ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಆಗಸ್ಟ್ 11, 2024

ಚಾರ್ ಧಾಮ ಯಾತ್ರೆ -ಭಾಗ 5

ಚಾರ್ ಧಾಮ ಯಾತ್ರೆ -ಭಾಗ 5

ಅದೇ ಹಾಡು ಗಂಗೋತ್ರಿಯದೂ!

ದಿನಾಂಕ 13/05/2024

ನಿನ್ನೆಯ ದಿನ ಯಮುನೋತ್ರಿಯ ದರ್ಶನ ಸಾಧ್ಯವಾಗದ ಕಾರಣ ನಿಗದಿಗಿಂತ ಒಂದು ದಿನ ಮೊದಲೇ ಗಂಗೋತ್ರಿ ದರ್ಶನ ಮುಗಿಸಲು ನಿರ್ಧರಿಸಲಾಯಿತು. ಯಮುನೋತ್ರಿಯಲ್ಲಿ ಸಾಕಷ್ಟು ಯಾತ್ರಿಕರು ಇನ್ನೂ ಸಿಕ್ಕಿ ಬಿದ್ದಿರುವುದರಿಂದ, ಅವರೆಲ್ಲ ಬಂದು ಗಂಗೋತ್ರಿಯಲ್ಲಿ ದಟ್ಟಣೆ ಉಂಟುಮಾಡುವ ಮೊದಲೇ ನಾವು ದರ್ಶನ ಮುಗಿಸಿಬಿಡಬೇಕು ಎಂದು ತೀರ್ಮಾನಿಸಿದೆವು. ಅದಕ್ಕಾಗಿ ಈ ದಿನ ಮುಂಜಾನೆ 1:00 ಗಂಟೆಗೆಲ್ಲ ಎದ್ದು ಸ್ನಾನ ಮುಗಿಸಿ 2:00 ಗಂಟೆಗೆ ಲಗೇಜ್ ಅನ್ನು ಹೊರಗಿಟ್ಟಿದ್ದೆವು. 2:30 ಕ್ಕೆ ಚಹಾ ಸೇವಿಸಿ 2:45ಕ್ಕೆಲ್ಲ ಅದಾಗಲೇ ಬಸ್ಸನ್ನು ಹೊರಡಿಸಿದ್ದೆವು. ದಿನದಂತೆ ನರಸಿಂಹ ಭಜನೆ, ಮಂಕುತಿಮ್ಮನ ಕಗ್ಗದ ವ್ಯಾಖ್ಯಾನ ಮುಗಿಸಿ ಎಲ್ಲರೂ ಬೆಳಗಿನ ಜಾವದ ಸುಖನಿದ್ರೆಗೆ ಜಾರಿದೆವು.

ಬೆಳಗಾಗುತ್ತಿದ್ದಂತೆ ಆರು ಗಂಟೆಗೆ ನಮ್ಮ ಬಸ್ ಗಳು ಉತ್ತರ ಕಾಶಿಯ "ಶಿವಲಿಂಗ ರೆಸಾರ್ಟ್ಸ್" ದಲ್ಲಿ ಬೆಳಗಿನ ತಿಂಡಿಗಾಗಿ ನಿಂತವು. ನಮಗಿಂತಲೂ ಮುಂಚೆ ಆಗಮಿಸಿದ್ದ ಅಡಿಗೆಯವರು ಬೆಳಗಿನ ತಿಂಡಿಯೂ ಅಲ್ಲದೆ ಮಧ್ಯಾಹ್ನದ ಊಟವನ್ನು ಸಹ ತಯಾರಿಸಿ ಪ್ಯಾಕ್ ಮಾಡಿಕೊಂಡಿದ್ದರು. ಬೆಳಗಿನ ಏಳುವರೆಗೆಲ್ಲ ನಮ್ಮ ಬಸ್ ಉತ್ತರಕಾಶಿಯಿಂದ ಗಂಗೋತ್ರಿಯ ಕಡೆಗೆ ಹೊರಟಿತು. ಈ ಪ್ರಯಾಣ ಭಾಗೀರಥಿ ನದಿಯಗುಂಟ ಸಾಗುತ್ತಿತ್ತು. ದೂರದಲ್ಲಿ ಹಿಮಾಚ್ಛಾದಿತ ಶಿಖರಗಳು ಕಂಡವು. ಸುಮಾರು14 -15 ಕಿಲೋಮಿಟರ್ ದೂರ ಸಾಗುತ್ತಿದ್ದಂತೆ ಪೊಲೀಸರು ಎಲ್ಲಾ ಯಾತ್ರಿಗಳ ವಾಹನಗಳನ್ನು ತಡೆಯುತ್ತಿದ್ದರು. ಹಾಗೆ ತಡೆದ ವಾಹನಗಳನ್ನು ರಸ್ತೆಯ ಬಲಭಾಗದಲ್ಲಿ ಇದ್ದ ಒಂದು ಬಯಲಿನಲ್ಲಿ ನಿಲ್ಲಿಸಿದ್ದರು. ನಮ್ಮ ಬಸ್ ಕೂಡ ಆ ಜಾಗಕ್ಕೆ ಹೋಗಿ ನಿಂತಿತು. ಇಲ್ಲಿ ನಮ್ಮ ವಾಹನದ ರಿಜಿಸ್ಟ್ರೇಷನ್ ಆಯಿತು. ಆದರೂ ಮುಂದೆ ವಾಹನಗಳನ್ನು ಬಿಡುತ್ತಲೇ ಇರಲಿಲ್ಲ. ಅಲ್ಲಿದ್ದ ಪೊಲೀಸರನ್ನು ವಿಚಾರಿಸಲಾಗಿ, 'ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಗಂಗೋತ್ರಿಯ ದಾರಿಯಲ್ಲಿ ಭೂಕುಸಿತವಾಗಿದೆ, ಹಾಗಾಗಿ ವಾಹನಗಳನ್ನು ಮುಂದಕ್ಕೆ ಬಿಡಲಾಗುತ್ತಿಲ್ಲ' ಎಂದರು.

ಈ ದಾರಿ ಯಮುನೋತ್ರಿಯ ದಾರಿಯಂತಲ್ಲ, ತುಂಬಾ ಇಕ್ಕಟ್ಟಾಗಿತ್ತು. ಅದರಲ್ಲೂ, ಗುಡ್ಡ ಕುಸಿತದಿಂದ ದಾರಿ ಬಂದಾದರೆ ಎರಡೂ ಕಡೆಯ ವಾಹನ ಸಂಚಾರ ಸ್ಥಗಿತವಾಗುತ್ತಿತ್ತು. ನಾವು ಗಂಗೋತ್ರಿ ತಲುಪಲು ಇನ್ನೂ 85km ಸಾಗಬೇಕಿತ್ತು. ನಾವು ಈ ಸ್ಥಳದಲ್ಲಿಯೇ ಬೆಳಿಗ್ಗೆ 8 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ಕಾದೆವು. ಈ ಯಾತ್ರಿಗಳಲ್ಲಿ ಕೆಲವು ವಾಹನಗಳವರು ತಾವಿದ್ದ ಜಾಗದಲ್ಲಿಯೇ ಬಾಳೆಹಣ್ಣಿನ ಸಿಪ್ಪೆ, ಪ್ಲಾಸ್ಟಿಕ್ ಕವರ್ ಇತ್ಯಾದಿ ಕಸಗಳನ್ನು ಎಲ್ಲೆಂದರಲ್ಲಿ ಹರಡತೊಡಗಿದರು. ಇದನ್ನು ಗಮನಿಸಿ ನಾನು ಅಲ್ಲಿದ್ದ ಪೋಲೀಸಿನವರಿಗೆ ಇದರ ಬಗ್ಗೆ ದೂರಿದೆ. ನಂತರ ನೀವೇ ಈ ಕಸವನ್ನೆಲ್ಲ ಬಳಿಯಬೇಕಾಗುತ್ತದೆ ಎಂದೂ ಎಚ್ಚರಿಸಿದೆ. ಹೌದೆಂದು ಒಪ್ಪಿಕೊಂಡ ಅವರು ತಕ್ಷಣ ತಮ್ಮ ಧ್ವನಿವರ್ಧಕದಲ್ಲಿ ಅನೌನ್ಸ್ ಮಾಡಿ ಕಸ ಹಾಕಬಾರದೆಂದೂ, ಹಾಗೆ ಹರಡಿದವರ ವಾಹನವನ್ನು ಇಲ್ಲೇ ತಡೆದು ನಿಲ್ಲಿಸುವದಾಗಿಯೂ ಹೇಳಿದರು ಮತ್ತು ಇದನ್ನು ವೀಕ್ಷಿಸಲು ಬಂದರು. ಈ ಚಾಲಾಕಿ ಯಾತ್ರಿಗಳು ತಡಮಾಡದೆ ತಾವು ಚೆಲ್ಲಿದ ಕಸವನ್ನೆಲ್ಲ ಆರಿಸಿ ತಮ್ಮ ಬಸ್ಸಿನ ತಳಭಾಗಕ್ಕೆ ಪೋಲೀಸಿನವರಿಗೆ ಕಾಣದಂತೆ ತಳ್ಳಿಬಿಟ್ಟರು. ನನಗೆ ನಗು ಬಂತು ಈ ಯಾತ್ರಿಗಳ ಅಸಡ್ಡಾಳತನ ನೋಡಿ. ಕೊನೇಪಕ್ಷ ಅದರ ನಂತರ ಕಸ ಚೆಲ್ಲುವುದು ನಿಂತಿತು.
 
