Sunday 13 April 2014

ಋಣದ ಭಾರವನಂತ

       ಸಿದ್ಧವನ ಗುರುಕುಲದಲ್ಲಿ ಇದ್ದುಕೊಂಡು ಉಜಿರೆಯ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಒಂದು ವಿಶೇಷವಾದ ಲಾಭ ತನ್ನಿಂದ ತಾನೇ ಆಗುತ್ತಿತ್ತು.  ಹಾಸ್ಟೆಲ್ಲಿನಲ್ಲಿ  ಪ್ರತಿದಿನದ ಓದಿನ ಸಮಯ ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿದ್ದ ಕಾರಣ ಎಲ್ಲ ಹುಡುಗರಿಗೂ ಕನಿಷ್ಠ ಮಟ್ಟದ ಪರೀಕ್ಷಾ ತಯಾರಿ ತಾನಾಗಿಯೇ ಆಗಿರುತ್ತಿತ್ತು. ಕಾಲೇಜಿನ ದಶಮಾನೋತ್ಸವ ಸಂಭ್ರಮದ ಸದ್ದು ಅಡಗುತ್ತಿದ್ದ ಹಾಗೇ ಎಲ್ಲರೂ ಸಮೂಹ ಸನ್ನಿಗೆ ಒಳಗಾದವರಂತೆ ವಾರ್ಷಿಕ ಪರೀಕ್ಷೆಗೆ ಓದತೊಡಗಿದರು. ಅದರಲ್ಲೂ ಪಿಯುಸಿ ನಂತರ ವೃತ್ತಿಪರ ಕೋರ್ಸ್ ಓದುವ ಕನಸು ಕಟ್ಟಿಕೊಂಡ ಸೈನ್ಸ್ ವಿದ್ಯಾರ್ಥಿಗಳಿಗಂತೂ  ಬಾಲಕ್ಕೆ ಬೆಂಕಿ ಹಚ್ಚಿ ಬಿಟ್ಟಂತಾಗಿತ್ತು.  ಹಾಸ್ಟೆಲ್ಲಿನಲ್ಲಿ, ಬೇಸಿಗೆಯಲ್ಲಿ ನೀರಿನ ತುಟಾಗ್ರತೆ ಆಗುತ್ತಿದ್ದ ಕಾರಣ ಹೊರಗಿನ ಜಿಲ್ಲೆಯವರನ್ನು ಹೊರತುಪಡಿಸಿ ಹತ್ತಿರದವರನ್ನೆಲ್ಲ ಸಿಲೆಬಸ್ ಮುಗಿದ ಕೂಡಲೆ ಪರೀಕ್ಷಾ ದಿನದವರೆಗೂ ಮನೆಗೆ ಕಳಿಸಲಾಗುತ್ತಿತ್ತು. ನಾವು ಕೆಲವೇ ಮಂದಿ ಉಳಿದರೂ ಅತ್ಯಂತ ಸೀರಿಯಸ್ ಆಗಿ ಓದಿ, ತಯಾರಾಗಿ, ಪರೀಕ್ಷೆಯನ್ನು ಎದುರು ನೋಡುತ್ತಿದ್ದೆವು. ಈ ಅವಧಿಯಲ್ಲಿಯೇ ಅನಂತರಾಮು ಮತ್ತು ಪದ್ದಣ್ಣನ ಜೊತೆ ನನ್ನ ಸ್ನೇಹ ಗಾಢವಾಗಿದ್ದು.
