ಚಾರ್ ಧಾಮ ಯಾತ್ರೆ -ಭಾಗ 6
ಧಾರೀದೇವಿ ಮಂದಿರ ಮತ್ತು ಗುಪ್ತಕಾಶಿ
ದಿನಾಂಕ 14/05/2024
ಬೆಳಿಗ್ಗೆ ನಾಲ್ಕು ಗಂಟೆಗೆಲ್ಲ ಎದ್ದು ತಯಾರಾಗಿ ಬ್ಯಾಗೇಜ್ ಗಳನ್ನು ರೂಮಿನ ಹೊರಗೆ ಇಟ್ಟಾಗ 5:00 ಗಂಟೆ ಆಗಿತ್ತು. ಚಹಾ, ಬಿಸ್ಕತ್ ಸೇವನೆಯ ನಂತರ ಉತ್ತರಕಾಶಿಯ ಶಿವಲಿಂಗ ರಿಸಾರ್ಟ್ ಖಾಲಿ ಮಾಡಿದೆವು..
ನಿನ್ನೆಯ ದಿನ ಪೂರ್ತಿ ನಿರುಪಯುಕ್ತವೆ ಆಗಿತ್ತು. ಭಾಗೀರಥಿ ನದಿಗೆ ಇಳಿಯಲು ಸಹ ಆಗಲಿಲ್ಲ. ಉತ್ತರಕಾಶಿಯಲಿನ ವಿಶ್ವನಾಥ ಮಂದಿರದ ರಸ್ತೆಯ ಎರಡೂ ಕಡೆ ಪೊಲೀಸರು ರಸ್ತೆ ತಡೆ ಹಾಕಿದ್ದರಿಂದ ದೇವರ ದರ್ಶನಕ್ಕೆ ಸಹ ಹೋಗಲು ಆಗಲಿಲ್ಲ. ಶಿವಲಿಂಗ ರೆಸಾರ್ಟ್ಸ್ ರೂಮುಗಳು ಸಹ ಅಷ್ಟೇನು ಹಿತಕರವಾಗಿರಲಿಲ್ಲ. ಯಾತ್ರಿಗಳೆಲ್ಲ ಬೇಸರದಿಂದ ಇದ್ದೆವು. ಮಾರ್ಗದರ್ಶಿ ವೆಂಕಟೇಶ್ ದಾಸ್ ಸಹ ಬೇಸರದಲ್ಲಿದ್ದರು. ಉಳಿದೆರಡು ಯಾತ್ರೆಗಳು ಸುಗಮವಾಗಿ ಸಾಗಲಿ ಎಂದು ಪ್ರಾರ್ಥಿಸುವುದಷ್ಟೇ ನಮ್ಮ ಕೈಯಲ್ಲಿ ಇತ್ತು.
ಬಸ್ಸಿನಲ್ಲಿ ಕುಳಿತು ನರಸಿಂಹ ಭಜನೆ, ಮಂಕುತಿಮ್ಮನ ಕಗ್ಗದ ವ್ಯಾಖ್ಯಾನ ಆಗುತ್ತಿದ್ದಂತೆ, ಅದಾಗಲೇ ನಿಚ್ಚಳವಾಗಿ ಬೆಳಗಾಗಿದ್ದರಿಂದ ಆ ಬೆಳಗಿನ ಸಮಯದಲ್ಲಿ ಸುತ್ತಲಿನ ಗಿರಿ ಕಣಿವೆಗಳ ಸ್ನಿಗ್ಧ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗಿದೆವು. ಎಂಟು ಗಂಟೆಯ ಸುಮಾರಿಗೆ ದಾರಿಯಲ್ಲಿ ಸಿಕ್ಕ ಊರಿನಲ್ಲಿ (ಮೊದಲೇ ನಿಗದಿಯಾದಂತೆ) ಬೆಳಗಿನ ತಿಂಡಿಗೆ ನಮ್ಮ ಬಹಳ ನಿಂತಿತು. ಉಪ್ಪಿಟ್ಟು-ಶಿರಾದ ನಾಷ್ಟಾ. ಅಲ್ಲೇ ಇದ್ದ ಅಂಗಡಿ ಒಂದರಲ್ಲಿ ಸ್ಥಳೀಯ ಸೇಬು ಹಣ್ಣೊಂದನ್ನು ತೆಗೆದುಕೊಂಡೆನು. ವ್ಯಾಕ್ಸ್ ಕೋಟಿಂಗ್ ಇಲ್ಲದ ಆ ಹಣ್ಣು ತುಂಬಾ ರುಚಿಯಾಗಿತ್ತು ಇನ್ನಷ್ಟು ಕೊಳ್ಳೋಣ ಎಂದರೆ ಅದಾಗಲೇ ಖಾಲಿ ಆಗಿಬಿಟ್ಟಿತ್ತು.
