ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಆಗಸ್ಟ್ 25, 2024

ಚಾರ್ ಧಾಮ ಯಾತ್ರೆ -ಭಾಗ 8

                                                     

ಚಾರ್ ಧಾಮ ಯಾತ್ರೆ -ಭಾಗ 8

ಕೇದಾರನಾಥ ಸ್ವಾಮಿ ದರ್ಶನ

ದಿನಾಂಕ:-16/05/2024

         ಕೇದಾರನಾಥ ಯಾತ್ರಾ ವಿವರಗಳನ್ನು ನೀಡುವ ಮೊದಲು ಪಂಚಕೇದಾರದ ಕುರಿತು ಒಂದು ಸಂಕ್ಷಿಪ್ತ ಮಾಹಿತಿ ಅವಶ್ಯಕ ಎನಿಸುತ್ತದೆ.

        ಇದರ ಹಿಂದೆ ಒಂದು ಪೌರಾಣಿಕ ದಂತಕಥೆ ಇದೆ. ಮಹಾಭಾರತ ಯುದ್ಧದಲ್ಲಿ ನಡೆದ ಸ್ವಜನ ಹತ್ಯೆ, ಬ್ರಾಹ್ಮಣ ಹತ್ಯೆ, ಗುರು ಹತ್ಯೆಗಳಿಂದ ವ್ಯಾಕುಲಗೊಂಡ ಪಾಂಡವರು ಕಾಶಿಯಲ್ಲಿ ವಿಶ್ವೇಶ್ವರನ ದರ್ಶನ ಮಾಡಿ ಪಾಪ ವಿಮೋಚನೆ ಮಾಡಿಕೊಳ್ಳಬಯಸಿದರಂತೆ. ಆದರೆ ಮಹಾಭಾರತ ಯುದ್ಧದ ಹತ್ಯಾಕಾಂಡದಿಂದ ಶಿವನೂ ಸಹ ಕ್ಷೋಭೆಗೊಳಗಾಗಿದ್ದನಂತೆ. ಪಾಂಡವರಿಗೆ ದರ್ಶನ ನೀಡಲು ಬಯಸದ ಶಿವನು ಕಾಶಿಯಿಂದ ಮಾಯವಾಗಿ ಹಿಮಾಲಯದ ಗರ್ವಾಲ್ ಪ್ರಾಂತ್ಯದಲ್ಲಿ, ಈಗಿನ ಗುಪ್ತಕಾಶಿಯ ಬಳಿ, ಗೂಳಿಯ ರೂಪದಲ್ಲಿ ಅಡ್ದಾಡುತ್ತಿದ್ದನಂತೆ. ಇದನ್ನು ಶ್ರೀಕೃಷ್ಣನ ಮೂಲಕ ಅರಿತ ಪಾಂಡವರು ಗುಪ್ತ ಕಾಶಿಗೆ ಬರಲು ಶಿವನು ಅಲ್ಲಿಂದಲೂ ಮಾಯವಾಗಿ ಕೇದಾರಪ್ರಾಂತ್ಯದ ಬಳಿ ಅಸಂಖ್ಯ ಗೂಳಿಗಳ ನಡುವೆ ಸೇರಿಕೊಂಡುಬಿಟ್ಟನಂತೆ. ಗುಪ್ತ ಕಾಶಿಯಲ್ಲಿ ಶಿವನನ್ನು ಕಾಣದ ಪಾಂಡವರು ಮತ್ತೆ ಶ್ರೀ ಕೃಷ್ಣನಿಗೆ ಮೊರೆ ಇಟ್ಟಾಗ, ಶ್ರೀ ಕೃಷ್ಣನು ಕೋಟಿನಾರಾಯಣ ರೂಪದಲ್ಲಿ ದರ್ಶನ ನೀಡಿ, ಶಿವನು ಕೇದಾರನಾಥಕ್ಕೆ ತೆರಳಿರುವುದನ್ನು ಪಾಂಡವರಿಗೆ ತಿಳಿಸಿದಂತೆ. ಅಲ್ಲಿಗೆ ಬಂದ ಪಾಂಡವರು ಈ ಗೂಳಿಗಳ ಸಮೂಹದಲ್ಲಿ ಶಿವನನ್ನು ಹುಡುಕುವುದು ಹೇಗೆ ಎಂದು ಯೋಚಿಸುತ್ತಿದ್ದಾಗ, ಧರ್ಮರಾಜನ ಆದೇಶದಂತೆ ಭೀಮನು ಎರಡು ಪರ್ವತಗಳ ನಡುವೆ ಕಾಲುಚಾಚಿ ನಿಂತನಂತೆ. ಅರ್ಜುನನು ಆ ಎಲ್ಲಾ ಗೂಳಿಗಳನ್ನು ಇವನ ಕಾಲುಗಳ ನಡುವೆ ಹಾದುಹೋಗುವಂತೆ ಓಡಿಸತೊಡಗಿದನಂತೆ. ಒಂದು ಗೂಳಿ ಮಾತ್ರ ಇದರಿಂದ ತಪ್ಪಿಸಿಕೊಂಡು ಹೋಗುತ್ತಿದ್ದಾಗ "ಅವನೇ ಶಿವ" ಎಂದು ಅರಿತ ಭೀಮನು ಆ ಗೂಳಿಯನ್ನು ಹಿಡಿದುಕೊಳ್ಳ ಬಯಸಿದನಂತೆ. ತಕ್ಷಣ ಶಿವನು ಅಲ್ಲೇ ಭೂಮಿಯಲ್ಲಿ ಐಕ್ಯನಾದನಂತೆ. ಅಷ್ಟರಲ್ಲಾಗಲೇ ಭೀಮನು ಗೂಳಿಯನ್ನು ಬಲವಾಗಿ ಹಿಡಿದಿದ್ದರಿಂದ ಗೂಳಿಯ ಡುಬ್ಬ(ಭುಜ)  ಮೇಲೆ ಉಳಿದುಬಿಟ್ಟಿತಂತೆ. ಇದೇ ಕೇದಾರನಾಥ ಶಿವ - ತ್ರಿಕೋನಾಕೃತಿಯಲ್ಲಿ ಎತ್ತಿನ ಭುಜದ ರೂಪದಲ್ಲಿರುವ  ಶಿವ. ಭೂಗತನಾದ ಶಿವನ ತೋಳುಗಳು ತುಂಗನಾಥದಲ್ಲೂ, ಮುಖ ರುದ್ರನಾಥದಲ್ಲೂ, ನಾಭಿ ಮತ್ತು ಹೊಟ್ಟೆ ಮಧ್ಯಮಾಹೇಶ್ವರದಲ್ಲೂ ಮತ್ತು ಜಟೆಯು ಕಲ್ಪೇಶ್ವರದಲ್ಲೂ ಪ್ರಕಟವಾದವಂತೆ. ಈ ಎಲ್ಲಾ ಐದು ಸ್ಥಳಗಳಲ್ಲಿ ಪಾಂಡವರು ದೇವಾಲಯಗಳನ್ನು ನಿರ್ಮಿಸಿದರಂತೆ. ಅವುಗಳ ಪೈಕಿ ಕೇದಾರನಾಥ, ತುಂಗನಾಥ ಮತ್ತು ಮಧ್ಯಮಾಹೇಶ್ವರದಲ್ಲಿಯ ದೇವಾಲಯಗಳು ಉತ್ತರ ಭಾರತದ ಹಿಮಾಲಯ ಶೈಲಿಯಲ್ಲಿವೆ. ಈ ಐದು ದೇವಾಲಯಗಳನ್ನು ಸೇರಿಸಿ ಪಂಚ ಕೇದಾರಗಳು ಎನ್ನುತ್ತಾರೆ. ಈ ಪಂಚ ಕೇದಾರಗಳಲ್ಲಿ ಶಿವನನ್ನು ಅರ್ಚಿಸಿ ನಂತರ ಪಾಂಡವರು ಸ್ವರ್ಗಾರೋಹಣಕ್ಕೆ ಹೊರಟರಂತೆ. ಇವುಗಳ ಪೈಕಿ ಕೇದಾರನಾಥ ಮತ್ತು ಮಧ್ಯಮಾಹೇಶ್ವರದಲ್ಲಿ ಕರ್ನಾಟಕದಿಂದ ಬಂದ ವೀರಶೈವ ಲಿಂಗಾಯತ ಜಂಗಮರು ಅರ್ಚಕರಾಗಿದ್ದಾರೆ. ಇವರಿಗೆ 'ರಾವಲ'ರು ಎನ್ನುತ್ತಾರೆ. ಇವರು ವೀರಶೈವ ಪಂಚಪೀಠಗಳಲ್ಲಿ ಒಂದಾದ ಕೇದಾರ ಪೀಠದ ಮುಖ್ಯಸ್ಥರೂ ಹೌದು. ಉಳಿದಂತೆ ರುದ್ರನಾಥ ಮತ್ತು ಕಲ್ಪೇಶ್ವರದಲ್ಲಿ ದಶನಾಮಿ ಗೋಸಾಯಿಗಳು ಅರ್ಚಕರು ಹಾಗೂ ತುಂಗನಾಥದಲ್ಲಿ ಸ್ಥಳೀಯ ಖಾಸಿ ಬ್ರಾಹ್ಮಣರು ಅರ್ಚಕರಾಗಿದ್ದಾರೆ.

