Friday 27 June 2014

ಮರೆಯಲಾಗದ 'ಮುದಿಯಮ್ಮ'

                                                                                                                                                                            ಈ ಬರಹವನ್ನು ಓದುವ ಪೂರ್ವದಲ್ಲಿ ಈ ಹಿಂದೆ ಇದೇ blogspotನಲ್ಲಿ  ಪ್ರಕಟಿಸಿದ ನನ್ನ "ಮಹಾತಾಯಿ" ಮೇಲೊಮ್ಮೆ ಕಣ್ಣು ಹಾಯಿಸುವದೊಳಿತು  .
        ಅದು ೧೯೪೬-೪೯ರ ಸುಮಾರಿನ ಸಮಯ. ಇಡೀ  ದೇಶ ಸ್ವಾತಂತ್ರ್ಯದ ಘಮಲಿನಲ್ಲಿ ಉನ್ಮತ್ತವಾಗಿದ್ದ ಕಾಲ. ಇದೇ ಸುಮಾರಿಗೆ ಅದಾಗಲೇ ಶಿರಸಿ ತಾಲೂಕಿನ ಕುಳವೆ ಗ್ರಾಮದಲ್ಲಿ ತನ್ನ ದುಡಿಮೆಯಲ್ಲಿ ಬದುಕುತ್ತಾ, ತನ್ನ ಸಜ್ಜನಿಕೆಯಿಂದಾಗಿ  ಊರವರೆಲ್ಲರ ಪ್ರೀತಿಗೆ ಪಾತ್ರನಾಗಿದ್ದ ಯುವಕ ಮಹಾಬಲೇಶ್ವರನಲ್ಲೂ ತನ್ನದೇ ಆದ ಸ್ವಂತ ಜಮೀನು ಹೊಂದುವ ಆಸೆ  ಅದಮ್ಯವಾಗಿ ತಲೆಯೆತ್ತುತ್ತಿತ್ತು. ಕುಳವೆಯಲ್ಲಿ ಬಡ್ತಿ ಡಾಕ್ಟರರ ಮನೆಯಲ್ಲಿ ಮನೆ ಮಗನ ತರಹದ ಪ್ರೀತಿ ವಿಶ್ವಾಸ ಸಿಗುತ್ತಿದ್ದರೂ ಸ್ವತಂತ್ರ ನೆಲೆ ಹೊಂದುವ ಅಭಿಲಾಷೆಯ  ಮುಂದೆ ಅದು ಹಿನ್ನೆಲೆಗೆ ಸರಿಯುತ್ತಿತ್ತು. ಒಂದೆರಡು ವಿಫಲ ಯತ್ನಗಳ ನಂತರ ಕೊನೆಗೊಮ್ಮೆ ತಾಲೂಕಿನ ಪೂರ್ವ ಭಾಗದ "ದೊಡ್ನಳ್ಳಿ"ಯಲ್ಲಿ 'ಗೇಣಿ'ಗೆ  ಜಮೀನು ಸಿಗುವ ಬಾತ್ಮಿಯನ್ನು ಪಡೆದು, ಅದರ ಮಾಲಿಕರಾದ ಕಾರವಾರದ ವಕೀಲ ಹಬ್ಬುರಾಯರನ್ನು ಮತ್ತು ಶಿರಸಿಯಲ್ಲಿ ಅವರ ಪ್ರತಿನಿಧಿಯಾದ ಶ್ರೀಮತಿ ಫಣಿಯಮ್ಮ ಹೆಬ್ಬಾರರನ್ನು ಭೆಟ್ಟಿಯಾಗಿ, ಸುಮಾರು ಹದಿನೆಂಟು ಎಕರೆಯಷ್ಟು ಜಮೀನನ್ನು ಗೇಣಿ ಕರಾರಿನ ಮೇಲೆ ಪಡೆಯುವಲ್ಲಿ ಯಶಸ್ವಿಯಾದನು. ಆಗಿನ ಕಾಲದಲ್ಲಿ ಅದಕ್ಕೆ ವಾರ್ಷಿಕ ತಲಾ ಇಪ್ಪತ್ನಾಲ್ಕು ರೂಪಾಯಿಗಳ ಗೇಣಿ ಮತ್ತು ಸರಕಾರೀ ತೆರಿಗೆ ಇತ್ತು.
