ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಆಗಸ್ಟ್ 21, 2024

ಚಾರ್ ಧಾಮ ಯಾತ್ರೆ -ಭಾಗ 7

ಚಾರ್ ಧಾಮ ಯಾತ್ರೆ -ಭಾಗ 7

ಗುಪ್ತಕಾಶಿಯ ಸುತ್ತ ಮುತ್ತ


ದಿನಾಂಕ:-15/05/2024


        ಕ್ಯಾಂಪ್ ನಿರ್ವಾಣದ ಎದುರುಗಡೆ ಹಿಮಾಚ್ಛಾದಿತ ಗಿರಿ ಶಿಖರಗಳ ಸಾಲೇ ಇತ್ತು. ಆದ್ದರಿಂದ ಸೂರ್ಯನ ಪ್ರಥಮ ಕಿರಣಗಳು ಈ ಗಿರಿ ಸಾಲುಗಳಲ್ಲಿ ಸೃಷ್ಟಿಸುವ ಲೀಲೆಯನ್ನು ಕಾಣುವ ಕಾತರದಿಂದ ಮುಂಜಾನೆ 4:45 ಕ್ಕೆಲ್ಲ ಎದ್ದು ತಯಾರಾಗಿ ನಿಂತೆವು. ಆದರೆ ಈ ಶಿಖರಗಳು ನಮ್ಮಿಂದ ಪೂರ್ವ ದಿಕ್ಕಿಗೆ ಇದ್ದ ಕಾರಣ ಸೂರ್ಯ ಅವುಗಳ ಹಿಂದಿನಿಂದ ಮೂಡುವವನಿದ್ದ. ಆದರೂ ಕೆಲವು ಶಿಖರಾಗ್ರಗಳು ಸ್ವರ್ಣ ಲೇಪಿತವಾಗಿ ಮಿನುಗುತ್ತಿದ್ದುದನ್ನು ಕಂಡು ಪುಳಕಿತಗೊಂಡೆವು. ಗಿರಿಶ್ರೇಣಿಯ ಹಿಂದಿನಿಂದ, ಹರಡಿದ್ದ ತಿಳಿ ಮಂಜನ್ನು ಸೀಳಿಕೊಂಡು, ಕಿರಣದ ಕೋಲುಗಳು ಮೂಡಿ ಬರುತ್ತಿದ್ದ ದೃಶ್ಯ ನಯನ ಮನೋಹರವಾಗಿತ್ತು. ಬೆಳಕು ಹೆಚ್ಚಾದಂತೆ ಗಿರಿ ಶ್ರೇಣಿಗಳ ರೂಪ ವಿನ್ಯಾಸವೂ ಬದಲಾಗುತ್ತಿತ್ತು. ಇವನ್ನೆಲ್ಲ ನೋಡಿ ಸಂತೋಷ ಪಡುತ್ತಾ ಫೋಟೋ ಕ್ಲಿಕ್ಕಿಸಿಕೊಂಡೆವು. ಸೂರ್ಯೋದಯದ ಸಮಯದ ಚುಮುಚುಮು ಬೆಳಕಿನಲ್ಲಿ ಹಿಮಾಲಯದ ಚಳಿಯನ್ನು ಅಸ್ವಾದಿಸುತ್ತಾ ಕ್ಯಾಂಪಿನ ಎದುರುಗಡೆ ಇದ್ದ ರಸ್ತೆಯಲ್ಲಿ ಒಂದು ಅರ್ಧ ಕಿಲೋಮೀಟರ್ ವಾಕ್ ಮಾಡಿ ಬಂದೆವು. ನಂತರ ಬಿಸಿಬಿಸಿ ನೀರಿನಲ್ಲಿ ನಿರಾಳವಾಗಿ ಸ್ನಾನ ಮಾಡಿದೆವು. ಜಪ, ಧ್ಯಾನಗಳನ್ನು ಮುಗಿಸಿ ಮುಂಜಾನೆ 8:30ಕ್ಕೆಲ್ಲ ದೋಸೆ, ಸಾಗು, ಚಟ್ನಿ ಹಾಗೂ ಹಣ್ಣಿನ ಹೋಳುಗಳ ತಿಂಡಿಯನ್ನು ಸವಿದೆವು.


           ನಿನ್ನೆ ಇಡೀ ದಿನ 12 -13 ತಾಸುಗಳ ಕಾಲ ದೀರ್ಘ ಪ್ರಯಾಣ ಮಾಡಿದ ಕಾರಣ ತುಂಬಾ ಮೈ ಕೈ ನೋವಿತ್ತು. ಇವತ್ತು ವಿಶ್ರಾಂತಿಯ ದಿನವಾಗಿತ್ತು. ವೆಂಕಟೇಶ್ ಪ್ರಭು ಅವರು, 'ಗುಪ್ತ ಕಾಶಿಯ ಸುತ್ತಮುತ್ತ ನೋಡಬೇಕಾದ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಅವನ್ನು ನೋಡಲು ಇಚ್ಛೆ ಉಳ್ಳವರಿಗಾಗಿ ಪ್ರತ್ಯೇಕ ಟ್ಯಾಕ್ಸಿಯ ವ್ಯವಸ್ಥೆ ಮಾಡಿಕೊಡುತ್ತೇನೆ. ಅದರ ಖರ್ಚನ್ನು ನೀವೇ ಭರಿಸಿಕೊಳ್ಳಬೇಕು. ಇಷ್ಟ ಇದ್ದವರು ತಿಳಿಸಬೇಕು' ಎಂದರು. ಅದರಂತೆ ಕೆಲವು ಹೆಂಗಸರು ಮತ್ತು ಗಂಡಸರು ತಯಾರಾದರು. ನನ್ನ ಪತ್ನಿ ಸರಸ್ವತಿ ಕೂಡ ಸೇರಿಕೊಂಡಳು. ನಾನು ರೂಮಿನಲ್ಲೇ ಉಳಿದುಕೊಂಡು ಕೆಲವು ಬಟ್ಟೆಗಳನ್ನು ಒಗೆದು ಒಣಗಿಸಿ ಇಟ್ಟುಕೊಂಡೆ. ಅವರು ಮಧ್ಯಾಹ್ನ 3:30 ಗಂಟೆಯ ಸುಮಾರಿಗೆ ವಾಪಸ್ ಬಂದರು. ಅವರು ವೀಕ್ಷಿಸಿದ ಸ್ಥಳಗಳು ಈ ರೀತಿ ಇವೆ.( ನನ್ನ ಪತ್ನಿ ನನಗೆ ಹೇಳಿದಂತೆ)


         1) ಊಖಿಮಠ:- ರುದ್ರ ಪ್ರಯಾಗ ಜಿಲ್ಲೆಯಲ್ಲಿರುವ ಊಖಿಮಠ ಮಂದಾಕಿನಿ ನದಿಯ ದಂಡೆಯ ಮೇಲಿದೆ. ಊಖಿಮಠದಲ್ಲಿ 'ಮಧ್ಯಮಾಹೇಶ್ವರ ಗಂಗಾ' ಮತ್ತು ಮಂದಾಕಿನಿ ನದಿಗಳ ಸಂಗಮವಿದೆ. ಇದಕ್ಕಿಂತ ಮೇಲ್ಭಾಗದಲ್ಲಿರುವ ಸೋನ್ ಪ್ರಯಾಗದಲ್ಲಿ 'ವಾಸುಕಿ ಗಂಗಾ' ಮತ್ತು ಮಂದಾಕಿನಿ ನದಿಗಳ ಸಂಗಮವಿದೆ. ಊಖಿಮಠದಲ್ಲಿ ಓಂಕಾರೇಶ್ವರ ಮಂದಿರವಿದೆ. ಇದು ಕೇದಾರನಾಥ ಸ್ವಾಮಿಯ ಚಳಿಗಾಲದ ಆವಾಸ ಸ್ಥಾನ. ದೀಪಾವಳಿಗೆ ಕೇದಾರನಾಥನ ಮಂದಿರ ಹಿಮಾಚ್ಛಾದಿತವಾಗಿ ಮುಚ್ಚುತ್ತಿದ್ದಂತೆ ಕೇದಾರನಾಥ ಸ್ವಾಮಿಯ ಉತ್ಸವ ಮೂರ್ತಿಯನ್ನು ಊಖಿಮಠಕ್ಕೆ ತಂದು ಮುಂದಿನ ಅಕ್ಷಯ ತೃತೀಯದ ತನಕ ಇಲ್ಲಿ ಪೂಜಿಸುತ್ತಾರೆ. ಅದೇ ರೀತಿ ಪಂಚ ಕೇದಾರಗಳಲ್ಲಿ ಒಂದಾದ ಮಧ್ಯಮಾಹೇಶ್ವರದಿಂದ ಸಹ ಉತ್ಸವ ಮೂರ್ತಿಯನ್ನು ಚಳಿಗಾಲದ ಸಲುವಾಗಿ ಇಲ್ಲಿಗೇ ತರುತ್ತಾರೆ.


          ಪುರಾಣಗಳ ಐತಿಹ್ಯ ಈ ದೇವಾಲಯಕ್ಕೆ ಇದೆ. ಶ್ರೀರಾಮಚಂದ್ರ ದೊರೆಯ ಪೂರ್ವಜರಾದ ಮಾಂಧಾತ ದೊರೆ ತಮ್ಮ ಕೊನೆಗಾಲದಲ್ಲಿ ಇಲ್ಲಿಗೆ ಬಂದು ಒಂಟಿ ಕಾಲಿನಲ್ಲಿ ನಿಂತು 12 ವರ್ಷಗಳ ಕಾಲ ಶಿವನನ್ನು ಕುರಿತು ತಪಸ್ಸು ಮಾಡಿದರಂತೆ. ಶಿವ ಅವರಿಗೆ ಓಂಕಾರನಾದ ರೂಪದಲ್ಲಿ ದರ್ಶನವನ್ನಿತ್ತನಂತೆ. ಆದ್ದರಿಂದಲೇ ಇಲ್ಲಿಯ ಆರಾಧ್ಯ ದೈವ ಓಂಕಾರೇಶ್ವರ. ಇನ್ನೊಂದು ಐತಿಹ್ಯವೂ ಇದೆ. ಬಾಣಾಸುರನ ಮಗಳಾದ ಉಷೆ ಮತ್ತು ಶ್ರೀ ಕೃಷ್ಣನ ಮೊಮ್ಮಗನಾದ ಅನಿರುದ್ಧನ ವಿವಾಹವಾದ ಸ್ಥಳ ಈ ಮಂದಿರ ಎಂದು ಸಹ ಪುರಾಣ ಹೇಳುತ್ತದೆ.


         ಇದೇ ಊಖಿಮಠದ ಮುಖ್ಯ ಪೂಜಾರಿ "ರಾವಲ"ರು ನಮ್ಮ ವೀರಶೈವ ಮತದ ಪಂಚಾಚಾರ್ಯರುಗಳ ಪೈಕಿ ಒಬ್ಬರು. ವೀರಶೈವ ಪಂಚಪೀಠಗಳಲ್ಲಿ ಒಂದಾದ ಕೇದಾರಪೀಠದ ಮುಖ್ಯಸ್ಥರು ಸಹ ಇದೇ ರಾವಲರು. ಇವರು ಕರ್ನಾಟಕದ ಮಾಹೇಶ್ವರ ಜಂಗಮ ವಂಶಸ್ಥರು. ಇಲ್ಲಿ ನಮ್ಮ ಕರ್ನಾಟಕದ ಪ್ರವಾಸಿಗರನ್ನು ಗುರುತಿಸಿ ಪ್ರೀತಿಯಿಂದ ಮಾತನಾಡಿಸುತ್ತಾರೆ. ಎಲ್ಲಾ ಬೋರ್ಡುಗಳಲ್ಲಿ ಕನ್ನಡವೂ ಸಹ ಸ್ಥಾನ ಪಡೆದಿದೆ.


2) ಕಾಲಿ ಮಠ :- ಊಖಿ ಮಠದಿಂದ 15 -20 ಕಿಲೋ ಮೀಟರ್ ದೂರದಲ್ಲಿ ಈ 'ಕಾಲಿ ಮಠ' ಇದೆ. ಕಾಲಿ ಗಂಗಾ ನದಿ ಇಲ್ಲಿ ಮಂದಾಕಿನಿಯನ್ನು ಸೇರುತ್ತದೆ.


          'ಧಾರಿ ದೇವಿ'ಯಲ್ಲಿ ಕಾಳಿ ಮಾತೆಯ ಸೊಂಟದಿಂದ ಮೇಲ್ಭಾಗ ಮತ್ತು ಮುಖ ಇದ್ದರೆ ಇಲ್ಲಿನ ಮಂದಿರದಲ್ಲಿ ದೇವಿಯ ಕೆಳಭಾಗ ಇದ್ದು ಅದಕ್ಕೆ ಸೀರೆಯನ್ನು ಉಡಿಸಿ ಇಟ್ಟಿದ್ದಾರೆ. ಧಾರಿದೇವಿ ಮತ್ತು ಕಾಳಿ ಮಠ ಎರಡೂ ಸಹ 108 ಶಕ್ತಿಪೀಠಗಳ ಪೈಕಿ ಬರುತ್ತವೆ.


            ರಕ್ತ ಬೀಜಾಸುರನನ್ನು ಕೊಂದ ನಂತರ ಕಾಳಿಕಾದೇವಿ ಇಲ್ಲಿ ಭೂಮಿಯಲ್ಲಿ ಐಕ್ಯಳಾದಳಂತೆ. ಆ ರಂಧ್ರವಿರುವ ಸ್ಥಳದ ಮೇಲೆ ಒಂದು ಬೆಳ್ಳಿ ತಟ್ಟೆಯನ್ನು ಮುಚ್ಚಿ ಇಟ್ಟಿರುತ್ತಾರೆ ಮತ್ತು ಅದರ ಮೇಲೆ ಶ್ರೀ ಯಂತ್ರವನ್ನು ಬರೆದಿದ್ದಾರಂತೆ. ಈ ಯಂತ್ರವನ್ನು ನವರಾತ್ರಿಯ ಎಂಟನೆಯ ದಿನ ಮಧ್ಯರಾತ್ರಿ ಮುಖ್ಯ ಅರ್ಚಕರು ಮಾತ್ರ ತೆಗೆದು ಪೂಜೆ ಮಾಡಿ ಮತ್ತೆ ಯಥಾ ಸ್ಥಾನದಲ್ಲಿ ಇರಿಸುತ್ತಾರಂತೆ. ಇದನ್ನು ಆವರಿಸಿ ಮಂದಿರವನ್ನು ಕಟ್ಟಿರುತ್ತಾರೆ.


