಳನ್ನು ಗಮನಿಸುತ್ತಾ, ಸುತ್ತಲಿನ ಗಿರಿ- ಕಂದರ- ಶಿಖರಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗಿದೆವು.

         ಈ ಮಂದಿರಗಳಲ್ಲದೆ ಜ್ಯೋತಿರ್ಮಠದಲ್ಲಿ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ, ಚತುರಾಮ್ನಾಯ ಪೀಠಗಳಲ್ಲಿ ಒಂದಾದ ಉತ್ತರಾಮ್ನಾಯ ಪೀಠವಿದೆ( ಶಂಕರ ಮಠ ). ಈ ಶಂಕರ ಮಠದ ಹೆಸರೇ ಜ್ಯೋತಿರ್ಮಠ. ಈ ಹೆಸರೇ ಈ ಊರಿನ ಹೆಸರೂ ಕೂಡ ಆಗಿಬಿಟ್ಟಿದೆ. ಉಳಿದ ಮೂರು ಪೀಠಗಳೆಂದರೆ ದಕ್ಷಿಣದಲ್ಲಿ ಶೃಂಗೇರಿ ಪೀಠ, ಪೂರ್ವದಲ್ಲಿ ಪುರಿಯ ಗೋವರ್ಧನ ಪೀಠ, ಪಶ್ಚಿಮದಲ್ಲಿ ದ್ವಾರಕೆಯ ಶಾರದಾ ಪೀಠ.

         ಈ ಉತ್ತರಾಮ್ನಾಯ ಜ್ಯೋತಿರ್ಮಠ ಪೀಠದ ಮೊದಲ ಜಗದ್ಗುರುವಾಗಿ ಆದಿ ಶಂಕರಾಚಾರ್ಯರ ನಾಲ್ವರು ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ತೋಟಕಾಚಾರ್ಯರು  ಇದ್ದರು. ಸದ್ಯದ ಗುರುಗಳು ಸ್ವಾಮಿ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿಯವರು.

         ಈ ಶಂಕರ ಮಠ ಅತ್ಯಂತ ಹತ್ತಿರದಲ್ಲೇ ಇದ್ದರೂ ಸಹ ನಮ್ಮ ಪ್ರವಾಸದ ಪರಿಧಿಯ ಆಚೆ ಇದ್ದ ಕಾರಣ ನಾವು ಅಲ್ಲಿಗೆ ಭೇಟಿ ನೀಡಲು ಆಗಲಿಲ್ಲ.(ನಾಳೆ ಸಾಯಂಕಾಲ ನೋಡುವ ಯೋಜನೆ ಇದೆ) ಜ್ಯೋತಿರ್ಮಠದಿಂದ ಹೊರಟ ನಾವು ಮಧ್ಯಾಹ್ನದ ಊಟದ ಸಮಯಕ್ಕೆ ಸರಿಯಾಗಿ ವಿಷ್ಣು ಪ್ರಯಾಗವನ್ನು ತಲುಪಿದೆವು.

         ವಿಷ್ಣು ಪ್ರಯಾಗದಲ್ಲಿ ಎರಡು ಮಹಾಗಿರಿಗಳ ನಡುವೆ, ಅಲಕನಂದಾ ನದಿಯ ಪಕ್ಕದಲ್ಲಿಯೇ, ಏರುತ್ತಾ ಸಾಗುವ ವಾಹನ ದಾರಿ ಬದರಿನಾಥಕ್ಕೆ ಹೋಗುತ್ತದೆ. ಅಲಕನಂದಾ ನದಿಯ ಹರಿವಿಗುಂಟ ನೋಡಿದರೆ, ಇಲ್ಲಿ, ಅದಕ್ಕೆ ಎಡಗಡೆಯಿಂದ ರಭಸವಾಗಿ ಹರಿದು ಬಂದು ಸೇರುವ 'ಧೌಲಿಗಂಗಾ' ನದಿ ಇದೆ. ಇವೆರಡರ ಸಂಗಮವೇ ವಿಷ್ಣು ಪ್ರಯಾಗ! ಈ 'ಧೌಲಿಗಂಗಾ' ನದಿಗೆ, ಈ ಜಾಗಕ್ಕಿಂತಲೂ ಸ್ವಲ್ಪ ಮೇಲೆ, 'ಋಷಿಗಂಗಾ' ಎಂಬ ನದಿ ಬಂದು ಸೇರುತ್ತದೆ. ಈ ಋಷಿಗಂಗಾ ನದಿಯ ಮೇಲೆ ಒಂದು ಹೈಡೆಲ್ ಪ್ರಾಜೆಕ್ಟ್ ಇತ್ತು. ಇಲ್ಲಿ ಈಗ ಎರಡು ವರ್ಷಗಳ ಹಿಂದೆ, ಒಮ್ಮೆಲೇ ಮಿಂಚಿನಂತೆ ಕ್ಷಿಪ್ರ ಪ್ರವಾಹ ಬಂದು, ಯಾರಿಗೂ ಒಂಚೂರೂ ಅವಕಾಶ ನೀಡದಂತೆ, ಈ ಹೈಡೆಲ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಗಳೂ ಸೇರಿದಂತೆ, ನೂರಾರು ಜನ ಕೊಚ್ಚಿಕೊಂಡು ಹೋದರಂತೆ. ಅದೇ ಸಂದರ್ಭದಲ್ಲಿ, ಈ ವಿಷ್ಣು ಪ್ರಯಾಗದಲ್ಲಿ ಧೌಲಿಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಒಂದು ಸ್ಟೀಲ್ ಬ್ರಿಡ್ಜ್ ಸಹ ಹಾಳಾಗಿರುವುದನ್ನು ಈಗಲೂ ನೋಡಬಹುದು. (ಆ ಬ್ರಿಜ್ ಈಗಿರುವ ನದೀ ಪಾತ್ರಕ್ಕಿಂತ ಸುಮಾರು 40 ಅಡಿಗಳಿಗಿಂತ ಮೇಲೆ ಇದೆ. ಅಂದರೆ ಆಗ ಬಂದ ಪ್ರವಾಹದ ಭೀಕರತೆಯನ್ನು ಊಹಿಸಿಕೊಳ್ಳಬಹುದು)

         ಈ ಸ್ಥಳದಲ್ಲಿ ನಾರದ ಮಹರ್ಷಿಗಳು ದೀರ್ಘಕಾಲ ಶ್ರೀ ವಿಷ್ಣುವನ್ನು ಕುರಿತು ತಪಸ್ಸು ಮಾಡಿದ್ದರಂತೆ. ಅವರಿಗೆ ಶ್ರೀ ವಿಷ್ಣು, ತನ್ನನ್ನು ಕುರಿತು ಬದರಿ ಕ್ಷೇತ್ರದಲ್ಲಿ ಏಳು ದಿನ ತಪಸ್ಸು ಮಾಡಿದರೆ, ದರ್ಶನವಿತ್ತು, ಮೋಕ್ಷ ನೀಡುವುದಾಗಿ ಹೇಳಿದರಂತೆ. ಅದರಂತೆ ನಾರದರು ಮತ್ತೂ ಉತ್ತರಕ್ಕೆ ಇರುವ ಬದರಿ ಕ್ಷೇತ್ರಕ್ಕೆ ತೆರಳಿ, ಅಲ್ಲಿ ಅಲಕನಂದಾ ತೀರದಲ್ಲಿ ತಪಸ್ಸು ಮಾಡಿ, ಬದರೀನಾಥನನ್ನು ಒಲಿಸಿಕೊಂಡರಂತೆ. ಅಲ್ಲಿ ಅವರು ಕುಳಿತು ತಪಸ್ಸು ಮಾಡಿದ್ದರೆಂದು ಹೇಳಲಾಗುವ ನಾರದ ಶಿಲೆಯೂ ಇದೆ.

