ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಸೆಪ್ಟೆಂಬರ್ 2, 2024

ಚಾರ್ ಧಾಮ ಯಾತ್ರೆ -ಭಾಗ 12

 ಚಾರ್ ಧಾಮ ಯಾತ್ರೆ -ಭಾಗ 12

ವಿಷ್ಣು ಪ್ರಯಾಗ ಮತ್ತು ಬದರಿನಾಥ

ದಿನಾಂಕ:-18/05/2024 

         ವಿಷ್ಣು ಪ್ರಯಾಗದಲ್ಲಿ ಎದುರು ಬದುರಾಗಿ ಇರುವ ಎರಡು ಪರ್ವತಗಳಿಗೆ ವಿಷ್ಣುವಿನ ವೈಕುಂಠದ ದ್ವಾರಪಾಲಕರಾದ ಜಯ-ವಿಜಯರ ಹೆಸರಿನಿಂದ ಜಯ ಪರ್ವತ ಮತ್ತು ವಿಜಯ ಪರ್ವತ ಎನ್ನುತ್ತಾರೆ. ಇಲ್ಲಿ ಹೆದ್ದಾರಿಯ ಬಲಗಡೆ ಇರುವ ಸ್ವಾಗತ ಕಮಾನು ದಾಟಿ ಒಳಗೆ ಹೋದರೆ ಪುರಾತನವಾದ ವಿಷ್ಣುನಾರಾಯಣ ಮಂದಿರ ಹಾಗೂ ಶಿವನ ಭೂತನಾಥ ಮಂದಿರಗಳಿವೆ. ಈ ಭೂತನಾಥ ಮಂದಿರದ ಬಾಲ್ಕನಿಯಿಂದ ಪ್ರಯಾಗ (ಸಂಗಮ) ವೀಕ್ಷಿಸಬಹುದು. ನದೀ ಸಂಗಮ ತಲುಪಬೇಕಿದ್ದರೆ 50 - 60 ಮೆಟ್ಟಿಲು ಇಳಿದು ಕೆಳಗೆ ಸಾಗಬೇಕು. ಇಲ್ಲಿ ಬದರಿನಾಥದ ಕಡೆಯಿಂದ ಬರುವ ನದಿಗೆ 'ವಿಷ್ಣುಗಂಗೆ' ಎನ್ನುತ್ತಾರೆ. ಎಡಗಡೆಯಿಂದ ಹರಿದು ಬರುವುದು 'ಧೌಲಿಗಂಗಾ'. ಈ ವಿಷ್ಣುಗಂಗೆ ಹಾಗೂ ಧೌಲಿಗಂಗೆಯರ ಸಂಗಮವಾದ ನಂತರವೇ ನದಿಗೆ "ಅಲಕನಂದಾ" ಎನ್ನುತ್ತಾರೆ. 'ಅಲಕ' ಎಂದರೆ ಜಟೆ-ಕೂದಲು. ಶಿವನ ಜಟೆಯಿಂದ ಹೊರಬಂದ ಧಾರೆ ಈ ಅಲಕನಂದಾ.

         ಇಲ್ಲಿ ಯಾತ್ರಿಕರಿಗೆ ವಿಶ್ರಾಂತಿ ಸ್ಥಳವಿದೆ. ನಾವು ಅಲ್ಲಿಯೇ ಊಟ ಮಾಡಿದೆವು. ಇಲ್ಲಿ ನಾವು ತೀರ್ಥಯಾತ್ರಿಯಾಗಿ ಬಂದ ಉತ್ತರ ಪ್ರದೇಶ ಸರಕಾರದ ಮಾಜಿ ಮುಖ್ಯಮಂತ್ರಿ ಉಮಾಭಾರತಿಯವರನ್ನು ಭೇಟಿಯಾಗಿ ಮಾತನಾಡಿಸಿದೆವು. ಅವರು ವಯಸ್ಸಿನ ಕಾರಣದಿಂದ ಮೊದಲಿನಷ್ಟು ಉತ್ಸಾಹಿತರಾಗಿ ಕಾಣಲಿಲ್ಲ.

          ಊಟ ಮುಗಿಸಿ ವಿಷ್ಣು ಪ್ರಯಾಗದಿಂದ ಹೊರಟ ನಾವು ಜಯ - ವಿಜಯ ಪರ್ವತಗಳ ನಡುವೆ ಇದ್ದ ದಾರಿಯಲ್ಲಿ ಮೇಲೇರುತ್ತಾ ಸಾಗಿದೆವು. ದಾರಿಯಲ್ಲಿ 'ಹೇಮಕುಂಡ ಸಾಹಿಬ್' ಗೆ ಹೋಗುವ ಮಾರ್ಗ ಇತ್ತು. (18 ಕಿಮೀ ದೂರ). ಹಾಗೆಯೇ ಮುಂದೊಂದು ಕಡೆ "ವ್ಯಾಲೀ ಆಫ್ ಫ್ಲವರ್ಸ್ - ಹೂ ಕಣಿವೆ" ಕಡೆಗೆ ಹೋಗುವ ಮಾರ್ಗವಿತ್ತು. ದೂರ - 17 ಕಿಲೋಮೀಟರ್ ಎಂದು ಬರೆದಿತ್ತು. ಈ 'ಹೂ ಕಣಿವೆ'ಗೆ ಭೇಟಿ ಕೊಡುವುದು ನನ್ನ ಹಿಮಾಲಯದ ಕನಸುಗಳ ಪೈಕಿ ಒಂದು. ಆದರೆ ಅದಕ್ಕಾಗಿ ಪ್ರತ್ಯೇಕವಾಗಿ ಬರಬೇಕಾಗುತ್ತದೆ. ಈ ಯಾತ್ರೆಯಲ್ಲಿ ಅದು ಸಾಧ್ಯವಿಲ್ಲದ ಮಾತು.     

          ಮುಂದೆ ಸಾಗುತ್ತಿದ್ದಂತೆ ಬದರಿ ಕ್ಷೇತ್ರಕ್ಕೂ ಸ್ವಲ್ಪ ಮೊದಲು 'ಹನುಮಾನ್ ಛಟ್ಟಿ' ಇದೆ. ಮಹಾಭಾರತ ಕಾಲದಲ್ಲಿ ಪಾಂಡವರು ವನವಾಸ ಮಾಡುತ್ತಿದ್ದಾಗ, ತನ್ನ ಕುಟೀರದ ಮುಂದೆ ಬಂದು ಬಿದ್ದ ಸೌಗಂಧಿಕಾ ಪುಷ್ಪದ ಸೌಂದರ್ಯ ಮತ್ತು ಪರಿಮಳಕ್ಕೆ ಮನಸೋತ ದ್ರೌಪದಿಯು, ಇಂತಹ ಇನ್ನಷ್ಟು ಹೂವುಗಳನ್ನು ತಂದುಕೊಡೆಂದು ಭೀಮನಲ್ಲಿ ಕೇಳುತ್ತಾಳೆ. ತನ್ನ ಪ್ರಿಯತಮೆಯ ಮಾತನ್ನು ತಳ್ಳಿ ಹಾಕಲು ಆಗದ ಭೀಮನು ಹೂವುಗಳನ್ನು ತರಲೆಂದು ಹೊರಟಾಗ, ವೃದ್ಧ ಕಪಿಯೊಂದು, ತನ್ನ ಬಾಲವನ್ನು ದಾರಿಗಡ್ಡವಾಗಿ ಇಟ್ಟುಕೊಂಡು ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು. ಬಾಲವನ್ನು ದಾಟಿ ಹೋಗುವುದು ಶಿಷ್ಟಾಚಾರವಲ್ಲವಾದ ಕಾರಣ ಭೀಮನು, 'ತನ್ನ ಬಾಲವನ್ನು ಬದಿಗೆ ಸರಿಸಿಕೊಳ್ಳು'ವಂತೆ ಆ ಕಪಿಗೆ ಹೇಳಿದನು. "ನಾನು ವೃದ್ಧನಾದ ಕಾರಣ ಆ ಬಾಲವನ್ನು ತೆಗೆಯಲು ಸಹ ನನಗೆ ಕಷ್ಟವಾಗುತ್ತಿದೆ. ನೀನೇ ಅದನ್ನು ಬದಿಗೆ ಸರಿಸಿಕೊಂಡು ಹೋಗು" ಎಂದು ಆ ವಾನರ ಮಾರ್ನುಡಿಯಿತು. ತನ್ನ ಗದೆಯಿಂದ ಆ ಬಾಲವನ್ನು ಸರಿಸಲು ನೋಡಿದ ಭೀಮನಿಗೆ ಅದು ಆಗಲಿಲ್ಲ. ಆಗ, ತನ್ನ ಎರಡೂ ಕೈಗಳಿಂದ, ತನ್ನೆಲ್ಲ ಬಲವನ್ನು ಒಟ್ಟುಗೂಡಿಸಿ ಬಾಲವನ್ನು ಸರಿಸಲು ನೋಡಿದರೂ ಸಹ, ಬಾಲದ ಒಂದು ಕೂದಲು ಸಹ ಕೊಂಕಲಿಲ್ಲ. ತಕ್ಷಣ ಎಚ್ಚೆತ್ತುಕೊಂಡ ಭೀಮ, ತುಂಬಾ ವಿನೀತನಾಗಿ ಆ ವಾನರನಿಗೆ ನಮಸ್ಕರಿಸಿ, "ದಯವಿಟ್ಟು ನನ್ನ ಉದ್ಧಟತನವನ್ನು ಕ್ಷಮಿಸಿ, ತಮ್ಮ ಪರಿಚಯವನ್ನು ತಿಳಿಸಬೇಕು" ಎಂದು ಕೇಳಿಕೊಳ್ಳುತ್ತಾನೆ. ಆಗ ನಸುನಕ್ಕ ವಾನರ, 'ತಾನು ಶ್ರೀರಾಮ ಭಕ್ತನಾದ ಆಂಜನೇಯ' ಎಂದು ಪರಿಚಯಿಸಿಕೊಳ್ಳುತ್ತಾನೆ. "ನನ್ನಂತೆ ನೀನೂ ಸಹ ಪವನ ಪುತ್ರನಾದ ಕಾರಣ ನೀನು ನನ್ನ ತಮ್ಮನೇ ಆಗಿರುವೆ! ಮುಂದೆ ಬರಲಿರುವ ಮಹಾಭಾರತ ಯುದ್ಧದಲ್ಲಿ ನೀನು ಗೆಲ್ಲಬೇಕಿದ್ದರೆ ಈ ಅಹಂಕಾರವನ್ನು ಬದಿಗಿಡಬೇಕು" ಎಂದು ತಿಳಿಹೇಳಿ ಆಶೀರ್ವದಿಸಿದನಂತೆ. ಅಲ್ಲಿಂದ ಮೇಲ್ಗಡೆ ಕುಬೇರನ ಅಧಿಪತ್ಯದಲ್ಲಿರುವ ಕೊಳವೊಂದರಲ್ಲಿ ಈ ಸೌಗಂಧಿಕಾ ಪುಷ್ಪಗಳು ಅರಳಿ ನಿಂತಿರುತ್ತವೆ ಎಂಬುದನ್ನು ತಿಳಿಸಿ ಭೀಮನನ್ನು ಬೀಳ್ಕೊಟ್ಟನಂತೆ. ಆಂಜನೇಯನು ಆಗ ಕುಳಿತ ಸ್ಥಳವೇ ಹನುಮಾನ್ ಛಟ್ಟಿ. ಅಲ್ಲೊಂದು ಹನುಮಂತನ ಮಂದಿರವಿದೆ. ಅಲ್ಲಿ ಭಕ್ತಿಯಿಂದ ಹನುಮಂತನಿಗೆ ನಮಸ್ಕರಿಸಿ, ಮುಂದೆ ಸಾಗಿ, ಬದರಿ ಕ್ಷೇತ್ರವನ್ನು ಸೇರಿದಾಗ ಸಂಜೆ 4:00 ಗಂಟೆ ಆಗಿತ್ತು. ಅಲ್ಲಿಯ 'ಚೌಹಾಣ್ ಪ್ಯಾಲೇಸ್' ನಲ್ಲಿ ನಮಗೆ ವಾಸ್ತವ್ಯದ ಏರ್ಪಾಟು ಆಗಿತ್ತು.       

