ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಸೆಪ್ಟೆಂಬರ್ 2, 2024

ಚಾರ್ ಧಾಮ ಯಾತ್ರೆ -ಭಾಗ 9

 


ಚಾರ್ ಧಾಮ ಯಾತ್ರೆ -ಭಾಗ 9

ಮರಳಿ ಗುಪ್ತಕಾಶಿಗೆ

ದಿನಾಂಕ:-17/05/2024


        ನಮ್ಮಲ್ಲಿ ಆದಿ ಸುಬ್ರಹ್ಮಣ್ಯ, ವಸಂತ ಲಕ್ಷ್ಮಿ ಮತ್ತು ಮೋಹನ ಅವರಿಗೆ ಮಾತ್ರ ಕನ್ಫರ್ಮ್ಡ್ ರಿಟರ್ನ್ ಹೆಲಿ ಟಿಕೆಟ್ ಇತ್ತು. ಆದ್ದರಿಂದ ಅವರು ಮುಂಜಾನೆ ಒಂಭತ್ತು ಗಂಟೆಗೆಲ್ಲ ಹೆಲಿಪ್ಯಾಡ್ ತಲುಪಿದರೆ ಸಾಕಿತ್ತು. ಆದರೆ ನಮ್ಮಿಬ್ಬರಿಗೆ ಮತ್ತು ನಮ್ಮ ಜೊತೆ ಬಂದ ಉಳಿದ ಮೂವರಿಗೆ ರಿಟರ್ನ್ ಟಿಕೆಟ್ ಕನ್ಫರ್ಮ್ ಆಗಿರಲಿಲ್ಲ. ನಿನ್ನೆಯ ದಿನ ಹೆಲಿಪ್ಯಾಡಿನಲ್ಲಿ ಇಳಿದ ತಕ್ಷಣ, 'ನಾಳೆ ವಾಪಸ್ ಹೋಗಲು ಆಫ್ ಲೈನ್ ಟಿಕೆಟ್ ಸಿಗಬಹುದಾ?' ಎಂದು ವಿಚಾರಿಸಿದ್ದೆವು. ಬೆಳಗ್ಗೆ 5:15ಕ್ಕೆಲ್ಲ ಬಂದರೆ ಹೇಳಬಹುದು ಎಂದಿದ್ದರು. ಆದ್ದರಿಂದ ನಾವು ನಸುಕಿನ 5-15ಕ್ಕೆಲ್ಲ ತಯಾರಾಗಿ ಹೆಲಿಪ್ಯಾಡ್ ಗೆ ಹೊರಟೆವು. ಅಲ್ಲಿ ವಿಚಾರಿಸಿದರೆ, ಈ ದಿನ ನಿಮಗೆ ಆಫ್ಲೈನ್ ಟಿಕೆಟ್ ಸಿಗುವುದು ಸಾಧ್ಯವೇ ಇಲ್ಲ, ಎಂದರು. ನಾವು ಏನಾದರೂ ಒಂದು ನಿರ್ಣಯ - ಕಾಯುವುದು ಅಥವಾ ತಕ್ಷಣ ಬೇರೆ ಯಾವುದಾದರೂ ಸಾಧನ ಬಳಸಿ ಕೆಳಗೆ ಇಳಿಯುವುದು - ಮಾಡಲೇಬೇಕಿತ್ತು. ನಾವು ಐವರೂ ನಮ್ಮ ನಮ್ಮಲ್ಲೇ ಸಮಾಲೋಚಿಸಿ "ಪಿಟ್ಟೂ" ಮೂಲಕ ಕೆಳಗಿಳಿಯುವುದು ಎಂದು ನಿರ್ಣಯಿಸಿದೆವು. ಇನ್ನೂ ಆರು ಗಂಟೆಗೂ ಮೊದಲೇ, ನಿಂತಲ್ಲಿಂದಲೇ ಕೇದಾರನಾಥ ಸ್ವಾಮಿಯ ಮಂದಿರದೆಡೆ ತಿರುಗಿ ನಮಸ್ಕರಿಸಿ, ನಾವು ಪಿಟ್ಟೂ ಮೂಲಕ ರಿಟರ್ನ್ ಜರ್ನಿ ಪ್ರಾರಂಭಿಸಿಯೇಬಿಟ್ಟೆವು. ತಲಾ 8000 ರೂಪಾಯಿ ಎಂದು ನಿಶ್ಚಯಿಸಿದ್ದೆವು. ಅದು ಸ್ವಲ್ಪ ಜಾಸ್ತಿಯಾಗಿತ್ತಾದರೂ ನಮ್ಮ ಭಾರವನ್ನು ಹೊರುವ ಇನ್ನೊಬ್ಬ ಸಹಜೀವಿ ಮನುಷ್ಯನೆಡೆಗೆ ನಾವು ತೋರಬೇಕಾದ ಕರುಣೆ ಅದಾಗಿತ್ತು. ಒಂಚೂರೂ ಗೊಣಗದೆ ಸಂತೋಷದಿಂದಲೇ ಒಪ್ಪಿಕೊಂಡೆವು. ಚುಮುಚುಮು ಬೆಳಗಿನ ಆ ಸಮಯದಲ್ಲೇ ಅಲ್ಲಿ ಜನಸಂದಣಿ ಸಾಕಷ್ಟು ಇತ್ತು.

         ವಿಶೇಷವಾಗಿ ಹೆಣೆದ ಬಿದಿರು ಅಥವಾ ಪ್ಲಾಸ್ಟಿಕ್ ಬುಟ್ಟಿಯಲ್ಲಿ ತಲೆಗೆ ಆಧಾರವಾಗಿ ಸ್ವಲ್ಪ ಎತ್ತರದ ಸಪೋರ್ಟ್ ಸಿಸ್ಟಮ್ ಇದೆ. ನಾವು ಕುರ್ಚಿಯಲ್ಲಿ ಕೂಡ್ರುವ ಹಾಗೆ ಕೂಡ್ರಬೇಕು. ನಾವು ಮುಂದೆ ಬೀಳದಂತೆ ಒಂದು ತಡೆ ಹಗ್ಗ ಇರುತ್ತದೆ. ಕಾಲುಗಳು ಜೋತಾಡಬಾರದೆಂದು ಒಂದು ಸ್ಯಾಡಲ್ ಇರುತ್ತದೆ. ಇದರಲ್ಲಿ ಪಾದಗಳನ್ನು ಇಟ್ಟುಕೊಳ್ಳಬೇಕು. ಇದೇ "ಪಿಟ್ಟೂ". ಒಂದು ಎತ್ತರದ ಕಟ್ಟೆ ಅಥವಾ ಮೋರಿಯ ಮೇಲೆ ಆ ಪಿಟ್ಟುವನ್ನು ಇಡುತ್ತಾರೆ. ನಾವು ಅದರಲ್ಲಿ ಕುಳಿತು ಆದಮೇಲೆ ಆ ಪೋರ್ಟರ್, ಬುಟ್ಟಿಯ ಬೆನ್ನು ತನ್ನ ಬೆನ್ನಿನ ಮೇಲೆ ಬರುವಂತೆ ಅದನ್ನು ಏರಿಸಿಕೊಳ್ಳುತ್ತಾನೆ. ಅವನು ಸಾಗುವ ದಿಕ್ಕಿನ ವಿರುದ್ಧ, ಅಂದರೆ ಹಿಂದುಗಡೆಯ ದಿಕ್ಕನ್ನು, ನಾವು ನೋಡುತ್ತಿರಬೇಕು. ಸೊಂಟಕ್ಕೆ ಕಟ್ಟಿಕೊಂಡ ಪಟ್ಟಿ ಅಲ್ಲದೆ ಕುರ್ಚಿಯ ಭುಜಭಾಗದಿಂದ ಇಳಿಬಿದ್ದ ಎರಡು ಹಗ್ಗಗಳನ್ನು ಎರಡು ಕೈಯಲ್ಲಿ ಹಿಡಿದುಕೊಳ್ಳುತ್ತಾನೆ. ಈ ಹಗ್ಗಗಳ ಮೂಲಕ ಅವನು ಪಿಟ್ಟುವಿನ ಓಲಾಟವನ್ನು ನಿಯಂತ್ರಿಸುತ್ತಾನೆ. ಮೈಮೇಲೆ ಏನೇನೂ ಭಾರವಿಲ್ಲ ಎನ್ನುವ ರೀತಿ ಅವನು ಕುಣಿಯುತ್ತ, ಕುಪ್ಪಳಿಸುತ್ತಾ, ಓಡುತ್ತಾ ಇಳಿಯುತ್ತಾನೆ. ಬೆನ್ನ ಮೇಲೆ ಪಿಟ್ಟುವಿನಲ್ಲಿ ಕುಳಿತ ನಾವು ಮಿಸುಕಾಡಿದರೆ 'ಮಿಸುಕಬೇಡಿ' ಎನ್ನುತ್ತಾನೆ. ಅವನ ಪಾಡು ನೋಡಿ ನಾವೇ, - ನಮ್ಮ ಬೆನ್ನು, ಕುತ್ತಿಗೆ ಸೋಲುತ್ತಿದ್ದರೂ - ಒಂದೇ ರೀತಿ ಕುಳಿತಿರಲು ಯತ್ನಿಸುತ್ತೇವೆ. ಕುಳಿತ 15 -20 ನಿಮಿಷಕ್ಕೆಲ್ಲ ಕುತ್ತಿಗೆ ಸೋಲತೊಡಗುತ್ತದೆ. ಸ್ವಲ್ಪ ಎತ್ತರದ ಆಳಾದರೆ ಕುತ್ತಿಗೆ ಹೆಡ್ರೆಸ್ಟ್ ಮೀರಿ ಹೊರಗೆ ಹೋಗಿರುತ್ತದೆ. ಆಗಂತೂ ಕುತ್ತಿಗೆ ನೋವು ಸಹ ಅಧಿಕವಾಗಿರುತ್ತದೆ. ಹೀಗೆ ಸುಮಾರು ಒಂದು ತಾಸು ಸಾಗಿದ ನಂತರ ನಿಧಾನವಾಗಿ ಅದಕ್ಕೆ ಒಗ್ಗಿಕೊಳ್ಳುತ್ತೇವೆ.

