Monday 5 December 2016

ಶಾಲಾ ದಿನಗಳ ನೆನಪು

                       
      1960ರ ದಶಕದಲ್ಲಿ ನಮ್ಮೂರ (ದೊಡ್ನಳ್ಳಿ) ಸುತ್ತಲಿನ ಹತ್ತಾರು ಹಳ್ಳಿಗಳ ಪೈಕಿ ನಮ್ಮೂರಿನಲ್ಲಿ ಮಾತ್ರ ಹಿರಿಯ ಪ್ರಾಥಮಿಕ ಶಾಲೆಯಿತ್ತು. ಸುತ್ತಲಿನ ಹಳ್ಳಿಗಳ ಪೈಕಿ ಮೂರರಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳಿದ್ದು ಅಲ್ಲಿ 4ನೇ ತರಗತಿಯ ತನಕ ಓದಿ ನಂತರ 5ನೇ ತರಗತಿಗೆ ನಮ್ಮೂರ ಶಾಲೆಗೆ ಬರುತ್ತಿದ್ದರು. ಅಷ್ಟೊತ್ತಿಗೆ 2-3 ಮೈಲು ದೂರದ ನಮ್ಮ ಶಾಲೆಗೆ ಬಂದು ಹೋಗುವಷ್ಟು ಅವರು ದೊಡ್ಡವರಾಗಿರುತ್ತಿದ್ದರು.
      ನಮ್ಮದು ಹಿರಿಯ ಪ್ರಾಥಮಿಕ ಶಾಲೆಯಾದರೂ ಅದರಲ್ಲಿ ಆಗ ಕೇವಲ ಎರಡೇ ಕೋಣೆಗಳಿದ್ದವು. ಅವುಗಳ ಪೈಕಿ ದೊಡ್ಡದಾಗಿದ್ದ ಒಂದು ಖೋಲಿಯ ನಡುವೆ ಪರದೆ ಹಾಕಿ ಪಾರ್ಟಿಷನ್ ಮಾಡಿ ಇನ್ನೊಂದು ಖೋಲಿ ಮಾಡಿಕೊಂಡಿದ್ದರು. ಈ ಮೂರು ಖೋಲಿಗಳಲ್ಲೇ ಎಲ್ಲ ಏಳು ಕ್ಲಾಸುಗಳ ಮಕ್ಕಳೂ ಕೂಡ್ರಬೇಕಿತ್ತು. 6 ಮತ್ತು 7ನೇ ತರಗತಿಯ ಮಕ್ಕಳಿಗೆ ಮಾತ್ರ ಕೂಡ್ರಲು ಬೆಂಚು ಇತ್ತು. ಉಳಿದವರೆಲ್ಲಾ ನೆಲದ ಮೇಲೇ ಕೂರುತ್ತಿದ್ದೆವು. ಆದರೆ ಇವ್ಯಾವುದೂ ನಮ್ಮ ಕಲಿಕೆಗೆ ಅಡಚಣೆಯಾಗಿರಲೇ ಇಲ್ಲ. ಅದಕ್ಕೆ ಕಾರಣ ಆಗ ಅಲ್ಲಿದ್ದ ಮೂರು ಜನ ಶಿಕ್ಷಕರು. ಆಗಿನ್ನೂ ಬ್ರಹ್ಮಚಾರಿಗಳೇ ಆಗಿದ್ದ ಆ ಮೂವರೂ ಅತ್ಯಂತ ನಿಷ್ಠಾವಂತ ಗುರುಗಳಾಗಿದ್ದರು.
