Friday 1 August 2014

ನಾನು ಬಡವ ... ಅವಳು ಬಡವಿ .....

           " ಹಿಂದೊಮ್ಮೆ ಕದಂಬರ ಸೈನ್ಯದಲ್ಲಿ ದಳಪತಿಯಾಗಿದ್ದ 'ದೊಡ್ಡಣ್ಣ ನಾಯಕ'ನೆಂಬುವನು ನಮ್ಮ ಗ್ರಾಮದಲ್ಲಿದ್ದ ಗ್ರಾಮಾಧಿದೇವತೆ ಶ್ರೀ ಶಂಭುಲಿಂಗೇಶ್ವರನ  ಗುಡಿಯನ್ನು ಜೀರ್ಣೋದ್ಧಾರ ಮಾಡಿಸಿದ ನಂತರ ಈ ಊರಿಗೆ "ದೊಡ್ನಳ್ಳಿ"ಎಂದು ಹೆಸರು ಬಂದಿತು" ಎಂಬುದಾಗಿ ಕಾರವಾರ ಜಿಲ್ಲಾ ಗೆಜೆಟಿಯರ್ ನಲ್ಲಿ ದಾಖಲಾಗಿದೆ ಎಂದು ಈ ಊರಿನಲ್ಲಿ ಪ್ರಾಥಮಿಕ ಶಾಲೆ ಆರಂಭವಾದಾಗ ಮೊದಲ ಶಿಕ್ಷಕರಲ್ಲಿ ಒಬ್ಬರಾಗಿದ್ದ 'ಭಾಗ್ವತ  ಮಾಸ್ತರರು' (ಶ್ರೀ ಕೆ. ಎನ್. ರಾವ್ ) ಶಾಲೆಯ ಸ್ವರ್ಣ ಮಹೋತ್ಸವದ ಸಮಾರಂಭದಲ್ಲಿ ಹೇಳಿದ್ದು ನನಗೆ ನೆನಪಿದೆ. ಶ್ರೀ ಶಂಭುಲಿಂಗೇಶ್ವರ ದೇವರು ಈ ಊರಿನ ಶ್ರೇಯೋಭಿವೃದ್ಧಿಗೆ ಕಾರಣೀಕರ್ತನು. ನಮ್ಮೂರಿನವರ ಆರಾಧ್ಯ ದೈವವಾದ ಇವನು ಸುತ್ತಲಿನ ಸೋಮನಳ್ಳಿ, ಬಿಸಲಕೊಪ್ಪ , ಚಿಪಗಿ, ತಾರಗೋಡು, ನಡಗೋಡು ಮೊದಲಾದ ಗ್ರಾಮಗಳ ಕೆಲವರಿಗೆ ಕುಲದೈವವೂ ಹೌದು. ಊರಿನ ಹಿರಿಯರಾದ ದಿ. ಗಣಪತಿ ಹೆಗಡೆಯವರು "ಈ ಊರಿನಲ್ಲಿ ವಿನಯಶೀಲತೆಯೇ ಉನ್ನತಿಗೆ ಸೋಪಾನ. ನಾ, ನಾ (ಅಹಂ ಭಾವ) ಎಂಬುವವನನ್ನು ನಮ್ಮ ಶಂಭುಲಿಂಗ ಎಂದೂ ಸಹಿಸನು" ಎಂದು ಹೇಳುತ್ತಿದ್ದುದನ್ನು ನಾನು ಬಾಲಕನಿದ್ದಾಗ ಕೇಳಿದ್ದು ಚೆನ್ನಾಗಿ ನೆನಪಿದೆ. ಇಲ್ಲಿ ಶಿವನ ಅಭಿಷೇಕಕ್ಕೆ ನಿಗದಿ ಪಡಿಸಿದ ಹೊಂಡ / ಭಾವಿಯ ನೀರನ್ನೇ ಬಳಸಬೇಕೆಂಬ ನಿಯಮವಿದೆ. ಈ ಭವಹರನ ಮಹಿಮೆ ಅಪಾರವಾಗಿದ್ದು ಭಕ್ತವೃಂದ ಕೂಡ ವಿಶಾಲವಾಗಿದೆ. ಈಗ ಗುಡಿ ಮತ್ತೊಮ್ಮೆ ನವೀಕೃತವಾಗಿದ್ದು ವಿಶಾಲವೂ, ಪ್ರೇಕ್ಷಣೀಯವೂ ಆಗಿದೆ.