         ಇನ್ನು, ಈ "ಪಂಚ ಪ್ರಯಾಗ"ಗಳ ಕುರಿತು ಒಂದೆರಡು ಸಾಲುಗಳು ಈ ಸಂದರ್ಭದಲ್ಲಿ ಅವಶ್ಯಕ ಎನಿಸುತ್ತದೆ;- ಅಲಕನಂದಾ ನದಿಯು ಬದರಿಯಿಂದ ಹರಿಯುತ್ತಿದ್ದು ಅದು ಮುಖ್ಯ ನದಿ. ಅದಕ್ಕೆ ಗಂಗಾ ಕಣಿವೆಯಲ್ಲಿ ಇತರ ಉಪನದಿಗಳು ಸೇರಿ ಅವಳು ತನ್ನ ಗಾತ್ರವನ್ನು ಹಿರಿದಾಗಿಸಿಕೊಳ್ಳುತ್ತಾ ಸಾಗುತ್ತಾಳೆ. ಹೀಗೆ ಪ್ರತಿಯೊಂದು ಶಾಖೆ ಅಥವಾ ಉಪನದಿ ಬಂದು ಸೇರುವ ಸ್ಥಳವೇ ಪ್ರಯಾಗ. ಅಲಕನಂದಾ ನದಿಯ ಹರಿವಿಗುಂಟ ಹೊರಟಾಗ ಮೊದಲಿಗೆ ಸಿಗುವುದು ವಿಷ್ಣು ಪ್ರಯಾಗ. ವಿಶೇಷವೆಂದರೆ, ಈ ವಿಷ್ಣು ಪ್ರಯಾಗದವರೆಗೆ ಅಲಕನಂದಾ ನದಿಯನ್ನು "ವಿಷ್ಣುಗಂಗಾ" ಎಂದು ಕರೆಯುತ್ತಾರೆ. ಇಲ್ಲಿ ವಿಷ್ಣುಗಂಗಾ ನದಿಗೆ ಎಡಗಡೆಯಿಂದ ‘ಧೌಲಿಗಂಗಾ’ ನದಿ ಬಂದು ಸೇರಿ, ಇಲ್ಲಿಂದ ಮುಂದೆ ವಿಷ್ಣುಗಂಗೆಯೇ "ಅಲಕನಂದಾ" ಆಗುತ್ತಾಳೆ. ಮುಂದೆ ಸಾಗಿದ ಅಲಕನಂದಾಳಿಗೆ ಮತ್ತೆ ಎಡಗಡೆಯಿಂದ "ನಂದಾಕಿನಿ" ನದಿ ಬಂದು ಸೇರುತ್ತದೆ. ಆ ಸ್ಥಳವೇ 'ನಂದಪ್ರಯಾಗ'. ಇದು ಯಾದವ ದೊರೆ ನಂದರಾಜನ ಹೆಸರನ್ನು ಪಡೆದಿದೆ. ಇಲ್ಲಿ ಗೋಪಾಲಸ್ವಾಮಿ ಮಂದಿರವೂ ಇದೆ. (ನಾವು ಇಲ್ಲಿ ಇಳಿಯಲಿಲ್ಲ) ನಂದಾಕಿನಿಯನ್ನು ಸೇರಿಸಿಕೊಂಡು ಉಬ್ಬಿದ ಅಲಕನಂದಾ ಸ್ವಲ್ಪ ಮುಂದೆ ಸಾಗುವಷ್ಟರಲ್ಲಿ ಮತ್ತೆ ಎಡಗಡೆಯಿಂದ, ಪಿಂಡಾರ ಗ್ಲೇಸಿಯರ್ ನಿಂದ ಹರಿದು ಬಂದು ಸೇರುತ್ತಾಳೆ -'ಪಿಂಡಾರಗಂಗಾ'. ಈ ಸ್ಥಳವೇ "ಕರ್ಣ ಪ್ರಯಾಗ". ಮಹಾಭಾರತದ ಪ್ರಸಿದ್ಧ ಯೋಧ ಕರ್ಣನು ಇಲ್ಲಿ ತಪಸ್ಸನ್ನು ಆಚರಿಸಿದ್ದನಂತೆ. ಇನ್ನಷ್ಟು ಮೈ ತುಂಬಿಕೊಂಡ ಅಲಕನಂದಾ ಮುಂದೆ ಸಾಗಿ ಕೇದಾರನಾಥದಿಂದ ಹರಿದು ಬಂದು ಸೇರುವ ಮಂದಾಕಿನಿಯನ್ನು ತನ್ನ ಜೊತೆ ಕೂಡಿಸಿಕೊಂಡು ಹರಿಯುತ್ತಾಳೆ. ಇಲ್ಲಿ ಮಂದಾಕಿನಿ ಬಲಗಡೆಯಿಂದ ಬಂದು ಅಲಕನಂದಾವನ್ನು ಸೇರುತ್ತಾಳೆ. ಈ ಸ್ಥಳವೇ "ರುದ್ರಪ್ರಯಾಗ". ಈ ರುದ್ರಪ್ರಯಾಗದಲ್ಲಿ ಹಿಂದೆ ನಾರದರು ಶಿವನನ್ನು ಕುರಿತು ತಪಸ್ಸು ಮಾಡಿದಾಗ, ಶಿವನು ಅವರಿಗೆ ರುದ್ರರೂಪಿಯಾಗಿ ದರ್ಶನವಿತ್ತು, ಸಂಗೀತವನ್ನು ವರವಾಗಿ ನೀಡಿದನಂತೆ. ಈ ರುದ್ರಪ್ರಯಾಗ ಇರುವದರಿಂದ ಇಡೀ ಜಿಲ್ಲೆಗೆ 'ರುದ್ರಪ್ರಯಾಗ ಜಿಲ್ಲೆ' ಎಂದು ಹೇಳುತ್ತಾರೆ. ಇಲ್ಲಿಂದ ಗುಪ್ತಕಾಶಿಯ ಮೂಲಕ ಕೇದಾರನಾಥಯಾತ್ರೆಯಾದರೆ, ಅಲಕನಂದಾ ನದಿಯ ಹರಿವಿನ ಮೂಲದ ಕಡೆ ಹೊರಟರೆ, ಬದರಿನಾಥ ಯಾತ್ರೆ. ರುದ್ರ ಪ್ರಯಾಗದಿಂದ ಮುಂದೆ ಹರಿಯುವ ಅಲಕನಂದಾ ನದಿಗೆ ಮತ್ತೆ ಬಲಗಡೆಯಿಂದ ಬಂದು ಸೇರುತ್ತಾಳೆ "ಭಾಗೀರಥಿ". ಇವಳು ಗಂಗೋತ್ರಿಯಿಂದ ಹರಿದು ಬರುತ್ತಾಳೆ .ಈ ಸಂಗಮದ ಹೆಸರು "ದೇವಪ್ರಯಾಗ". ಇಲ್ಲಿ ಗುಪ್ತಗಾಮಿನಿಯಾಗಿ ಸರಸ್ವತಿ ಸಹ ಬಂದು ಸೇರುತ್ತಾಳೆ ಎಂಬ ಪ್ರತೀತಿಯಿದೆ. ಈ ಪ್ರಯಾಗದ ನಂತರ ಅಲಕನಂದಾ ನದಿಯ ಹೆಸರು "ಗಂಗಾನದಿ" ಎಂದಾಗುತ್ತದೆ. ಅವಳೇ ಭಾರತೀಯರಿಗೆಲ್ಲ ಪರಮ ಪವಿತ್ರಳಾದ 'ಗಂಗಾಮಾತೆ'. ದೇವಪ್ರಯಾಗದಿಂದ ಮುಂದೆ ಹರಿಯುವ ಗಂಗಾ, ಋಷಿಕೇಶದ ಮೂಲಕ ಹಾದು, ಹರಿದ್ವಾರದಲ್ಲಿ ಬಯಲು ಸೇರುತ್ತಾಳೆ. ಮುಂದೆ ಯಮುನಾ ನದಿಯನ್ನು  ಜೊತೆ ಸೇರಿಸಿಕೊಳ್ಳುತ್ತಾಳೆ, ಪ್ರಯಾಗರಾಜದಲ್ಲಿ (ಅಲಹಾಬಾದ್).


ಹಿಮಾಲಯದ ತಪ್ಪಲಿನಲ್ಲಿ ಅಲಕನಂದಾ ನದಿಗುಂಟ ನಿಸರ್ಗ ಸೌಂದರ್ಯ


ಇದೇ ಗರುಡ ಗಂಗಾ (ಚಿತ್ರದಲ್ಲಿ ಶಿವಲಿಂಗ್ ಚಿಕ್ಕಮಠ್ )




ಶ್ರೀ ಶಂಕರಾಚಾರ್ಯ ಗದ್ದಿ


ಶ್ರೀ ನರಸಿಂಹ ಮಂದಿರ




ಈ ಬಾಲ್ಕನಿಯ ನೇರ ಕೆಳಗೆ ವಿಷ್ಣು ಪ್ರಯಾಗ

( ಸಶೇಷ.......)

ಶುಕ್ರವಾರ, ಸೆಪ್ಟೆಂಬರ್ 6, 2024

ಚಾರ್ ಧಾಮ ಯಾತ್ರೆ -ಭಾಗ 10

 


ಚಾರ್ ಧಾಮ ಯಾತ್ರೆ -ಭಾಗ 10

ಕಾಲ್ನಡಿಗೆಯಲ್ಲಿ ಗೌರಿಕುಂಡದತ್ತ

ದಿನಾಂಕ:-17/05/2024


         ಪಿಟ್ಟೂವಿನಿಂದ ಇಳಿದು ಮೈಮುರಿದೆ. ತುಂಬಾ ಹುಮ್ಮಸ್ಸಿನಿಂದ ನಡೆಯತೊಡಗಿದೆ. ಅವನೂ ಸಹ ನನ್ನ ಜೊತೆ ನಿರಾಳವಾಗಿ ನಡೆದು ಬರುತ್ತಿದ್ದ. ಸುಮಾರು 6 ಕಿ.ಮೀ ನಡೆದ ನಂತರ ನಾನು, 'ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮುಂದೆ ಹೋಗೋಣ' ಎಂದೆ. ಕುಡಿಯುವ ನೀರಿನ ವ್ಯವಸ್ಥೆ ಇದ್ದಲ್ಲಿ ನಿಂತುಕೊಂಡೆವು. ಐದು ನಿಮಿಷದ ವಿಶ್ರಾಂತಿಯ ನಂತರ ಹೊರಟಾಗ ಅವನು ನನ್ನಲ್ಲಿ ಪಿಟ್ಟೂವನ್ನು ಏರಿ ಕುಳಿತುಕೊಳ್ಳಲು ಹೇಳಿದ. ನಾನು ದೃಢವಾಗಿ "No" ಎಂದೆ. ಮತ್ತೊಮ್ಮೆ ಈ ಬಡಪಾಯಿಗೆ ತೊಂದರೆ ಕೊಡಲು ಮನಸ್ಸಿಗೆ ತುಂಬಾ ಹಿಂಸೆಯಾಗುತ್ತಿತ್ತು. ಅವನ ಬೆನ್ನು ತಟ್ಟಿ, 'ಇಬ್ಬರೂ ಒಟ್ಟಾಗಿ ನಡೆಯೋಣ, ನಡೆ!' ಎಂದೆ. ಅವನೂ ಸಹ ಖುಷಿಯಿಂದ ಹೆಜ್ಜೆ ಹಾಕಿದ. ನಾನೇನಾದರೂ ನಡೆಯುತ್ತಾ ಪ್ರಪಾತದ ಅಂಚಿಗೆ ಹೋದೆನಾದರೆ ತಕ್ಷಣ ಅವನು ತನ್ನ ಎಡಗೈಯಿಂದ ನನ್ನನ್ನು ಒಳಗಡೆಗೆ ತಳ್ಳುತ್ತಿದ್ದ. ಅವನ ಕಾಳಜಿಯನ್ನು ಕಂಡು, ಅವನಿಗೆ ಆತಂಕ ಸೃಷ್ಟಿಸಬಾರದೆಂದು, ಸಾಧ್ಯವಾದಷ್ಟು ಸುರಕ್ಷಿತ ಜಾಗದಲ್ಲೇ ನಡೆಯುತ್ತಿದ್ದೆ.

         ಹೀಗೆ ನಡೆಯುವಾಗ ಈ ಭಕ್ತ ಜನರನ್ನು ಹತ್ತಿರದಿಂದ ಗಮನಿಸಲು ಸಾಧ್ಯವಾಯಿತು. "ಹರ ಹರ ಮಹಾದೇವ್", "ಕೇದಾರ್ ಬಾಬಾ ಕಿ ಜೈ" ಎನ್ನುತ್ತಾ ಮೇಲೆ ಏರುವ ಎಲ್ಲ ವಯಸ್ಸಿನ ಭಕ್ತರನ್ನು ನೋಡಿ ಮನಸ್ಸು ಆಶ್ಚರ್ಯ ಪಡುತ್ತಿತ್ತು. ಅದರಲ್ಲೂ, ವಯಸ್ಸಾದ ಹೆಂಗಸರೂ ಸಹ,- ಕೆಲವೇ ಹೆಜ್ಜೆ ನಡೆಯುವುದು, ನಿಂತು ಸುಧಾರಿಸಿಕೊಳ್ಳುವುದು, ಮತ್ತೆ ನಡೆಯುವುದು, ನಿರಂತರವಾಗಿ ಕೇದಾರನಾಥನ ಜೈ ಜೈಕಾರ ಮಾಡುವುದು - ಈ ರೀತಿಯಲ್ಲಿ ಏರುವುದನ್ನು ನೋಡಿ, ಇದಕ್ಕೆ ಆ ಕೇದಾರನಾಥನ ಮಹಿಮೆ ಎನ್ನಬೇಕೋ, ಅಥವಾ ಮನುಷ್ಯನ ಮನಸ್ಸಿನ ಅಸೀಮ ಶಕ್ತಿಯ ನಿದರ್ಶನ ಎನ್ನಬೇಕೋ ತಿಳಿಯದಾಗಿತ್ತು ನನಗೆ.

      ಸುಮಾರು ಎಂಟು - ಒಂಭತ್ತು ಕಿಲೋ ಮೀಟರ್ ನಡೆಯುವಷ್ಟರಲ್ಲಿ 'ಗೌರಿಕುಂಡ' ಬಂತು. ಇದಕ್ಕೂ ಪೂರ್ವದಲ್ಲಿ ಒಬ್ಬ ಶ್ರದ್ಧಾಳುವನ್ನು ಕಂಡೆ. ಆತನ ಎರಡೂ ಕಾಲುಗಳು ಪೋಲಿಯೋದಿಂದ ನಿಷ್ಕ್ರಿಯವಾಗಿದ್ದವು. ಕೇವಲ ಕೈಗಳು ಮತ್ತು ಪೃಷ್ಠದ ಆಧಾರದಲ್ಲಿ ಅವನು ತೆವಳುತ್ತಾ ಏರುತ್ತಿದ್ದ. "ಅರೆ! ಇನ್ನೂ 20 ಕಿಲೋಮೀಟರ್ ಗೂ ಮಿಕ್ಕಿ ಇವನು ಏರಬೇಕಲ್ಲ!" ಎಂದು ನೆನೆದಾಗ ಒಮ್ಮೆ ನನಗೆ, ನನ್ನ ಮೆದುಳು ಸ್ತಬ್ಧವಾದಂತೆ ಅನಿಸಿತು. ನಾನೂ ಸಹ ಜೋರಾಗಿ "ಜೈ ಕೇದಾರನಾಥ ಬಾಬಾ!" ಎಂದೆ. ಇಳಿಯುವಾಗ, ಅಂದರೆ ನಾನು ನಡೆಯುತ್ತಿರುವಾಗ, ನಿರಂತರವಾಗಿ ಪ್ರತಿ ಹೆಜ್ಜೆಗೂ ಕೇದಾರನಾಥನನ್ನು ಸ್ಮರಿಸುತ್ತಾ ಇಳಿಯುತ್ತಿದ್ದೆ. ಒಂದು ಲಯದಲ್ಲಿ ನಾನೇ, ಅಲ್ಲಿಯೇ ರೂಪಿಸಿಕೊಂಡ, "ಕೇದಾರನಾಥ ಓಂ ಕೇದಾರನಾಥ! ಜಯಜಯ ಶಿವಶಿವ ಕೇದಾರನಾಥಾ!" ಎಂದು ಹಾಡಿಕೊಳ್ಳುತ್ತಾ ಇಳಿಯುತ್ತಿದ್ದೆ. ಯಾವ ಚಾರಣ ನನ್ನ ಕನಸಾಗಿತ್ತೋ, ಅದನ್ನು ಏರಲು ಆಗಲಿಲ್ಲವಾದರೂ, ಅರ್ಧದಷ್ಟು ದೂರವನ್ನಾದರೂ ಇಳಿಯುತ್ತಿದ್ದೇನೆ ಎಂಬ ಸಮಾಧಾನ ಮನಸ್ಸನ್ನು ತುಂಬಿತ್ತು.

             ಕೊನೆಯ ಹಂತವಾದ ಗೌರಿಕುಂಡಕ್ಕೆ ಬರುವಷ್ಟರಲ್ಲಿ ಜನಸಂದಣಿ ಮತ್ತೂ ತೀವ್ರವಾಗಿತ್ತು. ಅವರನ್ನು ನಿವಾರಿಸಿಕೊಂಡು ಮುಂದೆ ಸಾಗುವುದು ಕಷ್ಟವಾಗಿ ನಮ್ಮ ನಡಿಗೆ ನಿಧಾನವಾಯಿತು. ಮುಂದಾಕಿನಿ ನದಿಯ ಪಕ್ಕದಲ್ಲಿರುವ ಒಂದು ಬಿಸಿ ನೀರಿನ ಬಗ್ಗೆಯ ಸುತ್ತ ಒಂದು ಪುಟ್ಟ ಕೊಳ ನಿರ್ಮಾಣವಾಗಿದ್ದು ಇದನ್ನು "ಗೌರಿ ಕುಂಡ" ಎನ್ನುತ್ತಿದ್ದರು. 2013ರ ಮಹಾ ಪ್ರವಾಹದಲ್ಲಿ ಇದು ಸಂಪೂರ್ಣ ಮುಚ್ಚಿ ಹೋಗಿಬಿಟ್ಟಿದೆ. ಆದರೆ ನದಿಯಿಂದ ಸುಮಾರು 100 ಅಡಿ ಎತ್ತರದಲ್ಲಿ ಪಾರ್ವತಿ ದೇವಿಯ ಮಂದಿರವಿದೆ. ಇದನ್ನು "ಗೌರಿಕುಂಡ ಮಂದಿರ" ಎಂದೂ ಹೇಳುತ್ತಾರೆ. ಈ ಮಂದಿರದ ಎದುರುಗಡೆ ಒಂದು ಪುಟ್ಟ ಕೊಳವನ್ನು. ( ಪುಷ್ಕರಣಿ ) ನಿರ್ಮಿಸಿದ್ದಾರೆ. ಇದು ಬಿಸಿ ನೀರಿನ ಬುಗ್ಗೆಯ ಜೊತೆ ಸಂಪರ್ಕ ಹೊಂದಿದೆ. ಇದನ್ನು ಸಹ ಗೌರಿ ಕುಂಡ ಎಂತಲೇ ಎನ್ನುತ್ತಾರೆ. ಇದರೊಳಗಿನ ನೀರು ಹಿತವಾಗಿ ಬೆಚ್ಚಗಿದೆ.ಇದೇ ಸ್ಥಳದಲ್ಲಿಯೇ ಚಾರಣದ ಹಾದಿಯಲ್ಲಿ ಒಂದು ಸ್ವಾಗತ ಕಮಾನು ನಿರ್ಮಿಸಿದ್ದಾರೆ. ಏರುವಾಗ ಈ ಕಮಾನಿನ ನಂತರ ಗೌರಿಕುಂಡದ ಮಾರ್ಕೆಟ್ ಸ್ಥಳ ಸಿಗುತ್ತದೆ. ಇಲ್ಲಂತೂ ಅತಿಯಾದ ಜನದಟ್ಟಣೆ, ಒತ್ತೊತ್ತಿ ನಿಂತ ಅಂಗಡಿ ಮುಂಗಟ್ಟುಗಳು ಇದ್ದು ಇಲ್ಲಿ ಸಾಗುವಾಗ ನಡಿಗೆ ತುಂಬಾ ನಿಧಾನವಾಗುತ್ತದೆ. 

          ಈ ಗೌರಿ ಕುಂಡಕ್ಕೂ ಸಹ ಒಂದು ಸ್ಥಳ ಪುರಾಣವಿದೆ:- ಇಲ್ಲಿಯೇ ಪಾರ್ವತಿ ದೇವಿ ತನ್ನ ಬೆವರಿನಿಂದ ಒಬ್ಬ ಹುಡುಗನನ್ನು ಸೃಷ್ಟಿಸಿ, ಅವನನ್ನು ತಾನು ಸ್ನಾನ ಮಾಡುವ ಸ್ಥಳಕ್ಕೆ ಕಾವಲಿರಿಸಿ ಸ್ನಾನಕ್ಕೆ ಹೋಗಿದ್ದಳಂತೆ. ಅಷ್ಟರಲ್ಲಿ ಹೊರಗಡೆ ಹೋದ ಶಿವ ಬಂದಾಗ, ಆ ಹುಡುಗ ಶಿವನನ್ನು ಮುಂದಕ್ಕೆ ಹೋಗಲು ಬಿಡಲಿಲ್ಲವಂತೆ. ಕೋಪಗೊಂಡ ಶಿವ ಆ ಬಾಲಕನ ತಲೆಯನ್ನು ಕತ್ತರಿಸಿದನಂತೆ. ಅಷ್ಟರಲ್ಲಿ ಹೊರಗೆ ಬಂದ ಪಾರ್ವತಿ, ತಾನು ಸೃಷ್ಟಿಸಿದ ಮಗನ ಶಿರವನ್ನು ಶಿವ ಕತ್ತರಿಸಿದ್ದನ್ನು ಕಂಡು ತುಂಬಾ ದುಃಖಿತಳಾದಳಂತೆ. ಅವಳನ್ನು ರಮಿಸಲು, ಶಿವನು ತನ್ನ ಗಣಗಳು ತಂದ ಆನೆಯ ಶಿರವನ್ನು ಆ ಬಾಲಕನ ಮುಂಡಕ್ಕೆ ಜೋಡಿಸಿದನಂತೆ. ತನ್ಮೂಲಕ ಗಜಾನನನ ಜನ್ಮವಾಯಿತಂತೆ.

         ಒಟ್ಟಿನಲ್ಲಿ ನಮ್ಮ ಪುರಾಣ ಮಹಾಕಾವ್ಯಗಳ, ವಿಶೇಷತಃ ಮಹಾಭಾರತದ, ಕಥಾವಳಿಗಳಿಗೆ ಸರಿಯಾಗಿ ಈ ದೇವಭೂಮಿಯಲ್ಲಿ ಮಹಿಮಾನ್ವಿತ ಸ್ಥಳಗಳಿವೆ. ಮನಸ್ಸು ಭ್ರಮಿಸಿ ಹೋಗುವಷ್ಟು ಸಾಮ್ಯತೆಗಳು ಗೋಚರಿಸುತ್ತವೆ. ಇದನ್ನು ಕೃತಿ ರಚನಾಕಾರನ ಚಾತುರ್ಯ ಎನ್ನಬೇಕೋ, ಅಥವಾ ವಿಶೇಷ ಶಕ್ತಿ ಸಂಪನ್ನವಾಗಿದ್ದ ಆ ಕಾಲಘಟ್ಟದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಆ ಮಹಾಕಾವ್ಯಗಳ ರಚನೆಯಾಯಿತೋ, ಒಂದೂ 'ಇದಮಿತ್ಥಂ' ಎಂದು ತಿಳಿಯದೆ "ಅಜ್ಞೇಯವೆಂದದಕೆ ಕೈಮುಗಿವ ಭಕ್ತ"ನಾಗುವುದೊಂದೇ ದಾರಿಯಾಗಿ ಕಾಣುತ್ತದೆ.

         ಇಲ್ಲಿಗೆ ಬಂದು ತಲುಪುವಷ್ಟರಲ್ಲಿ ನನ್ನ ಜೊತೆ ಹೊರಟ ನಾಲ್ವರು ಮಹಿಳೆಯರು ಚದುರಿ ಹೋಗಿದ್ದರು. ಹಾಗಾಗಿ ನಾನೊಬ್ಬನೇ ಮೇಲಿನ ಪಾದಚಾರಿ ಮಾರ್ಗದಿಂದ ಕೆಳಗಿಳಿದು ಗೌರಿಕುಂಡ ದೇವಸ್ಥಾನ ಹಾಗೂ ಗೌರಿಕುಂಡವನ್ನು ನೋಡಿಕೊಂಡು ಬಂದೆ. ಪಿಟ್ಟೂವನ್ನು ಏರುವಾಗಲೇ, ಎಲ್ಲಾ ಐದು ಪಿಟ್ಟೂಗಳಿಗೆ, ಗೌರಿ ಕುಂಡದಲ್ಲಿರುವ ಟ್ಯಾಕ್ಸಿ ಸ್ಟಾಂಡಿನ ಹತ್ತಿರ ನಮ್ಮನ್ನು ಬಿಡತಕ್ಕದ್ದು ಎಂದು ತಾಕೀತು ಮಾಡಿದ್ದೆ. ದಾರಿಯಲ್ಲಿ ಎರಡನೆಯ ಟೀ ಬ್ರೇಕ್ ನಲ್ಲಿ ನನ್ನ ಪತ್ನಿ ಸರಸ್ವತಿ ಮತ್ತು ಇನ್ನೊಬ್ಬ ಮಹಿಳೆ ಸಿಕ್ಕಿದ್ದರು. ಆ ಮಹಿಳೆಗೆ ಕನ್ನಡದ ಹೊರತಾಗಿ ಬೇರೆ ಭಾಷೆ ಬರುತ್ತಿರಲಿಲ್ಲ. ಅವರ ದೇಹ ತೂಕವೂ ಸ್ವಲ್ಪ ಹೆಚ್ಚು (೮೦+ಕಿಲೋ)ಇದ್ದ ಕಾರಣ ಆ ಪಿಟ್ಟೂ ತುಂಬಾ ನಿಧಾನವಾಗಿ ಕಷ್ಟಪಟ್ಟು ಬರುತ್ತಿದ್ದ. ಹಾಗಾಗಿ ನನ್ನ ಪತ್ನಿ, ತನ್ನ ಪಿಟ್ಟೂಗೆ ಹೇಳಿ, ಸಾಧ್ಯವಾದಷ್ಟು ನಿಂತು ನಿಂತು, ಅವರನ್ನು ಜೊತೆಜೊತೆಗೆ ಕರೆದು ತರುತ್ತಿದ್ದರು. ನಮ್ಮ ಜೊತೆ ಇದ್ದ ಇನ್ನೊಬ್ಬ ಮಹಿಳೆ ಸಹ ಅದೇ ರೀತಿ ಇದ್ದರೂ ಸಹ, ಅವರನ್ನು ಹೊತ್ತುಕೊಂಡ ಪಿಟ್ಟೂ ತನ್ನ ಜೊತೆಗೆ ಇನ್ನೊಬ್ಬನನ್ನು ಸೇರಿಸಿಕೊಂಡಿದ್ದ ಕಾರಣ, ಅವರು ನಿರಂತರವಾಗಿ ನಡೆದು ಅದಾಗಲೇ ಟ್ಯಾಕ್ಸಿ ಸ್ಟ್ಯಾಂಡ್ ಸೇರಿಯಾಗಿತ್ತು. ಆದರೆ ಈ ಪಿಟ್ಟೂ ಸ್ವಲ್ಪ ದುರಾಸೆಗೆ ಬಿದ್ದ ಎನಿಸುತ್ತದೆ. ಕೊನೆಕೊನೆಗಂತೂ ಅವನು ತೀರಾ ನಿಧಾನವಾಗಿ ಬಿಟ್ಟ. ನಾವು ಮೂರು ಜನ ಟ್ಯಾಕ್ಸಿ ಸ್ಟ್ಯಾಂಡ್ ಸೇರಿದರೂ ಸಹ ನನ್ನ ಪತ್ನಿ ಮತ್ತು ಇನ್ನೊಬ್ಬರು ಬರಲೇ ಇಲ್ಲ. ನಾವು ಮೂವರು ಟ್ಯಾಕ್ಸಿ ಸ್ಟ್ಯಾಂಡಿನಲ್ಲಿ ಸುಮಾರು ಎರಡು ತಾಸು ಕಾದೆವು. ನಂತರ ನಾನು ನನ್ನ ಜೊತೆಗಿದ್ದ ಇಬ್ಬರು ಮಹಿಳಾ ಯಾತ್ರಿಗಳಿಗೆ, ಅವರು ಟ್ಯಾಕ್ಸಿ ಹಿಡಿದು ಸೋನ್ ಪ್ರಯಾಗ್ ಗೆ ಹಾಗೂ ತದನಂತರ ಸೀತಾಪುರಕ್ಕೆ ಹೋಗಿ ಅಲ್ಲಿ ನಮಗಾಗಿ ಕಾಯುತ್ತಿದ್ದ ನಿತಿನ್ ಅವರನ್ನು ಕೂಡಿಕೊಳ್ಳಲು ಸೂಚಿಸಿದೆ.