ಈ ನಡುವೆ ಬಸ್ಸಿನಲ್ಲಿಯೇ ನಮಗೆ ಮಧ್ಯಾಹ್ನದ ಊಟವನ್ನು ಸಹ ನೀಡಿದರು. ಪಲಾವ್, ಮೊಸರನ್ನ ಹಾಗೂ ಒಂದು ಲಡ್ಡು. ಊಟ ಚೆನ್ನಾಗಿತ್ತು. ನಾವು ನಿಂತಿರುವ ಸ್ಥಳದಲ್ಲಿ ಕೆಳಗಡೆ ಭಾಗೀರಥಿ ನದಿ ರಭಸವಾಗಿ ಹರಿಯುತ್ತಿತ್ತು. ನಮ್ಮ ವಾಹನದ ಜೊತೆಯಲ್ಲಿ ನಿಂತ ನೂರಾರು ಇತರ ವಾಹನಗಳ ಯಾತ್ರಿಗಳು ಅಲ್ಲಿಯೇ ಒಲೆ ಹೂಡಿ ರೊಟ್ಟಿ, ಚಪಾತಿ, ಪೂರಿ, ದಾಲ್ ಇತ್ಯಾದಿ ಅಡಿಗೆ ಮಾಡಿಕೊಂಡರು. ಕೆಲವರು ಬಟ್ಟೆ ಒಗೆದು ಹಾಕಿದರು. ಕೆಲವರು ಅಲ್ಲೇ ಟೆಂಟ್ ಎಬ್ಬಿಸಿ, ಒಳಗಡೆ ಕುಳಿತು, ಇಸ್ಪೀಟ್ ಆಟವನ್ನು ಸಹ ಆಡುತ್ತಿದ್ದರು. ಇನ್ನು ಕೆಲವರು ಚೆನ್ನಾಗಿ ಭಜನೆ ಮಾಡುತ್ತಿದ್ದರು. ಎಲ್ಲರಿಗೂ ಸಹ ಸಮಯ ಕಳೆಯುವುದು ಸಮಸ್ಯೆಯಾಗಿತ್ತು. ಅಲ್ಲೇ ಇದ್ದ ಪೊಲೀಸಿನವರನ್ನು ವಿಚಾರಿಸಲಾಗಿ, "ಇನ್ನು ಈ ದಿನಕ್ಕೆ ಮೇಲಿನ ರಸ್ತೆಯ ಬ್ಲಾಕ್ ತೆರವಾಗುವುದಿಲ್ಲ" ಎಂದು ಹೇಳಿದರು. ನಾಳೆಯ ದಿನ ಮೇಲಿದ್ದವರೆಲ್ಲ ಕೆಳಗೆ ಬಂದ ನಂತರ ಇಲ್ಲಿ ನಿಂತವರನ್ನು ಮೇಲಕ್ಕೆ ಬಿಡುವುದು. ಅದು ಎಷ್ಟು ಹೊತ್ತಿಗೆ ಆರಂಭವಾಗುತ್ತದೆ ಎನ್ನುವ ನಿಶ್ಚಯವಿಲ್ಲ. ಇಲ್ಲಿ ಎಲ್ಲ ಮೂಲ ಸೌಕರ್ಯಗಳ ಕೊರತೆ ಇತ್ತು. ಆದ್ದರಿಂದ ಇಲ್ಲಿ ನಿಂತು ಅನುಭವಿಸುವುದಕ್ಕಿಂತ ವಾಪಸ್ ಉತ್ತರಕಾಶಿಗೆ ಹೋಗುವುದೆಂದು ತೀರ್ಮಾನಿಸಿದೆವು. ಅದೃಷ್ಟವಶಾತ್ ಬಸ್ಸನ್ನು ತಿರುಗಿಸಲು ಯಾವುದೇ ಸಮಸ್ಯೆ ಆಗಲಿಲ್ಲ. ಆದರೆ ವಾಪಸ್ ಉತ್ತರಕಾಶಿಗೆ ಬರುವಾಗ ದಾರಿಯಲ್ಲಿ ಮತ್ತೆ ಟ್ರಾಫಿಕ್ ಜಾಮ್ ಆಗಿತ್ತು. ಕೊನೆಗೂ, ಎಲ್ಲರೂ ಬಸ್ಸಿನಿಂದ ಇಳಿದು, ಎರಡು ಮೂರು ಕಿಲೋಮೀಟರ್ ದೂರ ನಡೆದು 'ಶಿವಲಿಂಗ ರೆಸಾರ್ಟ್' ತಲುಪಿದೆವು. ಅಷ್ಟರಲ್ಲಿ ಸಾಯಂಕಾಲ 6:00 ಗಂಟೆ ಆಗಿತ್ತು. ಉತ್ತರಕಾಶಿ ವಿಶ್ವೇಶ್ವರ ದೇವಸ್ಥಾನದ ಕಡೆಗೆ ಹೋಗುವುದು ಸಹ ಪೊಲೀಸ್ ಬ್ಯಾರಿಕೇಡ್ ನಿಂದಾಗಿ ಸಾಧ್ಯವಾಗಲಿಲ್ಲ.