        ಆ ವೇಳೆಗೆ ಶಿರಸಿ ಸೀಮೆಯಲ್ಲಿ "ಕನ್ಯಾಬರ" ಇತ್ತು. ಮನೆಮಾರು ಎಲ್ಲ ಇದ್ದವರಿಗೇ ಹೆಣ್ಣು ಸಿಗದ ವಾತಾವರಣ ಇದ್ದಾಗ ಈ ಸುದಾಮನಿಗೆ ಯಾರು ಹೆಣ್ಣು ಕೊಡಬೇಕು. ಮೇಲಾಗಿ ಇವನಿಗಾಗಲೇ ೩೨-೩೩ ವರ್ಷವಾಗಿತ್ತು. ಆ ಸಮಯದಲ್ಲಿ ಘಟ್ಟದ ಕೆಳಗಿನ ಕುಂಬಳ ಸೀಮೆಯಿಂದ ಮಲಯಾಳಿ ಹೆಣ್ಮಕ್ಕಳನ್ನು ತಂದು ತಾವೇ ಎಲ್ಲ ಖರ್ಚು ಹಾಕಿಕೊಂಡು ಮದುವೆ ಮಾಡಿಕೊಳ್ಳುವ ಪದ್ಧತಿ ಅಲ್ಲಲ್ಲಿ ಕೆಲ ಹವ್ಯಕರಲ್ಲಿ ಕಂಡುಬರತೊಡಗಿತ್ತು. (ಚಕ್ರ ಮತ್ತೊಂದು ಸುತ್ತು ತಿರುಗಿದ್ದು ಹವ್ಯಕ ವಿವಾಹಯೋಗ್ಯ ಗಂಡುಗಳಿಗೆ ಈಗ ಮತ್ತೊಮ್ಮೆ "ಕನ್ಯಾಬರ" ಎದುರಾಗಿದೆ. ಎಂತಹ ವಿಪರ್ಯಾಸ !). ಕೆಲ ಮಧ್ಯವರ್ತಿಗಳ ನೆರವಿನಿಂದ ಮಹಾಬಲೇಶ್ವರನೂ ಮಂಗಳೂರಿನ ಸನಿಹದ ಪಣಂಬೂರಿನ ಲಕ್ಷ್ಮೀನಾರಾಯಣ ಐತಾಳರ ಕೊನೆಯ ಮಗಳು ಗೌರಿಯನ್ನು, ಕನ್ಯಾಶುಲ್ಕ ನೀಡಿ, ಅಲ್ಲೇ ಹೋಗಿ ಲಗ್ನವಾದನು. ಅದಾಗಲೇ ಇಳಿವಯಸ್ಸು  ಹಾಗೂ ಕಾಡುತ್ತಿದ್ದ ಉಬ್ಬಸದ ಕಾರಣದಿಂದ ಜರ್ಝರಿತರಾಗಿದ್ದ ಐತಾಳರು  ವಿಶೇಷ ವಿಚಾರ ಮಾಡದೆ ಗುರುತು ಪರಿಚಯ ಇಲ್ಲದ, ಘಟ್ಟದ ಮೇಲಿನವನಾದ, ತನ್ನ ಮಗಳಿಗಿಂತ ಸುಮಾರು ೨೦-೨೧ ವರ್ಷ ಹಿರಿಯನಾದ ಈ ವರನಿಗೆ ಗೊಂಬೆಯಂತೆ ಸುಂದರಳಾದ ತಮ್ಮ  ಮುಗ್ಧ  ಮಗಳನ್ನು ಧಾರೆಯೆರೆದು ಕೊಟ್ಟು,  ಕನ್ಯಾಸೆರೆ ಬಿಡಿಸಿಕೊಂಡು