ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಜನವರಿ 27, 2020

ಬರ-ನೆರೆ-ಬರೆ

ಮೃಗ‌ಶಿರೆಯ ಮಳೆಯ ನೆಚ್ಚಿ ಹೊಲವನುತ್ತಿ ಬೀಜ ಬಿತ್ತಿ
ಮುಗಿಲ ನೋಡೆ ಗಗನದೊಡಲು ಬಿಳಿಯ ಮೋಡ ಹಡೆದಿದೆ
ಉರಿವ ಸೂರ್ಯ ಕಾದ ನೆಲವು ಹುರಿದು ಹೋದ ಎಲ್ಲ ಬೀಜ
ಬರಿಯ ಕನಸು ಸುಖದ ಬದುಕ ಬೆಳಕು ಕಾಣದಾಗಿದೆ      //

ಕಮರಲಿಲ್ಲ ಪೂರ್ತಿ ಕನಸು  ನಡುವೆ ಮಳೆಯು ಹನಿದಿದೆ
ನಮನ ನಿನಗೆ ವರುಣದೇವ    ಇಳೆಯು ಗರ್ಭ ತಳೆದಿದೆ
ಮೊಳಕೆ ಚಿಗುರಿ ನಗುತ ನಿಂತು  ಮುದದಿ ಮುಗಿಲ ನೋಡಿದೆ
ಸುಳಿಯದಾದೆ ಮತ್ತೆ ನೀನು  ಚಿಗುರ ನವಿರು ಮುದುಡಿದೆ       //

ಮನ್ನಿಸೆಲ್ಲ ನಮ್ಮ ಲೋಪ  ಹನಿಸಿ ತ‌ಣಿಸು ನೆಲದ ತಾಪ
ನಿನ್ನೊಕ್ಕಲ ಬಾಳನುಳಿಸು   ಇದುವೆ ಕರುಳ ಪ್ರಾರ್ಥನೆ
ದೇವ ವರುಣ ತೋರೆ ಕರುಣ  ಕರಿಯ ಮೋಡ ಸಾಲು ಸಾಲು
ಅವತರಿಸಿದ ಭಾಗೀರಥಿ   ಸಲಿಲ ಜಲಲ ಜಲಲಾ            //
                           
ಬಸವಳಿದಿಹ ನೆಲ ತಣಿಯಿತು   ತೃಷೆ ಹಿಂಗಿದ ಬೆಳೆ ಬಳುಕಿತು
ಕಸುವು ಪಡೆಯೆ ಮುಸಲಧಾರೆ  ಕೆರೆಯ ಕೋಡಿ ತುಳುಕಿತು
ನಿಮ್ಮ ಕರುಣಕೆಮ್ಮ ನಮನ  ಹಿಂದೆ ಸರಿದು ಬಿಸಿಲ ಕಳಿಸು
ಕಮ್ಮಿಯಾಗಲಿಲ್ಲ ರಭಸ   ನಿಲ್ಲದ ಜಲಧಾರಾ                     //

ಮಳೆ ಸುರಿಯಿತು ಅನವರತವು  ಸೊಕ್ಕಿ ಹರಿದವೆಲ್ಲ ಹಳ್ಳ
ಗೆಳೆಯ ಕೇಳು ಹೊಲವ ದಾಟಿ   ಕದವತಟ್ಟಿತಗಸೆ  ಮೀರಿ
ಕಾಲ ಕೆಳಗೆ ಮನೆಯ ಒಳಗೆ  ನುಸುಳಿ ಸಾಗಿ ಬರಲು ಗಂಗೆ
ಮೇಲೆ ಸರಿಸಿ ಎಲ್ಲ ದಿನಸಿ  ಹೊರಟ ಗಟ್ಟಿ ನೆಲೆಯೆಡೆ           //

ಒಡವೆ ವಸ್ತ್ರ ಜಾನುವಾರು ಬದುಕಿನೆಲ್ಲ ಮೂಲದ್ರವ್ಯ
ಬಿಡಲೊಲ್ಲದೆ ಹಿಂದೆ ಉಳಿದು  ಮೇಲೇರಲು ಮತ್ತೆ ನೀರು
ಎಲ್ಲ ತೊರೆದು ಮಾಡನೇರೆ  ಸುತ್ತ ಕರಿಯ ಜಲದ ರಾಶಿ
ಝಲ್ಲೆನಿಸಿ ಬೊಬ್ಬೆ ಹೊಡೆಯೆ    ಬಂದ ದೋಣಿ ಏರಿದ         //

ಶಿಬಿರ ಸೇರೆ ಅಲ್ಲಿ ನೋಡು   ಊರಗೌಡ್ರು ಅರ್ಚಕಯ್ಯ
ಸಾಬ  ಸಿಂಪಿ  ಬೇಡ  ಗೊಲ್ಲ  ಕೊನೆಯ ಬೀದಿ ಸಮಗಾರನು
ಎಲ್ಲ ಸೇರಿ ಒಂದೆ ಸಾಲು   ಬೆಳಗಿನ  ಉಪಹಾರಕೆ 
ಬೆಲ್ಲ ಬೇವು  ಭೇದವಳಿಯಿತೆಲ್ಲ ಒಂದೆ ಪೆಟ್ಟಿಗೆ                  //

ವಾರ ಕಳೆದು ನೀರು ಸರಿಯಿತದರ ಮೂಲ ಹರಿವಿನೆಡೆಗೆ
ಬಿರಬಿರನೇ ಊರಿಗೋಡಿ  ನೋಡಲಲ್ಲಿ ಏನುಳಿದಿದೆ
ಎಲ್ಲ ಗುಡಿಸಿ ಕೆಸರ ಹೊದಿಸಿ  ಕೆಲಸ ಮುಗಿಸಿ ಬಿಟ್ಟೋಡಿದೆ
ಎಲ್ಲಿ ಮನೆಯು ಮಣ್ಣ ರಾಶಿ  ಎಲ್ಲ ಕೊಳೆತು ಕಳಿತಿದೆ        //

ಕಣ್ಣಿ ಬಿಚ್ಚದಿದ್ದ ಎಮ್ಮೆ  ಎತ್ತು ಕೋಳಿ ಆಡು ಮೇಕೆ
ತಣ್ಣಗಲ್ಲೆ ಜೀವ ತೊರೆದು  ದೇಹ ಉಬ್ಬಿ ಕೊಳೆಯುತಿರಲು
ಮರೆವುದ್ಹೇಗೆ ಅವರ ಸಂಗ   ಕಣ್ಣ ನೋಟ ಮೂಕಪ್ರೇಮ
ಕೊರಗು ಹೃದಯ ಹಿಂಡುತಿಹುದು  ತಾವೆ ಕೊಟ್ಟ ನರಳಿಕೆ  //

ಏಕೆ ಕುಣಿವೆ ಕ್ರೂರ ವಿಧಿಯೆ  ಎಲ್ಲ ಹೊಸಕಿ ಹಾಕಿ ಹೋದೆ
ನೆಕ್ಕಲಿನ್ನು ಉಳಿದುದೇನು  ಕಣ್ಣ ನೀರು ಹಳೆಯ ನೆನಪು
ಪಾಪ ಯಾರು ಮಾಡಿದರೋ  ತಾಪ ನಮ್ಮ ಹಣೆಯ ಬರಹ
ಒಪ್ಪ ಮಾಡಿ ಕೊಳ್ಳಲೀಗ   ಶಿವನ ಕರುಣೆ ಬೇಕಿದೆ            //

ಪ್ರಳಯ ಮಳೆಯ ವರ್ತಮಾನ  ನಾಡತುಂಬ ಹರಡಲಾಗ
ಹಳೆಯ ಗೆಳೆಯರೆಂಬ ರೀತಿ  ಜಗದ ಹೃದಯ ಮಿಡಿಯಿತಲ್ಲ
ರೊಟ್ಟಿ ಅಕ್ಕಿ ಧವಸ ಧಾನ್ಯ  ಬಟ್ಟೆ ಕೌದಿ ಗುಳಿಗೆ ಮದ್ದು
ಕೊಟ್ಟರಲ್ಲ ಪಾಟಿ ಪೆನ್ನು  ದಿನಬಳಕೆಯ ಪರಿಕರ           //

ಹರಿದು ಬರಲು ಕರುಣೆ ಕೊಡುಗೆ  ಚಿಗುರಿ ನಿಂತ ದುರುಳ ಕೂಟ
ಮುರಿದ ಮನೆಯೆ ತಮ್ಮದೆಂದು  ಬಾಚಿಕೊಂಡ ಖಳರ ಹೂಟ
ದೀನ ದಲಿತ ಮುದುಕ ಮುದುಕಿ  ಹಿಂದೆ ಉಳಿದು ಅಳುತ ನಿಲಲು
ಹೀನ ಬುದ್ಧಿ ನೆರೆಯ ಕೆಸರಿನಲ್ಲು ವೋಟು ಗುಣಿಸಿದೆ         //

ಮನೆ ಅಳಿಯಿತು ಬೆಳೆ ಹೋಯಿತು   ಹೊಲದಿ ರಾಡಿ ಹರಡಿ ಮಲೆತು
ಜಾನುವಾರು ಕೊಚ್ಚಿ ಹೋಗಿ  ಕೃಷಿಯ ನೆಚ್ಚು ಅಳಿದು ನಲುಗಿ
ಹಳ್ಳಿ - ಕೇರಿ ಜನರ ಬದುಕು   ಹಸನು ಬಾಳು ಹಿಪ್ಪೆಯಾಯ್ತು
ಕೊಳ್ಳೆ ಹೊಡೆದ ಗುಳ್ಳೆ ನರಿಯು  ಮತ್ತೆ ನೆರೆಯ ಕರೆದಿದೆ     //
                 
                                   - ರವೀಂದ್ರ ಭಟ್, ದೊಡ್ನಳ್ಳಿ.
                
