Saturday 10 December 2016

ಕಗ್ಗಲ್ಲಿಗೆ ಬಿದ್ದವು ಚಾಣದೇಟುಗಳು -ಭಾಗ - 1

                 ಕಗ್ಗಲ್ಲಿಗೆ ಬಿದ್ದವು  ಚಾಣದೇಟುಗಳು -ಭಾಗ - 1          
         ಹಿರಿಯ ಪ್ರಾಥಮಿಕ ಶಾಲೆಗಳಿಗಿಂತ  ಹೈಸ್ಕೂಲುಗಳು ಮತ್ತೂ ವಿರಳವಾಗಿದ್ದ ದಿನಗಳವು. ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಕುವರ ಶ್ರೀಯುತ ದಿನಕರ ದೇಸಾಯಿಯವರು ಆ ಸಮಯದಲ್ಲಿ ತಮ್ಮ “ಕೆನರಾ ವೆಲ್ ಫೇರ್ ಟ್ರಸ್ಟ್” ಮೂಲಕ ಜಿಲ್ಲೆಯಾದ್ಯಂತ ಶೈಕ್ಷಣಿಕ ಕ್ರಾಂತಿಯನ್ನೇ ಆರಂಭಿಸಿದ್ದರು. ಸ್ಥಳೀಯರ ಬೇಡಿಕೆ ಮತ್ತು ಆಸಕ್ತಿಗಳನ್ನು ಗಮನಿಸಿ ಜಿಲ್ಲೆಯ ಹಲವಾರು ಊರುಗಳಲ್ಲಿ “ಜನತಾ ವಿದ್ಯಾಲಯ” ಹೆಸರಿನಲ್ಲಿ ಹೈಸ್ಕೂಲುಗಳನ್ನು ಪ್ರಾರಂಭಿಸುತ್ತಿದ್ದರು. ಅದೇ ರೀತಿಯ ಒಂದು ಜನತಾ ವಿದ್ಯಾಲಯ 1967-68ರಲ್ಲಿ ಶಿರಸಿ ತಾಲೂಕಿನ ಕುಳವೆ ಮತ್ತು ಬರೂರು ಗ್ರಾಮಗಳ ಮಧ್ಯವರ್ತಿ ಸ್ಥಳದಲ್ಲಿ ಆರಂಭವಾಗಿತ್ತು. ಕುಳವೆಯ ಬಡ್ತಿ ಡಾಕ್ಟರ್, ಕೆರೆಕೈ ಕೃಷ್ಣ ಭಟ್ಟರು, ಕಾಗೇರಿ ಅನಂತ ಹೆಗಡೆಯವರು, ಬೆಳಖಂಡ, ಬರೂರು, ಅರಸೀಕೆರೆ, ಕಲಗದ್ದೆ, ನೇಗಾರು, ಕೆಂಚಗದ್ದೆ, ತೆರಕನಹಳ್ಳಿ ಇವೇ ಮುಂತಾದ  ಸುತ್ತಲಿನ ಹತ್ತಾರು ಹಳ್ಳಿಗಳ ಮಹನೀಯರುಗಳ ಪ್ರಯತ್ನದಿಂದ ಹಾಗೂ ಶ್ರೀಯುತ ದಿನಕರ ದೇಸಾಯಿಯವರ ಕೊಡುಗೆಯಾಗಿ ತಲೆ ಎತ್ತಿದ ಆ ಹೈಸ್ಕೂಲು ಆಗಿನ್ನೂ ತನ್ನ ಬಾಲಗ್ರಹ ಪೀಡೆಯಿಂದ ನರಳುತ್ತಿತ್ತು. ಪ್ರತಿ ತರಗತಿಗೂ ಕನಿಷ್ಠ 30 ವಿದ್ಯಾರ್ಥಿಗಳಿಲ್ಲದಿದ್ದರೆ ಶಾಲೆಯ ಮಾನ್ಯತೆ ರದ್ದಾಗುವ ಭಯವಿತ್ತು. 1972 ರಲ್ಲಿ ನಾವು 7ನೇ ಕ್ಲಾಸ್ ಮುಗಿಸಿದಾಗ ಈ ಹೈಸ್ಕೂಲಿಗೆ ಕೇವಲ ನಾಲ್ಕು ವರ್ಷವಾಗಿತ್ತು. ನನ್ನ ತಂದೆ ಕುಳವೆ ಬಡ್ತಿ ಡಾಕ್ಟರರಲ್ಲಿ ತನ್ನ ಮಗನ ಹೈಸ್ಕೂಲಿನ ಬಗ್ಗೆ ಪ್ರಸ್ತಾಪ ಮಾಡಿದಾಗ ತಮ್ಮದೇ ಆದ ಈ ಹೊಸ ಹೈಸ್ಕೂಲಿಗೆ ಸೇರಿಸುವಂತೆ ತಿಳಿಸಿದರು. ಅಲ್ಲೇ ಇದ್ದ ಕಾಗೇರಿ ಅನಂತ ಹೆಗಡೆಯವರು ತಮ್ಮ ಮನೆಗೇ ಹುಡುಗನನ್ನು ಕರೆತರಲು ಹೇಳಿ, ನಂತರದ ವ್ಯವಸ್ಥೆಯನ್ನು ತಾನು ಮಾಡುವದಾಗಿ  ತಿಳಿಸಿದರು.
        ಇತ್ತ  ನಾನು ಹೈಸ್ಕೂಲಿಗೆ ಹೋಗಲು ಸಂಭ್ರಮ ಪಡತೊಡಗಿದೆ. ಉದ್ದವಾಗಿ ಬೆಳೆದಿದ್ದ ಕೂದಲನ್ನು ಕತ್ತರಿಸಲು ಕ್ಷೌರದವನ ಹತ್ತಿರ ಹೋದಾಗ ನುಣ್ಣಗೆ ಬೋಳು ಹೊಡೆಸಲು ಬಿಡದೆ, ಹಠ ಮಾಡಿ , “ಕ್ರಾಪ್ “ ಹೊಡೆಸಿಕೊಂಡೆ. ನನ್ನ ಮತ್ತು ಅಪ್ಪಯ್ಯನ ನಡುವೆ ರಾಜಿ ಮಾಡುವಂತೆ, ನುಣ್ಣಗೆ ಹೆರೆದ ತಲೆ 15 ದಿನದಲ್ಲಿ ಬೆಳೆಯಬಹುದಾದ ಮಟ್ಟದ ಕೂದಲು ಉಳಿಸಿ, ಕ್ರಾಪ್ ಹೊಡೆಸಿದ್ದಾಯಿತು. ಹೊರಡಲು ಎರಡು ದಿನ ಇರುವಾಗ ನನ್ನ ಪರಮಾಪ್ತ ಗೆಳೆಯ ಗಣಗೇರಿ ಕೃಷ್ಣಮೂರ್ತಿ ಅಯ್ಯ  ನಮ್ಮ ಮನೆಗೇ ಬಂದು, ತಾನೂ ಹೈಸ್ಕೂಲು ಸೇರಲು ಬಯಸುವದಾಗಿಯೂ, ನನ್ನ ಜೊತೆ ಅವನನ್ನೂ ಕರೆದೊಯ್ಯಬೇಕೆಂದೂ ದುಂಬಾಲು ಬಿದ್ದ. ತಂದೆ ಇಲ್ಲದ ಅವನು ಮುಂದೆ ಓದಲು ತನ್ನದೇ ಪ್ರಯತ್ನದಿಂದ ಒಂದು ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು. ತನ್ನ ಮಗನ ನೆಲೆಯೇ ಅನಿಶ್ಚಿತವಾಗಿದ್ದರೂ ಸಹ ದಯಾರ್ದೃ ಹೃದಯಿಯಾದ ನನ್ನಪ್ಪ, “ದೈವೇಚ್ಚೆ ಇದ್ದಂತೆ ಆಗುತ್ತದೆ. ನೀನೂ ಒಂದು ಕೈಚೀಲದಲ್ಲಿ ನಿನ್ನ ಬಟ್ಟೆ ಬರೆ ಹಾಕಿಕೊಂಡು ಬಾ “ ಎಂದು ನನ್ನ ಜೊತೆ ಅವನನ್ನೂ ಕರೆದುಕೊಂಡು ಹೊರಟರು. ಮನೆಯಿಂದ ಒಂಭತ್ತು ಮೈಲು ದೂರದ ಕಾಗೇರಿಗೆ ಒಂದು ಸಾಯಂಕಾಲ ನಾವು ಮೂವರೂ ಬಂದಿಳಿದೆವು. “ಈ ಹುಡುಗರು 3-4 ದಿನ ನನ್ನ ಮನೆಯಲ್ಲೇ ಇರಲಿ. ಅಷ್ಟರಲ್ಲಿ ನಾನು ಅವರಿಗೆ ಉಳಿಯಲು ಒಂದು ಸೂಕ್ತ ವ್ಯವಸ್ಥೆ ಮಾಡಿ ಕೊಡುತ್ತೇನೆ. ನೀವು ನಿಶ್ಚಿಂತೆಯಿಂದ ಹೊರಡಿರಿ“, ಎಂದು ನನ್ನಪ್ಪನನ್ನು ಕಳಿಸಿಕೊಟ್ಟ ಅನಂತ ಹೆಗಡೆಯವರು ನಮ್ಮಿಬ್ಬರನ್ನೂ ತಮ್ಮ ಮನೆಯಲ್ಲಿಯೇ ಉಳಿಸಿಕೊಂಡರು. ಅವರ ಹಿರಿಮಗಳು ಪ್ರಭಾವತಿ (ನಂತರ ನಮಗೆ ಅಕ್ಕ ಆದಳು) ಅದೇ ವರ್ಷ ತನ್ನ ಮೆಟ್ರಿಕ್ ಮುಗಿಸಿದ್ದಳು. ಪ್ರಥಮ ಪುತ್ರ ಶಿವರಾಮ ನಮ್ಮ ಜೊತೆಯಲ್ಲೇ ಎಂಟನೇ ಕ್ಲಾಸಿಗೆ ಬರುವವನಿದ್ದ. ಎರಡನೇ ಮಗ ವಿಶ್ವೇಶ್ವರ’’ ಆರನೇ ಕ್ಲಾಸಿನಲ್ಲಿದ್ದ. ಇವರಲ್ಲದೆ ಒಬ್ಬಳು ತಂಗಿ ಸರಸ್ವತಿ ಹಾಗೂ ಮೂರು ಜನ ಇನ್ನೂ ಕಿರಿಯ ತಮ್ಮಂದಿರಿದ್ದರು. ಕೊನೆಯವನಾದ ನಾಗಪತಿ ಆಗ 1-2 ವರ್ಷದ ಬಾಲ.
         ಇವರ ಮನೆಯಲ್ಲಿ ಉಳಿದು ನಾವಿಬ್ಬರೂ ಹೈಸ್ಕೂಲಿಗೆ ಹೋಗಿಬರುತ್ತಾ ನಮ್ಮ ಎಸ್ಸೆಸ್ಸೆಲ್ಸಿ ಮುಗಿಸಿದೆವು. ಈಗ  ನಾನು ನಿಜವಾಗಿ ಹೇಳಬೇಕಾದದ್ದು - ಆಗ ಅವರ ಮನೆ, ಅದರ ಗೃಹಸ್ಥ  ಹಾಗೂ  ಆ ಗೃಹಿಣಿ  ಹೇಗಿದ್ದರು ಎಂಬುದನ್ನೇ ವಿನಹ ನನ್ನದೇ ತುತ್ತೂರಿ ಊದುವದನ್ನಲ್ಲ. ಈ ವಿಷಯ ಈಗಿನವರಿಗೆ (ನಮ್ಮೆಲ್ಲರಿಗೂ ಕೂಡ) ಅನುಕರಣೀಯವಾಗಬಹುದೆಂದು ನನ್ನ ಭಾವನೆ.