        ಕಾಲ್ನಡಿಗೆಯಲ್ಲಿ ಕೇದಾರ ಯಾತ್ರೆ ಮಾಡುವವರು ಮುಂಜಾನೆ 3-30ಕ್ಕೆಲ್ಲ ಕ್ಯಾಂಪ್ ಬಿಟ್ಟು ಸೀತಾಪುರಕ್ಕೆ ಬಸ್ಸಿನಲ್ಲಿ ಹೊರಟರು. ನಮ್ಮ ಬೆಂಗಳೂರಿನ ಶ್ರೀ ಶಿವಲಿಂಗ ಚಿಕ್ಕಮಠ ದಂಪತಿ ಹಾಗೂ ಶ್ರೀ ನಾಗರಾಜ್ ದಂಪತಿ ಇವರಲ್ಲಿ ಪ್ರಮುಖರು.ಸೀತಾಪುರದಿಂದ ಸೋನ್ ಪ್ರಯಾಗಕ್ಕೆ ಕಾಲ್ನಡಿಗೆ ಮೂಲಕವೇ ಹೋಗುವಂತೆ ಸ್ಥಳೀಯ ಆಡಳಿತ ಕಟ್ಟಳೆ ವಿಧಿಸಿದ್ದರಿಂದ ಆ ಎರಡು ಕಿ.ಮೀ. ಸಹ ನಡೆದು, ಅಲ್ಲಿಂದ ಟ್ಯಾಕ್ಸಿ ಮೂಲಕ ಗೌರಿಕುಂಡ ತಲುಪಿದರೆ, ಇಲ್ಲಿಂದ ಚಾರಣ ಆರಂಭವಾಗುತ್ತದೆ.  ಕಾಲ್ನಡಿಗೆ ಹೊರತಾಗಿ ಗೌರಿಕುಂಡದಿಂದ ಡೋಲಿಯಲ್ಲಿ ಕುಳಿತು, ಕುದುರೆಯ ಮೇಲೆ ಕುಳಿತು ಅಥವಾ ಪಿಟ್ಟುವಿನ ಮೇಲೆ ಕುಳಿತು ಸಹ ಕೇದಾರನಾಥವನ್ನು ತಲುಪಬಹುದು. ಇದಲ್ಲದೆ ಗುಪ್ತಕಾಶಿ, ಪಾಟಾ ಮತ್ತು ಶಿರಸಿಗಳಲ್ಲಿ ಇರುವ ಹೆಲಿಪ್ಯಾಡ್ ತಲುಪಿ ಹೆಲಿಕ್ಯಾಪ್ಟರ್ ಮೂಲಕ ಸಹ ಕೇದರನಾಥಕ್ಕೆ ಹೋಗಬಹುದು. ಹೆಲಿಪ್ಯಾಡುಗಳಿಗೆ ಹೋಗುವವರು ಬೆಳಗ್ಗೆ 6-30ಕ್ಕೆಲ್ಲ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟವನ್ನು ಪ್ಯಾಕ್ ಮಾಡಿಸಿಕೊಂಡು ಬಸ್ಸನ್ನೇರಿ ಹೊರಟರು.