        ನಾನು ಪುನಃ ಒಂದೂಕಾಲು ಕಿಲೋ ಮೀಟರ್ ಮೇಲೇರಿ ಗೌರಿಕುಂಡಕ್ಕೆ ಬಂದೆ. ಅದಾಗಲೇ ಸುಮಾರು ಹತ್ತು ಕಿಲೋಮೀಟರ್ ನಡೆದಿದ್ದರೂ ಸಹ, ನನಗಿರುವ ಒಬ್ಬಳೇ ಹೆಂಡತಿಯನ್ನು (ಪ್ರಾಣಸಖಿ) ನಾನು ಬಿಟ್ಟು ಹೋಗುವ ಹಾಗಿಲ್ಲವಲ್ಲ! ತೀರ್ಥಯಾತ್ರೆಯಾದ ಕಾರಣ ಅವರನ್ನು ಬೈದುಕೊಳ್ಳಲು ಸಹ ಆಗಲಿಲ್ಲ! ಗೌರಿಕುಂಡದ ಆ ಜನದಟ್ಟಣೆಯ ನಡುವೆ, ಈ ಮಹಿಳೆಯರಿಗಾಗಿ ಹುಡುಕುತ್ತಾ, ಎಲ್ಲಾ ಪಿಟ್ಟೂಗಳು ಯಾತ್ರಿಗಳನ್ನು ಇಳಿಸುವ ಸ್ಥಳದಲ್ಲಿ ಇವರಿಗಾಗಿ ಹುಡುಕಾಡಿದೆ. ಅಲ್ಲಿಯೂ ಇವರಿಬ್ಬರು ಇರಲಿಲ್ಲ. ಅಲ್ಲೇ ಇರುವ ಪೊಲೀಸ್ ಚೌಕಿಯಲ್ಲಿ ವಿಚಾರಿಸಿದೆ. ಒಬ್ಬ ಪೊಲೀಸ್ ಅಧಿಕಾರಿ ತಕ್ಷಣ ನನ್ನ ಜೊತೆ ಬಂದ. ನಾವಿಬ್ಬರೂ ಸೇರಿ ಮತ್ತೂ ಸ್ವಲ್ಪ ಮುಂದೆ ಹೋದೆವು. ಅಲ್ಲಿ ನನ್ನ ಪತ್ನಿ ಕುಳಿತಿದ್ದಳು! ಭಾಷೆ ಬಾರದ ಸಹಯಾತ್ರಿಗಾಗಿ ಅವಳು ಕಾದು ಕುಳಿತಿದ್ದಳು. ಬೆಳಿಗ್ಗೆ ಪಿಟ್ಟೂವಿನಲ್ಲಿ ಕೂರುವ ಮೊದಲೇ ನಮ್ಮಿಬ್ಬರ ಫೋನ್ ಅದಲಿ ಬದಲಿಯಾಗಿತ್ತು. ನನ್ನ ಫೋನ್ ನಲ್ಲಿದ್ದ ಬಿಎಸ್ಸೆನ್ನೆಲ್ ಸಿಮ್ ಗೆ ಸಂಪರ್ಕ ಸಿಗುತ್ತಿರಲಿಲ್ಲ. ಕೊನೆಗೆ ನನ್ನವಳು, ತನ್ನನ್ನು ಹೊತ್ತು ತಂದ ಪಿಟ್ಟೂವಿನ ಫೋನ್ ಮೂಲಕ ನನ್ನ ಹತ್ತಿರವಿದ್ದ ಫೋನಿಗೆ ಕನೆಕ್ಟ್ ಮಾಡಿಕೊಂಡಳು(ಜಿಯೋ ಸಿಮ್). ಆದರೆ ಅಷ್ಟರಲ್ಲಾಗಲೇ ನಾನು ಅಲ್ಲಿ ತಲುಪಿಯಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಭಾರೀ ಭಾರವನ್ನು ಇಳಿಸಿ ಆ ಪಿಟ್ಟೂ ಸಹ ಕುಳಿತುಕೊಳ್ಳುತ್ತಿದ್ದ. ನಮ್ಮ ಸಹಯಾತ್ರಿ ಸ್ವಲ್ಪವೂ ನಡೆಯಲಾರಳು ಎಂಬ ಕಾರಣಕ್ಕೆ ನಾನು ಈ ಪಿಟ್ಟೂವಿಗೆ ಅವರನ್ನು ಟ್ಯಾಕ್ಸಿಸ್ಟ್ಯಾಂಡ್ ನವರೆಗೆ ಬಿಡಲು ಹೇಳಿದೆ. ಅದು ನಾವು ಮೊದಲು ಮಾಡಿಕೊಂಡ ಕರಾರು ಸಹ ಆಗಿತ್ತು. ಆದರೆ ಈ ಪಿಟ್ಟೂ ಜಗಳ ತೆಗೆದ. ನಾನು ಅವನಿಗೆ, "ನೀನು ಈ ಮಹಿಳೆಯನ್ನು ಟ್ಯಾಕ್ಸಿ ಸ್ಟ್ಯಾಂಡ್ ವರೆಗೆ ಬಿಡದಿದ್ದರೆ ನಿನಗೆ ಹಣ ಪಾವತಿ ಮಾಡುವುದಿಲ್ಲ. ಅಲ್ಲದೆ ಪೊಲೀಸ್ ನವರಿಗೆ ಸಹ ಈ ವಿಷಯವನ್ನು ಹೇಳುತ್ತೇನೆ" ಎಂದು ಬೆದರಿಸಿದೆ. ಸ್ವಲ್ಪ ಪ್ರತಿಭಟಿಸಿದರೂ ಸಹ, ನಮ್ಮ ಹತ್ತಿರವಿದ್ದ ತನ್ನ ಐಡಿ ಕಾರ್ಡ್ ಹಾಗೂ ಕೊಡಲು ಒಪ್ಪಿಕೊಂಡ ಕೂಲಿಯನ್ನು ಪಡೆದುಕೊಳ್ಳಲು ಈ ಕೊನೆಯ ಹಂತದಲ್ಲಿ ಜಗಳವಾಡುವುದು ನಿಷ್ಪ್ರಯೋಜಕ ಎಂದು ಅವನಿಗೂ ಅನಿಸಿರಬೇಕು. ಟ್ಯಾಕ್ಸಿ ಸ್ಟ್ಯಾಂಡ್ ವರೆಗೆ ಇಳುಕಲು ದಾರಿಯಾದ್ದರಿಂದ, ಗೊಣಗುತ್ತಾ, ಅವರನ್ನು ಮತ್ತೆ ಬೆನ್ನಿಗೇರಿಸಿಕೊಂಡು ಟ್ಯಾಕ್ಸಿ ಸ್ಟಾಂಡ್ ಕಡೆ ಹೆಜ್ಜೆ ಹಾಕಿದ. ಅಲ್ಲಿ ಆ ಇಬ್ಬರು ಪಿಟ್ಟೂಗಳಿಗೂ ಅವರ ನಿಗದಿತ ಕೂಲಿಯನ್ನು ಪಾವತಿ ಮಾಡಿದ್ದಲ್ಲದೆ ಅವರ ಐಡಿ ಕಾರ್ಡುಗಳನ್ನು ಹಿಂತಿರುಗಿಸಿದೆವು.  