3) ನಾರಾಯಣ ಕೋಟಿ :- ಇದೊಂದು ಮಂದಿರಗಳ ಸಮುಚ್ಛಯ. ಈ ಸ್ಥಳ ಗುಪ್ತ ಕಾಶಿಯಿಂದ 3 ಕಿಲೋಮೀಟರ್ ದೂರದಲ್ಲಿದೆ. ಮೊದಲು ಇಲ್ಲಿ 360 ಮಂದಿರಗಳಿದ್ದವಂತೆ. ಈಗ 29 ಇವೆ. ಇಲ್ಲಿ ನವಗ್ರಹ ಮಂದಿರಗಳಿವೆ. ಐತಿಹ್ಯದ ಪ್ರಕಾರ, ದ್ವಾಪರ ಯುಗದಲ್ಲಿ ಮಹಾಭಾರತ ಯುದ್ಧದಲ್ಲಿ ಸ್ವಜನ ಹತ್ಯೆ ಮಾಡಿದ ಪಾಂಡವರು ಕ್ಷೋಭೆಗೊಂಡು ಶಿವನ ದರ್ಶನ ಬಯಸಿ ಗುಪ್ತಕಾಶಿಗೆ ಬಂದಿದ್ದರಂತೆ. ಶಿವ ಇವರನ್ನು ನೋಡಲು ಬಯಸದೇ ಕೇದಾರಕ್ಕೆ ಹೋದನಂತೆ. ಆಗ ಶಿವನ ಇರುವಿಕೆ ತಿಳಿಯದೆ ಕಂಗಾಲಾದ ಪಾಂಡವರು ಕೃಷ್ಣನನ್ನು ನೆನೆಯಲು, ಅವನು ತನ್ನ ಕೋಟಿ ರೂಪಗಳನ್ನು ಪಾಂಡವರಿಗೆ ತೋರಿಸಿ, ಶಿವನು ಮಾರುವೇಷದಲ್ಲಿ ಕೇದಾರಕ್ಕೆ ಹೋಗಿರುವುದನ್ನು ಅವರಿಗೆ ತಿಳಿಸಿದನಂತೆ. ಹಾಗಾಗಿ ಈ ಸ್ಥಳಕ್ಕೆ ಕೋಟಿನಾರಾಯಣ ಎಂದು ಹೇಳುತ್ತಾರೆ.


            ಒಟ್ಟಿನಲ್ಲಿ ದೇವಭೂಮಿ ಉತ್ತರಾಖಂಡ ನಮ್ಮ ಪುರಾಣಗಳೊಂದಿಗೆ, ಅದರಲ್ಲೂ ವಿಶೇಷತಃ

ಮಹಾಭಾರತದೊಂದಿಗೆ ತಳುಕು ಹಾಕಿಕೊಂಡಿದೆ. ಇವನ್ನೆಲ್ಲ ದರ್ಶಿಸಿ ನಮ್ಮವರು ಕ್ಯಾಂಪಿಗೆ ಬಂದಾಗ ಮಧ್ಯಾಹ್ನ 3:30 ಆಗಿತ್ತು. ನಾಳೆ ಕೇದಾರನಾಥೇಶ್ವರನ ದರ್ಶನಕ್ಕೆ ನಿಗದಿಯಾದ ದಿನ. ಆ ಭಾವನೆಯೇ ನಮ್ಮನ್ನು ಪುಳಕಿತವಾಗಿಸುತ್ತಿದೆ.


          

                     ನಾರಾಯಣ ಕೋಟಿ ಮಂದಿರ ಸಮುಚ್ಛಯ                                  

ಊಖಿ ಮಠ ಅಥವಾ ಉಷಾ ಮಠ


(ಸಶೇಷ.....)



                                                                                                       (ಸಶೇಷ.....)

ಶುಕ್ರವಾರ, ಆಗಸ್ಟ್ 16, 2024

ಚಾರ್ ಧಾಮ ಯಾತ್ರೆ -ಭಾಗ 6

ಚಾರ್ ಧಾಮ ಯಾತ್ರೆ -ಭಾಗ 6

ಧಾರೀದೇವಿ ಮಂದಿರ ಮತ್ತು ಗುಪ್ತಕಾಶಿ


ದಿನಾಂಕ 14/05/2024


         ಬೆಳಿಗ್ಗೆ ನಾಲ್ಕು ಗಂಟೆಗೆಲ್ಲ ಎದ್ದು ತಯಾರಾಗಿ ಬ್ಯಾಗೇಜ್ ಗಳನ್ನು ರೂಮಿನ ಹೊರಗೆ ಇಟ್ಟಾಗ 5:00 ಗಂಟೆ ಆಗಿತ್ತು. ಚಹಾ, ಬಿಸ್ಕತ್ ಸೇವನೆಯ ನಂತರ ಉತ್ತರಕಾಶಿಯ ಶಿವಲಿಂಗ ರಿಸಾರ್ಟ್ ಖಾಲಿ ಮಾಡಿದೆವು..

          ನಿನ್ನೆಯ ದಿನ ಪೂರ್ತಿ ನಿರುಪಯುಕ್ತವೆ ಆಗಿತ್ತು. ಭಾಗೀರಥಿ ನದಿಗೆ ಇಳಿಯಲು ಸಹ ಆಗಲಿಲ್ಲ. ಉತ್ತರಕಾಶಿಯಲಿನ ವಿಶ್ವನಾಥ ಮಂದಿರದ ರಸ್ತೆಯ ಎರಡೂ ಕಡೆ ಪೊಲೀಸರು ರಸ್ತೆ ತಡೆ ಹಾಕಿದ್ದರಿಂದ ದೇವರ ದರ್ಶನಕ್ಕೆ ಸಹ ಹೋಗಲು ಆಗಲಿಲ್ಲ. ಶಿವಲಿಂಗ ರೆಸಾರ್ಟ್ಸ್ ರೂಮುಗಳು ಸಹ ಅಷ್ಟೇನು ಹಿತಕರವಾಗಿರಲಿಲ್ಲ. ಯಾತ್ರಿಗಳೆಲ್ಲ ಬೇಸರದಿಂದ ಇದ್ದೆವು. ಮಾರ್ಗದರ್ಶಿ ವೆಂಕಟೇಶ್ ದಾಸ್ ಸಹ ಬೇಸರದಲ್ಲಿದ್ದರು. ಉಳಿದೆರಡು ಯಾತ್ರೆಗಳು ಸುಗಮವಾಗಿ ಸಾಗಲಿ ಎಂದು ಪ್ರಾರ್ಥಿಸುವುದಷ್ಟೇ ನಮ್ಮ ಕೈಯಲ್ಲಿ ಇತ್ತು.

          ಬಸ್ಸಿನಲ್ಲಿ ಕುಳಿತು ನರಸಿಂಹ ಭಜನೆ, ಮಂಕುತಿಮ್ಮನ ಕಗ್ಗದ ವ್ಯಾಖ್ಯಾನ ಆಗುತ್ತಿದ್ದಂತೆ, ಅದಾಗಲೇ ನಿಚ್ಚಳವಾಗಿ ಬೆಳಗಾಗಿದ್ದರಿಂದ ಆ ಬೆಳಗಿನ ಸಮಯದಲ್ಲಿ ಸುತ್ತಲಿನ ಗಿರಿ ಕಣಿವೆಗಳ ಸ್ನಿಗ್ಧ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗಿದೆವು. ಎಂಟು ಗಂಟೆಯ ಸುಮಾರಿಗೆ ದಾರಿಯಲ್ಲಿ ಸಿಕ್ಕ ಊರಿನಲ್ಲಿ (ಮೊದಲೇ ನಿಗದಿಯಾದಂತೆ) ಬೆಳಗಿನ ತಿಂಡಿಗೆ ನಮ್ಮ ಬಹಳ ನಿಂತಿತು. ಉಪ್ಪಿಟ್ಟು-ಶಿರಾದ ನಾಷ್ಟಾ. ಅಲ್ಲೇ ಇದ್ದ ಅಂಗಡಿ ಒಂದರಲ್ಲಿ ಸ್ಥಳೀಯ ಸೇಬು ಹಣ್ಣೊಂದನ್ನು ತೆಗೆದುಕೊಂಡೆನು. ವ್ಯಾಕ್ಸ್ ಕೋಟಿಂಗ್ ಇಲ್ಲದ ಆ ಹಣ್ಣು ತುಂಬಾ ರುಚಿಯಾಗಿತ್ತು ಇನ್ನಷ್ಟು ಕೊಳ್ಳೋಣ ಎಂದರೆ ಅದಾಗಲೇ ಖಾಲಿ ಆಗಿಬಿಟ್ಟಿತ್ತು.

          ತಿಂಡಿ ತಿಂದು ಹೊರಟ ನಾವು ಗದ್ವಾಲ್ ಜಿಲ್ಲೆಯ ತೆಹರಿ ಡ್ಯಾಮಿನ ಮೇಲೆ ಹಾಯ್ದು ಸಾಗಿದೆವು. ಇದು ವಿಶ್ವದ ಅತ್ಯಂತ ಎತ್ತರದಲ್ಲಿರುವ ಡ್ಯಾಮ್ ಹಾಗೂ ಅತ್ಯಂತ ಎತ್ತರವಾದ ಡ್ಯಾಮ್ ಕೂಡ ಹೌದು. ಇದರ ಸಂಪೂರ್ಣ ನಿರ್ವಹಣೆ ಹಾಗೂ ರಕ್ಷಣೆ ಭೂಸೇನೆಯವರ ಕೈಯಲ್ಲಿದೆ. ಹಾಗಾಗಿ ಇಲ್ಲಿ ಕ್ಯಾಮೆರಾ ಅಥವಾ ಮೊಬೈಲ್ ಗಳನ್ನು ಫೋಟೋ ಹೊಡೆಯುವ ಸಲುವಾಗಿ ಹೊರಗೆ ತೆಗೆಯುವುದನ್ನು ಸಹ ನಿಷೇಧಿಸಲಾಗಿದೆ. ನಂತರ ಗಡ್ವಾಲ್ ಜಿಲ್ಲೆಯ ಶ್ರೀನಗರದ ಮೂಲಕ ಹಾಯ್ದು ಸ್ವಲ್ಪ ಮುಂದೆ ಸಾಗಿದ ನಂತರ ಊಟಕ್ಕಾಗಿ ಗಾಡಿಯನ್ನು ನಿಲ್ಲಿಸಿದರು. ಈ ಶ್ರೀನಗರ ಜಿಲ್ಲಾ ಕೇಂದ್ರ. ಊಟದ ಸ್ಥಳ ಮೂರು ನಾಲ್ಕು ಕಿಲೋಮೀಟರ್ ಇರುವಾಗ ನಾವು ಕುಳಿತಿದ್ದ ಬಸ್ ನ ಕ್ಲಚ್ ಪ್ಲೇಟ್ ಹಾಳಾದ ಕಾರಣ ಬಸ್ ಅನ್ನು ಬದಿಗೆ ನಿಲ್ಲಿಸಿದರು. ಇನ್ನೊಂದು ಬಸ್ ಊಟದ ಸ್ಥಳದಲ್ಲಿ ಯಾತ್ರಿಗಳನ್ನು ಇಳಿಸಿ ವಾಪಸ್ ಬಂದು ನಮ್ಮನ್ನು ಕರೆದುಕೊಂಡು ಹೋಯಿತು. ಅಲ್ಲಿದ್ದ ಒಬ್ಬ ವೃದ್ಧರನ್ನು 'ಈ ಸ್ಥಳದ ವಿಶೇಷತೆ ಏನು?' ಎಂದು ಕೇಳಿದೆ. ಏಕೆಂದರೆ ನಾವು ಕುಳಿತ ಹಾಲ್ ನ ಗೋಡೆಯ ಮೇಲೆ ಬಾಲ ಗಣಪತಿ ಮತ್ತು ಕುಮಾರಸ್ವಾಮಿ ತಾಯಿ ಪಾರ್ವತಿಯ ಎರಡು ಜಡೆಗಳನ್ನು ಹಿಡಿದು ಆಡುತ್ತಿರುವ ಚಿತ್ರವಿತ್ತು. ನನ್ನ ಪ್ರಶ್ನೆಗೆ ಆ ವೃದ್ಧ, 'ಇದು ತಾಯಿ ಪಾರ್ವತಿಯ ವಿವಾಹವಾದ ಸ್ಥಳ. ಸನಿಹದ 'ತ್ರಿಯುಗಿನಾರಾಯಣ' ಎಂಬಲ್ಲಿನ ಪರ್ವತದ ಮೇಲಿರುವ ದೇವಾಲಯ ಒಂದರಲ್ಲಿ ಶಿವ ಪಾರ್ವತಿಯರ ವಿವಾಹವಾಗಿದ್ದು, ಆಗ ಸ್ಥಾಪಿಸಿದ ಯಜ್ಞದ ಕುಂಡ ಇನ್ನೂ ಇದ್ದು, ಅಲ್ಲಿಗೆ ಹೋದ ಯಾತ್ರಿಗಳೆಲ್ಲ ಆ ಕುಂಡಕ್ಕೆ ಒಂದೊಂದು ಕಟ್ಟಿಗೆಯನ್ನು ಹಾಕುವ ಪದ್ಧತಿ ಇದೆ. ಪಾರ್ವತಿಯ ವಿವಾಹ ದಿನದಿಂದ ಇಂದಿನ ತನಕ ಆ ಅಗ್ನಿ ನಂದಿಯೇ ಇಲ್ಲ' ಎಂದರು. ವಾವ್! ನಮ್ಮವರ ನಂಬಿಕೆಯೇ! ಎನಿಸಿತು. ಸನಾತನತೆಯ ನಿರಂತರತೆ ಹೀಗೆಯೇ ಸಾಗಿ ಬಂದಿದೆ.

           ಹಾಳಾದ ಬಸ್ಸಿನ ಬದಲಿಗೆ ಮೂರು ಟೆಂಪೋ ಟ್ಯಾಕ್ಸ್ ಗಳನ್ನು ವ್ಯವಸ್ಥೆ ಮಾಡಿದರು. ಬೆಳಗಿನ ಪ್ರಯಾಣದುದ್ದಕ್ಕೂ ರಸ್ತೆ ಇಕ್ಕಟ್ಟಾಗಿತ್ತು. ಆದರೆ ಈಗ ರಸ್ತೆ ಚೆನ್ನಾಗಿತ್ತು. ಒಂದು ಕಡೆ ಎತ್ತರದ ಗುಡ್ಡಗಳು, ಇನ್ನೊಂದೆಡೆ ಆಳವಾದ ಕಣಿವೆ, ಕಣಿವೆಯ ತಳದಲ್ಲಿ ಹರಿಯುತ್ತಿದ್ದ ಅಲಕನಂದಾ ನದಿ - ಅತ್ಯಂತ ವಿಹಂಗಮವಾದ ನೋಟವದು. ಎಂತಹ ನಿರ್ಲಿಪ್ತನಲ್ಲೂ ಉತ್ಸಾಹವನ್ನು ಬಡಿದೆಬ್ಬಿಸಬಲ್ಲ ಪ್ರಕೃತಿಯ ರಮ್ಯ ನೋಟ! ರಸ್ತೆಯ ಅಸಂಖ್ಯ ತಿರುವುಗಳಲ್ಲಿ ಅತ್ಯಂತ ಚಾಕಚಕ್ಯತೆಯಿಂದ ಗಾಡಿಯನ್ನು ನಡೆಸುವ ಚಾಲಕರು. ಬಯಲು ನಾಡಿನಿಂದ ಬಂದ ಚಾಲಕರು ಇಲ್ಲಿಯ ಕಣಿವೆಯ ಆಳವನ್ನು ನೋಡಿ ಗಾಡಿಯನ್ನು ಓಡಿಸಲು ಹೆದರುತ್ತಾರೆ. ಆದ್ದರಿಂದ ವಿಶೇಷ ಗುಡ್ಡಗಾಡು ರಸ್ತೆಯ ಡ್ರೈವಿಂಗ್ ತರಬೇತಿ ಪಡೆದ ಡ್ರೈವರ್ ಗಳು ಮಾತ್ರ ಇಲ್ಲಿ ಬಸ್ಸು ಮತ್ತು ಟ್ಯಾಕ್ಸಿಗಳನ್ನು ಓಡಿಸುತ್ತಾರೆ. ಪರ್ವತ ಸೀಮೆಯ ರಸ್ತೆ ಪ್ರಾರಂಭವಾಗುವ ಮೊದಲೇ ಎಲ್ಲ ಡ್ರೈವರ್ ಗಳ ಚಾಲನಾಪತ್ರವನ್ನು ಈ ವಿಶೇಷ ಅನುಮತಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸುತ್ತಾರೆ.