ತಿಂಡಿ ತಿಂದು ಹೊರಟ ನಾವು ಗದ್ವಾಲ್ ಜಿಲ್ಲೆಯ ತೆಹರಿ ಡ್ಯಾಮಿನ ಮೇಲೆ ಹಾಯ್ದು ಸಾಗಿದೆವು. ಇದು ವಿಶ್ವದ ಅತ್ಯಂತ ಎತ್ತರದಲ್ಲಿರುವ ಡ್ಯಾಮ್ ಹಾಗೂ ಅತ್ಯಂತ ಎತ್ತರವಾದ ಡ್ಯಾಮ್ ಕೂಡ ಹೌದು. ಇದರ ಸಂಪೂರ್ಣ ನಿರ್ವಹಣೆ ಹಾಗೂ ರಕ್ಷಣೆ ಭೂಸೇನೆಯವರ ಕೈಯಲ್ಲಿದೆ. ಹಾಗಾಗಿ ಇಲ್ಲಿ ಕ್ಯಾಮೆರಾ ಅಥವಾ ಮೊಬೈಲ್ ಗಳನ್ನು ಫೋಟೋ ಹೊಡೆಯುವ ಸಲುವಾಗಿ ಹೊರಗೆ ತೆಗೆಯುವುದನ್ನು ಸಹ ನಿಷೇಧಿಸಲಾಗಿದೆ. ನಂತರ ಗಡ್ವಾಲ್ ಜಿಲ್ಲೆಯ ಶ್ರೀನಗರದ ಮೂಲಕ ಹಾಯ್ದು ಸ್ವಲ್ಪ ಮುಂದೆ ಸಾಗಿದ ನಂತರ ಊಟಕ್ಕಾಗಿ ಗಾಡಿಯನ್ನು ನಿಲ್ಲಿಸಿದರು. ಈ ಶ್ರೀನಗರ ಜಿಲ್ಲಾ ಕೇಂದ್ರ. ಊಟದ ಸ್ಥಳ ಮೂರು ನಾಲ್ಕು ಕಿಲೋಮೀಟರ್ ಇರುವಾಗ ನಾವು ಕುಳಿತಿದ್ದ ಬಸ್ ನ ಕ್ಲಚ್ ಪ್ಲೇಟ್ ಹಾಳಾದ ಕಾರಣ ಬಸ್ ಅನ್ನು ಬದಿಗೆ ನಿಲ್ಲಿಸಿದರು. ಇನ್ನೊಂದು ಬಸ್ ಊಟದ ಸ್ಥಳದಲ್ಲಿ ಯಾತ್ರಿಗಳನ್ನು ಇಳಿಸಿ ವಾಪಸ್ ಬಂದು ನಮ್ಮನ್ನು ಕರೆದುಕೊಂಡು ಹೋಯಿತು. ಅಲ್ಲಿದ್ದ ಒಬ್ಬ ವೃದ್ಧರನ್ನು 'ಈ ಸ್ಥಳದ ವಿಶೇಷತೆ ಏನು?' ಎಂದು ಕೇಳಿದೆ. ಏಕೆಂದರೆ ನಾವು ಕುಳಿತ ಹಾಲ್ ನ ಗೋಡೆಯ ಮೇಲೆ ಬಾಲ ಗಣಪತಿ ಮತ್ತು ಕುಮಾರಸ್ವಾಮಿ ತಾಯಿ ಪಾರ್ವತಿಯ ಎರಡು ಜಡೆಗಳನ್ನು ಹಿಡಿದು ಆಡುತ್ತಿರುವ ಚಿತ್ರವಿತ್ತು. ನನ್ನ ಪ್ರಶ್ನೆಗೆ ಆ ವೃದ್ಧ, 'ಇದು ತಾಯಿ ಪಾರ್ವತಿಯ ವಿವಾಹವಾದ ಸ್ಥಳ. ಸನಿಹದ 'ತ್ರಿಯುಗಿನಾರಾಯಣ' ಎಂಬಲ್ಲಿನ ಪರ್ವತದ ಮೇಲಿರುವ ದೇವಾಲಯ ಒಂದರಲ್ಲಿ ಶಿವ ಪಾರ್ವತಿಯರ ವಿವಾಹವಾಗಿದ್ದು, ಆಗ ಸ್ಥಾಪಿಸಿದ ಯಜ್ಞದ ಕುಂಡ ಇನ್ನೂ ಇದ್ದು, ಅಲ್ಲಿಗೆ ಹೋದ ಯಾತ್ರಿಗಳೆಲ್ಲ ಆ ಕುಂಡಕ್ಕೆ ಒಂದೊಂದು ಕಟ್ಟಿಗೆಯನ್ನು ಹಾಕುವ ಪದ್ಧತಿ ಇದೆ. ಪಾರ್ವತಿಯ ವಿವಾಹ ದಿನದಿಂದ ಇಂದಿನ ತನಕ ಆ ಅಗ್ನಿ ನಂದಿಯೇ ಇಲ್ಲ' ಎಂದರು. ವಾವ್! ನಮ್ಮವರ ನಂಬಿಕೆಯೇ! ಎನಿಸಿತು. ಸನಾತನತೆಯ ನಿರಂತರತೆ ಹೀಗೆಯೇ ಸಾಗಿ ಬಂದಿದೆ.