         "ಇಲ್ಲಿಂದ ಕೆಳಗಿಳಿಯಲು ಎಷ್ಟು ಸಮಯ ಬೇಕಾಗುತ್ತದೆ?" ಎಂದು ಕೇಳಿದೆ. ಆಗಷ್ಟೇ 6:00 ಗಂಟೆ ಆಗುತ್ತಿತ್ತು. "ಸುಮಾರು ನಾಲ್ಕೈದು ತಾಸು" ಎಂದ. ನಾನು ಕುಳಿತಲ್ಲಿಂದಲೇ ಹಿಂಭಾಗದಲ್ಲಿ ಕಾಣುತ್ತಿದ್ದ ಸಂದಣಿ, ಗದ್ದಲ, ಕುದುರೆ(ಪೋನಿ)ಗಳ ಅಬ್ಬರದ ಕಾಲಿನ ಸದ್ದು, ಒಬ್ಬ ವ್ಯಕ್ತಿಯನ್ನು ಕೂಡ್ರಿಸಿಕೊಂಡು ನಾಲ್ಕು ಜನ ಹೊತ್ತುಕೊಂಡು ಹೋಗುವ ಪಲ್ಲಕ್ಕಿ(ಡೋಲಿ) ಹೊತ್ತವರ ದುಡುದುಡು ಓಡಾಟ ಹಾಗೂ "ದಾರಿ ಬಿಡಿ" ಎನ್ನುವ ಕಿರಿಚಾಟ, ನಮ್ಮ ಪಿಟ್ಟುನಂತೆಯೇ ಹೊರಟ ಇನ್ನಷ್ಟು ಪಿಟ್ಟುಗಳು, ಲೆಕ್ಕವಿರದಷ್ಟು ಪಾದಚಾರಿಗಳು - ಇವೆಲ್ಲ ಮೇಲ್ಮುಖವಾಗಿ, ಅಂತೆಯೇ ಕೆಳಮುಖವಾಗಿ ಸಾಗುವ ಮೆರವಣಿಗೆ. ಹತ್ತುವ ಹಾಗೂ ಇಳಿಯುವ ಎಲ್ಲರಿಗೂ ಇದೊಂದೇ ದಾರಿ. ನಿನ್ನೆ ರಾತ್ರಿ ಮಳೆ ಸುರಿದ ಕಾರಣ ರಸ್ತೆ ಗಿಜಿಗಿಜಿ ಎನ್ನುತ್ತಿತ್ತು. ಈ ರಸ್ತೆಗೆ ಉದ್ದಕ್ಕೂ ರಬ್ಬಲ್ ಕಲ್ಲುಗಳನ್ನು (ಅನಿಯಮಿತ ಆಕಾರ ಹಾಗೂ ಗಾತ್ರದ) ಜೋಡಿಸಿದ್ದಾರೆ. ಆದರೆ ಅವು ಸಮತಟ್ಟಾಗಿಲ್ಲ. ಮೇಲ್ಮೈಯಲ್ಲಿ ಅಂಟಿದ ಹಸಿ ರಾಡಿಯ ಕಾರಣ ತುಂಬಾ ಜಾರಿಕೆ ಆಗಿತ್ತು. ಇದಕ್ಕೆ ಪೂರಕವಾಗಿ ಕುದುರೆಗಳ ಮಲ, ಮೂತ್ರಗಳ ನಿರಂತರ ಅಭಿಷೇಕ! ಈ ರಸ್ತೆಯ ಒಂದು ಕಡೆ ಗುಡ್ಡ, ಇನ್ನೊಂದು ಕಡೆ ಪ್ರಪಾತ. ಗುಡ್ಡದಿಂದ ಜಿನುಗುವ ನೀರು ಸಹ ಈ ರಾಡಿಗೆ ಸೇರುತ್ತಿತ್ತು. ಒಟ್ಟಿನಲ್ಲಿ ನಮ್ಮ ಮಲೆನಾಡಿನಲ್ಲಿ ಭತ್ತದ ನಾಟಿಗೆ ತಯಾರು ಮಾಡಿದ ಕೆಸರುಗದ್ದೆಯ ಹಾಗಿತ್ತು ಈ ಪಥ. ಅದರ ಮೇಲೆ ಕಂಬಳದ ಕೋಣಗಳ ರೀತಿ ಓಡುವ ಈ ಪೋನಿ, ಪಿಟ್ಟು ಮತ್ತು ಡೋಲಿಗಳು. ಕೆಲವಷ್ಟು ಜನ ಯುವಕರು ಸಹ ಹುಮ್ಮಸ್ಸಿನಿಂದ ಹತ್ತುತ್ತಿದ್ದರು ಹಾಗೂ ಅದೇ ರೀತಿ ಇಳಿಯುವವರೂ ಇದ್ದರು. ರಾಜಸ್ಥಾನ್, ಗುಜರಾತ್ ಕಡೆಯ ವಯಸ್ಸಾದ ಮಹಿಳೆಯರು ಈ ಚಾರಣವನ್ನು ಏರಿ ಬರುತ್ತಿದ್ದ ರೀತಿ ನಿಜಕ್ಕೂ ಆಶ್ಚರ್ಯ ಉಂಟು ಮಾಡುತ್ತಿತ್ತು. ಅವರ ವೇಷ ಭೂಷಣಗಳನ್ನು ನೋಡಿದರೆ ಬಹುಶಃ ಅವರು ಮನೆಯಲ್ಲಿ ಸಹ ದೈಹಿಕ ಶ್ರಮ ಇಲ್ಲದವರಂತೆ ಕಾಣುತ್ತಿದ್ದರು. ಆದರೆ ಅವರಲ್ಲಿ ಭಕ್ತಿಯ ಆವೇಶ ಅದೆಷ್ಟು ಇತ್ತು ಎಂದರೆ, ಪ್ರತಿ ಎಂಟು ಹತ್ತು ಹೆಜ್ಜೆ ಏರಿ ನಿಲ್ಲುತ್ತಿದ್ದರು, ಉಸಿರು ಸಂಭಾಳಿಸಿಕೊಂಡು ಮತ್ತೆ ಹತ್ತುತ್ತಿದ್ದರು. ಪ್ರತಿ ಹೆಜ್ಜೆಗೊಮ್ಮೆ "ಹರ ಹರ ಮಹಾದೇವ" "ಕೇದಾರ್ ಬಾಬಾಕಿ ಜೈ" ಎಂಬ ಘೋಷಣೆಗಳು! ಅವರು ಒಂಚೂರೂ ಆಚೀಚೆ ಗಮನ ನೀಡುತ್ತಿರಲಿಲ್ಲ. ಅತ್ಯಂತ ನಿಧಾನವಾಗಿಯಾದರೂ ನಿರಂತರವಾದ ನಡಿಗೆ. 24 ಕಿಲೋಮೀಟರ್ ಏರಿ ಹೋಗಬೇಕಲ್ಲ!