         ಟ್ಯಾಕ್ಸಿಗಳು ಬಂದು ನಿಲ್ಲುವ ಜಾಗ ತಲುಪಲು ಸಾಕಷ್ಟು ಉದ್ದದ ಸರತಿ ಸಾಲು ಇತ್ತು. ಸಾಲಿನಲ್ಲಿ ನಿಂತು, ತಕ್ಷಣಕ್ಕೆ ಸಿಕ್ಕಿದ ಟ್ಯಾಕ್ಸಿಯನ್ನು ಹಿಡಿದುಕೊಂಡು, ನಿಗದಿತ ದರವನ್ನು ಪಾವತಿಸಿ (ತಲಾ ರೂ. 50/-), ಸೋನ್ ಪ್ರಯಾಗದಲ್ಲಿ ಇಳಿಯುತ್ತಿದ್ದಂತೆ ಮಳೆ ಜಿನುಗಲು ಆರಂಭಿಸಿತು. ನಮ್ಮ ಪುಣ್ಯಕ್ಕೆ ತಕ್ಷಣ ನಿಂತಿತು ಕೂಡ. ಅಲ್ಲಿಂದ ಸೀತಾಪುರದವರೆಗಿನ ಸುಮಾರು 2 km ದೂರದ ಮಾರ್ಗ ಚೆನ್ನಾಗಿದ್ದರೂ ಸಹ ದಟ್ಟಣೆಯ ಕಾರಣದಿಂದ ಪೊಲೀಸರು ವಾಹನಗಳ ಸಂಚಾರವನ್ನು ನಿಷೇಧಿಸಿದ್ದರು. ಆದ್ದರಿಂದ ವೃದ್ಧರು, ಮಕ್ಕಳು, ಅಬಲರು, ಮಹಿಳೆಯರೆನ್ನದೆ  ಎಲ್ಲರೂ ನಡೆದುಕೊಂಡೇ ಈ ಎರಡು ಕಿಲೋಮೀಟರ್ ಕ್ರಮಿಸಿ ಸೀತಾಪುರ ತಲುಪಬೇಕಾಗಿತ್ತು . ನಮ್ಮ ಜೊತೆ ಇದ್ದ ಸಹಯಾತ್ರಿ ಮಹಿಳೆಯನ್ನೂ ಸಹ ನಿಧಾನವಾಗಿ ನಡೆಸಿಕೊಂಡು, ಅಂತೂ ಇಂತೂ ಒಂದು ಗಂಟೆ ಕಾಲ ನಡೆದು, ಸೀತಾಪುರ ತಲುಪಿ, ಪಟ್ಟಣದ ಪ್ರವೇಶ ದ್ವಾರದಲ್ಲಿಯೇ ನಮಗಾಗಿ ಕಾಯುತ್ತಿದ್ದ ಶ್ರೀ ನಿತಿನ್ ಪ್ರಭುರವರನ್ನು ಕೂಡಿಕೊಂಡೆವು. ಇನ್ನು ಕ್ಯಾಂಪ್ ತಲುಪುವ ತನಕ ನಮ್ಮ ಜವಾಬ್ದಾರಿ ಮುಗಿದಂತಾಯಿತು.  ಸಮಾಧಾನದ ದೀರ್ಘ ನಿಟ್ಟುಸಿರಿನೊಂದಿಗೆ ಅವರು ಸೂಚಿಸಿದ ಹೋಟೆಲಿಗೆ ಹೋಗಿ ಕುಳಿತೆವು. ಅದಾಗಲೇ 4:00 pm ಆಗಿದ್ದರೂ ಸಹ, ತುಂಬಾ ಹಸಿವು ಹಾಗೂ ದಣಿವುಗಳಿಂದ ಕಂಗೆಟ್ಟಿದ್ದ ಕಾರಣ ಮರುಮಾತಾಡದೆ ಊಟವನ್ನೇ ಮಾಡಿದೆವು. ಹಸಿವೆಗೆ ಊಟ ರುಚಿರುಚಿಯಾಗಿಯೇ ಇದ್ದಿತ್ತು. ಊಟ ಮುಗಿಸುತ್ತಿದ್ದಂತೆ ಸ್ವಲ್ಪ ಚಿಗುರಿಕೊಂಡೆವು. ನಮ್ಮ ಕರ್ನಾಟಕದವರೇ ಆದ ಶ್ರೀಯುತ ಚಿಕ್ಕಮಠ ದಂಪತಿ ಹಾಗೂ ಶ್ರೀ ನಾಗರಾಜ್ ದಂಪತಿ ಇನ್ನೂ ಬಂದು ಸೇರುವವರಿದ್ದರು.  ಇಲ್ಲಿ ಒಂದು ತಾಸು ಕಾಯುವಷ್ಟರಲ್ಲಿ ಅವರೂ ಸಹ ಬಂದು ಸೇರಿದರು. ಅವರೆಲ್ಲ ಊಟ ಮುಗಿಸಿ, ನಾವೆಲ್ಲ ಅಲ್ಲಿಂದ ಹೊರಡುವಾಗ ಸಂಜೆ ಸುಮಾರು 6-30 ಆಗಿತ್ತು. ಆದರೆ ತೀವ್ರತರವಾದ ಟ್ರಾಫಿಕ್ ಜಾಮ್ ಇತ್ತು. ಎಲ್ಲವನ್ನೂ ನಿಭಾಯಿಸಿಕೊಂಡು, ಕೇವಲ 40 ಕಿ.ಮೀ ದೂರದ ಗುಪ್ತಕಾಶಿಯ 'ಕ್ಯಾಂಪ್ ನಿರ್ವಾಣ' ಸೇರಿದಾಗ ರಾತ್ರಿ 11:15 ಆಗಿತ್ತು. ವೆಂಕಟೇಶ ಪ್ರಭು ಅವರು ನಮಗಾಗಿ ಊಟವನ್ನು ಸಿದ್ಧಪಡಿಸಿ ಇಟ್ಟುಕೊಂಡು ಕಾಯುತ್ತಿದ್ದರು. ಅವರಿಗೂ ಸಹ ಎಲ್ಲ ಯಾತ್ರಿಗಳು ಮರಳಿ ಕ್ಯಾಂಪ್ ಸೇರಿದ್ದರಿಂದ ತುಂಬಾ ನಿರಾಳವಾಗಿತ್ತು.(ನಾವೇ ಕಡೆಯವರು). ಊಟ ಮುಗಿಸಿ ರೂಮ್ ಸೇರಿದೆವು. ನಾಳೆ ಬೆಳಗ್ಗೆ 2:00 ಗಂಟೆಗೆಲ್ಲ ಲಗೇಜ್ ಹೊರಗೆ ಇಡಬೇಕೆಂದು ಸೂಚಿಸಿದ್ದರಿಂದ ನಾವು ಒಂದು ಗಂಟೆಗೆಲ್ಲ ಎದ್ದು ತಯಾರಾಗಬೇಕಾಗಿತ್ತು. ಆಗಲೇ ರಾತ್ರಿ 12-00 ಗಂಟೆ ಆಗಿತ್ತು. ಆದರೂ ಸಹ ತುಂಬ ದಣಿವಾದ ಕಾರಣ ತಕ್ಷಣ ನಿದ್ರೆ ಬಂತು.

    ಕೇದಾರನಾಥ ಚಾರಣದ ಹಾದಿ(ಮೇಲೆ)  ಮತ್ತು ಹಾದಿಯಲ್ಲಿನ ದಟ್ಟಣೆ (ಕೆಳಗೆ )

    ಗೌರಿಕುಂಡದ ಹೆಬ್ಬಾಗಿಲು 

                                                                                                                   ‌‌(ಸಶೇಷ.....)


ಸೋಮವಾರ, ಸೆಪ್ಟೆಂಬರ್ 2, 2024

ಚಾರ್ ಧಾಮ ಯಾತ್ರೆ -ಭಾಗ 12

 ಚಾರ್ ಧಾಮ ಯಾತ್ರೆ -ಭಾಗ 12

ವಿಷ್ಣು ಪ್ರಯಾಗ ಮತ್ತು ಬದರಿನಾಥ

ದಿನಾಂಕ:-18/05/2024 

         ವಿಷ್ಣು ಪ್ರಯಾಗದಲ್ಲಿ ಎದುರು ಬದುರಾಗಿ ಇರುವ ಎರಡು ಪರ್ವತಗಳಿಗೆ ವಿಷ್ಣುವಿನ ವೈಕುಂಠದ ದ್ವಾರಪಾಲಕರಾದ ಜಯ-ವಿಜಯರ ಹೆಸರಿನಿಂದ ಜಯ ಪರ್ವತ ಮತ್ತು ವಿಜಯ ಪರ್ವತ ಎನ್ನುತ್ತಾರೆ. ಇಲ್ಲಿ ಹೆದ್ದಾರಿಯ ಬಲಗಡೆ ಇರುವ ಸ್ವಾಗತ ಕಮಾನು ದಾಟಿ ಒಳಗೆ ಹೋದರೆ ಪುರಾತನವಾದ ವಿಷ್ಣುನಾರಾಯಣ ಮಂದಿರ ಹಾಗೂ ಶಿವನ ಭೂತನಾಥ ಮಂದಿರಗಳಿವೆ. ಈ ಭೂತನಾಥ ಮಂದಿರದ ಬಾಲ್ಕನಿಯಿಂದ ಪ್ರಯಾಗ (ಸಂಗಮ) ವೀಕ್ಷಿಸಬಹುದು. ನದೀ ಸಂಗಮ ತಲುಪಬೇಕಿದ್ದರೆ 50 - 60 ಮೆಟ್ಟಿಲು ಇಳಿದು ಕೆಳಗೆ ಸಾಗಬೇಕು. ಇಲ್ಲಿ ಬದರಿನಾಥದ ಕಡೆಯಿಂದ ಬರುವ ನದಿಗೆ 'ವಿಷ್ಣುಗಂಗೆ' ಎನ್ನುತ್ತಾರೆ. ಎಡಗಡೆಯಿಂದ ಹರಿದು ಬರುವುದು 'ಧೌಲಿಗಂಗಾ'. ಈ ವಿಷ್ಣುಗಂಗೆ ಹಾಗೂ ಧೌಲಿಗಂಗೆಯರ ಸಂಗಮವಾದ ನಂತರವೇ ನದಿಗೆ "ಅಲಕನಂದಾ" ಎನ್ನುತ್ತಾರೆ. 'ಅಲಕ' ಎಂದರೆ ಜಟೆ-ಕೂದಲು. ಶಿವನ ಜಟೆಯಿಂದ ಹೊರಬಂದ ಧಾರೆ ಈ ಅಲಕನಂದಾ.

         ಇಲ್ಲಿ ಯಾತ್ರಿಕರಿಗೆ ವಿಶ್ರಾಂತಿ ಸ್ಥಳವಿದೆ. ನಾವು ಅಲ್ಲಿಯೇ ಊಟ ಮಾಡಿದೆವು. ಇಲ್ಲಿ ನಾವು ತೀರ್ಥಯಾತ್ರಿಯಾಗಿ ಬಂದ ಉತ್ತರ ಪ್ರದೇಶ ಸರಕಾರದ ಮಾಜಿ ಮುಖ್ಯಮಂತ್ರಿ ಉಮಾಭಾರತಿಯವರನ್ನು ಭೇಟಿಯಾಗಿ ಮಾತನಾಡಿಸಿದೆವು. ಅವರು ವಯಸ್ಸಿನ ಕಾರಣದಿಂದ ಮೊದಲಿನಷ್ಟು ಉತ್ಸಾಹಿತರಾಗಿ ಕಾಣಲಿಲ್ಲ.

          ಊಟ ಮುಗಿಸಿ ವಿಷ್ಣು ಪ್ರಯಾಗದಿಂದ ಹೊರಟ ನಾವು ಜಯ - ವಿಜಯ ಪರ್ವತಗಳ ನಡುವೆ ಇದ್ದ ದಾರಿಯಲ್ಲಿ ಮೇಲೇರುತ್ತಾ ಸಾಗಿದೆವು. ದಾರಿಯಲ್ಲಿ 'ಹೇಮಕುಂಡ ಸಾಹಿಬ್' ಗೆ ಹೋಗುವ ಮಾರ್ಗ ಇತ್ತು. (18 ಕಿಮೀ ದೂರ). ಹಾಗೆಯೇ ಮುಂದೊಂದು ಕಡೆ "ವ್ಯಾಲೀ ಆಫ್ ಫ್ಲವರ್ಸ್ - ಹೂ ಕಣಿವೆ" ಕಡೆಗೆ ಹೋಗುವ ಮಾರ್ಗವಿತ್ತು. ದೂರ - 17 ಕಿಲೋಮೀಟರ್ ಎಂದು ಬರೆದಿತ್ತು. ಈ 'ಹೂ ಕಣಿವೆ'ಗೆ ಭೇಟಿ ಕೊಡುವುದು ನನ್ನ ಹಿಮಾಲಯದ ಕನಸುಗಳ ಪೈಕಿ ಒಂದು. ಆದರೆ ಅದಕ್ಕಾಗಿ ಪ್ರತ್ಯೇಕವಾಗಿ ಬರಬೇಕಾಗುತ್ತದೆ. ಈ ಯಾತ್ರೆಯಲ್ಲಿ ಅದು ಸಾಧ್ಯವಿಲ್ಲದ ಮಾತು.     