ಹಾಳಾದ ಬಸ್ಸಿನ ಬದಲಿಗೆ ಮೂರು ಟೆಂಪೋ ಟ್ಯಾಕ್ಸ್ ಗಳನ್ನು ವ್ಯವಸ್ಥೆ ಮಾಡಿದರು. ಬೆಳಗಿನ ಪ್ರಯಾಣದುದ್ದಕ್ಕೂ ರಸ್ತೆ ಇಕ್ಕಟ್ಟಾಗಿತ್ತು. ಆದರೆ ಈಗ ರಸ್ತೆ ಚೆನ್ನಾಗಿತ್ತು. ಒಂದು ಕಡೆ ಎತ್ತರದ ಗುಡ್ಡಗಳು, ಇನ್ನೊಂದೆಡೆ ಆಳವಾದ ಕಣಿವೆ, ಕಣಿವೆಯ ತಳದಲ್ಲಿ ಹರಿಯುತ್ತಿದ್ದ ಅಲಕನಂದಾ ನದಿ - ಅತ್ಯಂತ ವಿಹಂಗಮವಾದ ನೋಟವದು. ಎಂತಹ ನಿರ್ಲಿಪ್ತನಲ್ಲೂ ಉತ್ಸಾಹವನ್ನು ಬಡಿದೆಬ್ಬಿಸಬಲ್ಲ ಪ್ರಕೃತಿಯ ರಮ್ಯ ನೋಟ! ರಸ್ತೆಯ ಅಸಂಖ್ಯ ತಿರುವುಗಳಲ್ಲಿ ಅತ್ಯಂತ ಚಾಕಚಕ್ಯತೆಯಿಂದ ಗಾಡಿಯನ್ನು ನಡೆಸುವ ಚಾಲಕರು. ಬಯಲು ನಾಡಿನಿಂದ ಬಂದ ಚಾಲಕರು ಇಲ್ಲಿಯ ಕಣಿವೆಯ ಆಳವನ್ನು ನೋಡಿ ಗಾಡಿಯನ್ನು ಓಡಿಸಲು ಹೆದರುತ್ತಾರೆ. ಆದ್ದರಿಂದ ವಿಶೇಷ ಗುಡ್ಡಗಾಡು ರಸ್ತೆಯ ಡ್ರೈವಿಂಗ್ ತರಬೇತಿ ಪಡೆದ ಡ್ರೈವರ್ ಗಳು ಮಾತ್ರ ಇಲ್ಲಿ ಬಸ್ಸು ಮತ್ತು ಟ್ಯಾಕ್ಸಿಗಳನ್ನು ಓಡಿಸುತ್ತಾರೆ. ಪರ್ವತ ಸೀಮೆಯ ರಸ್ತೆ ಪ್ರಾರಂಭವಾಗುವ ಮೊದಲೇ ಎಲ್ಲ ಡ್ರೈವರ್ ಗಳ ಚಾಲನಾಪತ್ರವನ್ನು ಈ ವಿಶೇಷ ಅನುಮತಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸುತ್ತಾರೆ.