ನಿರಾಳವಾದರು. ಮದುವೆಯ ಗಡಿಬಿಡಿ ಎಲ್ಲ ಮುಗಿದ ಮೇಲೆ ಗೌರಿಯ ಅಣ್ಣ ಸುಂದರನು (ವೆಂಕಟರಮಣ ಐತಾಳ)  ಘಟ್ಟದ ಮೇಲಿನ  ಅಳಿಯದೇವರ ಊರು-ಮನೆ ನೋಡಲು ಬಂದರೆ ಇಲ್ಲೇನಿದೆ?  'ಕೈಲಾಸವಾಸಿ ಪರಮೇಶ್ವರನಂತೆ ತನಗೂ ಏನೂ ಕಮ್ಮಿ ಇಲ್ಲ' ಎಂದು ಅತ್ತೆ-ಮಾವನವರ  ಮುಂದೆ ಹೇಳಿಕೊಂಡಿದ್ದ ಅಳಿಯಬಹಾದ್ದೂರನ ಸ್ಥಿತಿ ನಿಜವಾಗಿಯೂ ಆ ಸ್ಮಶಾನವಾಸಿ ಶಿವನ ಹಾಗೆ 'ಅಂಬರ ಛತ್ತಿನ ಕೆಳಗೆ ಭೂತಾಯಿ ಮಂಚದ' ರೀತಿಯೇ ಇದ್ದದ್ದು ನೋಡಿ ಕೋಪದಿಂದ  ಕೆಂಡಾಮಂಡಲನಾದ ಆ ಅಣ್ಣ  ತನ್ನ ಅಬೋಧ ತಂಗಿಯನ್ನು ಕರೆದುಕೊಂಡು ಬಂದ ಹಾಗೆಯೇ ಹಿಂದಕ್ಕೆ ಹೊರಟು  ಹೋದನು. ಕಷ್ಟ ಕೋಟಲೆಗಳನ್ನೇ ಹಾಸಿ ಹೊದೆದು ದೊಡ್ಡವನಾಗಿದ್ದ ಮಹಾಬಲನ ಜೋಳಿಗೆಗೆ ಈಗ ಇನ್ನೊಂದು ಮಹಾಕಷ್ಟ ಬಂದು ಬಿದ್ದಂತಾಯಿತು.
        ದೂರದ ಮದ್ರಾಸಿನಲ್ಲಿ ನೌಕರಿ ಮಾಡುತ್ತಿದ್ದ ಸುಂದರನು ಈ ಪುಟ್ಟಗೌರಿಯನ್ನು ಕರೆದುಕೊಂಡು ಹೋಗಿ ಘಟ್ಟದ ಕೆಳಗಿನ 'ಅರಬೈಲಿ'ನಲ್ಲಿದ್ದ ತನ್ನ ಇನ್ನೊಬ್ಬ ತಂಗಿ- ಬಾವರ ಮನೆಯಲ್ಲಿ ಬಿಟ್ಟು ಹೊರಟು ಹೋದನು.  ವರ್ಷಒಪ್ಪತ್ತು ಅಲ್ಲೇ ಇದ್ದ ಗೌರಿಗೆ  ಇನ್ನೊಬ್ಬ ವರನನ್ನು ಹುಡುಕಿ ಲಗ್ನ ಮಾಡಿಕೊಡುವ ತಯಾರಿ ನಡೆದಿರುವ ಸುದ್ದಿ ತಿಳಿದ ಮಾಬ್ಲೇಶ್ವರ (ನಾರದರಂತೆ ಎಲ್ಲ ಸೀಮೆಗಳನ್ನು ಸುತ್ತಿ ಗೋಕರ್ಣ ಮಹಾಬಲೇಶ್ವರ ದೇವರ ಪ್ರಸಾದ ವಿತರಣೆ ಮಾಡುತ್ತಿದ್ದ ಗೋಕರ್ಣ ಪುರಾಣಿಕರೊಬ್ಬರ ಮುಖಾಂತರ ) ತನ್ನ ಮಿತ್ರನೊಬ್ಬನಿಗೆ ಪೋಲೀಸನ ಡ್ರೆಸ್ ತೊಡಿಸಿಕೊಂಡು ಸೀದಾ ಅರಬೈಲಿಗೆ ಹೋದನು. ತನ್ನ ಹೋಟೆಲ್ಲಿನ ಒಳಗೆ ಪೊಲೀಸರು ಬಂದು ಗದ್ದಲ ಎಬ್ಬಿಸಿದರೆ ಆಗಬಹುದಾದ ಅನಾನುಕೂಲ ಗ್ರಹಿಸಿದ ಗೌರಿಯ ಬಾವ ತಡ ಮಾಡದೆ ನಿರ್ಣಯ ತೆಗೆದುಕೊಂಡು ಬಡಪಾಯಿ ಗೌರಿಯನ್ನು ಅವಳ ಗಂಡನ ಸುಪರ್ದಿಗೆ ವಹಿಸಿಕೊಟ್ಟನು. ಮತ್ತೊಮ್ಮೆ ಗೌರಿ ದೊಡ್ನಳ್ಳಿಗೆ-ಈ ಬಾರಿ ತೌರಿನ ಬೆಂಗಾವಲಿಲ್ಲದೆ -ಬಂದು ಸ್ಥಾಪಿತಳಾದಳು.
        ದೊಡ್ನಳ್ಳಿಯಲ್ಲಿ ತನ್ನದೆಂಬ ಒಂದು ಸ್ವಂತ ಸೂರು ಇರದ ಕಾರಣ ಅದಾಗಲೇ ಅಲ್ಲಿ ನೆಲೆಸಿದ್ದ, ತನ್ನ ದೂರದ ಬಂಧುಗಳೂ ಆಗಿದ್ದ  'ಹೊಸಹಕ್ಕಲಿ'ನವರ ಮನೆಗೆ ಈ ಮಹಾಶಯ ತನ್ನ ನವ ವಧುವಿನ ಪ್ರವೇಶ ಮಾಡಿಸಿದನು. ತವರಿಗೆ ವಿದಾಯ ಹೇಳುವದೆ ಹೆಣ್ಣು ಮಕ್ಕಳಿಗೆ ಸಂಕಟಮಯ ವಿಷಯ. ಅದರಲ್ಲೂ ದೂರದೂರಿನ, ಏನೂ ಗುರುತು ಪರಿಚಯ ಇಲ್ಲದ, ವಿಭಿನ್ನ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ಜನರಿಂದ ಕೂಡಿದ, ತನ್ನ ಗಂಡನ ಸ್ವಂತದ್ದಲ್ಲದ ಈ ಮನೆ ಸೇರಿದ ಬಾಲಕಿ ಗೌರಿಗೆ ಆ ಅಯೋಮಯ ಸ್ಥಿತಿಯಲ್ಲಿ  ಅಲ್ಲಿದ್ದ ಹಿರಿಯ ಜೀವ "ಮುದಿಯಮ್ಮ"ನ ಸಕಾಲಿಕ ಪ್ರೀತಿ ಸಂಜೀವಿನಿಯಂತೆ ಒದಗಿಬಂದಿತು.      