      ಆ ಮೂವರ ಪೈಕಿ ಶ್ರೀ ಮಾರುತಿ ಹೊನ್ನಾವರ್ ಎಂಬುವವರು ಹೆಡ್ ಮಾಸ್ತರ್. ಶ್ರೀ ಜಿ.ಎಸ್.ಭಂಡಾರಿ (ಈಗ ಇವರು  ದಿವಂಗತರಾಗಿದ್ದಾರೆ) ಹಾಗೂ ಶ್ರೀ ಬಿ.ವಿ. ನಾಯ್ಕ್ ಸಹಾಯಕ ಶಿಕ್ಷಕರು.. ಈ ತ್ರಿವಳಿ ಶಿಕ್ಷಕರ ಧ್ಯೇಯನಿಷ್ಟ ಅವಿರತ ಪ್ರಯತ್ನದಿಂದ ನಮ್ಮ ಶಾಲೆ ಅತ್ಯುತ್ತಮ ಶಾಲೆಗಳ ಪೈಕಿ ಒಂದೆಂದು  ಹೆಸರು ಮಾಡಿತ್ತು. ಪ್ರತಿವರ್ಷ ಮುಲ್ಕಿ ಪರೀಕ್ಷೆಯಲ್ಲಿ ಶತ ಪ್ರತಿಶತ ಫಲಿತಾಂಶ  ಬರುತ್ತಿತ್ತು. (ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ್ದ 7ನೇ ತರಗತಿಯ ಪರೀಕ್ಷೆಗೆ ಮುಲ್ಕಿ ಪರೀಕ್ಷೆ ಎನ್ನುತ್ತಿದ್ದರು. ಬಹುಶ:ಅರೇಬಿಕ್ ಶಬ್ದ “ಮುಲ್ಕ್” ಎಂಬುದರಿಂದ ಬಂದಿದ್ದಿರಬೇಕು).
       ನನ್ನ 3ನೇ ಕ್ಲಾಸಿನಿಂದ 6ನೇ ಕ್ಲಾಸ್ ತನಕ ಶ್ರೀ ಬಿ.ವಿ. ನಾಯ್ಕ್ ರವರು ನಮ್ಮ ಪೂರ್ತಿ ಕ್ಲಾಸನ್ನು ತೆಗೆದುಕೊಳ್ಳುತ್ತಿದ್ದರು. ಗಣಿತ ಮತ್ತು ಇಂಗ್ಲೀಷ್ ಅವರ ಮೆಚ್ಚಿನ ವಿಷಯಗಳು. ಉಳಿದವನ್ನೂ ಚೆನ್ನಾಗಿಯೇ ಕಲಿಸುತ್ತಿದ್ದರು. ಆದಾಗ ತಾನೇ ನಮ್ಮ  7ನೇ ತರಗತಿ ಆರಂಭವಾಗಿತ್ತು. ಮತ್ತೆ   ನಾಯ್ಕ್ ಗುರೂಜಿಯವರೇ  ನಮ್ಮ ಕ್ಲಾಸ್ ಟೀಚರ್. ಒಂದು ದಿನ ತರಗತಿಯಲ್ಲಿನ ನಮ್ಮ ಏನೋ ತಪ್ಪಿಗೆ ಎಲ್ಲರಿಗೂ ಒಂದೊಂದು ಏಟು ಕೊಟ್ಟಿದ್ದರು – ಗಂಡು ಹೆಣ್ಣು ಮಕ್ಕಳೆಂಬ ಭೇದವಿಲ್ಲದೆ. ಈ ವಿಷಯವನ್ನು ಅಳುತ್ತಾ ತನ್ನ ಮನೆಯಲ್ಲಿ ದೂರಿದಳೊಬ್ಬಳು. ಅದೇ ಸಮಯಕ್ಕೆ ಪರವೂರಿನಲ್ಲಿ ಕಾಲೇಜ್ ಓದುತ್ತಿದ್ದ, ರಜೆಗಾಗಿ ಊರಿಗೆ ಬಂದ ಅವಳಣ್ಣ ಇದರಿಂದ ಕನಲಿ, ಮಾರನೇ ದಿನ ಸೀದಾ ಶಾಲೆಗೆ ಬಂದು ನಾಯ್ಕ್ ಗುರೂಜಿಯವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ. ಆ ದಿನಗಳಲ್ಲಿ ಮಕ್ಕಳಿಗೆ ಒಂದೆರಡು ಏಟು ಹೊಡೆಯುವದು ಈಗಿನಂತೆ ಅಪರಾಧವಾಗಿರಲಿಲ್ಲ. ಗುರೂಜಿ ಅದನ್ನಾಗಲೇ ಮರೆತು ಬಿಟ್ಟಿದ್ದರು ಕೂಡಾ. ನಿಯತ್ತಾಗಿ ದುಡಿಯುತ್ತಿದ್ದ ಅವರಿಗೆ ತಾವು ಏನೂ ತಪ್ಪು ಮಾಡಿಲ್ಲವೆಂಬ ಧೃಡ ನಂಬಿಕೆ. ಈ ಚಿಗುರು ಮೀಸೆಯ ಯುವಕನ ಮಾತಿಗೆ ಸೊಪ್ಪು ಹಾಕದೇ ಅವನಿಗೆ “ಗೆಟ್ ಔಟ್” ಎಂದು ಆದೇಶಿಸಿದರು. ಅಷ್ಟಕ್ಕೂ ಅವರೂ ಸಹ ಬಿಸಿರಕ್ತದ ತರುಣರೇ ಆಗಿದ್ದರು. “ನಿನ್ನನ್ನು ಈ ಶಾಲೆಯಿಂದಲೇ ಗೆಟ್ ಔಟ್  ಮಾಡಿಸುತ್ತೇನೆ” ಎಂದು ಸವಾಲು ಹಾಕಿ ಹೋದ ಆ ತರುಣ, ಊರ ಹಿರಿಯರ ಎದುರು ಈ ಮಾಸ್ತರರ ಉದ್ಧಟತನದ ಬಗ್ಗೆ ವರದಿ ಮಾಡಿ ಪಂಚಾಯತಿ ಸೇರಿಸಿದ. ಇತ್ತ  ಶಾಲೆಯಲ್ಲಿ ಮೂರೂ ಜನ ಶಿಕ್ಷಕರು ತಮ್ಮದಲ್ಲದ ತಪ್ಪಿಗೆ ಕ್ಷಮೆ ಕೇಳಕೂಡದೆಂದು ನಿರ್ಧರಿಸಿಕೊಂಡರು. ಶಾಲೆಗೆ ಬಂದ ಹಿರಿಯರು ಆ ತರುಣನ ಪರವಾಗಿಯೇ ಮಾತಾಡಿದ್ದರಿಂದ ಶಿಕ್ಷಕರು ಸಹ ಹಟ ಹಿಡಿದರು. ಆಗ ಊರ ಹಿರಿಯರು ಸೇರಿ “ಹರತಾಳ” ಮಾಡಿ ಮಕ್ಕಳು ಶಾಲೆಗೆ ಬರದಂತೆ ತಡೆದರು. ಮೂರೂ ಜನ ಶಿಕ್ಷಕರನ್ನು ವರ್ಗಾಯಿಸುವಂತೆ ಮೇಲಧಿಕಾರಿಗಳಲ್ಲಿ ಹಟ ಹಿಡಿದರು. “ಇಷ್ಟು ಒಳ್ಳೆಯ ಶಿಕ್ಷಕರನ್ನು ಬಿಟ್ಟು ಕೊಡಬೇಡಿ “ ಎಂದು ಅವರು ತಿಳಿಹೇಳಿದರೂ ಪ್ರತಿಷ್ಟೆಗೆ ಬಿದ್ದ ಹಿರಿಯರು ಕೇಳಲಿಲ್ಲ. ಪರಿಣಾಮವಾಗಿ ಈ ಮೂವರನ್ನೂ ಶಿಕ್ಷೆಯ ರೂಪದಲ್ಲಿ  ಕಿರಿಯ ಪ್ರಾಥಮಿಕ ಶಾಲೆಗಳಿಗೆ ವರ್ಗಾಯಿಸಿದರು.
         ಊರವರ ಹಠವೇನೋ  ಗೆದ್ದಿತು. ಆದರೆ  ಆದರ ನಂತರ 2-3 ದಶಕಗಳ ಕಾಲ ನಮ್ಮ ಶಾಲೆಗೆ ಆ ರೀತಿಯ ಉತ್ಕೃಷ್ಟ ಶಿಕ್ಷಕರು ಸಿಗಲಿಲ್ಲ. ಇವರ ಜಟಾಪಟಿಯಲ್ಲಿ ಬಡವಾಗಿದ್ದು ಶಾಲೆ ಮತ್ತು ಮಕ್ಕಳು.