         ನಾವು ಒಂಭತ್ತು ಜನರ ಪೈಕಿ ಮೂರು ಜನರಿಗೆ ಮಾತ್ರ ವೆಬ್ ಸೈಟ್ ನಿಂದ ಬುಕ್ ಮಾಡಿದ ಕನ್ಫರ್ಮ್ಡ ಹೆಲಿ ಟಿಕೆಟ್ ಗಳಿದ್ದವು. ಉಳಿದ ಆರು ಜನರು ವಶೀಲಿಯ ಮೂಲಕ ಆಫ್ ಲೈನ್ ಟಿಕೆಟ್ ಬುಕ್ ಮಾಡಿಸಿದ್ದೆವು. ಈ ಆರು ಜನರ ಜೊತೆ ನಮ್ಮ ಯಾತ್ರಾ ತಂಡದ ಇನ್ನೂ ಮೂವರು ಮಹಿಳೆಯರು ಸೇರಿಕೊಂಡಿದ್ದರು. ಮೊದಲಿನ ಮೂವರು ಗುಪ್ತ ಕಾಶಿಯಲ್ಲಿಯೇ ಇದ್ದ ಆರ್ಯನ್ ಹೆಲಿಪ್ಯಾಡ್ ನಿಂದ ಹೊರಡುವುದಾಗಿತ್ತು. ಹಾಗಾಗಿ ಅವರು ನಮ್ಮ ಜೊತೆಯಲ್ಲಿ ನಸುಕಿನಲ್ಲಿಯೇ ಹೊರಡಲಿಲ್ಲ. ನಾವುಗಳು ಶಿರಸಿಯಲ್ಲಿನ ಹಿಮಾಲಯನ್ ಹೆಲಿಪ್ಯಾಡ್ ದಿಂದ ಹೊರಡುವವರಿದ್ದೆವು.

          ಗುಪ್ತ ಕಾಶಿಯಿಂದ ಸೀತಾಪುರಕ್ಕೆ ಸುಮಾರು 35 -40 km ಮಾತ್ರ. ಆದರೆ ದಾರಿಯಲ್ಲಿ ಅದ್ಯಾವ ಪರಿ ಟ್ರಾಫಿಕ್ ಜಾಮ್ ಆಗಿತ್ತು ಎಂದರೆ ಬೆಳಿಗ್ಗೆ 3:30ಕ್ಕೆ ಹೊರಟ ಕಾಲ್ನಡಿಗೆ ಯಾತ್ರಾರ್ಥಿಗಳು ಬಸ್ ಮೂಲಕ ಸೀತಾಪುರ ತಲುಪುವಷ್ಟರಲ್ಲಿ ಮಧ್ಯಾಹ್ನ 2:30 ಆಗಿತ್ತು. ಅಷ್ಟರ ನಂತರ ಅವರು ಗೌರಿಕುಂಡ ತಲುಪಿ, ನಂತರ ಸುಮಾರು 24 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಏರಬೇಕಾಗಿತ್ತು. ನಾವೂ ಸಹ ಅದೇ ಟ್ರಾಫಿಕ್ ಜಾಮ್ ನ್ನು ಎದುರಿಸಬೇಕಾಯಿತು. ಬಸ್ ಮುಂದೆ ಹೋಗದ ಕಾರಣ ನಡುವೆ ಒಂದು ಪುಟ್ಟ ಟ್ಯಾಕ್ಸಿಗೆ ಬದಲಾಯಿಸಿ, ಅಂತೂ ಇಂತೂ ಹೆಲಿಪ್ಯಾಡ್ ತಲುಪಿದಾಗ ಮೂರು ಗಂಟೆ ಆಗಿತ್ತು. ಅಲ್ಲಿ ನೋಡಿದರೆ ಅದೇನೋ ಮಿಸ್ ಕಮ್ಯುನಿಕೇಷನ್ ಆದ ಕಾರಣ ನಾವು ಆರು ಜನರ ಪೈಕಿ ಸರಸ್ವತಿಗೆ ಮತ್ತು ನನಗೆ ಮಾತ್ರ ಟಿಕೆಟ್ ಆಯ್ತು. ನಮ್ಮ ಜೊತೆ ಸೇರಿಕೊಂಡ ಮೂವರು ಮಹಿಳೆಯರಿಗೂ ಸಹ ಟಿಕೆಟ್ ಆಯ್ತು. ಆದರೆ ನಮ್ಮವರೇ ಆದ ಗಾಯತ್ರಿ, ಕಲಾಮೋಹನ್, ರವಿಕುಮಾರ್ ಹಾಗೂ ಭಾರತಿಯವರಿಗೆ ಟಿಕೆಟ್ ಆಗಲಿಲ್ಲ. ಮರುದಿನ ಮುಂಜಾನೆ ಕೊಡಿಸುವುದಾಗಿ ಹೇಳಿದರೂ ಸಹ ಅವರು ಬೇಸರಿಸಿಕೊಂಡು ವಾಪಸ್ ಕ್ಯಾಂಪ್ ಗೆ ಹೋದರು. ಅವರು ಹೊರಗುಳಿದಿದ್ದರಿಂದ ನಮಗಂತೂ ತುಂಬಾ ಬೇಸರವಾಯಿತು.

            ಈ ಹೆಲಿಪ್ಯಾಡ್ ನಿಂದ ಕೇದಾರನಾಥಕ್ಕೆ ಹೆಲಿಕಾಪ್ಟರ್ ಮೂಲಕ ಕೇವಲ ಐದಾರು ನಿಮಿಷದ ಪ್ರಯಾಣ ಮಾತ್ರ. ಮಂದಾಕಿನಿ ನದಿಯ ಹರಿವಿಗುಂಟ ಮೇಲ್ಭಾಗದಲ್ಲಿ ಹಾರಿದ ಹೆಲಿಕ್ಯಾಪ್ಟರ್ ನಲ್ಲಿ ಕುಳಿತು ಕೆಳಗಡೆ ಇರುವೆಯ ಸಾಲಿನಂತೆ ಸಾಗುತ್ತಿದ್ದ ಪಾದಚಾರಿಗಳನ್ನು ನೋಡುತ್ತಿದ್ದ ಹಾಗೆಯೇ ನಾವು ಕೇದಾರನಾಥ ತಲುಪಿಯಾಗಿತ್ತು. ನಮಗಿಂತ ಮುಂಚೆಯೇ ಆದಿ, ಮೋಹನ್ ಹಾಗೂ ವಸಂತ ಲಕ್ಷ್ಮಿ ಅಲ್ಲಿಗೆ ತಲುಪಿದ್ದರು. ಹೆಲಿಪ್ಯಾಡ್ ನಿಂದ ಕೇದಾರನಾಥನ ಮಂದಿರಕ್ಕೆ ಅರ್ಧ ಕಿ.ಮೀ ಮಾತ್ರ. ನಾವು ಮೊದಲೇ ಬುಕ್ ಮಾಡಿದ ವಸತಿ ಗೃಹಕ್ಕೆ ಹೋದರೆ ಅಲ್ಲಿ ಇವರು ಇರಲಿಲ್ಲ. ಮಿತ್ರ ಆದಿಗೆ ಫೋನ್ ಮಾಡಿದೆ. ತಾವು ದರ್ಶನ ಮುಗಿಸಿ ಕೇದಾರನಾಥ ಮಂದಿರದ ಹಿಂಭಾಗದಲ್ಲಿ ನಿಂತಿರುವುದಾಗಿ ತಿಳಿಸಿದರು. ಕೈಯಲ್ಲಿ ಯಾವುದೇ ಲಗೇಜ್ ಇರಲಿಲ್ಲ. ಆದ್ದರಿಂದ ವಸತಿ ಗೃಹದ ಒಳಗೆ ಹೋಗದೆ ನೇರವಾಗಿ ದೇವರ ದರ್ಶನಕ್ಕೆ ಇರುವ ಸರತಿ ಸಾಲಿನ ಕಡೆಗೆ ಸಾಗಿದೆವು. ಅಲ್ಲಿ ನೋಡಿದರೆ ಸಾಲು ತುಂಬಾ ಉದ್ದವಾಗಿತ್ತು. ಹಾಗಾಗಿ ಸಾಲಿನ ಬಾಲ ಸೇರಿಕೊಳ್ಳದೆ ಬ್ಯಾರಿಕೇಡ್ ಪಕ್ಕದಲ್ಲಿಯೇ ನಡೆಯುತ್ತಾ ಸರಸರನೆ ಮುಂದೆ ಸಾಗಿದೆವು. ನೂರಿನ್ನೂರು ಮೀಟರ್ ದೂರ ಸಾಗಿದಾಗ ಪೊಲೀಸ್ ಒಬ್ಬ ತಡೆದ. ನಾವು ಮಿತ್ರನ ಭೇಟಿಗಾಗಿ ದೇವಾಲಯದ ಹಿಂಭಾಗಕ್ಕೆ ಹೋಗುತ್ತಿರುವುದಾಗಿ ತಿಳಿಸಿದ ನಂತರ ನಮಗೆ ಹೋಗುವ ದಾರಿಯನ್ನು ತೋರಿಸಿ ಬಿಟ್ಟುಕೊಟ್ಟ. ಅಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವನ್ನು ಬಳಸಿಕೊಂಡು ಮತ್ತೊಂದು ನೂರಿನ್ನೂರು ಮೀಟರ್ ಸಾಗಿದಾಗ ಕೇದಾರನಾಥ ಮಂದಿರದ ಪಶ್ಚಿಮ ಭಾಗದ ಅಂಗಳವನ್ನು ತಲುಪಿದೆವು. ಅಲ್ಲಿ ಗುಡಿಯ ಹಿಂಭಾಗದಲ್ಲಿ ನೋಡಿದರೆ ಆದಿ ಅವರು ಕಾಣಲಿಲ್ಲ. ಫೋನ್ ಸಂಪರ್ಕ ಸಹ ಸಿಗಲಿಲ್ಲ. ತಕ್ಷಣ ಕೇದಾರನಾಥನನ್ನು ಸ್ಮರಿಸುತ್ತಾ ಅಲ್ಲೇ ಇದ್ದ ವಿಶಾಲವಾದ ಚಪ್ಪಲಿ ಸ್ಟ್ಯಾಂಡಿನ ನಿರ್ವಾಹಕನನ್ನು ನಮ್ಮನ್ನು ಹೇಗಾದರೂ ಮಾಡಿ ಅಲ್ಲಿಯೇ ಸರತಿ ಸಾಲಿಗೆ ಸೇರಿಸುವಂತೆ ವಿನಂತಿಸಿಕೊಂಡೆನು. ಅವರು ವಿನಮ್ರವಾಗಿ, "ನೀವಿಬ್ಬರೂ ಹಿರಿಯ ನಾಗರಿಕರಿದ್ದೀರಿ. ನೀವು ಗುಡಿಯ ಹಿಂಭಾಗವನ್ನು ಬಳಸಿಕೊಂಡು ಪೂರ್ವ ದ್ವಾರಕ್ಕೆ ಹೋಗಿರಿ. ಅಲ್ಲಿರುವ ಅಧಿಕಾರಿಯನ್ನು ಕೇಳಿಕೊಂಡರೆ ಅವರು ನಿಮ್ಮನ್ನು ಒಳಗೆ ಬಿಡುತ್ತಾರೆ" ಎಂದರು. ಆ ಪ್ರಕಾರವಾಗಿ ಪೂರ್ವದ್ವಾರಕ್ಕೆ ಹೋಗಿ ವಿನಂತಿಸಿಕೊಂಡೆನು. ಅಲ್ಲಿ ಕೇವಲ ಸುಮಾರು 20 ಮೀಟರ್ ಉದ್ದದ ಕ್ಯೂ ಇತ್ತು. "ಇಲ್ಲಿಯೇ ಸೇರಿಕೊಳ್ಳಿ" ಎಂದರು. ತಕ್ಷಣ ಅಲ್ಲಿಯೇ ಶೂ ಕಳಚಿಟ್ಟು ನಾನು ಮತ್ತು ನನ್ನ ಸಹಧರ್ಮಿಣಿ ಸರತಿ ಸಾಲಿನಲ್ಲಿ ನಿಂತೆವು. ಕೇವಲ 10-15 ನಿಮಿಷಗಳಲ್ಲಿಯೇ ಪೂರ್ವದ ಬಾಗಿಲಿನ ಮೂಲಕ ಗರ್ಭಗುಡಿಯ ಎದುರಿಗಿರುವ ವಿಶಾಲ ಮಂಟಪವನ್ನು (ಸುಕನಾಸಿ) ಪ್ರವೇಶಿಸಿ ಬಿಟ್ಟಿದ್ದೆವು. ಈ ಸಭಾಂಗಣದಲ್ಲಿ ಗೋಡೆಯ ಮೇಲೆ ಉದ್ದಕ್ಕೂ ಪಂಚಪಾಂಡವರ ಮೂರ್ತಿಗಳು, ದಕ್ಷಿಣ ದ್ವಾರದ ನೇರ ಒಳಗಡೆ ನಂದಿ(ಹಿತ್ತಾಳೆ)ವಿಗ್ರಹ, ಕುಂತಿ, ದ್ರೌಪದಿ ಮತ್ತು ನಾರಾಯಣರ ವಿಗ್ರಹಗಳನ್ನು ದರ್ಶಿಸುತ್ತಾ ಸಾಗಿ ಕೇದಾರನಾಥ ಸ್ವಾಮಿಯ ಗರ್ಭಗುಡಿಯ ಮಹಾದ್ವಾರದ ಎದುರು ನಿಂತಿದ್ದೆವು. ಗರ್ಭಗುಡಿಯ ಪರಿಸರವನ್ನು ವೀಕ್ಷಿಸಿ, ಕೇದಾರನಾಥ ಲಿಂಗವನ್ನು ಸಂಪೂರ್ಣ ಶರಣಾಗತಿಯ ಭಾವದಿಂದ ಹೃದಯದಲ್ಲಿ ಸ್ಥಾಪಿಸಿಕೊಂಡೆವು . ಅದು ಬಹುದಿನಗಳ ತಪಸ್ಸು ಫಲಿಸಿದ ಕ್ಷಣ. ಭಕ್ತರ ನೂಕುನುಗ್ಗಲು ಇದ್ದ ಕಾರಣ ದರ್ಶನದ ಅವಧಿ ಸುಮಾರು ಒಂದು ನಿಮಿಷಕ್ಕೆ (ಬಹುಶಃ) ಸೀಮಿತವಾಗಿತ್ತು. ಆದರೆ ಅದೊಂದು ತರಹದ ನಿರಾಳವಾದ ಕೃತಾರ್ಥ ಭಾವ ಮನಸ್ಸು, ಹೃದಯಗಳನ್ನು ತುಂಬಿಕೊಂಡಿತು. ಇನ್ನೂ ನಿಲ್ಲಬೇಕೆನ್ನುವ ಬಯಕೆ ಇದ್ದರೂ ಸಹ ಉಳಿದ ಭಕ್ತರ ಹಾಗೂ ಸೆಕ್ಯೂರಿಟಿಯವರ ಆದ್ಯತೆಗಳಿಗೂ ಗಮನ ಕೊಡಬೇಕಲ್ಲವೇ? ನಿಧಾನವಾಗಿ ಮತ್ತದೇ ಪೂರ್ವದ ಬಾಗಿಲಿನಿಂದ ಹೊರಗೆ ಬಂದೆವು. ಇಲ್ಲಿಯ ಉಷ್ಣಾಂಶ ೦ ಡಿಗ್ರಿ ಸೆಲ್ಸಿಯಸ್ ಇತ್ತು . ಆದ್ದರಿಂದ ತಡ ಮಾಡದೆ ನಮ್ಮ ಪಾದರಕ್ಷೆಗಳನ್ನು ಧರಿಸಿಕೊಂಡೆವು.

       ನಿಧಾನವಾಗಿ ಗುಡಿಯ ಹಿಂಭಾಗಕ್ಕೆ ಸಾಗಿ 2013ರ ಮಹಾಪ್ರವಾಹದ ಸಮಯದಲ್ಲಿ ಹರಿದು ಬಂದು, ಅಡ್ಡ ನಿಂತು, ಪ್ರವಾಹದಿಂದ ಗುಡಿಯನ್ನು ರಕ್ಷಿಸಿದ ಬೃಹತ್ ಬಂಡೆಯನ್ನು ದರ್ಶಿಸಿದೆವು. ಇದಕ್ಕೆ "ಭೀಮಶಿಲೆ " ಎನ್ನುತ್ತಾರೆ. ನಿಜವಾಗಿಯೂ ಅಷ್ಟು ಬೃಹತ್ ಗಾತ್ರದ ಬಂಡೆ ನೀರಿನಲ್ಲಿ ಹರಿದು ಬಂದಿದೆ ಎಂದರೆ ಅದು ಕೇದಾರನಾಥನ ಮಹಿಮೆಯೇ ಇರಬೇಕು ಎಂದು ನಮಗೂ ಸಹ ಅನಿಸುತ್ತದೆ. ಆ ಜಾಗದಲ್ಲೆಲ್ಲ ಪ್ರವಾಹದ 11 ವರ್ಷಗಳ ನಂತರವೂ ಸಹ, ಇನ್ನೂ ಪ್ರವಾಹ ಸಮಯದಲ್ಲಿ ಜಮೆಯಾದ ಹೂಳನ್ನು ತೆಗೆದು ಸ್ವಚ್ಛ ಮಾಡಲು ಆಗಿಲ್ಲ ಅಂದರೆ ಆ ಪ್ರವಾಹದ ಭೀಕರತೆಯ ಚಿತ್ರಣ ಮೂಡುತ್ತದೆ.