        ಎಲ್ಲ ದುಗುಡಕ್ಕೂ ಕೊನೆ ಹಾಡಿ ಅಂತೂ ಪರೀಕ್ಷೆ ಪ್ರಾರಂಭವಾಯ್ತು. ಮೊದಲ ಎರಡು - ಸಂಸ್ಕೃತ ಹಾಗೂ ಇಂಗ್ಲಿಷ್ -ಭಾಷಾ ಪೇಪರ್ ಗಳು ಚೆನ್ನಾಗಿಯೇ ಆದವು. ಗಣಿತ ಪೇಪರ್ ಗಾಗಿ ನನ್ನ ತಯಾರಿ ಅತ್ಯುತ್ತಮ ಮಟ್ಟದಲ್ಲಿತ್ತು. ಉತ್ಸಾಹದ ಬುಗ್ಗೆಯಾಗಿ ಪರೀಕ್ಷಾ ಹಾಲ್ ಹೊಕ್ಕು ಪೇಪರ್ ಕೈಗೆ ಬಂದೊಡನೇ ನನಗೆ ಅತ್ಯಂತ ಗ್ಯಾರಂಟಿ ಇದ್ದ "Mathematical Induction"ನ ಪ್ರಾಬ್ಲಮ್ ತಗೊಂಡು ಬಿಡಿಸೋಕೆ ಶುರು ಮಾಡಿದೆ. MI ದ ಯಾವುದೇ ಪ್ರಾಬ್ಲಮ್ ನ್ನು ನಿದ್ದೆಯಲ್ಲೂ  ಬಿಡಿಸಬಲ್ಲ ಪರಿಣಿತಿ ನನಗಿತ್ತು. ಐದರಿಂದ ಎಂಟು ನಿಮಿಷದಲ್ಲಿ ಬರಬೇಕಾದ ಉತ್ತರ ಏನು ಮಾಡಿದರೂ ಬರುತ್ತಿರಲಿಲ್ಲ. ಅದರಲ್ಲಿ L.H.S.=R.H.S. ಎಂದು ನಿರೂಪಿಸಬೇಕಾಗುತ್ತದೆ. ನಾನು ಅರ್ಧ ಗಂಟೆ ಅದರಲ್ಲೇ ತಿಣುಕಾಡಿದೆ. ಊಹೂಂ, ಉತ್ತರ ಬರಲೊಲ್ಲದು. ಇಷ್ಟರಲ್ಲಿ ನಾನು ನರ್ವಸ್ ಆಗಿ ಚೆನ್ನಾಗಿ ಬೆವರತೊಡಗಿದ್ದೆ. ಮೆದುಳಿನಲ್ಲಿ ನೀಟಾಗಿ ಪೇರಿಸಿದ್ದೆಲ್ಲ ಕದಡಿ ಹೋಗಿ ಬಿಟ್ಟಿತ್ತು. ನನ್ನ ಅಯೋಮಯ ಸ್ಥಿತಿ ನೋಡಿದ ರೂಮ್ ಸೂಪರ್ ವೈಸರ ಆಗಿದ್ದ ಸಂಸ್ಕೃತ ಲೆಕ್ಚರರ್ ಮಹಾಬಲ ಭಟ್ಟರು, "ಕ್ಲಾಸಿನಲ್ಲಿ ಉಡಾಳತನ ಮಾಡದೇ ಸರಿಯಾಗಿ ಓದಿದ್ದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ " ಎಂದು ಕಿಚಾಯಿಸಿ ಅವರ ಕ್ಲಾಸಿನಲ್ಲಿ ನಾವು ಅವರನ್ನು ಕಾಡಿದ್ದುದರ ಪ್ರತೀಕಾರವೆಂಬಂತೆ ಮೀಸೆಯಲ್ಲೇ ನಕ್ಕರು ಬೇರೆ. ನನಗಾಗ, ಭೂಮಿ ಇಲ್ಲೇ ಬಾಯ್ದೆರೆದು ನನ್ನನ್ನು ನುಂಗಿ ಬಿಡಬಾರದೇ  ಎಂದು ಅನಿಸುತ್ತಿತ್ತು. ಆಗಲೇ ಅರ್ಧ ಗಂಟೆಗೂ ಮಿಕ್ಕಿ ಸಮಯ ಕಳೆದು ಹೋಗಿತ್ತು. ಇನ್ನು ನಾನು ಎಷ್ಟೇ ವೇಗವಾಗಿ ಬಿಡಿಸಿದರೂ ಪೇಪರ್ ಮುಗಿಸುವದು ಅಸಾಧ್ಯವಾಗಿತ್ತು. ಕೊನೆಗೊಮ್ಮೆ ಕಣ್ಮುಚ್ಚಿ ಕುಳಿತು ಶಾಂತನಾಗಿ ಇನ್ನೊಮ್ಮೆ ಪ್ರಶ್ನೆ ಪತ್ರಿಕೆ ನೋಡಿದೆ. ಅಯ್ಯೋ!, ನನ್ನ ಉತ್ಸಾಹದಲ್ಲಿ ನಾನು RHS ನಲ್ಲಿ ಸಂಖ್ಯೆಗಳ ವರ್ಗ(squares )ದ ಬದಲಾಗಿ ಘನ (cubes)ಎಂದು ಬರೆದುಕೊಂಡು ಮೂರ್ಖನಾಗಿದ್ದೆ ! ಕೂಡಲೇ ಆ ಪ್ರಾಬ್ಲಮ್ ಬಿಡಿಸಿದರೂ ಸಹ ಸಮಯ ನಷ್ಟವಾದ ಕಾರಣ ಪೇಪರ್ ಪೂರ್ತಿಗೊಳಿಸಲಾಗಲಿಲ್ಲ. ಸಾಲದ್ದಕ್ಕೆ ಆ ಸಾರಿ ಗಣಿತ ಪೇಪರ್ ಸ್ವಲ್ಪ  ಕಠಿಣವಾಗಿಯೂ ಇತ್ತು. ಅಂತೂ ಇಂತೂ ೭೫ ಮಾರ್ಕ್ಸ್ ನಷ್ಟು ಬಿಡಿಸುವಷ್ಟರಲ್ಲಿ ಟೈಂ ಆಗಿ ಹೋಗಿತ್ತು. ಪರೀಕ್ಷಾ ಕೊಠಡಿಯಿಂದ ಹೊರಬಂದಾಗ ತಲೆ ಸಿಡಿದು ಹೋಗುವದೊಂದೆ ಬಾಕಿ ಉಳಿದಿತ್ತು. ಉಳಿದ ಮಿತ್ರರೆಲ್ಲ ಸಾಕಷ್ಟು ಚೆನ್ನಾಗಿಯೇ ಮಾಡಿದ್ದರು. ಮಿತ್ರ ಪದ್ದಣ್ಣನಲ್ಲಿ ಎಲ್ಲ ಹೇಳಿಕೊಂಡು ಹಳಹಳಿಸಿದೆ. ಅವನು ಯಾವಾಗಲೂ Mr.Cool.  ನನಗೆ ಧೈರ್ಯ ಹೇಳುತ್ತಾ ನನ್ನ ಜೊತೆಯಲ್ಲೇ ತಾಸೆರಡು ತಾಸು ಕಳೆದು ನನ್ನ ದುಗುಡ ಕಮ್ಮಿ ಮಾಡಿಸಿಯೇ ತನ್ನ ರೂಮಿಗೆ ಹೋದನು. ಕೆಮಿಸ್ಟ್ರಿ ಹಾಗು ಫಿಸಿಕ್ಸ್ ಪೇಪರ್ ಚೆನ್ನಾಗಿ ಆಗಿದ್ದವು. ಸ್ಟ್ಯಾಟಿಸ್ಟಿಕ್ಸ್ ಬಗ್ಗೆ ನನಗೆ ಅಂತಹ ಆಸ್ಥೆ ಇದ್ದಿರಲೇ ಇಲ್ಲ. ಅಂತೂ ಪರೀಕ್ಷೆ ಮುಗಿಸಿ ಊರಿಗೆ ಹೋದರೂ, 'ನನ್ನ ಕನಸಿನ  ಬಲೂನಿಗೆ ಎಲ್ಲೋ ಸಣ್ಣ ತೂತಾಗಿ ಹೋಗಿದೆಯೇನೋ' ಎಂಬ ಸಣ್ಣಗಿನ ಆತಂಕ   ನನ್ನನ್ನು ಅಧೀರನನ್ನಾಗಿಸಿ ಅಹರ್ನಿಶಿ ಕಾಡುತ್ತಿತ್ತು.
