ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಆಗಸ್ಟ್ 21, 2024

ಚಾರ್ ಧಾಮ ಯಾತ್ರೆ -ಭಾಗ 7

ಚಾರ್ ಧಾಮ ಯಾತ್ರೆ -ಭಾಗ 7

ಗುಪ್ತಕಾಶಿಯ ಸುತ್ತ ಮುತ್ತ


ದಿನಾಂಕ:-15/05/2024


        ಕ್ಯಾಂಪ್ ನಿರ್ವಾಣದ ಎದುರುಗಡೆ ಹಿಮಾಚ್ಛಾದಿತ ಗಿರಿ ಶಿಖರಗಳ ಸಾಲೇ ಇತ್ತು. ಆದ್ದರಿಂದ ಸೂರ್ಯನ ಪ್ರಥಮ ಕಿರಣಗಳು ಈ ಗಿರಿ ಸಾಲುಗಳಲ್ಲಿ ಸೃಷ್ಟಿಸುವ ಲೀಲೆಯನ್ನು ಕಾಣುವ ಕಾತರದಿಂದ ಮುಂಜಾನೆ 4:45 ಕ್ಕೆಲ್ಲ ಎದ್ದು ತಯಾರಾಗಿ ನಿಂತೆವು. ಆದರೆ ಈ ಶಿಖರಗಳು ನಮ್ಮಿಂದ ಪೂರ್ವ ದಿಕ್ಕಿಗೆ ಇದ್ದ ಕಾರಣ ಸೂರ್ಯ ಅವುಗಳ ಹಿಂದಿನಿಂದ ಮೂಡುವವನಿದ್ದ. ಆದರೂ ಕೆಲವು ಶಿಖರಾಗ್ರಗಳು ಸ್ವರ್ಣ ಲೇಪಿತವಾಗಿ ಮಿನುಗುತ್ತಿದ್ದುದನ್ನು ಕಂಡು ಪುಳಕಿತಗೊಂಡೆವು. ಗಿರಿಶ್ರೇಣಿಯ ಹಿಂದಿನಿಂದ, ಹರಡಿದ್ದ ತಿಳಿ ಮಂಜನ್ನು ಸೀಳಿಕೊಂಡು, ಕಿರಣದ ಕೋಲುಗಳು ಮೂಡಿ ಬರುತ್ತಿದ್ದ ದೃಶ್ಯ ನಯನ ಮನೋಹರವಾಗಿತ್ತು. ಬೆಳಕು ಹೆಚ್ಚಾದಂತೆ ಗಿರಿ ಶ್ರೇಣಿಗಳ ರೂಪ ವಿನ್ಯಾಸವೂ ಬದಲಾಗುತ್ತಿತ್ತು. ಇವನ್ನೆಲ್ಲ ನೋಡಿ ಸಂತೋಷ ಪಡುತ್ತಾ ಫೋಟೋ ಕ್ಲಿಕ್ಕಿಸಿಕೊಂಡೆವು. ಸೂರ್ಯೋದಯದ ಸಮಯದ ಚುಮುಚುಮು ಬೆಳಕಿನಲ್ಲಿ ಹಿಮಾಲಯದ ಚಳಿಯನ್ನು ಅಸ್ವಾದಿಸುತ್ತಾ ಕ್ಯಾಂಪಿನ ಎದುರುಗಡೆ ಇದ್ದ ರಸ್ತೆಯಲ್ಲಿ ಒಂದು ಅರ್ಧ ಕಿಲೋಮೀಟರ್ ವಾಕ್ ಮಾಡಿ ಬಂದೆವು. ನಂತರ ಬಿಸಿಬಿಸಿ ನೀರಿನಲ್ಲಿ ನಿರಾಳವಾಗಿ ಸ್ನಾನ ಮಾಡಿದೆವು. ಜಪ, ಧ್ಯಾನಗಳನ್ನು ಮುಗಿಸಿ ಮುಂಜಾನೆ 8:30ಕ್ಕೆಲ್ಲ ದೋಸೆ, ಸಾಗು, ಚಟ್ನಿ ಹಾಗೂ ಹಣ್ಣಿನ ಹೋಳುಗಳ ತಿಂಡಿಯನ್ನು ಸವಿದೆವು.