ಗುಪ್ತಕಾಶಿ ಇನ್ನೂ ಸುಮಾರು 40 ಕಿಲೋ ಮೀಟರ್ ದೂರ ಇರುವಾಗ ದಾರಿಯಲ್ಲಿ 'ಕಲಿಯಾಸೋಡ್' ಎಂಬ ಸ್ಥಳದಲ್ಲಿ ವಾಹನ ನಿಲ್ಲಿಸಿದರು. ಇಲ್ಲಿ ಅಲಕನಂದಾ ನದಿಯ ಹರಿವಿನ ನಟ್ಟ ನಡುವೆ ಇರುವ 'ಧಾರಿದೇವಿ' ಮಂದಿರವನ್ನು ವೀಕ್ಷಿಸಿದೆವು. ಇದು ಒಂದು ಜಾಗೃತ ಶಕ್ತಿಪೀಠ. ಈಗ ಮಂದಿರ ಇರುವ ಜಾಗದಲ್ಲಿ ಸರಿಯಾಗಿ ಒಂದು ಹೈಡೆಲ್ ಪವರ್ ಪ್ರಾಜೆಕ್ಟ್ ನಿರ್ಮಿಸಲು 2013ರಲ್ಲಿ ಇಲ್ಲಿನ ಸರ್ಕಾರ ಎಲ್ಲಾ ತಯಾರಿಯನ್ನು ನಡೆಸಿ, ಧಾರಿದೇವಿ ಸಲುವಾಗಿ ಪಕ್ಕದ ಗುಡ್ಡದ ಮೇಲೆ ಒಂದು ಹೊಸ ಮಂದಿರವನ್ನು ನಿರ್ಮಿಸಿ, ದೇವಿಯ ಮೂರ್ತಿಯನ್ನು ಅದಕ್ಕೆ ಸ್ಥಳಾಂತರಿಸಲು ನೋಡಿದರಂತೆ. ಇದನ್ನು ವಿರೋಧಿಸಿದ ಪೂಜಾರಿ, 'ಇದರಿಂದ ಭಾರಿ ಅನಾಹುತವಾಗುತ್ತದೆ' ಎಂದು ಪರಿಪರಿಯಾಗಿ ಎಚ್ಚರಿಸಿದರೂ ಸರ್ಕಾರ ಕೇಳಲಿಲ್ಲವಂತೆ. ಮೂರ್ತಿಯನ್ನು ಕೀಳಲು ಆರಂಭಿಸಿದ ಕೂಡಲೇ ಕಾಲಿಯಾ ಸೋಡ್ ದಿಂದ ಕೇದಾರನಾಥದವರೆಗೂ ಕುಂಭದ್ರೋಣ ಮಳೆ ಆಯಿತಂತೆ. ಹಿಂದೆಂದೂ ಕಾಣದಂತಹ ಪ್ರವಾಹ ಉಕ್ಕೇರಿ ಬಂದು ಹೈಡೆಲ್ ಪ್ರಾಜೆಕ್ಟ್ ಗಾಗಿ ಸಂಗ್ರಹಿಸಿದ ಸಾಮಗ್ರಿ ಮತ್ತು ಕಟ್ಟಡಗಳೆಲ್ಲ ಭಯಾನಕ ರೀತಿಯಲ್ಲಿ ಕೊಚ್ಚಿಕೊಂಡು ಹೋದವಂತೆ. ಮೂರು ದಿನ ಪರ್ಯಂತ ಮಳೆ ನಿಲ್ಲಲೇ ಇಲ್ಲ. ಸರ್ಕಾರ ಸಹ ದಿಕ್ಕುಗಾಣದೆ ಕೈ ಚೆಲ್ಲಿ ಕುಳಿತಾಗ ಅದೇ ಪೂಜಾರಿ, ತಕ್ಷಣ ಈ ಹೈಡೆಲ್ ಪ್ರಾಜೆಕ್ಟ್ ನಿರ್ಮಾಣವನ್ನು ನಿಲ್ಲಿಸುವ ಆದೇಶ ನೀಡದಿದ್ದರೆ ಇನ್ನಷ್ಟು ಅನಾಹುತವಾಗುತ್ತದೆ ಎಂದು ಎಚ್ಚರಿಸಿದನಂತೆ. ತಕ್ಷಣ ಅದರಂತೆ ಆಜ್ಞೆ ಮಾಡಿ ಆದೇಶ ಹೊರಡಿಸುತ್ತಿದ್ದಂತೆ ಮಳೆ ನಿಂತಿತಂತೆ. ಆದರೆ ಅದಾಗಲೇ ದೇವಿಯನ್ನು ಪೀಠದಿಂದ ಅಲುಗಾಡಿಸಿದ್ದ ಕಾರಣ, ಪಕ್ಕದಲ್ಲೇ - ನದಿಯ ಮಧ್ಯದಲ್ಲೇ - ಇನ್ನೊಂದು ಮಂದಿರವನ್ನು ನಿರ್ಮಿಸಿ ಪ್ರತಿಷ್ಠಾಪನೆ ಮಾಡಿದ್ದಾರೆ. ಇಲ್ಲಿ ದೇವಿಯ ಸೊಂಟದಿಂದ ಮೇಲಿನ ಭಾಗ ಮಾತ್ರ ಇದೆ. ಇಂತಹ ಮಹಾಮಹಿಮಾನ್ವಿತೆ ಧಾರಿದೇವಿಯ ಮುಖದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿದೆವು.
