ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಜನವರಿ 27, 2020

ಬರ-ನೆರೆ-ಬರೆ

ಮೃಗಶಿರೆಯ ಮಳೆಯ ನೆಚ್ಚಿ ಹೊಲವನುತ್ತಿ ಬೀಜ ಬಿತ್ತಿ
ಮುಗಿಲ ನೋಡೆ ಗಗನದೊಡಲು ಬಿಳಿಯ ಮೋಡ ಹಡೆದಿದೆ
ಉರಿವ ಸೂರ್ಯ ಕಾದ ನೆಲವು ಹುರಿದು ಹೋದ ಎಲ್ಲ ಬೀಜ
ಬರಿಯ ಕನಸು ಸುಖದ ಬದುಕ ಬೆಳಕು ಕಾಣದಾಗಿದೆ      //

ಕಮರಲಿಲ್ಲ ಪೂರ್ತಿ ಕನಸು  ನಡುವೆ ಮಳೆಯು ಹನಿದಿದೆ
ನಮನ ನಿನಗೆ ವರುಣದೇವ    ಇಳೆಯು ಗರ್ಭ ತಳೆದಿದೆ
ಮೊಳಕೆ ಚಿಗುರಿ ನಗುತ ನಿಂತು  ಮುದದಿ ಮುಗಿಲ ನೋಡಿದೆ
ಸುಳಿಯದಾದೆ ಮತ್ತೆ ನೀನು  ಚಿಗುರ ನವಿರು ಮುದುಡಿದೆ       //

ಮನ್ನಿಸೆಲ್ಲ ನಮ್ಮ ಲೋಪ  ಹನಿಸಿ ಣಿಸು ನೆಲದ ತಾಪ
ನಿನ್ನೊಕ್ಕಲ ಬಾಳನುಳಿಸು   ಇದುವೆ ಕರುಳ ಪ್ರಾರ್ಥನೆ
ದೇವ ವರುಣ ತೋರೆ ಕರುಣ  ಕರಿಯ ಮೋಡ ಸಾಲು ಸಾಲು
ಅವತರಿಸಿದ ಭಾಗೀರಥಿ   ಸಲಿಲ ಜಲಲ ಜಲಲಾ            //
                           
ಬಸವಳಿದಿಹ ನೆಲ ತಣಿಯಿತು   ತೃಷೆ ಹಿಂಗಿದ ಬೆಳೆ ಬಳುಕಿತು
ಕಸುವು ಪಡೆಯೆ ಮುಸಲಧಾರೆ  ಕೆರೆಯ ಕೋಡಿ ತುಳುಕಿತು
ನಿಮ್ಮ ಕರುಣಕೆಮ್ಮ ನಮನ  ಹಿಂದೆ ಸರಿದು ಬಿಸಿಲ ಕಳಿಸು
ಕಮ್ಮಿಯಾಗಲಿಲ್ಲ ರಭಸ   ನಿಲ್ಲದ ಜಲಧಾರಾ                     //

ಮಳೆ ಸುರಿಯಿತು ಅನವರತವು  ಸೊಕ್ಕಿ ಹರಿದವೆಲ್ಲ ಹಳ್ಳ
ಗೆಳೆಯ ಕೇಳು ಹೊಲವ ದಾಟಿ   ಕದವತಟ್ಟಿತಗಸೆ  ಮೀರಿ
ಕಾಲ ಕೆಳಗೆ ಮನೆಯ ಒಳಗೆ  ನುಸುಳಿ ಸಾಗಿ ಬರಲು ಗಂಗೆ
ಮೇಲೆ ಸರಿಸಿ ಎಲ್ಲ ದಿನಸಿ  ಹೊರಟ ಗಟ್ಟಿ ನೆಲೆಯೆಡೆ           //

ಒಡವೆ ವಸ್ತ್ರ ಜಾನುವಾರು ಬದುಕಿನೆಲ್ಲ ಮೂಲದ್ರವ್ಯ
ಬಿಡಲೊಲ್ಲದೆ ಹಿಂದೆ ಉಳಿದು  ಮೇಲೇರಲು ಮತ್ತೆ ನೀರು
ಎಲ್ಲ ತೊರೆದು ಮಾಡನೇರೆ  ಸುತ್ತ ಕರಿಯ ಜಲದ ರಾಶಿ
ಝಲ್ಲೆನಿಸಿ ಬೊಬ್ಬೆ ಹೊಡೆಯೆ    ಬಂದ ದೋಣಿ ಏರಿದ         //

ಶಿಬಿರ ಸೇರೆ ಅಲ್ಲಿ ನೋಡು   ಊರಗೌಡ್ರು ಅರ್ಚಕಯ್ಯ
ಸಾಬ  ಸಿಂಪಿ  ಬೇಡ  ಗೊಲ್ಲ  ಕೊನೆಯ ಬೀದಿ ಸಮಗಾರನು
ಎಲ್ಲ ಸೇರಿ ಒಂದೆ ಸಾಲು   ಬೆಳಗಿನ  ಉಪಹಾರಕೆ 
ಬೆಲ್ಲ ಬೇವು  ಭೇದವಳಿಯಿತೆಲ್ಲ ಒಂದೆ ಪೆಟ್ಟಿಗೆ                  //