           ನಿನ್ನೆ ಇಡೀ ದಿನ 12 -13 ತಾಸುಗಳ ಕಾಲ ದೀರ್ಘ ಪ್ರಯಾಣ ಮಾಡಿದ ಕಾರಣ ತುಂಬಾ ಮೈ ಕೈ ನೋವಿತ್ತು. ಇವತ್ತು ವಿಶ್ರಾಂತಿಯ ದಿನವಾಗಿತ್ತು. ವೆಂಕಟೇಶ್ ಪ್ರಭು ಅವರು, 'ಗುಪ್ತ ಕಾಶಿಯ ಸುತ್ತಮುತ್ತ ನೋಡಬೇಕಾದ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಅವನ್ನು ನೋಡಲು ಇಚ್ಛೆ ಉಳ್ಳವರಿಗಾಗಿ ಪ್ರತ್ಯೇಕ ಟ್ಯಾಕ್ಸಿಯ ವ್ಯವಸ್ಥೆ ಮಾಡಿಕೊಡುತ್ತೇನೆ. ಅದರ ಖರ್ಚನ್ನು ನೀವೇ ಭರಿಸಿಕೊಳ್ಳಬೇಕು. ಇಷ್ಟ ಇದ್ದವರು ತಿಳಿಸಬೇಕು' ಎಂದರು. ಅದರಂತೆ ಕೆಲವು ಹೆಂಗಸರು ಮತ್ತು ಗಂಡಸರು ತಯಾರಾದರು. ನನ್ನ ಪತ್ನಿ ಸರಸ್ವತಿ ಕೂಡ ಸೇರಿಕೊಂಡಳು. ನಾನು ರೂಮಿನಲ್ಲೇ ಉಳಿದುಕೊಂಡು ಕೆಲವು ಬಟ್ಟೆಗಳನ್ನು ಒಗೆದು ಒಣಗಿಸಿ ಇಟ್ಟುಕೊಂಡೆ. ಅವರು ಮಧ್ಯಾಹ್ನ 3:30 ಗಂಟೆಯ ಸುಮಾರಿಗೆ ವಾಪಸ್ ಬಂದರು. ಅವರು ವೀಕ್ಷಿಸಿದ ಸ್ಥಳಗಳು ಈ ರೀತಿ ಇವೆ.( ನನ್ನ ಪತ್ನಿ ನನಗೆ ಹೇಳಿದಂತೆ)


         1) ಊಖಿಮಠ:- ರುದ್ರ ಪ್ರಯಾಗ ಜಿಲ್ಲೆಯಲ್ಲಿರುವ ಊಖಿಮಠ ಮಂದಾಕಿನಿ ನದಿಯ ದಂಡೆಯ ಮೇಲಿದೆ. ಊಖಿಮಠದಲ್ಲಿ 'ಮಧ್ಯಮಾಹೇಶ್ವರ ಗಂಗಾ' ಮತ್ತು ಮಂದಾಕಿನಿ ನದಿಗಳ ಸಂಗಮವಿದೆ. ಇದಕ್ಕಿಂತ ಮೇಲ್ಭಾಗದಲ್ಲಿರುವ ಸೋನ್ ಪ್ರಯಾಗದಲ್ಲಿ 'ವಾಸುಕಿ ಗಂಗಾ' ಮತ್ತು ಮಂದಾಕಿನಿ ನದಿಗಳ ಸಂಗಮವಿದೆ. ಊಖಿಮಠದಲ್ಲಿ ಓಂಕಾರೇಶ್ವರ ಮಂದಿರವಿದೆ. ಇದು ಕೇದಾರನಾಥ ಸ್ವಾಮಿಯ ಚಳಿಗಾಲದ ಆವಾಸ ಸ್ಥಾನ. ದೀಪಾವಳಿಗೆ ಕೇದಾರನಾಥನ ಮಂದಿರ ಹಿಮಾಚ್ಛಾದಿತವಾಗಿ ಮುಚ್ಚುತ್ತಿದ್ದಂತೆ ಕೇದಾರನಾಥ ಸ್ವಾಮಿಯ ಉತ್ಸವ ಮೂರ್ತಿಯನ್ನು ಊಖಿಮಠಕ್ಕೆ ತಂದು ಮುಂದಿನ ಅಕ್ಷಯ ತೃತೀಯದ ತನಕ ಇಲ್ಲಿ ಪೂಜಿಸುತ್ತಾರೆ. ಅದೇ ರೀತಿ ಪಂಚ ಕೇದಾರಗಳಲ್ಲಿ ಒಂದಾದ ಮಧ್ಯಮಾಹೇಶ್ವರದಿಂದ ಸಹ ಉತ್ಸವ ಮೂರ್ತಿಯನ್ನು ಚಳಿಗಾಲದ ಸಲುವಾಗಿ ಇಲ್ಲಿಗೇ ತರುತ್ತಾರೆ.