        ಈ 'ಮುದಿಯಮ್ಮ' ಆ ಮನೆಯ ನಾಲ್ವರು ಗಂಡು ಮಕ್ಕಳಾದ ಸುಬ್ರಾಯ, ಲಕ್ಷ್ಮಣ, ಕೃಷ್ಣ  ಮತ್ತು ಸದಾಶಿವ ಹೆಗಡೆಯವರ ತಾಯಿ ಮತ್ತು ದಿವಂಗತ ನಾರಾಯಣ ಹೆಗಡೆಯವರ ಪತ್ನಿ ಭಾಗೀರಥಿ. ಆಗಿನ ಕಾಲದ ಪದ್ಧತಿಯಂತೆ ತಲೆ ಬೋಳಿಸಿಕೊಂಡು ಕೆಂಪುಸೀರೆ ಉಟ್ಟುಕೊಳ್ಳುತ್ತಿದ್ದ ವಿಧವೆ -ಮಡಿಹೆಂಗಸು. ಅವಳು ಆ ಮನೆಯಲ್ಲಿ ಈ ಪುಟ್ಟಗೌರಿಗೆ ತಾಯಿಯ ಮಡಿಲನ್ನು ನೀಡಿದಳು. ವಯೋಸಹಜವಾದ ನಾಚಿಕೆ, ಸಿಗ್ಗು, ಪರಕೀಯ ಭಾವದಿಂದ ಕುಗ್ಗಿ ಹೋಗುತ್ತಿದ್ದ ಈ ಹುಡುಗಿಗೆ ಅಭಯ ನೀಡಿದ್ದಲ್ಲದೆ ,ಅವಳ ಗಂಡನಿಗೆ, 'ಹರುಕೋ ಮುರುಕೋ- ಒಟ್ಟಿನಲ್ಲಿ ತನ್ನದೇ ಸ್ವಂತದ್ದೆನ್ನುವ'- ಒಂದು ಬಿಡಾರ ಕಟ್ಟಿಕೊಳ್ಳಲು ಬೋಧಿಸಿದಳು. ಅದಾಗಲೇ ತನ್ನ ಹೊಸ ಸಂಸಾರಕ್ಕೆ ಏಕಾಂತದ ಅವಶ್ಯಕತೆ ಇದೆಯೆಂಬುದನ್ನು ಮನಗಂಡಿದ್ದ ಮಾಬ್ಲೇಶ್ವರ ಸನಿಹದ ಕಾಡಿನಲ್ಲಿ ಯಥೇಚ್ಚವಾಗಿ ಸಿಗುತ್ತಿದ್ದ 'ಗುರಿಗೆ'  ಗಳುಗಳನ್ನು  ತಂದು ಪಕ್ಕದಲ್ಲೇ ಇದ್ದ ಖಾಲಿ ಗಾಂವ್ಠಾಣ ಜಾಗದಲ್ಲಿ ತಟ್ಟಿಗೋಡೆ ಕಟ್ಟಿ ಒಂದು ಬಿಡಾರ ನಿರ್ಮಿಸಿಯೇ ಬಿಟ್ಟ. ವಯಸ್ಸಿನಲ್ಲಿ ಕಿರಿಯಳಾದರೂ ಕಠಿಣ ಪರಿಶ್ರಮಿಯಾಗಿ ತಯಾರಾಗಿದ್ದ ಗೌರಿ ಆ ಗೋಡೆಗಳಿಗೆಲ್ಲ  ತನ್ನ ಕೈಯಾರೆ ಮಣ್ಣಿನ ಗಿಲಾಯಿ ಮಾಡಿ, ಸಗಣಿ ಸಾರಿಸಿ ಆ ಬಿಡಾರವನ್ನೊಂದು ಮನೆಯನ್ನಾಗಿಸಿದಳು. ಇದೆಲ್ಲದರ ಹಿಂದೆ ಮುದಿಯಮ್ಮನ ಸಲಹೆ-ಸೂಚನೆಯಲ್ಲದೆ ನೆರವೂ ಸಹ ಧಾರಾಳವಾಗಿ ದೊರಕಿತ್ತು.
