Saturday 11 January 2014

ಮಹಾ ತಾಯಿ

      ನನ್ನ ಅಪ್ಪಯ್ಯ ಒಬ್ಬ ತುಂಬ ಸರಳ, ಸತ್ಯನಿಷ್ಠ, ಭಾವ ಜೀವಿ. ತುಂಬಾ ಮುಗ್ಧ ಕೂಡಾ. ಪ್ರಾಯಶಃ ಅವನಿಗೆ ದೊರೆತ ಅವನಮ್ಮನ ಶ್ರೀರಕ್ಷೆ ಅವನ ಯೋಚನಾ ಪರಿಧಿಯೊಳಗೆ ಯಾವುದೇ ತರಹದ ಕೊಂಕುತನಗಳು  ಪ್ರವೇಶಿಸದಂತೆ ಅವನ ಜೀವನ ಪರ್ಯಂತ ಅವನನ್ನು ಕಾಪಾಡಿರಬೇಕು. ಅಂತಹ ಮಹಾತಾಯಿಯ ಜೀವನಗಾಥೆ ಈ ಬರಹದ ವಸ್ತು.
.       ಸಿದ್ದಾಪುರ ತಾಲೂಕಿನ "ಡೊ೦ಬೆ" ಗ್ರಾಮದಲ್ಲಿ ಅತ್ಯಂತ ಅನುಕೂಲಸ್ತ, ಗೌರವಾನ್ವಿತ ಅವಿಭಕ್ತ ಕುಟುಂಬದ ಸದಸ್ಯ ಗಣಪತಿ ಭಟ್ಟರ ಧರ್ಮಪತ್ನಿಯಾದ "ಸರಸ್ವತಿ" ಸೌಮ್ಯ ಸ್ವಭಾವದ ಸುಶೀಲೆ. ತುಸು ಎಣ್ಣೆಗಪ್ಪು ಎನ್ನಬಹುದಾದರೂ ಸುಲಕ್ಷಣೆ ಆದ ಕಾರಣ ಹಾಗೂ ಸಂಸಾರದ ಹಾಲಿನಲ್ಲಿ ಜೇನಾಗಿ ಬೆರೆತ ಕಾರಣ ಮನೆಯಲ್ಲೂ , ಊರಲ್ಲೂ ಸರ್ವಮಾನ್ಯಳು . ಪತಿಗಾದರೋ ಸಂಸಾರಕ್ಕಿಂತ ಅಧ್ಯಾತ್ಮ ಮತ್ತು  ಸಾಧು ಸಂತರ ಸಹವಾಸವೇ ಹೆಚ್ಚು ಪ್ರಿಯ . ಅದಕ್ಕೆ ತಕ್ಕಂತೆ ಅಮಾಯಕ ವ್ಯಕ್ತಿತ್ವ . ಕಾರಣ ಸಹಜವಾಗಿಯೇ ಪತ್ನಿಗೆ ಗೃಹಕೃತ್ಯದ ಜೊತೆ ಜೊತೆಗೇ ಅಲ್ಪಸ್ವಲ್ಪ ವ್ಯವಹಾರದ ಸಾಂಗತ್ಯದ ಅನಿವಾರ್ಯತೆ ಕೂಡ ಇತ್ತು . ವಿಶಾಲ ಕೂಡು ಕುಟುಂಬದಲ್ಲಿ ತನ್ನವೇ ಆದ ಹನ್ನೊಂದು ಮಕ್ಕಳ ಸೈನ್ಯ ಕೂಡ ಸೇರಿತ್ತು .