        ದಾರಿಯುದ್ದಕ್ಕೂ ಅಲ್ಲಲ್ಲಿ - ಕ್ರಮಿಸಿದ ದೂರ, ಗಮ್ಯದ ದೂರ ಸೂಚಿಸುವ ಫಲಕಗಳು, ಮೆಡಿಕಲ್ ಕ್ಯಾಂಪುಗಳು, ಕುದುರೆಗಳನ್ನು ನಿಲ್ಲಿಸುವ ವಿಶಾಲ ಜಾಗೆಗಳು, ಚಹಾ ಅಂಗಡಿಗಳು, ಸುತ್ತಲಿನ ಸಂದಣಿಯ ಕಡೆಗೆ ಒಂಚೂರೂ ಗಮನ ನೀಡದೆ ಏರುವ ಹಾಗೂ ಇಳಿಯುವ ಶ್ರದ್ಧಾಳುಗಳು, ಅರ್ಧ ಚಾರಣಕ್ಕೆ ಹೈರಾಣಾಗಿ ಪೋನಿ ಅಥವಾ ಪಿಟ್ಟೂ ಏರುವವರು, ಪೋನಿ ಏರಿ ಅದರ ಕುಲುಕಾಟಕ್ಕೆ ಹೈರಾಣಾಗಿ, 'ಇನ್ನು ಈ ಹೊಟ್ಟೆ/ ಬೆನ್ನು ನೋವು ಸಹಿಸಲು ಸಾಧ್ಯವಿಲ್ಲ, ನಡೆದಾದರೂ ಹೋಗುತ್ತೇನೆ' ಎಂದು ನಿರ್ಣಯಿಸಿ ಇಳಿಯುವವರು, ದುಡುದುಡನೆ ಇಳಿದುಬರುವ ದಷ್ಟಪುಷ್ಟ ಕುದುರೆಗಳ ಪೃಷ್ಠದ ತಳ್ಳಾಟಕ್ಕೆ ಸಿಕ್ಕಿ ಹೆಜ್ಜೆ ತಪ್ಪುವ ಚಾರಣಿಗರು,- ವಾವ್! ಗಮನಿಸುತ್ತಿದ್ದರೆ ಈ ಅಚ್ಚರಿಯ ಸಂತೆ ದಾರಿ ಸಾಗಿದ್ದನ್ನು, ಕತ್ತು ನೋವನ್ನು ನಿಧಾನವಾಗಿ ಮರೆಸುತ್ತಿತ್ತು. ನಾವು ಮೇಲ್ಗಡೆ ಮುಖ ಮಾಡಿ ಕುಳಿತಿದ್ದರಿಂದಾಗಿ ಇಳಿಯುವಾಗ ನಮ್ಮ ಎಡಗಡೆ ಮಂದಾಕಿನಿಯ ರಭಸದ ಓಟ, ಬಲಗಡೆ - ಅಲ್ಲಲ್ಲಿ ಕಣಿವೆ ಇದ್ದಲ್ಲಿ- ಗಟ್ಟಿಯಾದ ಮಂಜುಗಡ್ಡೆಯ ಪದರ. ಕಣಿವೆಯಲ್ಲಿ ತನ್ನೊಂದಿಗೆ ಕಲ್ಲು, ಕಸಗಳನ್ನು ಹೊತ್ತು ತರುತ್ತಿದ್ದ ಕೊರೆವ ತಣ್ಣನೆಯ ನೀರು ಅಲ್ಲಲ್ಲೇ ಮಂಜುಗಡ್ಡೆ ಆಗಿ ಗಟ್ಟಿಯಾದ ಕಾರಣ ಈ ಮಂಜುಗಡ್ಡೆಯಲ್ಲಿ ಸಿಲುಕಿಕೊಂಡ ದೊಡ್ಡ ಕಲ್ಲುಗಳನ್ನು ನೋಡಬಹುದು. ಕಸದ ಬಲೆಯೇ ಇದೆ ಅದರಲ್ಲಿ. ಆದರೆ ದೂರದಿಂದ ನೋಡಿದರೆ ಬೆಳ್ಳನೆಯ ಮಂಜುಗಡ್ಡೆಯ ಹಾಸು - ಹಾಗೆಯೇ ತುಂಡು ಮಾಡಿ ತಿಂದುಬಿಡಬಹುದೇನೋ ಎನ್ನುವ ರೀತಿ! ಆದರೆ ಅದು ಸಾಧ್ಯವಿಲ್ಲ, ಏಕೆಂದರೆ, ಅದರ ಗರ್ಭದಲ್ಲಿ ಎಲ್ಲಾ ರೀತಿಯ ಹೊಲಸು ಇದೆ (ಆದರೆ ಹಿಮಪಾತ ಆಗುತ್ತಿರುವಾಗ ಸುರಿಯುವ ಹಿಮ ಶುಭ್ರವಾಗಿರುತ್ತದೆ). ಇದು ಕಣಿವೆಗಳಲ್ಲಿರುವ ಗ್ಲೇಸಿಯರ್ ನ ಭಾಗವಷ್ಟೆ! ಬರಿ ಕೈಯಲ್ಲಿ ಕೆದರಲು ಸಾಧ್ಯವಿಲ್ಲದಷ್ಟು ಮೇಲ್ಮೈ ಗಟ್ಟಿಯಾಗಿದೆ! ಈ ಹಿಮಗಡ್ಡೆ ನಿಧಾನವಾಗಿ ಕರಗುತ್ತಾ ತನ್ನ ತಳ ಭಾಗದಲ್ಲಿ ಒಂದು ಟೊಳ್ಳನ್ನು ಸೃಷ್ಟಿಸಿಕೊಂಡು ಅದರ ಮೂಲಕ ಹರಿಯುತ್ತಿರುತ್ತದೆ. ಉದ್ದಕ್ಕೂ ಕರಗಿದ ಹಿಮ ಸೇರಿ ಒಂದು ಪುಟ್ಟ ತೊರೆಯಾಗಿ ಮಂದಾಕಿನಿಯೆಡೆಗೆ ಧಾವಿಸುತ್ತದೆ.