       ಈ ಮನೆಯಲ್ಲಿಯೇ ನಾವು ಐವರು  ಗಂಡು ಮಕ್ಕಳು ಜನಿಸಿದ್ದು ಮತ್ತು ನನ್ನ ಬೆನ್ನಿಗೆ ಹುಟ್ಟಿದ್ದ, ಮುಖದಲ್ಲಿ ವಿಶೇಷ ದೈವಿಕ ಲಕ್ಷಣಗಳನ್ನು ಹೊಂದಿದ್ದ 'ವಿಶ್ವಪತಿ' ಎಂಬ ಮಗ ತೀರಿಕೊಂಡಿದ್ದು ಕೂಡ. ಇಂತಹ ಯಾತನಾಮಯ ಸಮಯಗಳಲ್ಲೆಲ್ಲ ನನ್ನಮ್ಮನ ಕೆಚ್ಚು ಸಾಯದಂತೆ ನೋಡಿಕೊಂಡಿದ್ದು ಈ ಮುದಿಯಮ್ಮ. ನನಗೆ ಚೆನ್ನಾಗಿ ನೆನಪಿದೆ-ನಮ್ಮ ಮನೆಯೆದುರು, ರಸ್ತೆಯ ಆಚೆ ಇದ್ದ ದೊಡ್ಡ ಅರಳಿ ಮರಕ್ಕೆ ನಿತ್ಯ ನಸುಕಿನಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಿ, ನಂತರ ಪ್ರಸಾದ ರೂಪದ ಬಾಳೆಹಣ್ಣನ್ನು ಕಾಯುತ್ತಿದ್ದ ನಮ್ಮ ಕೈ ಮೇಲೆ ಹಾಕಿ, ನನ್ನಮ್ಮನ ಜೊತೆ ನಾಲ್ಕು ಸುಖ-ದುಃಖದ ಮಾತಾಡಿ ತನ್ನ ಮನೆಗೆ ಹೋಗುತ್ತಿದ್ದಳು ಈ ಮುದಿಯಮ್ಮ. ನಾವು ಊರೊಳಗಿನ ಈ ಮನೆ ತೊರೆದು ನಮ್ಮ ಜಮೀನಿನಲ್ಲೇ ಮನೆ ಮಾಡಿದ ಮೇಲೂ ನಿತ್ಯ ನಮ್ಮ ಮನೆಗೆ ಬಂದು ಮಜ್ಜಿಗೆ ಕಡೆದು ಕೊಟ್ಟು, ಒಂದು ಲೋಟ ತಾನೇ ಕಡೆದ ಮಜ್ಜಿಗೆ ಕುಡಿದು, ಅದಾಗಲೇ ಸಾಕಷ್ಟು ಅನುಭವಿಯಾಗಿದ್ದ ನನ್ನ ಅಮ್ಮನ ಜೊತೆ ನಾಲ್ಕು ಮಾತಾಡಿ ಹೋಗುತ್ತಿದ್ದಳು. ಅವಳ ಪಾಲಿಗೆ ನನ್ನಮ್ಮ ಮಗಳಾದರೆ ನನ್ನಮ್ಮನಿಗೆ ಅವಳು ಅಮ್ಮ.
        ಇಂತಹ ಕರುಣಾಮಯಿ ಮುದಿಯಮ್ಮ ಕೊನೆಗೆ ಪಾರ್ಶ್ವವಾಯುವಿಗೆ ತುತ್ತಾಗಿ ಕೆಲ ತಿಂಗಳು ಹಾಸಿಗೆಯಲ್ಲೇ ಕಳೆದು ತೀರಿಕೊಂಡಾಗ ಅವರ ಮನೆಯವರಿಗಿಂತ ನನ್ನಮ್ಮ ಕಳೆದುಕೊಂಡಿದ್ದೇ ಹೆಚ್ಚಾಗಿತ್ತು.
        ನಿಷ್ಕಾಮ ಕರ್ಮ ಮಾಡುವ ಇಂತಹ ಎಲೆಮರೆಯ ಕಾಯಿಗಳಿಗೆ ಇದೋ ನನ್ನ ನಮನ!