          ಮುಂದೆ ಸಾಗುತ್ತಿದ್ದಂತೆ ಬದರಿ ಕ್ಷೇತ್ರಕ್ಕೂ ಸ್ವಲ್ಪ ಮೊದಲು 'ಹನುಮಾನ್ ಛಟ್ಟಿ' ಇದೆ. ಮಹಾಭಾರತ ಕಾಲದಲ್ಲಿ ಪಾಂಡವರು ವನವಾಸ ಮಾಡುತ್ತಿದ್ದಾಗ, ತನ್ನ ಕುಟೀರದ ಮುಂದೆ ಬಂದು ಬಿದ್ದ ಸೌಗಂಧಿಕಾ ಪುಷ್ಪದ ಸೌಂದರ್ಯ ಮತ್ತು ಪರಿಮಳಕ್ಕೆ ಮನಸೋತ ದ್ರೌಪದಿಯು, ಇಂತಹ ಇನ್ನಷ್ಟು ಹೂವುಗಳನ್ನು ತಂದುಕೊಡೆಂದು ಭೀಮನಲ್ಲಿ ಕೇಳುತ್ತಾಳೆ. ತನ್ನ ಪ್ರಿಯತಮೆಯ ಮಾತನ್ನು ತಳ್ಳಿ ಹಾಕಲು ಆಗದ ಭೀಮನು ಹೂವುಗಳನ್ನು ತರಲೆಂದು ಹೊರಟಾಗ, ವೃದ್ಧ ಕಪಿಯೊಂದು, ತನ್ನ ಬಾಲವನ್ನು ದಾರಿಗಡ್ಡವಾಗಿ ಇಟ್ಟುಕೊಂಡು ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು. ಬಾಲವನ್ನು ದಾಟಿ ಹೋಗುವುದು ಶಿಷ್ಟಾಚಾರವಲ್ಲವಾದ ಕಾರಣ ಭೀಮನು, 'ತನ್ನ ಬಾಲವನ್ನು ಬದಿಗೆ ಸರಿಸಿಕೊಳ್ಳು'ವಂತೆ ಆ ಕಪಿಗೆ ಹೇಳಿದನು. "ನಾನು ವೃದ್ಧನಾದ ಕಾರಣ ಆ ಬಾಲವನ್ನು ತೆಗೆಯಲು ಸಹ ನನಗೆ ಕಷ್ಟವಾಗುತ್ತಿದೆ. ನೀನೇ ಅದನ್ನು ಬದಿಗೆ ಸರಿಸಿಕೊಂಡು ಹೋಗು" ಎಂದು ಆ ವಾನರ ಮಾರ್ನುಡಿಯಿತು. ತನ್ನ ಗದೆಯಿಂದ ಆ ಬಾಲವನ್ನು ಸರಿಸಲು ನೋಡಿದ ಭೀಮನಿಗೆ ಅದು ಆಗಲಿಲ್ಲ. ಆಗ, ತನ್ನ ಎರಡೂ ಕೈಗಳಿಂದ, ತನ್ನೆಲ್ಲ ಬಲವನ್ನು ಒಟ್ಟುಗೂಡಿಸಿ ಬಾಲವನ್ನು ಸರಿಸಲು ನೋಡಿದರೂ ಸಹ, ಬಾಲದ ಒಂದು ಕೂದಲು ಸಹ ಕೊಂಕಲಿಲ್ಲ. ತಕ್ಷಣ ಎಚ್ಚೆತ್ತುಕೊಂಡ ಭೀಮ, ತುಂಬಾ ವಿನೀತನಾಗಿ ಆ ವಾನರನಿಗೆ ನಮಸ್ಕರಿಸಿ, "ದಯವಿಟ್ಟು ನನ್ನ ಉದ್ಧಟತನವನ್ನು ಕ್ಷಮಿಸಿ, ತಮ್ಮ ಪರಿಚಯವನ್ನು ತಿಳಿಸಬೇಕು" ಎಂದು ಕೇಳಿಕೊಳ್ಳುತ್ತಾನೆ. ಆಗ ನಸುನಕ್ಕ ವಾನರ, 'ತಾನು ಶ್ರೀರಾಮ ಭಕ್ತನಾದ ಆಂಜನೇಯ' ಎಂದು ಪರಿಚಯಿಸಿಕೊಳ್ಳುತ್ತಾನೆ. "ನನ್ನಂತೆ ನೀನೂ ಸಹ ಪವನ ಪುತ್ರನಾದ ಕಾರಣ ನೀನು ನನ್ನ ತಮ್ಮನೇ ಆಗಿರುವೆ! ಮುಂದೆ ಬರಲಿರುವ ಮಹಾಭಾರತ ಯುದ್ಧದಲ್ಲಿ ನೀನು ಗೆಲ್ಲಬೇಕಿದ್ದರೆ ಈ ಅಹಂಕಾರವನ್ನು ಬದಿಗಿಡಬೇಕು" ಎಂದು ತಿಳಿಹೇಳಿ ಆಶೀರ್ವದಿಸಿದನಂತೆ. ಅಲ್ಲಿಂದ ಮೇಲ್ಗಡೆ ಕುಬೇರನ ಅಧಿಪತ್ಯದಲ್ಲಿರುವ ಕೊಳವೊಂದರಲ್ಲಿ ಈ ಸೌಗಂಧಿಕಾ ಪುಷ್ಪಗಳು ಅರಳಿ ನಿಂತಿರುತ್ತವೆ ಎಂಬುದನ್ನು ತಿಳಿಸಿ ಭೀಮನನ್ನು ಬೀಳ್ಕೊಟ್ಟನಂತೆ. ಆಂಜನೇಯನು ಆಗ ಕುಳಿತ ಸ್ಥಳವೇ ಹನುಮಾನ್ ಛಟ್ಟಿ. ಅಲ್ಲೊಂದು ಹನುಮಂತನ ಮಂದಿರವಿದೆ. ಅಲ್ಲಿ ಭಕ್ತಿಯಿಂದ ಹನುಮಂತನಿಗೆ ನಮಸ್ಕರಿಸಿ, ಮುಂದೆ ಸಾಗಿ, ಬದರಿ ಕ್ಷೇತ್ರವನ್ನು ಸೇರಿದಾಗ ಸಂಜೆ 4:00 ಗಂಟೆ ಆಗಿತ್ತು. ಅಲ್ಲಿಯ 'ಚೌಹಾಣ್ ಪ್ಯಾಲೇಸ್' ನಲ್ಲಿ ನಮಗೆ ವಾಸ್ತವ್ಯದ ಏರ್ಪಾಟು ಆಗಿತ್ತು.       

          ಮುಂದೆ ಸಾಗುವ ಮೊದಲು ಈ ಬದರಿನಾಥ ಕ್ಷೇತ್ರದ ಮಹಿಮೆಯನ್ನು ತಿಳಿದುಕೊಳ್ಳೋಣ ;-

          ಭಗವಾನ್ ವಿಷ್ಣುವು ತನ್ನ 4ನೆಯ ಅವತಾರವಾದ ನರಸಿಂಹ ಅವತಾರವನ್ನು ಸಮಾಪ್ತಿಗೊಳಿಸಿದ ನಂತರ ನರಸಿಂಹನ ಶಿರೋ ಭಾಗದಿಂದ ನಾರಾಯಣನೂ, ದೇಹದ ಭಾಗದಿಂದ ನರನೂ ಆವಿರ್ಭವಿಸಿದರಂತೆ. ಈ ನರ - ನಾರಾಯಣರು ಧರ್ಮನ ಮಕ್ಕಳು ಎಂದೂ ಹೇಳುತ್ತಾರೆ. ನರ - ನಾರಾಯಣರಿಬ್ಬರೂ ಬದರೀ ಕ್ಷೇತ್ರದಲ್ಲಿ ಸಹಸ್ರಾರು ವರ್ಷಗಳ ಕಾಲ ತಪಸ್ಸು ಮಾಡಿದರಂತೆ. ಅವರು ತಪಸ್ಸು ಮಾಡಿದ ಸ್ಥಳಗಳನ್ನು ಈಗ ನರಪರ್ವತ ಹಾಗೂ ನಾರಾಯಣ ಪರ್ವತ ಎಂದು ಗುರುತಿಸುತ್ತಾರೆ. ಬದರಿ ನಾರಾಯಣ ಮಂದಿರದ ಪಕ್ಕದಲ್ಲಿ ಇರುವುದು ನಾರಾಯಣ ಪರ್ವತವಾದರೆ, ನದಿಯ ಆಚೆ, ಎದುರುಗಡೆ ಇರುವುದು ನರ ಪರ್ವತ.

         ಭಗವಾನ್ ವಿಷ್ಣುವು ಭೂಲೋಕದಲ್ಲಿ ತಪಸ್ಸು ಮಾಡಲು ಸೂಕ್ತವಾದ ಸ್ಥಳವನ್ನು ಹುಡುಕುತ್ತಾ ಈ ಸ್ಥಳಕ್ಕೆ ಬಂದು ತಪಸ್ಸನ್ನು ಆಚರಿಸಿದನಂತೆ. ಆಗ ಅತಿಯಾದ ಚಳಿ ಹಾಗೂ ಹಿಮಪಾತದಲ್ಲಿ ಭಗವಾನ್ ನಾರಾಯಣನು ತಪಸ್ಸು ಮಾಡುವುದನ್ನು ಕಂಡು, ಮಹಾಲಕ್ಷ್ಮೀ ದೇವಿಯು ಕನಿಕರಗೊಂಡು, ಒಂದು ಬದರೀ ವೃಕ್ಷವಾಗಿ ನಿಂತು, ನಾರಾಯಣನನ್ನು ಹಿಮಪಾತದಿಂದ ರಕ್ಷಿಸಿದಳಂತೆ. ನಂತರ ತಪಸ್ಸು ತಿಳಿದೆದ್ದ ನಾರಾಯಣನು ಬದರೀ ವೃಕ್ಷವಾಗಿ ನಿಂತಿದ್ದ ಲಕ್ಷ್ಮಿಗೆ, "ಇನ್ನು ಈ ಸ್ಥಳವು ಬದರೀ ಕ್ಷೇತ್ರವೆಂದು ಹೆಸರಾಗಲಿ" ಎಂದು ವರ ನೀಡಿದನಂತೆ. ಅಂದಿನಿಂದಲೂ ಇದು ಬದರೀ ಕ್ಷೇತ್ರವಾಗಿ ನಿಂತಿದೆ. ಇಲ್ಲಿನ ಆರಾಧ್ಯ ದೈವ ಬದರೀನಾರಾಯಣ. ಇಲ್ಲಿ ನರ ಪರ್ವತ ಮತ್ತು ನಾರಾಯಣ ಪರ್ವತಗಳ ನಡುವೆ "ವಿಷ್ಣುಗಂಗಾ" ( ಅಲಕನಂದಾ)ನದಿ ಹರಿಯುತ್ತಿದ್ದು, ಇದರ ಬಲದಂಡೆಯಲ್ಲಿಯೇ ಬದರೀನಾಥನ ಮಂದಿರವಿದೆ. ಈಗಿರುವ ಮಂದಿರ ಸುಮಾರು 420 ವರ್ಷಗಳ ಹಿಂದೆ ನಿರ್ಮಿಸಿರುವಂತಹದ್ದು. ಇಲ್ಲಿ ನಾರದರು ತಪಸ್ಸು ಮಾಡಿದ 'ನಾರದ ಶಿಲೆ' ಹಾಗೂ 'ನಾರದಕುಂಡ'ವಿದೆ. ಅಂತೆಯೇ 'ಗರುಡ ಶಿಲೆ' ಹಾಗೂ 'ತಪ್ತಕುಂಡ'ವೂ ಸೇರಿ ಮೂರು ಬಿಸಿನೀರಿನ ಬಗ್ಗೆಗಳಿವೆ.