ವಾರ ಕಳೆದು ನೀರು ಸರಿಯಿತದರ ಮೂಲ ಹರಿವಿನೆಡೆಗೆ
ಬಿರಬಿರನೇ ಊರಿಗೋಡಿ  ನೋಡಲಲ್ಲಿ ಏನುಳಿದಿದೆ
ಲ್ಲ ಗುಡಿಸಿ ಕೆಸರ ಹೊದಿಸಿ  ಕೆಲಸ ಮುಗಿಸಿ ಬಿಟ್ಟೋಡಿದೆ
ಎಲ್ಲಿ ಮನೆಯು ಮಣ್ಣ ರಾಶಿ  ಎಲ್ಲ ಕೊಳೆತು ಕಳಿತಿದೆ        //

ಕಣ್ಣಿ ಬಿಚ್ಚದಿದ್ದ ಎಮ್ಮೆ  ಎತ್ತು ಕೋಳಿ ಆಡು ಮೇಕೆ
ತಣ್ಣಗಲ್ಲೆ ಜೀವ ತೊರೆದು  ದೇಹ ಉಬ್ಬಿ ಕೊಳೆಯುತಿರಲು
ಮರೆವುದ್ಹೇಗೆ ಅವರ ಸಂಗ   ಕಣ್ಣ ನೋಟ ಮೂಕಪ್ರೇಮ
ಕೊರಗು ಹೃದಯ ಹಿಂಡುತಿಹುದು  ತಾವೆ ಕೊಟ್ಟ ನರಳಿಕೆ  //

ಏಕೆ ಕುಣಿವೆ ಕ್ರೂರ ವಿಧಿಯೆ  ಎಲ್ಲ ಹೊಸಕಿ ಹಾಕಿ ಹೋದೆ
ನೆಕ್ಕಲಿನ್ನು ಉಳಿದುದೇನು  ಕಣ್ಣ ನೀರು ಹಳೆಯ ನೆನಪು
ಪಾಪ ಯಾರು ಮಾಡಿದರೋ  ತಾಪ ನಮ್ಮ ಹಣೆಯ ಬರಹ
ಒಪ್ಪ ಮಾಡಿ ಕೊಳ್ಳಲೀಗ   ಶಿವನ ಕರುಣೆ ಬೇಕಿದೆ            //

ಪ್ರಳಯ ಮಳೆಯ ವರ್ತಮಾನ  ನಾಡತುಂಬ ಹರಡಲಾಗ
ಹಳೆಯ ಗೆಳೆಯರೆಂಬ ರೀತಿ  ಜಗದ ಹೃದಯ ಮಿಡಿಯಿತಲ್ಲ
ರೊಟ್ಟಿ ಅಕ್ಕಿ ಧವಸ ಧಾನ್ಯ  ಬಟ್ಟೆ ಕೌದಿ ಗುಳಿಗೆ ಮದ್ದು
ಕೊಟ್ಟರಲ್ಲ ಪಾಟಿ ಪೆನ್ನು  ದಿನಬಳಕೆಯ ಪರಿಕರ           //

ಹರಿದು ಬರಲು ಕರುಣೆ ಕೊಡುಗೆ  ಚಿಗುರಿ ನಿಂತ ದುರುಳ ಕೂಟ
ಮುರಿದ ಮನೆಯೆ ತಮ್ಮದೆಂದು  ಬಾಚಿಕೊಂಡ ಖಳರ ಹೂಟ
ದೀನ ದಲಿತ ಮುದುಕ ಮುದುಕಿ  ಹಿಂದೆ ಉಳಿದು ಅಳುತ ನಿಲಲು
ಹೀನ ಬುದ್ಧಿ ನೆರೆಯ ಕೆಸರಿನಲ್ಲು ವೋಟು ಗುಣಿಸಿದೆ         //

ಮನೆ ಅಳಿಯಿತು ಬೆಳೆ ಹೋಯಿತು   ಹೊಲದಿ ರಾಡಿ ಹರಡಿ ಮಲೆತು
ಜಾನುವಾರು ಕೊಚ್ಚಿ ಹೋಗಿ  ಕೃಷಿಯ ನೆಚ್ಚು ಅಳಿದು ನಲುಗಿ
ಹಳ್ಳಿ - ಕೇರಿ ಜನರ ಬದುಕು   ಹಸನು ಬಾಳು ಹಿಪ್ಪೆಯಾಯ್ತು
ಕೊಳ್ಳೆ ಹೊಡೆದ ಗುಳ್ಳೆ ನರಿಯು  ಮತ್ತೆ ನೆರೆಯ ಕರೆದಿದೆ     //
                 
                                   - ರವೀಂದ್ರ ಭಟ್, ದೊಡ್ನಳ್ಳಿ.
                
