Wednesday 6 December 2017

ಕಗ್ಗಲ್ಲಿಗೆ ಬಿದ್ದವು ಚಾಣದೇಟುಗಳು -ಭಾಗ - 2

                                

 ......ತಿಳಿ ಆಕಾಶನೀಲಿ ವರ್ಣದ ನೆಹರೂ ಶರ್ಟ್, ಒಂದು ಬಿಳಿ ಪಂಚೆ, ಮೇಲೊಂದು ಬಿಳಿ ಅಂಗವಸ್ತ್ರ ಇದು ಅನಂತ ಹೆಗಡೆಯವರ ದಿರಿಸು – ಸಾದಾ ದಿನಗಳಲ್ಲೂ, ವಿಶೇಷ ಸಂದರ್ಭಗಳಲ್ಲೂ  - ಅಂದಿಗೂ, ಇಂದಿಗೂ ಕೂಡ.  ದಿಟ್ಟಿಸಿದೊಡನೆ ಎದುರಿಗನ  ಒಳಗನ್ನು ಬಗೆದು ಅರ್ಥೈಸಿಕೊಳ್ಳಬಲ್ಲ ತೀಕ್ಷ್ಣ ಆದರೂ ದಯಾರ್ದ್ರ ದೃಷ್ಟಿ. ಮೇಲ್ನೋಟಕ್ಕೆ ಗಂಭೀರರಾಗಿ ಕಂಡರೂ ಕಣ್ಣಲ್ಲಿ  ಕಣ್ಣಿಟ್ಟು ನೋಡಿದಾಗ ಅಲ್ಲಿ ಕಾಣುವ ತುಂಟತನದ ಛಾಯೆ. ಮಾತಿಗೆ ಹಚ್ಚಿಕೊಂಡಾಗ ಹರಡಿಕೊಳ್ಳುವ ಅವರ ಲೋಕಜ್ನಾನ ಮತ್ತು ಓದಿದ ಪುಸ್ತಕಗಳ ಅರಿವಿನ ಹರಹು, ಚಿಂತನೆಗೆ ಹಚ್ಚುವ ಗಂಭೀರ ಹಾಸ್ಯದ ನುಡಿಗಳು – ಸಂದರ್ಭಕ್ಕೆ ತಕ್ಕ ಹಾಗೆ ಪ್ರತ್ಯಕ್ಷವಾಗುವ  ಬೋಧಪ್ರದ  ಕಿರುಗತೆಗಳು,ಒಂದೇ ಎರಡೇ ... ಒಟ್ಟಿನಲ್ಲಿ ಸಹೃದಯೇ ಸಜ್ಜನರಿಗೆ ಅವರ ಕೂಟ ಎಂದರೆ ಅದು ಹೆಜ್ಜೇನಿನ ಸವಿಯನ್ನು ಜೇನುಹುಟ್ಟಿಗೇ ನೇರ ಬಾಯಿ ಹಾಕಿ ಸವಿದ ಹಾಗೆ! ಅಷ್ಟೊಂದು  ಆಹ್ಲಾದಕರ . ಹಾಗಾಗಿಯೇ ಅವರ ಭೆಟ್ಟಿಗೆ ಬರುತ್ತಿದ್ದ ವಿದ್ವಜ್ಜನರ ದೊಡ್ಡ ದಂಡೇ ಇರುತ್ತಿತ್ತು ಅವರ ಮನೆಯಲ್ಲಿ.