        ಕೆಲವು ಕುತೂಹಲಿ ಮಕ್ಕಳು ಈ ಹಿಮಬಂಡೆಯ ಮೇಲೆ ಓಡಾಡುತ್ತಾ ಸಂತೋಷ ಪಡುತ್ತಿದ್ದರು. ಎಲ್ಲಿ ನಮ್ಮ ಪಿಟ್ಟು ಯಾರಿಗೆ ಡಿಕ್ಕಿ ಹೊಡೆದುಬಿಡುತ್ತಾನೋ, ಯಾವ ಕುದುರೆಯ ತಳ್ಳಾಟಕ್ಕೆ ಸಿಕ್ಕಿಬಿಡುತ್ತಾನೋ, ಪಕ್ಕದ ಪಿಟ್ಟೂವಿಗೆ ಮೈ ಹೊಸೆದು ಬಿಡುತ್ತಾನೋ ಎಂದು ಆತಂಕದಲ್ಲಿ ನಾನು ಕುಳಿತಿದ್ದರೂ ಇದೆಲ್ಲವನ್ನು ಗಮನಿಸುತ್ತಿದ್ದೆ. ನಿಜವಾಗಿಯೂ ನನಗೆ ಈ ಚಾರಣವನ್ನು ಕೈಗೊಳ್ಳುವ ಭಾರೀ ಹಂಬಲವಿತ್ತು. ಆದರೆ ಈ ಎತ್ತರದಲ್ಲಿ ಉಸಿರಾಟಕ್ಕೆ ಆಗುವ ಕಷ್ಟವನ್ನು ಗಮನಿಸಿದರೆ ಈಗ, ‘ನನಗೆ ಏರಲು ಸಾಧ್ಯವಾಗುತ್ತಿರಲಿಲ್ಲ’ ಎನಿಸುತ್ತಿತ್ತು. ಇಳಿದು ಹೋಗುವ ಒಂದು ಆಯ್ಕೆ ನನ್ನೆದುರು ಈಗಲೂ ಇತ್ತು.