           (2019 ಅಗಸ್ಟ್ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಬಂದ ಭಾರಿ ಮಳೆ ಮತ್ತು ನಂತರದ ಪ್ರವಾಹ ತಂದಿತ್ತ 
         ದುರಂತಗಳನ್ನು ವೀಕ್ಷಿಸಿ ಮನಕಲಕಿ ಬರೆದಿದ್ದು)

ಗುರುವಾರ, ಜನವರಿ 2, 2020

ಹೀಗೇಕೆ ನಾವು ಭಾರತೀಯರು

ಸ್ವಾರ್ಥವೆಮ್ಮ ಪರಂಪರೆಯು
ಇದುವೆ ನಮ್ಮ ಸಂಸ್ಕೃತಿ
ಲಂಚ ಎಮಗೆ ವರ್ಜ್ಯವಲ್ಲ
ಎಲ್ಲೆಡೆಯಿದೆ ಮಾನ್ಯತೆ


ಲಂಚಕೋರ ಪರಮಶೂರ
ಅಪ್ಪಿಕೊಳುವೆವವನನು
ತಪ್ಪು ತಿದ್ದುವಲ್ಲಿ ಎಮಗೆ
ಇಲ್ಲ ಎನಿತು ಆಸ್ತೆಯು


ಕಾಣಿಕೆಯನು ಅಳತೆ ಮೀರಿ
ಸಲ್ಲಿಸುವರು ಗುಡಿಯಲಿ
ಯೋಗ್ಯತೆಯದು ಇರಲಿ ಬಿಡಲಿ
ಬೇಡಿ ಫಲವ ಶೀಘ್ರದಿ


ಭಕ್ತಿ ಭಾವ ಏನು ಇಲ್ಲ
ಕೊಡುಕೊಳ್ಳುವ ಪರಿಯಿದು
ಹೊರಗೆ ಬಂದು ನೋಡಿರಯ್ಯ
ಇದಕ್ಕೆ 'ಲಂಚ' ಎನುವರು

ತಿರುಗಿನೋಡು ನಮ್ಮ ಚರಿತೆ
ಲಂಚ ಯುದ್ಧ ಗೆದ್ದಿದೆ
ಮೀರ್ ಜಾಫರ್ ಶೆಟ್ಟಿ ಮಲ್ಲ
ಮನೆಮುರುಕರ ದಂಡಿದೆ


ಪಾರ್ಸಿ ಹಿಂದು ಮುಸಲ್ಮಾನ
ಬುದ್ಧ ಕ್ರೈಸ್ತ ಜೈನರು
ತಮಿಳ ತೆಲುಗ ಹಿಂದಿ ವಂಗ
ಕೇರಳಿ ಕರ್ನಾಟಕಿ


ಏಕೆ ಹೀಗೆ ಹಿಂದೆ ಸರಿಸಿ
ಮೊದಲು ಬರಲಿ ದೇಶವು
ಸೆಟೆದು ಹೇಳಿ ಎದೆಯುಬ್ಬಿಸಿ
ನಾವು ಭಾರತೀಯರು'


ಹಳೆಯ ಚರಿತೆ ಹೊಸಕಿ ಹಾಕಿ
ಹೊಸದೆ ದೇಶ ಕಟ್ಟುವಾ
ಮೊದಲು ದೇಶಸೂತ್ರ ಪಠಿಸಿ
ದೇಶ ಗೆಲಿಸಿ ಗೆಲ್ಲುವಾ
ದೇಶ ಗೆಲಿಸಿ ಗೆಲ್ಲುವಾ


  • ರವೀಂದ್ರ ಭಟ್ ದೊಡ್ನಳ್ಳಿ
(ಜಾಲತಾಣದಲ್ಲಿ ಕಂಡ ಸಂದೇಶವೊಂದರಿಂದ ಸ್ಪೂರ್ತಿ ಪಡೆದು)

ಮಂಗಳವಾರ, ಡಿಸೆಂಬರ್ 24, 2019

ನನ್ನೂರು ದೊಡ್ನಳ್ಳಿ

ಸಹ್ಯಾದ್ರಿಯ ಉತ್ತುಂಗದ
ಶಿರದಿ ಪವಡಿಸಿರುವ ಪುರವು
ಮೆರೆವ ದೇವಿ ಮಾರಿಕಾಂಬೆ
ನೆಲೆಯಾಗಿಹ ಶಿರಸಿಯು.  /
ಪುಣ್ಯ ಶಿರಸಿಯೂರಿನಿಂದ
ಆರು ಮೈಲು ಪೂರ್ವದಲ್ಲಿ
ಶಂಭುಲಿಂಗ ಸ್ವಾಮಿ ನೆಲೆಸಿ
ಹರಸುತಿರುವ ಧಾಮವು.
ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು.  //