       ನನ್ನ ಪೂರ್ವಕೃತ ಪುಣ್ಯದ ಫಲವೋ ಎಂಬಂತೆ ಇವರ ನೆರಳಿನಲ್ಲಿ ಇರುವ ಪ್ರಮೇಯ ನನಗೆ ಒದಗಿ ಬಂತು ಎಂದು ಈಗ ಅನಿಸುತ್ತದೆ. ಗುಡ್ಡದ ಮೇಲೆ ಬಿದ್ದಿದ್ದ  ಕಗ್ಗಲ್ಲಿನಂತೆ ಇದ್ದ ನನ್ನನ್ನು ಮೂರ್ತಿಯಾಗಿಸಲು ಮೊದಲ ಚಾಣದೇಟುಗಳು ಬಹುಶ: ಇಲ್ಲಿಯೇ ಬಿದ್ದವು ಎನಿಸುತ್ತದೆ. ನಾನು ಅವರ ಮನೆಯಲ್ಲಿ ಇರತೊಡಗಿದ ಹೊಸದರಲ್ಲಿ ಒಂದು ದಿನ ಊಟ ಮಾಡುವಾಗ ನಡುವೆ ನನ್ನ ಕೈಯ್ಯನ್ನು ತೋರಿಸಲು ಹೇಳಿದರು. ಅಂಗೈ ದಾಟಿ ಮುಂಗೈ ಬುಡದವರೆಗೂ ರಾಡಿಯಾಗಿದ್ದ ನನ್ನ ಹಸ್ತವನ್ನು ನೋಡಿ ನನ್ನ ಪಕ್ಕವೇ ಕುಳಿತಿದ್ದ ಅವರ ಮಗ ಶಿವರಾಮನ ಕೈ ತೋರಿಸಲು ಹೇಳಿದರು. ಅವನ ಬೆರಳುಗಳು ಮಾತ್ರ ಒದ್ದೆಯಾಗಿದ್ದು ಅಂಗೈ ಪೂರ್ತಿ ಒಣಗಿ ಸ್ವಚ್ಚವಾಗಿತ್ತು. ಅಷ್ಟೇ – ಹೆಚ್ಚಿನ ಸೂಚನೆಯಿಲ್ಲ - ಅಂದಿನಿಂದ ಇಂದಿನವರೆಗೂ ಅದೆಷ್ಟೇ ನೀರಾಗಿದ್ದ (ರಸಮಯವಾದ) ಅಡಿಗೆಯೇ ಇದ್ದರೂ ಅಂಗೈಯ್ಯನ್ನು ಒದ್ದೆಮಾಡಿಕೊಂಡಿಲ್ಲ – ಪಾಯಸ ಸುರಿಯುವಾಗ ಕೂಡ . ಏನನ್ನೂ ಕಠೋರವಾಗಿ ಹೇಳದೇ ಕೇವಲ ಇಂಗಿತಮಾತ್ರದಿಂದ ತಿಳಿಸಿಕೊಡುವ ಅವರ ಪರಿ ಅನುಕರಣೀಯ. ಅತ್ಯಂತ ಸುಸಂಸ್ಕೃತ ನಡವಳಿಕೆ ಹೊಂದಿದ ಈ ದಂಪತಿಯ ಸಂಸ್ಕಾರ ಅವರ ಮಕ್ಕಳಲ್ಲಿ ಯಥಾವತ್ ಹರಿದು ಬಂದಿದೆ. ಅಷ್ಟಕ್ಕೂ ಮನೆಯ ಹಿರಿಯರ ಸನ್ನಡತೆ  ಸುಸಂಸ್ಕಾರಗಳು ಮನೆಯ ಮಕ್ಕಳಲ್ಲಿ ಅವರಿಗರಿವಿಲ್ಲದೇ ಇಳಿದು ಬಂದಿರುತ್ತವೆಯೇ ವಿನಹ ಈ ಸಂಸ್ಕಾರ ಎಂಬುದನ್ನು  ಕಲಿಸಲು ಪ್ರತ್ಯೇಕ ಪಠ್ಯಕ್ರಮ ಇರುವದಿಲ್ಲ.  ಬಾಲ್ಯದಲ್ಲಿ ಸುಸಂಸ್ಕಾರವನ್ನು ಹೊಂದಿದ ಮಕ್ಕಳು ಅಕಸ್ಮಾತ್ ಯೌವ್ವನದಲ್ಲಿ ಸಂಗದೋಷದಿಂದ ದಾರಿಬಿಟ್ಟರೂ ಅವರಲ್ಲಿ ಅಂತರ್ಗತವಾಗಿರುವ ಸಂಸ್ಕಾರ ಅವರನ್ನು ಬೇಗನೆ ಮೂಲನೆಲೆಗೆ ಮರಳಿಸುತ್ತದೆ. ಬಾಲ್ಯದಲ್ಲಿ ಅಚ್ಚೊತ್ತಿರುವ ಸುಸಂಸ್ಕಾರ ತನ್ನ ಒತ್ತಡವನ್ನು ಹೇರಿಯೇ ತೀರುತ್ತದೆ.