          ಶಂಕರಾಚಾರ್ಯರು ಬರುವ ಪೂರ್ವದಲ್ಲಿ ಈ ಕ್ಷೇತ್ರ ಬೌದ್ಧರ ವಶದಲ್ಲಿತ್ತು. ಗರ್ಭಗುಡಿಯಲ್ಲಿನ ನಾರಾಯಣ ವಿಗ್ರಹವನ್ನು ಅಲಕನಂದಾ ನದಿಗೆ ಎಸೆಯಲಾಗಿತ್ತು. ಶಂಕರಾಚಾರ್ಯರು ಇಲ್ಲಿನ ಬೌದ್ಧರನ್ನು ವಾದದಲ್ಲಿ ಗೆದ್ದು ವೈದಿಕ ಧರ್ಮಾಚರಣೆಯ ಪ್ರಕಾರ ಪೂಜೆ ಆಗುವಂತೆ ಮಾಡಿದರು. ನಾರದಕುಂಡದಲ್ಲಿದ್ದ ನಾರಾಯಣನ ವಿಗ್ರಹವನ್ನು ಅವರೇ ತೆಗೆದು ಮತ್ತೆ ಪ್ರತಿಷ್ಠಾಪಿಸಿದರು ಎನ್ನುತ್ತಾರೆ. ಸರಾಗವಾಗಿ ಪೂಜೆ- ಪುನಸ್ಕಾರಗಳು ನಡೆಯುವಂತೆ ಕೇರಳದ ನಂಬೂದರಿ ಬ್ರಾಹ್ಮಣರನ್ನು ಇಲ್ಲಿ ಪೂಜೆ ಮಾಡಲು ಅವರೇ ನೇಮಿಸಿದರಂತೆ.

           ನಾವೆಲ್ಲ ಬದರಿನಾಥದ 'ಚೌಹಾನ್ ಪ್ಯಾಲೇಸಿ'ನಲ್ಲಿ ನಮ್ಮ ನಮ್ಮ ರೂಮ್ ಗಳಲ್ಲಿ ಲಗೇಜ್ ಗಳನ್ನು ಇಟ್ಟು, ತಕ್ಷಣವೇ ಬದರಿನಾಥನ ದರ್ಶನಕ್ಕಾಗಿ ಹೊರಗೆ ಬಂದೆವು. ನಮ್ಮ ಪ್ರವಾಸದ ಮಾರ್ಗದರ್ಶಿಯಾದ ವೆಂಕಟೇಶ ಪ್ರಭು ಅವರು ತುಂಬಾ ಚುರುಕಾಗಿ, ನಮ್ಮನ್ನೆಲ್ಲ ಒಂದೆಡೆ ಸೇರಿಸಿ, ಪ್ರತ್ಯೇಕ ದ್ವಾರದ ಮೂಲಕ, ನೇರವಾಗಿ ಬದರೀನಾಥ ಮಂದಿರದ ಪ್ರಾಂಗಣದ ಒಳಗೇ, ನಾವು ಹೋಗುವಂತೆ ಮಾಡಿದರು. ಅಲ್ಲಿ ಅದಾಗಲೇ ಇದ್ದ ಸರತಿಯ ಸಾಲಿನಲ್ಲಿ ನಾವು ಸೇರಿಕೊಂಡೆವು. ಅಲ್ಲಿಯ ಜನದಟ್ಟಣೆಯನ್ನು ಗಮನಿಸಿದಾಗ ನಾವು ಸಾಮಾನ್ಯ ಸರತಿ ಸಾಲಿನಲ್ಲಿ ಒಳಸೇರುವುದು ತುಂಬಾ ಶ್ರಮದಾಯಕವೂ, ವಿಳಂಬಕಾರಿಯೂ ಆಗುತ್ತಿತ್ತು ಎಂಬುದು ನಮ್ಮ ಗಮನಕ್ಕೆ ಬಂದಿತು. ಮಂದಿರದ ಆಡಳಿತ ಮಂಡಳಿಯವರು ಧ್ವನಿವರ್ಧಕದ ಮೂಲಕ ಆಗಾಗ ಮುಂದೆ ಎಷ್ಟು ಹೊತ್ತಿಗೆ ಯಾವ ಪೂಜೆ ಇದೆ ಎಂಬುದನ್ನು ಹೇಳುತ್ತಾ, ಅದಕ್ಕಾಗಿ ನೋಂದಣಿ ಮಾಡಿಸಿದವರ ಸಾಲು ಬೇರೆ ಆಗುವಂತೆ ಮಾಡುತ್ತಿದ್ದರು. ನಮ್ಮಲ್ಲಿ ಎಲ್ಲರೂ ಒಂದಲ್ಲ ಒಂದು ಪೂಜೆಗೆ ರಶೀದಿ ಮಾಡಿಸಿದ್ದರು. ನಮ್ಮದು "ವಿಷ್ಣು ಸಹಸ್ರನಾಮ ಪಾಠ". ನಮ್ಮ ಪೂಜೆಯ ಸರದಿ ಬಂದಾಗ, ಪ್ರತ್ಯೇಕ ಸಾಲಿನಲ್ಲಿ ನಮ್ಮನ್ನು ದೇವಸ್ಥಾನದ ಒಳಗೆ ಬಿಟ್ಟು, ಗರ್ಭಗುಡಿಯ ಮುಂದಿನ ಸಭಾಂಗಣದಲ್ಲಿ ಸೇರುವಂತೆ ಮಾಡಿದರು. ಎಲ್ಲರೂ ಆ ಹಾಲ್ ನಲ್ಲಿ, ಬದರಿನಾಥ ಸ್ವಾಮಿಯ ಗರ್ಭಗೃಹದ ಎದುರುಗಡೆ, ಗಲಿಬಿಲಿಯಾಗದಂತೆ ನಿಂತೆವು. ಬಾಗಿಲಿನ ತೀರಾ ನೇರವಾಗಿ ನಿಂತಿದ್ದವರಿಗೆ ಸ್ವಾಮಿಯ ನೇರದರ್ಶನ ಆಗುತ್ತಿದ್ದರೆ, ಆಚೀಚೆ ಇದ್ದ ಎರಡು ಬೃಹತ್ ಟಿವಿ ಪರದೆಗಳ ಮೇಲೆ ಒಳಗಿನ ಎಲ್ಲಾ ಆಗು ಹೋಗುಗಳ ನೇರ ಪ್ರಸಾರವಿದ್ದ ಕಾರಣ, ಎಲ್ಲರಿಗೂ ಸಾವಧಾನವಾಗಿ ದರ್ಶನವಾಗುತ್ತಿತ್ತು. ಯಾರಿಗೂ ಅಸಮಾಧಾನವಾಗುವ ಪ್ರಮೇಯ ಇರಲಿಲ್ಲ. ಎಲ್ಲರೂ ಸೇರಿ ಅರ್ಚಕರ ಕಂಠದ ಜೊತೆ ತಮ್ಮ ಕಂಠವನ್ನೂ ಸೇರಿಸಿ ವಿಷ್ಣು ಸಹಸ್ರನಾಮ ಪಠಿಸಿದ್ದಾಯಿತು. ಬಹಳಷ್ಟು ಯಾತ್ರಿಗಳಿಗೆ ಅದು ಬಾಯಿಪಾಠವಿತ್ತು. ನನ್ನಂತಹ ಕೆಲವರಿಗೆ ಬಾಯಿಗೆ ಬರುತ್ತಿರಲಿಲ್ಲ. ಅಂತಹವರು ಕೈಯಲ್ಲಿ ಪುಸ್ತಕವನ್ನು ಹಿಡಿದೋ, ಮೊಬೈಲ್ ಸ್ಕ್ರೀನ್ ತೆರೆದಿಟ್ಟುಕೊಂಡೋ ಪಠಣಕ್ಕೆ ದನಿಗೂಡಿಸಿದ್ದಾಯಿತು. ಅದೂ ಆಗದವರು ದೇವರ ದರ್ಶನ ಮಾಡುತ್ತಾ, ತಮಗೆ ತೋಚಿದ ರೀತಿಯಲ್ಲಿ ನಾರಾಯಣನನ್ನು ಸ್ಮರಣೆ ಮಾಡುತ್ತಾ, ಒಟ್ಟಿನಲ್ಲಿ ಭಕ್ತಿ ಭಾವದಲ್ಲಿ ತಲ್ಲೀನರಾಗಿದ್ದರು. ಇಲ್ಲಿ ಭಗವಂತನ ದಿವ್ಯ ಸಾನ್ನಿಧ್ಯದ ತರಂಗಗಳು ಎಲ್ಲರಿಗೂ ಅನುಭವಕ್ಕೆ ಬರುವಷ್ಟು ಪ್ರಬಲವಾಗಿವೆ. ಸುಮಾರು 20 - 25 ನಿಮಿಷಗಳಲ್ಲಿ ಸಹಸ್ರನಾಮ ಪಠಣೆ ಮುಗಿದು, ಎಲ್ಲರೂ ಒಬ್ಬೊಬ್ಬರಾಗಿ ಸನ್ನಿಧಿಯ ಎದುರಿನಲ್ಲಿ ಬಂದು, ಪ್ರಸಾದ ಸ್ವೀಕರಿಸಿ ತೆರಳಲು ಅನುವು ಮಾಡಿಕೊಟ್ಟರು. ಹಾಲ್ ಪೂರ್ತಿ ತುಂಬಿದ್ದು, ಬಾಗಿಲುಗಳನ್ನು ಮುಚ್ಚಿದ್ದ ಕಾರಣ, ಒಳಗಡೆ ಉಸಿರಾಟಕ್ಕೆ ಸ್ವಲ್ಪ ಅನಾನುಕೂಲವಾಯಿತು .(ನನ್ನಂತಹ ಕೆಲವು ಸೂಕ್ಷ್ಮ ಪ್ರಾಣಿಗಳಿಗೆ ಮಾತ್ರ). ಅದನ್ನು ಹೊರತುಪಡಿಸಿದರೆ ಬದರಿನಾಥ ಸ್ವಾಮಿಯ ದರ್ಶನವು ತುಂಬಾ ದಿವ್ಯವೂ, ಆಹ್ಲಾದಕರವೂ ಆಗಿತ್ತು.

         ಸ್ವಾಮಿಯ ಗರ್ಭಗುಡಿಯಲ್ಲಿ ಪದ್ಮಾಸನದಲ್ಲಿ ಕುಳಿತು ಧ್ಯಾನಸ್ಥನಾದ, ಒಂದು ಅಡಿ ಎತ್ತರದ, ಗ್ರಾನೈಟ್ ಶಿಲೆಯ ಬದರೀ ನಾರಾಯಣನ ವಿಗ್ರಹವಿದೆ. ಚತುರ್ಭುಜ ಮೂರ್ತಿಯ ಹಿಂದಿನ ಎರಡು ಕೈಗಳು ಮೇಲೆತ್ತಿ ಶಂಖ- ಚಕ್ರಧಾರಿಯಾಗಿದ್ದರೆ, ಮುಂದಿನ ಎರಡು ಕೈಗಳು ಧ್ಯಾನಸ್ಥ ಭಂಗಿಯಲ್ಲಿವೆ.