         ನಾವು ಆ ಮನೆಗೆ  ಹೋದಾಗ ಮನೆಯ ಯಜಮಾನ “ಅನಂತ ಹೆಗಡೆ”ಯವರಿಗೆ  ಸುಮಾರು 37-38ರ ಪ್ರಾಯ ಇದ್ದಿರಬಹುದು. ಅದಾಗಲೇ ಹಣೆ ಅಗಲವಾಗಲು ಆರಂಭವಾಗಿತ್ತು. ಇವರ ಮನೆ ಸುತ್ತಲಿನ ಪ್ರಾಂತ್ಯದ ಗಣ್ಯರ ಮನೆಗಳ ಪೈಕಿ ಒಂದು. ಮನೆಯಲ್ಲಿ ಸದಾ ಬಂದು ಹೋಗುವವರ ಗಿಜಿಗಿಜಿ. ತುಂಬಾ ಹಳೆಯದಾದವಿಶಾಲವಾದ ಮನೆ. ಮನೆಯಲ್ಲಿ ಮನೆಯವರೇ ಹತ್ತು ಜನ. (ಅವರ ತಾಯಿ “ಮಹಾಲಕ್ಷ್ಮಮ್ಮ” ಸಹ ಇದ್ದರು). ಜೊತೆಗೆ ನಾವಿಬ್ಬರು. ಹೊರಗೆ ಹತ್ತಾರು ಆಳುಮಕ್ಕಳು. (ಅವರ ಪೈಕಿ 3-4 ಜನ ಅಲ್ಲೇ ಮಧ್ಯಾಹ್ನದ ಊಟಕ್ಕೆ ಇರುತ್ತಿದ್ದರು). ಪ್ರತೀ ಮಧ್ಯಾಹ್ನ ಕನಿಷ್ಠ 20 ಜನರಿಗೆ ಅಡಿಗೆ ಮಾಡಬೇಕಿತ್ತು. ಬೆಳಿಗ್ಗೆ ತಿಂಡಿಗೆ  ಎಲ್ಲರಿಗೂ ತೆಳ್ಳೇವು (ತಿಳುವಾದ ದೋಸೆ). ಅದಕ್ಕಾಗಿ ಅಕ್ಕಿ ನೆನೆಸಿಟ್ಟು ಮುನ್ನಾದಿನ ಸಂಜೆಯೇ ರುಬ್ಬುಕಲ್ಲಿನಲ್ಲಿ ರುಬ್ಬಿ ಇಡಬೇಕಿತ್ತು. ಆಗ ಮನೆಗಿನ್ನೂ ಕರೆಂಟು ಬಂದಿರಲಿಲ್ಲ. (ನಾವು ಹೈಸ್ಕೂಲಿನಲ್ಲಿದ್ದಾಗಲೇ ಅಲ್ಲಿಗೆ ಕರೆಂಟು ಬಂತು). ಹಾಗಾಗಿ ಅಕ್ಕಿ ಬೀಸುವದಲ್ಲದೆ ಮಜ್ಜಿಗೆ ಕಡೆಯುವದು, ಹುಳಿ, ತಂಬುಳಿಗಳಿಗೆ ರುಬ್ಬುವದು, ಚಟ್ಣಿ ಪುಡಿ ಮಾಡುವದು ಎಲ್ಲವನ್ನೂ ಕೈಯಿಂದಲೇ  ಮಾಡಬೇಕಿತ್ತು. ಇದಲ್ಲದೆ ಕೊಟ್ಟಿಗೆಯಲ್ಲಿ 15-20 ದನಗಳು. ಅವುಗಳ ಹಾಲು ಕರೆಯುವದು, ಹಾಲು ಕಾಯಿಸುವದು, ಹೆಪ್ಪು ಹಾಕಿ, ಮಜ್ಜಿಗೆ ಕಡೆದು ಬೆಣ್ಣೆ ತೆಗೆಯುವದು, ತುಪ್ಪ ಕಾಯಿಸುವದು – ಮನೆಯಲ್ಲಿ ತುಪ್ಪದ  ಒರತೆ ಬತ್ತಬಾರದು, ಆ ರೀತಿ, + ಎಲ್ಲರಿಗೂ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಹಾ ತಿಂಡಿ. ಇಷ್ಟಲ್ಲದೆ ಮನೆಯಲ್ಲಿ ಏನಾದರೂ ಒಂದು ಸಿಹಿತಿಂಡಿ ಮಾಡಿಟ್ಟಿರಬೇಕು (ಲಾಡು, ಹೋಳಿಗೆ ಇತ್ಯಾದಿ)- ಅನಿರೀಕ್ಷಿತ ಅತಿಥಿಗಳಿಗಾಗಿ. ಮತ್ತೆ ರಾತ್ರಿಯೂಟಕ್ಕೆ ಕನಿಷ್ಠ 12 ಜನ. ಇವೆಲ್ಲದರ ಜೊತೆ ಒಂದು ಕೈಕೂಸು + ಉಳಿದ ಎಳೆ ಮಕ್ಕಳನ್ನೂ ಸಂಭಾಳಿಸಬೇಕು ಹಾಗೂ ನಿತ್ಯ ಮುಂಜಾವಿನಲ್ಲಿ ಬಾಗಿಲಿಗೆ ನೀರು ಹಾಕಿ ರಂಗೋಲಿ ಇಡುವದನ್ನು ತಪ್ಪಿಸುವಂತಿಲ್ಲ (ನಾನು ಅಲ್ಲಿದ್ದಾಗ ಇದನ್ನು ಅಕ್ಕ ನಿರ್ವಹಿಸುತ್ತಿದ್ದಳು ಎನ್ನಿ), ಅಡಿಗೆಗೆ ಮತ್ತು ಸ್ನಾನಕ್ಕೆ ಭಾವಿಯಿಂದ ನೀರೆತ್ತಬೇಕು. ಈ  ಅಷ್ಟೂ  ಕೆಲಸಗಳನ್ನು, ಎಲ್ಲೂ ಅಡೆ ತಡೆ ಬಾರದಂತೆ, ಅನಾನುಕೂಲತೆ ಉಂಟಾಗದಂತೆ  ಒಬ್ಬರೇ ಹೆಂಗಸು ನಿರ್ವಹಿಸುತ್ತಿದ್ದರು. ಆ ಮಹಾತಾಯಿಯೇ  “ಸರ್ವೇಶ್ವರಮ್ಮ”_ ಶ್ರೀ ಅನಂತ ಹೆಗಡೆಯವರ ಧರ್ಮಪತ್ನಿ. ಇದನ್ನೆಲ್ಲ ಕಣ್ಣಾರೆ ಕಂಡ ನಮಗೇ ಇದು ಅಸಂಭವ ಎನ್ನಿಸುವ ಹಾಗಿದೆ, ಇನ್ನು  ಈಗಿನ ತಲೆಮಾರಿನವರನ್ನು ಈ ವಿಷಯದಲ್ಲಿ ಹೇಗೆ ನಂಬಿಸುವದು? ಆಗಿನ ದಿನಗಳಲ್ಲಿ ಇನ್ನುಳಿದ ಹವ್ಯಕರ ಮನೆಗಳಲ್ಲೂ ಇದೇ ಸನ್ನಿವೇಶ ಇದ್ದಿರಬಹುದಾದರೂ ಅಲ್ಲೆಲ್ಲ ಇವರ ಮನೆಗೆ ಇದ್ದ  “ಸಂದಣಿ” ಇದ್ದಿರಲಾರದು ಮತ್ತು ಅಲ್ಲೆಲ್ಲ  ಹೆಂಗಸು ಕೂಡ ಒಬ್ಬರೇ  ಇದ್ದಿರಲಾರರು.ಇಷ್ಟೆಲ್ಲ ಒತ್ತಡವನ್ನು ನಿಭಾಯಿಸಿಯೂ ಆ ಅಮ್ಮ ಎಂದೂ ಯಾರ ಮೇಲೂ ಸಿಟ್ಟು ಮಾಡಿದ್ದನ್ನು – ಆಳುಗಳ ಮೇಲೆ ಸಹ – ನಾನಂತೂ ಕಂಡಿಲ್ಲ. ಇಷ್ಟಾಗಿ ಇವರೇನೂ ಕಷ್ಟದ ಬಾಲ್ಯ ಕಳೆದು ಬಂದವರಲ್ಲ. ಸಿದ್ದಾಪುರ ತಾಲೂಕಿನ,  ತುಂಬಾ ಅನುಕೂಲಸ್ಥರಾದ, ಗೋರನ್ ಮನೆ  ಹೆಗಡೆಯವರ ಮನೆಯ ಮಗಳಿವರು. ಅದು ಹೇಗೆ ತಾವು ಮದುವೆಯಾಗಿ ಬಂದ ಆ ಎಳವೆಯಲ್ಲೇ ಈ “ಅನಂತ”ಸಂಸಾರಸಾಗರದಲ್ಲಿ  ಸುಲಲಿತವಾಗಿ ಈಜುವದನ್ನು ರೂಢಿಸಿಕೊಂಡರೋ ನಾ ಕಾಣೆ.
       ಮೂರು ವರ್ಷಗಳ ಕಾಲ ಅವರ ಕೈಯ್ಯೂಟ ಸವಿಯುವ, ಅವರನ್ನು ಹತ್ತಿರದಿಂದ ಗಮನಿಸಿ ಅವರಲ್ಲಿನ ಉದಾತ್ತ ಸ್ವಭಾವಗಳಿಂದ ಪ್ರಭಾವಿತನಾಗುವ, ಆ ಸಂಸ್ಕಾರವನ್ನು ನನ್ನಲ್ಲೂ ಮೇಳೈಸಿಕೊಳ್ಳುವ ಅವಕಾಶ  ನನಗೆ ದಕ್ಕಿದ್ದು ನನ್ನ ಪೂರ್ವಾರ್ಜಿತ ಪುಣ್ಯ ಫಲದಿಂದ ಎಂದೇ ತಿಳಿಯುತ್ತೇನೆ. ನನ್ನ ಪಾಲಿಗೆ ಈ ಅನ್ನಪೂರ್ಣೆ” ಸರ್ವೇಶ್ವರಮ್ಮ ಎರಡನೆಯ “ಅಮ್ಮ”.                                                                                                                                                                                                                     
ಸರ್ವೇಶ್ವರಮ್ಮ- ಅನಂತ ಹೆಗಡೆಯವರು (ಅಂದ  ಕಾಲತ್ತಿಲೆ)
                                                                                                                                                                         ಇನ್ನು, ಶ್ರೀಯುತ ಅನಂತ ಹೆಗಡೆಯವರು ಸಹಾ ತುಂಬ ಸಹೃದಯಶೀಲ ಸದ್ಗೃಹಸ್ಥರು. ಭಾರತದ  ಸ್ವಾತಂತ್ರ್ಯಾನಂತರದ ಆ  ದಿನಗಳಲ್ಲಿ  ಆಗಷ್ಟೇ  ಯೌವ್ವನಿಗರಾಗುತ್ತಿದ್ದವರಿಗೆ ತಾವು ಅನುಸರಿಸಬೇಕಾದ ಜೀವನ ಪದ್ಧತಿ/ವಿಧಾನಗಳ  ಬಗ್ಗೆ  ತುಂಬ ಗೊಂದಲವಿದ್ದ  ಕಾಲಘಟ್ಟವದು. ತಮ್ಮ ಮೂಲ ಸನಾತನ ಪದ್ಧತಿಯನ್ನು ಅನುಸರಿಸುವದೋ ಅಥವಾ ತಮ್ಮನ್ನು ಅಲ್ಲಿಯವರೆಗೆ ಆಳಿದ ಪರಂಗಿಯವರ ಜೀವನಪದ್ಧತಿಯನ್ನು ಅನುಸರಿಸಿಕೊಂಡು ಬೆಳೆಯುವದೋ ಎಂಬುದರ ನಡುವೆ ದ್ವಂದ್ವವಿದ್ದ ಸಮಯವದು. ನಮ್ಮ ದೇಶದ ಎಲ್ಲ ರಂಗಗಳಲ್ಲೂ  ಇದು  ಎದ್ದು ಕಾಣುತ್ತಿತ್ತು. ಯುವಕರಿಗಂತೂ ವಯೋಸಹಜವಾಗಿ ಪರಂಗಿಯವರು ಬಿಟ್ಟುಹೋದ “ಭೋಗಪ್ರಧಾನ” ಜೀವನವೇ  ತುಂಬ ಆಪ್ಯಾಯಮಾನವೆನಿಸುತ್ತಿತ್ತು. ಇಂತಹ ಪರಿಸರದಲ್ಲಿ ಮೈಯ್ಯಲ್ಲಿ ಯೌವನವೂ, ಕೈಯಲ್ಲಿ ಕಾಸೂ ಇದ್ದ’, ಮನೆಯಲ್ಲಿ ಅಂಕೆಯಲ್ಲಿಡುವ ತಂದೆ ಇಲ್ಲದ ಈ ಅನಂತ, ತನ್ನ ತಲೆ ತಿರುಗದಂತೆ ಸಂಭಾಳಿಸಿಕೊಂಡು,  ಅತ್ಯಂತ ಮೌಲ್ಯಯುತ ಜೀವನ ರೂಢಿಸಿಕೊಂಡು, ಎಲ್ಲರಿಗೂ ಮಾದರಿಯಾಗುವಂತೆ ಬದುಕಿದ್ದು ಅವರಲ್ಲಿ ಅಂತರ್ಗತವಾಗಿದ್ದ  ಗಟ್ಟಿಯಾದ  ಸಂಸ್ಕಾರದ  ಬಲದಿಂದಲೇ ಎಂದೆನಿಸುತ್ತದೆ. ಊರ  ಹಿರಿಯರ  ಹಾಗೂ  ಧನವಂತರ ಕೆಲವೊಂದು  “ಹವ್ಯಾಸ”ಗಳನ್ನು ಸಮಾಜವಾಗಲೀ, ಅವರ ಮನೆಯವರಾಗಲೀ ಸಹಜವೆಂಬಂತೆ ಒಪ್ಪಿಕೊಳ್ಳುವ ಪರಿಪಾಠವಿದ್ದ ದಿನಗಳವು. ಅಂತಹದ್ದರಲ್ಲಿ ಯೌವ್ವನ, ಸೌಂದರ್ಯ ಹಾಗೂ ಶ್ರೀಮಂತಿಕೆ ಇವು ಮೂರೂ ಮೇಳೈಸಿದ್ದ ಈ ಅನಂತ ಹೆಗಡೆಯವರು ತುಂಬ ವಿವೇಕಿಯಾಗಿ ವರ್ತಿಸುತ್ತಾ, ಸಮಾಜದ ಏಳಿಗೆಗಾಗಿ ಸಹಕಾರ ಸಂಘ, ಹೈಸ್ಕೂಲು ಇತ್ಯಾದಿ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ತಮ್ಮ ಉತ್ಸಾಹ, ಶಕ್ತಿ, ಸಾಮರ್ಥ್ಯಗಳನ್ನು ವಿನಿಯೋಗಿಸಿದರಲ್ಲದೆ ಅನ್ಯಥಾ ಲೋಲುಪ ವ್ಯಸನಗಳಲ್ಲಿ ಅಲ್ಲ ಎಂಬುದು ಅತ್ಯಂತ  ಪ್ರಶಂಸಾರ್ಹ ವಿಷಯವಲ್ಲವೇ?