          ಮುಂದೆ ಸಾಗುವ ಮೊದಲು ಈ ಬದರಿನಾಥ ಕ್ಷೇತ್ರದ ಮಹಿಮೆಯನ್ನು ತಿಳಿದುಕೊಳ್ಳೋಣ ;-

          ಭಗವಾನ್ ವಿಷ್ಣುವು ತನ್ನ 4ನೆಯ ಅವತಾರವಾದ ನರಸಿಂಹ ಅವತಾರವನ್ನು ಸಮಾಪ್ತಿಗೊಳಿಸಿದ ನಂತರ ನರಸಿಂಹನ ಶಿರೋ ಭಾಗದಿಂದ ನಾರಾಯಣನೂ, ದೇಹದ ಭಾಗದಿಂದ ನರನೂ ಆವಿರ್ಭವಿಸಿದರಂತೆ. ಈ ನರ - ನಾರಾಯಣರು ಧರ್ಮನ ಮಕ್ಕಳು ಎಂದೂ ಹೇಳುತ್ತಾರೆ. ನರ - ನಾರಾಯಣರಿಬ್ಬರೂ ಬದರೀ ಕ್ಷೇತ್ರದಲ್ಲಿ ಸಹಸ್ರಾರು ವರ್ಷಗಳ ಕಾಲ ತಪಸ್ಸು ಮಾಡಿದರಂತೆ. ಅವರು ತಪಸ್ಸು ಮಾಡಿದ ಸ್ಥಳಗಳನ್ನು ಈಗ ನರಪರ್ವತ ಹಾಗೂ ನಾರಾಯಣ ಪರ್ವತ ಎಂದು ಗುರುತಿಸುತ್ತಾರೆ. ಬದರಿ ನಾರಾಯಣ ಮಂದಿರದ ಪಕ್ಕದಲ್ಲಿ ಇರುವುದು ನಾರಾಯಣ ಪರ್ವತವಾದರೆ, ನದಿಯ ಆಚೆ, ಎದುರುಗಡೆ ಇರುವುದು ನರ ಪರ್ವತ.

