Thursday 27 February 2014

"ಸರ್ವತೋಮುಖಿ ಕಲಿಕೆ"

       ನನ್ನ ಸಿದ್ಧವನದ ಸೈನ್ಸ್ ಸಹಪಾಠಿಗಳೆಲ್ಲ ೨ನೆ ಪಿಯುಸಿ ಯ ದ್ವಿತೀಯಾರ್ಧ ಆರಂಭ ಆಗುತ್ತಲೇ ತಮ್ಮ ಕನಸುಗಳ ಸಾಕ್ಷಾತ್ಕಾರಕ್ಕಾಗಿ ಹಗಲಿರುಳೂ ಅಭ್ಯಾಸ ಮಾಡತೊಡಗಿದ್ದರು. ನನಗೀಗ ಸರಿಯಾಗಿ ನೆನಪಿಲ್ಲ, ಅದು ಹೇಗೋ ಹಾಸನದ ಅನಂತರಾಮು ಇಷ್ಟರಲ್ಲಾಗಲೇ  ನನ್ನನ್ನು ತುಂಬಾ ಹಚ್ಚಿಕೊಂಡಿದ್ದ. ಅಷ್ಟೇ ಅಲ್ಲ, ಸಿದ್ಧವನದಲ್ಲೇ ಇದ್ದ ಸೌಮ್ಯ ಸ್ವಭಾವದ, ಎಳಸು ಮುಖದ, ಸುಂದರನಾದ ಎನ್. ವಿದ್ಯಾನಂದನಿಗೂ ಆತ್ಮೀಯನಾಗಿದ್ದ.  ಸಿದ್ಧವನದಿಂದ ಅನತಿ ದೂರದಲ್ಲಿ ರೂಂ ಮಾಡಿಕೊಂಡಿದ್ದ, ತನ್ನ ಊರವರೂ, ಸಂಬಂಧಿಗಳೂ ಆಗಿದ್ದ ಜಯಂತ ಮತ್ತು ರಾಜಶೇಖರ ಸಹೋದರರ ಜೊತೆ ವಾಸವಾಗಿದ್ದ ಅನಂತಪದ್ಮನಾಭ ಯಾನೆ ಪದ್ದಣ್ಣ ಕೂಡ ನನ್ನ ಆತ್ಮೀಯ ವಲಯದೊಳಗೆ ಬಂದಿದ್ದ. ನನ್ನ ಸಹವಾಸಿಯಾಗಿದ್ದ ಸಂಜೀವ ಪೂಜಾರಿ ಕೂಡ ಹತ್ತಿರದವನಾಗಿದ್ದ. ಬೇರೆ ವಿಭಾಗಗಳ ಹುಡುಗರೂ ಸಹ ಜೊತೆಗಾರರಾಗಿದ್ದರು. ಈ ಎಲ್ಲರ ಜೊತೆ ನಾನು ಪ್ರತ್ಯೇಕವಾಗಿ ದಿನದ ಬೇರೆ ಬೇರೆ ಅವಧಿಯಲ್ಲಿ ಜೊತೆಯಿದ್ದು ಎಲ್ಲರ ಗುಣಾವಗುಣಗಳ ಪರಿಚಯ ಹೊಂದಿದ್ದೆ. ಕೆಲ ಮಟ್ಟಿಗೆ ಪ್ರಭಾವಿತನೂ ಆಗಿದ್ದೆ. ವರ್ಷಾರಂಭದಲ್ಲಿ, ಅಂದರೆ ಜೂನ್-ಜುಲೈನಲ್ಲಿ, ಎಲ್ಲರೂ ಬೆಳಿಗ್ಗೆ ಗಂಜಿಯೂಟಕ್ಕೆ ಹೋದ ಕೂಡಲೇ  ಸಂಜೀವ ಪೂಜಾರಿ ಮಂಗನಂತೆ ಚಕಚಕನೆ ಮಾವಿನ ಮರವೇರಿ ಬಲಿತ ಕಾಯಿಗಳನ್ನು ಕೊಯ್ದು ಕೆಳಗೆ ಒಗೆಯುತ್ತಿದ್ದರೆ, ನಾನು ಕೆಳಗಿಂದ ಅವನ್ನು ಹಿಡಿದು ಶ್ರೀನಿವಾಸ ಮೂರ್ತಿಯ ದೊಡ್ಡ ಬ್ಯಾಗಿನಲ್ಲಿ ಹಾಕಿತುರುಕಿ ,ನಂತರ ಇಬ್ಬರೂ ಸೇರಿ ಅದನ್ನು ರೂಮಿನಲ್ಲಿ ಒಗೆದು, ಓಡಿ  ಹೋಗಿ ಊಟದ ಸಾಲಿನ ಕೊನೆಯಲ್ಲಿ ಸೇರಿಕೊಳ್ಳುತ್ತಿದ್ದೆವು. ಚೆನ್ನಾಗಿ ಬಲಿತ ಕಾಯಿಗಳು ೩-೪ ದಿನದಲ್ಲೇ ಮಾಗಿ ಒಳ್ಳೇ ಹಣ್ಣು ಸಿಗುತ್ತಿತ್ತು. ಈ ರೀತಿ ನಾವು ನಾಲ್ಕೂ ಜನ ರೂಂಮೇಟುಗಳು ತಿಂಗಳು ಪೂರ್ತಿ ಉತ್ತಮ ಜಾತಿಯ ಮಾವಿನ ಹಣ್ಣು ತಿನ್ನುತ್ತಿದ್ದೆವು. ಇದರಿಂದಾಗಿ ಹಾಗೂ ಈ ತರಹದ ಇನ್ನೂ ಹಲವು ಮಂಗಚೇಷ್ಟೆಗಳಿಂದಾಗಿ  ಸಂಜೀವ ನನಗೆ ಆಪ್ತನಾಗಿದ್ದ.
        ಆಗ ಅನಂತರಾಮು ತುಂಬಾ ಚಿಕ್ಕ ಹುಡುಗನ ತರಹ ಕಾಣಿಸುತ್ತಿದ್ದ.ಇನ್ನೂ ಎತ್ತರ ಕೂಡ ಬೆಳೆದಿರಲಿಲ್ಲ. ಒಮ್ಮೆ ವಾರಾಂತ್ಯದ ರಜೆಯಲ್ಲಿ ಅವನ ಒತ್ತಾಯಕ್ಕೆ ಕಟ್ಟು ಬಿದ್ದು ಅವನ ಜೊತೆ ಅವನ ಹಾಸನದ ಮನೆಗೂ ಹೋಗಿದ್ದೆ. ಅಲ್ಲಿ ಅವನ ಅಕ್ಕ, ಅಪ್ಪಾಜಿ ಮತ್ತು ಅಮ್ಮ ನನ್ನನ್ನು ತುಂಬಾ ಇಷ್ಟಪಟ್ಟರು. ನನ್ನ ಪೂರ್ವಾಪರ ವಿಚಾರಿಸಿದ ಅವರು ತಮ್ಮ ಮಗ ನನ್ನ ದೋಸ್ತಿ ಮಾಡಿದ್ದಕ್ಕೆ ಖುಷಿ ಪಟ್ಟರು. ನಾನು ಹಾಸನದ ಇದೇ ಭೇಟಿಯಲ್ಲಿ ಒಂದು ಸೂಟ್ ಕೇಸ್ ಖರೀದಿಸಿದ್ದೆ - ಸ್ವಲ್ಪ ಕೆಂಚು ಬಣ್ಣದ್ದು. ಅದು ತೀರ ಸಾಧಾರಣ ಸೂಟ್ ಕೇಸ್  ಆಗಿದ್ದರೂ ಸಹ ಮೊದಲನೆಯದೆಂಬ ಕಾರಣದಿಂದ ಇನ್ನೂ ನನ್ನ ಹತ್ತಿರ ಇದೆ - ನನ್ನ ಹೆಂಡತಿ ಮಕ್ಕಳ ಜೋಕುಗಳಿಗೆ ವಸ್ತುವಾಗುತ್ತ ಮತ್ತು ಸವಿ ನೆನಪುಗಳ  ಕಾರಣದಿಂದ ನನಗೆ ಹೆಚ್ಹೆಚ್ಚು  ಆಪ್ತವಾಗುತ್ತ.