         ನಂತರದ ದಿನಗಳಲ್ಲಿ ನಾನು ಎಷ್ಟೋ ಸಾರಿ ಹಿರಿಯರ ಈ ಅವಿವೇಕಿ ನಡೆಯ ಬಗ್ಗೆ ಖೇದಗೊಂಡಿದ್ದೇನೆ. ತರುಣರು ಮೊಂಡಾಟ ಮಾಡುವದು  ಅಸಹಜವಲ್ಲ. ಆದರೆ ನ್ಯಾಯ ನೀಡುವವರು ವಿವೇಚನೆ ಕಳೆದುಕೊಂಡರೆ  ‘ವ್ಯವಸ್ಥೆ ‘ ಬಳಲುತ್ತದೆ. ದುಷ್ಪರಿಣಾಮ ಸಮಾಜದ ಮೇಲಾಗುತ್ತದೆ. ಅಲ್ಲವೇ?.
         ಯಾವ ಒಂದು ಆದರ್ಶದ ಕನಸು ಹೊತ್ತು ಹುಮ್ಮಸ್ಸಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರೋ ಅದಕ್ಕೆ ಈ “ಬಹುಮಾನ” ಸಿಕ್ಕ ಮೇಲೆ ನನ್ನ ನೆಚ್ಚಿನ ನಾಯ್ಕ್ ಗುರೂಜಿ ತುಂಬಾ ತೊಳಲಾಡಿದರು. ನಮ್ಮೂರ ಪಕ್ಕದ “ಒಕ್ಕಲಕೊಪ್ಪ”ದ  ಕಿ. ಪ್ರಾ. ಶಾಲೆಗೆ ವರ್ಗವಾದ ಅವರು ತನ್ನ ನೆಚ್ಚಿನ ಇಂಗ್ಲಿಷ್ ಮತ್ತು ಗಣಿತದ ಕಲಿಸುವಿಕೆಗೆ ಹಿನ್ನಡೆಯಾದ ಬಗ್ಗೆ ಬಹಳೇ ನೊಂದುಕೊಂಡಿದ್ದರು. ನಮಗೂ ಅವರ ಅಗಲುವಿಕೆ ದು:ಸ್ಸಹವಾಗಿತ್ತು. ವಾರಾಂತ್ಯದಲ್ಲಿ ಭೆಟ್ಟಿಯಾದಾಗ ದು:ಖ ಉಮ್ಮಳಿಸಿ ಅಳುತ್ತಿದ್ದೆವು. “ಗುರು”ವಾಗಲಿದ್ದ ಓರ್ವ 'ಶಿಕ್ಷಕ'ನ ಅವಸಾನವಾಗುತ್ತಿತ್ತು. ನಾನು ಅವರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದೆ. “ನೀನು ಉನ್ನತ ಸ್ಥಾನಕ್ಕೆ ಏರುತ್ತೀ” ಎಂದು ಸದಾ ನನಗೆ ಹೇಳುತ್ತಾ ಹಾರೈಸುತ್ತಿದ್ದರು. ಈಗಲೂ  ನನಗೆ ಇವೆಲ್ಲ ಮನಸ್ಸನ್ನು ಮುದುಡಿಸುವ ನೆನೆಪುಗಳು.  ಇದು ನಾನು  ಅವರಿಗೆ ಸಲ್ಲಿಸುತ್ತಿರುವ ಒಂದು “ನುಡಿನಮನ”.