          ಪುರಾಣಗಳ ಐತಿಹ್ಯ ಈ ದೇವಾಲಯಕ್ಕೆ ಇದೆ. ಶ್ರೀರಾಮಚಂದ್ರ ದೊರೆಯ ಪೂರ್ವಜರಾದ ಮಾಂಧಾತ ದೊರೆ ತಮ್ಮ ಕೊನೆಗಾಲದಲ್ಲಿ ಇಲ್ಲಿಗೆ ಬಂದು ಒಂಟಿ ಕಾಲಿನಲ್ಲಿ ನಿಂತು 12 ವರ್ಷಗಳ ಕಾಲ ಶಿವನನ್ನು ಕುರಿತು ತಪಸ್ಸು ಮಾಡಿದರಂತೆ. ಶಿವ ಅವರಿಗೆ ಓಂಕಾರನಾದ ರೂಪದಲ್ಲಿ ದರ್ಶನವನ್ನಿತ್ತನಂತೆ. ಆದ್ದರಿಂದಲೇ ಇಲ್ಲಿಯ ಆರಾಧ್ಯ ದೈವ ಓಂಕಾರೇಶ್ವರ. ಇನ್ನೊಂದು ಐತಿಹ್ಯವೂ ಇದೆ. ಬಾಣಾಸುರನ ಮಗಳಾದ ಉಷೆ ಮತ್ತು ಶ್ರೀ ಕೃಷ್ಣನ ಮೊಮ್ಮಗನಾದ ಅನಿರುದ್ಧನ ವಿವಾಹವಾದ ಸ್ಥಳ ಈ ಮಂದಿರ ಎಂದು ಸಹ ಪುರಾಣ ಹೇಳುತ್ತದೆ.


         ಇದೇ ಊಖಿಮಠದ ಮುಖ್ಯ ಪೂಜಾರಿ "ರಾವಲ"ರು ನಮ್ಮ ವೀರಶೈವ ಮತದ ಪಂಚಾಚಾರ್ಯರುಗಳ ಪೈಕಿ ಒಬ್ಬರು. ವೀರಶೈವ ಪಂಚಪೀಠಗಳಲ್ಲಿ ಒಂದಾದ ಕೇದಾರಪೀಠದ ಮುಖ್ಯಸ್ಥರು ಸಹ ಇದೇ ರಾವಲರು. ಇವರು ಕರ್ನಾಟಕದ ಮಾಹೇಶ್ವರ ಜಂಗಮ ವಂಶಸ್ಥರು. ಇಲ್ಲಿ ನಮ್ಮ ಕರ್ನಾಟಕದ ಪ್ರವಾಸಿಗರನ್ನು ಗುರುತಿಸಿ ಪ್ರೀತಿಯಿಂದ ಮಾತನಾಡಿಸುತ್ತಾರೆ. ಎಲ್ಲಾ ಬೋರ್ಡುಗಳಲ್ಲಿ ಕನ್ನಡವೂ ಸಹ ಸ್ಥಾನ ಪಡೆದಿದೆ.


2) ಕಾಲಿ ಮಠ :- ಊಖಿ ಮಠದಿಂದ 15 -20 ಕಿಲೋ ಮೀಟರ್ ದೂರದಲ್ಲಿ ಈ 'ಕಾಲಿ ಮಠ' ಇದೆ. ಕಾಲಿ ಗಂಗಾ ನದಿ ಇಲ್ಲಿ ಮಂದಾಕಿನಿಯನ್ನು ಸೇರುತ್ತದೆ.


          'ಧಾರಿ ದೇವಿ'ಯಲ್ಲಿ ಕಾಳಿ ಮಾತೆಯ ಸೊಂಟದಿಂದ ಮೇಲ್ಭಾಗ ಮತ್ತು ಮುಖ ಇದ್ದರೆ ಇಲ್ಲಿನ ಮಂದಿರದಲ್ಲಿ ದೇವಿಯ ಕೆಳಭಾಗ ಇದ್ದು ಅದಕ್ಕೆ ಸೀರೆಯನ್ನು ಉಡಿಸಿ ಇಟ್ಟಿದ್ದಾರೆ. ಧಾರಿದೇವಿ ಮತ್ತು ಕಾಳಿ ಮಠ ಎರಡೂ ಸಹ 108 ಶಕ್ತಿಪೀಠಗಳ ಪೈಕಿ ಬರುತ್ತವೆ.