             ನನ್ನ ತಂದೆಯವರು ಈ ಊರಿಗೆ ಬಂದಾಗ ದೇವಸ್ಥಾನ ಎಂದರೆ ಒಂದು ಗರ್ಭಗುಡಿ, ಕಿರಿದಾದ ಪ್ರದಕ್ಷಿಣ ಪ್ರಾಕಾರ    ಹಾಗೂ ಎದುರಿನಲ್ಲಿ ಒಂದು ಪುಟ್ಟ ನವರಂಗ (ಸಭಾಗೃಹ) ಇಷ್ಟು ಮಾತ್ರ ಇದ್ದ, ನಿತ್ಯ ಪೂಜೆ ನಡೆಯುತ್ತಿದ್ದ,ಸಣ್ಣ ದೇವಳವಾಗಿತ್ತು. ಗರ್ಭಗೃಹದಲ್ಲಿ ಉದ್ಭವಲಿಂಗವೆಂದು ಪ್ರತೀತಿಯಿದ್ದ ಶಂಭುಲಿಂಗ ಹಾಗು ಎದುರಿನಲ್ಲಿ (ಹೊರಗೆ) ಮೂತಿಯೋ ಬಾಲವೋ, (ನನಗೀಗ ಸರಿಯಾಗಿ ನೆನಪಿಲ್ಲ ) ಖಡ್ಗದಿಂದ ಕೆತ್ತಿಹೋದ ಪುಟ್ಟ ಬಸವಣ್ಣ. ಈ ನಂದಿಯ ಮೇಲುಗಡೆ, ಈಗಲೂ ಇರುವ, ದೊಡ್ಡ ಘಂಟೆ. ಇಂತಿಪ್ಪ ಈ ಗುಡಿಯ ಅರ್ಚಕ ಹುದ್ದೆಯನ್ನೂ ಸಹ ಒಪ್ಪಿಕೊಂಡ ನನ್ನ ತಂದೆ ಮಹಾಬಲೇಶ್ವರನಿಗೆ ಒಟ್ಟಿನಲ್ಲಿ ಆ ಊರಿನವರಲ್ಲಿ ಒಬ್ಬನಾಗಿ, ತಾನು ನೆಲೆ ನಿಲ್ಲಬೇಕಾಗಿತ್ತು.
             ಈ ಮಹಾಬಲನು 'ಗೇಣಿ'ಗೆ ಪಡೆದ ಜಮೀನು ಸಹ ವರ್ಣನಾಯೋಗ್ಯವೇ ಇದೆ. 'ಸಾಗುವಳಿ ಯೋಗ್ಯ'ವೆಂದು ಗುರುತಿಸಲ್ಪಟ್ಟ ಗದ್ದೆಗಳಲ್ಲಿ ಎರಡು ಭಾಗ - ಮೇಲೆ ಕೆರೆಯ ಸರ್ವೇ ನಂಬರಿನಿಂದ ಕೆಳಗೆ ಸುಮಾರು  ಸಾವಿರ ಅಡಿ  ದೂರದಲ್ಲಿದ್ದ ದೊಡ್ಡ ಮಣ್ಣಿನ ಏರಿಯ ತನಕದ ಭಾಗ "ಹೊಸಕಟ್ಟೆ" ಹಾಗೂ ಅದರ ಕೆಳಗೆ ಹಾನಂಬೆ ರಸ್ತೆಯತನಕದ ಭಾಗ "ಮೂಲಗದ್ದೆ". ನನ್ನಮ್ಮ ಈಗಲೂ ಆ ಗದ್ದೆಗಳ ವೈಖರಿ ನೆನಪಿಸಿಕೊಳ್ಳುತ್ತಾಳೆ -ನಾಟಾ ಎಂದು ಬಳಸಬಹುದಾದ ಎಲ್ಲ ದೊಡ್ಡ ಮರಗಳನ್ನೂ ಕಡಿದು ಖಾಲಿ ಮಾಡಲ್ಪಟ್ಟ, ಕೇವಲ ಮುಳ್ಳು ಕಂಟಿ ಮತ್ತು ದಟ್ಟವಾದ ಬಿದಿರು ಮೆಳೆಗಳಿಂದ ತುಂಬಿಹೋದ 'ಹೊಸಕಟ್ಟೆ'ಯಲ್ಲಿ ಅಲ್ಲೊಂದು ಇಲ್ಲೊಂದು 'ಹಾಳಿ' ಹಾಕಿದ ಗುರುತು ಬಿಟ್ಟರೆ ಅದು ಪಕ್ಕದ ಕಾಡಿನ ವಿಸ್ತರಿತ ಭಾಗದಂತೆ ಕಾಣುತ್ತಿತ್ತು. 'ಮೂಲಗದ್ದೆ' ಇದ್ದುದರಲ್ಲೇ ಸ್ವಲ್ಪ ಮೇಲು. ಆಳು ನೋಡಲು ಭಾರಿ ಅಲ್ಲದಿದ್ದರೂ ಮಹಾಬಲನಲ್ಲಿ ಛಲ ಮತ್ತು ಬಲಕ್ಕೆ ಕೊರತೆ ಇರಲಿಲ್ಲ. ಅಕ್ಷರಶ: ಅಹೋರಾತ್ರಿ ದುಡಿದ ಈ "ಗೌರಿ-ಮಹಾಬಲ" ಜೋಡಿ ಆ ಕಾಡನ್ನೆಲ್ಲ ಸವರಿ, ಸುಟ್ಟು, ಗದ್ದೆಯಾಗಿ ಪರಿವರ್ತಿಸಿದಾಗ ನೋಡಿದವರಿಗೆ ಅದರ ಭೂತರೂಪ ಕಟ್ಟುಕತೆ ಅನ್ನಿಸುವ ಹಾಗೆ ಆಗಿತ್ತು. ಆದರೆ ಗದ್ದೆಯ ಎರಡೂ ಪಕ್ಕಗಳಲ್ಲಿದ್ದ "ಬ್ಯಾಣ" ನನಗೆ ತಿಳುವಳಿಕೆ ಮೂಡಿದಾಗಲೂ ಅದೇ ರೂಪದಲ್ಲೇ ಇತ್ತು.
             ಇಷ್ಟೆಲ್ಲ ಕಷ್ಟಪಟ್ಟು ತಯಾರು ಮಾಡಿದ ಗದ್ದೆಯಲ್ಲಿ ಬೇಸಾಯ ಮಾಡಲು ನನ್ನ ಅಪ್ಪಯ್ಯ ಎಲ್ಲರ ಕೃಷಿ ಕೆಲಸ ಮುಗಿಯುವ ತನಕ ಕಾಯಬೇಕಾಗುತ್ತಿತ್ತು. ಏಕೆಂದರೆ ಇವನಲ್ಲಿ ತನ್ನ ಸ್ವಂತ ಎತ್ತಿನ ಜೋಡಿ ಇರಲಿಲ್ಲ. ಅಂತೂ ಇಂತೂ ಅವರಿವರಲ್ಲಿ  ದಮ್ಮಯ್ಯ ಎಂದು ಗುಡ್ಡೆ ಹಾಕಿ ಸಸಿ ನಾಟಿ ಮಾಡಿ ಬಂದರೆ ಕಾಡಿನಂಚಿನ ಈ ಗದ್ದೆಯಲ್ಲಿ ಕಳ್ಳ ದನಗಳ ಕಾಟ. ಅವು  ಮೇಯ್ದು ಉಳಿದಿದ್ದರಲ್ಲಿ ತೆನೆಗೂಡಿದಾಗ, ಆ ಭಾಗದಲ್ಲಿದ್ದ ಅಸಂಖ್ಯ ಕಾಡುಹಂದಿಗಳು ಲೂಟಿ ಮಾಡಿದ ನಂತರ, ಇವನ ಪಾಲಿಗೆ  ಅದೆಷ್ಟು ಮಿಗುತ್ತಿತ್ತೋ ನಾ ಕಾಣೆ. ಊರೊಳಗಿಂದ ಗದ್ದೆಗೆ ಹೋಗಿಬರಲೂ ದೂರವಾಗುತ್ತಿತ್ತು. ಮನೆಯಲ್ಲಿ ಅದಾಗಲೇ ಮಕ್ಕಳ ಸೈನ್ಯ ತಯಾರಾಗುತ್ತಿತ್ತು. ಜೊತೆಯಲ್ಲಿ ಗ್ರಾಮ ದೇವರ ಪ್ರಸಾದ ವಿತರಣೆಗಾಗಿ ಪ್ರತಿ ವಾರವೂ ಸೀಮೆ ಪೂರ್ತಿ ಸುತ್ತುವ ಕೆಲಸ.   ದೇವರ ನಿತ್ಯ ಪೂಜೆಗೆ ಎಲ್ಲಿದ್ದರೂ ಬರಲೇ ಬೇಕಾದ ಅನಿವಾರ್ಯತೆ ಬೇರೆ. ತಾಯಿ ಬದುಕಿದ್ದಾಗ ಕಂಡ ಕಷ್ಟಗಳು ಒಂದು ಬಗೆಯವಾದರೆ ಈಗ ಹೆಂಡತಿ ಮಕ್ಕಳು ಸಹ ತನ್ನ ಜೊತೆಗೇ  ಕಷ್ಟ ಪಡುವದನ್ನು ಕಾಣುವ ಅಸಹಾಯಕತೆ ಕೂಡಾ ಸೇರಿಕೊಂಡು ಮಹಾಬಲನಿಗೆ ಬದುಕು ದುಃಸಹವೆನಿಸತೊಡಗಿತ್ತು. ದೇವಸ್ಥಾನದ ಪೂಜೆಗೆ ಬರಲು ತಡವಾದಲ್ಲಿ ಗೌರಿ ಸಹ ಊರವರ ಮಾತು ಕೇಳಬೇಕಾಗುತ್ತಿತ್ತು. ಇದರಿಂದ ಅವಳೂ ಸಿಟ್ಟಿಗೆದ್ದು ಗಂಡನಿಗೆ ಮಂಗಳಾರತಿ ಮಾಡುತ್ತಿದ್ದಳು. ಇವೆಲ್ಲದರಿಂದ ರೋಸಿಹೋಗಿ  ಕೊನೆಗೆ ಅನಿವಾರ್ಯವಾಗಿ ದೇವರ ಪೂಜೆಯನ್ನು ಘಟ್ಟದ ಕೆಳಗಿನಿಂದ ಬಂದ ನರಸಿಂಹ ಭಟ್ಟರಿಗೆ ವಹಿಸಿಕೊಟ್ಟು, ಕೈತೊಳೆದುಕೊಂಡನು. ಇದೆಲ್ಲ ನಾನು ಹುಟ್ಟುವ ಪೂರ್ವದಲ್ಲೇ ಆದ ಕಥೆ.