        ಈ ಮೂವರ ನಂತರ ಬಂದ ಶಿಕ್ಷಕ ದಂಪತಿಗಳಿಗೂ ನಾನು ಪ್ರಿಯ ಶಿಷ್ಯನೇ ಆಗಿದ್ದೆ. ಆ ವರ್ಷ ಮೂಲ್ಕಿ ಪರೀಕ್ಷೆ ಬರೆದ ನನಗೆ ಜಿಲ್ಲಾ ಮಟ್ಟದಲ್ಲಿ  5ನೇ  ಸ್ಥಾನ ಲಭ್ಯವಾಗಿತ್ತು. ಮೊತ್ತ ಮೊದಲ ಬಾರಿಗೆ ನಮ್ಮೂರ ಹೈದನ ಹೆಸರು ಪತ್ರಿಕೆಯಲ್ಲಿ ಬಂದಿತ್ತು. ನಮ್ಮನೆಯಲ್ಲಿ ಸಂಭ್ರಮವೋ ಸಂಭ್ರಮ! ನಮ್ಮಪ್ಪ ನನ್ನನ್ನು ಹೈಸ್ಕೂಲ್ ಗೆ  ಸೇರಿಸುವ ಸಲುವಾಗಿ ಚಿಂತಿಸತೊಡಗಿದ್ದ.
        ನನ್ನ ಶಾಲಾದಿನಗಳಲ್ಲಿ ನಮ್ಮ ಮನೆಯ ಕೊಟ್ಟಿಗೆಗೆ ಹೊಂದಿಕೊಂಡು ನಿರ್ಮಿಸಿದ “ಬಿಡಾರ”ದಲ್ಲಿ ಕುಂದಾಪುರ ಕಡೆಯ “ಹಿರಣ್ಣಯ್ಯ ಶೆಟ್ಟಿ” ಎಂಬ ಒಬ್ಬರು “ಶೇರೆಗಾರ”ರು ತಮ್ಮ ತಂಡದೊಂದಿಗೆ ಇದ್ದರು. ಆ ತಂಡದ ಎಲ್ಲರ ಜೊತೆ ನನಗೆ ತುಂಬಾ ಸಲಿಗೆ. ನಾನು 5ನೇ ತರಗತಿಯಲ್ಲಿದ್ದಾಗ ಒಮ್ಮೆ “ಹಂಪಿ”ಗೆ ಶಾಲಾ ಪ್ರವಾಸ ಏರ್ಪಡಿಸಿದ್ದರು. ತಲಾ 5 ರೂಪಾಯಿ ಶುಲ್ಕ. ತನ್ನಲ್ಲಿ ದುಡ್ಡಿಲ್ಲವೆಂದು ಅಪ್ಪಯ್ಯ ಕಳಿಸಲೊಪ್ಪಲಿಲ್ಲ. ನನ್ನ ಅಳು, ಹಠ ನೋಡಿದ ಶೆಟ್ಟರು ತಾನು 5 ರೂಪಾಯಿ ಕೊಡುತ್ತೇನೆಂದರು. ಖುಷಿಯಿಂದ ಹೆಸರು ಕೊಟ್ಟೆ. ಎಲ್ಲಿಗೋ ಹೋಗಿದ್ದ ಶೆಟ್ಟರಿಗೆ ಪ್ರವಾಸದ ದಿನ ನಿಗದಿತ ಸಮಯಕ್ಕೆ ಊರು ತಲುಪಲು ಆಗಲೇ ಇಲ್ಲ. ಫೀಸು ಕೊಡದ ನನ್ನನ್ನು ಬಿಟ್ಟೇ ವ್ಯಾನು ಹೊರಟಿತು. ತೀವ್ರ ನಿರಾಶೆ ಮತ್ತು ಶೆಟ್ಟರ ಮೇಲಿನ ಕೋಪ ತಾರಕಕ್ಕೇರಿತ್ತು. ಈಗಿನಂತೆ ವಾಹನ ಸೌಕರ್ಯ ಇಲ್ಲದ ಆ ದಿನಗಳಲ್ಲಿ ಎಷ್ಟೇ ಯತ್ನಿಸಿದರೂ ಶೆಟ್ಟರಿಗೆ ಸಮಯಕ್ಕೆ ಸರಿಯಾಗಿ ಊರು ತಲುಪಲು ಆಗಿರಲೇ ಇಲ್ಲ. ಧಾವಂತದಿಂದ ನಡೆದು ಬರುತ್ತಿದಾಗ ಎದುರು ಬಂದ ವ್ಯಾನ್ ನಿಲ್ಲಿಸಿ ಮಾಸ್ತರ್ ರವರ ಕೈಲಿ “ ಇದು ರವಿ ಭಟ್ಟರ ಪ್ರವಾಸದ ಶುಲ್ಕ” ಎಂದು ಐದು ರೂಪಾಯಿ ಇಡಲು ಹೋದರೆ, “ದುಡ್ಡು ಕೊಡದ್ದಕ್ಕೆ ಅವನನ್ನು ಕರೆತಂದಿಲ್ಲ” ಎಂಬ ಉತ್ತರ ಕೇಳಿದಾಗ ಅಲ್ಲೇ ಗಳಗಳನೆ ಅತ್ತುಬಿಟ್ಟರಂತೆ. ಮನೆಗೆ ಬಂದಾಗ ಅವರನ್ನು ಮಾತಾಡಿಸದೆ ಸಿಟ್ಟು ಮಾಡಿಕೊಂಡು ಕುಳಿತ ನನಗೆ ಎಲ್ಲವನ್ನೂ ಹೇಳಿ ಪೇಚಾಡಿಕೊಂಡರು. ಅದಕ್ಕೆ ಮರುಗಿದ ನನ್ನಮ್ಮ ನನ್ನನ್ನು ಸಮಾಧಾನಪಡಿಸಿದರು.
       ಇಲ್ಲಿ ಶೆಟ್ಟರು ನೀಡಿದ ಹಣಕ್ಕಿಂತ ಅವರ ಹೃದಯವಂತಿಕೆ ಪ್ರಮುಖವೆನಿಸುತ್ತದೆ. (ಅಂದ ಹಾಗೆ ಆ ಕಾಲದಲ್ಲಿ ಐದು ರೂಪಾಯಿ ಸಣ್ಣ ಮೊತ್ತವಾಗಿರಲಿಲ್ಲ).ಅನಿವಾರ್ಯವಾಗಿಯಾದರೂ, ಮಾತಿಗೆ ತಪ್ಪಿದಾಗ ಅವರು ಅನುಭವಿಸಿದ ಯಾತನೆ ಆ ಕಾಲದ ನೈತಿಕತೆಗೊಂದು ನಿದರ್ಶನವಾಗಿ ನಿಲ್ಲುತ್ತದೆ. ತೀವ್ರ ಬಡತನದ ನಡುವೆಯೂ ಕಾಣಸಿಕ್ಕ ಇಂತಹ ಹೃದಯವಂತಿಕೆಗಳು ಬದುಕಲ್ಲಿ ಆಶಾವಾದಿಯಾಗಿರುವಂತೆ ಮಾಡಿವೆ. ಸದ್ದಿಲ್ಲದೇ ನನ್ನೊಳಗೂ ಒಂದು ಸುಸಂಸ್ಕಾರವನ್ನು ಬಿತ್ತಿವೆ.
        ಇಂತಹ ಮಹನೀಯರು ಅಪ್ರಸಿದ್ಧರಾದರೂ ಅವರ ಹೃದಯ ಸಂಸ್ಕಾರ ಅನುಕರಣೀಯ. ಅಂತಹವರ ಸ್ನೇಹ, ಹಾರೈಕೆಗಳು ಲಭಿಸಿದ್ದು ನನ್ನ ಪುರಾಕೃತ ಪುಣ್ಯವಿಶೇಷವೇ ಸೈ. ಬಾಳಿನ ಪಯಣದಲ್ಲಿ ಸಿಕ್ಕಿದ ಇಂತಹ 'ಅರವಟ್ಟಿಗೆಗೆಳು' ಜೀವನದ  ಗಮ್ಯ ತಲುಪುವಲ್ಲಿ ಚೈತನ್ಯ ನೀಡಿದ್ದನ್ನು ಎಂದಾದರೂ ಮರೆಯಲುಂಟೇ?



No comments:

Post a Comment