        ಗುಪ್ತಕಾಶಿ ಇನ್ನೂ ಸುಮಾರು 40 ಕಿಲೋ ಮೀಟರ್ ದೂರ ಇರುವಾಗ ದಾರಿಯಲ್ಲಿ 'ಕಲಿಯಾಸೋಡ್' ಎಂಬ ಸ್ಥಳದಲ್ಲಿ ವಾಹನ ನಿಲ್ಲಿಸಿದರು. ಇಲ್ಲಿ ಅಲಕನಂದಾ ನದಿಯ ಹರಿವಿನ ನಟ್ಟ ನಡುವೆ ಇರುವ 'ಧಾರಿದೇವಿ' ಮಂದಿರವನ್ನು ವೀಕ್ಷಿಸಿದೆವು. ಇದು ಒಂದು ಜಾಗೃತ ಶಕ್ತಿಪೀಠ. ಈಗ ಮಂದಿರ ಇರುವ ಜಾಗದಲ್ಲಿ ಸರಿಯಾಗಿ ಒಂದು ಹೈಡೆಲ್ ಪವರ್ ಪ್ರಾಜೆಕ್ಟ್ ನಿರ್ಮಿಸಲು 2013ರಲ್ಲಿ ಇಲ್ಲಿನ ಸರ್ಕಾರ ಎಲ್ಲಾ ತಯಾರಿಯನ್ನು ನಡೆಸಿ, ಧಾರಿದೇವಿ ಸಲುವಾಗಿ ಪಕ್ಕದ ಗುಡ್ಡದ ಮೇಲೆ ಒಂದು ಹೊಸ ಮಂದಿರವನ್ನು ನಿರ್ಮಿಸಿ, ದೇವಿಯ ಮೂರ್ತಿಯನ್ನು ಅದಕ್ಕೆ ಸ್ಥಳಾಂತರಿಸಲು ನೋಡಿದರಂತೆ. ಇದನ್ನು ವಿರೋಧಿಸಿದ ಪೂಜಾರಿ, 'ಇದರಿಂದ ಭಾರಿ ಅನಾಹುತವಾಗುತ್ತದೆ' ಎಂದು ಪರಿಪರಿಯಾಗಿ ಎಚ್ಚರಿಸಿದರೂ ಸರ್ಕಾರ ಕೇಳಲಿಲ್ಲವಂತೆ. ಮೂರ್ತಿಯನ್ನು ಕೀಳಲು ಆರಂಭಿಸಿದ ಕೂಡಲೇ ಕಾಲಿಯಾ ಸೋಡ್ ದಿಂದ ಕೇದಾರನಾಥದವರೆಗೂ ಕುಂಭದ್ರೋಣ ಮಳೆ ಆಯಿತಂತೆ. ಹಿಂದೆಂದೂ ಕಾಣದಂತಹ ಪ್ರವಾಹ ಉಕ್ಕೇರಿ ಬಂದು ಹೈಡೆಲ್ ಪ್ರಾಜೆಕ್ಟ್ ಗಾಗಿ ಸಂಗ್ರಹಿಸಿದ ಸಾಮಗ್ರಿ ಮತ್ತು ಕಟ್ಟಡಗಳೆಲ್ಲ ಭಯಾನಕ ರೀತಿಯಲ್ಲಿ ಕೊಚ್ಚಿಕೊಂಡು ಹೋದವಂತೆ. ಮೂರು ದಿನ ಪರ್ಯಂತ ಮಳೆ ನಿಲ್ಲಲೇ ಇಲ್ಲ. ಸರ್ಕಾರ ಸಹ ದಿಕ್ಕುಗಾಣದೆ ಕೈ ಚೆಲ್ಲಿ ಕುಳಿತಾಗ ಅದೇ ಪೂಜಾರಿ, ತಕ್ಷಣ ಈ ಹೈಡೆಲ್ ಪ್ರಾಜೆಕ್ಟ್ ನಿರ್ಮಾಣವನ್ನು ನಿಲ್ಲಿಸುವ ಆದೇಶ ನೀಡದಿದ್ದರೆ ಇನ್ನಷ್ಟು ಅನಾಹುತವಾಗುತ್ತದೆ ಎಂದು ಎಚ್ಚರಿಸಿದನಂತೆ. ತಕ್ಷಣ ಅದರಂತೆ ಆಜ್ಞೆ ಮಾಡಿ ಆದೇಶ ಹೊರಡಿಸುತ್ತಿದ್ದಂತೆ ಮಳೆ ನಿಂತಿತಂತೆ. ಆದರೆ ಅದಾಗಲೇ ದೇವಿಯನ್ನು ಪೀಠದಿಂದ ಅಲುಗಾಡಿಸಿದ್ದ ಕಾರಣ, ಪಕ್ಕದಲ್ಲೇ - ನದಿಯ ಮಧ್ಯದಲ್ಲೇ - ಇನ್ನೊಂದು ಮಂದಿರವನ್ನು ನಿರ್ಮಿಸಿ ಪ್ರತಿಷ್ಠಾಪನೆ ಮಾಡಿದ್ದಾರೆ. ಇಲ್ಲಿ ದೇವಿಯ ಸೊಂಟದಿಂದ ಮೇಲಿನ ಭಾಗ ಮಾತ್ರ ಇದೆ. ಇಂತಹ ಮಹಾಮಹಿಮಾನ್ವಿತೆ ಧಾರಿದೇವಿಯ ಮುಖದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿದೆವು.

                  ಅಲ್ಲಿಂದ ಹೊರಟು ಗುಪ್ತಕಾಶಿಗೆ ಹೋಗುವ ಮಾರ್ಗದಲ್ಲಿ ಮಂದಾಕಿನಿ ಮತ್ತು ಅಲಕನಂದಾ ನದಿಗಳ ಸಂಗಮವಾದ ‘ರುದ್ರಪ್ರಯಾಗ’ವನ್ನುನೋಡಿದೆವು . ಎತ್ತರದಲ್ಲಿದ್ದ ರಸ್ತೆಯಲ್ಲಿ ಬಸ್ ನಿಲ್ಲಿಸಿ ಅಲ್ಲಿಂದಲೇ ಕೆಳಗೆ ಆಳದಲ್ಲಿ ಕಾಣುವ ಪ್ರಯಾಗವನ್ನು ನೋಡಿ ಮುಂದೆ ಗುಪ್ತಕಾಶಿಗೆ ತೆರಳಿದೆವು. ಗುಪ್ತಕಾಶಿಯಲ್ಲಿ "ಕಾಶಿ ವಿಶ್ವೇಶ್ವರ" ಮಂದಿರವಿದೆ. ಕುರುಕ್ಷೇತ್ರ ಯುದ್ಧದಲ್ಲಿ ಬಂಧು ಹತ್ಯೆ ಮತ್ತು ಬ್ರಾಹ್ಮಣ ಹತ್ಯೆಯನ್ನು ಮಾಡಿದ ದೋಷದಿಂದ ಮುಕ್ತರಾಗಲು ಹಿಮಾಲಯದಲ್ಲಿ ವಿಶ್ವೇಶ್ವರನನ್ನು ದರ್ಶಿಸಿ ಪೂಜಿಸಲು ಶ್ರೀ ಕೃಷ್ಣನು ಪಾಂಡವರಿಗೆ ಹೇಳಿದನಂತೆ. ಆದರೆ ಪಾಂಡವರು ನಡೆಸಿದ ಹತ್ಯಾಕಾಂಡದಿಂದ ರೋಸಿ ಹೋಗಿದ್ದ ಶಿವನು ಪಾಂಡವರಿಗೆ ದರ್ಶನ ನೀಡಲು ಬಯಸಲಿಲ್ಲವಂತೆ. ಅದಕ್ಕಾಗಿ ಅವನು ನಂದಿಯ ರೂಪ ತಾಳಿ ಹಿಮಾಲಯ ಪರ್ವತದ ಈ ಸ್ಥಳದಲ್ಲಿ ಸುತ್ತಾಡುತ್ತಿದ್ದನಂತೆ. ಆ ಕಾರಣದಿಂದ ವಿಶ್ವೇಶ್ವರನ ಈ ಸ್ಥಳವನ್ನು "ಗುಪ್ತಕಾಶಿ" ಎಂದು ಕರೆಯುತ್ತಾರೆ. ಶಿವನನ್ನು ಅರಸಿ ಪಾಂಡವರು ಗುಪ್ತಕಾಶಿಗೆ ಬಂದಾಗ ಶಿವನು ಇಲ್ಲಿಂದಲೂ ಮಾಯವಾಗಿ ಕೇದಾರನಾಥಕ್ಕೆ ಹೋದನಂತೆ.

         ಇಲ್ಲಿ ಕಾಶಿ ವಿಶ್ವನಾಥನ ಮಂದಿರವಿದೆ. ಕಾಶಿಯಲ್ಲಿರುವ ಮಂದಿರದ ಮಾದರಿಯಲ್ಲಿಯೇ ಈ ಮಂದಿರವೂ ಇದೆಯಂತೆ. ಮಂದಿರ ತುಂಬಾ ಸರಳವಾಗಿದೆ. ದರ್ಶನವೂ ಸಹ ತುಂಬಾ ನಿರಾಳವಾಗಿ ಆಯಿತು. ಈ ಮಂದಿರದ ಎಡ ಭಾಗದಲ್ಲಿ ಅರ್ಧನಾರೀಶ್ವರ ಶಿವನ ಮಂದಿರವಿದೆ - ಕಾಲಭೈರವೇಶ್ವರ ಸಹಿತನಾಗಿ. ಅಲ್ಲಿಯೂ ಸಹ ಪ್ರದಕ್ಷಿಣೆ ಹಾಗೂ ದರ್ಶನಗಳನ್ನು ಮುಗಿಸಿದೆವು. ಈ ಮಂದಿರಗಳ ನೇರಾ ನೇರ ಎದುರಿನಲ್ಲಿ "ಮಣಿಕರ್ಣಿಕಾ ಕುಂಡ" ಎಂಬ ಒಂದು ಪುಟ್ಟ ಪುಷ್ಕರಣಿ ಇದೆ. ಇದರಲ್ಲಿ ಒಂದು ಗೋಮುಖ ಮತ್ತು ಹಸ್ತಿಮುಖ ಇವೆ .ಈ ಎರಡು ಮುಖಗಳಿಂದ ಅನುಕ್ರಮವಾಗಿ ತುಂಬಾ ತಣ್ಣಗಿರುವ ಯಮುನೆ ಮತ್ತು ಗಂಗೆಯ ಧಾರೆಗಳು ಕುಂಡದೊಳಗೆ ಪ್ರವಹಿಸುತ್ತವೆ. ಇಲ್ಲಿಯೇ ವಿಶ್ವೇಶ್ವರನಿಗೆ ಎದುರಾಗಿ ನಂದಿಯ ವಿಗ್ರಹವಿದೆ. ಇಲ್ಲಿ ತೀರ್ಥಪ್ರೊಕ್ಷಣೆ ಮಾಡಿಕೊಂಡೆವು.

        ಇಲ್ಲಿಂದ ಹೊರಟು ಸುಮಾರು ಮೂರು ನಾಲ್ಕು ಕಿಲೋಮೀಟರ್ ದೂರದಲ್ಲಿದ್ದ 'ಕ್ಯಾಂಪ್ ನಿರ್ವಾಣ' ತಲುಪಿದೆವು. ಇಲ್ಲಿ ವಸತಿಗಾಗಿ ಟೆಂಟ್ ಮತ್ತು ರೂಮ್ ಗಳ ವ್ಯವಸ್ಥೆ ಇತ್ತು. ನಾವು ಸುಸಜ್ಜಿತವಾದ ಟೆಂಟ್ ನಲ್ಲಿ ಉಳಿದುಕೊಂಡೆವು. ಬಾರಾಕೋಟ್ ನಲ್ಲಿ ಇದ್ದ ರೀತಿಯದೇ ವ್ಯವಸ್ಥೆ ಇಲ್ಲಿಯೂ ಇತ್ತು. ನಿಗದಿಗಿಂತ ಒಂದು ದಿನ ಮೊದಲೇ ಇಲ್ಲಿಗೆ ತಲುಪಿದ ನಿರಾಳತೆ ನಮಗಿತ್ತು. ಮತ್ತು ಯಾವುದೇ ಅಡಚಣೆ ಇಲ್ಲದೆ ಇಲ್ಲಿಗೆ ಬಂದು ಮುಟ್ಟಿದೆವಲ್ಲ ಎಂಬ ಸಂತೋಷವೂ ಇತ್ತು.

        ಎಂದಿನಂತೆ ಬಿಸಿ ಬಿಸಿಯಾದ ರಾತ್ರಿಯ ಊಟ ಸ್ವಾದಿಷ್ಟವಾಗಿತ್ತು. ರಾತ್ರಿ 10.30 ಕ್ಕೆಲ್ಲ ನಿದ್ರೆಗೆ ಜಾರಿದೆವು.

                                                     DhariDevi Mandir

                    ವಿಶ್ವನಾಥ ಮಂದಿರ , ಗುಪ್ತಕಾಶಿ

                                       ತೆಹರಿ ಡ್ಯಾಮ್ ಹಿನ್ನೀರು

               ಅಲಕನಂದಾ ಮತ್ತು ಮಂದಾಕಿನಿ ಸಂಗಮ ,ರುದ್ರಪ್ರಯಾಗ 


(ಸಶೇಷ.....)


ಭಾನುವಾರ, ಆಗಸ್ಟ್ 11, 2024

ಚಾರ್ ಧಾಮ ಯಾತ್ರೆ -ಭಾಗ 5

ಚಾರ್ ಧಾಮ ಯಾತ್ರೆ -ಭಾಗ 5

ಅದೇ ಹಾಡು ಗಂಗೋತ್ರಿಯದೂ!