    ಅನಂತ ಹೆಗಡೆಯವರು ಅಪ್ರತಿಮ ಕನ್ನಡಾಭಿಮಾನಿ. ಸೊಗಸಾದ ಕನ್ನಡ ಭಾಷೆ ಅವರದು. ಕನ್ನಡದ ಪ್ರಸಿದ್ಧ ಲೇಖಕರ ಪುಸ್ತಕಗಳನ್ನು ಒಳಗೊಂಡ,  ಸಾಕಷ್ಟು ದೊಡ್ಡದೇ ಆದ, ಒಂದು ವೈಯಕ್ತಿಕ ಲೈಬ್ರರಿಯನ್ನು ಇಟ್ಟುಕೊಂಡಿದ್ದಾರೆ. ಜೊತೆಗೇ ಸುವಿಚಾರಿ ನಿಯತಕಾಲಿಕೆಗಳಾದ ಕಸ್ತೂರಿ. ಉತ್ಥಾನ, ವಿಕ್ರಮ ಇತ್ಯಾದಿಗಳು ಬಹುಶ: ಅವುಗಳ ಪ್ರಾರಂಭದ ಸಂಚಿಕೆಯಿಂದಲೇ ಇವರಲ್ಲಿ ಲಭ್ಯ. ದಿನಾಲೂ ರಾತ್ರಿ ದೀಪದ ಬೆಳಕಿನಲ್ಲಿ ಓದು. ಹಗಲೆಲ್ಲ ಸಾಮಾಜಿಕ ಕಾರ್ಯ, ಗೃಹಕಾರ್ಯಗಳು.
      ಆ ಕಾಲಘಟ್ಟದಲ್ಲಿ ”ಬರೂರು ಸೀಮೆ”ಯಲ್ಲಿ ನಡೆದ ಹೆಚ್ಚಿನೆಲ್ಲ ಸಾಮಾಜಿಕ ಸ್ಥಿತ್ಯಂತರಗಳಿಗೆ ಅವರು ಕಾರಣೀಭೂತರು ಅಥವಾ ಪ್ರೋತ್ಸಾಹಕರು. ಸಹಜವಾಗಿಯೇ ತಾಲೂಕು ಕೇಂದ್ರವಾದ ಶಿರಸಿಯ ಗಣ್ಯರಲ್ಲಿಯೂ ಒಬ್ಬರಾಗಿ ಅವರು ಗುರುತಿಸಿಕೊಂಡಿದ್ದರು. ಅವರ ಈ ಉತ್ಕರ್ಷ ಅವರ ಸಮಕಾಲೀನರಲ್ಲಿ ಕೆಲವರ ಹೊಟ್ಟೆಕಿಚ್ಚಿಗೂ ಕಾರಣವಾಗಿ ಅವರ ಮೇಲೆ ಇಲ್ಲಸಲ್ಲದ ಮಿಥ್ಯಾರೋಪ, ಜಗಳ ಇತ್ಯಾದಿಗಳನ್ನು ಎಬ್ಬಿಸಿದರೂ ಅವಕ್ಕೆಲ್ಲ  ಪ್ರತಿಕ್ರಿಯಿಸಲು ಹೋಗದೇ ಧೀಮಂತಿಕೆಯಿಂದ ನಿಭಾಯಿಸಿ , ಕುಬುದ್ಧಿ ತೋರಿದವರೇ ಲಜ್ಜೆ ಪಟ್ಟುಕೊಳ್ಳುವಂತೆ ಮಾಡಿ, ಅವರನ್ನೂ ತನ್ನ ಅಭಿಮಾನಿಗಳಾಗಿ ಪರಿವರ್ತಿಸಿದ ವ್ಯವಹಾರ ಚತುರ ಮುತ್ಸದ್ಧಿ ಅವರು.