          ಇಲ್ಲಿಯ ಕೇದಾರನಾಥೇಶ್ವರ 12 ಜ್ಯೋತಿರ್ಲಿಂಗಗಳ ಪೈಕಿ ಒಂದು. ಗುಡಿಯ ಒಳಗಡೆ ವಿಶೇಷ ಶಕ್ತಿಯ ಕಂಪನ ಅನುಭವಕ್ಕೆ ಬರುತ್ತದೆ.

           ದೇವಾಲಯದ ಹಿಂಭಾಗದಲ್ಲಿ ಅನತಿ ದೂರದಲ್ಲೇ ಕೇದಾರನಾಥ ಪರ್ವತವಿದೆ. ಹಿಮಾಚ್ಛಾದಿತವಾದ ಪರ್ವತವದು. ಮೇಲೆ ಬಹು ಎತ್ತರದಲ್ಲಿ ಒಂದು ಪುಟ್ಟ ಮಂದಿರ ಕಾಣುತ್ತದೆ. ಸುಮಾರು ಒಂದೂವರೆ ಕಿಲೋಮೀಟರ್ ಏರಿದರೆ ಆ ಭೈರವನಾಥ ಮಂದಿರವನ್ನು ತಲುಪಬಹುದು. ಸುಮಾರು 11,500 ಅಡಿ ಎತ್ತರದ ಈ ಸ್ಥಳದಲ್ಲಿ ಆಮ್ಲಜನಕದ ಕೊರತೆ ಇರುತ್ತದೆ. ಹಾಗಾಗಿ ಆರೋಹಣ ತುಂಬಾ ಕಷ್ಟ. ತೀವ್ರವಾಗಿ ಮೇಲುಸಿರು ಬಂದುಬಿಡುತ್ತದೆ. ಸುತ್ತಲಿನ ಹಿಮಶಿಖರಗಳ ಹಿಮ ಕರಗಿ ಮಂದಾಕಿನಿಯನ್ನು ಸೇರುತ್ತದೆ. ಗುಡಿಯ ಪಕ್ಕದಲ್ಲಿಯೇ ಮಂದಾಕಿನಿ ಹರಿಯುತ್ತಾಳೆ. ಅವಳೇ 2013ರಲ್ಲಿ ರೌದ್ರಾವತಾರ ತಾಳಿದ್ದವಳು.               