ದಿನಾಂಕ 13/05/2024

ನಿನ್ನೆಯ ದಿನ ಯಮುನೋತ್ರಿಯ ದರ್ಶನ ಸಾಧ್ಯವಾಗದ ಕಾರಣ ನಿಗದಿಗಿಂತ ಒಂದು ದಿನ ಮೊದಲೇ ಗಂಗೋತ್ರಿ ದರ್ಶನ ಮುಗಿಸಲು ನಿರ್ಧರಿಸಲಾಯಿತು. ಯಮುನೋತ್ರಿಯಲ್ಲಿ ಸಾಕಷ್ಟು ಯಾತ್ರಿಕರು ಇನ್ನೂ ಸಿಕ್ಕಿ ಬಿದ್ದಿರುವುದರಿಂದ, ಅವರೆಲ್ಲ ಬಂದು ಗಂಗೋತ್ರಿಯಲ್ಲಿ ದಟ್ಟಣೆ ಉಂಟುಮಾಡುವ ಮೊದಲೇ ನಾವು ದರ್ಶನ ಮುಗಿಸಿಬಿಡಬೇಕು ಎಂದು ತೀರ್ಮಾನಿಸಿದೆವು. ಅದಕ್ಕಾಗಿ ಈ ದಿನ ಮುಂಜಾನೆ 1:00 ಗಂಟೆಗೆಲ್ಲ ಎದ್ದು ಸ್ನಾನ ಮುಗಿಸಿ 2:00 ಗಂಟೆಗೆ ಲಗೇಜ್ ಅನ್ನು ಹೊರಗಿಟ್ಟಿದ್ದೆವು. 2:30 ಕ್ಕೆ ಚಹಾ ಸೇವಿಸಿ 2:45ಕ್ಕೆಲ್ಲ ಅದಾಗಲೇ ಬಸ್ಸನ್ನು ಹೊರಡಿಸಿದ್ದೆವು. ದಿನದಂತೆ ನರಸಿಂಹ ಭಜನೆ, ಮಂಕುತಿಮ್ಮನ ಕಗ್ಗದ ವ್ಯಾಖ್ಯಾನ ಮುಗಿಸಿ ಎಲ್ಲರೂ ಬೆಳಗಿನ ಜಾವದ ಸುಖನಿದ್ರೆಗೆ ಜಾರಿದೆವು.

ಬೆಳಗಾಗುತ್ತಿದ್ದಂತೆ ಆರು ಗಂಟೆಗೆ ನಮ್ಮ ಬಸ್ ಗಳು ಉತ್ತರ ಕಾಶಿಯ "ಶಿವಲಿಂಗ ರೆಸಾರ್ಟ್ಸ್" ದಲ್ಲಿ ಬೆಳಗಿನ ತಿಂಡಿಗಾಗಿ ನಿಂತವು. ನಮಗಿಂತಲೂ ಮುಂಚೆ ಆಗಮಿಸಿದ್ದ ಅಡಿಗೆಯವರು ಬೆಳಗಿನ ತಿಂಡಿಯೂ ಅಲ್ಲದೆ ಮಧ್ಯಾಹ್ನದ ಊಟವನ್ನು ಸಹ ತಯಾರಿಸಿ ಪ್ಯಾಕ್ ಮಾಡಿಕೊಂಡಿದ್ದರು. ಬೆಳಗಿನ ಏಳುವರೆಗೆಲ್ಲ ನಮ್ಮ ಬಸ್ ಉತ್ತರಕಾಶಿಯಿಂದ ಗಂಗೋತ್ರಿಯ ಕಡೆಗೆ ಹೊರಟಿತು. ಈ ಪ್ರಯಾಣ ಭಾಗೀರಥಿ ನದಿಯಗುಂಟ ಸಾಗುತ್ತಿತ್ತು. ದೂರದಲ್ಲಿ ಹಿಮಾಚ್ಛಾದಿತ ಶಿಖರಗಳು ಕಂಡವು. ಸುಮಾರು14 -15 ಕಿಲೋಮಿಟರ್ ದೂರ ಸಾಗುತ್ತಿದ್ದಂತೆ ಪೊಲೀಸರು ಎಲ್ಲಾ ಯಾತ್ರಿಗಳ ವಾಹನಗಳನ್ನು ತಡೆಯುತ್ತಿದ್ದರು. ಹಾಗೆ ತಡೆದ ವಾಹನಗಳನ್ನು ರಸ್ತೆಯ ಬಲಭಾಗದಲ್ಲಿ ಇದ್ದ ಒಂದು ಬಯಲಿನಲ್ಲಿ ನಿಲ್ಲಿಸಿದ್ದರು. ನಮ್ಮ ಬಸ್ ಕೂಡ ಆ ಜಾಗಕ್ಕೆ ಹೋಗಿ ನಿಂತಿತು. ಇಲ್ಲಿ ನಮ್ಮ ವಾಹನದ ರಿಜಿಸ್ಟ್ರೇಷನ್ ಆಯಿತು. ಆದರೂ ಮುಂದೆ ವಾಹನಗಳನ್ನು ಬಿಡುತ್ತಲೇ ಇರಲಿಲ್ಲ. ಅಲ್ಲಿದ್ದ ಪೊಲೀಸರನ್ನು ವಿಚಾರಿಸಲಾಗಿ, 'ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಗಂಗೋತ್ರಿಯ ದಾರಿಯಲ್ಲಿ ಭೂಕುಸಿತವಾಗಿದೆ, ಹಾಗಾಗಿ ವಾಹನಗಳನ್ನು ಮುಂದಕ್ಕೆ ಬಿಡಲಾಗುತ್ತಿಲ್ಲ' ಎಂದರು.

ಈ ದಾರಿ ಯಮುನೋತ್ರಿಯ ದಾರಿಯಂತಲ್ಲ, ತುಂಬಾ ಇಕ್ಕಟ್ಟಾಗಿತ್ತು. ಅದರಲ್ಲೂ, ಗುಡ್ಡ ಕುಸಿತದಿಂದ ದಾರಿ ಬಂದಾದರೆ ಎರಡೂ ಕಡೆಯ ವಾಹನ ಸಂಚಾರ ಸ್ಥಗಿತವಾಗುತ್ತಿತ್ತು. ನಾವು ಗಂಗೋತ್ರಿ ತಲುಪಲು ಇನ್ನೂ 85km ಸಾಗಬೇಕಿತ್ತು. ನಾವು ಈ ಸ್ಥಳದಲ್ಲಿಯೇ ಬೆಳಿಗ್ಗೆ 8 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ಕಾದೆವು. ಈ ಯಾತ್ರಿಗಳಲ್ಲಿ ಕೆಲವು ವಾಹನಗಳವರು ತಾವಿದ್ದ ಜಾಗದಲ್ಲಿಯೇ ಬಾಳೆಹಣ್ಣಿನ ಸಿಪ್ಪೆ, ಪ್ಲಾಸ್ಟಿಕ್ ಕವರ್ ಇತ್ಯಾದಿ ಕಸಗಳನ್ನು ಎಲ್ಲೆಂದರಲ್ಲಿ ಹರಡತೊಡಗಿದರು. ಇದನ್ನು ಗಮನಿಸಿ ನಾನು ಅಲ್ಲಿದ್ದ ಪೋಲೀಸಿನವರಿಗೆ ಇದರ ಬಗ್ಗೆ ದೂರಿದೆ. ನಂತರ ನೀವೇ ಈ ಕಸವನ್ನೆಲ್ಲ ಬಳಿಯಬೇಕಾಗುತ್ತದೆ ಎಂದೂ ಎಚ್ಚರಿಸಿದೆ. ಹೌದೆಂದು ಒಪ್ಪಿಕೊಂಡ ಅವರು ತಕ್ಷಣ ತಮ್ಮ ಧ್ವನಿವರ್ಧಕದಲ್ಲಿ ಅನೌನ್ಸ್ ಮಾಡಿ ಕಸ ಹಾಕಬಾರದೆಂದೂ, ಹಾಗೆ ಹರಡಿದವರ ವಾಹನವನ್ನು ಇಲ್ಲೇ ತಡೆದು ನಿಲ್ಲಿಸುವದಾಗಿಯೂ ಹೇಳಿದರು ಮತ್ತು ಇದನ್ನು ವೀಕ್ಷಿಸಲು ಬಂದರು. ಈ ಚಾಲಾಕಿ ಯಾತ್ರಿಗಳು ತಡಮಾಡದೆ ತಾವು ಚೆಲ್ಲಿದ ಕಸವನ್ನೆಲ್ಲ ಆರಿಸಿ ತಮ್ಮ ಬಸ್ಸಿನ ತಳಭಾಗಕ್ಕೆ ಪೋಲೀಸಿನವರಿಗೆ ಕಾಣದಂತೆ ತಳ್ಳಿಬಿಟ್ಟರು. ನನಗೆ ನಗು ಬಂತು ಈ ಯಾತ್ರಿಗಳ ಅಸಡ್ಡಾಳತನ ನೋಡಿ. ಕೊನೇಪಕ್ಷ ಅದರ ನಂತರ ಕಸ ಚೆಲ್ಲುವುದು ನಿಂತಿತು.
 
ಈ ನಡುವೆ ಬಸ್ಸಿನಲ್ಲಿಯೇ ನಮಗೆ ಮಧ್ಯಾಹ್ನದ ಊಟವನ್ನು ಸಹ ನೀಡಿದರು. ಪಲಾವ್, ಮೊಸರನ್ನ ಹಾಗೂ ಒಂದು ಲಡ್ಡು. ಊಟ ಚೆನ್ನಾಗಿತ್ತು. ನಾವು ನಿಂತಿರುವ ಸ್ಥಳದಲ್ಲಿ ಕೆಳಗಡೆ ಭಾಗೀರಥಿ ನದಿ ರಭಸವಾಗಿ ಹರಿಯುತ್ತಿತ್ತು. ನಮ್ಮ ವಾಹನದ ಜೊತೆಯಲ್ಲಿ ನಿಂತ ನೂರಾರು ಇತರ ವಾಹನಗಳ ಯಾತ್ರಿಗಳು ಅಲ್ಲಿಯೇ ಒಲೆ ಹೂಡಿ ರೊಟ್ಟಿ, ಚಪಾತಿ, ಪೂರಿ, ದಾಲ್ ಇತ್ಯಾದಿ ಅಡಿಗೆ ಮಾಡಿಕೊಂಡರು. ಕೆಲವರು ಬಟ್ಟೆ ಒಗೆದು ಹಾಕಿದರು. ಕೆಲವರು ಅಲ್ಲೇ ಟೆಂಟ್ ಎಬ್ಬಿಸಿ, ಒಳಗಡೆ ಕುಳಿತು, ಇಸ್ಪೀಟ್ ಆಟವನ್ನು ಸಹ ಆಡುತ್ತಿದ್ದರು. ಇನ್ನು ಕೆಲವರು ಚೆನ್ನಾಗಿ ಭಜನೆ ಮಾಡುತ್ತಿದ್ದರು. ಎಲ್ಲರಿಗೂ ಸಹ ಸಮಯ ಕಳೆಯುವುದು ಸಮಸ್ಯೆಯಾಗಿತ್ತು. ಅಲ್ಲೇ ಇದ್ದ ಪೊಲೀಸಿನವರನ್ನು ವಿಚಾರಿಸಲಾಗಿ, "ಇನ್ನು ಈ ದಿನಕ್ಕೆ ಮೇಲಿನ ರಸ್ತೆಯ ಬ್ಲಾಕ್ ತೆರವಾಗುವುದಿಲ್ಲ" ಎಂದು ಹೇಳಿದರು. ನಾಳೆಯ ದಿನ ಮೇಲಿದ್ದವರೆಲ್ಲ ಕೆಳಗೆ ಬಂದ ನಂತರ ಇಲ್ಲಿ ನಿಂತವರನ್ನು ಮೇಲಕ್ಕೆ ಬಿಡುವುದು. ಅದು ಎಷ್ಟು ಹೊತ್ತಿಗೆ ಆರಂಭವಾಗುತ್ತದೆ ಎನ್ನುವ ನಿಶ್ಚಯವಿಲ್ಲ. ಇಲ್ಲಿ ಎಲ್ಲ ಮೂಲ ಸೌಕರ್ಯಗಳ ಕೊರತೆ ಇತ್ತು. ಆದ್ದರಿಂದ ಇಲ್ಲಿ ನಿಂತು ಅನುಭವಿಸುವುದಕ್ಕಿಂತ ವಾಪಸ್ ಉತ್ತರಕಾಶಿಗೆ ಹೋಗುವುದೆಂದು ತೀರ್ಮಾನಿಸಿದೆವು. ಅದೃಷ್ಟವಶಾತ್ ಬಸ್ಸನ್ನು ತಿರುಗಿಸಲು ಯಾವುದೇ ಸಮಸ್ಯೆ ಆಗಲಿಲ್ಲ. ಆದರೆ ವಾಪಸ್ ಉತ್ತರಕಾಶಿಗೆ ಬರುವಾಗ ದಾರಿಯಲ್ಲಿ ಮತ್ತೆ ಟ್ರಾಫಿಕ್ ಜಾಮ್ ಆಗಿತ್ತು. ಕೊನೆಗೂ, ಎಲ್ಲರೂ ಬಸ್ಸಿನಿಂದ ಇಳಿದು, ಎರಡು ಮೂರು ಕಿಲೋಮೀಟರ್ ದೂರ ನಡೆದು 'ಶಿವಲಿಂಗ ರೆಸಾರ್ಟ್' ತಲುಪಿದೆವು. ಅಷ್ಟರಲ್ಲಿ ಸಾಯಂಕಾಲ 6:00 ಗಂಟೆ ಆಗಿತ್ತು. ಉತ್ತರಕಾಶಿ ವಿಶ್ವೇಶ್ವರ ದೇವಸ್ಥಾನದ ಕಡೆಗೆ ಹೋಗುವುದು ಸಹ ಪೊಲೀಸ್ ಬ್ಯಾರಿಕೇಡ್ ನಿಂದಾಗಿ ಸಾಧ್ಯವಾಗಲಿಲ್ಲ.

ಒಟ್ಟಿನಲ್ಲಿ ಈ ದಿನ ಸಂಪೂರ್ಣ ನಿರಾಶೆ. ಗಂಗೋತ್ರಿ ದರ್ಶನವಾಗಲಿಲ್ಲ. ಉತ್ತರಕಾಶಿಯ ವಿಶ್ವೇಶ್ವರ ಮಂದಿರಕ್ಕೂ ಸಹ ಹೋಗಲು ಆಗಲಿಲ್ಲ. ನಮ್ಮ ಗುಂಪಿನ ಕೆಲವು ಯಾತ್ರಿಗಳಂತೂ ಯಾತ್ರೆಯನ್ನು ಇಲ್ಲಿಯೇ ಮೊಟಕುಗೊಳಿಸಿ ವಾಪಸ್ ಹೋಗಿಬಿಡೋಣ ಎಂದು ಮಾತಾಡಿಕೊಂಡರು. ಆದರೆ ಪ್ರಯಾಣದ ಟಿಕೆಟ್ ಗಳೆಲ್ಲ ನಿಗದಿಯಂತೆ ಬುಕ್ ಆಗಿರುವ ಕಾರಣ ಅದನ್ನು ತಪ್ಪಿಸಲು ಸಾಧ್ಯವಾಗುತ್ತಿರಲಿಲ್ಲ. "ನಿನ್ನ ದರ್ಶನವನ್ನಾದರೂ ಕರುಣಿಸು, ತಂದೆ" ಎಂದು ಕೇದಾರನಾಥನನ್ನು ಪ್ರಾರ್ಥಿಸುವುದನ್ನು ಬಿಟ್ಟು ನಮಗೆ ಬೇರೆ ಯಾವ ದಾರಿಯೂ ಇರಲಿಲ್ಲ. ರಾತ್ರಿ ಊಟ ಮುಗಿಸಿ ಬೇಗನೆ ನಿದ್ದೆಗೆ ಶರಣಾದೆವು.

River Bhageerathi



(ಸಶೇಷ....)