        ಇನ್ನು ಆ  ಮನೆ ಹಾಗು ಅಲ್ಲಿಯ ಕೆಲ ವಿಶೇಷಗಳು ಸಹ ಉಲ್ಲೇಖಯೋಗ್ಯವೇ ಆಗಿವೆ
         ಸದ್ಧರ್ಮಪಾಲನೆಯನ್ನು ವ್ರತವಾಗಿರಿಸಿಕೊಂಡಿದ್ದ ಕುಟುಂಬಕ್ಕೆ ಸಮೃದ್ಧಿಯ ಕೊರತೆಯೇನೂ ಇರಲಿಲ್ಲ. ಹಲವು ಎಕರೆ ಅಡಿಕೆ ತೋಟದ ಒಡೆಯರಾಗಿದ್ದ ಭಟ್ಟರ ಮನೆಯಲ್ಲಿ ವಿವಿಧ  ಒಡವೆ ವಸ್ತುಗಳೂ ಹೇರಳವಾಗಿದ್ದವು. ಭಟ್ಟರ ಮನೆಯ ಹೆಂಗಸರು ತೊಟ್ಟುಕೊಂಡ ಆಭರಣಗಳನ್ನು ನೋಡಲೆಂದೇ ಮದುವೆ ಇತ್ಯಾದಿ ಮಂಗಳಕಾರ್ಯಗಳಲ್ಲಿ ಜನ ಕುತೂಹಲಿಗಳಾಗಿರುತ್ತಿದ್ದರು ಎಂದರೆ ಅವರ ಸಂಪತ್ತಿನ ಒಂದು ಕ್ಷ್ರಿಪ್ರ ಪಾರ್ಶ್ವನೋಟ ನಮಗೆ ಲಭ್ಯವಾಗುತ್ತದೆ.                              ಇನ್ನೊಂದು ವಿಶೇಷವೂ ಆ ಮನೆಯಲ್ಲಿತ್ತು . ಅವರ ಮನೆಯ ಬಾವಿಯಲ್ಲಿ ಒಂದು 'ಚೌಡಿ' ವಾಸವಾಗಿತ್ತು. ಸೌಮ್ಯ ಸ್ವಭಾವದ ಅದು ತುಂಬಾ ವಿನೋದಪ್ರಿಯೆ ಕೂಡ. ಅದು ಖುಷಿಯಾಗಿದ್ದಾಗ ಯಾರಾದರೂ ನೀರು ಸೇದಲು ಭಾವಿಗೆ ಕೊಡ ಇಳಿಬಿಟ್ಟರೆ ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಡುತ್ತಿತ್ತು . ಮೇಲಿದ್ದವರು ಜೋರಾಗಿ ಎಳೆದಾಗ ಒಮ್ಮೆಗೇ ಕೈಬಿಟ್ಟು ಬಿಡುತ್ತಿತ್ತು . ಎಳೆತದ ರಭಸಕ್ಕೆ ಇವರು ಹಿಂದೆ ಬಿದ್ದಾಗ ಒಳಗಿನಿಂದ  ಜೋರಾಗಿ ನಗಾಡುತ್ತಿತ್ತು. ಬಾವಿಯಲ್ಲಿ ಇಣುಕಿ ನೋಡಿದರೆ ಏನೂ ಕಾಣುತ್ತಿರಲಿಲ್ಲ.ಇನ್ನು ಈ  ಮನೆಯ ಕಂದಮ್ಮಗಳು  ಹಠ ಮಾಡಿ ರಚ್ಚೆ ಹಿಡಿದು ಅತ್ತರೆ ಕೋಪಗೊಂಡು ಮಗುವನ್ನು ಎತ್ತಿಕೊಂಡು ಹೋಗಿ ಬಾವಿಯಲ್ಲಿ ಇಟ್ಟುಕೊಂಡು ಬಿಡುತ್ತಿತ್ತು. ಮಗುವಿನ ಅಳು ಬಾವಿಯೊಳಗಿಂದ ಕೇಳಿ ಬರುತ್ತಿದ್ದರೂ ಮಗು ಮಾತ್ರ ಕಾಣುತ್ತಿರಲಿಲ್ಲ. ನಂತರ ಅದಕ್ಕೆ ತಪ್ಪುಗಾಣಿಕೆ ಹಾಗೂ ಪೂಜೆ ಸಲ್ಲಿಸಿದರೆ  ಯಥಾವತ್ ತೊಟ್ಟಿಲಲ್ಲಿ  ಮಗುವನ್ನು ಮಲಗಿಸಿ  ಇಡುತ್ತಿತ್ತು. ನಮ್ಮ ಅಪ್ಪಯ್ಯ ಮಗು ಆಗಿದ್ದಾಗ ಕೂಡ  ಇದೇ ರೀತಿ ಒಮ್ಮೆ ಮೂರು ದಿನಗಳ ಕಾಲ ಅದು ಇವನನ್ನು ಎತ್ತಿಕೊಂಡು ಹೋಗಿತ್ತಂತೆ. ಇಷ್ಟೇ ಅಲ್ಲ,  ದಿನಾ  ರಾತ್ರಿ  ಹೊಸ್ತಿಲ ಮೇಲೆ ಅದಕ್ಕಾಗಿ ವೀಳ್ಯದೆಲೆ ,ಸುಣ್ಣ ಮತ್ತು ಒಂದು ಚೊಂಬು ನೀರು ಇಡಬೇಕಿತ್ತು. ಮಾರನೆ ದಿನ ಬೆಳಿಗ್ಗೆ ನೋಡಿದರೆ  ಅದು ಖಾಲಿಯಾಗಿರುತ್ತಿತ್ತು.   ಬಾಗಿಲಲ್ಲಿ ಯಾರೇ ಮಲಗಿದ್ದರೂ ಅವರನ್ನು ರಾತ್ರಿ ಒಯ್ದು ಗದ್ದೆಯಲ್ಲಿ ಮಲಗಿಸಿಟ್ಟು ಬರುತ್ತಿತ್ತು. ಇಂತಹ ಕೆಲ ತುಂಟತನಗಳನ್ನು ಹೊರತುಪಡಿಸಿದರೆ ಅದು ಸಂಪೂರ್ಣ ನಿರುಪದ್ರವಿ ಚೌಡಿಯಾಗಿತ್ತು.     .