ಊರ ಹಿಂದೆ ದಟ್ಟ ಕಾಡು
ಎದುರಿನಲ್ಲಿ ಬಯಲುಗದ್ದೆ
ಇರುವ ಮೂರು ಕಣಿವೆಗಳಲಿ
ನಳನಳಿಸುವ ತೋಟವು. /
ಬೆಟ್ಟ ಬೇಣ ತೆಂಗು ಕಂಗು
ಸುತ್ತ ಹರಿದ್ವರ್ಣ ಸೊಬಗು
ಕೋಡಿ ಹರಿಸಿ ಬೀಗುತಿರುವ
ಹರಡಿದಾರು ಕೆರೆಗಳು.
ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು.  //

ಶಂಭುಲಿಂಗ ಸ್ವಾಮಿ ಗುಡಿಯು
ಸಲಿಲ  ತೀರ್ಥ ಹೊಂಡವು
ಏಳು ದಶಕ ಕಳೆದ ಹೆಮ್ಮೆ
ಮೂಡಿಸಿರುವ ಶಾಲೆಯು. /
ಸುತ್ತ ಹತ್ತು ಹಳ್ಳಿಗಳಿಗೆ
ಪಂಚಾಯತಿ ಕೇಂದ್ರವು
ಎಲ್ಲ ರೈತ ಬಂಧುಗಳಿಗೆ
ಬೆನ್ನೆಲುಬಿನ ಸಂಘವು.
ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು.  //

ಮುರಿದ ಎಲುಬು ಕೀಲುಗಳಿಗೆ
ದಿವ್ಯೌಷಧ  ಇಲ್ಲಿದೆ.
ಜಿಲ್ಲೆಯಲ್ಲೆ ಹೆಸರುವಾಸಿ
ಡಬ್ಬಿ ಬೆಲ್ಲ ನಮ್ಮದೇ.
ಸ್ನೇಹಪರರು ಊರಜನರು
ಕ್ರೀಡೆ ಕಲೆಯ ರುಚಿಯಿದೆ.
ಜನಿಸಬೇಕು ಮತ್ತೆ ಇಲ್ಲೇ
ಇದೇ ನೆಲದ ಕನಸಿದೆ.
 ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು.  //

          -ರವೀಂದ್ರ ಭಟ್, ದೊಡ್ನಳ್ಳಿ.

























ಗುರುವಾರ, ಡಿಸೆಂಬರ್ 12, 2019

ದಿಗಂತಾಲಿಂಗನ

                   ಏಕೆ ನಾಚುವೆ ನಿನ್ನ
                   ಮನದನ್ನೆ ಧಾತ್ರಿಯನು 
                   ಬಿಗಿದಪ್ಪಿ  ಚುಂಬಿಸಲು  ಅಂಬರೇಶ  ।
                   ಜನಕಂಜಿ ಅಬಲೆಯನು 
                   ಕ್ಷಿತಿಜದಂಚಿಗೆ ಕರೆದು 
                   ಮುದ್ದಿಸುವೆ ಮೈಮರೆತು  ನಾನು ಬಲ್ಲೆ.   ।।

                  ಪ್ರೀತಿ ಮಾಡಿದ ಮೇಲೆ 
                  ಇನ್ನೇಕೆ ಅಂಜಿಕೆಯು 
                  ಸರಳೆ ಸದ್ಗುಣೆ  ಸಹಜೆ  ನಮ್ಮ ಧಾತ್ರಿ  ।
                  ಈ ಜನಕೆ ತಮ್ಮವರ 
                  ಪ್ರೀತಿಸಲೇ ಬಿಡುವಿಲ್ಲ 
                  ನಿಮ್ಮನೇನ್ ನೋಡುವರು ಬಾಚಿ ತಬ್ಬು.   ।।


                                    -ರವೀಂದ್ರ ಭಟ್, ದೊಡ್ನಳ್ಳಿ 

ಬುಧವಾರ, ಡಿಸೆಂಬರ್ 6, 2017

ಕಗ್ಗಲ್ಲಿಗೆ ಬಿದ್ದವು ಚಾಣದೇಟುಗಳು -ಭಾಗ - 2

                                