           (2019ರ ಅಗಸ್ಟ್ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಬಂದ ಭಾರಿ ಮಳೆ ಮತ್ತು ನಂತರದ ಪ್ರವಾಹ ತಂದಿತ್ತ 
         ದುರಂತಗಳನ್ನು ವೀಕ್ಷಿಸಿ ಮನಕಲಕಿ ಬರೆದಿದ್ದು)

ಗುರುವಾರ, ಜನವರಿ 2, 2020

ಹೀಗೇಕೆ ನಾವು ಭಾರತೀಯರು

ಸ್ವಾರ್ಥವೆಮ್ಮ ಪರಂಪರೆಯು
ಇದುವೆ ನಮ್ಮ ಸಂಸ್ಕೃತಿ
ಲಂಚ ಎಮಗೆ ವರ್ಜ್ಯವಲ್ಲ
ಎಲ್ಲೆಡೆಯಿದೆ ಮಾನ್ಯತೆ


ಲಂಚಕೋರ ಪರಮಶೂರ
ಅಪ್ಪಿಕೊಳುವೆವವನನು
ತಪ್ಪು ತಿದ್ದುವಲ್ಲಿ ಎಮಗೆ
ಇಲ್ಲ ಎನಿತು ಆಸ್ತೆಯು


ಕಾಣಿಕೆಯನು ಅಳತೆ ಮೀರಿ
ಸಲ್ಲಿಸುವರು ಗುಡಿಯಲಿ
ಯೋಗ್ಯತೆಯದು ಇರಲಿ ಬಿಡಲಿ
ಬೇಡಿ ಫಲವ ಶೀಘ್ರದಿ


ಭಕ್ತಿ ಭಾವ ಏನು ಇಲ್ಲ
ಕೊಡುಕೊಳ್ಳುವ ಪರಿಯಿದು
ಹೊರಗೆ ಬಂದು ನೋಡಿರಯ್ಯ
ಇದಕ್ಕೆ 'ಲಂಚ' ಎನುವರು

ತಿರುಗಿನೋಡು ನಮ್ಮ ಚರಿತೆ
ಲಂಚ ಯುದ್ಧ ಗೆದ್ದಿದೆ
ಮೀರ್ ಜಾಫರ್ ಶೆಟ್ಟಿ ಮಲ್ಲ
ಮನೆಮುರುಕರ ದಂಡಿದೆ


ಪಾರ್ಸಿ ಹಿಂದು ಮುಸಲ್ಮಾನ
ಬುದ್ಧ ಕ್ರೈಸ್ತ ಜೈನರು
ತಮಿಳ ತೆಲುಗ ಹಿಂದಿ ವಂಗ
ಕೇರಳಿ ಕರ್ನಾಟಕಿ


ಏಕೆ ಹೀಗೆ ಹಿಂದೆ ಸರಿಸಿ
ಮೊದಲು ಬರಲಿ ದೇಶವು
ಸೆಟೆದು ಹೇಳಿ ಎದೆಯುಬ್ಬಿಸಿ
‘ನಾವು ಭಾರತೀಯರು'


ಹಳೆಯ ಚರಿತೆ ಹೊಸಕಿ ಹಾಕಿ
ಹೊಸದೆ ದೇಶ ಕಟ್ಟುವಾ
“ಮೊದಲು ದೇಶ” ಸೂತ್ರ ಪಠಿಸಿ
ದೇಶ ಗೆಲಿಸಿ ಗೆಲ್ಲುವಾ
ದೇಶ ಗೆಲಿಸಿ ಗೆಲ್ಲುವಾ


  • ರವೀಂದ್ರ ಭಟ್ ದೊಡ್ನಳ್ಳಿ
(ಜಾಲತಾಣದಲ್ಲಿ ಕಂಡ ಸಂದೇಶವೊಂದರಿಂದ ಸ್ಪೂರ್ತಿ ಪಡೆದು)

ಮಂಗಳವಾರ, ಡಿಸೆಂಬರ್ 24, 2019

ನನ್ನೂರು ದೊಡ್ನಳ್ಳಿ

ಸಹ್ಯಾದ್ರಿಯ ಉತ್ತುಂಗದ
ಶಿರದಿ ಪವಡಿಸಿರುವ ಪುರವು
ಮೆರೆವ ದೇವಿ ಮಾರಿಕಾಂಬೆ
ನೆಲೆಯಾಗಿಹ ಶಿರಸಿಯು.  /
ಪುಣ್ಯ ಶಿರಸಿಯೂರಿನಿಂದ
ಆರು ಮೈಲು ಪೂರ್ವದಲ್ಲಿ
ಶಂಭುಲಿಂಗ ಸ್ವಾಮಿ ನೆಲೆಸಿ
ಹರಸುತಿರುವ ಧಾಮವು.
ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು.  //

ಊರ ಹಿಂದೆ ದಟ್ಟ ಕಾಡು
ಎದುರಿನಲ್ಲಿ ಬಯಲುಗದ್ದೆ
ಇರುವ ಮೂರು ಕಣಿವೆಗಳಲಿ
ನಳನಳಿಸುವ ತೋಟವು. /
ಬೆಟ್ಟ ಬೇಣ ತೆಂಗು ಕಂಗು
ಸುತ್ತ ಹರಿದ್ವರ್ಣ ಸೊಬಗು
ಕೋಡಿ ಹರಿಸಿ ಬೀಗುತಿರುವ
ಹರಡಿದಾರು ಕೆರೆಗಳು.
ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು.  //

ಶಂಭುಲಿಂಗ ಸ್ವಾಮಿ ಗುಡಿಯು
ಸಲಿಲ  ತೀರ್ಥ ಹೊಂಡವು
ಏಳು ದಶಕ ಕಳೆದ ಹೆಮ್ಮೆ
ಮೂಡಿಸಿರುವ ಶಾಲೆಯು. /
ಸುತ್ತ ಹತ್ತು ಹಳ್ಳಿಗಳಿಗೆ
ಪಂಚಾಯತಿ ಕೇಂದ್ರವು
ಎಲ್ಲ ರೈತ ಬಂಧುಗಳಿಗೆ
ಬೆನ್ನೆಲುಬಿನ ಸಂಘವು.
ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು.  //

ಮುರಿದ ಎಲುಬು ಕೀಲುಗಳಿಗೆ
ದಿವ್ಯೌಷಧ  ಇಲ್ಲಿದೆ.
ಜಿಲ್ಲೆಯಲ್ಲೆ ಹೆಸರುವಾಸಿ
ಡಬ್ಬಿ ಬೆಲ್ಲ ನಮ್ಮದೇ.
ಸ್ನೇಹಪರರು ಊರಜನರು
ಕ್ರೀಡೆ ಕಲೆಯ ರುಚಿಯಿದೆ.
ಜನಿಸಬೇಕು ಮತ್ತೆ ಇಲ್ಲೇ
ಇದೇ ನೆಲದ ಕನಸಿದೆ.
 ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು.  //

          -ರವೀಂದ್ರ ಭಟ್, ದೊಡ್ನಳ್ಳಿ.

























ಗುರುವಾರ, ಡಿಸೆಂಬರ್ 12, 2019

ದಿಗಂತಾಲಿಂಗನ

                   ಏಕೆ ನಾಚುವೆ ನಿನ್ನ
                   ಮನದನ್ನೆ ಧಾತ್ರಿಯನು 
                   ಬಿಗಿದಪ್ಪಿ  ಚುಂಬಿಸಲು  ಅಂಬರೇಶ  ।
                   ಜನಕಂಜಿ ಅಬಲೆಯನು 
                   ಕ್ಷಿತಿಜದಂಚಿಗೆ ಕರೆದು 
                   ಮುದ್ದಿಸುವೆ ಮೈಮರೆತು  ನಾನು ಬಲ್ಲೆ.   ।।

                  ಪ್ರೀತಿ ಮಾಡಿದ ಮೇಲೆ 
                  ಇನ್ನೇಕೆ ಅಂಜಿಕೆಯು 
                  ಸರಳೆ ಸದ್ಗುಣೆ  ಸಹಜೆ  ನಮ್ಮ ಧಾತ್ರಿ  ।
                  ಈ ಜನಕೆ ತಮ್ಮವರ 
                  ಪ್ರೀತಿಸಲೇ ಬಿಡುವಿಲ್ಲ 
                  ನಿಮ್ಮನೇನ್ ನೋಡುವರು ಬಾಚಿ ತಬ್ಬು.   ।।


                                    -ರವೀಂದ್ರ ಭಟ್, ದೊಡ್ನಳ್ಳಿ 

ಬುಧವಾರ, ಡಿಸೆಂಬರ್ 6, 2017

ಕಗ್ಗಲ್ಲಿಗೆ ಬಿದ್ದವು ಚಾಣದೇಟುಗಳು -ಭಾಗ - 2

                                