         ನನ್ನನ್ನು ಹೊತ್ತು ಕೊಂಡ ಪಿಟ್ಟೂ ನೇಪಾಳಿ. ಇದನ್ನು ಹೇಳುವಾಗ, "ನಾವು ನೇಪಾಳಿಗಳು ಮಾತ್ರ ಈ ಕೆಲಸ ಮಾಡಬಲ್ಲೆವು. ಸ್ಥಳೀಯರಿಗೆ ಇದು ಸಾಧ್ಯವೇ ಇಲ್ಲ" ಎನ್ನುವ ಸಣ್ಣ ಮೇಲರಿಮೆ ಅವನ ದ್ವನಿಯಲ್ಲಿ ಇಣುಕುತ್ತಿತ್ತು. ಈ ಪಿಟ್ಟೂ ಆಗಾಗ ದೀರ್ಘವಾಗಿ ಕೆಮ್ಮುತ್ತಿದ್ದ. ಕೆಮ್ಮುತ್ತಲೇ ನಡೆಯುತ್ತಿದ್ದನೇ ವಿನಹ ನಿಲ್ಲುತ್ತಿರಲಿಲ್ಲ. ಅಲ್ಲಲ್ಲಿ ಮುಖ್ಯ ದಾರಿಯನ್ನು ಬಿಟ್ಟು, ಅಡ್ಡ ದಾರಿಯಲ್ಲಿ ಇಳಿದು, ಸುತ್ತಿ ಸಾಗುವ ಬಳಸುದಾರಿಯನ್ನು ತಪ್ಪಿಸಿಕೊಂಡು ದೂರವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದ. ಆದರೆ ಈ ಶಾರ್ಟ್ ಕಟ್ ಗಳು ತುಂಬಾ ಇಳಿಜಾರು ಇದ್ದು ಜಾರುತ್ತಿದ್ದವು ಕೂಡ. ಅವುಗಳಲ್ಲಿ ಸಾಗುತ್ತಿದ್ದಾಗ ನನಗೆ ಆತಂಕವಾಗುತ್ತಿತ್ತು. ಆಗೆಲ್ಲಾ ಅವನು ನನಗೆ ಅಲುಗಾಡದಂತೆ ಕುಳಿತುಕೊಳ್ಳಲು ಹೇಳಿ ಈ ಶಾರ್ಟ್ ಕಟ್ ಗಳನ್ನು ಕ್ರಮಿಸುತ್ತಿದ್ದ. ಸುಮಾರು ಅರ್ಧ ದಾರಿ ಕ್ರಮಿಸುತ್ತಿದ್ದಂತೆ ಮಂದಾಕಿನಿ ನದಿಯನ್ನು ದಾಟಿ ನದಿಯ ಬಲದಂಡೆಗುಂಟ ಸಾಗ ತೊಡಗಿದ. ನದಿ ದಾಟಲು ಒಂದು ಸೇತುವೆ ಇತ್ತು. ಸೇತುವೆಯನ್ನು ದಾಟುತ್ತಿದ್ದಂತೆಯೇ ಸಾಕಷ್ಟು ಮೆಟ್ಟಿಲುಗಳನ್ನು ಏರುವುದಿತ್ತು. ಇಲ್ಲಿಗೆ ಬರುವಷ್ಟರಲ್ಲಿ ಎರಡು ಬ್ರೇಕ್ ತೆಗೆದುಕೊಂಡಾಗಿತ್ತು. ಹಾಗೆ ವಿಶ್ರಾಂತಿಗಾಗಿ ನಿಂತಾಗ ಅವನಿಗೆ 'ತಿಂಡಿ ತಿನ್ನು' ಎಂದರೂ ಕೇಳದೆ, ಕೇವಲ ಬಿಸ್ಕಟ್- ಚಹಾ ತೆಗೆದುಕೊಂಡ. ಬೆಳಗಿನಿಂದ ಏನೂ ತಿಂದಿರದ ನಾನು ಕೂಡ ಬಿಸ್ಕಟ್- ಚಹಾ ಸೇವಿಸಿದೆ. ಅವನು, ತಾನು ಸಿಗರೇಟ್ ತೆಗೆದುಕೊಳ್ಳುವುದಾಗಿ ಹೇಳಿ, ಪ್ರತಿಸಾರಿಯೂ ಕೇವಲ ಒಂದು ಸಿಗರೇಟ್ ಮಾತ್ರ ತೆಗೆದುಕೊಂಡು ಸೇದುತ್ತಿದ್ದ. ಮತ್ತಷ್ಟು ಕೆಮ್ಮುತ್ತಿದ್ದ. ಆ ಚಳಿಗೆ ದೇಹವನ್ನು ಬೆಚ್ಚಗಾಗಿಡಲು ಬಹುಶಃ ಅವರು ಕಂಡುಕೊಂಡ ಮಾರ್ಗ ಈ ಸ್ಮೋಕಿಂಗ್. ಎಲ್ಲಾ ಪಿಟ್ಟೂಗಳೂ ಸೇದುತ್ತಿದ್ದುದನ್ನು ನಾನು ಗಮನಿಸಿದೆ. ಪ್ರತಿ ಸ್ಟಾಪ್ ನಲ್ಲೂ 10 -15 ನಿಮಿಷ ವಿಶ್ರಮಿಸಿ ಮತ್ತೆ ಬುಟ್ಟಿ ಎತ್ತುತ್ತಿದ್ದ. ಈ ನಡುವೆ ನನ್ನ ಜೊತೆ ಹೊರಟ ಉಳಿದ ನಾಲ್ವರು ಮಹಿಳೆಯರು ಹಿಂದುಳಿದರೋ, ಮುಂದೆ ಹೋದರೋ, ಗೊತ್ತಾಗಲಿಲ್ಲ. ಇಂತಹ ಮೊದಲನೆಯ ಸ್ಟಾಪ್ ನಲ್ಲಿಯೇ ನಾನು ಅವನಿಗೆ, 'ನಿನಗೆ ತುಂಬಾ ದಣಿವಾದಾಗ ನನಗೆ ಹೇಳು, ನಾನು ಇಳಿದು ನಡೆಯುತ್ತೇನೆ. ನಿನಗೂ ವಿಶ್ರಾಂತಿ ಆದ ಹಾಗೆ ಆಗುತ್ತದೆ' ಎಂದು ಹೇಳಿದ್ದೆ. ಅದಕ್ಕೆ ಅವನು, 'ಇಲ್ಲಿ ರಸ್ತೆ ಸರಿ ಇಲ್ಲ. ಒಂದು ಮಟ್ಟಕ್ಕೆ ಬಂದ ನಂತರ, ಏರುವಿಕೆ ಒಂಚೂರೂ ಇಲ್ಲದ ಕಡೆ ತಾನೇ ಇಳಿಸುವುದಾಗಿ ಹೇಳಿದ್ದ.