                                                                                                 (ಮುಂದುವರಿಯುವದು) .            

Monday 5 December 2016

ಶಾಲಾ ದಿನಗಳ ನೆನಪು

                       
      1960ರ ದಶಕದಲ್ಲಿ ನಮ್ಮೂರ (ದೊಡ್ನಳ್ಳಿ) ಸುತ್ತಲಿನ ಹತ್ತಾರು ಹಳ್ಳಿಗಳ ಪೈಕಿ ನಮ್ಮೂರಿನಲ್ಲಿ ಮಾತ್ರ ಹಿರಿಯ ಪ್ರಾಥಮಿಕ ಶಾಲೆಯಿತ್ತು. ಸುತ್ತಲಿನ ಹಳ್ಳಿಗಳ ಪೈಕಿ ಮೂರರಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳಿದ್ದು ಅಲ್ಲಿ 4ನೇ ತರಗತಿಯ ತನಕ ಓದಿ ನಂತರ 5ನೇ ತರಗತಿಗೆ ನಮ್ಮೂರ ಶಾಲೆಗೆ ಬರುತ್ತಿದ್ದರು. ಅಷ್ಟೊತ್ತಿಗೆ 2-3 ಮೈಲು ದೂರದ ನಮ್ಮ ಶಾಲೆಗೆ ಬಂದು ಹೋಗುವಷ್ಟು ಅವರು ದೊಡ್ಡವರಾಗಿರುತ್ತಿದ್ದರು.
      ನಮ್ಮದು ಹಿರಿಯ ಪ್ರಾಥಮಿಕ ಶಾಲೆಯಾದರೂ ಅದರಲ್ಲಿ ಆಗ ಕೇವಲ ಎರಡೇ ಕೋಣೆಗಳಿದ್ದವು. ಅವುಗಳ ಪೈಕಿ ದೊಡ್ಡದಾಗಿದ್ದ ಒಂದು ಖೋಲಿಯ ನಡುವೆ ಪರದೆ ಹಾಕಿ ಪಾರ್ಟಿಷನ್ ಮಾಡಿ ಇನ್ನೊಂದು ಖೋಲಿ ಮಾಡಿಕೊಂಡಿದ್ದರು. ಈ ಮೂರು ಖೋಲಿಗಳಲ್ಲೇ ಎಲ್ಲ ಏಳು ಕ್ಲಾಸುಗಳ ಮಕ್ಕಳೂ ಕೂಡ್ರಬೇಕಿತ್ತು. 6 ಮತ್ತು 7ನೇ ತರಗತಿಯ ಮಕ್ಕಳಿಗೆ ಮಾತ್ರ ಕೂಡ್ರಲು ಬೆಂಚು ಇತ್ತು. ಉಳಿದವರೆಲ್ಲಾ ನೆಲದ ಮೇಲೇ ಕೂರುತ್ತಿದ್ದೆವು. ಆದರೆ ಇವ್ಯಾವುದೂ ನಮ್ಮ ಕಲಿಕೆಗೆ ಅಡಚಣೆಯಾಗಿರಲೇ ಇಲ್ಲ. ಅದಕ್ಕೆ ಕಾರಣ ಆಗ ಅಲ್ಲಿದ್ದ ಮೂರು ಜನ ಶಿಕ್ಷಕರು. ಆಗಿನ್ನೂ ಬ್ರಹ್ಮಚಾರಿಗಳೇ ಆಗಿದ್ದ ಆ ಮೂವರೂ ಅತ್ಯಂತ ನಿಷ್ಠಾವಂತ ಗುರುಗಳಾಗಿದ್ದರು.
      ಆ ಮೂವರ ಪೈಕಿ ಶ್ರೀ ಮಾರುತಿ ಹೊನ್ನಾವರ್ ಎಂಬುವವರು ಹೆಡ್ ಮಾಸ್ತರ್. ಶ್ರೀ ಜಿ.ಎಸ್.ಭಂಡಾರಿ (ಈಗ ಇವರು  ದಿವಂಗತರಾಗಿದ್ದಾರೆ) ಹಾಗೂ ಶ್ರೀ ಬಿ.ವಿ. ನಾಯ್ಕ್ ಸಹಾಯಕ ಶಿಕ್ಷಕರು.. ಈ ತ್ರಿವಳಿ ಶಿಕ್ಷಕರ ಧ್ಯೇಯನಿಷ್ಟ ಅವಿರತ ಪ್ರಯತ್ನದಿಂದ ನಮ್ಮ ಶಾಲೆ ಅತ್ಯುತ್ತಮ ಶಾಲೆಗಳ ಪೈಕಿ ಒಂದೆಂದು  ಹೆಸರು ಮಾಡಿತ್ತು. ಪ್ರತಿವರ್ಷ ಮುಲ್ಕಿ ಪರೀಕ್ಷೆಯಲ್ಲಿ ಶತ ಪ್ರತಿಶತ ಫಲಿತಾಂಶ  ಬರುತ್ತಿತ್ತು. (ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ್ದ 7ನೇ ತರಗತಿಯ ಪರೀಕ್ಷೆಗೆ ಮುಲ್ಕಿ ಪರೀಕ್ಷೆ ಎನ್ನುತ್ತಿದ್ದರು. ಬಹುಶ:ಅರೇಬಿಕ್ ಶಬ್ದ “ಮುಲ್ಕ್” ಎಂಬುದರಿಂದ ಬಂದಿದ್ದಿರಬೇಕು).