         ಭಗವಾನ್ ವಿಷ್ಣುವು ಭೂಲೋಕದಲ್ಲಿ ತಪಸ್ಸು ಮಾಡಲು ಸೂಕ್ತವಾದ ಸ್ಥಳವನ್ನು ಹುಡುಕುತ್ತಾ ಈ ಸ್ಥಳಕ್ಕೆ ಬಂದು ತಪಸ್ಸನ್ನು ಆಚರಿಸಿದನಂತೆ. ಆಗ ಅತಿಯಾದ ಚಳಿ ಹಾಗೂ ಹಿಮಪಾತದಲ್ಲಿ ಭಗವಾನ್ ನಾರಾಯಣನು ತಪಸ್ಸು ಮಾಡುವುದನ್ನು ಕಂಡು, ಮಹಾಲಕ್ಷ್ಮೀ ದೇವಿಯು ಕನಿಕರಗೊಂಡು, ಒಂದು ಬದರೀ ವೃಕ್ಷವಾಗಿ ನಿಂತು, ನಾರಾಯಣನನ್ನು ಹಿಮಪಾತದಿಂದ ರಕ್ಷಿಸಿದಳಂತೆ. ನಂತರ ತಪಸ್ಸು ತಿಳಿದೆದ್ದ ನಾರಾಯಣನು ಬದರೀ ವೃಕ್ಷವಾಗಿ ನಿಂತಿದ್ದ ಲಕ್ಷ್ಮಿಗೆ, "ಇನ್ನು ಈ ಸ್ಥಳವು ಬದರೀ ಕ್ಷೇತ್ರವೆಂದು ಹೆಸರಾಗಲಿ" ಎಂದು ವರ ನೀಡಿದನಂತೆ. ಅಂದಿನಿಂದಲೂ ಇದು ಬದರೀ ಕ್ಷೇತ್ರವಾಗಿ ನಿಂತಿದೆ. ಇಲ್ಲಿನ ಆರಾಧ್ಯ ದೈವ ಬದರೀನಾರಾಯಣ. ಇಲ್ಲಿ ನರ ಪರ್ವತ ಮತ್ತು ನಾರಾಯಣ ಪರ್ವತಗಳ ನಡುವೆ "ವಿಷ್ಣುಗಂಗಾ" ( ಅಲಕನಂದಾ)ನದಿ ಹರಿಯುತ್ತಿದ್ದು, ಇದರ ಬಲದಂಡೆಯಲ್ಲಿಯೇ ಬದರೀನಾಥನ ಮಂದಿರವಿದೆ. ಈಗಿರುವ ಮಂದಿರ ಸುಮಾರು 420 ವರ್ಷಗಳ ಹಿಂದೆ ನಿರ್ಮಿಸಿರುವಂತಹದ್ದು. ಇಲ್ಲಿ ನಾರದರು ತಪಸ್ಸು ಮಾಡಿದ 'ನಾರದ ಶಿಲೆ' ಹಾಗೂ 'ನಾರದಕುಂಡ'ವಿದೆ. ಅಂತೆಯೇ 'ಗರುಡ ಶಿಲೆ' ಹಾಗೂ 'ತಪ್ತಕುಂಡ'ವೂ ಸೇರಿ ಮೂರು ಬಿಸಿನೀರಿನ ಬಗ್ಗೆಗಳಿವೆ.

          ಶಂಕರಾಚಾರ್ಯರು ಬರುವ ಪೂರ್ವದಲ್ಲಿ ಈ ಕ್ಷೇತ್ರ ಬೌದ್ಧರ ವಶದಲ್ಲಿತ್ತು. ಗರ್ಭಗುಡಿಯಲ್ಲಿನ ನಾರಾಯಣ ವಿಗ್ರಹವನ್ನು ಅಲಕನಂದಾ ನದಿಗೆ ಎಸೆಯಲಾಗಿತ್ತು. ಶಂಕರಾಚಾರ್ಯರು ಇಲ್ಲಿನ ಬೌದ್ಧರನ್ನು ವಾದದಲ್ಲಿ ಗೆದ್ದು ವೈದಿಕ ಧರ್ಮಾಚರಣೆಯ ಪ್ರಕಾರ ಪೂಜೆ ಆಗುವಂತೆ ಮಾಡಿದರು. ನಾರದಕುಂಡದಲ್ಲಿದ್ದ ನಾರಾಯಣನ ವಿಗ್ರಹವನ್ನು ಅವರೇ ತೆಗೆದು ಮತ್ತೆ ಪ್ರತಿಷ್ಠಾಪಿಸಿದರು ಎನ್ನುತ್ತಾರೆ. ಸರಾಗವಾಗಿ ಪೂಜೆ- ಪುನಸ್ಕಾರಗಳು ನಡೆಯುವಂತೆ ಕೇರಳದ ನಂಬೂದರಿ ಬ್ರಾಹ್ಮಣರನ್ನು ಇಲ್ಲಿ ಪೂಜೆ ಮಾಡಲು ಅವರೇ ನೇಮಿಸಿದರಂತೆ.