        ನನ್ನ ಆತಂಕ ಪೂರ್ತಿ ಸುಳ್ಳಾಗಲಿಲ್ಲ. ಫಲಿತಾಂಶ ಬಂದಾಗ  ಗಣಿತ ನನ್ನ ಕೈ ಬಿಟ್ಟಿತ್ತು. ಅದರಲ್ಲಿ ಕೇವಲ ೭೧ ಅಂಕ ಬಂದ ಕಾರಣ ನನ್ನ ಎಲ್ಲ ವಿಷಯಗಳ ಸರಾಸರಿ ಮತ್ತು ಪಿ. ಸಿ. ಎಮ್.ಗಳ ಸರಾಸರಿ ಎರಡೂ ೮೩ % ಆಗಿತ್ತು. ಪ್ರಥಮ ಪಿ ಯು ಸಿ ಯಲ್ಲೂ ಇಷ್ಟೇ ಆಗಿತ್ತು. ಎಲ್ಲ ಮಿತ್ರರೂ," ಈ ಸ್ಕೋರ್ ನಿನಗೆ ಇಂಜಿನಿಯರಿಂಗ್ ನಲ್ಲಿ ಸೀಟ್ ಗಿಟ್ಟಿಸಲು ಬೇಕಾದಷ್ಟಾಯಿತು" ಎಂದು ಬೆನ್ನು ತಟ್ಟಿದರು. ಆಗಿನ್ನೂ ನಮ್ಮ ರಾಜ್ಯದಲ್ಲಿ ಕೇವಲ ೧೨-೧೩ ಇಂಜಿನಿಯರಿಂಗ್ ಕಾಲೇಜುಗಳಿದ್ದವು. ಕಾರಣ ಈ ಕಡಿಮೆ ಸ್ಕೋರಿಗೆ ನನ್ನಿಚ್ಚೆಯ ಕಾಲೇಜ್ ಮತ್ತು ಬ್ರಾಂಚ್ ಸಿಗಲಾರದೆಂಬ ಆತಂಕದಿಂದಲೇ ಉಳಿದೆಲ್ಲ ಮಿತ್ರರ ಜೊತೆ ನಾನೂ  ಇಂಜಿನಿಯರಿಂಗ್ ಗೆ  ಅಪ್ಲೈ ಮಾಡಿದೆ. ಈ ಹಂತದಲ್ಲಿ ನನ್ನಷ್ಟೇ ಅಂಕ ಗಳಿಸಿದ್ದ  ಅನಂತರಾಮು ನನಗೆ ಎಲ್ಲ ವಿಧದಲ್ಲೂ ಗೈಡ್ ಆಗಿದ್ದ.
         ಇಲ್ಲಿಗೆ ನನ್ನ ಎರಡು ವರ್ಷಗಳ ಪಿ ಯು ಸಿ ಹಾಗೂ ಉಜಿರೆಯ,  ತಥಾಪಿ ಸಿದ್ಧವನದ ಋಣಾನುಬಂಧ ಮುಗಿದಂತಾಯಿತು. ನನಗೀಗ ೫೫ ವರ್ಷ ವಯಸ್ಸು. ಇಷ್ಟರವರೆಗಿನ ಜೀವನದಲ್ಲಿ ನನ್ನನ್ನು ಬಹುವಾಗಿ ಪ್ರಭಾವಿಸಿದ ಕಾಲಘಟ್ಟವಾಗಿ ಈ ಅವಧಿಯನ್ನು ನಾನು ಪರಿಗಣಿಸುತ್ತೇನೆ. ತವರ ಪರಿಸರದಿಂದ ಹೊರಬಿದ್ದು ಸಂಪೂರ್ಣ ಭಿನ್ನವಾದ ಪರಿಸರದಲ್ಲಿ ನನ್ನನ್ನು ನಾನು ಪ್ರತಿಷ್ಠಾಪಿಸಿಕೊಂಡು, "ಎಲ್ಲಿ ಬೇಕಾದರೂ ನಾನು ಬದುಕಬಲ್ಲೆ" ಎಂಬ ಆತ್ಮವಿಶ್ವಾಸವನ್ನು ಆವಾಹಿಸಿಕೊಂಡದ್ದು ಇಲ್ಲಿಯೇ. ನಾನೆಷ್ಟು ಸಣ್ಣವನು ಎಂಬುದು ಮೊದಲು ಅರಿವಾದದ್ದು ಇಲ್ಲಿಯೇ. ಪರರ ಕಾಳಜಿ ಮಾಡಿದರೆ ನಿನ್ನ ಕಾಳಜಿ ತಾನಾಗಿಯೇ ಆಗುತ್ತದೆ ಎಂಬ ಸತ್ಯದ ಹೊಳಹು ಗೋಚರಿಸಿದ್ದು ಇಲ್ಲಿಯೇ. ಇನ್ನು ವೈಯಕ್ತಿಕವಾಗಿ, ಮೇಲ್ತುಟಿಯ ಮೇಲೆ ಕಪ್ಪು ಮೂಡತೊಡಗಿದ್ದು ಇಲ್ಲಿಯೇ. ಹುಡುಗಿಯರು ಚೆಂದವಾಗಿ ಗೋಚರಿಸಲು ಆರಂಭವಾಗಿದ್ದೂ ಇಲ್ಲಿಯೇ.
        ಮತ್ತೊಮ್ಮೆ ಇದಕ್ಕೆಲ್ಲ ಕಾರಣೀಕರ್ತರಾದವರೆಲ್ಲರನ್ನು ಮನದುಂಬಿ ನೆನೆಯುತ್ತೇನೆ. ಮಿತ್ರವೃಂದ ಹೊರತುಪಡಿಸಿ, ಗುರುಗಳಾದ ಕೆಮಿಸ್ಟ್ರಿ ಕೃಷ್ಣ ಭಟ್ ಸರ್, ಫಿಸಿಕ್ಸ್ ನ ಜಯರಾಮ ಸುವರ್ಣ ಸರ್, ಗಣಿತದ ಜಯಲಕ್ಷ್ಮಿ ಮೇಡಂ, ಇಂಗ್ಲಿಶ್ ನ ಕುದ್ದಣ್ಣಯ್ಯ ಸರ್, ಸಂಸ್ಕೃತದ ಲಕ್ಷ್ಮೀನಾರಾಯಣ ಸರ್ ಮತ್ತು ಮಹಾಬಲ ಭಟ್ಟರು, ಶೇಖರ ಸರ್ ಹಾಗೂ ಇನ್ನಿತರ ಗುರುವರ್ಯರುಗಳ ಋಣಭಾರ ನನ್ನ ಮೇಲಿದೆ. ಹಸನ್ಮುಖಿ ಲೈಬ್ರರಿಯನ್, ಆಫೀಸ್ ಮ್ಯಾನೇಜರ್ ನಾವಡರವರು, ಹಾಸ್ಟೆಲ್ಲಿನ ಜಿನರಾಜ ಶಾಸ್ತ್ರಿಗಳು , ಪೂವಣಿಯವರು ಇವರೆಲ್ಲರ ಚಾಣದೇಟು ನನ್ನನ್ನು ರೂಪಿಸಿದೆ. ಆಫೀಸ್ ಮ್ಯಾನೇಜರ್ ನಾವಡರ ಕುರಿತು ಒಂದು ಸಣ್ಣ ಟಿಪ್ಪಣಿ ಉಚಿತವೆನಿಸುತ್ತದೆ. ಬಿಳಿಯ ತಿಳುವಾದ ಅಂಗಿ ಮತ್ತು ಲುಂಗಿ ಉಟ್ಟಿರುತ್ತಿದ್ದ, ತೀಕ್ಷ್ಣ ಕಂಗಳ, ಉದ್ದನೆಯ ಕರಿಗಡ್ಡದ ಈ ಸಣಕಲ ವ್ಯಕ್ತಿಗೆ ಎಲ್ಲ ಹುಡುಗರೂ ಹೆದರುತ್ತಿದ್ದರು. ಅವರಿಗೆ ಕಾಲೇಜಿನ ಎಲ್ಲ ಮಕ್ಕಳ ಎಲ್ಲಾ ವಿವರಗಳೂ ಗೊತ್ತಿರುತ್ತಿತ್ತು. ಈಗ್ಗೆ ಸುಮಾರು ೧೮ ವರ್ಷಗಳ ಕೆಳಗೆ ಆ ದಾರಿಯಾಗಿ ಹೋಗುತ್ತಿದ್ದಾಗ, ಒಮ್ಮೆ ನನ್ನ ಕಾಲೇಜು ನೋಡಿ ಬರೋಣವೆಂದು ಒಳಹೊಕ್ಕೆ. ಆ ದಿನ ರಜಾದಿನವಾಗಿತ್ತು. ಪ್ರವೇಶ ದ್ವಾರದಲ್ಲೇ, ನೋಟೀಸ್ ಬೋರ್ಡ್ ಪಕ್ಕದಲ್ಲೇ ನಾವಡರು ನಿಂತಿದ್ದರು. ಗಡ್ದದೊಳಗೆ ನುಸುಳಿದ್ದ ಕೆಲ ಬೆಳ್ಳಿ ಕೂದಲುಗಳನ್ನು ಬಿಟ್ಟರೆ ಥೇಟ್ ಅದೇ ನಾವಡರು. ನಾನು, ನಂತರ ಪರಿಚಯ ಹೇಳಿಕೊಂಡು ಮಾತನಾಡಿಸಿದರಾಯಿತು ಎಂದುಕೊಂಡು ಸೀದಾ ಮೇಲೆ ಹೋಗಿ ಸುತ್ತಾಡಿಕೊಂಡು ಕೆಳಗಿಳಿದೆ. ಕಡೆಯ ಮೆಟ್ಟಿಲನ್ನು ಇಳಿಯುತ್ತಿದ್ದಂತೆ ಎರಡೂ ಕೈ ಮುಗಿದು, "ನಮಸ್ಕಾರ, ಸರ್" ಎನ್ನುತ್ತಿದ್ದಂತೆ ಅವರು ಪ್ರತಿ ನಮಸ್ಕರಿಸಿ, "ಏನು, ರವೀಂದ್ರ ಮಹಾಬಲೇಶ್ವರ ಭಟ್ಟರೇ , ಚೆನ್ನಾಗಿದ್ದೀರಾ?" ಎಂದು ಪೂರ್ಣ ಹೆಸರುಗೊಂಡು ಮಾತನಾಡಿಸಿದಾಗ ನಾನು ನನ್ನನ್ನೇ ಚಿವುಟಿ ನೋಡಿಕೊಂಡಿದ್ದೆ. ನನ್ನ ಉಡಾಫೆಗೆ ನನಗೇ  ನಾಚಿಕೆಯಾಗಿತ್ತು. ಅವರ ಅಸಾಧ್ಯ ನೆನಪಿನಶಕ್ತಿಗೆ ಸಲಾಂ ಹೊಡೆದಿದ್ದೆ. ಇಂತಹ ಮಹಾನುಭಾವರುಗಳ ಸಂಸರ್ಗದಿಂದ ನನ್ನೊಳಗೂ ಒಂದು ಸಂಸ್ಕಾರ ರೂಪುಗೊಂಡಿದ್ದುದು ವಿಶೇಷವೇನೂ ಅಲ್ಲವಲ್ಲ.
       ನನ್ನಂತಹ ಸಾವಿರಾರು ಬಡವರ ಬಾಳಿಗೆ ಬೆಳಕು ತೋರಿದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರಾದಿಯಾಗಿ ಎಲ್ಲ ಸಹೃದಯಿ ಹಿರಿಯರಿಗೆ ನಾನು ಚಿರಋಣಿ.