       ನನ್ನ 3ನೇ ಕ್ಲಾಸಿನಿಂದ 6ನೇ ಕ್ಲಾಸ್ ತನಕ ಶ್ರೀ ಬಿ.ವಿ. ನಾಯ್ಕ್ ರವರು ನಮ್ಮ ಪೂರ್ತಿ ಕ್ಲಾಸನ್ನು ತೆಗೆದುಕೊಳ್ಳುತ್ತಿದ್ದರು. ಗಣಿತ ಮತ್ತು ಇಂಗ್ಲೀಷ್ ಅವರ ಮೆಚ್ಚಿನ ವಿಷಯಗಳು. ಉಳಿದವನ್ನೂ ಚೆನ್ನಾಗಿಯೇ ಕಲಿಸುತ್ತಿದ್ದರು. ಆದಾಗ ತಾನೇ ನಮ್ಮ  7ನೇ ತರಗತಿ ಆರಂಭವಾಗಿತ್ತು. ಮತ್ತೆ   ನಾಯ್ಕ್ ಗುರೂಜಿಯವರೇ  ನಮ್ಮ ಕ್ಲಾಸ್ ಟೀಚರ್. ಒಂದು ದಿನ ತರಗತಿಯಲ್ಲಿನ ನಮ್ಮ ಏನೋ ತಪ್ಪಿಗೆ ಎಲ್ಲರಿಗೂ ಒಂದೊಂದು ಏಟು ಕೊಟ್ಟಿದ್ದರು – ಗಂಡು ಹೆಣ್ಣು ಮಕ್ಕಳೆಂಬ ಭೇದವಿಲ್ಲದೆ. ಈ ವಿಷಯವನ್ನು ಅಳುತ್ತಾ ತನ್ನ ಮನೆಯಲ್ಲಿ ದೂರಿದಳೊಬ್ಬಳು. ಅದೇ ಸಮಯಕ್ಕೆ ಪರವೂರಿನಲ್ಲಿ ಕಾಲೇಜ್ ಓದುತ್ತಿದ್ದ, ರಜೆಗಾಗಿ ಊರಿಗೆ ಬಂದ ಅವಳಣ್ಣ ಇದರಿಂದ ಕನಲಿ, ಮಾರನೇ ದಿನ ಸೀದಾ ಶಾಲೆಗೆ ಬಂದು ನಾಯ್ಕ್ ಗುರೂಜಿಯವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ. ಆ ದಿನಗಳಲ್ಲಿ ಮಕ್ಕಳಿಗೆ ಒಂದೆರಡು ಏಟು ಹೊಡೆಯುವದು ಈಗಿನಂತೆ ಅಪರಾಧವಾಗಿರಲಿಲ್ಲ. ಗುರೂಜಿ ಅದನ್ನಾಗಲೇ ಮರೆತು ಬಿಟ್ಟಿದ್ದರು ಕೂಡಾ. ನಿಯತ್ತಾಗಿ ದುಡಿಯುತ್ತಿದ್ದ ಅವರಿಗೆ ತಾವು ಏನೂ ತಪ್ಪು ಮಾಡಿಲ್ಲವೆಂಬ ಧೃಡ ನಂಬಿಕೆ. ಈ ಚಿಗುರು ಮೀಸೆಯ ಯುವಕನ ಮಾತಿಗೆ ಸೊಪ್ಪು ಹಾಕದೇ ಅವನಿಗೆ “ಗೆಟ್ ಔಟ್” ಎಂದು ಆದೇಶಿಸಿದರು. ಅಷ್ಟಕ್ಕೂ ಅವರೂ ಸಹ ಬಿಸಿರಕ್ತದ ತರುಣರೇ ಆಗಿದ್ದರು. “ನಿನ್ನನ್ನು ಈ ಶಾಲೆಯಿಂದಲೇ ಗೆಟ್ ಔಟ್  ಮಾಡಿಸುತ್ತೇನೆ” ಎಂದು ಸವಾಲು ಹಾಕಿ ಹೋದ ಆ ತರುಣ, ಊರ ಹಿರಿಯರ ಎದುರು ಈ ಮಾಸ್ತರರ ಉದ್ಧಟತನದ ಬಗ್ಗೆ ವರದಿ ಮಾಡಿ ಪಂಚಾಯತಿ ಸೇರಿಸಿದ. ಇತ್ತ  ಶಾಲೆಯಲ್ಲಿ ಮೂರೂ ಜನ ಶಿಕ್ಷಕರು ತಮ್ಮದಲ್ಲದ ತಪ್ಪಿಗೆ ಕ್ಷಮೆ ಕೇಳಕೂಡದೆಂದು ನಿರ್ಧರಿಸಿಕೊಂಡರು. ಶಾಲೆಗೆ ಬಂದ ಹಿರಿಯರು ಆ ತರುಣನ ಪರವಾಗಿಯೇ ಮಾತಾಡಿದ್ದರಿಂದ ಶಿಕ್ಷಕರು ಸಹ ಹಟ ಹಿಡಿದರು. ಆಗ ಊರ ಹಿರಿಯರು ಸೇರಿ “ಹರತಾಳ” ಮಾಡಿ ಮಕ್ಕಳು ಶಾಲೆಗೆ ಬರದಂತೆ ತಡೆದರು. ಮೂರೂ ಜನ ಶಿಕ್ಷಕರನ್ನು ವರ್ಗಾಯಿಸುವಂತೆ ಮೇಲಧಿಕಾರಿಗಳಲ್ಲಿ ಹಟ ಹಿಡಿದರು. “ಇಷ್ಟು ಒಳ್ಳೆಯ ಶಿಕ್ಷಕರನ್ನು ಬಿಟ್ಟು ಕೊಡಬೇಡಿ “ ಎಂದು ಅವರು ತಿಳಿಹೇಳಿದರೂ ಪ್ರತಿಷ್ಟೆಗೆ ಬಿದ್ದ ಹಿರಿಯರು ಕೇಳಲಿಲ್ಲ. ಪರಿಣಾಮವಾಗಿ ಈ ಮೂವರನ್ನೂ ಶಿಕ್ಷೆಯ ರೂಪದಲ್ಲಿ  ಕಿರಿಯ ಪ್ರಾಥಮಿಕ ಶಾಲೆಗಳಿಗೆ ವರ್ಗಾಯಿಸಿದರು.