      1975 ರಲ್ಲಿ ನನ್ನ ಹೈಸ್ಕೂಲು ಮುಗಿದು  ಅವರ ಮನೆಯನ್ನು ನಾನು ಬಿಡುತ್ತಿದ್ದಂತೆ ನನ್ನ ಸಂಬಂಧಿ ಹುಡುಗನೊಬ್ಬ, ತದನಂತರ ಇನ್ನೊಬ್ಬ ಸಂಬಂಧಿ ಹುಡುಗ, ಆನಂತರ ಯಲ್ಲಾಪುರ ಸೀಮೆಯ ಇನ್ನೂ ಹಲವಾರು ಹುಡುಗರು ,… ಈ ರೀತಿ ಸರಪಳಿ ಮುಂದುವರೆದು ಹಲವಾರು ಮಕ್ಕಳು ಅವರ ಮನೆಯ ಆಶ್ರಯ ಪಡೆದು ತಮ್ಮ ಹೈಸ್ಕೂಲು ಶಿಕ್ಷಣವನ್ನು ಮುಗಿಸಿದ್ದಾರೆ. ಒಂದರ್ಥದಲ್ಲಿ ಇವರ ಮನೆಯ ಸಂಸ್ಕಾರದ ರಾಯಭಾರಿಗಳಾಗಿ ಎಲ್ಲೆಡೆ ಹಂಚಿ ಹೋಗಿದ್ದಾರೆ – ವಿಶಾಲ ಆಲದ ಮರದ ಹಣ್ಣು ತಿಂದ ಹಕ್ಕಿಗಳು ತಾವು ಬೀಜಪ್ರಸರಣದ ರಾಯಭಾರಿಗಳಾಗುವ ಹಾಗೆ.
       ನಾನು ಅವರ ಮನೆ ಬಿಟ್ಟರೂ ಸಂಪರ್ಕ ಬಿಡಲಿಲ್ಲ. ಅನಂತ ಹೆಗಡೆಯವರ ಮಗ ಶಿವರಾಮ್ 10ನೇ ತರಗತಿಗೆ ಸಂಸ್ಕೃತ ಕಲಿಯುವ ಸಲುವಾಗಿ ಮೈಸೂರು ಸೇರಿದ. (ಅದೆಷ್ಟು ಸಂಸ್ಕೃತ ಕಲಿತನೋ ನಾಕಾಣೆ – ಶಿವೂನ ಕ್ಷಮೆ ಕೋರಿ). ನಾನು ಇಂಜಿನೀರಿಂಗ್ ಓದಲು ಮೈಸೂರಿಗೆ ಬಂದಾಗ ಅದು ಹೇಗೋ ನನ್ನ ವಿಳಾಸ ಪತ್ತೆ ಮಾಡಿ, ನನ್ನ ರೂಮಿಗೆ ಬಂದು ಆತ್ಮೀಯವಾಗಿ ನನ್ನೊಡನೆ ಬೆರೆತ. ಸಾಹುಕಾರರ ಮಗ, ಧಿಮಾಕು ತೋರಬಹುದು ಎಂದು  ಅತ್ಯಂತ   ಎಚ್ಚರಿಕೆಯಿಂದಲೇ ಅವನೆಡೆಗೆ ಮತ್ತೊಮ್ಮೆ ಸ್ನೇಹಹಸ್ತ ಚಾಚಿದ್ದೆ. ಆದರೆ ನನ್ನ ಆತಂಕ ತಳಬುಡವಿಲ್ಲದ್ದು ಎಂದು ಬೇಗನೇ ಮನದಟ್ಟಾಗಿತ್ತು. ಅಂದಿನಿಂದ ಇಂದಿನವರೆಗೆ ನನ್ನ ಪರಮಾಪ್ತರಲ್ಲಿ ಅವನೂ ಒಬ್ಬನಾಗಿ, ನನ್ನ “ಆತ್ಮಬಂಧು”ವಾಗಿ ಉಳಿದಿದ್ದಾನೆ. ಅನಂತ ಪರಿವಾರದ ಜೊತೆಗಿನ ನಿಕಟ ಒಡನಾಟಕ್ಕೆ  “ವಿಶೇಷ ಕಾರಣ”ವಾಗಿದ್ದಾನೆ.

