ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಆಗಸ್ಟ್ 3, 2024

ಚಾರ್ ಧಾಮ ಯಾತ್ರೆ -ಭಾಗ 3

 ಚಾರ್ ಧಾಮ ಯಾತ್ರೆ -ಭಾಗ 3

ಹಿಮ ಪರ್ವತ ತಪ್ಪಲಿನಲ್ಲಿ ಪಯಣ

ದಿನಾಂಕ 11/05/2024

ಬೆಳಗಿನ ಜಾವ ನಾಲ್ಕು ಗಂಟೆಗೆಲ್ಲ ಹರಿದ್ವಾರದ ಹೋಟೆಲ್ ತ್ರಿಮೂರ್ತಿಯಲ್ಲಿ ರೂಮ್ ಖಾಲಿ ಮಾಡಿದ ನಾವು ಅಲ್ಲಿಂದ ಋಷಿಕೇಶದ ಕಡೆಗೆ ಹೊರಟೆವು.
ನಿನ್ನೆ ನಾವೆಲ್ಲ 41 ಮಂದಿ ಒಂದೇ ಬಸ್ಸಿನಲ್ಲಿ ಇದ್ದರೆ ಇಂದಿನಿಂದ ನಮ್ಮ ಪ್ರಯಾಣ ಅತ್ಯಂತ ತಿರುವುಗಳುಳ್ಳ ಕಡಿದಾದ ರಸ್ತೆಗಳಲ್ಲಿ. ಆದ್ದರಿಂದ ಎರಡು ಮಿನಿ ಬಸ್ಸುಗಳನ್ನು ಪ್ರಯಾಣಕ್ಕಾಗಿ ಅಣಿಗೊಳಿಸಿದ್ದರು. ನಮ್ಮ ವಿನಂತಿಯ ಮೇರೆಗೆ ನಾವು 9 ಮಂದಿ ಒಂದೇ ಬಸ್ಸಿನಲ್ಲಿ ಇರುವಂತೆ ಆಗಿತ್ತು. ನಮ್ಮ ಬಸ್ಸಿನಲ್ಲಿ 19 ಜನ ಯಾತ್ರಿಗಳು ಇದ್ದರು. ನಮ್ಮ ಬಸ್ಸಿನ ಡ್ರೈವರ್ ಅತ್ಯಂತ ಚಾಕಚಕ್ಯತೆಯಿಂದ ಬಸ್ಸನ್ನು ಚಲಾಯಿಸುತ್ತಿದ್ದ. ಯಾತ್ರಾ ಮಾರ್ಗದರ್ಶಿ ಶ್ರೀ ವೆಂಕಟೇಶ ದಾಸ್ ಅವರ ಜೊತೆ ಇನ್ನೂ ಇಬ್ಬರು ಸಹಾಯಕ ಮಾರ್ಗದರ್ಶಿಗಳು ಇದ್ದರು - ಒಬ್ಬಾತ ನಿತಿನ್ ದಾಸ್, ಇನ್ನೊಬ್ಬ ಖುಷ್ ದಾಸ್. ಅವರ ಪೈಕಿ ನಿತಿನ್ ತುಂಬಾ ಸುಶ್ರಾವ್ಯವಾಗಿ ಭಜನೆಗಳನ್ನು ಹಾಡುತ್ತಿದ್ದ. ಬಸ್ ಪ್ರಯಾಣ ಆರಂಭವಾಗುತ್ತಿದ್ದಂತೆಯೇ ನರಸಿಂಹ ಭಜನೆ ಮಾಡಿದೆವು. ಬೆಳಗಿನ ಅಮೃತ ವಾಣಿಯಾಗಿ ನಾನು "ಮಂಕುತಿಮ್ಮನ ಕಗ್ಗ"ದ ಎರಡು ಮುಕ್ತಕಗಳನ್ನು ಹೇಳಿ ವ್ಯಾಖ್ಯಾನ ಮಾಡಿದೆನು. ನಂತರ ಎಲ್ಲರೂ ಸಣ್ಣದಾಗಿ ನಿದ್ರೆಗೆ ಜಾರಿದರು.