 ......ತಿಳಿ ಆಕಾಶನೀಲಿ ವರ್ಣದ ನೆಹರೂ ಶರ್ಟ್, ಒಂದು ಬಿಳಿ ಪಂಚೆ, ಮೇಲೊಂದು ಬಿಳಿ ಅಂಗವಸ್ತ್ರ – ಇದು ಅನಂತ ಹೆಗಡೆಯವರ ದಿರಿಸು – ಸಾದಾ ದಿನಗಳಲ್ಲೂ, ವಿಶೇಷ ಸಂದರ್ಭಗಳಲ್ಲೂ  - ಅಂದಿಗೂ, ಇಂದಿಗೂ ಕೂಡ.  ದಿಟ್ಟಿಸಿದೊಡನೆ ಎದುರಿಗನ  ಒಳಗನ್ನು ಬಗೆದು ಅರ್ಥೈಸಿಕೊಳ್ಳಬಲ್ಲ ತೀಕ್ಷ್ಣ ಆದರೂ ದಯಾರ್ದ್ರ ದೃಷ್ಟಿ. ಮೇಲ್ನೋಟಕ್ಕೆ ಗಂಭೀರರಾಗಿ ಕಂಡರೂ ಕಣ್ಣಲ್ಲಿ  ಕಣ್ಣಿಟ್ಟು ನೋಡಿದಾಗ ಅಲ್ಲಿ ಕಾಣುವ ತುಂಟತನದ ಛಾಯೆ. ಮಾತಿಗೆ ಹಚ್ಚಿಕೊಂಡಾಗ ಹರಡಿಕೊಳ್ಳುವ ಅವರ ಲೋಕಜ್ನಾನ ಮತ್ತು ಓದಿದ ಪುಸ್ತಕಗಳ ಅರಿವಿನ ಹರಹು, ಚಿಂತನೆಗೆ ಹಚ್ಚುವ ಗಂಭೀರ ಹಾಸ್ಯದ ನುಡಿಗಳು – ಸಂದರ್ಭಕ್ಕೆ ತಕ್ಕ ಹಾಗೆ ಪ್ರತ್ಯಕ್ಷವಾಗುವ  ಬೋಧಪ್ರದ  ಕಿರುಗತೆಗಳು,ಒಂದೇ ಎರಡೇ ... ಒಟ್ಟಿನಲ್ಲಿ ಸಹೃದಯೇ ಸಜ್ಜನರಿಗೆ ಅವರ ಕೂಟ ಎಂದರೆ ಅದು ಹೆಜ್ಜೇನಿನ ಸವಿಯನ್ನು ಜೇನುಹುಟ್ಟಿಗೇ ನೇರ ಬಾಯಿ ಹಾಕಿ ಸವಿದ ಹಾಗೆ! ಅಷ್ಟೊಂದು  ಆಹ್ಲಾದಕರ . ಹಾಗಾಗಿಯೇ ಅವರ ಭೆಟ್ಟಿಗೆ ಬರುತ್ತಿದ್ದ ವಿದ್ವಜ್ಜನರ ದೊಡ್ಡ ದಂಡೇ ಇರುತ್ತಿತ್ತು ಅವರ ಮನೆಯಲ್ಲಿ.
       ನನ್ನ ಪೂರ್ವಕೃತ ಪುಣ್ಯದ ಫಲವೋ ಎಂಬಂತೆ ಇವರ ನೆರಳಿನಲ್ಲಿ ಇರುವ ಪ್ರಮೇಯ ನನಗೆ ಒದಗಿ ಬಂತು ಎಂದು ಈಗ ಅನಿಸುತ್ತದೆ. ಗುಡ್ಡದ ಮೇಲೆ ಬಿದ್ದಿದ್ದ  ಕಗ್ಗಲ್ಲಿನಂತೆ ಇದ್ದ ನನ್ನನ್ನು ಮೂರ್ತಿಯಾಗಿಸಲು ಮೊದಲ ಚಾಣದೇಟುಗಳು ಬಹುಶ: ಇಲ್ಲಿಯೇ ಬಿದ್ದವು ಎನಿಸುತ್ತದೆ. ನಾನು ಅವರ ಮನೆಯಲ್ಲಿ ಇರತೊಡಗಿದ ಹೊಸದರಲ್ಲಿ ಒಂದು ದಿನ ಊಟ ಮಾಡುವಾಗ ನಡುವೆ ನನ್ನ ಕೈಯ್ಯನ್ನು ತೋರಿಸಲು ಹೇಳಿದರು. ಅಂಗೈ ದಾಟಿ ಮುಂಗೈ ಬುಡದವರೆಗೂ ‘ರಾಡಿ’ಯಾಗಿದ್ದ ನನ್ನ ಹಸ್ತವನ್ನು ನೋಡಿ ನನ್ನ ಪಕ್ಕವೇ ಕುಳಿತಿದ್ದ ಅವರ ಮಗ ಶಿವರಾಮನ ಕೈ ತೋರಿಸಲು ಹೇಳಿದರು. ಅವನ ಬೆರಳುಗಳು ಮಾತ್ರ ಒದ್ದೆಯಾಗಿದ್ದು ಅಂಗೈ ಪೂರ್ತಿ ಒಣಗಿ ಸ್ವಚ್ಚವಾಗಿತ್ತು. ಅಷ್ಟೇ – ಹೆಚ್ಚಿನ ಸೂಚನೆಯಿಲ್ಲ - ಅಂದಿನಿಂದ ಇಂದಿನವರೆಗೂ ಅದೆಷ್ಟೇ ನೀರಾಗಿದ್ದ (ರಸಮಯವಾದ) ಅಡಿಗೆಯೇ ಇದ್ದರೂ ಅಂಗೈಯ್ಯನ್ನು ಒದ್ದೆಮಾಡಿಕೊಂಡಿಲ್ಲ – ಪಾಯಸ ಸುರಿಯುವಾಗ ಕೂಡ . ಏನನ್ನೂ ಕಠೋರವಾಗಿ ಹೇಳದೇ ಕೇವಲ ಇಂಗಿತಮಾತ್ರದಿಂದ ತಿಳಿಸಿಕೊಡುವ ಅವರ ಪರಿ ಅನುಕರಣೀಯ. ಅತ್ಯಂತ ಸುಸಂಸ್ಕೃತ ನಡವಳಿಕೆ ಹೊಂದಿದ ಈ ದಂಪತಿಯ ಸಂಸ್ಕಾರ ಅವರ ಮಕ್ಕಳಲ್ಲಿ ಯಥಾವತ್ ಹರಿದು ಬಂದಿದೆ. ಅಷ್ಟಕ್ಕೂ ಮನೆಯ ಹಿರಿಯರ ಸನ್ನಡತೆ  ಸುಸಂಸ್ಕಾರಗಳು ಮನೆಯ ಮಕ್ಕಳಲ್ಲಿ ಅವರಿಗರಿವಿಲ್ಲದೇ ಇಳಿದು ಬಂದಿರುತ್ತವೆಯೇ ವಿನಹ ಈ ಸಂಸ್ಕಾರ ಎಂಬುದನ್ನು  ಕಲಿಸಲು ಪ್ರತ್ಯೇಕ ಪಠ್ಯಕ್ರಮ ಇರುವದಿಲ್ಲ.  ಬಾಲ್ಯದಲ್ಲಿ ಸುಸಂಸ್ಕಾರವನ್ನು ಹೊಂದಿದ ಮಕ್ಕಳು ಅಕಸ್ಮಾತ್ ಯೌವ್ವನದಲ್ಲಿ ಸಂಗದೋಷದಿಂದ ದಾರಿಬಿಟ್ಟರೂ ಅವರಲ್ಲಿ ಅಂತರ್ಗತವಾಗಿರುವ ಸಂಸ್ಕಾರ ಅವರನ್ನು ಬೇಗನೆ ಮೂಲನೆಲೆಗೆ ಮರಳಿಸುತ್ತದೆ. ಬಾಲ್ಯದಲ್ಲಿ ಅಚ್ಚೊತ್ತಿರುವ ಸುಸಂಸ್ಕಾರ ತನ್ನ ಒತ್ತಡವನ್ನು ಹೇರಿಯೇ ತೀರುತ್ತದೆ.
    ಅನಂತ ಹೆಗಡೆಯವರು ಅಪ್ರತಿಮ ಕನ್ನಡಾಭಿಮಾನಿ. ಸೊಗಸಾದ ಕನ್ನಡ ಭಾಷೆ ಅವರದು. ಕನ್ನಡದ ಪ್ರಸಿದ್ಧ ಲೇಖಕರ ಪುಸ್ತಕಗಳನ್ನು ಒಳಗೊಂಡ,  ಸಾಕಷ್ಟು ದೊಡ್ಡದೇ ಆದ, ಒಂದು ವೈಯಕ್ತಿಕ ಲೈಬ್ರರಿಯನ್ನು ಇಟ್ಟುಕೊಂಡಿದ್ದಾರೆ. ಜೊತೆಗೇ ಸುವಿಚಾರಿ ನಿಯತಕಾಲಿಕೆಗಳಾದ ಕಸ್ತೂರಿ. ಉತ್ಥಾನ, ವಿಕ್ರಮ ಇತ್ಯಾದಿಗಳು ಬಹುಶ: ಅವುಗಳ ಪ್ರಾರಂಭದ ಸಂಚಿಕೆಯಿಂದಲೇ ಇವರಲ್ಲಿ ಲಭ್ಯ. ದಿನಾಲೂ ರಾತ್ರಿ ದೀಪದ ಬೆಳಕಿನಲ್ಲಿ ಓದು. ಹಗಲೆಲ್ಲ ಸಾಮಾಜಿಕ ಕಾರ್ಯ, ಗೃಹಕಾರ್ಯಗಳು.
      ಆ ಕಾಲಘಟ್ಟದಲ್ಲಿ ”ಬರೂರು ಸೀಮೆ”ಯಲ್ಲಿ ನಡೆದ ಹೆಚ್ಚಿನೆಲ್ಲ ಸಾಮಾಜಿಕ ಸ್ಥಿತ್ಯಂತರಗಳಿಗೆ ಅವರು ಕಾರಣೀಭೂತರು ಅಥವಾ ಪ್ರೋತ್ಸಾಹಕರು. ಸಹಜವಾಗಿಯೇ ತಾಲೂಕು ಕೇಂದ್ರವಾದ ಶಿರಸಿಯ ಗಣ್ಯರಲ್ಲಿಯೂ ಒಬ್ಬರಾಗಿ ಅವರು ಗುರುತಿಸಿಕೊಂಡಿದ್ದರು. ಅವರ ಈ ಉತ್ಕರ್ಷ ಅವರ ಸಮಕಾಲೀನರಲ್ಲಿ ಕೆಲವರ ಹೊಟ್ಟೆಕಿಚ್ಚಿಗೂ ಕಾರಣವಾಗಿ ಅವರ ಮೇಲೆ ಇಲ್ಲಸಲ್ಲದ ಮಿಥ್ಯಾರೋಪ, ಜಗಳ ಇತ್ಯಾದಿಗಳನ್ನು ಎಬ್ಬಿಸಿದರೂ ಅವಕ್ಕೆಲ್ಲ  ಪ್ರತಿಕ್ರಿಯಿಸಲು ಹೋಗದೇ ಧೀಮಂತಿಕೆಯಿಂದ ನಿಭಾಯಿಸಿ , ಕುಬುದ್ಧಿ ತೋರಿದವರೇ ಲಜ್ಜೆ ಪಟ್ಟುಕೊಳ್ಳುವಂತೆ ಮಾಡಿ, ಅವರನ್ನೂ ತನ್ನ ಅಭಿಮಾನಿಗಳಾಗಿ ಪರಿವರ್ತಿಸಿದ ವ್ಯವಹಾರ ಚತುರ ಮುತ್ಸದ್ಧಿ ಅವರು.
      1975 ರಲ್ಲಿ ನನ್ನ ಹೈಸ್ಕೂಲು ಮುಗಿದು  ಅವರ ಮನೆಯನ್ನು ನಾನು ಬಿಡುತ್ತಿದ್ದಂತೆ ನನ್ನ ಸಂಬಂಧಿ ಹುಡುಗನೊಬ್ಬ, ತದನಂತರ ಇನ್ನೊಬ್ಬ ಸಂಬಂಧಿ ಹುಡುಗ, ಆನಂತರ ಯಲ್ಲಾಪುರ ಸೀಮೆಯ ಇನ್ನೂ ಹಲವಾರು ಹುಡುಗರು ,… ಈ ರೀತಿ ಸರಪಳಿ ಮುಂದುವರೆದು ಹಲವಾರು ಮಕ್ಕಳು ಅವರ ಮನೆಯ ಆಶ್ರಯ ಪಡೆದು ತಮ್ಮ ಹೈಸ್ಕೂಲು ಶಿಕ್ಷಣವನ್ನು ಮುಗಿಸಿದ್ದಾರೆ. ಒಂದರ್ಥದಲ್ಲಿ ಇವರ ಮನೆಯ ಸಂಸ್ಕಾರದ ರಾಯಭಾರಿಗಳಾಗಿ ಎಲ್ಲೆಡೆ ಹಂಚಿ ಹೋಗಿದ್ದಾರೆ – ವಿಶಾಲ ಆಲದ ಮರದ ಹಣ್ಣು ತಿಂದ ಹಕ್ಕಿಗಳು ತಾವು ಬೀಜಪ್ರಸರಣದ ರಾಯಭಾರಿಗಳಾಗುವ ಹಾಗೆ.
       ನಾನು ಅವರ ಮನೆ ಬಿಟ್ಟರೂ ಸಂಪರ್ಕ ಬಿಡಲಿಲ್ಲ. ಅನಂತ ಹೆಗಡೆಯವರ ಮಗ ಶಿವರಾಮ್ 10ನೇ ತರಗತಿಗೆ ಸಂಸ್ಕೃತ ಕಲಿಯುವ ಸಲುವಾಗಿ ಮೈಸೂರು ಸೇರಿದ. (ಅದೆಷ್ಟು ಸಂಸ್ಕೃತ ಕಲಿತನೋ ನಾಕಾಣೆ – ಶಿವೂನ ಕ್ಷಮೆ ಕೋರಿ). ನಾನು ಇಂಜಿನೀರಿಂಗ್ ಓದಲು ಮೈಸೂರಿಗೆ ಬಂದಾಗ ಅದು ಹೇಗೋ ನನ್ನ ವಿಳಾಸ ಪತ್ತೆ ಮಾಡಿ, ನನ್ನ ರೂಮಿಗೆ ಬಂದು ಆತ್ಮೀಯವಾಗಿ ನನ್ನೊಡನೆ ಬೆರೆತ. ‘ಸಾಹುಕಾರರ ಮಗ, ಧಿಮಾಕು ತೋರಬಹುದು’ ಎಂದು  ಅತ್ಯಂತ   ಎಚ್ಚರಿಕೆಯಿಂದಲೇ ಅವನೆಡೆಗೆ ಮತ್ತೊಮ್ಮೆ ಸ್ನೇಹಹಸ್ತ ಚಾಚಿದ್ದೆ. ಆದರೆ ನನ್ನ ಆತಂಕ ತಳಬುಡವಿಲ್ಲದ್ದು ಎಂದು ಬೇಗನೇ ಮನದಟ್ಟಾಗಿತ್ತು. ಅಂದಿನಿಂದ ಇಂದಿನವರೆಗೆ ನನ್ನ ಪರಮಾಪ್ತರಲ್ಲಿ ಅವನೂ ಒಬ್ಬನಾಗಿ, ನನ್ನ “ಆತ್ಮಬಂಧು”ವಾಗಿ ಉಳಿದಿದ್ದಾನೆ. ‘ಅನಂತ’ ಪರಿವಾರದ ಜೊತೆಗಿನ ನಿಕಟ ಒಡನಾಟಕ್ಕೆ  “ವಿಶೇಷ ಕಾರಣ”ವಾಗಿದ್ದಾನೆ.