ಒಟ್ಟಿನಲ್ಲಿ ಈ ದಿನ ಸಂಪೂರ್ಣ ನಿರಾಶೆ. ಗಂಗೋತ್ರಿ ದರ್ಶನವಾಗಲಿಲ್ಲ. ಉತ್ತರಕಾಶಿಯ ವಿಶ್ವೇಶ್ವರ ಮಂದಿರಕ್ಕೂ ಸಹ ಹೋಗಲು ಆಗಲಿಲ್ಲ. ನಮ್ಮ ಗುಂಪಿನ ಕೆಲವು ಯಾತ್ರಿಗಳಂತೂ ಯಾತ್ರೆಯನ್ನು ಇಲ್ಲಿಯೇ ಮೊಟಕುಗೊಳಿಸಿ ವಾಪಸ್ ಹೋಗಿಬಿಡೋಣ ಎಂದು ಮಾತಾಡಿಕೊಂಡರು. ಆದರೆ ಪ್ರಯಾಣದ ಟಿಕೆಟ್ ಗಳೆಲ್ಲ ನಿಗದಿಯಂತೆ ಬುಕ್ ಆಗಿರುವ ಕಾರಣ ಅದನ್ನು ತಪ್ಪಿಸಲು ಸಾಧ್ಯವಾಗುತ್ತಿರಲಿಲ್ಲ. "ನಿನ್ನ ದರ್ಶನವನ್ನಾದರೂ ಕರುಣಿಸು, ತಂದೆ" ಎಂದು ಕೇದಾರನಾಥನನ್ನು ಪ್ರಾರ್ಥಿಸುವುದನ್ನು ಬಿಟ್ಟು ನಮಗೆ ಬೇರೆ ಯಾವ ದಾರಿಯೂ ಇರಲಿಲ್ಲ. ರಾತ್ರಿ ಊಟ ಮುಗಿಸಿ ಬೇಗನೆ ನಿದ್ದೆಗೆ ಶರಣಾದೆವು.

River Bhageerathi



(ಸಶೇಷ....)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