         ಶ್ರೀ ಬದರೀನಾಥ ವಿಗ್ರಹದ ಜೊತೆಜೊತೆಗೇ ಇನ್ನಷ್ಟು ವಿಗ್ರಹಗಳು ಸಹ ಗರ್ಭಗುಡಿಯಲ್ಲಿವೆ. ಪದ್ಮಾಸನಸ್ಥ ಸ್ವಾಮಿಯ ಎದುರುಗಡೆ ಎಡಬಲಗಳಲ್ಲಿ ನಾರದರ ಮತ್ತು ಗರುಡರ ವಿಗ್ರಹಗಳಿವೆ. ಎಡಭಾಗದಲ್ಲಿ ಶ್ರೀ ಲಕ್ಷ್ಮಿ, ಭೂದೇವಿ, ನರ- ನಾರಾಯಣ ಋಷಿಗಳು ಮತ್ತು ಶ್ರೀದೇವಿ ವಿಗ್ರಹಗಳಿವೆ. ಬಲಭಾಗದಲ್ಲಿ ಗಣಪತಿ, ಕುಬೇರ ಮತ್ತು ಉದ್ಧವನ ಮೂರ್ತಿಗಳಿವೆ. ಕುಬೇರನ ಮೂರ್ತಿಯ ಶಿರದ ಮೇಲ್ಭಾಗ ಮಾತ್ರ ಇದ್ದರೆ ಉಳಿದೆಲ್ಲವೂ ಪೂರ್ತಿ ವಿಗ್ರಹಗಳು( ಕುಬೇರನ ರಾಜಧಾನಿಯಾದ ಅಲಕಾಪುರಿ (ಮಾನಾ) ಇಲ್ಲಿಗೆ ಅತಿ ಸಮೀಪದಲ್ಲಿದೆ)

          ದರ್ಶನ ಮುಗಿಸಿ ಹೊರ ಬಂದಾಗ ಸುಮಾರು 6-30 ಗಂಟೆ ಆಗಿತ್ತು. ಮಂದಿರದ ಒಳ ಆವರಣದಲ್ಲಿ ನಿರಾಳವಾಗಿ ಕುಳಿತುಕೊಂಡೆವು. ಚಂದ್ರಶಾಲೆಯ ತರಹದ ರಚನೆಯಲ್ಲಿ ಶಂಕರಾಚಾರ್ಯರ ಚಿತ್ರಪಟವಲ್ಲದೆ ಇನ್ನೂ ಹಲವಾರು ಮಹಾಮಹಿಮರ ಚಿತ್ರಪಟಗಳಿದ್ದವು. ಇಲ್ಲಿ ಶಂಕರಾಚಾರ್ಯರಿಗೆ ನಿತ್ಯ ಪೂಜೆ ಇದೆ. ಚಳಿಗಾಲದಲ್ಲಿ ಬದರೀನಾಥ ಸ್ವಾಮಿಯ ಜೊತೆ ಜೊತೆಗೆ ಶಂಕರಾಚಾರ್ಯರ ಪೂಜೆಯನ್ನು ಸಹ ಜ್ಯೋತಿರ್ಮಠದಲ್ಲಿರುವ ಶಂಕರಚಾರ್ಯರ ಗದ್ದಿಯಲ್ಲಿ ನೆರವೇರಿಸುತ್ತಾರೆ.

           ಸ್ವಲ್ಪ ವಿರಾಮದಿಂದಿದ್ದ ಕಾರಣ ನಾವೆಲ್ಲರೂ ಗುಡಿಯ ಗೋಪುರದ ಫೋಟೋ, ನಮ್ಮಗಳ ಫೋಟೋಗಳನ್ನು ಕ್ಲಿಕ್ಕಿಸಿಕೊಂಡೆವು. ದೇವಸ್ಥಾನದ ಎದುರುಗಡೆ ಕಾಣಿಸುತ್ತಿದ್ದ ನೀಲಕಂಠ ಪರ್ವತ ತುಂಬಾ ಸುಂದರವಾಗಿ ಕಾಣುತ್ತಿತ್ತು. ನಂತರ ಪ್ರದಕ್ಷಿಣಕಾರದಲ್ಲಿ ಚಲಿಸಿ, ಹೊರವಲಯದಲ್ಲಿದ್ದ ಶಿವ, ಗಣೇಶ, ಮಾರುತಿ ಮುಂತಾದ ದೇವರುಗಳನ್ನು ದರ್ಶಿಸಿ ಹೊರಗೆ ಬಂದೆವು.

            ದೇವಸ್ಥಾನದ ಪ್ರಾಂಗಣದ ಹೆಬ್ಬಾಗಿಲಿನ ಹೊರ ಆವರಣದಲ್ಲಿ ಜನರ ಜಾತ್ರೆಯೇ ಸೇರಿತ್ತು. ನಾವು ಒಂಭತ್ತು ಜನವೂ, ಒಬ್ಬರನ್ನೊಬ್ಬರು ಬಿಟ್ಟು ಹೋಗದಂತೆ, ಜೊತೆಯಲ್ಲಿಯೇ, ಪಾದರಕ್ಷೆಗಳನ್ನು ಬಿಟ್ಟ ಸ್ಥಳಕ್ಕೆ ಹೋದೆವು. ಆದರೆ ಅಷ್ಟರಲ್ಲಿಯೇ ನಮ್ಮಲ್ಲಿ ಹಿರಿಯರಾದ ರವಿಕುಮಾರ್ ಅವರು ಎಲ್ಲೋ ಹಿಂದೆ ಉಳಿದುಬಿಟ್ಟಿದ್ದರು. ಸಮಾಧಾನದ ವಿಷಯ ಎಂದರೆ ಅವರನ್ನು ಹುಡುಕಲು ಕಷ್ಟವಾಗುವುದಿಲ್ಲ! ಏಕೆಂದರೆ ಅವರ ತಲೆ ಇತರ ಎಲ್ಲರ ತಲೆಗಿಂತ ಮೇಲೆ ಇರುತ್ತದೆ!! ನಮ್ಮ ಮಿತ್ರ ಆದಿ ಸುಬ್ರಹ್ಮಣ್ಯ ತಡಮಾಡದೆ ಅವರನ್ನು ಕರೆದು ತಂದರು.

            ನಾವೆಲ್ಲ ಸೇರಿ ತಪ್ತಕುಂಡದ ಕಡೆಗೆ ಹೋದೆವು. ಇದು ನಾರದ ಕುಂಡದ ಪಕ್ಕದಲ್ಲಿ, ನಾರದ ಶಿಲೆಗೆ ಹೊಂದಿಕೊಂಡಂತೆಯೇ ಇದೆ. ಸುಮಾರು 52 ರಿಂದ 54 ಡಿಗ್ರಿ ಸೆಲ್ಸಿಯಸ್ ತಾಪಮಾನದ ಹಿತವಾದ ನೀರು ಈ ತಪ್ತಕುಂಡದಲ್ಲಿದೆ. ನಾವು ನೀರಲ್ಲಿಳಿದು ಪ್ರೋಕ್ಷಣೆ ಮಾಡಿಕೊಂಡೆವು. ಸ್ನಾನದ ತಯಾರಿಯಲ್ಲಿ ಬಂದಿರಲಿಲ್ಲ.

             ಅಲ್ಲಿಂದ ಹೊರ ಬಂದು ಮೆಟ್ಟಿಲುಗಳ ಮೇಲೆ ನಿಂತೇ ಅಲ್ಲಿಂದ ಸುಮಾರು 50 - 60 ಮೀಟರ್ ದೂರದಲ್ಲಿ ಕಾಣಿಸುತ್ತಿದ್ದ ಬ್ರಹ್ಮಕಪಾಲವನ್ನು ಗಮನಿಸಿದೆವು. ಇಲ್ಲಿ ಶ್ರಾದ್ಧ ಕರ್ಮಗಳನ್ನು ಮಾಡಿಸುತ್ತಾರೆ.

              ನಂತರ ವಿಷ್ಣುಗಂಗಾ ನದಿಗೆ ಕಟ್ಟಿದ ಫೂಟ್ ಬ್ರಿಜ್ ದಾಟಿ ಮಾರ್ಕೆಟ್ ಕಡೆಗೆ ಸಾಗಿದೆವು. ಅದಾಗಲೇ ಎಂಟು ಗಂಟೆ ಆಗುತ್ತಿತ್ತು. ನಾಳೆ ಬೆಳಿಗ್ಗೆ ವಿರಾಮದ ಸಮಯ ಸಿಗಲಿರುವುದರಿಂದ ಈಗ ಯಾವುದೇ ಖರೀದಿಗೆ ಮುಂದಾಗಲಿಲ್ಲ. ಮಾರ್ಕೆಟ್ ನ ಎರಡೂ ಕಡೆ ಇದ್ದ ಅಂಗಡಿ ಸಾಲುಗಳನ್ನು ನೋಡುತ್ತಾ ನಮ್ಮ ಹೋಟೆಲಿಗೆ ಬಂದೆವು. 

              ಮನಸ್ತ್ರಪ್ತಿಯಾಗುವಂತೆ ಸ್ವಾಮಿ ಬದರೀನಾಥನ ದರ್ಶನವಾಯಿತು. ತಪ್ತಕುಂಡದಲ್ಲಿ ತೀರ್ಥಪ್ರೋಕ್ಷಣೆಯೂ ಆಯಿತು. ನಾಲ್ಕನೆಯ ಧಾಮವಾದ ಈ ಬದರೀನಾಥ ಸ್ವಾಮಿಯ ದರ್ಶನವಾಗಿದ್ದರಿಂದ ಮನಸ್ಸಿಗೆ ತುಂಬಾ ತುಂಬಾ ನಿರಾಳವಾಯಿತು. ನಾಳೆ ಬೆಳಿಗ್ಗೆ ಬೇಗ ಏಳುವ ಧಾವಂತವಿಲ್ಲ. ಆದರೆ, ನಾವು ಉಳಿದುಕೊಂಡ ಹೋಟೆಲಿನ ಎದುರುಗಡೆ ಇದ್ದ ನೀಲಕಂಠ ಪರ್ವತದ ಶಿಖರಾಗ್ರದ ಮೇಲೆ ಪ್ರಥಮ ಸೂರ್ಯರಶ್ಮಿ ಬೀಳುವ ಸೌಂದರ್ಯ ಅನುಪಮವಾದುದೆಂದು ಹೇಳಲಾಯಿತು. ಆದ್ದರಿಂದ ಬೆಳಿಗ್ಗೆ 5:00 ಗಂಟೆಗೆಲ್ಲ ಎದ್ದು ಆ ಸೂರ್ಯೋದಯದ ಪುಳಕವನ್ನು ಅನುಭವಿಸಲು ಯೋಚಿಸಿ, ಬೇಗನೆ ಊಟವನ್ನು ಮುಗಿಸಿ, ತಡ ಮಾಡದೆ ನಿದ್ರೆ ಮಾಡಲು ತೆರಳಿದೆವು.

ಹನುಮಾನ್ ಛಟ್ಟಿಯ ಆಂಜನೇಯ

 

ಬದರೀನಾಥ ಮಂದಿರ 

ಬದರೀನಾಥ ಮಂದಿರದ ಹಿಂಭಾಗ( ಹಿನ್ನೆಲೆಯಲ್ಲಿ ನೀಲಕಂಠ ಪರ್ವತ ) 

ಶ್ರೀ ಶಂಕರಾಚಾರ್ಯ ಗದ್ದಿ (ಬದರೀನಾಥ ಮಂದಿರದ ಪ್ರಾಂಗಣದಲ್ಲಿ )

ಬದರೀನಾಥ ಮಂದಿರದ ಹೆಬ್ಬಾಗಿಲು (ಜನದಟ್ಟಣೆ ಗಮನಿಸಿ)

ಬ್ರಹ್ಮಕಪಾಲ (ಪಕ್ಕದಲ್ಲೇ ವಿಷ್ಣುಗಂಗಾ ನದಿ ಗಮನಿಸಿ )(ಶ್ರಾದ್ಧ ಕರ್ಮ ಸ್ಥಳ ) 

ನೀಲಕಂಠ ಪರ್ವತ 


                                                                                   (ಸಶೇಷ.......)


ಚಾರ್ ಧಾಮ ಯಾತ್ರೆ -ಭಾಗ 9