           ನಾವೆಲ್ಲ ಬದರಿನಾಥದ 'ಚೌಹಾನ್ ಪ್ಯಾಲೇಸಿ'ನಲ್ಲಿ ನಮ್ಮ ನಮ್ಮ ರೂಮ್ ಗಳಲ್ಲಿ ಲಗೇಜ್ ಗಳನ್ನು ಇಟ್ಟು, ತಕ್ಷಣವೇ ಬದರಿನಾಥನ ದರ್ಶನಕ್ಕಾಗಿ ಹೊರಗೆ ಬಂದೆವು. ನಮ್ಮ ಪ್ರವಾಸದ ಮಾರ್ಗದರ್ಶಿಯಾದ ವೆಂಕಟೇಶ ಪ್ರಭು ಅವರು ತುಂಬಾ ಚುರುಕಾಗಿ, ನಮ್ಮನ್ನೆಲ್ಲ ಒಂದೆಡೆ ಸೇರಿಸಿ, ಪ್ರತ್ಯೇಕ ದ್ವಾರದ ಮೂಲಕ, ನೇರವಾಗಿ ಬದರೀನಾಥ ಮಂದಿರದ ಪ್ರಾಂಗಣದ ಒಳಗೇ, ನಾವು ಹೋಗುವಂತೆ ಮಾಡಿದರು. ಅಲ್ಲಿ ಅದಾಗಲೇ ಇದ್ದ ಸರತಿಯ ಸಾಲಿನಲ್ಲಿ ನಾವು ಸೇರಿಕೊಂಡೆವು. ಅಲ್ಲಿಯ ಜನದಟ್ಟಣೆಯನ್ನು ಗಮನಿಸಿದಾಗ ನಾವು ಸಾಮಾನ್ಯ ಸರತಿ ಸಾಲಿನಲ್ಲಿ ಒಳಸೇರುವುದು ತುಂಬಾ ಶ್ರಮದಾಯಕವೂ, ವಿಳಂಬಕಾರಿಯೂ ಆಗುತ್ತಿತ್ತು ಎಂಬುದು ನಮ್ಮ ಗಮನಕ್ಕೆ ಬಂದಿತು. ಮಂದಿರದ ಆಡಳಿತ ಮಂಡಳಿಯವರು ಧ್ವನಿವರ್ಧಕದ ಮೂಲಕ ಆಗಾಗ ಮುಂದೆ ಎಷ್ಟು ಹೊತ್ತಿಗೆ ಯಾವ ಪೂಜೆ ಇದೆ ಎಂಬುದನ್ನು ಹೇಳುತ್ತಾ, ಅದಕ್ಕಾಗಿ ನೋಂದಣಿ ಮಾಡಿಸಿದವರ ಸಾಲು ಬೇರೆ ಆಗುವಂತೆ ಮಾಡುತ್ತಿದ್ದರು. ನಮ್ಮಲ್ಲಿ ಎಲ್ಲರೂ ಒಂದಲ್ಲ ಒಂದು ಪೂಜೆಗೆ ರಶೀದಿ ಮಾಡಿಸಿದ್ದರು. ನಮ್ಮದು "ವಿಷ್ಣು ಸಹಸ್ರನಾಮ ಪಾಠ". ನಮ್ಮ ಪೂಜೆಯ ಸರದಿ ಬಂದಾಗ, ಪ್ರತ್ಯೇಕ ಸಾಲಿನಲ್ಲಿ ನಮ್ಮನ್ನು ದೇವಸ್ಥಾನದ ಒಳಗೆ ಬಿಟ್ಟು, ಗರ್ಭಗುಡಿಯ ಮುಂದಿನ ಸಭಾಂಗಣದಲ್ಲಿ ಸೇರುವಂತೆ ಮಾಡಿದರು. ಎಲ್ಲರೂ ಆ ಹಾಲ್ ನಲ್ಲಿ, ಬದರಿನಾಥ ಸ್ವಾಮಿಯ ಗರ್ಭಗೃಹದ ಎದುರುಗಡೆ, ಗಲಿಬಿಲಿಯಾಗದಂತೆ ನಿಂತೆವು. ಬಾಗಿಲಿನ ತೀರಾ ನೇರವಾಗಿ ನಿಂತಿದ್ದವರಿಗೆ ಸ್ವಾಮಿಯ ನೇರದರ್ಶನ ಆಗುತ್ತಿದ್ದರೆ, ಆಚೀಚೆ ಇದ್ದ ಎರಡು ಬೃಹತ್ ಟಿವಿ ಪರದೆಗಳ ಮೇಲೆ ಒಳಗಿನ ಎಲ್ಲಾ ಆಗು ಹೋಗುಗಳ ನೇರ ಪ್ರಸಾರವಿದ್ದ ಕಾರಣ, ಎಲ್ಲರಿಗೂ ಸಾವಧಾನವಾಗಿ ದರ್ಶನವಾಗುತ್ತಿತ್ತು. ಯಾರಿಗೂ ಅಸಮಾಧಾನವಾಗುವ ಪ್ರಮೇಯ ಇರಲಿಲ್ಲ. ಎಲ್ಲರೂ ಸೇರಿ ಅರ್ಚಕರ ಕಂಠದ ಜೊತೆ ತಮ್ಮ ಕಂಠವನ್ನೂ ಸೇರಿಸಿ ವಿಷ್ಣು ಸಹಸ್ರನಾಮ ಪಠಿಸಿದ್ದಾಯಿತು. ಬಹಳಷ್ಟು ಯಾತ್ರಿಗಳಿಗೆ ಅದು ಬಾಯಿಪಾಠವಿತ್ತು. ನನ್ನಂತಹ ಕೆಲವರಿಗೆ ಬಾಯಿಗೆ ಬರುತ್ತಿರಲಿಲ್ಲ. ಅಂತಹವರು ಕೈಯಲ್ಲಿ ಪುಸ್ತಕವನ್ನು ಹಿಡಿದೋ, ಮೊಬೈಲ್ ಸ್ಕ್ರೀನ್ ತೆರೆದಿಟ್ಟುಕೊಂಡೋ ಪಠಣಕ್ಕೆ ದನಿಗೂಡಿಸಿದ್ದಾಯಿತು. ಅದೂ ಆಗದವರು ದೇವರ ದರ್ಶನ ಮಾಡುತ್ತಾ, ತಮಗೆ ತೋಚಿದ ರೀತಿಯಲ್ಲಿ ನಾರಾಯಣನನ್ನು ಸ್ಮರಣೆ ಮಾಡುತ್ತಾ, ಒಟ್ಟಿನಲ್ಲಿ ಭಕ್ತಿ ಭಾವದಲ್ಲಿ ತಲ್ಲೀನರಾಗಿದ್ದರು. ಇಲ್ಲಿ ಭಗವಂತನ ದಿವ್ಯ ಸಾನ್ನಿಧ್ಯದ ತರಂಗಗಳು ಎಲ್ಲರಿಗೂ ಅನುಭವಕ್ಕೆ ಬರುವಷ್ಟು ಪ್ರಬಲವಾಗಿವೆ. ಸುಮಾರು 20 - 25 ನಿಮಿಷಗಳಲ್ಲಿ ಸಹಸ್ರನಾಮ ಪಠಣೆ ಮುಗಿದು, ಎಲ್ಲರೂ ಒಬ್ಬೊಬ್ಬರಾಗಿ ಸನ್ನಿಧಿಯ ಎದುರಿನಲ್ಲಿ ಬಂದು, ಪ್ರಸಾದ ಸ್ವೀಕರಿಸಿ ತೆರಳಲು ಅನುವು ಮಾಡಿಕೊಟ್ಟರು. ಹಾಲ್ ಪೂರ್ತಿ ತುಂಬಿದ್ದು, ಬಾಗಿಲುಗಳನ್ನು ಮುಚ್ಚಿದ್ದ ಕಾರಣ, ಒಳಗಡೆ ಉಸಿರಾಟಕ್ಕೆ ಸ್ವಲ್ಪ ಅನಾನುಕೂಲವಾಯಿತು .(ನನ್ನಂತಹ ಕೆಲವು ಸೂಕ್ಷ್ಮ ಪ್ರಾಣಿಗಳಿಗೆ ಮಾತ್ರ). ಅದನ್ನು ಹೊರತುಪಡಿಸಿದರೆ ಬದರಿನಾಥ ಸ್ವಾಮಿಯ ದರ್ಶನವು ತುಂಬಾ ದಿವ್ಯವೂ, ಆಹ್ಲಾದಕರವೂ ಆಗಿತ್ತು.

         ಸ್ವಾಮಿಯ ಗರ್ಭಗುಡಿಯಲ್ಲಿ ಪದ್ಮಾಸನದಲ್ಲಿ ಕುಳಿತು ಧ್ಯಾನಸ್ಥನಾದ, ಒಂದು ಅಡಿ ಎತ್ತರದ, ಗ್ರಾನೈಟ್ ಶಿಲೆಯ ಬದರೀ ನಾರಾಯಣನ ವಿಗ್ರಹವಿದೆ. ಚತುರ್ಭುಜ ಮೂರ್ತಿಯ ಹಿಂದಿನ ಎರಡು ಕೈಗಳು ಮೇಲೆತ್ತಿ ಶಂಖ- ಚಕ್ರಧಾರಿಯಾಗಿದ್ದರೆ, ಮುಂದಿನ ಎರಡು ಕೈಗಳು ಧ್ಯಾನಸ್ಥ ಭಂಗಿಯಲ್ಲಿವೆ.

         ಶ್ರೀ ಬದರೀನಾಥ ವಿಗ್ರಹದ ಜೊತೆಜೊತೆಗೇ ಇನ್ನಷ್ಟು ವಿಗ್ರಹಗಳು ಸಹ ಗರ್ಭಗುಡಿಯಲ್ಲಿವೆ. ಪದ್ಮಾಸನಸ್ಥ ಸ್ವಾಮಿಯ ಎದುರುಗಡೆ ಎಡಬಲಗಳಲ್ಲಿ ನಾರದರ ಮತ್ತು ಗರುಡರ ವಿಗ್ರಹಗಳಿವೆ. ಎಡಭಾಗದಲ್ಲಿ ಶ್ರೀ ಲಕ್ಷ್ಮಿ, ಭೂದೇವಿ, ನರ- ನಾರಾಯಣ ಋಷಿಗಳು ಮತ್ತು ಶ್ರೀದೇವಿ ವಿಗ್ರಹಗಳಿವೆ. ಬಲಭಾಗದಲ್ಲಿ ಗಣಪತಿ, ಕುಬೇರ ಮತ್ತು ಉದ್ಧವನ ಮೂರ್ತಿಗಳಿವೆ. ಕುಬೇರನ ಮೂರ್ತಿಯ ಶಿರದ ಮೇಲ್ಭಾಗ ಮಾತ್ರ ಇದ್ದರೆ ಉಳಿದೆಲ್ಲವೂ ಪೂರ್ತಿ ವಿಗ್ರಹಗಳು( ಕುಬೇರನ ರಾಜಧಾನಿಯಾದ ಅಲಕಾಪುರಿ (ಮಾನಾ) ಇಲ್ಲಿಗೆ ಅತಿ ಸಮೀಪದಲ್ಲಿದೆ)

