Sunday 15 September 2013

ಮೊದಲ ತಿರುವು

          ನಾನು sslcಯಲ್ಲಿ ೮೩% ಅಂಕ ಗಳಿಸಿ ಪಾಸಾಗಿದ್ದುದು ನನ್ನ ಅಪ್ಪಯ್ಯನ ಮಟ್ಟಿಗೆ ಬಹಳ ಖುಷಿಯ ವಿಷಯವಾಗಿತ್ತು. ೬ ಮಕ್ಕಳ  ಸಂಸಾರ ತೂಗಿಸುವದರಲ್ಲಿ ಹೈರಾಣಾಗಿದ್ದ  ಅಪ್ಪಯ್ಯನಿಗೆ ನನ್ನ ಮಾರ್ಕ್ಸ್ ಕಾರ್ಡ್ ನನಗೊಂದು ನೌಕರಿ ಕೊಡಿಸೀತೆಂಬ ನಿರೀಕ್ಷೆ ಹುಟ್ಟಿಸಿದ್ದು ಸಹಜ. ಅದಕ್ಕೆ ಸರಿಯಾಗಿ,  ಈ ಬಡವನ ಮಗ ಮುಂದೆ ಓದಿ  ದೊಡ್ಡ ಮನುಷ್ಯನಾಗಿ ಬಿಟ್ಟರೆ ತಮ್ಮ ದೊಡ್ಡಸ್ತಿಕೆಗೆ ಕುಂದು ಬಂದೀತೆಂದು ಭಾವಿಸುವ ದೊಡ್ಡವರು ಎನಿಸಿಕೊಂಡವರು ತಲಾಶ್ ಮಾಡಿ ನಾ ಪಡೆದ ಮಾರ್ಕ್ಸ ಗೆ ಪೋಸ್ಟ್ & ಟೆಲಿಗ್ರಾಫ್ ನಲ್ಲಿ  ಡೈರೆಕ್ಟ್ ಆಗಿ ಜೂನಿಯರ್ ಇಂಜಿನಿಯರ್ ಹುದ್ದೆ ಸಿಗುತ್ತದೆ  ಎಂದು ನನ್ನ ಅಪ್ಪಯ್ಯನ ತಲೆ ತುಂಬಿ ಬಿಟ್ಟಿದ್ದರು. ಇದ್ಯಾವುದರ ಪರಿವೆಯೇ ಇಲ್ಲದ ನಾನು ಕಾಲೇಜ್ ಗೆ ಹೋಗುವ ಸವಿಗನಸು ಕಾಣ್ತಾ ಇದ್ದೆ.
         ಎಸ್ಸೆಲ್ಸಿಯಲ್ಲಿ ೮೩%  ಗಳಿಸಿದ್ದು ನನಗೆ ನಂಬಿಕೆನೇ ಬರ್ತಾ ಇರ್ಲಿಲ್ಲ. ರಿಸಲ್ಟ್ ಬಂದ  ದಿನ ನಾನು ಹೈಸ್ಕೂಲಿಗೆ ಹೋಗಿರಲಿಲ್ಲ.ಶಿರಸಿಯಿಂದ  ನಾನು ಶಾಲೆಗ ಹೋಗಲು ಉಳಿದುಕೊಂಡ ಮನೆಗೆ ಫೋನ್ ಮಾಡಿ ರಿಸಲ್ಟ್ ಬಂದಿದೆಯ ಎಂದು  ಕೇಳಿದೆ. ಅಕ್ಕ ಫೋನ್ ತಗೊಂಡಿದ್ಲು. ನನಗೋ ಎದೆ ಡವಡವ ಎನ್ನುತ್ತಾ ಇತ್ತು. ಮೊದ್ಲು ಕ್ರಷ್ಣಮೂರ್ತಿ ರಿಸಲ್ಟ್ ಏನಾಗಿದೆ ಎಂದು ಕೇಳ್ದೆ.  ಸೆಕೆಂಡ್ ಕ್ಲಾಸ್ ಎಂದ್ಲು. ನಂತರ ಶ್ರೀಪತಿದು ಏನಾಗಿದೆ ಎಂದೆ . ಸೆಕೆಂಡ್ ಕ್ಲಾಸ್ ಎಂದ್ಲು. ನಂತರ ಒಬ್ಬೊಬ್ಬರದ್ದಾಗಿ  ಸುನಂದ, ಚಂದ್ರು,  ಸೂರಿ, ಸುಮಂಗಲ, ಮಂಜುನಾಥ,ದತ್ತು ಹೀಗೆ ಎಲ್ಲರ ಮಾರ್ಕ್ಸೂ ಕೇಳ್ದೆ. ಯಾರೂ ಫಸ್ಟ್ ಕ್ಲಾಸ್ ಸಹಾ ಮಾಡಿರ್ಲಿಲ್ಲ. ಅಕ್ಕನ ಸ್ವರ ಗಂಭೀರವಾಗಿತ್ತು. ನನಗೆ ಹೆದರಿಕೆಯಿಂದ ಸ್ವರ ಹೊರಗೇ ಬರ್ತಾ ಇರ್ಲಿಲ್ಲ. ಇವರೆಲ್ಲ ಕ್ಲಾಸ್ನಲ್ಲಿ  ನನ್ನ ಸರೀಕರು ಅಥವಾ ಸ್ಪರ್ಧಿಗಳು. ಅಕ್ಕ ಇನ್ನೂ ಗಂಭೀರವಾಗಿ 'ಏನು? ನಿನ್ನ ರಿಸಲ್ಟ್ ಕೇಳ್ತಾನೆ ಇಲ್ವಲ್ಲ?' ಎಂದಾಗ ತೀರ ಕುಗ್ಗಿದ ಧ್ವನಿಯಲ್ಲಿ 'ಏನಾಗಿದೆ?' ಎಂದೆ . ಸ್ವರದಲ್ಲಿ ಸಂತೋಷ ಸೂಸ್ತ '೮೩% ಆಗಿದೆ'  ಎಂದ್ಲು . ಸಂತೋಷಾತಿರೇಕದಿಂದ "ಎಷ್ಟೂ" ಎಂದು ಕೂಗಿದ್ದಕ್ಕೆ ಸುತ್ತ   ಇದ್ದವರೆಲ್ಲಾ ತಿರುಗಿ ನನ್ನ ಕಡೆ ನೋಡತೊಡಗಿದ್ರು.     ,     .              ಮನೆಯಲ್ಲಿ ಅಪ್ಪಯ್ಯನ ಎಲ್ಲ ಮನವೊಲಿಕೆ ಹಾಗು ಸಿಟ್ಟು ಸೆಡವುಗಳನ್ನು ಮೀರಿ ಕಾಲೇಜಿಗೆ ಹೋಗುತ್ತೇನೆನ್ನುವ  ನನ್ನ ಹಠ  ಜಾಸ್ತಿ ಆದಾಗ ಅಪ್ಪಯ್ಯ ಕೈಚೆಲ್ಲಿ, "ಏನ್ ಬೇಕಾದ್ರು ಮಾಡಿಕೋ, ನಂಗೆ ಮಾತ್ರ ನಿನ್ನ ಓದಿಸೋ ತ್ರಾಣ ಇಲ್ಲ" ಎಂದು  ಒಂದು ತರಹ ನಿರ್ಲಿಪ್ತ ಸಮ್ಮತಿ ನೀಡಿದ. ಶಿರಸಿಯಲ್ಲಿ ಜುಲೈ ೧೫ರ ನಂತರ ಕಾಲೇಜ್ ಶುರು ಆಗೋದು ರೂಢಿ . ಅಷ್ಟರೊಳಗೆ ಯಾರಾದ್ರು ದಾನಿಯನ್ನ ಹುಡುಕಿಕೊಳ್ಳಬೇಕಿತ್ತು.. ಸೀದಾ ಗೋಕರ್ಣಕ್ಕೆ ಭಾವನ ಮನೆಗೆ ಹೋದೆ. ಕಾಲೇಜಿಗೆ ಸೇರಬೇಕೆಂಬ ನನ್ನ ಅಭಿಲಾಷೆಯನ್ನ ಅವನೆದುರು ಹೇಳಿಕೊಂಡೆ. ನನ್ನ ಮಾರ್ಕ್ಸ್ ನೋಡಿ ಖುಷಿಯಾದ ಭಾವ ತಾನು ಸಹಾಯ ಮಾಡುವದಾಗಿ ಹೇಳಿ ಧರ್ಮಸ್ಥಳದಲ್ಲಿ ಇದ್ದ ತನ್ನ ಪರಿಚಯದವರೊಬ್ಬರಿಗೆ ಫೋನ್ನಲ್ಲಿ ಮಾತಾಡಿ ಅವರ ಕಾಲೇಜಿನಲ್ಲಿ ನನಗೊಂದು ಸೀಟಿಗೆ ವ್ಯವಸ್ಥೆ ಮಾಡಿದ ಮತ್ತು ತಡ ಮಾಡದೆ ನನ್ನ ಕರ್ಕೊಂಡು ಉಜಿರೆಗೆ ಹೋದ .
        ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ತುಂಬಾ ಸುಂದರವಾದ ಕಟ್ಟಡದಲ್ಲಿತ್ತು ಪ್ರಿನ್ಸಿಪಾಲರಾದ ಶ್ರೀ ಪ್ರಭಾಕರ್ ಅವರು ನನ್ನ ಮಾರ್ಕ್ಸ್ ಕಾರ್ಡ್ ನೋಡಿ ಎಲ್ಲ ಅಡ್ಮಿಶನ್ ಮುಗಿದಿದ್ರು ಸಹ ನನಗೆ ಸೀಟ್ ನೀಡಿ ತಮ್ಮ ಫ್ರೀ ಹಾಸ್ಟೆಲ್ ಸಿದ್ಧವನದಲ್ಲಿ ಸಹಾ ನನಗೆ ಒಂದು ಸೀಟ್ ಕೊಟ್ಟರು ಅಲ್ಲಿಗೆ ಮೊದಲ ತಡೆ ದಾಟಿದಂತಾಗಿತ್ತು.                                                     ನನ್ನ ಜೀವನದ ಮೊದಲ ತಿರುವನ್ನು ನೀಡಿದ ಗೋಕರ್ಣ ಮಹಾದೇವ ಭಾವ ನನ್ನ ಪಾಲಿನ ಪ್ರಾತಃಸ್ಮರಣೀಯ ವ್ಯಕ್ತಿ.