ಬುಧವಾರ, ಆಗಸ್ಟ್ 7, 2024

ಚಾರ್ ಧಾಮ ಯಾತ್ರೆ -ಭಾಗ 4

ಚಾರ್ ಧಾಮ ಯಾತ್ರೆ -ಭಾಗ 4

ಕೈಗೂಡದ ಯಮುನೋತ್ರಿ ಯಾತ್ರೆ
ದಿನಾಂಕ 12/05/2024

ಬೆಳಗಿನ ಜಾವದ ಎರಡು ಗಂಟೆಗೆಲ್ಲ ಎದ್ದು ಸ್ನಾನಾದಿಗಳನ್ನು ಮುಗಿಸಿ ಯಮುನೋತ್ರಿಯ ಕಡೆಗೆ ಹೊರಡಲು ಸನ್ನದ್ಧರಾಗಿ ಬಂದ ನಮಗೆ ಹೊರಗಿನ ಚಳಿ 'ನಾನೂ ಇದ್ದೇನೆ' ಎನ್ನುತ್ತಾ ಸ್ವಾಗತವನ್ನು ಕೋರಿತು. ನಮಗೆಲ್ಲ ಮೊದಲೇ ತಿಳಿಸಿದಂತೆ ನಾವು ಬೆಚ್ಚಗಿನ ಥರ್ಮಲ್ ಗಳನ್ನು ಹಾಕಿ ಅದರ ಮೇಲೆ ನಮ್ಮ ಮಾಮೂಲಿ ಡ್ರೆಸ್ ಮಾಡಿಕೊಂಡಿದ್ದೆವು. ಅದರ ಹೊರತಾಗಿ ಮೇಲಿನಿಂದ ಬಲವಾದ ಸ್ವೆಟರ್ ಹಾಗೂ ಟೋಪಿಗಳನ್ನು ಸಹ ಧರಿಸಿದ್ದೆವು. ಬಸ್ ಏರುವ ಮೊದಲು ಬಿಸಿ ಬಿಸಿ ಚಹಾ-ಬಿಸ್ಕತ್ ಸೇವಿಸಿ ನಮ್ಮ ನಮ್ಮ ಬಸ್ಸುಗಳನ್ನು ಏರಿದೆವು. ಆಗ ಬೆಳಗಿನ ಜಾವ 3:00 ಗಂಟೆಯ ಸಮಯ. ದಿನದಂತೆ ನರಸಿಂಹ ಭಜನೆಯನ್ನು ಮಾಡಿದೆವು. ನಾನು ಈ ದಿನವೂ ಸಹ ಮಂಕುತಿಮ್ಮನ ಕಗ್ಗದ ಎರಡು ಮುಕ್ತಕಗಳನ್ನು ಹೇಳಿ ವ್ಯಾಖ್ಯಾನ ಮಾಡಿದೆನು.
ನಮ್ಮ ಚಿಕ್ಕ ಪುಟ್ಟ ಚರ್ಚೆ, ವಿಚರ್ಚೆಗಳು ಮುಗಿದು ಇನ್ನೇನು ಎಲ್ಲರೂ ಶಾಂತರಾಗಿ ನಿದ್ರೆಗೆ ಜಾರುವ ಸಮಯ. ಅದೇಕೋ ನಮ್ಮ ಬಸ್ ನಿಂತುಬಿಟ್ಟಿತು. ನಮ್ಮ ಕ್ಯಾಂಪ್ ನಿಂದ ಕೇವಲ 3 ಕಿ.ಮೀ ದೂರ ಮಾತ್ರ ಬಂದಿದ್ದೆವು. ಅದು ದ್ವಿಪಥ ಹೆದ್ದಾರಿ. ಎಡಗಡೆಯ ಸಾಲಿನಲ್ಲಿ ನಾವು ಅಚ್ಚುಕಟ್ಟಾಗಿ ನಮ್ಮ ಮುಂದಿರುವ ವಾಹನದ ಬೆನ್ನು ಹಿಡಿದು ನಿಂತಿದ್ದೆವು. ನಮ್ಮ ಟೂರ್ ಗೈಡ್ ಕೆಳಗೆ ಇಳಿದು ಹೋಗಿ ವಿಚಾರಿಸಿಕೊಂಡು ಬಂದರು. ಇಲ್ಲಿಂದ ಯಮುನೋತ್ರಿಯವರೆಗೆ - ಸುಮಾರು 40 ಕಿಲೋಮೀಟರ್ - ಉದ್ದಕ್ಕೂ ಇದೇ ರೀತಿ ಟ್ರಾಫಿಕ್ ಜಾಮ್ ಆಗಿದೆ ಎಂಬ ವರದಿ ತಂದರು. ನಮ್ಮೆಲ್ಲರ ಉತ್ಸಾಹ ಜರ್ರನೆ ಇಳಿದು ಹೋಯಿತು. ನಿದ್ದೆ ಹಾರಿಹೋಯಿತು. ಎದುರುಗಡೆಯಿಂದ ಕೆಳಗೆ ಬರುವ ವಾಹನಗಳ ಲೇನ್ ಖಾಲಿ ಇತ್ತು. ಅಷ್ಟಷ್ಟು ಹೊತ್ತಿಗೆ ಒಂದು 40 - 50 ವಾಹನಗಳ ಸಾಲು ಕೆಳಗೆ ಸರಿದು ಹೋಗುತ್ತಿತ್ತು. ನಾವು ಮೇಲೆ ಹೋಗುವ ಲೇನ್ ಸಂಪೂರ್ಣ ಜಾಮ್ ಆಗಿದೆ ಎಂಬುದು ನಿಚ್ಚಳವಾಗಿತ್ತು. ನಮ್ಮ ಟೂರ್ ಗೈಡ್ ನಮಗಿಂತ ಮೊದಲು ಹೋದ ಇನ್ನೊಂದು ಟ್ರಾವೆಲ್ಸ್ ನವರ ಮಾರ್ಗದರ್ಶಿಯ ಜೊತೆ ಮಾತನಾಡಿದರು. ಅವರ ಎರಡು ಬಸ್ಸುಗಳು ಸುಮಾರು 30 ತಾಸಿನಿಂದ ನಿಂತ ಜಾಗದಲ್ಲೇ ನಿಂತಿರುವುದಾಗಿ ತಿಳಿಸಿದರು. ಅವರು ನಿಂತ ಸ್ಥಳದಲ್ಲಿ ಯಾವುದೇ ರೀತಿಯ ಮೂಲಸೌಕರ್ಯಗಳಿರಲಿಲ್ಲ. ಬಸ್ಸಿನಲ್ಲಿದ್ದ ಎಲ್ಲಾ ಯಾತ್ರಿಗಳು - ಹೆಣ್ಣುಮಕ್ಕಳು ಸಹಿತ - ತುಂಬಾ ತೊಂದರೆಯನ್ನು ಅನುಭವಿಸುತ್ತಾ ಇರುವುದಾಗಿ ತಿಳಿಸಿದರು. ಪರಿಸ್ಥಿತಿ ಸುಧಾರಿಸಬಹುದು ಎಂದು ನಾವೆಲ್ಲ ಬೆಳಗಿನ 6:30ರ ತನಕ ಕಾದೆವು. ನಂತರ ನಾವೆಲ್ಲ ಸೇರಿ "ಇನ್ನು 10 - 20 ತಾಸು ರಸ್ತೆಯಲ್ಲಿ ಕಾಯುವುದರಲ್ಲಿ ಅರ್ಥವಿಲ್ಲ , ವಾಪಸ್ ನಮ್ಮ ಕ್ಯಾಂಪ್ ಗೆ ತಿರುಗಿ ಹೋದರಾಯಿತು" ಎಂದು ನಿರ್ಣಯಿಸಿದೆವು. ಅದೃಷ್ಟವಶಾತ್ ಬಲಗಡೆಯ ಲೇನ್ ಖಾಲಿ ಇದ್ದುದರಿಂದ ವಾಹನವನ್ನು ಯೂ ಟರ್ನ್ ತೆಗೆದುಕೊಳ್ಳುವುದು ಕಷ್ಟವಾಗಲಿಲ್ಲ. ಅಲ್ಲಿಂದ ಕೇವಲ ಮೂರು ಕಿಲೋಮೀಟರ್ ಕೆಳಗಡೆ ಇದ್ದ 'ಕ್ಯಾಂಪ್ ನಿರ್ವಾಣ' ಸೇರಿಕೊಂಡೆವು.
ಮೊದಲನೆಯದಾದ ಈ 'ಯಮುನೋತ್ರಿ ಯಾತ್ರೆ'ಯೇ ಅಯಶಸ್ವಿಯಾದದ್ದಕ್ಕೆ ನಿರಾಶೆಯಾಯಿತು. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ನಡುವೆ ಸಾಕಷ್ಟು ನಿದ್ರೆ, ಯಮುನಾ ನದಿಯ ನೀರಿನಲ್ಲಿ ಆಟ ಇಷ್ಟೇ ಆಯಿತು, ಮುಂಜಾನೆಯೆಲ್ಲಾ.
ಮಧ್ಯಾಹ್ನದ ನಂತರ 'ಕ್ಯಾಂಪ್ ನಿರ್ವಾಣ'ದಿಂದ ಒಂದೆರಡು ಮೈಲಿ ದೂರದಲ್ಲಿದ್ದ 'ನಂದಗಾಂವ್' ಎನ್ನುವ ಹಳ್ಳಿಯನ್ನು ಹಾಗೂ ಅದರೊಳಗಿರುವ ನಂದೇಶ್ವರ ದೇವಾಲಯವನ್ನು ದರ್ಶಿಸೋಣ ಎಂದು ವೆಂಕಟೇಶ್ ಜಿ ಅವರು ನಿರ್ಧರಿಸಿದರು. ನಿರಾಶರಾಗಿ ಕುಳಿತಿದ್ದ ಯಾತ್ರಿಗಳೆಲ್ಲ ಸ್ವಲ್ಪ ಚಿಗುರಿಕೊಂಡರು. ಹೋಟೆಲ್ ನಿಂದ ಬಾರಕೋಟ್ ಕಡೆ ಸಾಗುವ ಮಾರ್ಗದಲ್ಲಿ, ಯಮುನಾ ಸೇತುವೆಗೂ ಮೊದಲು, ಎಡಗಡೆ ಇರುವ ಕಡಿದಾದ ದಾರಿಯಲ್ಲಿ ಸುಮಾರು ಎರಡು ಕಿಲೋಮೀಟರ್ ದೂರ ಸಾಗಿದ ನಂತರ ಹಳ್ಳಿಯೊಂದು ಸಿಕ್ಕಿತು. ಇದೇ ನಂದಗಾಂವ್. ಹಿಮಾಲಯದ ತಪ್ಪಲಿನಲ್ಲಿ ಅತ್ಯಂತ ಶಾಂತವಾಗಿ ಪವಡಿಸಿದ ಈ ಹಳ್ಳಿ, ಕಲಾವಿದನೊಬ್ಬ ಅದೇ ತಾನೇ ತನ್ನ ಕುಂಚದಿಂದ ಕ್ಯಾನ್ವಾಸಿನ ಮೇಲೆ ಮೂಡಿಸಿದ ಚಿತ್ರದಂತಿತ್ತು. ವರ್ಷದ ಆರು ತಿಂಗಳು ಸುರಿಯುವ ಹಿಮದಿಂದ ಹಾಗೂ ಉಳಿದ ದಿನಗಳಲ್ಲಿರುವ ಚಳಿಯಿಂದ ರಕ್ಷಿಸಿಕೊಳ್ಳಲು ಇಲ್ಲಿ ಮರದ ಮನೆಗಳನ್ನು ನಿರ್ಮಿಸಿದ್ದಾರೆ. ಮನೆಗಳ ಮುಂಭಾಗದಲ್ಲಿ ಅಥವಾ ಪಕ್ಕದಲ್ಲಿ ಸಮತಟ್ಟುಗೊಳಿಸಿಕೊಂಡ ಸ್ವಲ್ಪ ಜಾಗದಲ್ಲಿ ಆಲೂಗಡ್ಡೆಯನ್ನು ಬೆಳೆಯುತ್ತಿದ್ದರು. ಕಲ್ಲಿನ ಪಾಗಾರಗಳ ಅಂಚಿನಲ್ಲಿ ಆಕ್ರುಟ್ ಹಾಗೂ ಅಂಜೂರದ ಮರಗಳು ಸಹಜವಾಗಿ ಬೆಳೆದು ನಿಂತಿದ್ದವು. ಇರುವ ಅಲ್ಪಸ್ವಲ್ಪ ಜಾಗದಲ್ಲಿ ಬೆಳೆದ ಗೋಧಿಯ ಹುಲ್ಲನ್ನು ಮೆದೆಗಳಲ್ಲಿ ಕಟ್ಟಿ ಈ ಮರಗಳ ರಂಬೆಯ ಮೇಲೆ ಇಟ್ಟಿದ್ದರು. ಈ ಹುಲ್ಲಿಗಾಗಿ ಪ್ರತ್ಯೇಕ ಬಣಿವೆ ಹಾಕುವಷ್ಟು ಹುಲ್ಲಿನ ಪ್ರಮಾಣ ಇರಲಿಲ್ಲ. ಕಾಳುಕಡಿ ಹಾಗೂ ಆಹಾರ ಸಾಮಗ್ರಿಗಳನ್ನು ರಕ್ಷಿಸಿಕೊಳ್ಳಲು ಮರದ ಪಣತ(Silos)ಗಳನ್ನು ನಿರ್ಮಿಸಿಕೊಂಡಿದ್ದರು. ಈ ಪಣತಗಳ ಮೇಲು ಭಾಗದಲ್ಲಿಯೇ ಮನೆಯೂ ಇತ್ತು. ಒಟ್ಟಿನಲ್ಲಿ ಪರ್ವತದ ಓರೆಯಲ್ಲಿ ಹರಡಿ ನಿಂತಿದ್ದ ಈ ಹಳ್ಳಿಯ ಸೌಂದರ್ಯ ವರ್ಣನಾತೀತ. ಒಮ್ಮೆಲೆ ನಾವು ಇಷ್ಟೆಲ್ಲ ಜನ ಪ್ರವಾಸಿಗಳು ಬಂದರೂ ಸಹ ಈ ಹಳ್ಳಿಗರು ಅತೀವ ಕುತೂಹಲದಿಂದ ನಮ್ಮನ್ನು ನೋಡುತ್ತಿರಲಿಲ್ಲ. ಬಹುಶಃ ಈ ಹಳ್ಳಿಗೆ ನಮ್ಮಂತೆ ಪ್ರವಾಸಿಗರು ಮೇಲಿಂದ ಮೇಲೆ ಬರುತ್ತಿರಬಹುದು. ಇಲ್ಲಿಯ ಎರಡು ಮೂರು ನಾಯಿಗಳು ನಮ್ಮನ್ನು ಅನುಸರಿಸಿಕೊಂಡು ಬಂದು ಅದಾಗಲೇ ನಮ್ಮ ಗೆಳೆಯರಾಗಿ ಬಿಟ್ಟವು. ಇಲ್ಲಿಯ ನಾಯಿಗಳು, ಕುರಿಗಳು, ಮೇಕೆಗಳ ಮೈಮೇಲೆಲ್ಲಾ ದಟ್ಟವಾದ, ಉದ್ದವಾದ ಕೂದಲು ತುಂಬಿತ್ತು. ಬಹುಶಃ ಚಳಿಯಿಂದ ರಕ್ಷಿಸಿಕೊಳ್ಳಲು ಕೂದಲು ಈ ರೀತಿ ಸಹಜವಾಗಿಯೇ ಬೆಳೆಯುತ್ತಿದ್ದಿರಬಹುದು. ಊರ ನಡುವಿನ ಕಿರು ಹಾದಿಯಲ್ಲಿ ಸಾಗಿ, ಎತ್ತರದ ಸ್ಥಳದಲ್ಲಿದ್ದ ನಂದೇಶ್ವರ ದೇವಾಲಯವನ್ನು ತಲುಪಿದೆವು. ಚಿಕ್ಕದಾದರೂ ಸಾಕಷ್ಟು ವಿಶಾಲವಾದ ಪ್ರಾಂಗಣವನ್ನು ಹೊಂದಿದ ಅಚ್ಚುಕಟ್ಟಾದ ದೇವಸ್ಥಾನವಿದು. ನಂದೇಶ್ವರ ಶಿವ ಇಲ್ಲಿಯ ಆರಾಧ್ಯ ದೈವ. ಊರಿನ ಪ್ರಮುಖರು ಬಂದು ದೇವಾಲಯದ ಬಾಗಿಲನ್ನು ನಮಗಾಗಿ ತೆರೆದರು. ನಮ್ಮ ಯಾತ್ರಾ ಟೀಮ್ ನಲ್ಲಿದ್ದ ಮಹಿಳೆಯರು ಲಿಂಗಾಷ್ಟಕವನ್ನು ಹಾಡಿ ಸ್ತುತಿಸಿದರು. ಕೆಲವರು ಇಲ್ಲಿಯ ಸ್ಥಳೀಯ ಜನರ ಜೊತೆ ಮಾತಿಗೆ ತೊಡಗಿದರು. ನಾವು ಬೆಂಗಳೂರಿನಿಂದ ಬಂದಿದ್ದೇವೆ ಎಂದು ತಿಳಿದು, ತಮ್ಮ ಮನೆಯ ಯಾರೋ ಒಬ್ಬರು ಬೆಂಗಳೂರಿನಲ್ಲಿ ಇದ್ದಾರೆ ಎಂದು ಹೇಳಿ ಸಂತೋಷಪಟ್ಟರು. ಉದ್ದ ಕೂದಲು, ಗಡ್ಡಧಾರಿಯಾದ ಬಾವಾಜಿಯೊಬ್ಬರು ಇದ್ದರು. ನಾವು ಏನು ಕೊಟ್ಟರೂ ತೆಗೆದುಕೊಳ್ಳದೆ ಮಂದಿರಕ್ಕೆ ನೀಡಲು ಹೇಳಿದರು. ಇಲ್ಲಿಯ ಮಹಿಳೆಯರು ಮತ್ತು ಮಕ್ಕಳು ಕೂಡ ನಮ್ಮಿಂದ ಏನನ್ನೂ ಸ್ವೀಕರಿಸಲು ಇಚ್ಛಿಸಲಿಲ್ಲ. ಇದ್ದುದಕ್ಕೆ ಸಂತೋಷ ಪಡುತ್ತಾ, ಶಿವನನ್ನು ಧ್ಯಾನಿಸುತ್ತಾ, ಸಂತೃಪ್ತ ಜೀವನ ನಡೆಸುವ ಇವರ ಜೀವನ ನಿಜವಾಗಿಯೂ ಅನುಕರಣೀಯ.
ಈ ಊರಿನಲ್ಲಿ ಸ್ಥಳದ ಅಭಾವ ಎಷ್ಟಿದೆ ಎಂದರೆ ನಮ್ಮ ಮಿನಿ ಬಸ್ಸನ್ನು ತಿರುಗಿಸಿಕೊಳ್ಳಲೂ ಸಹ ಸ್ಥಳ ಇರಲಿಲ್ಲ. ನಮ್ಮನ್ನೆಲ್ಲ ಬಸ್ಸಿನಲ್ಲಿ ಕುಳ್ಳಿರಿಸಿಕೊಂಡು ನಮ್ಮ ಎರಡೂ ಜನ ಡ್ರೈವರ್ ಗಳು ರಿವರ್ಸ್ ನಲ್ಲಿಯೇ ಆ ಕಡಿದಾದ ಮಾರ್ಗದಲ್ಲಿ ಸುಮಾರು ಒಂದು ಕಿಲೋಮೀಟರ್ ಸಾಗಿದರು. ಹಾಗೆ ಸಾಗುವಾಗ ಬಂದ ಕಾರುಗಳಿಗೆ ಅಚ್ಚುಕಟ್ಟಾಗಿ ಸೈಡ್ ಕೊಟ್ಟರು. ಅವರ ಚಾಲನಾ ನೈಪುಣ್ಯವನ್ನು ನೋಡಿ ಎಲ್ಲರೂ ಬೆರಗಾದೆವು. ನಂತರ ಒಂದು ಕಟ್ಟಡದ ಪ್ರವೇಶ ದ್ವಾರದಲ್ಲಿ ಬಸ್ಸನ್ನು ತಿರುಗಿಸಿಕೊಂಡು, ಪುನ ಹೈವೇ ತಲುಪಿ, ಅಲ್ಲಿಯೇ ಎದುರುಗಡೆ ಇದ್ದ "ಗಂಗಾ ನಾನಿ" ಎಂಬ ಕುಂಡವೊಂದನ್ನು ದರ್ಶಿಸಿದೆವು. ಇಲ್ಲಿ ಒಂದು ಪುಟ್ಟ ಕೊಳವಿದ್ದು ನೀರಿನ ಬುಗ್ಗೆ ಇದೆ. ಆ ಬುಗ್ಗೆಯ ಜಲ ಉತ್ತರಕಾಶಿಯಿಂದ ಬರುತ್ತದೆ ಎಂದು ಹೇಳುತ್ತಾರೆ. ಈ ಕುಂಡದ ಅಂಚಿನಲ್ಲಿ ಒಂದು ಪುಟ್ಟ ಮಂದಿರವಿದ್ದು ಅದರಲ್ಲಿ ಗಂಗೆ ಮತ್ತು ಯಮುನೆಯರನ್ನು ಪೂಜಿಸುತ್ತಾರೆ. ಶ್ವೇತವರ್ಣದ ಮೂರ್ತಿ ಗಂಗೆಯಾದರೆ, ಕೃಷ್ಣವರ್ಣದ ಮೂರ್ತಿ ಯಮುನೆಯದು. ಇದು ಯಮುನಾ ನದಿಯ ತಟದಲ್ಲಿಯೇ ಇದೆ.
ಇದನ್ನೆಲ್ಲ ಮುಗಿಸಿ ವಾಪಸ್ ವಸತಿಯ ಕಡೆಗೆ ಬಂದಾಗ ಸಂಜೆ 5:30 ಆಗಿತ್ತು. ಚಹಾ ಸೇವಿಸಿ ಎಲ್ಲರೂ ಎದುರುಗಡೆ ಹರಿಯುತ್ತಿರುವ ಯಮುನೆಯ ಕಡೆ ಸಾಗಿದೆವು. ಯಮನೋತ್ರಿಯ ದರ್ಶನ ತಪ್ಪಿದುದನ್ನು ಸರಿಪಡಿಸಲೋ ಎಂಬಂತೆ ಎಲ್ಲಾ ಸೇರಿ ಯಮುನಾರತಿಯನ್ನು ಮಾಡಿದೆವು. ಯಾತ್ರಿಗಳ ಪೈಕಿ ಒಬ್ಬರಾದ ಡಾಕ್ಟರ್ ಮನೋರಮ ಅವರು ಯಮುನೆಯನ್ನು ಕುರಿತು ತಾವೇ ರಚಿಸಿದ ಕವನ ಒಂದನ್ನು ಸುಶ್ರಾವ್ಯವಾಗಿ ಹಾಡಿ, ಈ ಸಂಜೆಯ ನೆನಪನ್ನು ಸ್ಮರಣೀಯವಾಗಿಸಿದರು. ಬೇಗನೆ ಊಟಕ್ಕೆ ಸೇರಿದೆವು. ಅಲ್ಲಿಯೇ ನಮ್ಮ ಮೋಹನ್ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಎಲ್ಲರೂ ಅವರಿಗೆ ಶುಭ ಕೋರಿದೆವು. ಮುಂಜಾನೆ ಮತ್ತೆ ಬೇಗನೆ ಏಳಬೇಕಾಗಿರುವುದರಿಂದ ಬೇಗನೆ ಮಲಗಿದೆವು.