ಅಲ್ಲಿಂದ ಹೊರಟು ಗುಪ್ತಕಾಶಿಗೆ ಹೋಗುವ ಮಾರ್ಗದಲ್ಲಿ ಮಂದಾಕಿನಿ ಮತ್ತು ಅಲಕನಂದಾ ನದಿಗಳ ಸಂಗಮವಾದ ‘ರುದ್ರಪ್ರಯಾಗ’ವನ್ನುನೋಡಿದೆವು . ಎತ್ತರದಲ್ಲಿದ್ದ ರಸ್ತೆಯಲ್ಲಿ ಬಸ್ ನಿಲ್ಲಿಸಿ ಅಲ್ಲಿಂದಲೇ ಕೆಳಗೆ ಆಳದಲ್ಲಿ ಕಾಣುವ ಪ್ರಯಾಗವನ್ನು ನೋಡಿ ಮುಂದೆ ಗುಪ್ತಕಾಶಿಗೆ ತೆರಳಿದೆವು. ಗುಪ್ತಕಾಶಿಯಲ್ಲಿ "ಕಾಶಿ ವಿಶ್ವೇಶ್ವರ" ಮಂದಿರವಿದೆ. ಕುರುಕ್ಷೇತ್ರ ಯುದ್ಧದಲ್ಲಿ ಬಂಧು ಹತ್ಯೆ ಮತ್ತು ಬ್ರಾಹ್ಮಣ ಹತ್ಯೆಯನ್ನು ಮಾಡಿದ ದೋಷದಿಂದ ಮುಕ್ತರಾಗಲು ಹಿಮಾಲಯದಲ್ಲಿ ವಿಶ್ವೇಶ್ವರನನ್ನು ದರ್ಶಿಸಿ ಪೂಜಿಸಲು ಶ್ರೀ ಕೃಷ್ಣನು ಪಾಂಡವರಿಗೆ ಹೇಳಿದನಂತೆ. ಆದರೆ ಪಾಂಡವರು ನಡೆಸಿದ ಹತ್ಯಾಕಾಂಡದಿಂದ ರೋಸಿ ಹೋಗಿದ್ದ ಶಿವನು ಪಾಂಡವರಿಗೆ ದರ್ಶನ ನೀಡಲು ಬಯಸಲಿಲ್ಲವಂತೆ. ಅದಕ್ಕಾಗಿ ಅವನು ನಂದಿಯ ರೂಪ ತಾಳಿ ಹಿಮಾಲಯ ಪರ್ವತದ ಈ ಸ್ಥಳದಲ್ಲಿ ಸುತ್ತಾಡುತ್ತಿದ್ದನಂತೆ. ಆ ಕಾರಣದಿಂದ ವಿಶ್ವೇಶ್ವರನ ಈ ಸ್ಥಳವನ್ನು "ಗುಪ್ತಕಾಶಿ" ಎಂದು ಕರೆಯುತ್ತಾರೆ. ಶಿವನನ್ನು ಅರಸಿ ಪಾಂಡವರು ಗುಪ್ತಕಾಶಿಗೆ ಬಂದಾಗ ಶಿವನು ಇಲ್ಲಿಂದಲೂ ಮಾಯವಾಗಿ ಕೇದಾರನಾಥಕ್ಕೆ ಹೋದನಂತೆ.