        ಅದೇ ವರ್ಷ ನಮ್ಮ ಕಾಲೇಜಿನ ದಶಮಾನೋತ್ಸವ ಸಮಾರಂಭ ಸಹ ಇತ್ತು. ಆ ಸಂಭ್ರಮಾಚರಣೆಯ ಭಾಗವಾಗಿ ಹಲವಾರು ಅಂತರ್ ಕಾಲೇಜು  ಸ್ಪರ್ಧೆಗಳು ಏರ್ಪಟ್ಟಿದ್ದವು.ನಾನೂ ಸಹ ಡಿಗ್ರಿ ಹುಡುಗರ ಜೊತೆ ಸೇರಿ ಒಂದು ನಾಟಕದಲ್ಲಿ ಚಿಕ್ಕದೊಂದು ಪಾತ್ರ ಮಾಡಿದ್ದೆ. ನಂತರ ಒಳಾಂಗಣದಲ್ಲಿ "ಫೋಟೋ ಅವಾಂತರ" (ರಚನೆ : ಗುಂಡೂ ರಾವ್ ) ನಗೆ  ನಾಟಕ ಆಡಿದ್ದೆವು. ಅದರಲ್ಲಿ ಗುರುಮೂರ್ತಿ ಮುಖ್ಯ ಪಾತ್ರ "ಚೆನ್ನ" ಆಗಿದ್ದರೆ, ನಾನು ಪತ್ರಗಳನ್ನು ಕದ್ದು ಓದುವ "ಪೋಸ್ಟ್ ಮ್ಯಾನ್" ಆಗಿದ್ದೆ. ಇಂಗ್ಲಿಶ್ ಲೆಕ್ಚರರ್ ಶೇಖರ್ ಅವರ ನಿರ್ದೇಶನ ಇತ್ತು. ಗುರುಮೂರ್ತಿ ಸರಿಯಾಗಿ "ಚೆನ್ನ" ಆಗಲಿಲ್ಲ. ಆದರೆ ನಾನು ಇಡೀ ಹಾಲ್ ನ್ನು" ಪೋಸ್ಟ್ ಮ್ಯಾನ್" ಆಗಿ ಇನ್ನಿಲ್ಲದಂತೆ ಮರಳು ಮಾಡಿದ್ದೆ. ನಾಟಕ ಮುಗಿದಾಗ ಎಲ್ಲರೂ ನನ್ನನ್ನು ತುಂಬಾ ಅಭಿನಂದಿಸಿದರು-ಹುಡುಗ ಹುಡುಗಿಯರೆಂಬ ತಾರತಮ್ಯ ಇಲ್ಲದೆ. ನಂತರದ ದಿನಗಳಲ್ಲಿ ಕಾರಿಡಾರಿನಲ್ಲಿ ಎಲ್ಲ ಹುಡುಗಿಯರೂ ತಮಗೊಂದು ಲವ್ ಲೆಟರ್ ಕೊಡಲು ಕೇಳುವವರೇ! "ನಿಮಗೆ ಯಾವ ಪತ್ರನೂ ಇಲ್ಲ, ಬೇಕಿದ್ದರೆ ನಾನೇ ಒಂದು ಬರೆದು ಕೊಡಲಾ?"ಎಂದು ಅವರೆಲ್ಲರನ್ನು ಈ ಪೋಸ್ಟ್ ಮ್ಯಾನ್ ಬಾಯಿ ಮುಚ್ಚಿಸಬೇಕಾಯ್ತು.