 ......ತಿಳಿ ಆಕಾಶನೀಲಿ ವರ್ಣದ ನೆಹರೂ ಶರ್ಟ್, ಒಂದು ಬಿಳಿ ಪಂಚೆ, ಮೇಲೊಂದು ಬಿಳಿ ಅಂಗವಸ್ತ್ರ ಇದು ಅನಂತ ಹೆಗಡೆಯವರ ದಿರಿಸು – ಸಾದಾ ದಿನಗಳಲ್ಲೂ, ವಿಶೇಷ ಸಂದರ್ಭಗಳಲ್ಲೂ  - ಅಂದಿಗೂ, ಇಂದಿಗೂ ಕೂಡ.  ದಿಟ್ಟಿಸಿದೊಡನೆ ಎದುರಿಗನ  ಒಳಗನ್ನು ಬಗೆದು ಅರ್ಥೈಸಿಕೊಳ್ಳಬಲ್ಲ ತೀಕ್ಷ್ಣ ಆದರೂ ದಯಾರ್ದ್ರ ದೃಷ್ಟಿ. ಮೇಲ್ನೋಟಕ್ಕೆ ಗಂಭೀರರಾಗಿ ಕಂಡರೂ ಕಣ್ಣಲ್ಲಿ  ಕಣ್ಣಿಟ್ಟು ನೋಡಿದಾಗ ಅಲ್ಲಿ ಕಾಣುವ ತುಂಟತನದ ಛಾಯೆ. ಮಾತಿಗೆ ಹಚ್ಚಿಕೊಂಡಾಗ ಹರಡಿಕೊಳ್ಳುವ ಅವರ ಲೋಕಜ್ನಾನ ಮತ್ತು ಓದಿದ ಪುಸ್ತಕಗಳ ಅರಿವಿನ ಹರಹು, ಚಿಂತನೆಗೆ ಹಚ್ಚುವ ಗಂಭೀರ ಹಾಸ್ಯದ ನುಡಿಗಳು – ಸಂದರ್ಭಕ್ಕೆ ತಕ್ಕ ಹಾಗೆ ಪ್ರತ್ಯಕ್ಷವಾಗುವ  ಬೋಧಪ್ರದ  ಕಿರುಗತೆಗಳು,ಒಂದೇ ಎರಡೇ ... ಒಟ್ಟಿನಲ್ಲಿ ಸಹೃದಯೇ ಸಜ್ಜನರಿಗೆ ಅವರ ಕೂಟ ಎಂದರೆ ಅದು ಹೆಜ್ಜೇನಿನ ಸವಿಯನ್ನು ಜೇನುಹುಟ್ಟಿಗೇ ನೇರ ಬಾಯಿ ಹಾಕಿ ಸವಿದ ಹಾಗೆ! ಅಷ್ಟೊಂದು  ಆಹ್ಲಾದಕರ . ಹಾಗಾಗಿಯೇ ಅವರ ಭೆಟ್ಟಿಗೆ ಬರುತ್ತಿದ್ದ ವಿದ್ವಜ್ಜನರ ದೊಡ್ಡ ದಂಡೇ ಇರುತ್ತಿತ್ತು ಅವರ ಮನೆಯಲ್ಲಿ.
       ನನ್ನ ಪೂರ್ವಕೃತ ಪುಣ್ಯದ ಫಲವೋ ಎಂಬಂತೆ ಇವರ ನೆರಳಿನಲ್ಲಿ ಇರುವ ಪ್ರಮೇಯ ನನಗೆ ಒದಗಿ ಬಂತು ಎಂದು ಈಗ ಅನಿಸುತ್ತದೆ. ಗುಡ್ಡದ ಮೇಲೆ ಬಿದ್ದಿದ್ದ  ಕಗ್ಗಲ್ಲಿನಂತೆ ಇದ್ದ ನನ್ನನ್ನು ಮೂರ್ತಿಯಾಗಿಸಲು ಮೊದಲ ಚಾಣದೇಟುಗಳು ಬಹುಶ: ಇಲ್ಲಿಯೇ ಬಿದ್ದವು ಎನಿಸುತ್ತದೆ. ನಾನು ಅವರ ಮನೆಯಲ್ಲಿ ಇರತೊಡಗಿದ ಹೊಸದರಲ್ಲಿ ಒಂದು ದಿನ ಊಟ ಮಾಡುವಾಗ ನಡುವೆ ನನ್ನ ಕೈಯ್ಯನ್ನು ತೋರಿಸಲು ಹೇಳಿದರು. ಅಂಗೈ ದಾಟಿ ಮುಂಗೈ ಬುಡದವರೆಗೂ ರಾಡಿಯಾಗಿದ್ದ ನನ್ನ ಹಸ್ತವನ್ನು ನೋಡಿ ನನ್ನ ಪಕ್ಕವೇ ಕುಳಿತಿದ್ದ ಅವರ ಮಗ ಶಿವರಾಮನ ಕೈ ತೋರಿಸಲು ಹೇಳಿದರು. ಅವನ ಬೆರಳುಗಳು ಮಾತ್ರ ಒದ್ದೆಯಾಗಿದ್ದು ಅಂಗೈ ಪೂರ್ತಿ ಒಣಗಿ ಸ್ವಚ್ಚವಾಗಿತ್ತು. ಅಷ್ಟೇ – ಹೆಚ್ಚಿನ ಸೂಚನೆಯಿಲ್ಲ - ಅಂದಿನಿಂದ ಇಂದಿನವರೆಗೂ ಅದೆಷ್ಟೇ ನೀರಾಗಿದ್ದ (ರಸಮಯವಾದ) ಅಡಿಗೆಯೇ ಇದ್ದರೂ ಅಂಗೈಯ್ಯನ್ನು ಒದ್ದೆಮಾಡಿಕೊಂಡಿಲ್ಲ – ಪಾಯಸ ಸುರಿಯುವಾಗ ಕೂಡ . ಏನನ್ನೂ ಕಠೋರವಾಗಿ ಹೇಳದೇ ಕೇವಲ ಇಂಗಿತಮಾತ್ರದಿಂದ ತಿಳಿಸಿಕೊಡುವ ಅವರ ಪರಿ ಅನುಕರಣೀಯ. ಅತ್ಯಂತ ಸುಸಂಸ್ಕೃತ ನಡವಳಿಕೆ ಹೊಂದಿದ ಈ ದಂಪತಿಯ ಸಂಸ್ಕಾರ ಅವರ ಮಕ್ಕಳಲ್ಲಿ ಯಥಾವತ್ ಹರಿದು ಬಂದಿದೆ. ಅಷ್ಟಕ್ಕೂ ಮನೆಯ ಹಿರಿಯರ ಸನ್ನಡತೆ  ಸುಸಂಸ್ಕಾರಗಳು ಮನೆಯ ಮಕ್ಕಳಲ್ಲಿ ಅವರಿಗರಿವಿಲ್ಲದೇ ಇಳಿದು ಬಂದಿರುತ್ತವೆಯೇ ವಿನಹ ಈ ಸಂಸ್ಕಾರ ಎಂಬುದನ್ನು  ಕಲಿಸಲು ಪ್ರತ್ಯೇಕ ಪಠ್ಯಕ್ರಮ ಇರುವದಿಲ್ಲ.  ಬಾಲ್ಯದಲ್ಲಿ ಸುಸಂಸ್ಕಾರವನ್ನು ಹೊಂದಿದ ಮಕ್ಕಳು ಅಕಸ್ಮಾತ್ ಯೌವ್ವನದಲ್ಲಿ ಸಂಗದೋಷದಿಂದ ದಾರಿಬಿಟ್ಟರೂ ಅವರಲ್ಲಿ ಅಂತರ್ಗತವಾಗಿರುವ ಸಂಸ್ಕಾರ ಅವರನ್ನು ಬೇಗನೆ ಮೂಲನೆಲೆಗೆ ಮರಳಿಸುತ್ತದೆ. ಬಾಲ್ಯದಲ್ಲಿ ಅಚ್ಚೊತ್ತಿರುವ ಸುಸಂಸ್ಕಾರ ತನ್ನ ಒತ್ತಡವನ್ನು ಹೇರಿಯೇ ತೀರುತ್ತದೆ.
    ಅನಂತ ಹೆಗಡೆಯವರು ಅಪ್ರತಿಮ ಕನ್ನಡಾಭಿಮಾನಿ. ಸೊಗಸಾದ ಕನ್ನಡ ಭಾಷೆ ಅವರದು. ಕನ್ನಡದ ಪ್ರಸಿದ್ಧ ಲೇಖಕರ ಪುಸ್ತಕಗಳನ್ನು ಒಳಗೊಂಡ,  ಸಾಕಷ್ಟು ದೊಡ್ಡದೇ ಆದ, ಒಂದು ವೈಯಕ್ತಿಕ ಲೈಬ್ರರಿಯನ್ನು ಇಟ್ಟುಕೊಂಡಿದ್ದಾರೆ. ಜೊತೆಗೇ ಸುವಿಚಾರಿ ನಿಯತಕಾಲಿಕೆಗಳಾದ ಕಸ್ತೂರಿ. ಉತ್ಥಾನ, ವಿಕ್ರಮ ಇತ್ಯಾದಿಗಳು ಬಹುಶ: ಅವುಗಳ ಪ್ರಾರಂಭದ ಸಂಚಿಕೆಯಿಂದಲೇ ಇವರಲ್ಲಿ ಲಭ್ಯ. ದಿನಾಲೂ ರಾತ್ರಿ ದೀಪದ ಬೆಳಕಿನಲ್ಲಿ ಓದು. ಹಗಲೆಲ್ಲ ಸಾಮಾಜಿಕ ಕಾರ್ಯ, ಗೃಹಕಾರ್ಯಗಳು.
      ಆ ಕಾಲಘಟ್ಟದಲ್ಲಿ ”ಬರೂರು ಸೀಮೆ”ಯಲ್ಲಿ ನಡೆದ ಹೆಚ್ಚಿನೆಲ್ಲ ಸಾಮಾಜಿಕ ಸ್ಥಿತ್ಯಂತರಗಳಿಗೆ ಅವರು ಕಾರಣೀಭೂತರು ಅಥವಾ ಪ್ರೋತ್ಸಾಹಕರು. ಸಹಜವಾಗಿಯೇ ತಾಲೂಕು ಕೇಂದ್ರವಾದ ಶಿರಸಿಯ ಗಣ್ಯರಲ್ಲಿಯೂ ಒಬ್ಬರಾಗಿ ಅವರು ಗುರುತಿಸಿಕೊಂಡಿದ್ದರು. ಅವರ ಈ ಉತ್ಕರ್ಷ ಅವರ ಸಮಕಾಲೀನರಲ್ಲಿ ಕೆಲವರ ಹೊಟ್ಟೆಕಿಚ್ಚಿಗೂ ಕಾರಣವಾಗಿ ಅವರ ಮೇಲೆ ಇಲ್ಲಸಲ್ಲದ ಮಿಥ್ಯಾರೋಪ, ಜಗಳ ಇತ್ಯಾದಿಗಳನ್ನು ಎಬ್ಬಿಸಿದರೂ ಅವಕ್ಕೆಲ್ಲ  ಪ್ರತಿಕ್ರಿಯಿಸಲು ಹೋಗದೇ ಧೀಮಂತಿಕೆಯಿಂದ ನಿಭಾಯಿಸಿ , ಕುಬುದ್ಧಿ ತೋರಿದವರೇ ಲಜ್ಜೆ ಪಟ್ಟುಕೊಳ್ಳುವಂತೆ ಮಾಡಿ, ಅವರನ್ನೂ ತನ್ನ ಅಭಿಮಾನಿಗಳಾಗಿ ಪರಿವರ್ತಿಸಿದ ವ್ಯವಹಾರ ಚತುರ ಮುತ್ಸದ್ಧಿ ಅವರು.
      1975 ರಲ್ಲಿ ನನ್ನ ಹೈಸ್ಕೂಲು ಮುಗಿದು  ಅವರ ಮನೆಯನ್ನು ನಾನು ಬಿಡುತ್ತಿದ್ದಂತೆ ನನ್ನ ಸಂಬಂಧಿ ಹುಡುಗನೊಬ್ಬ, ತದನಂತರ ಇನ್ನೊಬ್ಬ ಸಂಬಂಧಿ ಹುಡುಗ, ಆನಂತರ ಯಲ್ಲಾಪುರ ಸೀಮೆಯ ಇನ್ನೂ ಹಲವಾರು ಹುಡುಗರು ,… ಈ ರೀತಿ ಸರಪಳಿ ಮುಂದುವರೆದು ಹಲವಾರು ಮಕ್ಕಳು ಅವರ ಮನೆಯ ಆಶ್ರಯ ಪಡೆದು ತಮ್ಮ ಹೈಸ್ಕೂಲು ಶಿಕ್ಷಣವನ್ನು ಮುಗಿಸಿದ್ದಾರೆ. ಒಂದರ್ಥದಲ್ಲಿ ಇವರ ಮನೆಯ ಸಂಸ್ಕಾರದ ರಾಯಭಾರಿಗಳಾಗಿ ಎಲ್ಲೆಡೆ ಹಂಚಿ ಹೋಗಿದ್ದಾರೆ – ವಿಶಾಲ ಆಲದ ಮರದ ಹಣ್ಣು ತಿಂದ ಹಕ್ಕಿಗಳು ತಾವು ಬೀಜಪ್ರಸರಣದ ರಾಯಭಾರಿಗಳಾಗುವ ಹಾಗೆ.
       ನಾನು ಅವರ ಮನೆ ಬಿಟ್ಟರೂ ಸಂಪರ್ಕ ಬಿಡಲಿಲ್ಲ. ಅನಂತ ಹೆಗಡೆಯವರ ಮಗ ಶಿವರಾಮ್ 10ನೇ ತರಗತಿಗೆ ಸಂಸ್ಕೃತ ಕಲಿಯುವ ಸಲುವಾಗಿ ಮೈಸೂರು ಸೇರಿದ. (ಅದೆಷ್ಟು ಸಂಸ್ಕೃತ ಕಲಿತನೋ ನಾಕಾಣೆ – ಶಿವೂನ ಕ್ಷಮೆ ಕೋರಿ). ನಾನು ಇಂಜಿನೀರಿಂಗ್ ಓದಲು ಮೈಸೂರಿಗೆ ಬಂದಾಗ ಅದು ಹೇಗೋ ನನ್ನ ವಿಳಾಸ ಪತ್ತೆ ಮಾಡಿ, ನನ್ನ ರೂಮಿಗೆ ಬಂದು ಆತ್ಮೀಯವಾಗಿ ನನ್ನೊಡನೆ ಬೆರೆತ. ಸಾಹುಕಾರರ ಮಗ, ಧಿಮಾಕು ತೋರಬಹುದು ಎಂದು  ಅತ್ಯಂತ   ಎಚ್ಚರಿಕೆಯಿಂದಲೇ ಅವನೆಡೆಗೆ ಮತ್ತೊಮ್ಮೆ ಸ್ನೇಹಹಸ್ತ ಚಾಚಿದ್ದೆ. ಆದರೆ ನನ್ನ ಆತಂಕ ತಳಬುಡವಿಲ್ಲದ್ದು ಎಂದು ಬೇಗನೇ ಮನದಟ್ಟಾಗಿತ್ತು. ಅಂದಿನಿಂದ ಇಂದಿನವರೆಗೆ ನನ್ನ ಪರಮಾಪ್ತರಲ್ಲಿ ಅವನೂ ಒಬ್ಬನಾಗಿ, ನನ್ನ “ಆತ್ಮಬಂಧು”ವಾಗಿ ಉಳಿದಿದ್ದಾನೆ. ಅನಂತ ಪರಿವಾರದ ಜೊತೆಗಿನ ನಿಕಟ ಒಡನಾಟಕ್ಕೆ  “ವಿಶೇಷ ಕಾರಣ”ವಾಗಿದ್ದಾನೆ.