         ಮತ್ತೊಂದು  ವಿಶೇಷ ರೂಢಿ ಸಹ ಆ ಮನೆಯಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿತ್ತು .ಮನೆಯ ಪ್ರಧಾನ ಬಾಗಿಲ ಮೇಲೊಂದು ಮಾಡುಗುಣಿ  ಇತ್ತು . ಅದರಲ್ಲೊಂದು ಗೋಲಕ ಸದಾ ಇರುತ್ತಿತ್ತು. ಯಾವಾಗಲೂ ಅದರೊಳಗೆ ದುಡ್ಡು ಹಾಕುತ್ತಿದ್ದರೇ ವಿನಃ ಎಂದೂ ಅದರಿಂದ ತೆಗೆಯುತ್ತಿರಲಿಲ್ಲ. ಸಂಗ್ರಹಿತ ಹಣ ನಂತರ ದೇವತಾ ಕಾರ್ಯಗಳಿಗೆ ಬಳಸಲ್ಪಡುತ್ತಿತ್ತು. ನನ್ನ ಅಪ್ಪಯ್ಯನ ಒಬ್ಬ ಚಿಕ್ಕಪ್ಪನಿಗೆ ನಾಟಕದ ಖಯಾಲಿ ಇತ್ತು. ನಾಟಕ ಕಂಪನಿಗಳ ಬೆನ್ನು ಹತ್ತಿ ಹೋಗುತ್ತಿದ್ದವನಿಗೆ ಒಮ್ಮೆ ದುಡ್ಡಿನ ತೊಂದರೆ ಬಂತು. ಅಂತಹ ಸನ್ನಡತೆ ಹೊಂದಿರದ ಆತ ಮನೆಯಲ್ಲಿ ಕೇಳಲು ಹಿಂಜರಿದ. ಆಗ ಅವನಿಗೆ ಈ ಗೋಲಕದ ಮೇಲೆ ಕಣ್ಣು ಬಿತ್ತು. ಹಿರಿಯರ ಎಚ್ಚರಿಕೆಯನ್ನು ಅವಗಣನೆ ಮಾಡಿ ಯಾರೂ ಇಲ್ಲದಾಗ ಅದಕ್ಕೆ ಕೈ ಹಚ್ಚಿದ. ಆದರೆ ಅದೇ ಸಮಯಕ್ಕೆ ಸರಿಯಾಗಿ  ಅಲ್ಲಿಗೆ ಬಂದ ತನ್ನ ದೊಡ್ಡಣ್ಣನ ಕೈಗೆ ಸಿಕ್ಕಿಬಿದ್ದ. ಇದನ್ನು ಕಂಡ ನನ್ನ   ಅಪ್ಪಯ್ಯನ ದೊಡ್ಡಪ್ಪ ನಿಟ್ಟುಸಿರು ಬಿಟ್ಟು, "ಅಯ್ಯೋ , ಹುಂಡಿಗೆ ನೀ ಕೈ ಹಾಕಿದೆ ಎಂದರೆ ಇಂದಿನಿಂದಲೇ ಈ ಮನೆಯ ದುರ್ದೆಶೆ ಆರಂಭ ಆದ ಹಾಗಾಯಿತು " ಎಂದಂದು ತುಂಬಾ ಸಂಕಟ ಪಟ್ಟನಂತೆ.
        ದೊಡ್ಡಜ್ಜನ ಆತಂಕ ಕಾಕತಾಳೀಯವೋ ಎಂಬಂತೆ ನಿಜವಾಗತೊಡಗಿತು . ಈಗಿನಂತೆ ಆರೋಗ್ಯ ಸವಲತ್ತುಗಳಿಲ್ಲದ ೧೯೧೫-೨೦ರ ಸುಮಾರಿನ  ಅಂದಿನ ದಿನಗಳಲ್ಲಿ ಅದೇನು ರೋಗ ಬಂದಿತೋ, ಮನೆಯ ಜನ ಹಿರಿ ಕಿರಿಯರೆನ್ನದೆ ಒಬ್ಬೊಬ್ಬರಾಗಿ ಮಸಣದ ದಾರಿ ಹಿಡಿಯತೊಡಗಿದರು. ತನ್ನ ಗಂಡ ಹಾಗೂ ಎಂಟು ಜನ ಮಕ್ಕಳನ್ನು ನೋಡನೋಡುತ್ತಿದ್ದಂತೆ ಕಳೆದುಕೊಂಡ ಸರಸ್ವತಿಗೆ ಅತೀವ ಭಯ ಕಾಡಿರಬೇಕು. ಇನ್ನು ತಾನಿಲ್ಲಿ ಇರಲಾರೆ ಎನ್ನಿಸಿರಬೇಕು. ತಮ್ಮ ಪುರೋಹಿತರನ್ನು ಕರೆಯಿಸಿ ತಾನು ತನ್ನ ಉಳಿದ ಮೂವರು ಮಕ್ಕಳನ್ನು ಉಳಿಸಿಕೊಳ್ಳುವ ಸಲುವಾಗಿ ಈ ಮನೆ ತೊರೆದು ಹೋಗುವ ನಿರ್ಣಯ ಮಾಡಿರುವದಾಗಿ ತಿಳಿಸಿದಳು. ಅವರು ತುಂಬಾ ನೊಂದುಕೊಂಡರೂ ಸಹ ಇವಳ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡವರೇ  ಒಂದು ಚಕ್ಕಡಿ ಗಾಡಿಯಲ್ಲಿ ಒಂದು ಹೊಸ ಸಂಸಾರ ಪ್ರಾರಂಭಿಸಲು ಬೇಕಾಗುವಷ್ಟು ಪಾತ್ರೆ ಪಗಡಗಳನ್ನು ತುಂಬಿಸಿ ಅವಳನ್ನು ಆಶೀರ್ವದಿಸಿ ಕಣ್ಣೀರಿಡುತ್ತಾ ಬೀಳ್ಕೊಟ್ಟರು.