          ಆ ವಿಷಮ ದಿನಗಳಲ್ಲಿ ಈ ಮಹಾಬಲ ಸಂಸಾರ ಹೇಗೆ ಸಾಗುತ್ತಿತ್ತು ? ಬಹುಶ: ಬೆಳೆದ ಬೆಳೆ ಕೂಲಿಯಾಳುಗಳ ಸಂಬಳಕ್ಕೆ ಮಾತ್ರ ಸಾಲುತ್ತಿತ್ತೇನೋ! ಪ್ರತಿ ಏಪ್ರಿಲ್ ತಿಂಗಳಲ್ಲೊಮ್ಮೆ ನವೀಕರಣಗೊಳ್ಳುತ್ತಿದ್ದ ಸೊಸಾಯಿಟಿ ಸಾಲವೇ ಕೃಷಿಗೆ ಬಂಡವಾಳ. ಪತಿ - ಪತ್ನಿ ಮಾತ್ರವಲ್ಲದೆ ದುಡಿಯದೇ ತಿನ್ನುವ ಪುಟ್ಟ ಮಕ್ಕಳ ಹೊಟ್ಟೆ ಸಹ ತುಂಬಬೇಕಿತ್ತು.  ಅದಕ್ಕಾಗಿ ಸಣ್ಣ ಪುಟ್ಟ ಪೌರೋಹಿತ್ಯ, ಮದುವೆ ಮುಂಜಿ ಮುಂತಾದ ಶುಭಕಾರ್ಯಗಳಲ್ಲಿ ನೀಡುವ ದಕ್ಷಿಣೆ,ವರ್ಷಕ್ಕೊಮ್ಮೆ ಸೀಮೆ ಸುತ್ತಿ ಗಿಟ್ಟಿಸುತ್ತಿದ್ದ 'ಸಂಭಾವನೆ', ಸಣ್ಣ ಪುಟ್ಟ ಸಮಾರಂಭಗಳಲ್ಲಿ ಅಡಿಗೆ ಕೆಲಸ, ಅಲ್ಲಲ್ಲಿ ಕಿರಾಣಿ ಅಂಗಡಿಗಳಲ್ಲಿ ದೊರಕುತ್ತಿದ್ದ ತಾತ್ಪೂರ್ತಿಕ ಉದ್ರಿ -ಇವೆಲ್ಲವುಗಳ ಮೇಲೆಯೇ ಈ ಕುಚೇಲನ ಜೀವನ ರಥ ಸಾಗುತ್ತಿತ್ತು. ಈ ಮಧ್ಯೆ, ಜಮೀನಿನ ನಡುವೆಯೇ ಮನೆ ಮಾಡಿದರೆ ಸಾಕಷ್ಟು ಅನುಕೂಲತೆ ಇದೆಯೆಂದು ಆಲೋಚಿಸಿ ಊರೊಳಗಿನ ಜಾಗೆಯನ್ನು ಸೊರಬ  ಸೀಮೆಯಿಂದ ಬಂದು ನಮ್ಮೂರಿನಲ್ಲಿ ಜಮೀನು ಮಾಡುತ್ತಿದ್ದ ಶ್ರೀಯುತ ರಾಮಪ್ಪ ಶೇಷಗಿರಿಯಪ್ಪ ಹೆಗಡೆಯವರಿಗೆ ಮಾರಿ, ಅದೇ ದುಡ್ಡಿನಲ್ಲಿ ತನ್ನ ಜಮೀನಿನಲ್ಲಿಯೇ ಒಂದು ಮನೆ ಕಟ್ಟಿಕೊಂಡನು. ಆ ಮನೆ ಕಟ್ಟುವಾಗ ನಾನು ಕನ್ನಡ ಶಾಲೆಯ ಎರಡನೇ ವರ್ಗದಲ್ಲಿದ್ದೆ. ನನ್ನ ದೊಡ್ಡಣ್ಣ ವಿನಾಯಕ ಅದರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದನು. ಸುಮಾರು ೮ ಅಂಕಣದಷ್ಟು ಜಾಗ ಇದ್ದ ಅದರ ಸುತ್ತಲೂ ಮಣ್ಣು ಮುದ್ದೆ ಗೋಡೆ  ಹಾಗೂ ಒಳಗಡೆ ಮೂರು ಭಾಗವಿತ್ತು.