         ಊರವರ ಹಠವೇನೋ  ಗೆದ್ದಿತು. ಆದರೆ  ಆದರ ನಂತರ 2-3 ದಶಕಗಳ ಕಾಲ ನಮ್ಮ ಶಾಲೆಗೆ ಆ ರೀತಿಯ ಉತ್ಕೃಷ್ಟ ಶಿಕ್ಷಕರು ಸಿಗಲಿಲ್ಲ. ಇವರ ಜಟಾಪಟಿಯಲ್ಲಿ ಬಡವಾಗಿದ್ದು ಶಾಲೆ ಮತ್ತು ಮಕ್ಕಳು.
         ನಂತರದ ದಿನಗಳಲ್ಲಿ ನಾನು ಎಷ್ಟೋ ಸಾರಿ ಹಿರಿಯರ ಈ ಅವಿವೇಕಿ ನಡೆಯ ಬಗ್ಗೆ ಖೇದಗೊಂಡಿದ್ದೇನೆ. ತರುಣರು ಮೊಂಡಾಟ ಮಾಡುವದು  ಅಸಹಜವಲ್ಲ. ಆದರೆ ನ್ಯಾಯ ನೀಡುವವರು ವಿವೇಚನೆ ಕಳೆದುಕೊಂಡರೆ  ‘ವ್ಯವಸ್ಥೆ ‘ ಬಳಲುತ್ತದೆ. ದುಷ್ಪರಿಣಾಮ ಸಮಾಜದ ಮೇಲಾಗುತ್ತದೆ. ಅಲ್ಲವೇ?.
         ಯಾವ ಒಂದು ಆದರ್ಶದ ಕನಸು ಹೊತ್ತು ಹುಮ್ಮಸ್ಸಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರೋ ಅದಕ್ಕೆ ಈ “ಬಹುಮಾನ” ಸಿಕ್ಕ ಮೇಲೆ ನನ್ನ ನೆಚ್ಚಿನ ನಾಯ್ಕ್ ಗುರೂಜಿ ತುಂಬಾ ತೊಳಲಾಡಿದರು. ನಮ್ಮೂರ ಪಕ್ಕದ “ಒಕ್ಕಲಕೊಪ್ಪ”ದ  ಕಿ. ಪ್ರಾ. ಶಾಲೆಗೆ ವರ್ಗವಾದ ಅವರು ತನ್ನ ನೆಚ್ಚಿನ ಇಂಗ್ಲಿಷ್ ಮತ್ತು ಗಣಿತದ ಕಲಿಸುವಿಕೆಗೆ ಹಿನ್ನಡೆಯಾದ ಬಗ್ಗೆ ಬಹಳೇ ನೊಂದುಕೊಂಡಿದ್ದರು. ನಮಗೂ ಅವರ ಅಗಲುವಿಕೆ ದು:ಸ್ಸಹವಾಗಿತ್ತು. ವಾರಾಂತ್ಯದಲ್ಲಿ ಭೆಟ್ಟಿಯಾದಾಗ ದು:ಖ ಉಮ್ಮಳಿಸಿ ಅಳುತ್ತಿದ್ದೆವು. “ಗುರು”ವಾಗಲಿದ್ದ ಓರ್ವ 'ಶಿಕ್ಷಕ'ನ ಅವಸಾನವಾಗುತ್ತಿತ್ತು. ನಾನು ಅವರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದೆ. “ನೀನು ಉನ್ನತ ಸ್ಥಾನಕ್ಕೆ ಏರುತ್ತೀ” ಎಂದು ಸದಾ ನನಗೆ ಹೇಳುತ್ತಾ ಹಾರೈಸುತ್ತಿದ್ದರು. ಈಗಲೂ  ನನಗೆ ಇವೆಲ್ಲ ಮನಸ್ಸನ್ನು ಮುದುಡಿಸುವ ನೆನೆಪುಗಳು.  ಇದು ನಾನು  ಅವರಿಗೆ ಸಲ್ಲಿಸುತ್ತಿರುವ ಒಂದು “ನುಡಿನಮನ”.
        ಈ ಮೂವರ ನಂತರ ಬಂದ ಶಿಕ್ಷಕ ದಂಪತಿಗಳಿಗೂ ನಾನು ಪ್ರಿಯ ಶಿಷ್ಯನೇ ಆಗಿದ್ದೆ. ಆ ವರ್ಷ ಮೂಲ್ಕಿ ಪರೀಕ್ಷೆ ಬರೆದ ನನಗೆ ಜಿಲ್ಲಾ ಮಟ್ಟದಲ್ಲಿ  5ನೇ  ಸ್ಥಾನ ಲಭ್ಯವಾಗಿತ್ತು. ಮೊತ್ತ ಮೊದಲ ಬಾರಿಗೆ ನಮ್ಮೂರ ಹೈದನ ಹೆಸರು ಪತ್ರಿಕೆಯಲ್ಲಿ ಬಂದಿತ್ತು. ನಮ್ಮನೆಯಲ್ಲಿ ಸಂಭ್ರಮವೋ ಸಂಭ್ರಮ! ನಮ್ಮಪ್ಪ ನನ್ನನ್ನು ಹೈಸ್ಕೂಲ್ ಗೆ  ಸೇರಿಸುವ ಸಲುವಾಗಿ ಚಿಂತಿಸತೊಡಗಿದ್ದ.