    ಈಗ ಅನಂತ ಹೆಗಡೆ -ಸರ್ವೇಶ್ವರಮ್ಮ ದಂಪತಿ   ತಮ್ಮ ಬದುಕಿನ ಎಂಟನೇ ದಶಕದಲ್ಲಿದ್ದಾರೆ. ಈಗಲೂ ಜ್ನಾನಪಿಪಾಸುಗಳಿಗೆ ಅನಂತ ಹೆಗಡೆಯವರೊಬ್ಬ ಆತ್ಮೀಯ ಮಿತ್ರ. ಮನೆಯ ಹದಿಮೂರು ಮೊಮ್ಮಕ್ಕಳಿಗೆ ಅತ್ಯಾಪ್ತ ಸಲಹೆಗಾರ. ತಮ್ಮ ವಿಸ್ತಾರವಾದ ಜೀವನಾನುಭವದ ನೆಲೆಯಲ್ಲಿ ಮೊಮ್ಮಕ್ಕಳ ಸರ್ವ ಸಮಸ್ಯೆಗಳಿಗೆ ಚಿಕ್ಕ –ಚೊಕ್ಕ ದೃಷ್ಟಾಂತಗಳ ಮೂಲಕ ಪರಿಹಾರವನ್ನು ಮನದಟ್ಟಾಗುವಂತೆ ತಿಳಿಹೇಳಬಲ್ಲ ಧೀಮಂತ. ತಮ್ಮವರಷ್ಟೇ ಅಲ್ಲ , ನಮ್ಮೆಲ್ಲರ ಮಕ್ಕಳಿಗೂ, ಊರಿನ ಎಲ್ಲ ಕಿರಿಯರಿಗೂ ಆತ್ಮೀಯ “ಅನಂತಜ್ಜ”. ಈ ದಂಪತಿಯನ್ನು ಕಣ್ರೆಪ್ಪೆಯಂತೆ  ಕಾಪಿಡುವ ಮಕ್ಕಳು. ಈ ಜೋಡಿ “ಶತಮಾನದ ಸಂಭ್ರಮ” ಕಾಣಬೇಕಾಗಿದ್ದುದು ಸಾಮಾಜಿಕ ‘ಅವಶ್ಯಕತೆ’ ಎಂದು ನನಗೆ ಅನಿಸುತ್ತದೆ. (ಅಂದಹಾಗೆ  ಇವರ ಬದುಕಿನ ವಿವಿಧ ಮುಖಗಳ ಕೇವಲ  ‘ಕಿರು ಪರಿಚಯ’ ಮಾಡಲು ಉದ್ಯುಕ್ತನಾದರೂ ಈ ಲೇಖನ ಇನ್ನೂ ಹಲವು ಪುಟಗಳಿಗೆ ವಿಸ್ತರಿಸಿ ಬಿಡುತ್ತದೆ. ಇಲ್ಲಿ ಆ ಸಾಹಸ ಮಾಡದೆ, ಮುಂದಿನ ನನ್ನ ಬರಹಗಳಲ್ಲಿ ಸಂದರ್ಭಾನುಸಾರ ಅವುಗಳನ್ನೆಲ್ಲ ಉದಾಹರಿಸುತ್ತೇನೆ). 
    ಈ ಹಿರಿಯರು ಶತಮಾನದ ಮೈಲಿಗಲ್ಲು ದಾಟಿ ಮುಂದೆ ಸಾಗಲಿ, ನಮಗೆಲ್ಲ ತಮ್ಮ ಅಮರವಾಣಿಯಿಂದ  ಮಾರ್ಗದರ್ಶನ ಮಾಡುತ್ತಿರಲಿ ಎಂದು ಆಶಿಸೋಣ, ಅಲ್ಲವೇ?
    “ಯಶಸ್ಸು” ಎಂಬುದಕ್ಕೆ ನೂರು ಜನ ನೂರು ಬೇರೆಬೇರೆ ವ್ಯಾಖ್ಯೆಯನ್ನು ನೀಡಬಹುದು. ಆದರೆ ನನ್ನ ದೃಷ್ಟಿಯಲ್ಲಿ, “ಜೀವನದಲ್ಲಿ ಹಿಂತಿರುಗಿ ನೋಡಿದಾಗ, ನಮ್ಮ ಪ್ರತಿ ಹೆಜ್ಜೆ ಸಮಾಜಮುಖಿಯಾಗಿತ್ತು ಎಂಬ ತೃಪ್ತಿ ನೀಡುವ ಬದುಕು ‘ಯಶಸ್ವೀ ಬದುಕು’. “ಅನಂತ ಬದುಕು” ಹಾಗೇ ಇದೆ.  ಅಲ್ಲವೇ?
    