            ರಕ್ತ ಬೀಜಾಸುರನನ್ನು ಕೊಂದ ನಂತರ ಕಾಳಿಕಾದೇವಿ ಇಲ್ಲಿ ಭೂಮಿಯಲ್ಲಿ ಐಕ್ಯಳಾದಳಂತೆ. ಆ ರಂಧ್ರವಿರುವ ಸ್ಥಳದ ಮೇಲೆ ಒಂದು ಬೆಳ್ಳಿ ತಟ್ಟೆಯನ್ನು ಮುಚ್ಚಿ ಇಟ್ಟಿರುತ್ತಾರೆ ಮತ್ತು ಅದರ ಮೇಲೆ ಶ್ರೀ ಯಂತ್ರವನ್ನು ಬರೆದಿದ್ದಾರಂತೆ. ಈ ಯಂತ್ರವನ್ನು ನವರಾತ್ರಿಯ ಎಂಟನೆಯ ದಿನ ಮಧ್ಯರಾತ್ರಿ ಮುಖ್ಯ ಅರ್ಚಕರು ಮಾತ್ರ ತೆಗೆದು ಪೂಜೆ ಮಾಡಿ ಮತ್ತೆ ಯಥಾ ಸ್ಥಾನದಲ್ಲಿ ಇರಿಸುತ್ತಾರಂತೆ. ಇದನ್ನು ಆವರಿಸಿ ಮಂದಿರವನ್ನು ಕಟ್ಟಿರುತ್ತಾರೆ.


3) ನಾರಾಯಣ ಕೋಟಿ :- ಇದೊಂದು ಮಂದಿರಗಳ ಸಮುಚ್ಛಯ. ಈ ಸ್ಥಳ ಗುಪ್ತ ಕಾಶಿಯಿಂದ 3 ಕಿಲೋಮೀಟರ್ ದೂರದಲ್ಲಿದೆ. ಮೊದಲು ಇಲ್ಲಿ 360 ಮಂದಿರಗಳಿದ್ದವಂತೆ. ಈಗ 29 ಇವೆ. ಇಲ್ಲಿ ನವಗ್ರಹ ಮಂದಿರಗಳಿವೆ. ಐತಿಹ್ಯದ ಪ್ರಕಾರ, ದ್ವಾಪರ ಯುಗದಲ್ಲಿ ಮಹಾಭಾರತ ಯುದ್ಧದಲ್ಲಿ ಸ್ವಜನ ಹತ್ಯೆ ಮಾಡಿದ ಪಾಂಡವರು ಕ್ಷೋಭೆಗೊಂಡು ಶಿವನ ದರ್ಶನ ಬಯಸಿ ಗುಪ್ತಕಾಶಿಗೆ ಬಂದಿದ್ದರಂತೆ. ಶಿವ ಇವರನ್ನು ನೋಡಲು ಬಯಸದೇ ಕೇದಾರಕ್ಕೆ ಹೋದನಂತೆ. ಆಗ ಶಿವನ ಇರುವಿಕೆ ತಿಳಿಯದೆ ಕಂಗಾಲಾದ ಪಾಂಡವರು ಕೃಷ್ಣನನ್ನು ನೆನೆಯಲು, ಅವನು ತನ್ನ ಕೋಟಿ ರೂಪಗಳನ್ನು ಪಾಂಡವರಿಗೆ ತೋರಿಸಿ, ಶಿವನು ಮಾರುವೇಷದಲ್ಲಿ ಕೇದಾರಕ್ಕೆ ಹೋಗಿರುವುದನ್ನು ಅವರಿಗೆ ತಿಳಿಸಿದನಂತೆ. ಹಾಗಾಗಿ ಈ ಸ್ಥಳಕ್ಕೆ ಕೋಟಿನಾರಾಯಣ ಎಂದು ಹೇಳುತ್ತಾರೆ.


            ಒಟ್ಟಿನಲ್ಲಿ ದೇವಭೂಮಿ ಉತ್ತರಾಖಂಡ ನಮ್ಮ ಪುರಾಣಗಳೊಂದಿಗೆ, ಅದರಲ್ಲೂ ವಿಶೇಷತಃ

ಮಹಾಭಾರತದೊಂದಿಗೆ ತಳುಕು ಹಾಕಿಕೊಂಡಿದೆ. ಇವನ್ನೆಲ್ಲ ದರ್ಶಿಸಿ ನಮ್ಮವರು ಕ್ಯಾಂಪಿಗೆ ಬಂದಾಗ ಮಧ್ಯಾಹ್ನ 3:30 ಆಗಿತ್ತು. ನಾಳೆ ಕೇದಾರನಾಥೇಶ್ವರನ ದರ್ಶನಕ್ಕೆ ನಿಗದಿಯಾದ ದಿನ. ಆ ಭಾವನೆಯೇ ನಮ್ಮನ್ನು ಪುಳಕಿತವಾಗಿಸುತ್ತಿದೆ.


          

                     ನಾರಾಯಣ ಕೋಟಿ ಮಂದಿರ ಸಮುಚ್ಛಯ                                  

ಊಖಿ ಮಠ ಅಥವಾ ಉಷಾ ಮಠ


(ಸಶೇಷ.....)



                                                                                                       (ಸಶೇಷ.....)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