       "ಧೋ" ಎಂದು ಸುರಿಯುತ್ತಿದ್ದ ಆಷಾಢದ ಮಳೆಯಲ್ಲಿ ಮೂರು ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಹೊರಟಿದ್ದ ಸರಸ್ವತಮ್ಮನ
ಮುಂದೆ ಯಾವುದೇ ನಿಶ್ಚಿತ ಗುರಿ ಇರಲಿಲ್ಲ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ "ಭಡ್ತಿ" ಆಗಿದ್ದವಳು ಅಕ್ಷರಶಃ ಅನಾಥೆ ಆಗಿ ಹೋಗಿದ್ದಳು. ಆ ಹೊತ್ತಿನಲ್ಲಿ ತನಗೆ ನೆನಪಾದ ಶಿರಸಿ ತಾಲೂಕಿನ ಅರಸಿಕೇರಿಯಲ್ಲಿದ್ದ ತನ್ನ ಸಂಬಂಧಿ ಒಬ್ಬರ ಮನೆಗೆ ಗಾಡಿ
ಹೊಡೆಯಿಸಿ, ಅವರಲ್ಲಿ ತನ್ನ ಸಂಕಟವೆಲ್ಲವನ್ನು ಹೇಳಿಕೊಂಡು, ಗಾಡಿಯಲ್ಲಿ ತಂದ ಎಲ್ಲ ಕಂಚು, ಹಿತ್ತಾಳೆ ಮತ್ತು ತಾಮ್ರದ
ಪಾತ್ರೆಗಳನ್ನು ಅವರ ಸುಪರ್ದಿಗೆ ಒಪ್ಪಿಸಿ, ಮುಂದೆ ತನ್ನ ಮಕ್ಕಳು ಮನೆ ಮಾಡುವಾಗ ಅವನ್ನೆಲ್ಲ ಮರಳಿ ಕೊಂಡೊಯ್ಯುವದಾಗಿ ಹೇಳಿ ಗಾಡಿಯನ್ನು ಮರಳಿ ಕಳಿಸಿದಳು.
       ನನ್ನ ಅಪ್ಪಯ್ಯ, ಅವನ ಒಬ್ಬ ಅಣ್ಣ ಮತ್ತು ಅಕ್ಕ ಮೂವರೂ ಇನ್ನೂ ಚಿಕ್ಕವರೇ ಆಗಿದ್ದರು. ಎಷ್ಟು ದಿನ ಇವರೊಂದಿಗೆ ಆ ತಾಯಿ ಬೇರೆಯವರ ಮನೆಯಲ್ಲಿ ಹಾಗೆ ಸುಮ್ಮನೆ ಉಳಿದುಕೊಂಡಾಳು?. ಇತಿಹಾಸದ ವೈಭವ ಹೊಟ್ಟೆ ತುಂಬಿಸುವ ಬದಲು ಅದಕ್ಕೆ ಅಡ್ಡಿ ಉಂಟುಮಾಡುವದೇ  ಹೆಚ್ಚು ಎಂಬುದನ್ನು ಬಲು ಬೇಗ ಕಂಡುಕೊಂಡ ಆ ತಾಯಿ ತನ್ನೆಲ್ಲಾ ನೋವು, ದುಃಖ, ದುಮ್ಮಾನಗಳನ್ನು ನುಂಗಿ, ಯಾರದೋ ಮನೆಯ ಪಡಿಮಾಡಿನಲ್ಲಿ ಆಶ್ರಯ ಪಡೆದು, ಹಸಿದ ನಾಲ್ಕು  ಹೊಟ್ಟೆಗಳ ಸಲುವಾಗಿ ಬೇರೆಯವರ ಮನೆಯ 'ಕೆಲಸದವಳಾ'ಗ ಬೇಕಾಯಿತು. ಇದು ಹರಿಶ್ಚಂದ್ರ  ಮಹಾರಾಜನ ಚಂದ್ರಮತಿಯ ಕಥೆಗಿಂತ ಹೇಗೆ ಭಿನ್ನ?, ಹೇಳಿ.
        ದೈವರಹಿತರ ಬೆನ್ನನ್ನು ದುರಾದೃಷ್ಟ ಎಂದೂ ಬಿಡುವದಿಲ್ಲ. ಹಲವು ಮನೆ ಹಾಗು ಊರುಗಳನ್ನು ಅನಿವಾರ್ಯವಾಗಿ ಬದಲಾಯಿಸಲೇ ಬೇಕಾಗಿ ಬಂದ ಸುಶೀಲೆಯಾದ ಬಡ ವಿಧವೆಗೆ ಈ ಮಧ್ಯೆ ಇನ್ನೊಬ್ಬ ಮಗ ಹಾಗು ಮಗಳು ದೈವಾಧೀನರಾದದ್ದು ಉರಿವ ಗಾಯದ ಮೇಲೆ ಬರೆ ಎಳೆದು ಉಪ್ಪು ಸುರಿದಂತಾಗಿತ್ತು. ಆ ಮಹಾತಾಯಿ ಇದೆಲ್ಲವನ್ನೂ ನುಂಗಿಕೊಂಡು  ಹೇಗೆ ಬದುಕಿ ಉಳಿದಳು ಎಂಬುದು ನನಗಂತೂ ಇಂದಿಗೂ ಬಿಡಿಸಲಾಗದ ಕಗ್ಗಂಟು. ಈ ನಡುವೆ ಕಿರಿಯ ಮಹಾಬಲೇಶ್ವರ ಹೇಗೋ ಎರಡನೇ ಇಯತ್ತೆ ಪಾಸು ಮಾಡಿದ್ದ ಮತ್ತು ಯಾರದೋ ಮನೆಯ ಮಕ್ಕಳ ಜೊತೆ ಉಪನಯನ ಶಾಸ್ತ್ರ ಕೂಡ ಆಗಿ ಹೋಗಿತ್ತು. ಅವನಮ್ಮ ತನ್ನ ನೆಲೆ ತೊರೆಯುವಾಗ ಅದ್ಯಾವ ಪರಿಯ ಮನಃಸ್ಥಿತಿಯಲ್ಲಿದ್ದಳೆಂದರೆ ಮಕ್ಕಳ ಜಾತಕ ಪಟ್ಟಿಯನ್ನು ತರಲು ಸಹ ಮರೆತಿದ್ದಳು. ಹಾಗಾಗಿ ನಮ್ಮ ಅಪ್ಪಯ್ಯನಿಗೆ ಕೊನೆಯ ತನಕ ತಾನು ಹುಟ್ಟಿದ ಸಂವತ್ಸರ ಜೊತೆಗೆ ಆಂಗೀರಸ ಗೋತ್ರಜ ಎಂಬುದು ಮಾತ್ರ ನೆನಪಿತ್ತು ವಿನಃ ಉಳಿದ ವಿವರಗಳಾವೂ ತಿಳಿದಿರಲಿಲ್ಲ.
         ಹಲವು ಬಾರಿ ನೆಲೆ ಬದಲಿಸಿದ ನಂತರ ಸರಸ್ವತಮ್ಮ  ತಲುಪಿದ್ದು "ಕುಳವೆ" ಗ್ರಾಮವನ್ನು. ಇಷ್ಟರಲ್ಲಾಗಲೇ ಇದ್ದೊಬ್ಬ ಮಗ ಮಹಾಬಲೇಶ್ವರ ಸ್ವಲ್ಪ ತಾನೂ ದುಡಿಯುವಂತಾಗಿದ್ದ. ಆ ತಾಯಿಗೆ, ಓದು ಬರಹ ಬಿಟ್ಟು ತನ್ನ ಮಗ ಸಹ ಜೀತ ಮಾಡಬೇಕಾಯಿತೆನ್ನುವ  ಸಂಕಟ ಸದಾ ಕಾಡುತ್ತಿತ್ತು. ಆದರೆ ಅಂತಹ ಹೀನ ಸ್ಥಿತಿಯಲ್ಲೂ ಸಹ ತನ್ನ ಸತ್ಯನಿಷ್ಠತೆ       ಕಾಪಾಡಿಕೊಂಡಿದ್ದಲ್ಲದೆ ತನ್ನ ಸರ್ವಸ್ವವೂ ಆಗಿದ್ದ ಮಗನಲ್ಲೂ  ಸಹ  ಅದೇ ಅಚಲ ಸತ್ಯನಿಷ್ಠ ಸಂಸ್ಕಾರವನ್ನು ಧೃಡಗೊಳಿಸಿದ್ದು ಆಕೆ ಆತನಿಗಾಗಿ ಮಾಡಿಕೊಟ್ಟ ಅತ್ಯಂತ ದೊಡ್ಡ ಆಸ್ತಿ. ಕುಳವೆಯಲ್ಲಿ  ಗಜಾನನ ಭಟ್ಟರ ಮನೆಯಲ್ಲಿ ತಾಯಿ-ಮಗ ನೆಲೆಯಾದರು. ಉಳಿದುಕೊಂಡ ಮನೆಯಲ್ಲಿ ಬೆಳಿಗ್ಗೆ ಮಜ್ಜಿಗೆ ಕಡೆಯುವದು ಇತ್ಯಾದಿ ಸಣ್ಣಪುಟ್ಟ ಕೆಲಸಗಳ ಸಹಾಯ ಮಾಡಿಕೊಟ್ಟು ಹೊರಗೆ ದುಡಿಯಲು ಮಗ ಹೋಗುತ್ತಿದ್ದರೆ, ತಾಯಿ ಹಲವು ಮನೆಗಳಲ್ಲಿ ಮನೆಗೆಲಸ ಮಾಡಿ ಬರುತ್ತಿದ್ದಳು.
        ಈ ಸುಮಾರಿನಲ್ಲಿಯೇ ರಮಣ ಮಹರ್ಷಿಗಳ ಶಿಷ್ಯರಾದ ಪೂಜ್ಯ ವಾಸಿಷ್ಠ ಗಣಪತಿ ಮುನಿಗಳು ಕುಳವೆಯ ಬಡ್ತಿ ಡಾಕ್ಟರರ ಮನೆಯಲ್ಲಿ ತಮ್ಮ ಬಿಡಾರ ಹೂಡಿದ್ದರು. ಆಗಿನ ಜನರಲ್ಲಿ ಧಾರ್ಮಿಕ ಮನೋಭಾವ ಚೆನ್ನಾಗಿತ್ತು. ನನ್ನ ಅಜ್ಜಿಯಲ್ಲಂತೂ ಅದು ಸ್ವಲ್ಪ ಹೆಚ್ಚೇ ಇತ್ತು. ತನ್ನ ನಿತ್ಯ ಕೋಟಲೆಗಳನ್ನು ಪೂಜ್ಯರ ಸನ್ನಿಧಿಯಲ್ಲಿ ಭಜನೆ ಹಾಗೂ ಧ್ಯಾನಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ವಲ್ಪವಾದರೂ ಮರೆಯಲು ಯತ್ನಿಸುತ್ತಿದ್ದಳು. ತನ್ನ ಎಲ್ಲ ಕಥೆಯನ್ನು ಗುರುವಿನ ಎದುರು ತೆರೆದಿಟ್ಟು ಗುರುಕಾರುಣ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಳು. ಗುರುಗಳೂ ಸಹ ಈ ಬಡವಿಯ ಬಗ್ಗೆ ಸಹಾನುಭೂತಿ ಹೊಂದಿದ್ದರು. ನನ್ನ ಅಪ್ಪಯ್ಯ ಆಗಿನ್ನೂ ಹುಡುಗನಾಗಿದ್ದರೂ ಸಹ ವಾಸಿಷ್ಟರ ಬಗ್ಗೆ ಅತೀವ ಭಕ್ತಿ ಮತ್ತು ಗೌರವವನ್ನು ಹೊಂದಿದ್ದನು.
       ನನ್ನ ತಂದೆ ಮಹಾಬಲೇಶ್ವರನಿಗೆ ಆಗ ಏರುಪ್ರಾಯ. ಪಕ್ಕದೂರಾದ "ಬಾಳೆತೋಟ"ದ ಕೃಷ್ಣಪ್ಪ ಹೆಗಡೆಯವರು ತಮ್ಮಲ್ಲಿದ್ದ ಒಂದು ಮಹಾ ಹರಾಮಿ ಹೋರಿಯನ್ನು ನೇಗಿಲಿಗೆ ಕಟ್ಟಿ ತಿದ್ದಿ ಕೊಟ್ಟವರಿಗೆ ೨೦ ರೂಪಾಯಿ ಇನಾಮು ಕೊಡುವದಾಗಿ ಘೋಷಿಸಿದ್ದರು. ಸವಾಲು ಸ್ವೀಕರಿಸಿದ  ಮಹಾಬಲೇಶ್ವರ ಒಂದೇ ದಿನದಲ್ಲಿ ಹೋರಿಯನ್ನು ಪಳಗಿಸಿ ಒಂದೆಕರೆ ಗದ್ದೆ ಹೂಡಿಕೊಟ್ಟು, ಇನಾಮು ಗೆದ್ದು, ಅದೇ ದುಡ್ಡಿನಲ್ಲಿ ಕುಳವೆಯಲ್ಲಿ  ಒಂದು ಬಿಡಾರ ಕಟ್ಟಿ, ತಾಯಿಯನ್ನು ಸ್ವಂತ ಮನೆಗೆ ತುಂಬಾ ಸಂಭ್ರಮದಿಂದ ಪ್ರವೇಶ ಮಾಡಿಸಿದನು. ಆಗ "ಸ್ವಂತ ಮನೆ" ಎಂದು  ತನ್ನ ಅಮ್ಮ ಪಟ್ಟ ಸಂಭ್ರಮವನ್ನು ನನ್ನಪ್ಪ ಆಗಾಗ ನೆನೆಸಿಕೊಂಡು ಹನಿಗಣ್ಣಾಗುತ್ತಿದ್ದನು. ಇದೇ ಹುರುಪಿನಲ್ಲಿ ಅರಸಿಕೆರೆಗೆ ಹೋಗಿ ತಾನು ಇಟ್ಟು ಬಂದ ಪಾತ್ರೆ ಪಗಡೆಗಳನ್ನು ಮರಳಿ ಕೇಳಿದರೆ, ಅವೆಲ್ಲ ಕಳುವಾಗಿ ಹೋದವೆಂದು ಹೇಳಿ ಆ ಗೃಹಸ್ಥ ಇವಳನ್ನು ಸಾಗಹಾಕಿದ.