    




ಬುಧವಾರ, ಫೆಬ್ರವರಿ 8, 2017

AIM FOR SEVA

           ಗತದ ಬಗ್ಗೆ ಹಿಂದಿನ ಮೂರು ಬ್ಲಾಗ್ ಗಳಲ್ಲಿ ಹಂಚಿಕೊಂಡಿದ್ದೇನೆ. ಈಗ ವರ್ತಮಾನದ ಒಂದು ತುರ್ತಿನ ಬಗ್ಗೆ ಅಹರ್ನಿಶಿ ದುಡಿಯುತ್ತಿರುವ ಒಬ್ಬ  ಮಹಾನುಭಾವರ ಕುರಿತು ಹೇಳಿಯೇ ಮುಂದೆ ಸಾಗಬೇಕಾಗಿದೆ.
            ಸ್ವಾಮಿ ಚಿದ್ರೂಪಾನಂದರು ಕಳೆದ ೩೫-೩೬ ವರ್ಷಗಳಿಂದಲೂ ಅಧ್ಯಾತ್ಮದ ಜೊತೆ ಜೊತೆಗೇ ಸಮಾಜದ ನಿರ್ಗತಿಕರ ಉನ್ನತಿಗಾಗಿ ಅವಿಶ್ರಾಂತರಾಗಿ ದುಡಿಯುತ್ತಿದ್ದಾರೆ. ಈಗ್ಗೆ ಕೆಲ ವರ್ಷಗಳ ಹಿಂದೆ ಈ ದೇಶಕ್ಕೆ ಭೆಟ್ಟಿ ನೀಡಿದ ವಿದೇಶೀ  ಧರ್ಮ ಗುರುಗಳೊಬ್ಬರು, "ತಮ್ಮ ಧರ್ಮದ  ಬೆಳೆ  ತೆಗೆಯಲು ಭಾರತ ಅತ್ಯಂತ ಹುಲುಸಾದ ಪ್ರದೇಶವಾಗಿದ್ದು, ಇನ್ನು ನೂರು ವರ್ಷಗಳಲ್ಲಿ ಇಲ್ಲಿನ ಪ್ರತಿಯೊಂದು ಮನೆಯಲ್ಲೂ ತಮ್ಮ ಪ್ರಭುವಿನ  ಗುಣಗಾನ ಕೇಳಿಬರಬೇಕು" ಎಂದು ಅಪ್ಪಣೆ ಮಾಡಿದ್ದನ್ನು ಕೇಳಿ ತುಂಬಾ ನೊಂದುಕೊಂಡ ಸ್ವಾಮಿ  ಚಿದ್ರೂಪಾನಂದರು ಸನಾತನ ಹಿಂದೂ  ಸಂಸ್ಕೃತಿಯನ್ನು ರಕ್ಷಿಸುವ ಜೊತೆಗೇ ಅದರಲ್ಲಿನ ಸಂಕುಚಿತತೆಯನ್ನು ದೂರ ಮಾಡುವ ಕುರಿತು ಧೀರ ಪ್ರತಿಜ್ಞೆ ಕೈಗೊಂಡು ಅಂತೆಯೇ ಕಾರ್ಯತತ್ಪರರಾದರು.ತಮ್ಮ ಪೂಜ್ಯ ಗುರುಗಳಾದ ಸ್ವಾಮಿ ದಯಾನಂದ ಸರಸ್ವತಿಯವರ ಮಾರ್ಗದರ್ಶನದಲ್ಲಿ  AIM FOR SEVA  ಸಂಸ್ಥೆ  ಹುಟ್ಟುಹಾಕಿ ಸೇವಾನಿರತರಾದರು. ಯಾವ ಕಡು ಬಡವರ ನಿರ್ಗತಿಕತೆಯನ್ನು ಬಂಡವಾಳ ಮಾಡಿಕೊಂಡು ಸೇವೆಯ ಸೋಗಿನಲ್ಲಿ ಮತಪರಿವರ್ತನೆಯನ್ನು ಸಹ ಮಾಡಿ ಮುಗಿಸಿ ಬಿಡುತ್ತಿದ್ದರೋ, ಅದೇ ಬಡವರ ಮನೆ ಬಾಗಿಲಿಗೇ ಹೋಗಿ, ಅವರ ಮಕ್ಕಳನ್ನು ಪಡೆದು ದೇಶಾದ್ಯಂತ ಇರುವ ತಮ್ಮ ಸಂಸ್ಥೆಯ "ಛಾತ್ರಾಲಯ"ಗಳಲ್ಲಿ ಅವರಿಗೆ ಸಮಕಾಲೀನ ಶಿಕ್ಷಣದ ಜೊತೆ ಭಗವದ್ಗೀತೆ ಹಾಗೂ ನೂರಾರು ನೀತಿ ಶ್ಲೋಕಗಳನ್ನು ಸಹ  ಕಲಿಸುತ್ತಾ, ಅವರವರ ಮಾತೃಭಾಷೆಯ ಜೊತೆ ರಾಜ್ಯಭಾಷೆ,ಇಂಗ್ಲಿಷ್ ಮತ್ತು ಹಿಂದಿಯಲ್ಲಿ  ಆ ವಿದ್ಯಾರ್ಥಿಗಳನ್ನು ಪರಿಣಿತರನ್ನಾಗಿಸುತ್ತಿದ್ದಾರೆ. ದೇಶಾದ್ಯಂತ ಇರುವ ಇಂತಹ  "ಛಾತ್ರಾಲಯ"ಗಳ ಸಂಖ್ಯೆ ಎಷ್ಟು ಗೊತ್ತೇ ?. ಬರೋಬ್ಬರಿ ೧೦೦+. ಆ ಎಲ್ಲಾ ಬಡವರು ತಮ್ಮ ಮಾತೃಧರ್ಮದಲ್ಲಿಯೇ ಉಳಿಯುವದರ ಜೊತೆಗೇ ಅಪ್ಪಟ ದೇಶಾಭಿಮಾನಿಗಳಾಗಿ ತಯಾರಾಗುತ್ತಿದ್ದಾರೆ. ಇನ್ನು ಇದೆಲ್ಲದರ ಹಿಂದಿರುವ ಪ್ರೇರಕ ಶಕ್ತಿಯಾದ ೮೬ರ ಹರೆಯದ  ಸ್ವಾಮಿ ದಯಾನಂದ ಸರಸ್ವತಿಯವರು ತೀವ್ರ ಅನಾರೋಗ್ಯಕ್ಕೊಳಗಾಗಿದ್ದರೂರೂ ಸಹ ಮುಂಜಾನೆಯಿಂದ ರಾತ್ರಿ ೧೦ರ ತನಕ ದೇಶದೆಲ್ಲೆಡೆ ಸುತ್ತಾಡುತ್ತ ಜನಜಾಗೃತಿ ಮಾಡುತ್ತಿದ್ದಾರೆ.
        ಈ ರೀತಿ ಗೀತಾ ಅಭಿಯಾನ (ಜ್ಞಾನ ಯಜ್ಞ )ದ ಜೊತೆ ಸಮಾಜ ಸೇವೆಯ ವ್ರತ ತೊಟ್ಟ ಸ್ವಾಮಿ ಚಿದ್ರೂಪಾನಂದರ ಉಪನ್ಯಾಸಗಳಿಗೆ ಕಳೆದೊಂದು ವಾರ ಧಾರವಾಡದ ಜನ ಕಿವಿಯಾಗಿದ್ದರು. ಅವರ ವಿರಾಟ್ ರೂಪದ ಈ ಸಮಾಜ ಸೇವಾ ಕಾರ್ಯಗಳ ಪರಿಚಯ ಆಗಿದ್ದು ಸಹ ಅಲ್ಲಿಯೇ. ನನ್ನ ಧರ್ಮಪತ್ನಿ ಸರಸ್ವತಿ ಮತ್ತು ನಾನು ಕಳೆದ ನಾಲ್ಕಾರು ವರ್ಷಗಳಿಂದ ಇಲ್ಲಿಯ ಲಕಮನಹಳ್ಳಿ(ಯಾಲಕ್ಕಿ ಶೆಟ್ಟರ ಕಾಲೋನಿ)ಯಲ್ಲಿರುವ ಅವರ  "ದಯಾನಂದ ಧಾಮ ಛಾತ್ರಾಲಯ"ಕ್ಕೆ ಭೆಟ್ಟಿ ನೀಡಿ ನಮ್ಮ ಕಿಂಚಿತ್  ಸೇವೆ ಸಲ್ಲಿಸುತ್ತಿದ್ದೇವೆ. ತನ್ನ ಅಪಾರ ಕರುಣೆಯನ್ನು ನಮ್ಮ ಮೇಲೆ ಮಳೆಗರೆದ ಆ ಸರ್ವಶಕ್ತನು ನಮ್ಮಿಂದ ಸಮಾಜ ಋಣ ತೀರಿಸಲ್ಪಡಬೇಕೆಂದು ನಿರೀಕ್ಷಿಸುತ್ತಾನೆ. "ರಕ್ಷಂತಿ ಪುಣ್ಯಾನಿ ಪುರಾಕೃತಾನಿ".... ನಮ್ಮನ್ನು ರಕ್ಷಿಸುತ್ತಿರುವ ಆ ಪುಣ್ಯ ನಮ್ಮ ಮಕ್ಕಳಿಗೂ ದಕ್ಕಬೇಕೆಂದರೆ ನಾವೂ ಪುಣ್ಯ ಸಂಚಯಿಸಬೇಕಲ್ಲವೇ ?                                                                   ಸ್ವಾಮೀಜಿಯವರ ಈ   ಸಮಾಜ ಸೇವೆಯ ಯಜ್ಞದಲ್ಲಿ ತಾವೆಲ್ಲ ಕೈ ಜೋಡಿಸಿರಿ ಎಂಬ ಕಳಕಳಿಯ ಮನವಿಯೊಂದಿಗೆ    ಪೂರ್ಣ ವಿರಾಮ ಚಿಹ್ನೆ ಇಡುತ್ತಿದ್ದೇನೆ.                                                                                                                             "IN THE ACT OF GIVING, YOU GROW, PEOPLE GROW AND THE COUNTRY GROWS"
--- SWAMI DAYANANDA SARASWATI                                                                                                          ಸಂಪೂರ್ಣ ವಿವರಗಳಿಗಾಗಿ ಸಂಪರ್ಕಿಸಿರಿ ;
         ಇ - ಮೇಲ್ :aimallindiamovement@gmail.com
                            www.aimforseva.org