           ಕೇದಾರನಾಥನ ಮಂದಿರ ದಕ್ಷಿಣಾಭಿಮುಖವಾಗಿ ಇದೆ. ಮಂದಿರದ ಹಿಂಭಾಗದಲ್ಲಿ ಇನ್ನೂ 100-150 ಮೀಟರ್ ಕ್ರಮಿಸಿದರೆ ಅಲ್ಲಿ ಸುಂದರವಾಗಿ ನಿರ್ಮಿಸಿದ ಶಂಕರಾಚಾರ್ಯರ ಸಮಾಧಿ ಸ್ಥಳವಿದೆ. ಶಂಕರಾಚಾರ್ಯರು ಇಲ್ಲಿಂದಲೇ ಕೇದಾರನಾಥ ಪರ್ವತವನ್ನು ಏರುತ್ತಾ ಹೋಗಿ ಕಣ್ಮರೆಯಾದರು ಎಂದು ಹೇಳುತ್ತಾರೆ. ಇಲ್ಲಿ ರಾಮಲಲ್ಲಾ ಮೂರ್ತಿ ನಿರ್ಮಾಣದ ಖ್ಯಾತಿಯ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿಕೊಟ್ಟ ಬಹು ಸುಂದರವೂ, ಭವ್ಯವೂ ಆದ ಶಂಕರಾಚಾರ್ಯರ ಕುಳಿತ ಭಂಗಿಯ ಕಪ್ಪು ಶಿಲೆಯ ಮೂರ್ತಿ ಇದೆ. ಇಲ್ಲಿ ಜನದಟ್ಟಣೆ ಇರಲಿಲ್ಲ. ಸುತ್ತಲಿನ ಪರಿಸರ, ಶಂಕರಾಚಾರ್ಯರ ದಿವ್ಯ ಸಾನ್ನಿಧ್ಯ, ಅಚ್ಚುಕಟ್ಟಾಗಿ ನಿರ್ಮಿಸಿದ ಕಟ್ಟಡ ಎಲ್ಲವೂ ನಮ್ಮನ್ನು ಧ್ಯಾನಸ್ಥರಾಗಲು ಪ್ರೇರೇಪಿಸುತ್ತವೆ. ಇಲ್ಲಿ ಒಂದು 15 ನಿಮಿಷ ಶಂಕರಾಚಾರ್ಯರ ಸ್ತೋತ್ರಗಳನ್ನು ಪಠಣ ಮಾಡಿ, ಧ್ಯಾನ ಮಾಡಿ, ಶಂಕರಾಚಾರ್ಯರಿಗೆ ಧೀರ್ಘ ದಂಡ ಪ್ರಣಾಮ ಮಾಡಿ ಹೊರಬಂದೆವು.

       ಕೇದಾರನಾಥದಲ್ಲಿ ಎಲ್ಲೆಡೆ ಹೊಸ ಹೊಸ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಬಹುಶಃ 2013ರ ಮಹಾ ಪ್ರವಾಹ ಸರ್ವನಾಶ ಮಾಡಿದ ನಂತರ ಈಗ ಮತ್ತೊಮ್ಮೆ ನಿರ್ಮಾಣ ಆರಂಭವಾಗಿದೆ. ಈಗಲಾದರೂ ಪ್ರಕೃತಿಯ ಸಮತೋಲನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕಟ್ಟುತ್ತಿದ್ದಾರೋ, ಅಥವಾ ಮನಸೋಇಚ್ಛೆಯಾಗಿಯೋ ಎನ್ನುವುದು ತಿಳಿಯಲಿಲ್ಲ.

           ಮಂದಿರದ ಪರಿಸರದಲ್ಲಿ ಸುಮಾರು ಮುಕ್ಕಾಲು ಗಂಟೆ ಸಮಯ ಕಳೆದಿರಬಹುದು. ಹಿಂದುಗಡೆ ಇರುವ ಕೇದಾರನಾಥ ಪರ್ವತ ಹಿಮಾಚ್ಛಾದಿತವಾಗಿ ಸುಂದರವಾಗಿ ಕಾಣುತ್ತಿತ್ತು. ಮಂದಿರದ ಪೂರ್ವ, ಪಶ್ಚಿಮ ಹಾಗೂ ಉತ್ತರಗಳಲ್ಲಿ ಹಿಮಪರ್ವತಗಳು. ಎದುರಿನಲ್ಲಿ ಧುಮ್ಮಿಕ್ಕಿ ಪ್ರಪಾತದ ಕಡೆ ಹರಿಯುವ ಮುಂದಾಕಿನಿ. ಎಲ್ಲೆಲ್ಲೂ ಕೇದಾರನಾಥನ ಜಯ ಜಯಕಾರ. ವಾತಾವರಣದಲ್ಲಿ ಭಕ್ತಿಯ ಉನ್ಮಾದ. ಆ ಮೈ ಕೊರೆಯುವ ಚಳಿಯಲ್ಲಿಯೂ ಅತ್ಯಂತ ಕನಿಷ್ಠ ಬಟ್ಟೆಯಲ್ಲಿ ಕಾಣಿಸುವ ನಾಗಾ ಸಾಧುಗಳು ಮತ್ತು ಸನ್ಯಾಸಿಗಳು. ಇದು ಭಾರತ ದರ್ಶನ.