        ಇದೇ  ಸುಮಾರಿನಲ್ಲಿ ಕಾಲೇಜು ವತಿಯಿಂದ ಹಲವು ವಿದ್ಯಾರ್ಥಿಗಳು ಗುರುಗಳ ಸಾರಥ್ಯದಲ್ಲಿ ಕೆಮ್ಮಣ್ಣು ಗುಂಡಿ ಮತ್ತು ಕಳಸಕ್ಕೆ ಪ್ರವಾಸ ಹೋಗಿ ಬಂದೆವು. ಇದೆಲ್ಲದರಿಂದಾಗಿ ನನಗೆ ಹಲವಾರು ಹಿರಿಯ ವಿದ್ಯಾರ್ಥಿಗಳ ಒಡನಾಟ ದೊರೆತು ನನ್ನ ಕ್ಲಾಸ್ ಮೇಟ್ ಗಳ ನಡುವೆ ಒಂದು ತರಹ ಪ್ರತಿಷ್ಠೆ  ಜಾಸ್ತಿಯಾಯಿತು. ಆರ್ಟ್ಸ್ ಮತ್ತು ಕಾಮರ್ಸ್ ವಿದ್ಯಾರ್ಥಿಗಳೂ ನನ್ನ ಸ್ನೇಹ ಬಯಸತೊಡಗಿದರು. ಇಷ್ಟಾದರೂ ನಾನ್ಯಾವ ಸ್ಥಿತಿಯಲ್ಲಿದ್ದೆನೆಂದರೆ ನನ್ನ ಹತ್ತಿರ ಒಂದು ಪ್ಯಾಂಟ್ ಆಗಲೀ ಒಂದು ಜೊತೆ ಚಪ್ಪಲಿಯಾಗಲೀ ಇರಲಿಲ್ಲ. ದೇಹ ಬೆಳೆದಿದ್ದ ಕಾರಣ ಚೆಡ್ಡಿ ಹಾಕುವದನ್ನು ಬಿಟ್ಟು ಬಿಳಿ ಲುಂಗಿ ಉಡಲು ತೊಡಗಿ ಒಂದು ವರ್ಷವಾಗಿತ್ತು. ಈಗಿನ ಮಕ್ಕಳು ನಂಬಲಿಕ್ಕಿಲ್ಲ - ನಾನು ನನ್ನ ಜೀವನದ ಮೊದಲ ಜೊತೆ ಚಪ್ಪಲಿ ತಗೊಂಡಿದ್ದು ನನ್ನ ೨ನೆ ಪಿಯುಸಿಯ ೨ನೇ ಟರ್ಮ್ ನಲ್ಲಿ, ಆರು ರೂಪಾಯಿ ಕೊಟ್ಟು ತಾಳಿಕೆಗೆ ಹೆಸರಾಗಿದ್ದ ಕಪ್ಪು ಬಣ್ಣದ ಹವಾಯಿ ಚಪ್ಪಲಿ ಕೊಂಡಾಗ ಸ್ವರ್ಗಕ್ಕೆ ಮೂರೇ ಗೇಣು!.ಯಾವುದೋ ಜಾಹೀರಾತು ನೋಡಿ 'ಲುಧಿಯಾನ'ದಿಂದ ಪೋಸ್ಟ್ ಮೂಲಕ ತರಿಸಿಕೊಂಡ,ತುಂಬಾ ಬಳಕುತ್ತಿದ್ದ ಹಾಗು ಝಗಮಗ ಎನ್ನುತ್ತಿದ್ದ ಪ್ಯಾಂಟ್ ಪೀಸನ್ನು ಮೊದಲ ವರ್ಷದ ರಜದಲ್ಲಿ ಗೋಕರ್ಣ ಬಾವನನ್ನು ಕಾಡಿ ಅವನ ಟೇಲರ್ ಕೈಲಿ ಗೋಕರ್ಣದಲ್ಲೇ ಹೊಲಿಸಿಕೊಂಡಿದ್ದೇ ಮೊದಲ ಪ್ಯಾಂಟ್ ! ೨ನೆ ಪಿಯುಸಿಯ ಮೊದಲ ಆರು  ತಿಂಗಳು ಪ್ಯಾಂಟ್ ಹಾಕಿದಾಗ ಬರಿಗಾಲೇ ಇರುತ್ತಿತ್ತು.  