        ನನ್ನ ಶಾಲಾದಿನಗಳಲ್ಲಿ ನಮ್ಮ ಮನೆಯ ಕೊಟ್ಟಿಗೆಗೆ ಹೊಂದಿಕೊಂಡು ನಿರ್ಮಿಸಿದ “ಬಿಡಾರ”ದಲ್ಲಿ ಕುಂದಾಪುರ ಕಡೆಯ “ಹಿರಣ್ಣಯ್ಯ ಶೆಟ್ಟಿ” ಎಂಬ ಒಬ್ಬರು “ಶೇರೆಗಾರ”ರು ತಮ್ಮ ತಂಡದೊಂದಿಗೆ ಇದ್ದರು. ಆ ತಂಡದ ಎಲ್ಲರ ಜೊತೆ ನನಗೆ ತುಂಬಾ ಸಲಿಗೆ. ನಾನು 5ನೇ ತರಗತಿಯಲ್ಲಿದ್ದಾಗ ಒಮ್ಮೆ “ಹಂಪಿ”ಗೆ ಶಾಲಾ ಪ್ರವಾಸ ಏರ್ಪಡಿಸಿದ್ದರು. ತಲಾ 5 ರೂಪಾಯಿ ಶುಲ್ಕ. ತನ್ನಲ್ಲಿ ದುಡ್ಡಿಲ್ಲವೆಂದು ಅಪ್ಪಯ್ಯ ಕಳಿಸಲೊಪ್ಪಲಿಲ್ಲ. ನನ್ನ ಅಳು, ಹಠ ನೋಡಿದ ಶೆಟ್ಟರು ತಾನು 5 ರೂಪಾಯಿ ಕೊಡುತ್ತೇನೆಂದರು. ಖುಷಿಯಿಂದ ಹೆಸರು ಕೊಟ್ಟೆ. ಎಲ್ಲಿಗೋ ಹೋಗಿದ್ದ ಶೆಟ್ಟರಿಗೆ ಪ್ರವಾಸದ ದಿನ ನಿಗದಿತ ಸಮಯಕ್ಕೆ ಊರು ತಲುಪಲು ಆಗಲೇ ಇಲ್ಲ. ಫೀಸು ಕೊಡದ ನನ್ನನ್ನು ಬಿಟ್ಟೇ ವ್ಯಾನು ಹೊರಟಿತು. ತೀವ್ರ ನಿರಾಶೆ ಮತ್ತು ಶೆಟ್ಟರ ಮೇಲಿನ ಕೋಪ ತಾರಕಕ್ಕೇರಿತ್ತು. ಈಗಿನಂತೆ ವಾಹನ ಸೌಕರ್ಯ ಇಲ್ಲದ ಆ ದಿನಗಳಲ್ಲಿ ಎಷ್ಟೇ ಯತ್ನಿಸಿದರೂ ಶೆಟ್ಟರಿಗೆ ಸಮಯಕ್ಕೆ ಸರಿಯಾಗಿ ಊರು ತಲುಪಲು ಆಗಿರಲೇ ಇಲ್ಲ. ಧಾವಂತದಿಂದ ನಡೆದು ಬರುತ್ತಿದಾಗ ಎದುರು ಬಂದ ವ್ಯಾನ್ ನಿಲ್ಲಿಸಿ ಮಾಸ್ತರ್ ರವರ ಕೈಲಿ “ ಇದು ರವಿ ಭಟ್ಟರ ಪ್ರವಾಸದ ಶುಲ್ಕ” ಎಂದು ಐದು ರೂಪಾಯಿ ಇಡಲು ಹೋದರೆ, “ದುಡ್ಡು ಕೊಡದ್ದಕ್ಕೆ ಅವನನ್ನು ಕರೆತಂದಿಲ್ಲ” ಎಂಬ ಉತ್ತರ ಕೇಳಿದಾಗ ಅಲ್ಲೇ ಗಳಗಳನೆ ಅತ್ತುಬಿಟ್ಟರಂತೆ. ಮನೆಗೆ ಬಂದಾಗ ಅವರನ್ನು ಮಾತಾಡಿಸದೆ ಸಿಟ್ಟು ಮಾಡಿಕೊಂಡು ಕುಳಿತ ನನಗೆ ಎಲ್ಲವನ್ನೂ ಹೇಳಿ ಪೇಚಾಡಿಕೊಂಡರು. ಅದಕ್ಕೆ ಮರುಗಿದ ನನ್ನಮ್ಮ ನನ್ನನ್ನು ಸಮಾಧಾನಪಡಿಸಿದರು.
       ಇಲ್ಲಿ ಶೆಟ್ಟರು ನೀಡಿದ ಹಣಕ್ಕಿಂತ ಅವರ ಹೃದಯವಂತಿಕೆ ಪ್ರಮುಖವೆನಿಸುತ್ತದೆ. (ಅಂದ ಹಾಗೆ ಆ ಕಾಲದಲ್ಲಿ ಐದು ರೂಪಾಯಿ ಸಣ್ಣ ಮೊತ್ತವಾಗಿರಲಿಲ್ಲ).ಅನಿವಾರ್ಯವಾಗಿಯಾದರೂ, ಮಾತಿಗೆ ತಪ್ಪಿದಾಗ ಅವರು ಅನುಭವಿಸಿದ ಯಾತನೆ ಆ ಕಾಲದ ನೈತಿಕತೆಗೊಂದು ನಿದರ್ಶನವಾಗಿ ನಿಲ್ಲುತ್ತದೆ. ತೀವ್ರ ಬಡತನದ ನಡುವೆಯೂ ಕಾಣಸಿಕ್ಕ ಇಂತಹ ಹೃದಯವಂತಿಕೆಗಳು ಬದುಕಲ್ಲಿ ಆಶಾವಾದಿಯಾಗಿರುವಂತೆ ಮಾಡಿವೆ. ಸದ್ದಿಲ್ಲದೇ ನನ್ನೊಳಗೂ ಒಂದು ಸುಸಂಸ್ಕಾರವನ್ನು ಬಿತ್ತಿವೆ.
        ಇಂತಹ ಮಹನೀಯರು ಅಪ್ರಸಿದ್ಧರಾದರೂ ಅವರ ಹೃದಯ ಸಂಸ್ಕಾರ ಅನುಕರಣೀಯ. ಅಂತಹವರ ಸ್ನೇಹ, ಹಾರೈಕೆಗಳು ಲಭಿಸಿದ್ದು ನನ್ನ ಪುರಾಕೃತ ಪುಣ್ಯವಿಶೇಷವೇ ಸೈ. ಬಾಳಿನ ಪಯಣದಲ್ಲಿ ಸಿಕ್ಕಿದ ಇಂತಹ 'ಅರವಟ್ಟಿಗೆಗೆಳು' ಜೀವನದ  ಗಮ್ಯ ತಲುಪುವಲ್ಲಿ ಚೈತನ್ಯ ನೀಡಿದ್ದನ್ನು ಎಂದಾದರೂ ಮರೆಯಲುಂಟೇ?