"ದಯಾನಂದ ಧಾಮ ಛಾತ್ರಾಲಯ", ಧಾರವಾಡ 
ಸ್ವಾಮಿ ಚಿದ್ರೂಪಾನಂದರು 
                                                 
(ವಿ.ಸೂ. :- ಮೇಲಿನ ವಿಷಯ ಬರೆದಿದ್ದು ಡಿಸಂಬರ್ - ೨೦೧೩ ರಲ್ಲಿ. ಈಗ ಸ್ವಾಮೀ ದಯಾನಂದ ಸರಸ್ವತಿಯವರು ಜೀವನ್ಮುಕ್ತರಾಗಿದ್ದಾರೆ. ಅವರು ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳ ಗುರುಗಳೂ ಆಗಿದ್ದರು ಎಂಬುದು ನಿಮ್ಮ ಟಿಪ್ಪಣಿಗಾಗಿ.)



                                                                                                                      

ಶನಿವಾರ, ಡಿಸೆಂಬರ್ 10, 2016

ಕಗ್ಗಲ್ಲಿಗೆ ಬಿದ್ದವು ಚಾಣದೇಟುಗಳು -ಭಾಗ - 1

                 ಕಗ್ಗಲ್ಲಿಗೆ ಬಿದ್ದವು  ಚಾಣದೇಟುಗಳು -ಭಾಗ - 1          
         ಹಿರಿಯ ಪ್ರಾಥಮಿಕ ಶಾಲೆಗಳಿಗಿಂತ  ಹೈಸ್ಕೂಲುಗಳು ಮತ್ತೂ ವಿರಳವಾಗಿದ್ದ ದಿನಗಳವು. ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಕುವರ ಶ್ರೀಯುತ ದಿನಕರ ದೇಸಾಯಿಯವರು ಆ ಸಮಯದಲ್ಲಿ ತಮ್ಮ “ಕೆನರಾ ವೆಲ್ ಫೇರ್ ಟ್ರಸ್ಟ್” ಮೂಲಕ ಜಿಲ್ಲೆಯಾದ್ಯಂತ ಶೈಕ್ಷಣಿಕ ಕ್ರಾಂತಿಯನ್ನೇ ಆರಂಭಿಸಿದ್ದರು. ಸ್ಥಳೀಯರ ಬೇಡಿಕೆ ಮತ್ತು ಆಸಕ್ತಿಗಳನ್ನು ಗಮನಿಸಿ ಜಿಲ್ಲೆಯ ಹಲವಾರು ಊರುಗಳಲ್ಲಿ “ಜನತಾ ವಿದ್ಯಾಲಯ” ಹೆಸರಿನಲ್ಲಿ ಹೈಸ್ಕೂಲುಗಳನ್ನು ಪ್ರಾರಂಭಿಸುತ್ತಿದ್ದರು. ಅದೇ ರೀತಿಯ ಒಂದು ‘ಜನತಾ ವಿದ್ಯಾಲಯ’ 1967-68ರಲ್ಲಿ ಶಿರಸಿ ತಾಲೂಕಿನ ಕುಳವೆ ಮತ್ತು ಬರೂರು ಗ್ರಾಮಗಳ ಮಧ್ಯವರ್ತಿ ಸ್ಥಳದಲ್ಲಿ ಆರಂಭವಾಗಿತ್ತು. ಕುಳವೆಯ ಬಡ್ತಿ ಡಾಕ್ಟರ್, ಕೆರೆಕೈ ಕೃಷ್ಣ ಭಟ್ಟರು, ಕಾಗೇರಿ ಅನಂತ ಹೆಗಡೆಯವರು, ಬೆಳಖಂಡ, ಬರೂರು, ಅರಸೀಕೆರೆ, ಕಲಗದ್ದೆ, ನೇಗಾರು, ಕೆಂಚಗದ್ದೆ, ತೆರಕನಹಳ್ಳಿ ಇವೇ ಮುಂತಾದ  ಸುತ್ತಲಿನ ಹತ್ತಾರು ಹಳ್ಳಿಗಳ ಮಹನೀಯರುಗಳ ಪ್ರಯತ್ನದಿಂದ ಹಾಗೂ ಶ್ರೀಯುತ ದಿನಕರ ದೇಸಾಯಿಯವರ ಕೊಡುಗೆಯಾಗಿ ತಲೆ ಎತ್ತಿದ ಆ ಹೈಸ್ಕೂಲು ಆಗಿನ್ನೂ ತನ್ನ ‘ಬಾಲಗ್ರಹ’ ಪೀಡೆಯಿಂದ ನರಳುತ್ತಿತ್ತು. ಪ್ರತಿ ತರಗತಿಗೂ ಕನಿಷ್ಠ 30 ವಿದ್ಯಾರ್ಥಿಗಳಿಲ್ಲದಿದ್ದರೆ ಶಾಲೆಯ ಮಾನ್ಯತೆ ರದ್ದಾಗುವ ಭಯವಿತ್ತು. 1972 ರಲ್ಲಿ ನಾವು 7ನೇ ಕ್ಲಾಸ್ ಮುಗಿಸಿದಾಗ ಈ ಹೈಸ್ಕೂಲಿಗೆ ಕೇವಲ ನಾಲ್ಕು ವರ್ಷವಾಗಿತ್ತು. ನನ್ನ ತಂದೆ ಕುಳವೆ ಬಡ್ತಿ ಡಾಕ್ಟರರಲ್ಲಿ ತನ್ನ ಮಗನ ಹೈಸ್ಕೂಲಿನ ಬಗ್ಗೆ ಪ್ರಸ್ತಾಪ ಮಾಡಿದಾಗ ತಮ್ಮದೇ ಆದ ಈ ಹೊಸ ಹೈಸ್ಕೂಲಿಗೆ ಸೇರಿಸುವಂತೆ ತಿಳಿಸಿದರು. ಅಲ್ಲೇ ಇದ್ದ ಕಾಗೇರಿ ಅನಂತ ಹೆಗಡೆಯವರು ತಮ್ಮ ಮನೆಗೇ ಹುಡುಗನನ್ನು ಕರೆತರಲು ಹೇಳಿ, ನಂತರದ ವ್ಯವಸ್ಥೆಯನ್ನು ತಾನು ಮಾಡುವದಾಗಿ  ತಿಳಿಸಿದರು.
        ಇತ್ತ  ನಾನು ಹೈಸ್ಕೂಲಿಗೆ ಹೋಗಲು ಸಂಭ್ರಮ ಪಡತೊಡಗಿದೆ. ಉದ್ದವಾಗಿ ಬೆಳೆದಿದ್ದ ಕೂದಲನ್ನು ಕತ್ತರಿಸಲು ಕ್ಷೌರದವನ ಹತ್ತಿರ ಹೋದಾಗ ನುಣ್ಣಗೆ ಬೋಳು ಹೊಡೆಸಲು ಬಿಡದೆ, ಹಠ ಮಾಡಿ , “ಕ್ರಾಪ್ “ ಹೊಡೆಸಿಕೊಂಡೆ. ನನ್ನ ಮತ್ತು ಅಪ್ಪಯ್ಯನ ನಡುವೆ ರಾಜಿ ಮಾಡುವಂತೆ, ನುಣ್ಣಗೆ ಹೆರೆದ ತಲೆ 15 ದಿನದಲ್ಲಿ ಬೆಳೆಯಬಹುದಾದ ಮಟ್ಟದ ಕೂದಲು ಉಳಿಸಿ, ಕ್ರಾಪ್ ಹೊಡೆಸಿದ್ದಾಯಿತು. ಹೊರಡಲು ಎರಡು ದಿನ ಇರುವಾಗ ನನ್ನ ಪರಮಾಪ್ತ ಗೆಳೆಯ ‘ಗಣಗೇರಿ ಕೃಷ್ಣಮೂರ್ತಿ ಅಯ್ಯ’  ನಮ್ಮ ಮನೆಗೇ ಬಂದು, ‘ತಾನೂ ಹೈಸ್ಕೂಲು ಸೇರಲು ಬಯಸುವದಾಗಿಯೂ, ನನ್ನ ಜೊತೆ ಅವನನ್ನೂ ಕರೆದೊಯ್ಯಬೇಕೆಂದೂ’ ದುಂಬಾಲು ಬಿದ್ದ. ತಂದೆ ಇಲ್ಲದ ಅವನು ಮುಂದೆ ಓದಲು ತನ್ನದೇ ಪ್ರಯತ್ನದಿಂದ ಒಂದು ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು. ತನ್ನ ಮಗನ ನೆಲೆಯೇ ಅನಿಶ್ಚಿತವಾಗಿದ್ದರೂ ಸಹ ದಯಾರ್ದೃ ಹೃದಯಿಯಾದ ನನ್ನಪ್ಪ, “ದೈವೇಚ್ಚೆ ಇದ್ದಂತೆ ಆಗುತ್ತದೆ. ನೀನೂ ಒಂದು ಕೈಚೀಲದಲ್ಲಿ ನಿನ್ನ ಬಟ್ಟೆ ಬರೆ ಹಾಕಿಕೊಂಡು ಬಾ “ ಎಂದು ನನ್ನ ಜೊತೆ ಅವನನ್ನೂ ಕರೆದುಕೊಂಡು ಹೊರಟರು. ಮನೆಯಿಂದ ಒಂಭತ್ತು ಮೈಲು ದೂರದ ಕಾಗೇರಿಗೆ ಒಂದು ಸಾಯಂಕಾಲ ನಾವು ಮೂವರೂ ಬಂದಿಳಿದೆವು. “ಈ ಹುಡುಗರು 3-4 ದಿನ ನನ್ನ ಮನೆಯಲ್ಲೇ ಇರಲಿ. ಅಷ್ಟರಲ್ಲಿ ನಾನು ಅವರಿಗೆ ಉಳಿಯಲು ಒಂದು ಸೂಕ್ತ ವ್ಯವಸ್ಥೆ ಮಾಡಿ ಕೊಡುತ್ತೇನೆ. ನೀವು ನಿಶ್ಚಿಂತೆಯಿಂದ ಹೊರಡಿರಿ“, ಎಂದು ನನ್ನಪ್ಪನನ್ನು ಕಳಿಸಿಕೊಟ್ಟ ಅನಂತ ಹೆಗಡೆಯವರು ನಮ್ಮಿಬ್ಬರನ್ನೂ ತಮ್ಮ ಮನೆಯಲ್ಲಿಯೇ ಉಳಿಸಿಕೊಂಡರು. ಅವರ ಹಿರಿಮಗಳು ‘ಪ್ರಭಾವತಿ’ (ನಂತರ ನಮಗೆ ‘ಅಕ್ಕ’ ಆದಳು) ಅದೇ ವರ್ಷ ತನ್ನ ಮೆಟ್ರಿಕ್ ಮುಗಿಸಿದ್ದಳು. ಪ್ರಥಮ ಪುತ್ರ ‘ಶಿವರಾಮ’ ನಮ್ಮ ಜೊತೆಯಲ್ಲೇ ಎಂಟನೇ ಕ್ಲಾಸಿಗೆ ಬರುವವನಿದ್ದ. ಎರಡನೇ ಮಗ ‘ವಿಶ್ವೇಶ್ವರ’’ ಆರನೇ ಕ್ಲಾಸಿನಲ್ಲಿದ್ದ. ಇವರಲ್ಲದೆ ಒಬ್ಬಳು ತಂಗಿ ‘ಸರಸ್ವತಿ’ ಹಾಗೂ ಮೂರು ಜನ ಇನ್ನೂ ಕಿರಿಯ ತಮ್ಮಂದಿರಿದ್ದರು. ಕೊನೆಯವನಾದ ನಾಗಪತಿ ಆಗ 1-2 ವರ್ಷದ ಬಾಲ.
         ಇವರ ಮನೆಯಲ್ಲಿ ಉಳಿದು ನಾವಿಬ್ಬರೂ ಹೈಸ್ಕೂಲಿಗೆ ಹೋಗಿಬರುತ್ತಾ ನಮ್ಮ ಎಸ್ಸೆಸ್ಸೆಲ್ಸಿ ಮುಗಿಸಿದೆವು. ಈಗ  ನಾನು ನಿಜವಾಗಿ ಹೇಳಬೇಕಾದದ್ದು - ಆಗ ಅವರ ಮನೆ, ಅದರ ಗೃಹಸ್ಥ  ಹಾಗೂ  ಆ ಗೃಹಿಣಿ  ಹೇಗಿದ್ದರು ಎಂಬುದನ್ನೇ ವಿನಹ ನನ್ನದೇ ತುತ್ತೂರಿ ಊದುವದನ್ನಲ್ಲ. ಈ ವಿಷಯ ಈಗಿನವರಿಗೆ (ನಮ್ಮೆಲ್ಲರಿಗೂ ಕೂಡ) ಅನುಕರಣೀಯವಾಗಬಹುದೆಂದು ನನ್ನ ಭಾವನೆ.
         ನಾವು ಆ ಮನೆಗೆ  ಹೋದಾಗ ಮನೆಯ ಯಜಮಾನ “ಅನಂತ ಹೆಗಡೆ”ಯವರಿಗೆ  ಸುಮಾರು 37-38ರ ಪ್ರಾಯ ಇದ್ದಿರಬಹುದು. ಅದಾಗಲೇ ಹಣೆ ಅಗಲವಾಗಲು ಆರಂಭವಾಗಿತ್ತು. ಇವರ ಮನೆ ಸುತ್ತಲಿನ ಪ್ರಾಂತ್ಯದ ಗಣ್ಯರ ಮನೆಗಳ ಪೈಕಿ ಒಂದು. ಮನೆಯಲ್ಲಿ ಸದಾ ‘ಬಂದು ಹೋಗುವವರ’ ಗಿಜಿಗಿಜಿ. ತುಂಬಾ ಹಳೆಯದಾದ, ವಿಶಾಲವಾದ ಮನೆ. ಮನೆಯಲ್ಲಿ ಮನೆಯವರೇ ಹತ್ತು ಜನ. (ಅವರ ತಾಯಿ “ಮಹಾಲಕ್ಷ್ಮಮ್ಮ” ಸಹ ಇದ್ದರು). ಜೊತೆಗೆ ನಾವಿಬ್ಬರು. ಹೊರಗೆ ಹತ್ತಾರು ಆಳುಮಕ್ಕಳು. (ಅವರ ಪೈಕಿ 3-4 ಜನ ಅಲ್ಲೇ ಮಧ್ಯಾಹ್ನದ ಊಟಕ್ಕೆ ಇರುತ್ತಿದ್ದರು). ಪ್ರತೀ ಮಧ್ಯಾಹ್ನ ಕನಿಷ್ಠ 20 ಜನರಿಗೆ ಅಡಿಗೆ ಮಾಡಬೇಕಿತ್ತು. ಬೆಳಿಗ್ಗೆ ತಿಂಡಿಗೆ  ಎಲ್ಲರಿಗೂ ತೆಳ್ಳೇವು (ತಿಳುವಾದ ದೋಸೆ). ಅದಕ್ಕಾಗಿ ಅಕ್ಕಿ ನೆನೆಸಿಟ್ಟು ಮುನ್ನಾದಿನ ಸಂಜೆಯೇ ರುಬ್ಬುಕಲ್ಲಿನಲ್ಲಿ ರುಬ್ಬಿ ಇಡಬೇಕಿತ್ತು. ಆಗ ಮನೆಗಿನ್ನೂ ಕರೆಂಟು ಬಂದಿರಲಿಲ್ಲ. (ನಾವು ಹೈಸ್ಕೂಲಿನಲ್ಲಿದ್ದಾಗಲೇ ಅಲ್ಲಿಗೆ ಕರೆಂಟು ಬಂತು). ಹಾಗಾಗಿ ಅಕ್ಕಿ ಬೀಸುವದಲ್ಲದೆ ಮಜ್ಜಿಗೆ ಕಡೆಯುವದು, ಹುಳಿ, ತಂಬುಳಿಗಳಿಗೆ ರುಬ್ಬುವದು, ಚಟ್ಣಿ ಪುಡಿ ಮಾಡುವದು ಎಲ್ಲವನ್ನೂ ಕೈಯಿಂದಲೇ  ಮಾಡಬೇಕಿತ್ತು. ಇದಲ್ಲದೆ ಕೊಟ್ಟಿಗೆಯಲ್ಲಿ 15-20 ದನಗಳು. ಅವುಗಳ ಹಾಲು ಕರೆಯುವದು, ಹಾಲು ಕಾಯಿಸುವದು, ಹೆಪ್ಪು ಹಾಕಿ, ಮಜ್ಜಿಗೆ ಕಡೆದು ಬೆಣ್ಣೆ ತೆಗೆಯುವದು, ತುಪ್ಪ ಕಾಯಿಸುವದು – ಮನೆಯಲ್ಲಿ ತುಪ್ಪದ  ಒರತೆ ಬತ್ತಬಾರದು, ಆ ರೀತಿ, + ಎಲ್ಲರಿಗೂ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಹಾ ತಿಂಡಿ. ಇಷ್ಟಲ್ಲದೆ ಮನೆಯಲ್ಲಿ ಏನಾದರೂ ಒಂದು ಸಿಹಿತಿಂಡಿ ಮಾಡಿಟ್ಟಿರಬೇಕು (ಲಾಡು, ಹೋಳಿಗೆ ಇತ್ಯಾದಿ)- ಅನಿರೀಕ್ಷಿತ ಅತಿಥಿಗಳಿಗಾಗಿ. ಮತ್ತೆ ರಾತ್ರಿಯೂಟಕ್ಕೆ ಕನಿಷ್ಠ 12 ಜನ. ಇವೆಲ್ಲದರ ಜೊತೆ ಒಂದು ಕೈಕೂಸು + ಉಳಿದ ಎಳೆ ಮಕ್ಕಳನ್ನೂ ಸಂಭಾಳಿಸಬೇಕು ಹಾಗೂ ನಿತ್ಯ ಮುಂಜಾವಿನಲ್ಲಿ ಬಾಗಿಲಿಗೆ ನೀರು ಹಾಕಿ ರಂಗೋಲಿ ಇಡುವದನ್ನು ತಪ್ಪಿಸುವಂತಿಲ್ಲ (ನಾನು ಅಲ್ಲಿದ್ದಾಗ ಇದನ್ನು ಅಕ್ಕ ನಿರ್ವಹಿಸುತ್ತಿದ್ದಳು ಎನ್ನಿ), ಅಡಿಗೆಗೆ ಮತ್ತು ಸ್ನಾನಕ್ಕೆ ಭಾವಿಯಿಂದ ನೀರೆತ್ತಬೇಕು. ಈ  ಅಷ್ಟೂ  ಕೆಲಸಗಳನ್ನು, ಎಲ್ಲೂ ಅಡೆ ತಡೆ ಬಾರದಂತೆ, ಅನಾನುಕೂಲತೆ ಉಂಟಾಗದಂತೆ  ಒಬ್ಬರೇ ಹೆಂಗಸು ನಿರ್ವಹಿಸುತ್ತಿದ್ದರು. ಆ ಮಹಾತಾಯಿಯೇ  “ಸರ್ವೇಶ್ವರಮ್ಮ”_ ಶ್ರೀ ಅನಂತ ಹೆಗಡೆಯವರ ಧರ್ಮಪತ್ನಿ. ಇದನ್ನೆಲ್ಲ ಕಣ್ಣಾರೆ ಕಂಡ ನಮಗೇ ‘ಇದು ಅಸಂಭವ’ ಎನ್ನಿಸುವ ಹಾಗಿದೆ, ಇನ್ನು  ಈಗಿನ ತಲೆಮಾರಿನವರನ್ನು ಈ ವಿಷಯದಲ್ಲಿ ಹೇಗೆ ನಂಬಿಸುವದು? ಆಗಿನ ದಿನಗಳಲ್ಲಿ ಇನ್ನುಳಿದ ಹವ್ಯಕರ ಮನೆಗಳಲ್ಲೂ ಇದೇ ಸನ್ನಿವೇಶ ಇದ್ದಿರಬಹುದಾದರೂ ಅಲ್ಲೆಲ್ಲ ಇವರ ಮನೆಗೆ ಇದ್ದ  “ಸಂದಣಿ” ಇದ್ದಿರಲಾರದು ಮತ್ತು ಅಲ್ಲೆಲ್ಲ  ಹೆಂಗಸು ಕೂಡ ಒಬ್ಬರೇ  ಇದ್ದಿರಲಾರರು.