ಡಾ|| ಮನೋರಮಾ ಅವರು ರಚಿಸಿದ ಕವನ ನಿಮ್ಮ ಅವಗಾಹನೆಗಾಗಿ ಇದೋ ಇಲ್ಲಿದೆ.

ನಿನ್ನ ಜುಳು ಜುಳು ನಾದ ಮೊರೆತಕೆ ನನ್ನ ಕಿವಿಗಳು ತುಂಬಲಿ
ನಿನ್ನ ಬೆಲ್ನೊರೆ ಕೊಡುವ ಮುತ್ತನು ನೋಡಿ ಕಂಗಳು ಸವಿಯಲಿ
ನಿನ್ನ ಶೀತಲ ತಂಪು ಕಂಪಿಸೆ ದೇಹ ಧಮನಿಯು ನುಡಿಯಲಿ
ನೀನು ನೆಲೆಸುವ ನನ್ನ ನಾಲಿಗೆ ನಿನ್ನ ದನಿಯನು ಹಾಡಲಿ
ಉಸಿರು ನಿನ್ನದು ಹಸಿರು ನಿನ್ನದು ನೀನೇ ಆಗು ಬಾ ನನ್ನೊಳು
ಉಸಿರು ದನಿಯಲಿ ಕಣ್ಣು ಕಿವಿಯಲಿ ದೇಹ ಉಲಿಯಲಿ ನಿನ್ನೊಳು

On River yamuna
Written on Sunday 12, May 2024. On the banks of Yamuna...praying her with all our 5 senses

Dr Manorama B N

     House Above the Silos


                Ganganaani                      
(ಸಶೇಷ.....)



ಶನಿವಾರ, ಆಗಸ್ಟ್ 3, 2024

ಚಾರ್ ಧಾಮ ಯಾತ್ರೆ -ಭಾಗ 3

 ಚಾರ್ ಧಾಮ ಯಾತ್ರೆ -ಭಾಗ 3

ಹಿಮ ಪರ್ವತ ತಪ್ಪಲಿನಲ್ಲಿ ಪಯಣ

ದಿನಾಂಕ 11/05/2024

ಬೆಳಗಿನ ಜಾವ ನಾಲ್ಕು ಗಂಟೆಗೆಲ್ಲ ಹರಿದ್ವಾರದ ಹೋಟೆಲ್ ತ್ರಿಮೂರ್ತಿಯಲ್ಲಿ ರೂಮ್ ಖಾಲಿ ಮಾಡಿದ ನಾವು ಅಲ್ಲಿಂದ ಋಷಿಕೇಶದ ಕಡೆಗೆ ಹೊರಟೆವು.
ನಿನ್ನೆ ನಾವೆಲ್ಲ 41 ಮಂದಿ ಒಂದೇ ಬಸ್ಸಿನಲ್ಲಿ ಇದ್ದರೆ ಇಂದಿನಿಂದ ನಮ್ಮ ಪ್ರಯಾಣ ಅತ್ಯಂತ ತಿರುವುಗಳುಳ್ಳ ಕಡಿದಾದ ರಸ್ತೆಗಳಲ್ಲಿ. ಆದ್ದರಿಂದ ಎರಡು ಮಿನಿ ಬಸ್ಸುಗಳನ್ನು ಪ್ರಯಾಣಕ್ಕಾಗಿ ಅಣಿಗೊಳಿಸಿದ್ದರು. ನಮ್ಮ ವಿನಂತಿಯ ಮೇರೆಗೆ ನಾವು 9 ಮಂದಿ ಒಂದೇ ಬಸ್ಸಿನಲ್ಲಿ ಇರುವಂತೆ ಆಗಿತ್ತು. ನಮ್ಮ ಬಸ್ಸಿನಲ್ಲಿ 19 ಜನ ಯಾತ್ರಿಗಳು ಇದ್ದರು. ನಮ್ಮ ಬಸ್ಸಿನ ಡ್ರೈವರ್ ಅತ್ಯಂತ ಚಾಕಚಕ್ಯತೆಯಿಂದ ಬಸ್ಸನ್ನು ಚಲಾಯಿಸುತ್ತಿದ್ದ. ಯಾತ್ರಾ ಮಾರ್ಗದರ್ಶಿ ಶ್ರೀ ವೆಂಕಟೇಶ ದಾಸ್ ಅವರ ಜೊತೆ ಇನ್ನೂ ಇಬ್ಬರು ಸಹಾಯಕ ಮಾರ್ಗದರ್ಶಿಗಳು ಇದ್ದರು - ಒಬ್ಬಾತ ನಿತಿನ್ ದಾಸ್, ಇನ್ನೊಬ್ಬ ಖುಷ್ ದಾಸ್. ಅವರ ಪೈಕಿ ನಿತಿನ್ ತುಂಬಾ ಸುಶ್ರಾವ್ಯವಾಗಿ ಭಜನೆಗಳನ್ನು ಹಾಡುತ್ತಿದ್ದ. ಬಸ್ ಪ್ರಯಾಣ ಆರಂಭವಾಗುತ್ತಿದ್ದಂತೆಯೇ ನರಸಿಂಹ ಭಜನೆ ಮಾಡಿದೆವು. ಬೆಳಗಿನ ಅಮೃತ ವಾಣಿಯಾಗಿ ನಾನು "ಮಂಕುತಿಮ್ಮನ ಕಗ್ಗ"ದ ಎರಡು ಮುಕ್ತಕಗಳನ್ನು ಹೇಳಿ ವ್ಯಾಖ್ಯಾನ ಮಾಡಿದೆನು. ನಂತರ ಎಲ್ಲರೂ ಸಣ್ಣದಾಗಿ ನಿದ್ರೆಗೆ ಜಾರಿದರು.
ಬೆಳಿಗ್ಗೆ 6:30 ಗಂಟೆಗೆಲ್ಲ ನಾವು ಋಷೀಕೇಶದ ತ್ರಿವೇಣಿ ಘಾಟ್ ನಲ್ಲಿ ಇಳಿದೆವು. ಋಷೀಕ ಎಂದರೆ ಇಂದ್ರಿಯ - ಇಂದ್ರಿಯಗಳ ಒಡೆಯನಾದ ಶ್ರೀ ವಿಷ್ಣುವೇ ಋಷೀಕೇಶ. ಆದ್ದರಿಂದ ಇದು ವಿಷ್ಣುವಿನ ಕ್ಷೇತ್ರ. ಅಂತಿಮ ಸಮಯದಲ್ಲಿ ಜಾರನ ಬಾಣದಿಂದ ಗಾಯಗೊಂಡ ಶ್ರೀ ಕೃಷ್ಣ ಈ ಸ್ಥಳಕ್ಕೆ ಭೇಟಿ ನೀಡಿದ್ದರು ಎಂಬ ಪ್ರತೀತಿಯಿದೆ. ಇದೇ ಸ್ಥಳದಲ್ಲಿ ಶ್ರೀ ಕೃಷ್ಣನಿರ್ವಾಣ ಕೂಡ ಆಯಿತು ಎಂದು ಹೇಳುತ್ತಾರೆ. ಈ ಸ್ಥಳದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮಿಸುತ್ತವೆ ಎಂದು ಹೇಳುತ್ತಾರೆ. ಇಲ್ಲಿಯ ತೀರ್ಥ ಅತ್ಯಂತ ಪವಿತ್ರವಾದದ್ದು. ನಾವು ಇಲ್ಲಿ ಗಂಗೆಯ ಘಾಟ್ ನಲ್ಲಿ ಕೇವಲ ಒಂದು ಮೆಟ್ಟಿಲಿನಷ್ಟು ಕೆಳಗಿಳಿದು ಗಂಗೆಯನ್ನು ಪ್ರೋಕ್ಷಣೆ ಮಾಡಿಕೊಂಡೆವು. ಘಾಟಿನ ಎದುರುಗಡೆಯೇ ಸುಂದರವಾದ ಶಿವ ಪಾರ್ವತಿಯರ ವಿಗ್ರಹವಿದೆ. ವಿಗ್ರಹದ ಎದುರುಗಡೆ ಕಾರಂಜಿ ಇದೆ. ಇಲ್ಲಿಯ ಗಂಗಾರತಿ ತುಂಬಾ ಪ್ರಸಿದ್ಧವಾದದ್ದು. ನದಿಯ ದಂಡೆಯಲ್ಲಿಯೇ ಗೀತಾ ಮಂದಿರ ಹಾಗೂ ಲಕ್ಷ್ಮೀ ನಾರಾಯಣ ಮಂದಿರಗಳಿವೆ. ನಮ್ಮ ಪ್ರವಾಸದಲ್ಲಿ ರಿಷಿಕೇಶವನ್ನು ವಿವರವಾಗಿ ಸಂದರ್ಶಿಸುವ ಯೋಜನೆ ಇರಲಿಲ್ಲ. ತ್ರಿವೇಣಿ ಘಾಟ್ ದಿಂದ ನಾವು ನೇರವಾಗಿ ರಿಷಿಕೇಶದ ಮಧ್ಯಭಾಗದಲ್ಲಿರುವ ಭರತ ನಾರಾಯಣ ಮಂದಿರವನ್ನು ತಲುಪಿದೆವು. ಇಲ್ಲಿ ಒಂದು ಸುಂದರವಾದ ಗುಡಿ ಇದೆ. ಅದರೊಳಗೆ ಐದೂವರೆ ಅಡಿ ಎತ್ತರದ ಚತುರ್ಭುಜನಾದ ವಿಷ್ಣುವಿನ ಸುಂದರ ಸಾಲಿಗ್ರಾಮದ ಮೂರ್ತಿ ಇದೆ. ನಾಲ್ಕು ಹಸ್ತಗಳಲ್ಲಿ ಶಂಖ, ಚಕ್ರ, ಗದೆ ಹಾಗೂ ಪದ್ಮಗಳನ್ನು ಹಿಡಿದಿರುವ ಶ್ರೀ ವಿಷ್ಣುವಿನ ಮೂರ್ತಿ ನಯನ ಮನೋಹರವಾಗಿದೆ. ಈ ಸ್ಥಳದಲ್ಲಿ ಶ್ರೀಮನ್ನಾರಾಯಣನು ರೈಭ್ಯ ಮಹರ್ಷಿಗೆ ದರ್ಶನವಿತ್ತಿದ್ದನಂತೆ. ಮಹಾಭಾರತದ ಪ್ರಸಿದ್ಧ ಪುರುಷನಾದ ಭರತ ಚಕ್ರವರ್ತಿಯು ಈ ಸ್ಥಳದಲ್ಲಿ ಅನೇಕ ಅಶ್ವಮೇಧ ಯಾಗ ಹಾಗೂ ರಾಜಸೂಯ ಯಾಗಗಳನ್ನು ಮಾಡಿದ್ದನಂತೆ. ಇಲ್ಲಿ ಶ್ರೀಮನ್ನಾರಾಯಣನಿಗೆ 'ಋಷೀಕೇಶನಾರಾಯಣ' ಎಂದು ಕರೆಯುತ್ತಾರೆ. 'ಭರತ ನಾರಾಯಣ' ಎಂತಲೂ ಕರೆಯುತ್ತಾರೆ. ಈ ಮಂದಿರದ ಪಕ್ಕದಲ್ಲಿ ಮಂದಿರ ಜೀರ್ಣೋದ್ಧಾರದ ಸಮಯದಲ್ಲಿ ದೊರೆತ ವಿಗ್ರಹಗಳ ಒಂದು ಪುಟ್ಟ ಮ್ಯೂಸಿಯಂ ಇದೆ. ಮಂದಿರದ ಎದುರುಗಡೆ ಒಂದು ತ್ರಿವೇಣಿ ವೃಕ್ಷವಿದೆ - ಅಶ್ವತ್ಥ, ಆಲ ಮತ್ತು ಬೇಲ ವೃಕ್ಷಗಳ ಸಂಗಮವಾಗಿರುವ ಈ ವೃಕ್ಷಕ್ಕೆ ಸಹಸ್ರಮಾನದ ಇತಿಹಾಸವಿದೆ. ಇವುಗಳನ್ನೆಲ್ಲ ದರ್ಶಿಸಿ, ನಮಸ್ಕರಿಸಿ ಪುನಃ ಬಸ್ಸನ್ನೇರಿ ಹೊರಟ ನಾವು ಬೆಳಗ್ಗೆ ಒಂಬತ್ತು ಗಂಟೆ ಸುಮಾರಿಗೆ ದಾರಿಯಲ್ಲಿ ರಸ್ತೆಯ ಪಕ್ಕದ ಒಂದು ಹೋಟೆಲಿನಲ್ಲಿ ಬೆಳಗಿನ ಉಪಹಾರವನ್ನು ಮುಗಿಸಿದೆವು. ಉಪಹಾರ ನಮ್ಮ ಯಾತ್ರಾ ಟೀಮಿನವರೇ ತಯಾರಿಸಿದ್ದಾಗಿತ್ತು.ಒಳ್ಳೆಯ ಇಡ್ಲಿ, ಚಟ್ನಿ, ಸಾಂಬಾರ್ ಹಾಗೂ ಫ್ರೂಟ್ ಸಲಾಡ್ ನಾಷ್ಟ.
ಬೆಳಗಿನ ತಿಂಡಿಯ ನಂತರ ಬಸ್ ಸೇರಿದ ನಾವು ಮಧ್ಯಾಹ್ನ ಎರಡೂವರೆ ಗಂಟೆಯ ಸುಮಾರಿಗೆ ಬಾರಾಕೋಟ್ ತಲುಪಿದೆವು. ಪಟ್ಟಣದ ಹೊರವಲಯದಲ್ಲಿರುವ "ಕ್ಯಾಂಪ್ ನಿರ್ವಾಣ"ದಲ್ಲಿ ನಮ್ಮ ವಸತಿ ಆಯೋಜಿಸಲಾಗಿತ್ತು. ಅತ್ಯಂತ ಸುಂದರವಾದ ಪರಿಸರದಲ್ಲಿ ಈ 'ಕ್ಯಾಂಪ್ ನಿರ್ವಾಣ' ಇದೆ. ಯಮನೋತ್ರಿಗೆ ಹೋಗುವ ಹೆದ್ದಾರಿಯ ಪಕ್ಕದಲ್ಲಿರುವ ಇದರ ಹಿಂದುಗಡೆ ಹಿಮಾಲಯ ಪರ್ವತ ಶ್ರೇಣಿಗಳಿದ್ದರೆ, ಎದುರುಗಡೆ ಸುಮಾರು 100 ಮೀಟರ್ ಕೆಳಗೆ ಜುಳು ಜುಳು ನಾದ ಮಾಡುತ್ತಾ ಹರಿಯುತ್ತಿರುವ ಶುಭ್ರ ಯಮುನೆ ಇದ್ದಾಳೆ. ಯಮುನೆಯನ್ನು ದಾಟಿ ಅತ್ತ ಕಡೆ ಕೂಡ ಪರ್ವತಗಳ ಸಾಲು. ಏಳೆಂಟು ತಾಸು ಅವಿರತ ಪ್ರಯಾಣ ಮಾಡಿದ ನಾವೆಲ್ಲ ದಣಿದಿದ್ದೆವು. ಬಿಸಿ ಬಿಸಿಯಾದ ಊಟ ತಯಾರಾಗಿತ್ತು. ಎಲ್ಲರೂ ಊಟ ಮುಗಿಸಿ ಒಂದು ತಾಸು ಚೆನ್ನಾಗಿ ನಿದ್ರೆ ಮಾಡಿದೆವು. ನಂತರ ಎದುರಿನಲ್ಲಿದ್ದ ಯಮುನೆಯಲ್ಲಿ ಸ್ನಾನ ಮಾಡಿ ಅಥವಾ ಕೇವಲ ಪ್ರೋಕ್ಷಣೆ ಮಾಡಿ ಎಲ್ಲರೂ ಬೇಗನೆ ವಸತಿಯನ್ನು ಸೇರಿದೆವು. ಡೈನಿಂಗ್ ಹಾಲ್ ನಲ್ಲಿ ವೆಂಕಟೇಶ್ ದಾಸ್ ಅವರು ಯಮುನೋತ್ರಿಯ ಸ್ಥಳ ಪುರಾಣವನ್ನು ವಿವರಿಸಿದರು. ಇಲ್ಲಿಂದ 40 ಕಿಲೋಮೀಟರ್ ದೂರದಲ್ಲಿರುವ ಯಮುನೋತ್ರಿಯನ್ನು ಬೆಳಿಗ್ಗೆ ಬೇಗನೆ ತಲುಪಿ, ದರ್ಶನ ಮುಗಿಸಿ ವಾಪಸ್ ಆಗಬೇಕಾಗಿದ್ದರಿಂದ ಮುಂಜಾನೆ ಮೂರಕ್ಕೆಲ್ಲ ಇಲ್ಲಿಂದ ಹೊರಡುವುದು ಎಂದು ನಿರ್ಣಯವಾಗಿತ್ತು. ಆದ್ದರಿಂದ ಎಲ್ಲ ಯಾತ್ರಾರ್ಥಿಗಳು ಬೇಗನೆ ನಿದ್ರೆಗೆ ಜಾರಿದರು.
River Ganga in Rishikesh 
                            River Yamuna


  ( ಸಶೇಷ...)

                                                                                                                                                                               