       ಈಗ ಮಂದಾಕಿನಿಯನ್ನು ದಾಟಿ, ಒಂದೇ ಸಮನೆ ಇದ್ದ ನೂರಾರು ಮೆಟ್ಟಿಲುಗಳನ್ನು ಏರಿ ಆದ ನಂತರ, ಸ್ವಲ್ಪ ಸಮತಲ ಮತ್ತು ಇಳಿಯುವಿಕೆಯ ದಾರಿ ಬಂದಿತ್ತು. ಅವನೂ ಸಹ, ನಿರಂತರವಾಗಿ ನೂರಾರು ಮೆಟ್ಟಿಲುಗಳನ್ನು ಹತ್ತಿ ತೇಕು ಹತ್ತಿದ ಕಾರಣ ಒಮ್ಮೆ ನಿಂತು, ನನ್ನನ್ನು ಇಳಿಸಿ, ಸ್ವಲ್ಪ ವಿಶ್ರಮಿಸಿಕೊಳ್ಳಲು ಬಯಸಿದ. ತಕ್ಷಣ ನಾನು, 'ಇಲ್ಲಿಂದ ಮುಂದೆ ನಾನು ಸ್ವಲ್ಪ ದೂರ ನಡೆಯುತ್ತೇನೆ' ಎಂದಾಗ ಅವನು ಒಪ್ಪಿಕೊಂಡು ನನ್ನ ದಪ್ಪನೆಯ ಕೋಟ್, ಬೆನ್ನಿನ ಚೀಲ ಎಲ್ಲವನ್ನು ನನ್ನಿಂದ ಇಸಿದುಕೊಂಡು ಕುರ್ಚಿಯಲ್ಲಿ ಭದ್ರವಾಗಿಟ್ಟು, ಆ ಕುರ್ಚಿಯನ್ನು ತಾನು ಹೊತ್ತುಕೊಂಡ. ನಾನು ಯಾವುದೇ ಭಾರ ಇಲ್ಲದೆ ಬೀಡುಬೀಸಾಗಿ ನಡೆಯಲು ಸಾಧ್ಯವಾಗುವಂತೆ ಆಯಿತು. ಆ ರೀತಿ ಬ್ಯಾಗನ್ನು ಕುರ್ಚಿಯಲ್ಲಿ ಇಡುವಾಗ ಒಮ್ಮೆಲೇ ಅವನಿಗೆ ಕೆಮ್ಮು ಒತ್ತರಿಸಿ ಬಂತು. ಅವನ ಬಾಯಿಂದ ಸಿಡಿದ ತುಂತುರುಗಳು ನನ್ನ ಚೀಲದ ಮೇಲೆಲ್ಲಾ ಚಿತ್ತಾರ ಬಿಡಿಸಿದವು. ನನಗೆ ಕಸಿವಿಸಿಯಾದರೂ, ಅವನಿಗೆ ಬೇಸರವಾಗಬಾರದೆಂದು, ಕಂಡರೂ ಕಾಣದಂತೆ ಉಳಿದೆ. 'ನಂತರ ರೂಮ್ ಸೇರಿದಾಗ ಒರೆಸಿಕೊಂಡರಾಯಿತು, ಅಲ್ಲಿಯವರೆಗೆ ಹೇಗೂ ಒಣಗಿ ಹೋಗಿರುತ್ತದೆ' ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡೆ.

           ಕೇದಾರನಾಥ ಮಂದಿರದ ಹಿಂದಿನ ದೃಶ್ಯ

 

ನಾನು ಏರಿದ್ದು ಇದೇ ಪಿಟ್ಟೂ  

                                     (ಸಶೇಷ......)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