ಇಲ್ಲಿ ಕಾಶಿ ವಿಶ್ವನಾಥನ ಮಂದಿರವಿದೆ. ಕಾಶಿಯಲ್ಲಿರುವ ಮಂದಿರದ ಮಾದರಿಯಲ್ಲಿಯೇ ಈ ಮಂದಿರವೂ ಇದೆಯಂತೆ. ಮಂದಿರ ತುಂಬಾ ಸರಳವಾಗಿದೆ. ದರ್ಶನವೂ ಸಹ ತುಂಬಾ ನಿರಾಳವಾಗಿ ಆಯಿತು. ಈ ಮಂದಿರದ ಎಡ ಭಾಗದಲ್ಲಿ ಅರ್ಧನಾರೀಶ್ವರ ಶಿವನ ಮಂದಿರವಿದೆ - ಕಾಲಭೈರವೇಶ್ವರ ಸಹಿತನಾಗಿ. ಅಲ್ಲಿಯೂ ಸಹ ಪ್ರದಕ್ಷಿಣೆ ಹಾಗೂ ದರ್ಶನಗಳನ್ನು ಮುಗಿಸಿದೆವು. ಈ ಮಂದಿರಗಳ ನೇರಾ ನೇರ ಎದುರಿನಲ್ಲಿ "ಮಣಿಕರ್ಣಿಕಾ ಕುಂಡ" ಎಂಬ ಒಂದು ಪುಟ್ಟ ಪುಷ್ಕರಣಿ ಇದೆ. ಇದರಲ್ಲಿ ಒಂದು ಗೋಮುಖ ಮತ್ತು ಹಸ್ತಿಮುಖ ಇವೆ .ಈ ಎರಡು ಮುಖಗಳಿಂದ ಅನುಕ್ರಮವಾಗಿ ತುಂಬಾ ತಣ್ಣಗಿರುವ ಯಮುನೆ ಮತ್ತು ಗಂಗೆಯ ಧಾರೆಗಳು ಕುಂಡದೊಳಗೆ ಪ್ರವಹಿಸುತ್ತವೆ. ಇಲ್ಲಿಯೇ ವಿಶ್ವೇಶ್ವರನಿಗೆ ಎದುರಾಗಿ ನಂದಿಯ ವಿಗ್ರಹವಿದೆ. ಇಲ್ಲಿ ತೀರ್ಥಪ್ರೊಕ್ಷಣೆ ಮಾಡಿಕೊಂಡೆವು.
ಇಲ್ಲಿಂದ ಹೊರಟು ಸುಮಾರು ಮೂರು ನಾಲ್ಕು ಕಿಲೋಮೀಟರ್ ದೂರದಲ್ಲಿದ್ದ 'ಕ್ಯಾಂಪ್ ನಿರ್ವಾಣ' ತಲುಪಿದೆವು. ಇಲ್ಲಿ ವಸತಿಗಾಗಿ ಟೆಂಟ್ ಮತ್ತು ರೂಮ್ ಗಳ ವ್ಯವಸ್ಥೆ ಇತ್ತು. ನಾವು ಸುಸಜ್ಜಿತವಾದ ಟೆಂಟ್ ನಲ್ಲಿ ಉಳಿದುಕೊಂಡೆವು. ಬಾರಾಕೋಟ್ ನಲ್ಲಿ ಇದ್ದ ರೀತಿಯದೇ ವ್ಯವಸ್ಥೆ ಇಲ್ಲಿಯೂ ಇತ್ತು. ನಿಗದಿಗಿಂತ ಒಂದು ದಿನ ಮೊದಲೇ ಇಲ್ಲಿಗೆ ತಲುಪಿದ ನಿರಾಳತೆ ನಮಗಿತ್ತು. ಮತ್ತು ಯಾವುದೇ ಅಡಚಣೆ ಇಲ್ಲದೆ ಇಲ್ಲಿಗೆ ಬಂದು ಮುಟ್ಟಿದೆವಲ್ಲ ಎಂಬ ಸಂತೋಷವೂ ಇತ್ತು.
ಎಂದಿನಂತೆ ಬಿಸಿ ಬಿಸಿಯಾದ ರಾತ್ರಿಯ ಊಟ ಸ್ವಾದಿಷ್ಟವಾಗಿತ್ತು. ರಾತ್ರಿ 10.30 ಕ್ಕೆಲ್ಲ ನಿದ್ರೆಗೆ ಜಾರಿದೆವು.
DhariDevi Mandir
ವಿಶ್ವನಾಥ ಮಂದಿರ , ಗುಪ್ತಕಾಶಿ
ತೆಹರಿ ಡ್ಯಾಮ್ ಹಿನ್ನೀರು
ಅಲಕನಂದಾ ಮತ್ತು ಮಂದಾಕಿನಿ ಸಂಗಮ ,ರುದ್ರಪ್ರಯಾಗ
(ಸಶೇಷ.....)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