ಗುರುವಾರ, ಆಗಸ್ಟ್ 1, 2024

ಚಾರ್ ಧಾಮ ಯಾತ್ರೆ -ಭಾಗ 2

ಚಾರ್ ಧಾಮ ಯಾತ್ರೆ -ಭಾಗ 2

ಗಂಗಾ ಸನ್ನಿಧಿಯಲ್ಲಿ

ದಿನಾಂಕ 10/05/2024

ಬಸ್ ಏರಿದೊಡನೆ ನಮ್ಮ ಯಾತ್ರಾ ಮಾರ್ಗದರ್ಶಿಯಾದ ಶ್ರೀ ವೆಂಕಟೇಶ ದಾಸ್ ಅವರು ಒಂದು ನರಸಿಂಹ ಭಜನೆಯನ್ನು ಹೇಳಿಕೊಟ್ಟರು. ದೆಹಲಿ ನಗರದ ಹೊರವಲಯದ ಬೀದಿಗಳನ್ನು ದಾಟಿದ ಬಸ್ ನಿಧಾನವಾಗಿ ಹರಿದ್ವಾರದ(ಮೀರತ್ ಹೈವೇ)ಕಡೆ ಹೊರಟಿತು. ನಮ್ಮಲ್ಲಿ ಬಹುತೇಕರು ಹಿಂದಿನ ರಾತ್ರಿ ಸರಿಯಾಗಿ ನಿದ್ರೆ ಮಾಡಿರಲಿಲ್ಲ. ಬಸ್ಸಿನ ಕಿಟಕಿಯ ಪರದೆಗಳನ್ನು ಎಳೆದು ನೋಡನೋಡುತ್ತಿದ್ದಂತೆ ಎಲ್ಲರೂ ನಿದ್ರೆಗೆ ಜಾರಿದರು. ಮಧ್ಯಾಹ್ನ ಒಂದುವರೆ ಗಂಟೆಯ ಸುಮಾರಿಗೆ ಹೆದ್ದಾರಿಯ ಪಕ್ಕದಲ್ಲಿರುವ ಡಾಬಾ ಒಂದರ ಎದುರು ನಮ್ಮ ಬಸ್ ನಿಂತಿತು. ಬೆಳಗಿನ ಉಪಹಾರದಂತೆ ಮಧ್ಯಾಹ್ನದ ಊಟವನ್ನು ಸಹ ಟ್ರಾವೆಲ್ಸ್ ನವರು ಪ್ಯಾಕ್ ಮಾಡಿಸಿಕೊಂಡು ತಂದಿದ್ದರು. ಇಲ್ಲಿ ಸ್ವಲ್ಪ ಫ್ರೆಶ್ ಅಪ್ ಆಗಿ ಸುಧಾರಿಸಿಕೊಂಡು ಮಧ್ಯಾಹ್ನದ ಊಟವನ್ನು ಮಾಡಿದೆವು. ಹರಿದ್ವಾರದಲ್ಲಿ ಸಂಜೆ ಗಂಗಾರತಿಯನ್ನು ನೋಡುವ ಕಾರ್ಯಕ್ರಮ ಇದ್ದುದರಿಂದ ತಡ ಮಾಡದೆ ಮತ್ತೆ ಎಲ್ಲರೂ ಬಸ್ಸಿನಲ್ಲಿ ಕುಳಿತುಕೊಂಡೆವು. ನಿಗದಿತ ವೇಳೆಗಿಂತ ಅರ್ಧ ಗಂಟೆ ಮುಂಚಿತವಾಗಿ, ನಾಲ್ಕುವರೆಗೆಲ್ಲ ನಾವು ಹರಿದ್ವಾರದಲ್ಲಿದ್ದೆವು.
ಹರಿದ್ವಾರದ ಹೋಟೆಲ್ "ತ್ರಿಮೂರ್ತಿ"ಯಲ್ಲಿ ನಮಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿತ್ತು. ನಮಗೆ ನಿಗದಿತವಾಗಿದ್ದ ರೂಮುಗಳಲ್ಲಿ ಸಾಮಾನುಗಳನ್ನು ಇಳಿಸಿ, ವೆಂಕಟೇಶ್ ದಾಸ ಅವರ ಸೂಚನೆಯಂತೆ ತಕ್ಷಣವೇ ಗಂಗಾ ಸ್ನಾನ ಮಾಡಿ ಬರಲು ಹೊರಟೆವು. ಹೋಟೆಲ್ಲಿನ ಮುಖ್ಯ ದ್ವಾರದಿಂದ ಸುಮಾರು 200 ಅಡಿ ದೂರದಲ್ಲಿ ಗಂಗಾ ಸ್ನಾನ ಮಾಡುವ ಘಾಟ್ ಇತ್ತು. ಘಾಟ್ ನ ಮೆಟ್ಟಿಲುಗಳ ಮೇಲ್ಭಾಗದಲ್ಲಿ ಒಂದು ಮಾರುತಿ ಮಂದಿರವಿತ್ತು. ಘಾಟಿನಲ್ಲಿ ಹೇಳಿಕೊಳ್ಳುವಂತಹ ಜನಸಂದಣಿ ಇರಲಿಲ್ಲ. ಸ್ನಾನ ಮಾಡುವ ತಯಾರಿಯಲ್ಲಿಯೇ ಬಂದಿದ್ದರಿಂದ ಸ್ನಾನಘಟ್ಟದ ಮೆಟ್ಟಿಲುಗಳನ್ನು ಇಳಿದು ಸೊಂಟದವರೆಗೆ ನೀರಿನಲ್ಲಿ ನಿಂತುಕೊಂಡು ಮನದಣಿಯೇ ಮುಳುಗು ಹಾಕಿದೆವು. ಇಲ್ಲಿ ನೀರಿನ ಸೆಳೆತ ಜೋರಾಗಿತ್ತು. ಸ್ವಲ್ಪ ಹೆಜ್ಜೆ ತಪ್ಪಿ ಮುಂದೆ ಹೋದರೂ ಕೊಚ್ಚಿಕೊಂಡು ಹೋಗಿ ಬಿಡುವ ಅಪಾಯವಿತ್ತು. ಆದರೆ ಕಬ್ಬಿಣದ ಸರಳುಗಳನ್ನು ಉದ್ದಕ್ಕೂ ಹಾಕಿಟ್ಟಿರುವುದರಿಂದ ಅದನ್ನು ಹಿಡಿದುಕೊಂಡು ಮುಳುಗು ಹಾಕಬಹುದಿತ್ತು. ಈ ಹಿಮಾಲಯವೆಂದರೆ ಹರನ ಆವಾಸ ಸ್ಥಾನ. ಮನಸ್ಸಿನ ತುಂಬಾ ಶಿವನನ್ನು ತುಂಬಿಕೊಂಡು ಮತ್ತೆ ಮತ್ತೆ ಮುಳುಗು ಹಾಕಿದೆವು. ನೀರಿನಲ್ಲಿ ನಿಂತೇ ಸೂರ್ಯನಿಗೆ ಅರ್ಘ್ಯವನ್ನು ಸಹ ಕೊಟ್ಟೆನು. ನಿರ್ಮಲವಾಗಿ ಹರಿಯುತ್ತಿರುವ ಈ ಗಂಗೆಯಲ್ಲಿನ ಸ್ನಾನ ಮೈ ಮನಸ್ಸುಗಳನ್ನು ಹಗುರಾಗಿಸಿ ಪುಳಕಗೊಳಿಸಿತು.
ಗಂಗಾ ಸ್ನಾನ ಮುಗಿಸಿ ರೂಮಿಗೆ ಹೋಗಿ ಬಟ್ಟೆ ಬದಲಾಯಿಸಿ "ಹರ್ ಕೀ ಪೌರಿ"ಯಲ್ಲಿ ಗಂಗಾರತಿಯನ್ನು ನೋಡಲು ದೌಡಾಯಿಸಿದೆವು. ನಮ್ಮ ಪ್ರಧಾನ ಮಂತ್ರಿ ಮೋದಿಜಿ ಅವರು ವಾರಣಾಸಿಯ ಘಾಟ್ ಗಳಲ್ಲಿ ಗಂಗಾರತಿಯನ್ನು ವಿದೇಶಿ ಗಣ್ಯರಿಗೆ ಹೆಮ್ಮೆಯಿಂದ ತೋರಿಸುವುದನ್ನು ವಾರ್ತೆಗಳಲ್ಲಿ ನೋಡಿದಾಗಲೆಲ್ಲ ಈ ಗಂಗಾರತಿಯನ್ನು ನಾನೂ ಸಹ ನೋಡಬೇಕೆಂಬ ಅದಮ್ಯವಾದ ಆಸೆ ಮನಸ್ಸಿನಲ್ಲಿ ಇತ್ತು. ಇಂದು ಆ ಸುಮುಹೂರ್ತ ಕೂಡಿ ಬಂದಿತ್ತು. ಸೇತುವೆಯನ್ನು ದಾಟಿ ಅತ್ತ ಕಡೆಯ ದಂಡೆಗೆ ಹೋದ ನಮಗೆ ಅಲ್ಲಿಯ ಪೂಜಾರಿಯ ಕಡೆಯ ಮನುಷ್ಯನೊಬ್ಬ ತಲಾ ಒಂದು ನೂರು ರೂಪಾಯಿಗಳನ್ನು ತೆಗೆದುಕೊಂಡು ಸೀದಾ ಘಾಟಿನ ಮೊದಲ ಮೆಟ್ಟಿಲಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ. ಅಸಾಧ್ಯವಾದ ಆ ಜನಸಂದಣಿಯಲ್ಲಿ ಅವನ ಬೆನ್ನು ಬಿಡದೆ ಹೋದ ನಮಗೆ, ಅವನು ನುಗ್ಗಿಸಿ, ಒಮ್ಮೆಲೆ ಗಂಗಾ ಘಾಟ್ ನ ಕಟ್ಟಡದ ಒಳಭಾಗಕ್ಕೆ ಕರೆದೊಯ್ದ. ಅಲ್ಲಿ ಗಂಗೆಯ ದಡದಲ್ಲಿ ಗಂಗಾಮಾತೆಯ ಮೂರ್ತಿಯನ್ನು ಪೂಜಿಸುತ್ತಾ, ಬೃಹತ್ತಾದ ಆರತಿಯೊಂದನ್ನು ತಯಾರು ಮಾಡುತ್ತಿದ್ದವನ ಸನಿಹ ನಮ್ಮನ್ನು ತಲುಪಿಸಿದ. ಈಗ ನಾವೆಲ್ಲ ಗಂಗಾ ಘಾಟಿನ ಮೊದಲನೇ ಮೆಟ್ಟಿಲ ಮೇಲಿದ್ದೆವು. ನಮ್ಮ ಎಡಗಡೆ ಒಂದು ಪುಟ್ಟ ಗಂಗಾಮಂದಿರವಿತ್ತು. ನಮ್ಮ ಬಲಗಡೆ ಗಂಗಾರತಿಗಾಗಿಯೇ ಸ್ಥಾಪಿಸಿದ ಪುಟ್ಟ ಪುಟ್ಟ ಗಂಗಾ ಪುತ್ಥಳಿಗಳಿದ್ದವು. ( ಬಹುಶಃ ಹಿತ್ತಾಳೆಯವು, ಬಂಗಾರದ ಬಣ್ಣದಲ್ಲಿದ್ದವು ) ಎದುರಿನಲ್ಲಿ ಗಂಗಾ ಮಾತೆ. ಎದುರು ದಡದಲ್ಲಿ ಕಿಕ್ಕಿರಿದು ಸೇರಿದ ಜನ ಸಮೂಹ. ನಾವು ನಿಂತ ದಂಡೆಯಲ್ಲಿ ಮಾತ್ರ ಗಂಗಾರತಿ ನಡೆಯುವುದಿತ್ತು. ಸೂರ್ಯಾಸ್ತವಾಗುತ್ತಿದ್ದಂತೆ ಎಲ್ಲಾ ಗುಡಿಗಳಲ್ಲಿ ಘಂಟಾನಾದದ ಜೊತೆ ಭಜನೆ ಆರಂಭವಾಯಿತು ಸೇರಿದ್ದ ಜನ ಸಮೂಹ ಸಹ ಆ ಭಜನೆಯ ಜೊತೆ ತಮ್ಮ ಧ್ವನಿಯನ್ನು ಸೇರಿಸುತ್ತಿದ್ದರು. ಎಲ್ಲಾ ಗಂಗಾ ಪುತ್ಥಳಿಗಳ ಎದುರು ಇದ್ದ ಎಲ್ಲಾ ಪೂಜಾರಿಗಳು ಬೃಹತ್ತಾದ ಆರತಿಯನ್ನು ಹೊತ್ತಿಸಿಕೊಂಡು ಪ್ರದಕ್ಷಿಣಾಕಾರದಲ್ಲಿ ಆ ಜ್ವಾಲೆಯ ಉಂಡೆಯನ್ನು ತಿರುಗಿಸುತ್ತಿದ್ದರು. ಜನರು ಭಕ್ತಿ ಭಾವ ಪರವಶರಾಗಿ ಗಂಗಾಮಾತೆಯ ಜೈಕಾರವನ್ನು ಮಾಡುತ್ತಿದ್ದರು. ಸಹಸ್ರ ಸಹಸ್ರ ವರ್ಷಗಳಿಂದ ನಿರಂತರವಾಗಿ ಹರಿಯುತ್ತ ಈ ಭಾರತ ಭೂಮಿಯನ್ನು ಪವಿತ್ರವಾಗಿಸಿದ ಗಂಗಾಮಾತೆಗೆ ಭಕ್ತರೆಲ್ಲರ ಕೃತಜ್ಞತಾಪೂರ್ವಕ ನಮನದ ದೃಶ್ಯವದು. "ಅಮ್ಮಾ ಗಂಗಾ, ನೀನು ಈ ನೆಲದ ಜೀವನಾಡಿ. ಪಾಪನಾಶಿನಿ ನೀನು. ಮೋಕ್ಷದಾಯಿನಿ ನೀನು. ಅನುಕ್ಷಣವೂ ನಿನ್ನನ್ನು ಅಪವಿತ್ರ ಗೊಳಿಸುತ್ತಿರುವ ಈ ಭಕ್ತರ ಪಾಪಗಳನ್ನು ನಿನ್ನ ಉದರದಲ್ಲಿ ಭರಿಸಿಕೊಂಡರೂ ಸಹ ಗಂಭೀರಳಾಗಿ ಪ್ರವಹಿಸುತ್ತಿರುವ ನಿನಗಿದೋ ನನ್ನ ನಮನಗಳು" ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಈ ದಿವ್ಯ ಕ್ಷಣವನ್ನು, ಅದ್ಭುತ ದೃಶ್ಯವನ್ನು ಸಾಧ್ಯವಾಗಿಸಿದ ಆ ವಿಶ್ವೇಶ್ವರನಿಗೆ ಮನಸ್ಸಿನಲ್ಲಿ ನಮಿಸುತ್ತಾ ಗಂಗಾಪ್ರೋಕ್ಷಣೆಗೆ ತೆರೆದುಕೊಂಡೆನು.
ಈ "ಹರ್ ಕಿ ಪೌರಿ" ಕುರಿತು ಸ್ವಲ್ಪ ವಿವರಣೆ ಅವಶ್ಯಕ ಎನಿಸುತ್ತದೆ.
"ಹರ್ ಕಿ ಪೌರಿ" ಎಂದರೆ ಭಗವಂತನ ಮೆಟ್ಟಿಲು ಎಂದರ್ಥ. ಇಲ್ಲಿ ಗೋಡೆಯೊಂದರ ಮೇಲೆ ಶ್ರೀ ವಿಷ್ಣುವಿನ ಪಾದದ ಗುರುತಿದೆ. ಈ ಸ್ಥಳದಲ್ಲಿಯೇ ಗಂಗೆ ಹಿಮಾಲಯವನ್ನು ಬಿಟ್ಟು ಬಯಲಿನ ಕಡೆಗೆ ಹರಿಯುತ್ತಿದ್ದಾಳೆ. ಇಲ್ಲಿ ಗಂಗಾರತಿ ನಡೆಯುವ ಸ್ಥಳವನ್ನು ಬ್ರಹ್ಮಕುಂಡ ಎಂದೆನ್ನುತ್ತಾರೆ. ಇದು ಅತ್ಯಂತ ಪವಿತ್ರವಾದ ಸ್ಥಳ‌. ಸಮುದ್ರ ಮಥನದ ನಂತರ ಅಮೃತ ಕಲಶವನ್ನು ಗರುಡ ಸಾಗಿಸುತ್ತಿದ್ದಾಗ ಅಮೃತ ಕುಂಡದಿಂದ ನಾಲ್ಕು ಹನಿ ಅಮೃತ ತುಳುಕಿ ಭೂಮಿಯ ಮೇಲೆ ಬಿದ್ದಿತ್ತಂತೆ. ಆ ನಾಲ್ಕು ಅಮೃತಬಿಂದುಗಳು ಬಿದ್ದ ಸ್ಥಳಗಳಲ್ಲಿ ಈಗ ಕುಂಭಮೇಳಗಳು ನಡೆಯುತ್ತವೆ. ಆ ನಾಲ್ಕು ಸ್ಥಳಗಳ ಪೈಕಿ ಈ ಹರ್ ಕೀ ಪೌರಿ ಕೂಡ ಒಂದು. ಇದೇ ಹರ್ ಕಿ ಪೌರಿಯಲ್ಲಿ ಕುಂಭಮೇಳ ನಡೆಯುತ್ತದೆ ಈ 'ಹರ್ ಕೀ ಪೌರಿ'ಯು ಗಂಗಾ ನಾಲೆಯ ಮೇಲೆ ಇದೆ. ಮೂಲ ನದಿಯಿಂದ ಹೆಚ್ಚಿನ ಅಂಶ ನೀರನ್ನು ಈ ಗಂಗಾ ನಾಲೆಯಲ್ಲಿ ಹರಿಸುತ್ತಾರೆ. ಹಾಗಾಗಿ ನದಿಗಿಂತಲೂ ಈ ನಾಲೆಯೇ ಬೃಹತ್ತಾಗಿ ಕಾಣಿಸುತ್ತದೆ.
ಗಂಗಾರತಿ ಮುಗಿಯುತ್ತಿದ್ದಂತೆ ಸ್ವಲ್ಪ ಜನಸಂದಣಿ ಕಡಿಮೆಯಾಗಲೆಂದು ಅಲ್ಲಿಯೇ ಕಾದೆವು. ನಂತರ ಗುಡಿಯ ಪ್ರಾಕಾರದಿಂದ ಹೊರ ಬಿದ್ದು ರಸ್ತೆಗೆ ಇಳಿದರೆ ರಸ್ತೆಯಲ್ಲಿ ಜಾತ್ರೆಯ ಪುನರಾವರ್ತನೆ. ನಮ್ಮ ಬೃಹತ್ ಗುಂಪು ಚೆಲ್ಲಾಪಿಲ್ಲಿಯಾಗಿ ನಾವು 9 ಜನ ಮಾತ್ರ ಕಷ್ಟಪಟ್ಟು ಒಬ್ಬರಿಗೊಬ್ಬರು ಆತುಕೊಂಡಿದ್ದೆವು. ಮತ್ತೆ ಸೇತುವೆಯನ್ನು ದಾಟಿ ಆಟೋಗಳು ಇದ್ದ ಕಡೆ ಬಂದೆವು. ಆಟೋ ಹಿಡಿದು ರೂಮಿಗೆ ಬಂದಾಗ ಬಿಸಿಬಿಸಿ ಊಟ ನಮಗಾಗಿ ಕಾಯುತ್ತಿತ್ತು "ನಾಳೆ ಮುಂಜಾನೆ ಯಮುನೋತ್ರಿ ದರ್ಶನಕ್ಕೆ ಹೋಗಬೇಕಾಗಿದೆ. ಬೆಳಿಗ್ಗೆ ಎಲ್ಲರೂ 3:00 ಗಂಟೆಗೆಲ್ಲ ಎದ್ದು, ನಾಲ್ಕು ಗಂಟೆಗೆ ಗಾಡಿಯಲ್ಲಿ ಕುಳಿತಿರಬೇಕು" ಎಂಬ ಸೂಚನೆ ವೆಂಕಟೇಶ್ ಜಿ ಅವರಿಂದ. ತಡ ಮಾಡದೆ ಊಟ ಮುಗಿಸಿ 9.45ಕ್ಕೆಲ್ಲ ನಿದ್ದೆಗೆ ಜಾರಿದೆವು.



                                                                                                                    ( ಸಶೇಷ...)