          ದರ್ಶನ ಮುಗಿಸಿ ಹೊರ ಬಂದಾಗ ಸುಮಾರು 6-30 ಗಂಟೆ ಆಗಿತ್ತು. ಮಂದಿರದ ಒಳ ಆವರಣದಲ್ಲಿ ನಿರಾಳವಾಗಿ ಕುಳಿತುಕೊಂಡೆವು. ಚಂದ್ರಶಾಲೆಯ ತರಹದ ರಚನೆಯಲ್ಲಿ ಶಂಕರಾಚಾರ್ಯರ ಚಿತ್ರಪಟವಲ್ಲದೆ ಇನ್ನೂ ಹಲವಾರು ಮಹಾಮಹಿಮರ ಚಿತ್ರಪಟಗಳಿದ್ದವು. ಇಲ್ಲಿ ಶಂಕರಾಚಾರ್ಯರಿಗೆ ನಿತ್ಯ ಪೂಜೆ ಇದೆ. ಚಳಿಗಾಲದಲ್ಲಿ ಬದರೀನಾಥ ಸ್ವಾಮಿಯ ಜೊತೆ ಜೊತೆಗೆ ಶಂಕರಾಚಾರ್ಯರ ಪೂಜೆಯನ್ನು ಸಹ ಜ್ಯೋತಿರ್ಮಠದಲ್ಲಿರುವ ಶಂಕರಚಾರ್ಯರ ಗದ್ದಿಯಲ್ಲಿ ನೆರವೇರಿಸುತ್ತಾರೆ.

           ಸ್ವಲ್ಪ ವಿರಾಮದಿಂದಿದ್ದ ಕಾರಣ ನಾವೆಲ್ಲರೂ ಗುಡಿಯ ಗೋಪುರದ ಫೋಟೋ, ನಮ್ಮಗಳ ಫೋಟೋಗಳನ್ನು ಕ್ಲಿಕ್ಕಿಸಿಕೊಂಡೆವು. ದೇವಸ್ಥಾನದ ಎದುರುಗಡೆ ಕಾಣಿಸುತ್ತಿದ್ದ ನೀಲಕಂಠ ಪರ್ವತ ತುಂಬಾ ಸುಂದರವಾಗಿ ಕಾಣುತ್ತಿತ್ತು. ನಂತರ ಪ್ರದಕ್ಷಿಣಕಾರದಲ್ಲಿ ಚಲಿಸಿ, ಹೊರವಲಯದಲ್ಲಿದ್ದ ಶಿವ, ಗಣೇಶ, ಮಾರುತಿ ಮುಂತಾದ ದೇವರುಗಳನ್ನು ದರ್ಶಿಸಿ ಹೊರಗೆ ಬಂದೆವು.

            ದೇವಸ್ಥಾನದ ಪ್ರಾಂಗಣದ ಹೆಬ್ಬಾಗಿಲಿನ ಹೊರ ಆವರಣದಲ್ಲಿ ಜನರ ಜಾತ್ರೆಯೇ ಸೇರಿತ್ತು. ನಾವು ಒಂಭತ್ತು ಜನವೂ, ಒಬ್ಬರನ್ನೊಬ್ಬರು ಬಿಟ್ಟು ಹೋಗದಂತೆ, ಜೊತೆಯಲ್ಲಿಯೇ, ಪಾದರಕ್ಷೆಗಳನ್ನು ಬಿಟ್ಟ ಸ್ಥಳಕ್ಕೆ ಹೋದೆವು. ಆದರೆ ಅಷ್ಟರಲ್ಲಿಯೇ ನಮ್ಮಲ್ಲಿ ಹಿರಿಯರಾದ ರವಿಕುಮಾರ್ ಅವರು ಎಲ್ಲೋ ಹಿಂದೆ ಉಳಿದುಬಿಟ್ಟಿದ್ದರು. ಸಮಾಧಾನದ ವಿಷಯ ಎಂದರೆ ಅವರನ್ನು ಹುಡುಕಲು ಕಷ್ಟವಾಗುವುದಿಲ್ಲ! ಏಕೆಂದರೆ ಅವರ ತಲೆ ಇತರ ಎಲ್ಲರ ತಲೆಗಿಂತ ಮೇಲೆ ಇರುತ್ತದೆ!! ನಮ್ಮ ಮಿತ್ರ ಆದಿ ಸುಬ್ರಹ್ಮಣ್ಯ ತಡಮಾಡದೆ ಅವರನ್ನು ಕರೆದು ತಂದರು.

            ನಾವೆಲ್ಲ ಸೇರಿ ತಪ್ತಕುಂಡದ ಕಡೆಗೆ ಹೋದೆವು. ಇದು ನಾರದ ಕುಂಡದ ಪಕ್ಕದಲ್ಲಿ, ನಾರದ ಶಿಲೆಗೆ ಹೊಂದಿಕೊಂಡಂತೆಯೇ ಇದೆ. ಸುಮಾರು 52 ರಿಂದ 54 ಡಿಗ್ರಿ ಸೆಲ್ಸಿಯಸ್ ತಾಪಮಾನದ ಹಿತವಾದ ನೀರು ಈ ತಪ್ತಕುಂಡದಲ್ಲಿದೆ. ನಾವು ನೀರಲ್ಲಿಳಿದು ಪ್ರೋಕ್ಷಣೆ ಮಾಡಿಕೊಂಡೆವು. ಸ್ನಾನದ ತಯಾರಿಯಲ್ಲಿ ಬಂದಿರಲಿಲ್ಲ.