        ಹೀಗಿದ್ದಾಗಲೇ ಒಮ್ಮೆ ತೀವ್ರ ಜ್ವರ ಬಂದು ಎಚ್ಚರ ತಪ್ಪಿದ ಮಗನಿಗೆ ದಿನ ಪೂರ್ತಿ ಎಚ್ಚರಾಗದೇ ಹೋದಾಗ ಆ ತಾಯಿಗೆ ವಾಸಿಷ್ಟರೊಬ್ಬರೇ ತನ್ನ ಮಗನನ್ನು ಉಳಿಸಿಕೊಡಲು ಸಮರ್ಥರು ಎಂದು ಸ್ಫುರಿಸಿತು. ಸೀದಾ ಹೋಗಿ ಗುರುಗಳ ಕಾಲಿಗೆ ಬಿದ್ದ ಅವಳನ್ನು ಎಬ್ಬಿಸಿದ ಗುರುಗಳಿಗೆ ಅವಳನ್ನು ನೋಡುತ್ತಿದ್ದಂತೆ ಎಲ್ಲಾ ಅರ್ಥವಾಗಿ ಹೋಗಿತ್ತು. ಒಮ್ಮೆ ಕಣ್ಣು ಮುಚ್ಚಿ ಧ್ಯಾನಿಸಿ, ಕಣ್ತೆರೆದವರೇ , "ಸರಸ್ವತಿ, ನಿನಗೆ ಪುತ್ರವಿಯೋಗ ತಪ್ಪಿದ್ದಲ್ಲ. ನಾನು ಏನೋ ಕೇಳುತ್ತೇನೆ, ಕೊಡ್ತೀಯಾ?" ಎಂದು ಕೇಳಿದರು.
"ಈ ಬಡವಿ ಹತ್ತಿರ ಕೊಡಲು  ಏನು ತಾನೇ ಇದೆ ನಾಯನಾ" ?* ಎಂದು ಅಳತೊಡಗಿದವಳಿಗೆ, "ಸ್ನಾನ ಮಾಡಿ ಮಡಿಯಾಗಿ ಬಾ"  ಎಂದು ಸೂಚಿಸಿದರು. ಹಾಗೆ ಬಂದವಳ ಕೈಯ್ಯಲ್ಲಿ ಒಂದು ತುಳಸಿ ದಳ ಕೊಟ್ಟು, "ನಿನ್ನ ಮಗನನ್ನು ನನಗೆ ಕೃಷ್ಣಾರ್ಪಣ ಎಂದು ತುಳಸಿ ನೀರು ಬಿಟ್ಟು ಕೊಟ್ಟು ಬಿಡು. ನನ್ನ ಮಗನಾಗಿ ಅವನು ಬದುಕಿ ಉಳಿಯುತ್ತಾನೆ. ಕೊಡುತ್ತೀಯಾ?" ಎಂದು ನಿರುದ್ವಿಗ್ನರಾಗಿ ಕೇಳಿದರು. "ಹೇಗಾದರೂ ನನ್ನ ಮಗ ಜೀವಂತ ಇದ್ದರೆ ಸಾಕು, ನಾಯನಾ" ಎಂದು ಹೃದಯ ಕಲ್ಲು ಮಾಡಿಕೊಂಡು, ಸಂಪೂರ್ಣ ಸಮರ್ಪಣಾ ಭಾವದಿಂದ, ಆ ಪರಮಗುರುವಿಗೆ ತನ್ನ ಆತ್ಮದ ತುಣುಕೇ ಆಗಿದ್ದ ಮಗನನ್ನು ದತ್ತು ನೀಡಿ, ಮನದ ಭಾವೋದ್ವೇಗ ಕರಗಿ ಹರಿಯುವ ತನಕ ಅತ್ತು, ಸ್ಥಿತಪ್ರಜ್ಞ ಭಾವ ಹೊಂದಿದಳು. ಆ ಭಾವ ತೀವ್ರತೆಯ ಬಿರುಗಾಳಿಯನ್ನು ಆ ಮಹಾತಾಯಿ ಅದು ಹೇಗೆ ತಾಳಿಕೊಂಡಳೋ ನಾ ಕಾಣೆ!. ೧೧ ಮಕ್ಕಳನ್ನು ಹಡೆದೂ ತನ್ನದೆನ್ನುವ ಒಂದು ಕುಡಿಯೂ ಇಲ್ಲವಾಯಿತಲ್ಲ ಎಂಬ ಆ ಭಾವವನ್ನು ಜೀರ್ಣಿಸಿಕೊಳ್ಳಲು ಆ  ಧೀರೋದಾತ್ತ ತಾಯಿ ಅದೆಷ್ಟು ಹೆಣಗಿದಳೋ, ಊಹಿಸಲೂ ಅಸಾಧ್ಯ. [* ವಿ.ಸೂ: ವಾಸಿಷ್ಟರನ್ನು ಅವರ ಪ್ರಿಯ ಅನುಯಾಯಿಗಳು "ನಾಯನಾ" ಎಂದು ಸಂಬೋಧಿಸುತ್ತಿದ್ದರು.]