          ಸಂಜೆ 7ರ ಸುಮಾರಿಗೆ ನಾವು ಮೊದಲು ಬಂದ ದಾರಿಯಲ್ಲಿಯೇ ಹಿಂದೆ ಬಂದು,ಈ ಮೊದಲು ಸರತಿ ಸಾಲಿನ ಬಾಲ ಇದ್ದ ಸ್ಥಳ ತಲುಪಿದೆವು. ಆದರೆ ಈಗ ಕ್ಯೂ ಕರಗಿ ಮಂದಿರದ ಕಡೆಗೆ ಸಾಗಿತ್ತು. ಚಳಿ ಹೆಚ್ಚಾಗುತ್ತಿದ್ದಂತೆ ಎಲ್ಲ ಭಕ್ತರೂ ಸಹ ಲಗುಬಗೆಯಲ್ಲಿ ದರ್ಶನ ಮುಗಿಸಿ ತಮ್ಮ ತಮ್ಮ ವಸತಿಯ ಕಡೆಗೆ ಹೆಜ್ಜೆ ಹಾಕತೊಡಗಿರಬಹುದು. ನಾವು ಬಂದ ದಾರಿಯಲ್ಲಿಯೇ ಸಾಗಿ ಮೊದಲು ವಿಚಾರಿಸಿದ್ದ ವಸತಿಗೃಹದ ಹತ್ತಿರ ಬಂದೆವು .ಅಲ್ಲಿ ಮೋಹನ್ ರವರು ರೂಮಿನಿಂದ ಹೊರಬಂದು ನಮ್ಮೆಡೆಗೆ ಕೈಬೀಸಿದರು. ರೂಮ್ ಮೊದಲ ಮಹಡಿಯಲ್ಲಿತ್ತು. ಉಳಿದವರು ಊಟ ಬೇಡ ಎಂದರು. ಆದರೆ ನಾನು ಮತ್ತು ಆದಿ ಊಟ ಹುಡುಕಿಕೊಂಡು ಹೊರಬಂದೆವು. ಸಾಲು ಸಾಲಾಗಿ ಇದ್ದ ಊಟದ ಹೋಟೆಲ್ ಗಳ ಪೈಕಿ ಒಂದರಲ್ಲಿ, ಪ್ರಶಸ್ತವಾದ ಸೀಟ್ ಹಿಡಿದು, ರೋಟಿ-ದಾಲ್- ಚಾವಲ್ ಊಟ ಮಾಡಿದೆವು.

           ಸಾಯಂಕಾಲ 7.30 ರ ಸುಮಾರಿಗೆ ಕೇದಾರನಾಥನ ಮಂದಿರದ ಎದುರಿಗಿರುವ ನಂದಿಯ ಹತ್ತಿರ ಕೇದಾರ ಆರತಿ ನಡೆಯುತ್ತದೆ. ನಾವು ಅದನ್ನು ನೋಡಲು ಹೋಗಲಿಲ್ಲ. ನಸುಕಿನ ನಾಲ್ಕು ಗಂಟೆಗೆ, ಬೆಳಗಿನ ಪೂಜೆ ನೋಡಲು ಬಂದವರಿಗೆ ನೇರವಾಗಿ ಗರ್ಭಗುಡಿಯಲ್ಲಿಯೇ ಕೇದಾರನಾಥನನ್ನು ಸ್ಪರ್ಶಿಸುವ, ದರ್ಶಿಸುವ ಅವಕಾಶ ಸಿಗುತ್ತದಂತೆ.

          ತುಂಬಾ ದಣಿದಿದ್ದ ಕಾರಣ ಬೇಗನೆ ಮಲಗಲು ಒತ್ತುಕೊಟ್ಟೆವು. ಆ ಚಳಿಯಿಂದ ರಕ್ಷಿಸಿಕೊಳ್ಳಲು ಅತ್ಯಂತ ಭಾರವಾದ ರಜಾಯಿಗಳು ಹೊದೆಯಲು ಇದ್ದವು. ತಣ್ಣೀರು ಮುಟ್ಟುವಂತಿರಲಿಲ್ಲ. ಕೈ ಕಾಲು ತೊಳೆಯಲು ಮತ್ತು ಸ್ನಾನ ಮಾಡಲು ಬಿಸಿನೀರಿನ ವ್ಯವಸ್ಥೆ ಇತ್ತು. ಆದರೆ ಒಂದು ಲೀಟರ್ ಬಿಸಿನೀರು ಕುಡಿಯಲು ಬೇಕು ಎಂದಾದರೆ ಹೆಚ್ಚುವರಿಯಾಗಿ ರೂ.50 ಕೊಡಬೇಕಿತ್ತು. ವಿಚಾರಿಸಿದಾಗ, ಒಂದು ಸಿಲಿಂಡರ್ ಗ್ಯಾಸ್ ಮೇಲೆ ಬರಲು ಸುಮಾರು 4,000 ರೂಪಾಯಿ ಖರ್ಚಾಗುತ್ತದೆ ಎಂದಾದಾಗ ಈ ದರ ಹೆಚ್ಚಲ್ಲ ಎನಿಸಿತು.

  ಕೇದಾರನಾಥ ಮಂದಿರದ ಮುಂಭಾಗ         ಮಂದಿರದ ಪೂರ್ವ ದ್ವಾರ (ಕೆಳಗಿನ ಚಿತ್ರ )       

                                                                        ಭೀಮ ಶಿಲಾ 

                                                       ಆದಿಶಂಕರರ ಪ್ರತಿಮೆ   

                                

                                                                                                                                                          (ಸಶೇಷ....)



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