    ಈಗ ಅನಂತ ಹೆಗಡೆ -ಸರ್ವೇಶ್ವರಮ್ಮ ದಂಪತಿ   ತಮ್ಮ ಬದುಕಿನ ಎಂಟನೇ ದಶಕದಲ್ಲಿದ್ದಾರೆ. ಈಗಲೂ ಜ್ನಾನಪಿಪಾಸುಗಳಿಗೆ ಅನಂತ ಹೆಗಡೆಯವರೊಬ್ಬ ಆತ್ಮೀಯ ಮಿತ್ರ. ಮನೆಯ ಹದಿಮೂರು ಮೊಮ್ಮಕ್ಕಳಿಗೆ ಅತ್ಯಾಪ್ತ ಸಲಹೆಗಾರ. ತಮ್ಮ ವಿಸ್ತಾರವಾದ ಜೀವನಾನುಭವದ ನೆಲೆಯಲ್ಲಿ ಮೊಮ್ಮಕ್ಕಳ ಸರ್ವ ಸಮಸ್ಯೆಗಳಿಗೆ ಚಿಕ್ಕ –ಚೊಕ್ಕ ದೃಷ್ಟಾಂತಗಳ ಮೂಲಕ ಪರಿಹಾರವನ್ನು ಮನದಟ್ಟಾಗುವಂತೆ ತಿಳಿಹೇಳಬಲ್ಲ ಧೀಮಂತ. ತಮ್ಮವರಷ್ಟೇ ಅಲ್ಲ , ನಮ್ಮೆಲ್ಲರ ಮಕ್ಕಳಿಗೂ, ಊರಿನ ಎಲ್ಲ ಕಿರಿಯರಿಗೂ ಆತ್ಮೀಯ ಅನಂತಜ್ಜ”. ಈ ದಂಪತಿಯನ್ನು ಕಣ್ರೆಪ್ಪೆಯಂತೆ  ಕಾಪಿಡುವ ಮಕ್ಕಳು. ಈ ಜೋಡಿ “ಶತಮಾನದ ಸಂಭ್ರಮ” ಕಾಣಬೇಕಾಗಿದ್ದುದು ಸಾಮಾಜಿಕ ಅವಶ್ಯಕತೆ ಎಂದು ನನಗೆ ಅನಿಸುತ್ತದೆ. (ಅಂದಹಾಗೆ  ಇವರ ಬದುಕಿನ ವಿವಿಧ ಮುಖಗಳ ಕೇವಲ  ಕಿರು ಪರಿಚಯ ಮಾಡಲು ಉದ್ಯುಕ್ತನಾದರೂ ಈ ಲೇಖನ ಇನ್ನೂ ಹಲವು ಪುಟಗಳಿಗೆ ವಿಸ್ತರಿಸಿ ಬಿಡುತ್ತದೆ. ಇಲ್ಲಿ ಆ ಸಾಹಸ ಮಾಡದೆ, ಮುಂದಿನ ನನ್ನ ಬರಹಗಳಲ್ಲಿ ಸಂದರ್ಭಾನುಸಾರ ಅವುಗಳನ್ನೆಲ್ಲ ಉದಾಹರಿಸುತ್ತೇನೆ). 
    ಈ ಹಿರಿಯರು ಶತಮಾನದ ಮೈಲಿಗಲ್ಲು ದಾಟಿ ಮುಂದೆ ಸಾಗಲಿ, ನಮಗೆಲ್ಲ ತಮ್ಮ ಅಮರವಾಣಿಯಿಂದ  ಮಾರ್ಗದರ್ಶನ ಮಾಡುತ್ತಿರಲಿ ಎಂದು ಆಶಿಸೋಣ, ಅಲ್ಲವೇ?
    “ಯಶಸ್ಸು” ಎಂಬುದಕ್ಕೆ ನೂರು ಜನ ನೂರು ಬೇರೆಬೇರೆ ವ್ಯಾಖ್ಯೆಯನ್ನು ನೀಡಬಹುದು. ಆದರೆ ನನ್ನ ದೃಷ್ಟಿಯಲ್ಲಿ, “ಜೀವನದಲ್ಲಿ ಹಿಂತಿರುಗಿ ನೋಡಿದಾಗ, ನಮ್ಮ ಪ್ರತಿ ಹೆಜ್ಜೆ ಸಮಾಜಮುಖಿಯಾಗಿತ್ತು ಎಂಬ ತೃಪ್ತಿ ನೀಡುವ ಬದುಕು ಯಶಸ್ವೀ ಬದುಕು’. “ಅನಂತ ಬದುಕು” ಹಾಗೇ ಇದೆ.  ಅಲ್ಲವೇ?