         ಹಿಂತಿರುಗಿ ನೋಡಿದಾಗ 'ಅಬ್ಬಾ, ಆಗ ನಾನು ಎಷ್ಟೆಲ್ಲಾ ಕಷ್ಟ ಪಟ್ಟಿದ್ದೆನಲ್ಲ' ಎಂದು ಮೊದಲೆಲ್ಲ ಅನ್ನಿಸುತ್ತಿತ್ತು ಮತ್ತು ನನ್ನ ಬಗ್ಗೆ ನನಗೇ ಒಂದು ತರಹದ ಅಭಿಮಾನ ಉಂಟಾಗುತ್ತಿತ್ತು. ಈಗ ಬುದ್ಧಿ ಸ್ವಲ್ಪ ಕೆಲಸ ಮಾಡ ತೊಡಗಿದಾಗ ನೋಡಿದರೆ ಅದೇನು ವಿಶೇಷ ಅನ್ನಿಸುತ್ತಿಲ್ಲ. ಏಕೆಂದರೆ ಆಗ ಸಿದ್ಧವನದಲ್ಲಿ ನನ್ನ ಸಹಾಧ್ಯಾಯಿಗಳಾಗಿದ್ದ ೫೦-೬೦ ಪ್ರತಿಶತ ಹುಡುಗರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಬಹುತೇಕರು ಒಂದೇ ತರಹ  ಇದ್ದಿದ್ದರಿಂದ ಅಲ್ಲಿ ಕೀಳರಿಮೆಗೆ ಆಸ್ಪದ ಇರಲಿಲ್ಲ. ಆದ್ದರಿಂದ ನಾನು ಅವನ್ನೆಲ್ಲ  ತುಂಬಾ ಸಹಜವಾಗಿ ಜೈಸಿ ಬರಲು ಸಾಧ್ಯವಾಯಿತು. In fact, ಅಲ್ಲಿ ನನಗಿಂತ ಇನ್ನೂ ಹೀನ ಸ್ಥಿತಿಯಲ್ಲಿ ಇದ್ದ ಹಲವರಿದ್ದರು.ಕೇವಲ ಅಲ್ಲಿ ಮಾತ್ರವಲ್ಲ, ಆಗ ಇಡೀ ದೇಶದ ತುಂಬೆಲ್ಲ ಇದೇ  ರೀತಿಯ ಪರಿಸ್ಥಿತಿ ಇತ್ತು.  ಅವರೆಲ್ಲ ವಿಜಯಿಗಳಾಗಿ ಹೊರಹೊಮ್ಮಿದಾಗ ನನ್ನೊಬ್ಬನದೇ  ಹೆಚ್ಚುಗಾರಿಕೆ ಎಂದುಕೊಳ್ಳಲು ಕಾರಣವೇ ಇಲ್ಲ. ವಿಪರೀತ ಪರಿಸ್ಥಿತಿಗಳಲ್ಲಿ ಗಳಿಸಿದ  ಗೆಲುವು ಮಾತ್ರ ಅಭಿನಂದನಾರ್ಹ.ತನಗಾಗಿ ಸುಂದರ  ಬದುಕನ್ನು ಒಬ್ಬ ಬಡವ ಕಟ್ಟಿಕೊಳ್ಳಬೇಕೆಂದಿದ್ದರೆ  ಇಷ್ಟೂ ಕಷ್ಟ ಪಡದಿದ್ದರೆ  ಹೇಗೆ? ಅಷ್ಟಕ್ಕೂ ಸುಕಾ ಸುಮ್ಮನೆ "ಅನುಭವಿ" ಆಗಲು ಸಾಧ್ಯವೇ? ಇದನ್ನು ಅರಿತ ನಂತರ ನನ್ನ ಒಣಹೆಮ್ಮೆ ಈಗ ಇಲ್ಲವಾಗಿದೆ.                                                                                                             ಟ್ರಾಫಿಕ್ ನ ಗಿಜಿಗಿಜಿಯಲ್ಲಿಯೂ ಸರಾಗವಾಗಿ  ಗಾಡಿ ಓಡಿಸಲು ಬಂದವ ಮಾತ್ರ ನಿಜವಾದ "ಡ್ರೈವರ್"-ಅಲ್ಲವೇ?                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                           . 

No comments:

Post a Comment