Sunday 11 May 2014

ಅಂದು ಇಂದುಗಳ ಸೇತುವೆ

    ಇಂದು  ಸುಮಾರು ೩೦ ರಿಂದ ೪೦ ವರ್ಷ ವಯಸ್ಸಿನ ಆಸುಪಾಸಿನಲ್ಲಿರುವ ಬಹುತೇಕರು ತಮ್ಮ ಬಾಲ್ಯಕ್ಕಿಂತ ಹಿಂದಿನ ವರ್ಷಗಳಲ್ಲಿ ಈ ನಾಡು ಹೇಗಿದ್ದಿರಬಹುದೆಂಬುದನ್ನು ಊಹಿಸಿಕೊಳ್ಳಲಾರರು. ಏಕೆಂದರೆ ಕಳೆದ ೩೦ ವರ್ಷಗಳಲ್ಲಿ ಈ ದೇಶದಲ್ಲಿ ಪ್ರಗತಿಯ ಚಿತ್ರಣ ವರ್ಷದಿಂದ ವರ್ಷಕ್ಕೆ ಅತ್ಯಂತ ತ್ವರಿತವಾಗಿ ಬದಲಾಗುತ್ತಾ ಬಂದಿದೆ. ಅದಕ್ಕೂ ಪೂರ್ವದಲ್ಲಿ ಈ ಬದಲಾವಣೆಯ ವೇಗ ತೀರ ನಿಧಾನ ಗತಿಯಲ್ಲಿದ್ದು, ಜನರಿಗೆ ತಾವು ನಂಬಿದ ಮೌಲ್ಯಗಳನ್ನು ತಮ್ಮ ಜೀವಿತಾವಧಿಯಲ್ಲಿ ಬದಲಾಯಿಸಿಕೊಳ್ಳಬೇಕಾದ ಪ್ರಮೇಯ ಒದಗಿ ಬರುತ್ತಿದ್ದುದು ತೀರ ವಿರಳ. ಆದರೆ ಇಂದಿನ ತ್ವರಿತ ಬದಲಾವಣೆಗಳು ಜೀವನ ಮೌಲ್ಯಗಳನ್ನು ಸ್ಥಿರೀಕರಿಸಿಕೊಳ್ಳಲು ಬಿಡುವದಿಲ್ಲ. ಇದರಿಂದಾಗಿ ೬೦ರ ಮೇಲ್ಪಟ್ಟ ಹಿರಿಯರು ಇಂದಿನ ಯುವಜನತೆ ಯಾವುದೇ ಮೌಲ್ಯಗಳಿಗೆ ಬದ್ಧರಾಗಿಲ್ಲವೆಂದು ಗೊಣಗುತ್ತಿದ್ದರೆ, ಅದೇ ಯುವಕರು, ತಮ್ಮನ್ನು ತಾವು ಬದುಕಿನ ವೇಗದೊಂದಿಗೆ ಸರಿ ತೂಗಿಸಿಕೊಳ್ಳುವಲ್ಲಿ ಹೈರಾಣಾಗುತ್ತಿದ್ದಾರೆ. ಆದರೆ ಇವೆರಡು ಗುಂಪುಗಳ ಮಧ್ಯೆ ಇರುವ ನನ್ನಂತವರನ್ನು ನಾನು ಅತ್ಯಂತ ಅದೃಷ್ಟಶಾಲಿಗಳೆಂದು ಪರಿಗಣಿಸುತ್ತೇನೆ. ಏಕೆಂದರೆ, ನಮ್ಮಗಳ ಬಾಲ್ಯ ಮತ್ತು ಯೌವ್ವನ  ಹಿಂದಿನ ತಲೆಮಾರಿನವರ ಮೌಲ್ಯಾಧಾರಿತ ಬದುಕಿನ ಸಿಹಿಯನ್ನು ಉಂಡಿದ್ದರೆ ತದನಂತರ ವೃತ್ತಿಬದುಕಿನ ಸ್ಪರ್ಧಾಕಣದಲ್ಲಿ ಮೂಲೆಗುಂಪಾಗದಿರಲು  ಈಗಿನ ಇಲೆಕ್ಟ್ರಾನಿಕ್ ಯುಗದ ಧಾವಂತಕ್ಕೂ ನಾವು ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಾಯಿತು. ನಮ್ಮ ಯೌವ್ವನದಲ್ಲಿ ಮನದನ್ನೆಗೊಂದು ಒಲವಿನೋಲೆ ಬರೆದರೆ ಅವಳ ಮಾರೋಲೆಗಾಗಿ ವಾರಗಟ್ಟಲೆ ವಿರಹದ ಕುದಿಯಲ್ಲಿ ಕಾತರಿಸಿ ಕಾಯಬೇಕಿತ್ತು. ಏನಾದರೂ ತಡವಾದರೆ ಏಕೆಂದು ತಿಳಿಯದೆ ದುಗುಡ ಬೇರೆ. ಈಗಿನಂತೆ ಎಲ್ಲರ ಬೆರಳ ತುದಿಯಲ್ಲಿ , -ಅಷ್ಟೇಕೆ, ಎಲ್ಲರ ಮನೆಗಳಲ್ಲಿ ಸಹ ಫೋನ್ ಇದ್ದಿರದ ಕಾಲವದು. ಅಂಚೆಯ ಅಣ್ಣನೇ ಎಲ್ಲರ ಬಂಧುವಾಗಿದ್ದ ಕಾಲವದು. ಮಾಹಿತಿ ಸಂವಹನ ನಿಧಾನವಾಗಿದ್ದರಿಂದ ಸಾರ್ವಜನಿಕರ ಬದುಕಿನ ಓಟದ ಗತಿಯೂ ಅದೇ ರೀತಿ ನಿಧಾನವಾಗಿದ್ದ ಕಾಲವದು.