ಬೆಳಿಗ್ಗೆ 6:30 ಗಂಟೆಗೆಲ್ಲ ನಾವು ಋಷೀಕೇಶದ ತ್ರಿವೇಣಿ ಘಾಟ್ ನಲ್ಲಿ ಇಳಿದೆವು. ಋಷೀಕ ಎಂದರೆ ಇಂದ್ರಿಯ - ಇಂದ್ರಿಯಗಳ ಒಡೆಯನಾದ ಶ್ರೀ ವಿಷ್ಣುವೇ ಋಷೀಕೇಶ. ಆದ್ದರಿಂದ ಇದು ವಿಷ್ಣುವಿನ ಕ್ಷೇತ್ರ. ಅಂತಿಮ ಸಮಯದಲ್ಲಿ ಜಾರನ ಬಾಣದಿಂದ ಗಾಯಗೊಂಡ ಶ್ರೀ ಕೃಷ್ಣ ಈ ಸ್ಥಳಕ್ಕೆ ಭೇಟಿ ನೀಡಿದ್ದರು ಎಂಬ ಪ್ರತೀತಿಯಿದೆ. ಇದೇ ಸ್ಥಳದಲ್ಲಿ ಶ್ರೀ ಕೃಷ್ಣನಿರ್ವಾಣ ಕೂಡ ಆಯಿತು ಎಂದು ಹೇಳುತ್ತಾರೆ. ಈ ಸ್ಥಳದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮಿಸುತ್ತವೆ ಎಂದು ಹೇಳುತ್ತಾರೆ. ಇಲ್ಲಿಯ ತೀರ್ಥ ಅತ್ಯಂತ ಪವಿತ್ರವಾದದ್ದು. ನಾವು ಇಲ್ಲಿ ಗಂಗೆಯ ಘಾಟ್ ನಲ್ಲಿ ಕೇವಲ ಒಂದು ಮೆಟ್ಟಿಲಿನಷ್ಟು ಕೆಳಗಿಳಿದು ಗಂಗೆಯನ್ನು ಪ್ರೋಕ್ಷಣೆ ಮಾಡಿಕೊಂಡೆವು. ಘಾಟಿನ ಎದುರುಗಡೆಯೇ ಸುಂದರವಾದ ಶಿವ ಪಾರ್ವತಿಯರ ವಿಗ್ರಹವಿದೆ. ವಿಗ್ರಹದ ಎದುರುಗಡೆ ಕಾರಂಜಿ ಇದೆ. ಇಲ್ಲಿಯ ಗಂಗಾರತಿ ತುಂಬಾ ಪ್ರಸಿದ್ಧವಾದದ್ದು. ನದಿಯ ದಂಡೆಯಲ್ಲಿಯೇ ಗೀತಾ ಮಂದಿರ ಹಾಗೂ ಲಕ್ಷ್ಮೀ ನಾರಾಯಣ ಮಂದಿರಗಳಿವೆ. ನಮ್ಮ ಪ್ರವಾಸದಲ್ಲಿ ರಿಷಿಕೇಶವನ್ನು ವಿವರವಾಗಿ ಸಂದರ್ಶಿಸುವ ಯೋಜನೆ ಇರಲಿಲ್ಲ. ತ್ರಿವೇಣಿ ಘಾಟ್ ದಿಂದ ನಾವು ನೇರವಾಗಿ ರಿಷಿಕೇಶದ ಮಧ್ಯಭಾಗದಲ್ಲಿರುವ ಭರತ ನಾರಾಯಣ ಮಂದಿರವನ್ನು ತಲುಪಿದೆವು. ಇಲ್ಲಿ ಒಂದು ಸುಂದರವಾದ ಗುಡಿ ಇದೆ. ಅದರೊಳಗೆ ಐದೂವರೆ ಅಡಿ ಎತ್ತರದ ಚತುರ್ಭುಜನಾದ ವಿಷ್ಣುವಿನ ಸುಂದರ ಸಾಲಿಗ್ರಾಮದ ಮೂರ್ತಿ ಇದೆ. ನಾಲ್ಕು ಹಸ್ತಗಳಲ್ಲಿ ಶಂಖ, ಚಕ್ರ, ಗದೆ ಹಾಗೂ ಪದ್ಮಗಳನ್ನು ಹಿಡಿದಿರುವ ಶ್ರೀ ವಿಷ್ಣುವಿನ ಮೂರ್ತಿ ನಯನ ಮನೋಹರವಾಗಿದೆ. ಈ ಸ್ಥಳದಲ್ಲಿ ಶ್ರೀಮನ್ನಾರಾಯಣನು ರೈಭ್ಯ ಮಹರ್ಷಿಗೆ ದರ್ಶನವಿತ್ತಿದ್ದನಂತೆ. ಮಹಾಭಾರತದ ಪ್ರಸಿದ್ಧ ಪುರುಷನಾದ ಭರತ ಚಕ್ರವರ್ತಿಯು ಈ ಸ್ಥಳದಲ್ಲಿ ಅನೇಕ ಅಶ್ವಮೇಧ ಯಾಗ ಹಾಗೂ ರಾಜಸೂಯ ಯಾಗಗಳನ್ನು ಮಾಡಿದ್ದನಂತೆ. ಇಲ್ಲಿ ಶ್ರೀಮನ್ನಾರಾಯಣನಿಗೆ 'ಋಷೀಕೇಶನಾರಾಯಣ' ಎಂದು ಕರೆಯುತ್ತಾರೆ. 'ಭರತ ನಾರಾಯಣ' ಎಂತಲೂ ಕರೆಯುತ್ತಾರೆ. ಈ ಮಂದಿರದ ಪಕ್ಕದಲ್ಲಿ ಮಂದಿರ ಜೀರ್ಣೋದ್ಧಾರದ ಸಮಯದಲ್ಲಿ ದೊರೆತ ವಿಗ್ರಹಗಳ ಒಂದು ಪುಟ್ಟ ಮ್ಯೂಸಿಯಂ ಇದೆ. ಮಂದಿರದ ಎದುರುಗಡೆ ಒಂದು ತ್ರಿವೇಣಿ ವೃಕ್ಷವಿದೆ - ಅಶ್ವತ್ಥ, ಆಲ ಮತ್ತು ಬೇಲ ವೃಕ್ಷಗಳ ಸಂಗಮವಾಗಿರುವ ಈ ವೃಕ್ಷಕ್ಕೆ ಸಹಸ್ರಮಾನದ ಇತಿಹಾಸವಿದೆ. ಇವುಗಳನ್ನೆಲ್ಲ ದರ್ಶಿಸಿ, ನಮಸ್ಕರಿಸಿ ಪುನಃ ಬಸ್ಸನ್ನೇರಿ ಹೊರಟ ನಾವು ಬೆಳಗ್ಗೆ ಒಂಬತ್ತು ಗಂಟೆ ಸುಮಾರಿಗೆ ದಾರಿಯಲ್ಲಿ ರಸ್ತೆಯ ಪಕ್ಕದ ಒಂದು ಹೋಟೆಲಿನಲ್ಲಿ ಬೆಳಗಿನ ಉಪಹಾರವನ್ನು ಮುಗಿಸಿದೆವು. ಉಪಹಾರ ನಮ್ಮ ಯಾತ್ರಾ ಟೀಮಿನವರೇ ತಯಾರಿಸಿದ್ದಾಗಿತ್ತು.ಒಳ್ಳೆಯ ಇಡ್ಲಿ, ಚಟ್ನಿ, ಸಾಂಬಾರ್ ಹಾಗೂ ಫ್ರೂಟ್ ಸಲಾಡ್ ನಾಷ್ಟ.
ಬೆಳಗಿನ ತಿಂಡಿಯ ನಂತರ ಬಸ್ ಸೇರಿದ ನಾವು ಮಧ್ಯಾಹ್ನ ಎರಡೂವರೆ ಗಂಟೆಯ ಸುಮಾರಿಗೆ ಬಾರಾಕೋಟ್ ತಲುಪಿದೆವು. ಪಟ್ಟಣದ ಹೊರವಲಯದಲ್ಲಿರುವ "ಕ್ಯಾಂಪ್ ನಿರ್ವಾಣ"ದಲ್ಲಿ ನಮ್ಮ ವಸತಿ ಆಯೋಜಿಸಲಾಗಿತ್ತು. ಅತ್ಯಂತ ಸುಂದರವಾದ ಪರಿಸರದಲ್ಲಿ ಈ 'ಕ್ಯಾಂಪ್ ನಿರ್ವಾಣ' ಇದೆ. ಯಮನೋತ್ರಿಗೆ ಹೋಗುವ ಹೆದ್ದಾರಿಯ ಪಕ್ಕದಲ್ಲಿರುವ ಇದರ ಹಿಂದುಗಡೆ ಹಿಮಾಲಯ ಪರ್ವತ ಶ್ರೇಣಿಗಳಿದ್ದರೆ, ಎದುರುಗಡೆ ಸುಮಾರು 100 ಮೀಟರ್ ಕೆಳಗೆ ಜುಳು ಜುಳು ನಾದ ಮಾಡುತ್ತಾ ಹರಿಯುತ್ತಿರುವ ಶುಭ್ರ ಯಮುನೆ ಇದ್ದಾಳೆ. ಯಮುನೆಯನ್ನು ದಾಟಿ ಅತ್ತ ಕಡೆ ಕೂಡ ಪರ್ವತಗಳ ಸಾಲು. ಏಳೆಂಟು ತಾಸು ಅವಿರತ ಪ್ರಯಾಣ ಮಾಡಿದ ನಾವೆಲ್ಲ ದಣಿದಿದ್ದೆವು. ಬಿಸಿ ಬಿಸಿಯಾದ ಊಟ ತಯಾರಾಗಿತ್ತು. ಎಲ್ಲರೂ ಊಟ ಮುಗಿಸಿ ಒಂದು ತಾಸು ಚೆನ್ನಾಗಿ ನಿದ್ರೆ ಮಾಡಿದೆವು. ನಂತರ ಎದುರಿನಲ್ಲಿದ್ದ ಯಮುನೆಯಲ್ಲಿ ಸ್ನಾನ ಮಾಡಿ ಅಥವಾ ಕೇವಲ ಪ್ರೋಕ್ಷಣೆ ಮಾಡಿ ಎಲ್ಲರೂ ಬೇಗನೆ ವಸತಿಯನ್ನು ಸೇರಿದೆವು. ಡೈನಿಂಗ್ ಹಾಲ್ ನಲ್ಲಿ ವೆಂಕಟೇಶ್ ದಾಸ್ ಅವರು ಯಮುನೋತ್ರಿಯ ಸ್ಥಳ ಪುರಾಣವನ್ನು ವಿವರಿಸಿದರು. ಇಲ್ಲಿಂದ 40 ಕಿಲೋಮೀಟರ್ ದೂರದಲ್ಲಿರುವ ಯಮುನೋತ್ರಿಯನ್ನು ಬೆಳಿಗ್ಗೆ ಬೇಗನೆ ತಲುಪಿ, ದರ್ಶನ ಮುಗಿಸಿ ವಾಪಸ್ ಆಗಬೇಕಾಗಿದ್ದರಿಂದ ಮುಂಜಾನೆ ಮೂರಕ್ಕೆಲ್ಲ ಇಲ್ಲಿಂದ ಹೊರಡುವುದು ಎಂದು ನಿರ್ಣಯವಾಗಿತ್ತು. ಆದ್ದರಿಂದ ಎಲ್ಲ ಯಾತ್ರಾರ್ಥಿಗಳು ಬೇಗನೆ ನಿದ್ರೆಗೆ ಜಾರಿದರು.
River Ganga in Rishikesh 
                            River Yamuna


  ( ಸಶೇಷ...)

                                                                                                                                                                               







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