             ಅಲ್ಲಿಂದ ಹೊರ ಬಂದು ಮೆಟ್ಟಿಲುಗಳ ಮೇಲೆ ನಿಂತೇ ಅಲ್ಲಿಂದ ಸುಮಾರು 50 - 60 ಮೀಟರ್ ದೂರದಲ್ಲಿ ಕಾಣಿಸುತ್ತಿದ್ದ ಬ್ರಹ್ಮಕಪಾಲವನ್ನು ಗಮನಿಸಿದೆವು. ಇಲ್ಲಿ ಶ್ರಾದ್ಧ ಕರ್ಮಗಳನ್ನು ಮಾಡಿಸುತ್ತಾರೆ.

              ನಂತರ ವಿಷ್ಣುಗಂಗಾ ನದಿಗೆ ಕಟ್ಟಿದ ಫೂಟ್ ಬ್ರಿಜ್ ದಾಟಿ ಮಾರ್ಕೆಟ್ ಕಡೆಗೆ ಸಾಗಿದೆವು. ಅದಾಗಲೇ ಎಂಟು ಗಂಟೆ ಆಗುತ್ತಿತ್ತು. ನಾಳೆ ಬೆಳಿಗ್ಗೆ ವಿರಾಮದ ಸಮಯ ಸಿಗಲಿರುವುದರಿಂದ ಈಗ ಯಾವುದೇ ಖರೀದಿಗೆ ಮುಂದಾಗಲಿಲ್ಲ. ಮಾರ್ಕೆಟ್ ನ ಎರಡೂ ಕಡೆ ಇದ್ದ ಅಂಗಡಿ ಸಾಲುಗಳನ್ನು ನೋಡುತ್ತಾ ನಮ್ಮ ಹೋಟೆಲಿಗೆ ಬಂದೆವು. 

              ಮನಸ್ತ್ರಪ್ತಿಯಾಗುವಂತೆ ಸ್ವಾಮಿ ಬದರೀನಾಥನ ದರ್ಶನವಾಯಿತು. ತಪ್ತಕುಂಡದಲ್ಲಿ ತೀರ್ಥಪ್ರೋಕ್ಷಣೆಯೂ ಆಯಿತು. ನಾಲ್ಕನೆಯ ಧಾಮವಾದ ಈ ಬದರೀನಾಥ ಸ್ವಾಮಿಯ ದರ್ಶನವಾಗಿದ್ದರಿಂದ ಮನಸ್ಸಿಗೆ ತುಂಬಾ ತುಂಬಾ ನಿರಾಳವಾಯಿತು. ನಾಳೆ ಬೆಳಿಗ್ಗೆ ಬೇಗ ಏಳುವ ಧಾವಂತವಿಲ್ಲ. ಆದರೆ, ನಾವು ಉಳಿದುಕೊಂಡ ಹೋಟೆಲಿನ ಎದುರುಗಡೆ ಇದ್ದ ನೀಲಕಂಠ ಪರ್ವತದ ಶಿಖರಾಗ್ರದ ಮೇಲೆ ಪ್ರಥಮ ಸೂರ್ಯರಶ್ಮಿ ಬೀಳುವ ಸೌಂದರ್ಯ ಅನುಪಮವಾದುದೆಂದು ಹೇಳಲಾಯಿತು. ಆದ್ದರಿಂದ ಬೆಳಿಗ್ಗೆ 5:00 ಗಂಟೆಗೆಲ್ಲ ಎದ್ದು ಆ ಸೂರ್ಯೋದಯದ ಪುಳಕವನ್ನು ಅನುಭವಿಸಲು ಯೋಚಿಸಿ, ಬೇಗನೆ ಊಟವನ್ನು ಮುಗಿಸಿ, ತಡ ಮಾಡದೆ ನಿದ್ರೆ ಮಾಡಲು ತೆರಳಿದೆವು.

ಹನುಮಾನ್ ಛಟ್ಟಿಯ ಆಂಜನೇಯ

 

ಬದರೀನಾಥ ಮಂದಿರ 

ಬದರೀನಾಥ ಮಂದಿರದ ಹಿಂಭಾಗ( ಹಿನ್ನೆಲೆಯಲ್ಲಿ ನೀಲಕಂಠ ಪರ್ವತ ) 

ಶ್ರೀ ಶಂಕರಾಚಾರ್ಯ ಗದ್ದಿ (ಬದರೀನಾಥ ಮಂದಿರದ ಪ್ರಾಂಗಣದಲ್ಲಿ )

ಬದರೀನಾಥ ಮಂದಿರದ ಹೆಬ್ಬಾಗಿಲು (ಜನದಟ್ಟಣೆ ಗಮನಿಸಿ)

ಬ್ರಹ್ಮಕಪಾಲ (ಪಕ್ಕದಲ್ಲೇ ವಿಷ್ಣುಗಂಗಾ ನದಿ ಗಮನಿಸಿ )(ಶ್ರಾದ್ಧ ಕರ್ಮ ಸ್ಥಳ ) 

ನೀಲಕಂಠ ಪರ್ವತ 


                                                                                   (ಸಶೇಷ.......)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