        ನನ್ನ ಈ ಮೊದಲಿನ ಮತ್ತು ಇನ್ನು ಬರೆಯಲು ಉದ್ದೇಶಿಸಿದ ಹೆಚ್ಚಿನೆಲ್ಲ ಬ್ಲಾಗ್ ಗಳಲ್ಲಿ ನಾನು ಆ  ಧಾವಂತರಹಿತ ಕಾಲಘಟ್ಟದಲ್ಲಿ ಬದುಕಿದ್ದ, ಹಾಗೂ ನನ್ನನ್ನು ಪ್ರಭಾವಿಸಿದ ಕೆಲ ಹೃದಯವಂತರ ಬಗ್ಗೆ ಬರೆಯಬಯಸಿದ್ದೇನೆ. ಅವರಲ್ಲಿ ಪ್ರಸಿದ್ಧರೂ ಇದ್ದಾರೆ, ಅನಾಮಿಕರೂ ಇದ್ದಾರೆ. ಅವರೆಲ್ಲರೂ ಅತ್ಯುನ್ನತ ಮಾನವತೆಯ ದೃಷ್ಟಾಂತರೂಪಿಗಳು ಎಂದೇನೂ ನಾನು ಹೇಳಲಾರೆ. ಎಲ್ಲ ಸಾಂಸಾರಿಕರಂತೆ ಅವರಲ್ಲಿಯೂ ಗುಣ-ದೋಷಗಳೆರಡೂ ಮಿಳಿತವಾಗಿದ್ದವು. ಆದರೂ "ಪರಗುಣ                ಪರಮಾಣೂನ್ ಪರ್ವತೀಕೃತ್ಯ....." ಎಂಬ  ಉಕ್ತಿಯಂತೆ ನಾ ಕಂಡ ಅವರ ಗುಣಗಳನ್ನು ಮಾತ್ರ, ಅವರ   ಹೃದಯವಂತಿಕೆಯನ್ನು  ಮಾತ್ರ, ನನ್ನ ಬಾಲ್ಯದಿಂದಾರಂಭಿಸಿ  ಅನುಕ್ರಮದಲ್ಲಿ  ವಿಶದೀಕರಿಸುತ್ತೇನೆ. ಇಲ್ಲಿ ಯಾವುದೇ ಹೆಚ್ಚುಗಾರಿಕೆಯನ್ನು ಮೆರೆಸುವದಕ್ಕಿಂತ ಇದನ್ನೊಂದು ಸ್ಮೃತಿಸಂಪುಟವಾಗಿಸುವ ಉದ್ದೇಶ ಮಾತ್ರ ಇದೆ. ಅಷ್ಟೇ ಅಲ್ಲದೆ ಯಾವ ಬರಹವನ್ನೂ ಸಂಪೂರ್ಣವಾಗಿ ಒಬ್ಬ ವ್ಯಕ್ತಿಗಾಗಿ ಮೀಸಲಿಡದೆ, ಸಮತೋಲಿಸಿ ಕೊಂಡೊಯ್ಯುವ ಇರಾದೆ ಕೂಡ ಇದೆ.
         ಇಂದಿನ ಪೀಳಿಗೆಯವರಿಗೆ ಅಂದಿನ ಜನಸಾಮಾನ್ಯರ ಬದುಕಿನ ಒಂದು ಚಿತ್ರಣವನ್ನು ಕಟ್ಟಿಕೊಡುವಲ್ಲಿ, ತನ್ಮೂಲಕ ತಮ್ಮ ವಿಚಾರ ಸರಣಿಯಲ್ಲಿ ಒಂದು ಹೊಸ ಹೊಳಹನ್ನು ಕಂಡುಕೊಳ್ಳುವಲ್ಲಿ ಈ ನನ್ನ ಬರಹಗಳು ಸಹಾಯಕವಾದರೆ ನನ್ನ ಶ್ರಮ ಸಾರ್ಥಕವಾದಂತೆ.