         ಆ ಮನೆಯ ಪ್ರವೇಶದ ಜೊತೆಗೇ ನನ್ನಣ್ಣನ ಮುಂಜಿ ಸಹ ಮಾಡಲು ಅಪ್ಪಯ್ಯ ಯೋಜಿಸಿದ್ದ. ಊರೊಳಗಿನ ಜಾಗ ಮಾರಿದ ದುಡ್ಡಿನಲ್ಲೇ ಇದೂ ಕೂಡ ಆಗಬೇಕಿತ್ತು. ಅದಕ್ಕಾಗಿ ಪಕ್ಕದ ಇಸಳೂರಿನ ಗೌಡರ ಅಂಗಡಿಯಲ್ಲಿ ಕಿರಾಣಿ ಸಾಮಾನು ತರಲು ಹೋದಾಗ ಮೊದಲು ಹಳೇ ಬಾಕಿ ತುಂಬಿಸಿಕೊಂಡ ಅವರು, ತಾನು ಉದ್ರಿ ಕೊಡುವದನ್ನು ನಿಲ್ಲಿಸಿಬಿಟ್ಟಿರುವದಾಗಿ ಹೇಳಿಬಿಟ್ಟರು. ತನ್ನ ಪರಿಸ್ಥಿತಿಯನ್ನು ಪರಿಪರಿಯಾಗಿ ವಿವರಿಸಿದರೂ ಅದಕ್ಕೆ ಸೊಪ್ಪು ಹಾಕದ ಅವರು ಇವನನ್ನು ಸಾಗಹಾಕಿದರು. ಮಾರನೆ ದಿನದ ಕಾರ್ಯಕ್ಕಾಗಿ ಎಲ್ಲರಿಗೂ ಹೇಳಿಯಾಗಿತ್ತು. ಆದರೆ ಮನೆಯಲ್ಲಿ ನಾಲ್ಕು ಜನರಿಗೆ ಮಾಡಿ ಬಡಿಸುವಷ್ಟು ಸಾಮಗ್ರಿಯೂ ಇರಲಿಲ್ಲ. ಆ ಅತೀವ ನಿರಾಶೆಯಲ್ಲಿ ದುಃಖತಪ್ತ ದಂಪತಿ ದೇವರ ಮೇಲೆ ಭಾರ ಹಾಕಿ ಮಲಗಿದರು.
          ಅದು ಹೇಗೋ ಈ ವಿಷಯ ಗೊತ್ತುಮಾಡಿಕೊಂಡ ರಾಮಪ್ಪ ಹೆಗಡೆಯವರು ಮರುದಿನ ಸೂರ್ಯೋದಯಕ್ಕೆ ಸರಿಯಾಗಿ ಅವತ್ತಿನ ಪುಟ್ಟ ಸಮಾರಂಭಕ್ಕೆ ಅವಶ್ಯವಿರುವಷ್ಟು ದಿನಸಿ ಸಾಮಗ್ರಿ, ಅಕ್ಕಿ, ಕಾಯಿ ಮತ್ತು ಒಂದು ಡಬ್ಬಿ ಬೆಲ್ಲ- ಎಲ್ಲವನ್ನು ಆಳುಗಳ ಕೈಲಿ ಹೊರಿಸಿ ಈ ಹೊಸಮನೆಗೆ ಕಳಿಸಿಕೊಟ್ಟಿದ್ದರು. ಕೃತಜ್ಞತೆಯಿಂದ ಕೊರಳ ಸೆರೆ ಉಬ್ಬಿ ಬಂದ ಮಹಾಬಲ ಭಟ್ಟರ ಬೆನ್ನು ತಟ್ಟಿ, 'ಮೊದಲು ಕಾರ್ಯ ಸಾಗಿಸಿ' ಎಂದು ಪ್ರೋತ್ಸಾಹದ ಮಾತಾಡಿದರು. ಅಂದು ನಮ್ಮ ಕುಟುಂಬದ ಪಾಲಿಗೆ ದೇವರೇ ಆಗಿಬಂದ, ಈಗ ತೊಂಭತ್ತರ ಹೊಸ್ತಿಲಲ್ಲಿರುವ ಶ್ರೀಯುತ ರಾಮಪ್ಪ ಹೆಗಡೆಯವರು ನಾವು ಸಹೋದರರಿಗೆಲ್ಲ ತೀರ್ಥರೂಪರೆ ಹೌದು.
          "ಕೊಲ್ಲುವ  ದೇವರಿಗಿಂತ ಕಾಯುವ ದೇವರು ದೊಡ್ಡವನು" ಎಂಬುದು ಇದಕ್ಕೇ ಅಲ್ಲವೇ ?
           


















     

No comments:

Post a Comment