    ಈಗ ಅನಂತ ಹೆಗಡೆ -ಸರ್ವೇಶ್ವರಮ್ಮ ದಂಪತಿ   ತಮ್ಮ ಬದುಕಿನ ಎಂಟನೇ ದಶಕದಲ್ಲಿದ್ದಾರೆ. ಈಗಲೂ ಜ್ನಾನಪಿಪಾಸುಗಳಿಗೆ ಅನಂತ ಹೆಗಡೆಯವರೊಬ್ಬ ಆತ್ಮೀಯ ಮಿತ್ರ. ಮನೆಯ ಹದಿಮೂರು ಮೊಮ್ಮಕ್ಕಳಿಗೆ ಅತ್ಯಾಪ್ತ ಸಲಹೆಗಾರ. ತಮ್ಮ ವಿಸ್ತಾರವಾದ ಜೀವನಾನುಭವದ ನೆಲೆಯಲ್ಲಿ ಮೊಮ್ಮಕ್ಕಳ ಸರ್ವ ಸಮಸ್ಯೆಗಳಿಗೆ ಚಿಕ್ಕ –ಚೊಕ್ಕ ದೃಷ್ಟಾಂತಗಳ ಮೂಲಕ ಪರಿಹಾರವನ್ನು ಮನದಟ್ಟಾಗುವಂತೆ ತಿಳಿಹೇಳಬಲ್ಲ ಧೀಮಂತ. ತಮ್ಮವರಷ್ಟೇ ಅಲ್ಲ , ನಮ್ಮೆಲ್ಲರ ಮಕ್ಕಳಿಗೂ, ಊರಿನ ಎಲ್ಲ ಕಿರಿಯರಿಗೂ ಆತ್ಮೀಯ ಅನಂತಜ್ಜ”. ಈ ದಂಪತಿಯನ್ನು ಕಣ್ರೆಪ್ಪೆಯಂತೆ  ಕಾಪಿಡುವ ಮಕ್ಕಳು. ಈ ಜೋಡಿ “ಶತಮಾನದ ಸಂಭ್ರಮ” ಕಾಣಬೇಕಾಗಿದ್ದುದು ಸಾಮಾಜಿಕ ಅವಶ್ಯಕತೆ ಎಂದು ನನಗೆ ಅನಿಸುತ್ತದೆ. (ಅಂದಹಾಗೆ  ಇವರ ಬದುಕಿನ ವಿವಿಧ ಮುಖಗಳ ಕೇವಲ  ಕಿರು ಪರಿಚಯ ಮಾಡಲು ಉದ್ಯುಕ್ತನಾದರೂ ಈ ಲೇಖನ ಇನ್ನೂ ಹಲವು ಪುಟಗಳಿಗೆ ವಿಸ್ತರಿಸಿ ಬಿಡುತ್ತದೆ. ಇಲ್ಲಿ ಆ ಸಾಹಸ ಮಾಡದೆ, ಮುಂದಿನ ನನ್ನ ಬರಹಗಳಲ್ಲಿ ಸಂದರ್ಭಾನುಸಾರ ಅವುಗಳನ್ನೆಲ್ಲ ಉದಾಹರಿಸುತ್ತೇನೆ). 
    ಈ ಹಿರಿಯರು ಶತಮಾನದ ಮೈಲಿಗಲ್ಲು ದಾಟಿ ಮುಂದೆ ಸಾಗಲಿ, ನಮಗೆಲ್ಲ ತಮ್ಮ ಅಮರವಾಣಿಯಿಂದ  ಮಾರ್ಗದರ್ಶನ ಮಾಡುತ್ತಿರಲಿ ಎಂದು ಆಶಿಸೋಣ, ಅಲ್ಲವೇ?
    “ಯಶಸ್ಸು” ಎಂಬುದಕ್ಕೆ ನೂರು ಜನ ನೂರು ಬೇರೆಬೇರೆ ವ್ಯಾಖ್ಯೆಯನ್ನು ನೀಡಬಹುದು. ಆದರೆ ನನ್ನ ದೃಷ್ಟಿಯಲ್ಲಿ, “ಜೀವನದಲ್ಲಿ ಹಿಂತಿರುಗಿ ನೋಡಿದಾಗ, ನಮ್ಮ ಪ್ರತಿ ಹೆಜ್ಜೆ ಸಮಾಜಮುಖಿಯಾಗಿತ್ತು ಎಂಬ ತೃಪ್ತಿ ನೀಡುವ ಬದುಕು ಯಶಸ್ವೀ ಬದುಕು’. “ಅನಂತ ಬದುಕು” ಹಾಗೇ ಇದೆ.  ಅಲ್ಲವೇ?