        ಹೀಗೆ ಜನ್ಮಾಂತರದ ಪುಣ್ಯ ವಿಶೇಷದಿಂದ ವಾಸಿಷ್ಠ ಮುನಿಗಳ "ಪುತ್ರ"ನಾದ ಮಹಾಬಲೇಶ್ವರನು ತನ್ನ ತಾಯಿ ಮಾಡಿದ ತ್ಯಾಗವನ್ನು ಕೊನೆಯ ತನಕ ಆರ್ದ್ರ ಭಾವದಿಂದ ನೆನೆಯುತ್ತಿದ್ದನು. ತನ್ನ ಆ ಗುಡಿಸಲನ್ನೇ ಅರಮನೆಗೂ ಮಿಗಿಲಾಗಿ ಶುಭ್ರವಾಗಿ ಇಟ್ಟುಕೊಳ್ಳುತ್ತಿದ್ದುದನ್ನು ಹಾಗೂ ಪಾತ್ರೆ ಪಗಡೆಗಳನ್ನು ಹೊಳೆ ಹೊಳೆಯುವಂತೆ ಇಟ್ಟುಕೊಳ್ಳುತ್ತಿದ್ದುದನ್ನು, ಅತ್ಯಂತ ಆಸ್ಥೆಯಿಂದ ರುಚಿಕಟ್ಟಾದ ಅಡುಗೆ ಮಾಡುತ್ತಿದ್ದುದನ್ನು ಹೀಗೆ ಇನ್ನೂ ಆಕೆಯ ಅಗಣಿತ ಸುಗುಣಗಳನ್ನು ತನ್ನ ಮಕ್ಕಳಾದ ನಮಗೂ, ತನ್ನೆಲ್ಲ ಮುದ್ದು ಮೊಮ್ಮಕ್ಕಳಿಗೂ ಹೊಳೆವ ಕಂಗಳಿಂದ ಹೇಳುತ್ತಿದ್ದನು.
        ಈಗ ಹಿನ್ನೋಟದಲ್ಲಿ ಇದನ್ನೆಲ್ಲಾ ಗಮನಿಸಿದಾಗ ನನಗೆ ನಮ್ಮ, ಅಂದರೆ, ನನ್ನ ಅಪ್ಪಯ್ಯನ ಮಕ್ಕಳಾದ ನಾವು ಆರು ಜನ ಸಹೋದರ-ಸಹೋದರಿಯರ  ಮತ್ತು ಅಪ್ಪಯ್ಯನ ಮೊಮ್ಮಕ್ಕಳ ಸುಯೋಗವೇ ಅಂದಿನ ಆ ಘಟನೆಯ  ಹಿಂದಿನ ಪ್ರೇರಕ ಶಕ್ತಿ ಆಗಿದ್ದಿರಬಹುದೆಂದು ಅನಿಸುತ್ತದೆ. ಇಲ್ಲವಾದರೆ ಭಗವಾನ್ ವಾಸಿಷ್ಠ ಗಣಪತಿ ಮುನಿಗಳ ಮೊಮ್ಮಕ್ಕಳಾಗುವ  ಭಾಗ್ಯ ನಮಗೆಲ್ಲಿ ಸಿಗುತ್ತಿತ್ತು?. 
        ಅಪ್ಪಯ್ಯ ಕುಳವೆಯಲ್ಲಿ ಇದ್ದಾಗಲೇ ಕೊನೆಗೆ ತನ್ನ ತಾಯಿಯನ್ನೂ ಕಳೆದುಕೊಂಡು ಅಕ್ಷರಶ: ಏಕಾಂಗಿಯಾದನು.
        ಆ"ಮಹಾತಾಯಿ" ಸರಸಬ್ಬೆಯ ತ್ಯಾಗ ಪುಣ್ಯಗಳೇ ಇಂದು ನಮಗೆಲ್ಲ ಶ್ರೀರಕ್ಷೆಯಾಗಿದೆ.








    .