ಇಷ್ಟೆಲ್ಲ ಒತ್ತಡವನ್ನು ನಿಭಾಯಿಸಿಯೂ ಆ ಅಮ್ಮ ಎಂದೂ ಯಾರ ಮೇಲೂ ಸಿಟ್ಟು ಮಾಡಿದ್ದನ್ನು – ಆಳುಗಳ ಮೇಲೆ ಸಹ – ನಾನಂತೂ ಕಂಡಿಲ್ಲ. ಇಷ್ಟಾಗಿ ಇವರೇನೂ ಕಷ್ಟದ ಬಾಲ್ಯ ಕಳೆದು ಬಂದವರಲ್ಲ. ಸಿದ್ದಾಪುರ ತಾಲೂಕಿನ,  ತುಂಬಾ ಅನುಕೂಲಸ್ಥರಾದ, ಗೋರನ್ ಮನೆ  ಹೆಗಡೆಯವರ ಮನೆಯ ಮಗಳಿವರು. ಅದು ಹೇಗೆ ತಾವು ಮದುವೆಯಾಗಿ ಬಂದ ಆ ಎಳವೆಯಲ್ಲೇ ಈ “ಅನಂತ”ಸಂಸಾರಸಾಗರದಲ್ಲಿ  ಸುಲಲಿತವಾಗಿ ಈಜುವದನ್ನು ರೂಢಿಸಿಕೊಂಡರೋ ನಾ ಕಾಣೆ.
       ಮೂರು ವರ್ಷಗಳ ಕಾಲ ಅವರ ಕೈಯ್ಯೂಟ ಸವಿಯುವ, ಅವರನ್ನು ಹತ್ತಿರದಿಂದ ಗಮನಿಸಿ ಅವರಲ್ಲಿನ ಉದಾತ್ತ ಸ್ವಭಾವಗಳಿಂದ ಪ್ರಭಾವಿತನಾಗುವ, ಆ ಸಂಸ್ಕಾರವನ್ನು ನನ್ನಲ್ಲೂ ಮೇಳೈಸಿಕೊಳ್ಳುವ ಅವಕಾಶ  ನನಗೆ ದಕ್ಕಿದ್ದು ನನ್ನ ಪೂರ್ವಾರ್ಜಿತ ಪುಣ್ಯ ಫಲದಿಂದ ಎಂದೇ ತಿಳಿಯುತ್ತೇನೆ. ನನ್ನ ಪಾಲಿಗೆ ಈ “ಅನ್ನಪೂರ್ಣೆ” ಸರ್ವೇಶ್ವರಮ್ಮ ಎರಡನೆಯ “ಅಮ್ಮ”.                                                                                                                                                                                                                     
ಸರ್ವೇಶ್ವರಮ್ಮ- ಅನಂತ ಹೆಗಡೆಯವರು (ಅಂದ  ಕಾಲತ್ತಿಲೆ)
                                                                                                                                                                         ಇನ್ನು, ಶ್ರೀಯುತ ಅನಂತ ಹೆಗಡೆಯವರು ಸಹಾ ತುಂಬ ಸಹೃದಯಶೀಲ ಸದ್ಗೃಹಸ್ಥರು. ಭಾರತದ  ಸ್ವಾತಂತ್ರ್ಯಾನಂತರದ ಆ  ದಿನಗಳಲ್ಲಿ  ಆಗಷ್ಟೇ  ಯೌವ್ವನಿಗರಾಗುತ್ತಿದ್ದವರಿಗೆ ತಾವು ಅನುಸರಿಸಬೇಕಾದ ಜೀವನ ಪದ್ಧತಿ/ವಿಧಾನಗಳ  ಬಗ್ಗೆ  ತುಂಬ ಗೊಂದಲವಿದ್ದ  ಕಾಲಘಟ್ಟವದು. ತಮ್ಮ ಮೂಲ ಸನಾತನ ಪದ್ಧತಿಯನ್ನು ಅನುಸರಿಸುವದೋ ಅಥವಾ ತಮ್ಮನ್ನು ಅಲ್ಲಿಯವರೆಗೆ ಆಳಿದ ಪರಂಗಿಯವರ ಜೀವನಪದ್ಧತಿಯನ್ನು ಅನುಸರಿಸಿಕೊಂಡು ಬೆಳೆಯುವದೋ ಎಂಬುದರ ನಡುವೆ ದ್ವಂದ್ವವಿದ್ದ ಸಮಯವದು. ನಮ್ಮ ದೇಶದ ಎಲ್ಲ ರಂಗಗಳಲ್ಲೂ  ಇದು  ಎದ್ದು ಕಾಣುತ್ತಿತ್ತು. ಯುವಕರಿಗಂತೂ ವಯೋಸಹಜವಾಗಿ ಪರಂಗಿಯವರು ಬಿಟ್ಟುಹೋದ “ಭೋಗಪ್ರಧಾನ” ಜೀವನವೇ  ತುಂಬ ಆಪ್ಯಾಯಮಾನವೆನಿಸುತ್ತಿತ್ತು. ಇಂತಹ ಪರಿಸರದಲ್ಲಿ ಮೈಯ್ಯಲ್ಲಿ ಯೌವನವೂ, ಕೈಯಲ್ಲಿ ಕಾಸೂ ‘ಇದ್ದ’, ಮನೆಯಲ್ಲಿ ಅಂಕೆಯಲ್ಲಿಡುವ ತಂದೆ ‘ಇಲ್ಲದ’ ಈ ಅನಂತ, ತನ್ನ ತಲೆ ತಿರುಗದಂತೆ ಸಂಭಾಳಿಸಿಕೊಂಡು,  ಅತ್ಯಂತ ಮೌಲ್ಯಯುತ ಜೀವನ ರೂಢಿಸಿಕೊಂಡು, ಎಲ್ಲರಿಗೂ ಮಾದರಿಯಾಗುವಂತೆ ಬದುಕಿದ್ದು ಅವರಲ್ಲಿ ಅಂತರ್ಗತವಾಗಿದ್ದ  ಗಟ್ಟಿಯಾದ  ಸಂಸ್ಕಾರದ  ಬಲದಿಂದಲೇ ಎಂದೆನಿಸುತ್ತದೆ. ಊರ  ಹಿರಿಯರ  ಹಾಗೂ  ಧನವಂತರ ಕೆಲವೊಂದು  “ಹವ್ಯಾಸ”ಗಳನ್ನು ಸಮಾಜವಾಗಲೀ, ಅವರ ಮನೆಯವರಾಗಲೀ ಸಹಜವೆಂಬಂತೆ ಒಪ್ಪಿಕೊಳ್ಳುವ ಪರಿಪಾಠವಿದ್ದ ದಿನಗಳವು. ಅಂತಹದ್ದರಲ್ಲಿ ಯೌವ್ವನ, ಸೌಂದರ್ಯ ಹಾಗೂ ಶ್ರೀಮಂತಿಕೆ ಇವು ಮೂರೂ ಮೇಳೈಸಿದ್ದ ಈ ಅನಂತ ಹೆಗಡೆಯವರು ತುಂಬ ವಿವೇಕಿಯಾಗಿ ವರ್ತಿಸುತ್ತಾ, ಸಮಾಜದ ಏಳಿಗೆಗಾಗಿ ಸಹಕಾರ ಸಂಘ, ಹೈಸ್ಕೂಲು ಇತ್ಯಾದಿ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ತಮ್ಮ ಉತ್ಸಾಹ, ಶಕ್ತಿ, ಸಾಮರ್ಥ್ಯಗಳನ್ನು ವಿನಿಯೋಗಿಸಿದರಲ್ಲದೆ ಅನ್ಯಥಾ ಲೋಲುಪ ವ್ಯಸನಗಳಲ್ಲಿ ಅಲ್ಲ ಎಂಬುದು ಅತ್ಯಂತ  ಪ್ರಶಂಸಾರ್ಹ ವಿಷಯವಲ್ಲವೇ?
                                                                                                 (ಮುಂದುವರಿಯುವದು) .